Sunday, June 22, 2008

ನಾನು ಮತ್ತು ಕನ್ನಡ ಮತ್ತು ಹಳ್ಳಿ ಮತ್ತು ದುಡ್ಡು.......



ನಾನು ಕನ್ನಡಾಭಿಮಾನಿಯಾಗಲು ಮುಖ್ಯ ಕಾರಣ ಇಂಗ್ಲೀಷ್ ಬಾರದಿರುವುದು. ಬೀಚಿಯವರ ತಿಮ್ಮನಂತೆ ನನಗೆ ಇಂಗ್ಲೀಷ್ ಕಹಿ. ಆತನಿಗೂ ಅದೇ ಸಮಸ್ಯೆ ಯಂತೆ. ಪಿ ಯು ಟಿ ಎಂದರೆ ಪುಟ್ ಸರಿ ಆದರೆ ಸಿ ಯು ಟಿ ಕುಟ್ ಆಗಬೇಕಿತ್ತು ಅದೇಗೆ ಕಟ್ ಆಯಿತು? ಎಂಬ ಪ್ರಶ್ನೆ ಕಾಡಿ ಅಂತಿಮದಲ್ಲಿ ಇಂಗ್ಲೀಷ್ ಭಾಷೆಯೇ ಸರಿ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದನಂತೆ.ನನಗೂ ಹಾಗೆಯೆ. ನನಗೆ ಇಂಗ್ಲೀಷ್ ಓದಿದ್ದು ಅರ್ಥವಾಗುತ್ತೆ. ದರಿದ್ರದ್ದು ಬರೆಯಲು ಬರುವುದಿಲ್ಲ ಮತ್ತು ಮಾತನಾಡಲು ಹೆದರಿಕೆ. ನಿಜವಾದ ಕನ್ನಡಾಭಿಮಾನಿಗಳೆಂದರೆ ಬಾಳೆಹೊಳೆ ಪೆಜತ್ತಾಯ, ಅಮೆರಿಕಾದಿಂದ ಬರೆಯುವ ಶ್ರೀವತ್ಸ್ ಜೋಷಿ, ಅಮೇರಿಕಾದ
ತುತ್ತೂರಿ ಎಂಬ ಪತ್ರಿಕೆಯ ಮೂಲಕ ಕನ್ನಡ ಕಲಿಸುತ್ತಿರುವ ವಿಶ್ವೇಶ್ವರ ದೀಕ್ಷಿತ್, ದಟ್ಸ್ ಕನ್ನಡದ ಶ್ಯಾಮ್ ಹಾಗೂ ಇಂಗ್ಲೀಷ್ ಚೆನ್ನಾಗಿ ಗೊತ್ತಿದ್ದೂ ಕನ್ನಡದಲ್ಲಿ ಬ್ಲಾಗ್ ಬರೆಯುವ ಶುಶ್ರುತ ದೊಡ್ದೇರಿ, ಚೈತ್ರರಶ್ಮಿಯ ಸಂಪಾದಕ ರಾಮಚಂದ್ರ ಹೆಗಡೆ, ಯಂತಹ ನೂರಾರು ಜನ. ಅವರಿಗೆಲ್ಲಾ ಚಕಚಕನೆ ಮಾತನಾಡಲು ಇಂಗ್ಲೀಷ್ ಬರುತ್ತದೆ. ಪಟಪಟನೆ ಬರೆಯಲು ಆಂಗ್ಲ ಭಾಷೆ ಬರುತ್ತದೆ. ಆರ್ಥಿಕ ಲಾಭಕ್ಕಾಗಿ ಕನ್ನಡವನ್ನು ಅವಲಂಬಿಸಬೇಕಾದ ದರ್ದು ಇಲ್ಲ. ಆದರೂ ತಮ್ಮ ಸಮಯವನ್ನು ಕನ್ನಡಕ್ಕಾಗಿ ,ಮೀಸಲಿಟ್ಟಿದ್ದಾರೆ.

ನಾನು ಹಳ್ಳಿಯ ಅಭಿಮಾನಿಯಾಗಲು ಮುಖ್ಯ ಕಾರಣ ಪೇಟೆಯಲ್ಲಿ ಇರಲು ಅವಕಾಶವಿಲ್ಲದಿರುವುದು. ಕೆಸರು ಕೆಸರು ರಸ್ತೆ, ಜಟಿ ಜಟಿ ಮಳೆ, ಪದೆ ಪದೆ ಕೈಕೊಡುವ ಕರೆಂಟು, ರಸ್ತೆಯಿಂದ ಶುರುವಾಗಿ ಟೆಲಿಪೋನ್ ದುರಸ್ತಿಯವರೆಗೂ ತೆರಿಗೆ ಕಟ್ಟುವ ನಾವೇ ಒದ್ದಾಡಬೇಕಾದ ಪರಿಸ್ಥಿತಿ. ಒಂದು ಸಾಸಿವೆ ಕಾಳು ಬೇಕಾದರೂ ೬ ಕಿಲೋಮೀಟರ್ ದೂರಕ್ಕೆ ಓಡಬೇಕಾದ ಸ್ಥಿತಿ. ವರ್ಷದಲ್ಲಿ ಒಂಬತ್ತು ತಿಂಗಳು ಖಾಲಿ ಜೇಬು. ಯಾರಿಗೆ ಬೇಕು ಅನ್ನಿಸಿಬಿಡುತ್ತದೆ. ಓದುವ ಕಾಲದಲ್ಲಿ ಓದಿಕೊಂಡಿದ್ದರೆ ಪಟ್ಟಣ ಸೇರಿ ಹಾಯಾಗಿ ಇರಬಹುದು ಎಂದು ಹಲವುಬಾರಿ ಅನ್ನಿಸಿಬಿಡುತ್ತದೆ. ಡಾಲರ್ ಅಥವಾ ಯೆನ್ ಅಥವಾ ರಿಯಾಲ್ ರೂಪದಲ್ಲಿ ಸಂಬಳ ಎಣಿಸಿ ಅದನ್ನು ರೂಪಾಯಿಗೆ ಪರಿವರ್ತಿಸಿ ಖುಷಿ ಪಟ್ಟು ಹೊಂಡಾ ಅಥವಾ ಸುಜುಕಿ ಕಾರಿನಲ್ಲಿ ಖತ್ರೀನಾ ಕೈಫ್ ಕೆನ್ನೆಯಂತಹ ಟಾರ್ ರಸ್ತೆಯಲ್ಲಿ ಹೆಂಡತಿ ಮಗನನ್ನು ಕುಳ್ಳಿಸಿಕೊಂಡು ಝೊಂಯ್ಯನೆ ಹೋಗಬಹುದಿತ್ತು. ಆಗ ಮಗ ಇಂಗ್ಲೀಷಿನಲ್ಲಿ ಕೇಳುವ ಪ್ರಶ್ನೆಗೆ ಅವನ ಅಮ್ಮ ನೀಡುವ ಉತ್ತರ ಸರಿಯಾಗದೆ ನಾನು ಪಟಪಟನೆ ಉತ್ತರಿಸಬಹುದಿತ್ತು ಅಂತ ಅನ್ನಿಸುತ್ತದೆ. ಅಲ್ಲಿನ ಅನುಭವವನ್ನು ಕನ್ನಡ ಪತ್ರಿಕೆಗೋ ಅಥವಾ ಬ್ಲಾಗ್ ಬರೆದಿದ್ದರೆ "ಅಂವ ಅಮೆರಿಕಾದಲ್ಲಿದ್ದರೂ ಕನ್ನಡದ ಮೇಲೆ ಎಷ್ಟೊಂದು ಅಭಿಮಾನ ನೋಡು ಅಂತ ಅನ್ನಿಸಿಕೊಳ್ಳಬಹುದಿತ್ತು. ಈ ಪಟ್ಟಣದ ಲೈಫ್ ಎಂದರೆ ಯಾಂತ್ರೀಕೃತ ಬದುಕು, ಇಲ್ಲಿ ಏಕತಾನತೆ, ಹಳ್ಳಿಯಲ್ಲಾದರೆ ಸೊಗ ಡಿದೆ ಎಂಬಂತಹ ಬೊಗಳೆ ಭಾಷಣ ಪಟ್ಟಣದಲ್ಲಿ ಕುಳಿತು ಮಾಡಬಹುದಿತ್ತು. ಹಳ್ಳಿಯ, ರೈತರ ಜ್ವಲಂತ ಸಮಸ್ಯೆಯ ಕುರಿತು ಸಂಜೆ ಹೊತ್ತಿನಲ್ಲಿ ಚರ್ಚೆ ಮಾಡಬಹುದಿತ್ತು. ಇರಲಿ
ನನಗೆ ಹಣವೆಂದರೆ ಒಂಥರಾ ಅಲರ್ಜಿಯಾಗಲು ಮುಖ್ಯ ಕಾರಣ ನನ್ನಬಳಿ ಹಣವಿಲ್ಲದಿರುವುದು. ಹಾಗಾಗಿ ಶ್ರೀಮಂತಿಕೆ ಇದ್ದರೆ ಸುಖವಿಲ್ಲ, ಬಡತನದಲ್ಲಿ ಆನಂದವಿದೆ ಎನ್ನುವ ಭಾಷಣ ಮಾಡುವುದನ್ನು ಅಭ್ಯಾಸ ಮಾಡಿದ್ದೇನೆ. ವರ್ಷಕ್ಕೆ ಒಂದೂ ಕಾಲು ಕೋಟಿ ರೂಪಾಯಿ ಸಂಬಳ ವೇಣುವಿಗಂತೆ ಎಂಬ ಸುದ್ದಿ ,ಹಾಗೂ ನಾನು ಎತ್ತಿ ಆಡಿಸಿದ ರಮ್ಯಾ "ಮಾವ ಎನ್ನ ಸಂಬಳ ವರ್ಷಕ್ಕೆ ಐದು ಲಕ್ಷ" ಎಂದಾಗ, ನನ್ನ ಕ್ಲಾಸ್ಮೇಟ್ ರಾಜೇಶನ ಮನೆಯ ವ್ಯಾಲ್ಯೂ ಒಂದು ಕೋಟಿಯಂತೆ ಎಂದಾಗ, ಅಬ್ಬಬ್ಬ ಅನ್ನಿಸುತ್ತದೆ. ಇಡೀ ವರ್ಷಕ್ಕೆ ಒಂದು ಲಕ್ಷವನ್ನೂ ಎಣಿಸಲಾಗದ ನಾನು ಹಣ ಅಂತಹ ಮಹತ್ವ ಅಲ್ಲ ಎನ್ನುತ್ತೇನೆ. ಅಮೆರಿಕಾದಲ್ಲಿಯೋ, ದುಬೈ ನಲ್ಲಿಯೋ, ಬೆಂಗಳೂರಿನಲ್ಲಿಯೋ ಇರುವ ನನ್ನ ಪರಿಚಯದವರಿಗೆ ಕೋಟಿಗಟ್ಟಲೆ ಆಸ್ತಿ ಎಂದಾಗ ಅಮ್ಮಾ ಎನ್ನುವ ಉದ್ಗಾರ ತೆಗೆಯುತ್ತೇನೆ. ಹಾಗಂತ ನಾನೂ ಹಣ ಸಂಪಾದಿಸಲು ಬಹಳ ಒದ್ದಾಡಿದ್ದೇನೆ. ಅದು ನನ್ನ ಕೈಯಲ್ಲಿ ಆಗದ ಕೆಲಸ ಎಂದು ಸುಸ್ತಾಗಿ ಸುಮ್ಮನುಳಿದಿದ್ದೇನೆ. ಆವಾಗಲೇ ಶುರುವಾಗಿದ್ದು ಬ್ಲಾಗ್ ಬರೆಯುವುದು, ಕಟ್ಟೆ ಪತ್ರಿಕೆ ನಡೆಸುವುದು, ಅರಣ್ಯ ಬೆಳೆಸುವುದು, ಮುಂತಾದ ಕೆಲಸವಿಲ್ಲದ ಕೆಲಸಗಳು. ಹಾಗೂ ಪರಿಚಯದ ನೂರೈವತ್ತು ಜನರಿಗೆ ಅದರ ಲಿಂಕ್ ಮೈಲ್ ಮಾಡುವುದು. ಜನ ಓದುತ್ತಾರೆ ಅಂದುಕೊಳ್ಳುವುದು. (ಕಳುಹಿಸಿದ ಲಿಂಕ್ ಬಹಳಷ್ಟು ಜನರ ಮೈಲ್ ಬಾಕ್ಸಿನಲ್ಲಿ ಡಿಲೀಟ್ ಅಗುತ್ತದೆಯೆಂದು ಗೊತ್ತಿದ್ದರೂ). ಹೀಗೆ ನಡೆಯುತ್ತಿದೆ ಜೀವನ.
ಮಕ್ಕಳಿಗಾದರೂ ಇಂಗ್ಲೀಷ್ ಕಲಿಸಿ ಹೊರಗಡೆ ಅಟ್ಟೋಣ ಅಂದುಕೊಂಡರೆ , ಅವರ ಬಾಯಲ್ಲಿ ಟಸ್ ಪುಸ್ ಅಂತ ಇಂಗ್ಲೀಷ್ ನಲ್ಲಿ ಮಾತನಾಡಿಸೋಣ ಅಂದರೂ ಇಲ್ಲಿ ಆಗುತ್ತಿಲ್ಲ, ಅಲ್ಲಿ ಅವಕಾಶವಿಲ್ಲ ಹಾಗಾಗಿ ಇದೇ ಸೂಪರ್ ಇದೇ ಸೃಜನಶೀಲತೆ ಮತ್ತು ಇದೇ ಸ್ವರ್ಗ. ಮತ್ತು ಇದೇ ಜೀವನ.

6 comments:

ಯಜ್ಞೇಶ್ (yajnesh) said...

ರಾಘಣ್ಣ,

ಲೇಖನ ಚೆನ್ನಾಗಿದ್ದು

ದೂರದ ಬೆಟ್ಟ ನುಣ್ಣಗೆ. ನಮಗೆ ಪೇಟೆ ಸಹವಾಸ ಬೋರಾಗಿ ಹಳ್ಳಿಗೆ ಹೋಗೋಣ ಅನ್ಸೋಕೆ ಪ್ರಾರಂಭವಾಗಿದೆ. ಜೀವನದಲ್ಲಿ ದುಡ್ಡು ಬಹಳ ಮುಖ್ಯ. ಆದರೆ ಬರೀ ದುಡ್ಡಿಗಾಗಿ ಮಾತ್ರ ಬದುಕಿದರೆ ಎನು ಪ್ರಯೋಜ್ನ. ಪೇಟೆಯಲ್ಲಿ ಒಳ್ಳೆ ಸಂಪಾದನೆ ಮಾಡಬಹುದು.ಆದರೆ ಕರ್ಚು ಹಾಗೆ ಇರತ್ತೆ. ತಿಂಗಳ ಮೊದಲ ವಾರನೇ ಕೈ ಕಾಲಿಯಾಗಿರತ್ತೆ. ಬೆಳಗ್ಗೆಯಿಂದ ಸಂಜೆ (ಕೆಲವೊಮ್ಮೆ ಮದ್ಯರಾತ್ರಿ)ಯ ತನಕ ಕತ್ತೆ ದುಡಿದ ಹಾಗೆ ದುಡಿಬೇಕು. ಸಿಕ್ಕಾಪಟ್ಟೆ ಟ್ರಾಫಿಕ್ಕು, ಮನೆಗೆ ಬಂದ ಮೇಲೆ ಎನು ಮಾಡಲು ಮನಸ್ಸಿರೊಲ್ಲ. ಜೀವನವನ್ನು ಸವಿಯೋಕೆ ಆಗೊಲ್ಲ ನೋಡಿ.

ನನಿಗಂತೂ ಹಳ್ಳಿನೇ ಇಷ್ಟ. ಈಗಂತೂ ಎಲ್ಲಾ ಚಾನಲ್ ಗಳು ಬರತ್ತೆ. ಇಂಟರ್ನೆಟ್ಟು ಹಾಕಿಸ್ಕೊಳ್ಳಬಹುದು.

Unknown said...

yes yajnesh adu nurakke nuru nija duradabetta nunnage..

Thanks

ಯಜ್ಞೇಶ್ (yajnesh) said...

ಹಳ್ಳಿಯಲ್ಲಿದು ಬರೀ ಕವಳ ಹಾಕ್ಕಿಂಡು ಗದ್ದೆ ತೋಟವೆನ್ನದೇ, ಪತ್ರಿಕೆ ನಡೆಸೋದು, ಅನೇಕ ಸಾಮಾಜಿಕ ಕೆಲಸಗಳನ್ನು ನಿರ್ವಹಿಸುತ್ತಾ ಇರೋ ನೀವೆ ಗ್ರೆಟ್ ರಾಘಣ್ಣ. ಇದೇ ರೀತಿ ಎಲ್ಲ ಹಳ್ಳಿಯಲ್ಲೂ ಒಂದೊಂದು ಸಂಘಟನೆಯಾಗಿ ತಮ್ಮ ಸ್ವಂತ ಕೆಲಸದ ಜೊತೆ ಸಾಮಾಜಿಕ ಕೆಲಸಗಳಲ್ಲೂ ಜನ ಭಾಗವಹಿಸಿದರೆ ಮುಂದೆ ಜನ ಹಳ್ಳಿಯನ್ನು ಬಿಟ್ಟು ಪೇಟೆಗೆ ಬರೋ ಕೆಲಸ ಕಡಿಮೆಯಾಗಬಹುದು ಅನ್ಸತ್ತೆ.

ನಿಮ್ಮ ಕಟ್ಟೆ ಪತ್ರಿಕೆ ಚೆನ್ನಾಗಿ ಬರ್ತಾಯಿದೆ.

Krupesh said...

ಬಹಳ ಚೆನ್ನಾಗಿ ಬರ್ತಾ ಇದ್ದು ನಿನ್ನ ಬ್ಲಾಗ್ಸ್. ಇವೊತ್ತು ಗೊತ್ತಾತು ನಿನ್ ಬ್ಲಾಗ್ ಬಗ್ಗೆ.
I will get this added to my blog reader!

"ಇರುವುದೆಲ್ಲವ ಬಿಟ್ಟು ..." ಸಮಸ್ಯೆ ಎಲ್ಲರಿದ್ದುವ ಅಲ್ದಾ? ಸಾವಿರ ಇದ್ದವನ್ಗೆ ಲಕ್ಶ್ಯ ದವ ಕಾಣ್ ತ. ಲಕ್ಶ್ಯದವನ್ಗೆ ಅವನ್ಕಿಂತ ಜಾಸ್ತಿ ದುಡಿಯವನ ಜೊತೆ comparion.

ಬ್ಲಾಗ್ ತುಂಬ ಚೆನ್ನಗಿ, ತಮಾಶೆಯಾಗಿ ಬರದ್ದೆ. keep it up!

prasca said...

ಶರ್ಮ ಸಾರ್,
ಒಂದು ಕೆಲ ಮಾಡೋಣ, ನಿಮ್ಮ ಮನೆ ನನಗೆ ಕೊಟ್ಟೂ ಬಿಡಿ, ಬೆಂಗಳೂರಿನ ನನ್ನ ಮನೆ ನೀವು ತಗೊಳ್ಳಿ. ಸರೀನ ಸಾರ್. ;-))

venu said...

Hello Raghu Mava
Very gud writing. Sakkattagi barta ide nimma lekhana. Keep it up sir... nimma baravanige nammantavarige spoorti agutte... Adre mavayya nimma halli life wonderfullu.... e peteya 'daavantada baduku' yariguu beda....