Wednesday, June 18, 2008

ಅಂಗಾಲಿಗೆ ಕಲ್ಲೊತ್ತು ಮತ್ತು ಹೆಲ್ತ್ ಎಂಬ ಆರೋಗ್ಯ

ಆರೋಗ್ಯ ಮತ್ತು ಆಸ್ತಿ ಎರಡಿದ್ದರೆ ಅವನಂತಹ ಸುಖಿ ಮತ್ತೊಬ್ಬರಿಲ್ಲ ಎಂಬುದು ಪ್ರಾಜ್ಞರ ಅಭಿಮತ. ಕಾರಣ ಅವೆರಡನ್ನೂ ಸುಸ್ಥಿಯಲ್ಲಿಡಲು ತಾಳ್ಮೆ ಸಾಧನೆಗಳ ಅವಶ್ಯಕತೆಯಿದೆ. ಇರಲಿ ಅದು ದೊಡ್ಡ ಪಂಡಿತರ ಹಾಗೂ ತಿಳಿದವರ ಮಾತಾಯಿತು, ಪಾಮರರಾದ ನಮ್ಮ ಮಾತಿಗೆ ಬರೋಣ.
ನಾನು ಬೆಳಿಗ್ಗೆ ಐದುಮುಕ್ಕಾಲು ಗಂಟೆಗೆ ಎದ್ದೇಳುತ್ತೇನೆ. ಎದ್ದಕೂಡಲೆ ಸೂರ್ಯನಮಸ್ಕಾರ ಮಾಡು ಅಂತ ಅಪ್ಪಯ್ಯ ಹೇಳಿದ್ದರು. ಆದರೆ ನಾನು ಕಾಫಿ ಕುಡಿದು . ಕವಳ ಹಾಕಿ ಕೊಟ್ಟಿಗೆಗೆ ಹೋಗುತ್ತೇನೆ. ಕವಿತ , ಉಳ್ಳವರು ವ್ಯಾ ಎನ್ನುವ ವಾಸನೆಯ, ಹಾಗೂ ಸಾಸಿವೆಕಾಳಿನಷ್ಟು ಮೈಗೆ ತಾಗಿದರೂ ಡೆಟ್ಟಾಲ್ ಹಾಕಿ ತೊಳೆದುಕೊಳ್ಳುವ ಸಗಣಿಯನ್ನು ಪ್ಲಾಸ್ಟಿಕ್ ನ ಸಹಾಯದಿಂದ ಬಕೇಟ್ ಗೆ ತುಂಬಿ ಆಕಳುಗಳಿಗೆ ದಾಣಿಯನ್ನಿಡುತ್ತಾಳೆ. ನಾನು ಚೊಂಯ್ ಚೊಂಯ್ ಎಂದು ದನ ಕರೆಯಲು ಆರಂಬಿಸುತ್ತೇನೆ. ಬರೊಬ್ಬರಿ ೩ ಕೆ,ಜಿ,ತಿಂಡಿ ತಿನ್ನುವ ದನ ಬರೋಬ್ಬರಿ ನಾಲ್ಕು..! ಲೀಟರ್ ಹಾಲುಕೊಡುತ್ತದೆ. ಅದರಲ್ಲಿ ಎರಡು ಲೀಟರ್ ಮನೆಬಳಕೆಗೆ ಮತ್ತೆರಡು ಲೀಟರ್ ಡೈರಿಗೆ. ಇಪ್ಪತ್ನಾಲ್ಕು ರೂಪಾಯಿ ಹಡೆಯುವ ಎರಡು ಲೀಟರ್ ಹಾಲನ್ನು ಒಂದು ಕಿಲೋಮೀಟರ್ ದೂರದ ಡೈರಿಗೆ ಒಯ್ಯಲು ೬ ರೂಪಾಯಿ ಪೆಟ್ರೋಲ್ ಖಾಲಿ ಮಾಡಿಕೊಂಡು ಬೈಕನ್ನೇರಿ ಹೋಗುತ್ತೇನೆ. ಯಾವ ಕಾರಣಕ್ಕೂ ಆರ್ಥಿಕ ಲೆಕ್ಕಾಚಾರಕ್ಕೆ ಬಗ್ಗದ ಹಾಲೆಂಬ ಹಾಲು ಕೇವಲ ಖುಷಿಗಷ್ಟೇ ಸೀಮಿತ ಈ ಮಲೆನಾಡಿನಲ್ಲಿ. ಹಾಗಾಗಿ ಮೊನ್ನೆ ಡೈರಿಗೆ ಬೈಕನ್ನು ಒಯ್ಯಬಾರದೆಂದು ತೀರ್ಮಾನಿಸಿ ನಡೆದುಕೊಂಡೇ ಹೊರಟೆ. ಚಪ್ಪಲಿ ಧರಿಸಿ ಮನೆಯಿಂದ ಸ್ವಲ್ಪ ದೂರ ಬರುವಷ್ಟರಲ್ಲಿ ಚಪ್ಪಲಿಯ ಉಂಗುಷ್ಟ ಪಟಾರೆಂದು ಕಿತ್ತು ಬಂತು. ಸರಿ ಮಾಡುವುದಿನ್ನೇನು ಎಂದು ಚಪ್ಪಲಿಯನ್ನು ಬದಿಗೆಸೆದು ಬರಿಗಾಲಿನಲ್ಲಿ, ಹೊರಟೆ. ಆವಾಗ ಅನುಭವವಾಗಿದ್ದು ಈ ಕಥಾನಕ.
ನಮ್ಮೆಲ್ಲರ ಅಂಗಾಲು ದಪ್ಪನೆಯ ಚರ್ಮವನ್ನೊಳಗೊಂಡಿದ್ದು ಕಲ್ಲುಮುಳ್ಳಿನ ಹಾದಿಯಲ್ಲಿ ನಡೆಯಲು ಸಮರ್ಥವಾಗಿ ರಚನೆಯಾಗಿದೆ. ಅಂಗಾಲಿನಲ್ಲಿ ಕಲ್ಲುಗಳು ಒತ್ತುವುದರಿಂದ ಆರೋಗ್ಯ ಚಿಮ್ಮುತ್ತದೆಯೆಂದು ಆಕ್ಯುಪ್ರೆಷರ್ ಮಹಾಶಯರು ಹೇಳಿದ್ದಾರೆ. ಅಲ್ಲಿ ದೇಹದ ಪ್ರಮುಖ ಅಂಗಗಳ ನರಗಳು ಆರಂಭಗೊಳ್ಳುತ್ತವೆಯಂತೆ. ಅವುಗಳಿಗೆ ಪ್ರೆಷರ್ ಬಿದ್ದಾಗ ಹೊಟ್ಟೆ ಮುಂತಾದ ಕಡೆ ಹಾರ್ಮೋನ್ಗಳು ಒಸರಿ ಅವು ದೇಹದ ರಾಸಾಯನಿಕ ರಚನೆಯನ್ನು ಉತ್ತಮಪಡಿಸುತ್ತವೆಯಂತೆ. ಅದರಿಂದಾಗಿ ಆರೋಗ್ಯ ನಳನಳಿಸುತ್ತದೆಯಂತೆ. ಆದರೆ ನಾವು ದಾರಿ ತಪ್ಪಿದ್ದು ಮೊನ್ನೆ ಮನವರಿಕೆಯಾಯಿತು. ಬರಿಗಾಲಿನಲ್ಲಿ
ನಲ್ಲಿ ಸ್ವಲ್ಪ ದೂರ ನಡೆದು ಹೋದಾಗ ಅಂಗಾಲಿನಲ್ಲಿ ಬೆಂಕಿ- ಇಟ್ಟಿದ್ದಾರೆಂಬ ಅನುಭವ. ಇನ್ನು ಒಂದು ಹೆಜ್ಜೆಯನ್ನು ಕಿತ್ತಿಡಲಾರೆನು ಎಂಬಷ್ಟು ವೇದನೆ. ಅಷ್ಟುಹೊತ್ತಿಗೆ ಹರಿಜನರ ಗೋಪಾಲ ಬೆಳಿಗಾಮುಂಚಿನ ಡೋಜ್ ಹಾಕಲು ಹೊರಟಿದ್ದ. ಎದುರಿಗ ಸಿಕ್ಕ ಆತನ ಕಾಲನ್ನು ನೋಡಿದೆ. ಆತನೂ ಬರಿಗಾಲಿನಲ್ಲಿದ್ದ. ನಾನು ನಡೆಯುತ್ತಿದ್ದ ರಸ್ತೆಯಲ್ಲಿಯೇ ಅವನು ನಡೆಯುತ್ತಿದ್ದುದು. ಆದರೆ ನಾನು ಕಾಲಿಡಲು ನುಣುಪನೆಯ ಜಾಗವನ್ನು ಹುಡುಕುತ್ತಿದ್ದೆ. ಅವನು ಅದ್ಯಾವುದನ್ನು ಲೆಕ್ಕಿಸದೆ ಪುಟುಪುಟು ಹೆಜ್ಜೆಯಿಡುತ್ತ ಬಿರಬಿರನೆ ಸಾಗುತ್ತಿದ್ದ. ಅಲ್ಲಿಗೆ ನನಗೆ ಮನವರಿಕೆಯಾಯಿತು, ನಾನು ಇಷ್ಟುದಿವಸ ಭಗವಂತ ದೇಹದ ಆರೋಗ್ಯ ಹಾಗೂ ಸುಸ್ಥಿತಿಗಾಗಿ ವ್ಯವಸ್ಥಿತ ರೀತಿಯಲ್ಲಿ ಮಾಡಿದ್ದ ಪಾದಕ್ಕೆ ಬಾಟ ಕಂಪನಿಯ ಪಾದುಕೆ ಧರಿಸಿ ಜೋಪಾನ ಮಾಡಿದ್ದೆ. ಅದರಿಂದ ಎರಡು ತೊಂದರೆ ಮೊದಲನೆಯದು ಚಪ್ಪಲಿಯಿಲ್ಲದೆ ನಡೆಯಲೇ ಆಗದು ( ರಸಗೊಬ್ಬರವಿಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಂಡಂತೆ ಮುಂದೆ ಚಪ್ಪಲಿ ಕೊರತೆಯಿಂದ ಇದೇ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ) ಎರಡನೆಯದು ಅಂಗಾಲಿಗೆ ಕಲ್ಲು ಒತ್ತದೆ ಆ ರೋಗ್ಯದ ಮೇಲೂ ಪರಿಣಾಮ . ಈ ಪರಿಸ್ಥಿಯನ್ನು ಲಾಭ ಪಡೆದುಕೊಳ್ಳಲು ಕಂಪನಿಗಳು ಚೂಪನೆಯ ಮುಳ್ಳುನ ಪ್ಲಾಸ್ಟಿಕ್ ಮಣೆಯನ್ನು ಮಾಡಿದ್ದಾರಂತೆ. ಬೆಳಿಗ್ಗೆ ಎದ್ದು ಅದರ ಮೇಲೆ ನಿಂತುಕೊಂಡು ತಕತಕನೆ ಕುಣಿದರೆ ಆರೋಗ್ಯ ಅಂತ ಅವರ ಪ್ರಚಾರ. ಇದು ಹೈಟೆಕ್ ಸಿಟಿ ಜನರಿಗೆ ಇ ರುವ ವ್ಯವಸ್ಥೆ.
ಅದು ಏನೇ ಇರಲಿ ಚಪ್ಪಲಿ ಧರಿಸದೆ ನಿತ್ಯ ಒಂದು ಕಿಲೋಮೀಟರ್ ನಡೆದರೆ ಆರಂಭದಲ್ಲಿ ಸ್ವಲ್ಪ ಕಷ್ಟವಾದರೂ ಕೊನೆಕೊನೆಗೆ ಅದೇನೋ ಕಾಲು ಬಗ್ ಬಗ್ ಎಂಬ ಹಿತಕರವಾದ ನೋವಿನೊಂದಿಗೆ ಆನಂದವಾಗುವುದಂತೂ ಸತ್ಯ. ಚಪ್ಪಲಿ ಧರಿಸದೇ ನಡೆಯುವ ಹಲವಾರು ಜನರ ಸ ಮೀಕ್ಷೆ ನಡೆಸಿದೆ, ೭೦ ರ ಹರೆಯದ ಮಾದೇವರ ಮನೆ ಕೃಷ್ಣಯ್ಯ, ಹರನಾಥ ರಾಯರು, ನಮ್ಮ ಮನೆ ಕೆಲಸದ ಗಣಪತಿ. ಹೀಗೆ ಹತ್ತಾರು ಜನರು ಚಪ್ಪಲಿಯನ್ನೇ ಧರಿಸುವುದಿಲ್ಲ.. ಅರೆ ಹೌದು...? ಅವರು ಆರೋಗ್ಯದಿಂದ ನಳನಳಿಸುತ್ತಿರುವುದು ಸತ್ಯ. ಆದರೆ ಚಪ್ಪಲಿ ಇಲ್ಲದೆ ನಡೆಯುವುದು ಎಂದರೆ ....? ಜನರು ಏನೆಂದಾರು..? ಹಾಗಾಗಿ ಮುಳ್ಳುಗಳಿರುವ ಪ್ಲಾಸ್ಟಿಕ್ ಮಣೆ ಖರೀದಿಸಿ ತಕತಕನೆ ಕುಣಿಯುವುದೇ ಸೂಕ್ತ.. ಮತ್ತು ಅದೇ ಸ್ಟೈಲ್ ಒಳ್ಳೆಯದು ಎಂಬುದು ಅಂತಿಮ ತೀರ್ಮಾನ ಮಾಡಿದೆ. ಸಹಜವಾಗಿ ಇದ್ದುದ್ದನ್ನು ಹೀಗೆ ಏನಾದರೂ ಒಂದು ಹೊಸ ತರಹ ಹೆಸರಿನಿಂದ ಶುರು ಮಾಡಿದರೆ ಅದಕ್ಕೆ ವ್ಯಾಲ್ಯೂ ಹಾಗೂ ಮದುವೆ ಮನೆಯಲ್ಲಿ ಅಕ್ಯುಪ್ರೆಷರ್ ಬಗ್ಗೆ ಭಾಷಣ ಬಿಗಿಯಬಹುದು. ಎಪ್ಪತ್ತು ವರ್ಷದ ಹರಿಜನರ ಗೋಪಾಲ ದಿನಕ್ಕೆ ಎರಡು ಕ್ವಾಟರ್ ತೆಗೆದುಕೊಂಡರೂ ಸರಿಯಾಗಿ ಊಟ ಮಾಡದಿದ್ದರೂ ಆರೋಗ್ಯವಾಗಿದ್ದಾನೆ ಎಂಬುದಕ್ಕೆ ಚಪ್ಪಲಿ ಧರಿಸದೇ ಇದ್ದುದ್ದೇ ಕಾರಣ ಎಂಬುದನ್ನು ತರ್ಕಬದ್ಧವಾಗಿ ಹೇಳಿ ತಕತಕನೆ ನಾವು ಭಾಷಣ ಬಿಗಿಯಬಹುದು. ಅಬ್ಬಾ ಒಂದೇ ಒಂದು ಚಪ್ಪಲಿ ಉಂಗುಷ್ಟ ಕಿತ್ತದ್ದು ಎಷ್ಟಕ್ಕೆ ಕಾರಣ............?

ಕೊನೆಯದಾಗಿ: ಇದನ್ನು ಓದಿದ ನಂತರ ಶೂ ಹಾಗೂ ಸಾಕ್ಸ್ ಕಳಚಿ ನಿಮ್ಮ ಅಂಗಾಲ ಪರಿಸ್ಥಿತಿ ನೋಡಿ. ಅದು ಮೇಗಾಲಿನಂತೆ ಮೆತ್ತ ಮೆತ್ತಗೆ, ಕೆಂಪ ಕೆಂಪಗೆ, ಬೆಳ್ಳ ಬೆಳ್ಳಗೆ , ಇದೆ ಎಂದಾದರೆ ನಿಮ್ಮ ಆರೋಗ್ಯ . ಗಟ್ಟಿಮಾಡಿಕೊಳ್ಳುವ ಯತ್ನ ಇಂದೇ ಆರಂಭಿಸಿ. ಆರೋಗ್ಯ ಗಟ್ಟಿಯಾಗುತ್ತದೆಯೋ ಇ ಲ್ಲವೋ ಕಾಲಂತೂ ಗಟ್ಟಿಯಾಗುತ್ತದೆ ಮತ್ತು ಹೊಸ ವೇಷದಿಂದ ಮನೆಮಂದಿಯ ನ ಡುವೆ ಸ್ವಲ್ಪದಿನ ಸುದ್ದಿಯಲ್ಲಿರಬಹುದು ಎಂಬುದು ಕುಹಕವಲ್ಲ....!

ಅಂತಿಮ ಸೇರ್ಪಡೆ: ಬ್ಲಾಗ್ ಪಬ್ಲಿಶ್ ಆಗುತ್ತಿದ್ದಂತೆ ಕಲ್ಲೊತ್ತು ಎಂಬ ಪದ ನೋಡಿದ ಬಾಳೆಹೊಳೆಯ ಪೆಜತ್ತಾಯರು ಅದನ್ನು ತಮಗಾದ ಖಾಯಿಲೆಯ ಅನುಭಕ್ಕೆ ಹೋಲಿಸಿಕೊಂಡಿದ್ದಾರೆ. ಕಲ್ಲೊತ್ತು ಎಂಬುದೊಂದು ಖಾಯಿಲೆ ಇದೆ. ಅಂಗಾಲಿನಲ್ಲಿ ಸಣ್ಣ ಸಣ್ಣ ಗಂಟುಗಳಾಗಿ ಯಮಯಾತನೆ ನೀಡುತ್ತವೆ. ಅದಕ್ಕೆ ಸಟ್ಟುಗವೊಂದನ್ನು ಕಾಯಿಸಿಕೊಂಡು ಎಕ್ಕದ ಎಲೆಯನ್ನು ಸಟ್ಟುಗ ಮತ್ತು ಅಂಗಾಲಿನ ನಡುವೆ ಇಟ್ಟು ಒ ತ್ತಿದರೆ ಕಡಿಮೆಯಾಗುತ್ತದೆಯಂತೆ. ನಾನು ಇಲ್ಲಿ ಬಳಸಿದ್ದು ಕಲ್ಲು ಒ ತ್ತುವುದಕ್ಕೆ. ತೀರಾ ಮೆತ್ತನೆಯ ಸುಪ್ಪಾಣಿ ಅಂಗಾಲಿಗೆ ಈ ಕಲ್ಲುಗಳು ಒತ್ತುವುದರಿಂದ ಕಲ್ಲೊತ್ತು ಖಾಯಿಲೆ ಬರುವ ಸಾಧ್ಯತೆ ಇದೆ. ಎಚ್ಚರಿಕೆ

No comments: