Sunday, June 15, 2008

ಗೋಮಾತೆ ಮತ್ತು GO......ಮಾತ್ರೆ.....!


ಕೆಲವರ್ಷಗಳಿಂದೀಚೆಗೆ ಸ್ವದೇಶಿ ಗೋವಿನ ವಿಷಯದಲ್ಲಿ ಪ್ರಚಾರ ಹೆಚ್ಚಾಗಿದೆ. ಸುಮಾರು ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಎಚ್.ಎಫ್ ಹಾಗೂ ಜರ್ಸಿ ಮುಂತಾದ ಮಿಶ್ರ ತಳಿಗಳು ಬಂದಾಗ ನಮ್ಮ ಮಲೆನಾಡಿನ ಹವ್ಯಕ ಬ್ರಾಹ್ಮಣ ಕೃಷಿಕರು ಅಚ್ಚರಿಯಿಂದ ನೋಡಿದ್ದರು. ದೊಡ್ಡ ಹೆಗ್ಗಣದಂತಿದ್ದ ಮಲೆನಾಡು ಗಿಡ್ಡ ತಳಿಗಳು ಹಾಗೂ ಅದು ಕೊಡುವ ಅಚ್ಚೇರು ಹಾಲು ಅಭ್ಯಾಸವಾಗಿದ್ದ ಮಲೆನಾಡಿನವರಿಗೆ ಅಚ್ಚರಿ ತಂದಿತ್ತು. ಮಟಮಟ ಮಧ್ಯಾಹ್ನ ಮಲಗಿದಾಗ ಹಿತ್ತಲಿಗೆ ಬಂದು ಸೇವಂತಿಗೆ ಗಿಡ ಸೌತೆ ಬಳ್ಳಿಗಳನ್ನು ಪಡ್ಚ ಮಾಡುವ ಹಳ್ಳಿಯ ಬಾಲ ಎತ್ತಿಕೊಂಡು ಓಡುವ ಹಡ್ಬೆ ದನಗಳನ್ನು ಹಲ್ಲುಕಚ್ಚಿಕೊಂಡು ಅಟ್ಟಿಸಿಕೊಂಡು ಹೋಗಿ ಕೊನೆಗೂ ಒಂದೇ ಒಂದು ಏಟನ್ನು ಹೊಡೆಯಲಾರದೆ, ಬಂದಿರುವ ಸಿಟ್ಟನ್ನು ತಣಿಸಿಕೊಳ್ಳಲು ದನ ಹೊಡೆಯುವ ಕೋಲನ್ನು ರಸ್ತೆಯಮೇಲೆ ಜಪ್ಪಿ ಅಸಾಹಾಯಕತೆಯ ದಿನಗಳು ಮಾಯವಾದವಲ್ಲ ಎಂದು ಖುಷಿಪಟ್ಟಿದ್ದರು ಜನ. ಸಾಧು ಸಜ್ಜನವಾಗಿದ್ದ ಜಾತಿ ದನಗಳು ಅದ್ಭುತ ಎನ್ನಿಸಿದ್ದು ಸಹಜವಾಗಿತ್ತು. ಜರ್ಸಿ ದನ ಹಾಗೂ ಅದು ಗಬ್ಬವಾಗಲು ಹೋರಿಯ ಬದಲು ಕಡ್ಡಿ ಇನ್ಸುಮೇಷನ್ ಅದ್ಬುತ ಎನಿಸಿತ್ತು. ವಡೆ ಭಾಗದ ವಾಸನೆಯ ತಿಥಿ ಮನೆಯಲ್ಲಿ ಊಟಕ್ಕೆ ಆಗುವವರೆಗೆ ಹಾಗೂ ಊಟಕ್ಕೆ ಕುಳಿತಾಗ ದೊಡ್ಡ ದೊಡ್ಡ ಹತ್ತಾರು ಲೀಟರ್ ಹಾಲುಕೊಡುವ ದನದ್ದೇ ಸುದ್ಧಿ. ಹತ್ತಿಪ್ಪತ್ತು ಸಾವಿರ ರೂಪಾಯಿ ಕೊಟ್ಟು ಆ ದನ ಸಾಕುವವರ ಗತ್ತೇ ಬೇರೆ ತರಹದ್ದಾಗಿರುತ್ತಿತ್ತು. ವಾರಕ್ಕೊಮ್ಮೆ ಡಾಕ್ಟರ್ ಬೇಕಂತೆ ಮುಂತಾದ ಅಂತೆಕಂತೆಗಳ ದಂತ ಕಥೆಗಳು ಹರಿದಾಡುತ್ತಿತ್ತು. ಕಾಲಾನಂತರ ಮಿಶ್ರತಳಿಗಳು ಮಾಮೂಲಾದವು. ಸಿಕ್ಕಾಪಟ್ಟೆ ತುಡುಮಾಡುವ ಪಟಾರನೆ ಒದೆಯುವ ಮಲೆನಾಡು ಗಿಡ್ಡ ಹವ್ಯಕ ಬ್ರಾಹ್ಮಣರ ಕೊಟ್ಟಿಗೆಯಿಂದ ಮಾಯವಾಯಿತು. ಬೃಹತ್ ಗಾತ್ರದ ದನ ಬಕೇಟ್ ಗಟ್ಟಲೆ ಹಾಲು ಕೆ.ಎಂ.ಎಫ್ ಡೈರಿಯ ದಿನಚರಿಗೆ ಒಗ್ಗಿದರು. ಹಿತ್ತಲನ್ನು ಕದ್ದು ತಿನ್ನುವ ತುಡುವೆ ಮಲೆನಾಡು ಗಿಡ್ಡ ದನಗಳು ದೀವರ ಚೌಡ, ಹರಿಜನರ ಮಾರಿ ಗೋಪಾಲ ಮುಂತಾದ ಕೊಟ್ಟಿಗೆ ಸೇರಿ ಬಾಳತೊಡಗಿದವು.
ಕಾಲಾನಂತರದಲ್ಲಿ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹಳ್ಳಿಯ ದನಕ್ಕೆ ಗೋ ಮಾತೆ ಎಂದೂ, ಕಾಂಕ್ರೀಜ್, ತಾರ್ ಪಾರ್ಕರ್ ಮುಂತಾದ ಗುಜರಾತ್ ಮೂಲದ ಆಕಳುಗಳಿಗೆ ಸ್ವದೇಶಿ ತಳಿ ಎಂದೂ ಅದು ಉತ್ತಮ ಅದರ ಮೂತ್ರದಲ್ಲಿ ಔಷಧೀಯ ಗುಣಗಳಿವೆ ಎಂದು ಸಾರಿದ್ದರಿಂದ ಹಾಗೂ ಹೈಬ್ರಿಡ್ ಆಕಳುಗಳು ಗೋವೇ ಅಲ್ಲ ಅದು ಹಂದಿಯ ಜೀನ್ಸ ಮಿಶ್ರಮಾಡಿ ಮಾಂಸಕ್ಕಾಗಿ ತಯಾರಿಸಿದ ತಳಿಗಳು ಎಂದು ವಿಜ್ಝಾನಿಗಳು ಸಾರಿದ್ದರಿಂದ, ದಡಬಡನೆ ಮಲೆನಾಡು ಹವ್ಯಕರ ಕೊಟ್ಟಿಗೆಗಳು ಮಲೆನಾಡು ಗಿಡ್ಡ ಹಾಗೂ ಮಠದಿಂದ ತರಿಸಿಕೊಟ್ಟ ಕಾಂಕ್ರೀಜ್ ತಳಿಗಳಿಂದ ತುಂಬತೊಡಗಿದವು. ಮತ್ತೆ ಯಥಾಪ್ರಕಾರ ಕಾಂಕ್ರಿಜ್ ತಳಿಯ ಹಾಲು ಹಾಗಂತೆ ಹೀಗಂತೆ, ಇದಕ್ಕೆ ಡಾಕ್ಟರ್ರೇ ಬೇಡವಂತೆ ಮುಂತಾದ ಮಾತುಗಳು ವಡೆಬಾಗದ ಕರಕರ ಶಭ್ದದ ನಡುವೆ ತಿಥಿಮನೆಯಲ್ಲಿ ಹರಿದಾಡತೊದಗಿದವು.
ಅಂತಹ ಒಂದು ಕಾಂಕ್ರೀಜ್ ತಳಿಯ ಕರುವನ್ನು ನಾನು ೪ ವರ್ಷದ ಕೆಳಗೆ ಮನೆಗೆ ತಂದೆ. ಈಗ ಅದು ಕರು ಹಾಕಿ ಒಂದು ವರ್ಷವಾಗಿದೆ. ಹೇಳಿದಷ್ಟು ಸೂಪರ್ ಅಲ್ಲದಿದ್ದರೂ ಗೋಮಾತೆ ಎನ್ನುವ ಭಾವನೆ ಈ ಜಾತಿಯ ಆಕಳಮೇಲೆ ಬರುತ್ತದೆ. ಹಾಲು ಕರೆಯುವಾಗ ಒಮ್ಮೊಮ್ಮೆ ಪಟಾರನೆ ಒದೆಯುತ್ತದೆ ಎನ್ನುವುದೊಂದನ್ನು ಬಿಟ್ಟರೆ, ಅದರ ತುಪ್ಪ ಸೂಪರ್ ಘಮಘಮ. ಮೂತ್ರ ಒಳ್ಳೆಯದಂತೆ.... ನಾನು ಕುಡಿದಿಲ್ಲ....!. ಈ ದನದ ಮೂತ್ರದಿಂದ ತಯಾರಿಸಿದ ಅರ್ಕ ಬಹಳಷ್ಟು ಖಾಯಿಲೆಯನ್ನು ದೂರ ಮಾಡುತ್ತದೆಯಂತೆ. ನಿತ್ಯ ಬೆಳಿಗ್ಗೆ ಒಂದು ಚಮಚ ಅರ್ಕ ಸೇವಿಸಿದರೆ ಬಿಪಿ ಮಾತ್ರೆ ಗೆ Go... ಅನ್ನಬಹುದಂತೆ. ಆದರೆ ದುರಂತವೆಂದರೆ ಹಳ್ಳಿಯಲ್ಲಿರುವ ಬಹುಪಾಲು ಹವ್ಯಕ ಬ್ರಾಹ್ಮಣರು ಬೆಳಿಗ್ಗೆ ಎದ್ದು ಕೊಟ್ಟಿಗೆಗೆ ಹೋದರೆ ಮೈಯೆಲ್ಲಾ ಗಬ್ಬು ವಾಸನೆ ಎಂಬ ತತ್ವಕ್ಕೆ ಇಳಿದಿರುವುದರಿಂದ ನಂದಿನಿ ಮಾತೆಗೆ ಹೆಚ್ಚು ಮಹತ್ವ ನೀಡಲಾಗಿದೆ. ಈ ಗೋ ಮಾತೆಗೆ ಮಠಕ್ಕೆ ಹೋದಾಗ ಶ್ರದ್ಧೆಯಿಂದ ಜರಿ ಸೀರೆ ಉಟ್ಟು ಪಿತಾಂಬರಿಯಾದ ಗಂಡನೊಟ್ಟಿಗೆ ೨೫೧ ರೂಪಾಯಿಕೊಟ್ಟು ಗೋಗ್ರಾಸ ಕೊಡುವವರ ಸಂಖ್ಯೆ ಹೆಚ್ಚಿದೆ. ಮನೆಯ ಮಾತೆಗೆ GO... ಮಾತೆ ಎನ್ನುವ ಕಾಲ ಇದು, ಇನ್ನು ದನಕ್ಕೆ ಗೋಮಾತೆ ಎನ್ನಲು ಸಾದ್ಯವೇ ಎನ್ನುವುದು ತೀರಾ ಕುಹಕವಾದರೂ ಸತ್ಯ.
ಅವೆಲ್ಲಾ ಇರಲಿ ಸೀತೆಯೆಂಬ ಹೆಸರಿನ ನಮ್ಮ ಮನೆಯಲ್ಲಿನ ಕಾಂಕ್ರಿಜ್ ಜಾತಿಯ ದನ ನಡೆಯುವ ಗತ್ತು, ಓಡಾಡುವ ಸ್ಟೈಲ್. ಅದರ ಕರು ಲಕ್ಷ್ಮಿ ಹಾರಾಡುವ ಪರಿ ಬಹಳ ಚಂದ. ತುಡು ಮಾಡುವುದಿಲ್ಲ. ಗತ್ತಿನಲ್ಲಿ ಹೋಗಿ ಗುಡ್ಡವನ್ನೆಲ್ಲಾ ಸುತ್ತಾಡಿ ಸಂಜೆ ಮನೆಗೆ ಬರುತ್ತದೆ. ದನಕಾಯುವ ಹುಡುಗನ ಅವಶ್ಯಕತೆ ಇಲ್ಲ. ಬಿಳಿ ಬಣ್ಣದ ಆಕಳು ಕ್ಯಾಲೆಂಡರಿನಲ್ಲಿ ಶ್ರೀಕೃಷ್ಣನ ಹಿಂದಿರುವ ಕಾಮಧೇನುವನ್ನು ನೆನಪಿಸುತ್ತದೆ.
ಈವರ್ಷ ಜೋಗ ನೋಡಲು ಬಂದಾಗ ನಮ್ಮಲ್ಲಿಗೆ ಬನ್ನಿ, ಗೋಮಾತೆಯ ದರ್ಶನ ಪಡೆದು ಪುನೀತರಾಗಿ. ಗೋಪೂಜೆ ಬೇಕಾದರೂ ಮಾಡಿ. ಗೋಗ್ರಾಸ ಬೇಕಾದರೂ ನೀಡಿ, ಎಲ್ಲಾ ಉಚಿತ ಹಾಗೂ ನೀವು ನಂಬಿದರೆ ಪುಣ್ಯ ಖಚಿತ. - 9448976959

5 comments:

jitendra said...

yella sari matadore nandini milk taristare! namma padu yenu?!
gomatre sanjeevini aadre olledittu.. mutr kudadre lungsge fungus battu anta tilidavru heltarppa.. nangottilla..

mruthunjaya said...

good. keep it up! best wishes.

venu said...

lekhana tumba chennagide.......

raghupathi said...

jana haalina badlu GO-MUTRA kudiyOdu kalta mele ide dana sakalakku alda !

prasca said...

ಸಾರ್ ತುಂಬಾ ಚೆನ್ನಾಗಿ ಬರೆದಿದ್ದೀರ. ಲಕ್ಷ್ಮಿ ಹೇಗಿದ್ದಾಳೆ ಈ ಹೊತ್ತಿಗಾಗಲೆ ಮಳಕದಿಂದ ಹಸು ಆಗಿರ್ಬೇಕು, ಆದರೂ ನನ್ನ ಹತ್ತಿರ ಇರುವ ವಿಡಿಯೋದಲ್ಲಿ ಅವಳಿನ್ನು ಕರುವೆ ನಾನು ಆಗಾಗ ನಿಮ್ಮ ಲಕ್ಷ್ಮಿಯನ್ನು ನಮ್ಮ ಮನೆಯಲ್ಲಿ ನೋಡಿ ಖುಷಿ ಪಡುತ್ತೇನೆ.