Sunday, November 30, 2008

ಅಯ್ಯೋ ಸನ್ಮಾನ

ಹೊರಗಡೆ ಜಿಟಿ ಜಿಟಿ ಮಳೆ ಬರುವಂತಹ ವಾತಾವರಣ . ಬೆಂಗಳೂರಿನ ಮಠದ ಹಾಲ್ ನಲ್ಲಿ ಸನ್ಮಾನ ಕಾರ್ಯಕ್ರಮ. ಒಂಥರಾ ಬೆಚ್ಚಗೆ ಒಂಥರಾ ಈ ಪ್ರಪಂಚ ಅರ್ಥವಾಗದ ಮನಸ್ಥಿತಿಯಲ್ಲಿ ಮೂಲೆಯಲ್ಲಿ ಕುಳಿತಿದ್ದೆ. ನನಗೆ ಪರಿಚಿತರಾದವರು ಹಲವಾರು ಜನ ಅತ್ತಿಂದ್ದಿತ್ತ ಓಡಾಡುತ್ತಲಿದ್ದರು. ಇನ್ನಷ್ಟು ಜನ ವೇದಿಕೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಅವರ್ಯಾರಿಗೂ ನಾನು ಇದ್ದುದ್ದು ಗೊತ್ತಿರಲಿಲ್ಲ. ಗೊತ್ತಾಗುವ ಅವಶ್ಯಕತೆ ನನಗೆ ಇರಲಿಲ್ಲ. ಸನ್ಮಾನಿತ ವ್ಯಕ್ತಿ ನಾನು ಬಾಲ್ಯದಿಂದ ನೋಡಿದವರು. ಹೆಸರು ಇಲ್ಲಿಯ ಮಟ್ಟಿಗೆ ಶಿವಣ್ಣ ಎಂದಿಟ್ಟುಕೊಳ್ಳೋಣ. ಹಾಗಾಗಿ ಅವರ ಬಗ್ಗೆ ಏನೇನು ನಡೆಯುತ್ತದೆ ಎಂದು ಸುಮ್ಮನೆ ನೋಡುತ್ತಾ ಕುಳಿತೆ. ನಮ್ಮ ಶಿವಣ್ಣ ಒಂದುಕಾಲದಲ್ಲಿ ಪ್ರಶಸ್ತಿ ಸನ್ಮಾನಕ್ಕೆಲ್ಲಾ ಪರಮ ವಿರೋಧಿ. ಊರಲ್ಲೊಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಅದನ್ನು ತಪ್ಪಿಸಲು ಹರಸಾಹಸ ಪಟ್ಟಿದ್ದರು. ಅದನ್ನು ತಪ್ಪಿಸಲು ಆಗದಾಗ " ಸನ್ಮಾನ ಪ್ರಶಸ್ತಿ ಎಲ್ಲ ಅನಹ್ರ ವ್ಯಕ್ತಿಗಳಿಗೆ ಮಾತ್ರಾ ಎಂದು ಪ್ರಚಾರ ಮಾಡಿದ್ದರು. ಆದರೆ ಈಗ ಅವರು ವೇದಿಕೆಯಲ್ಲಿದ್ದರು.!!! . ಇರಲಿ ಬಿಡಿ ಆಗ ವಯಸ್ಸಿತ್ತು ಹಾಗೆ ಅನ್ನಿಸಿರಬಹುದು. ಈಗ ವಯೋವೃದ್ದರು ಅಂದುಬಿಡೋಣ. ವೇದಿಕೆಯಲ್ಲಿದ್ದ ಒಬ್ಬಾತ ಹೇಳಿದ."ಈ ಕಾರ್ಯಕ್ರಮ ಬೇರೆ ಕಡೆ ನಿಗದಿಯಾಗಿತ್ತು. ಆದರೆ ಸನ್ಮಾನಿತರು ಶ್ರೀಗಳ ಭಕ್ತರು. ಹಾಗಾಗಿ ಶ್ರೀ ಮಠದ ಈ ಆವರಣದಲ್ಲಿ ಶ್ರೀಗುರುಗಳ ಆಶೀರ್ವಾದದೊಂದಿಗೆ ನಡೆಯುವಂತಾಯಿತು......" ,. ನನಗೆ ಪರಮಾಶ್ಚರ್ಯ ಊರಿನಲ್ಲಿ ಇದೇ ಮಠದ ಕಾರಣವಿಲ್ಲದೆ ವಿರೋಧಕ್ಕಾಗಿ ವಿರೋಧಿಸುವ ಗುಂಪಿನ ಮುಖ್ಯ ಸದಸ್ಯ ಅರೆನಾಸ್ತಿಕ ಜಯಣ್ಣನ ಪಟ್ಟ ಶಿಷ್ಯ ಈ ನಮ್ಮ ಶಿವಣ್ಣ. ಎಂದೂ ಗುರು ಮಠ ಎಂದು ನಡೆದುಕೊಂಡವನಲ್ಲ. ಇರಲಿ ಊರಿನದು ಊರಿಗೆ ಬೆಂಗಳೂರಿನದು ಬೆಂಗಳೂರಿಗೆ. ಮತ್ಯಾರೋ ಹೇಳಿದರು "ಶ್ರೀ ರಾಮನಂತೆ ನಮ್ಮ ಶಿವಣ್ಣ...." . ಅಬ್ಬಾ...! ನಿಜ ನಿಜ .! ಮೊದಲನೆ ಹೆಂಡತಿ ಇದ್ದಂತೆ ಎರಡನೆಯ ಮದುವೆ ಮಾಡಿಕೊಂಡು ಎಪ್ಪತ್ತರ ಇಳಿವಯಸ್ಸಿನಲ್ಲಿ ಈಗ ಮೂರನೆಯ ಹೆಂಡತಿಯ ವಿಚಾರದಲ್ಲಿ ಮೊದಲನೆ ಹೆಂಡತಿಯನ್ನು ಓಡಿಸಿದ ವೀರ ನಮ್ಮ ಶಿವಣ್ಣ, ಆದರೆ ವೇದಿಕೆಯಲ್ಲಿ ಗುಣಗಾನ ಮುಂದುವರೆಯುತ್ತಿತ್ತು. ಇರಲಿಬಿಡಿ ನಾವು ಶ್ರೀ ಕೃಷ್ಣನ ನ್ನು ಪೂಜಿಸುತ್ತೇವೆ ಅವನೂ ರಾಮನ ಅವತಾರವೇ ಅಲ್ಲವೆ?. ನಂತರ "ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಸಾಲಸೋಲ ಮಾಡಿಕೊಂಡು ಯಕ್ಷಗಾನ ನಾಟಕಗಳ ಏಳ್ಗೆಗಾಗಿ ತಮ್ಮ ಆಯುಷ್ಯವನ್ನು ಸವೆಸಿದ್ದಾರೆ". ನನ್ನೊಳಗಿನವ ನಕ್ಕ. ಇಸ್ಪೀಟು ಆಟಕ್ಕಾಗಿ ಮತ್ತು ಮನೆಯಲ್ಲಿಯೇ ಇಸ್ಪೀಟಿನ ಕ್ಯಾಂಪ್ ನಡೆಸಿ ಸಾಲಸೋಲ ಮಾಡಿಕೊಂಡ ವಾಸ್ತವ ನೆನಪಾಯಿತು. ಸಂಘಟಕರು "ಸನ್ಮಾನ ಮಾಡುತ್ತೇವೆ ಎಂದಾಗ ಸುತಾರಾಂ ಬರಲೊಪ್ಪಲಿಲ್ಲ.. ಎಳೆದು ತರುವ ಹೊತ್ತಿಗೆ ಸುಸ್ತಾಯಿತು" ಎಂದು ಹೇಳಿದರು. ಹ ಹ ಹ ಇರಲಿ. "ಸಾಲ ಮಾಡಿಕೊಂಡು ಬಿಟ್ಟಿದ್ದೇನೆ ನನಗೊಂದು ಸನ್ಮಾನ ಮಾಡದಿದ್ದರೂ ಪರವಾಗಿಲ್ಲ ಒಂದು ಲಕ್ಷ ರೂಪಾಯಿ ಕೊಡಿ " ಅಂತ ನಿಮ್ಮೂರಿನ ಶಿವಣ್ಣ ಹೇಳುತ್ತಿದ್ದಾರೆ ಮಾರಾಯ, ಇಲ್ಲಿ ಈ ದೊಡ್ಡ ಪಟ್ಟಣದಲ್ಲಿ ನಮ್ಮದೇ ನಮಗೆ ಹರಮಂಗಳ ವಾಗಿದೆ, ಇವರದ್ದೊಂದು ದಿನಾ ರಗಳೆ" ಅಂತ ಪರಿಚಯಸ್ಥರೊಬ್ಬರು ಹೇಳಿದ್ದು ನೆನಪಾಯಿತು. "ಶ್ರವಣ ಕುಮಾರನಂತೆ ನಮ್ಮ ಶಿವಣ್ಣ......" ಮೈಕಿನ ಮುಂದೆ ಮತ್ತೊಬ್ಬಾತ ಮುಂದುವರೆಸುತ್ತಿದ್ದ. ಶಿವಣ್ಣ ತನ್ನ ಅಪ್ಪ ಅಮ್ಮಂದಿರನ್ನು ಇಳಿವಯಸ್ಸಿನಲ್ಲಿ ಕಣ್ಣೆತ್ತಿಯೂ ನೋಡದೆ ಇದ್ದುದು ಕಣ್ಣಿಗೆ ಕಟ್ಟಿತು. ಬರೊಬ್ಬರಿ ತಾಸು ಗುಣಗಾನದ ನಡುವೆ ಕಾರ್ಯಕ್ರಮ ಮುಕ್ತಾಯವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಯಿತು. ನಾನು ಊರಿನ ಬಸ್ಸು ಹಿಡಿಯಲು ಸಿಟಿ ಬಸ್ ಸ್ಟ್ಯಾಂಡ್ ನತ್ತ ಹೊರಟೆ.

ಬೆಳಿಗ್ಗೆ ಊರು ತಲುಪುವಾಗ ಜಿಟಿಜಿಟಿ ಮಳೆ ಮುಂದುವರೆಯುತ್ತಿತ್ತು. ನಮ್ಮ ಗಂಗಯ್ಯ ಎದುರು ಸಿಕ್ಕ. ಈ ಅಕಾಲದಲ್ಲಿ ಮಳೆ ಶುರುವಾಯ್ತಲ್ಲ ಮಾರಾಯ ಎಂದೆ. " ಹೌದು ಒಡೆಯಾ ನಿನ್ನೆ ಗದ್ದೆ ಕೊಯ್ದು ಹಾಕಿಕೊಂಡಿದ್ದೆ, ಎಲ್ಲಾ ಹೋಯ್ತು. ವರ್ಷದ ಕೂಳು ನಿಮಿಷಕ್ಕೆ ಹೋದಹಾಗೆ ಆಯ್ತು. ಅರ್ದ ಭತ್ತ ಬರಬಹುದು ಹುಲ್ಲಂತೂ ಪೂರಾ ಹೋತು. ಹೆಂಡರ ಮಕ್ಕಳ ಗತಿ ನೆನೆಸಿಕೊಂಡರೆ ದೇವರೇ ಗತಿ....". ಒಮ್ಮೆ ಪಿಚ್ ಎನ್ನಿಸಿತು. "ಇವನೆ ನೋಡು ಅನ್ನದಾತ ಹೊಲದಿ ದುಡಿವೆ ದುಡಿವೆ ದುಡಿವನು... ನಾಡ ಜನರು ಬದುಕಲೆಂದು ಧವಸ ಧಾನ್ಯ ಬೆಳೆವನು" ಎಂದು ಮೂರನೇ ಕ್ಲಾಸಿನ ಪುಸ್ತಕದಲ್ಲಿ ಸೇರಿಸಿ ಅಟ್ಟ ಹಚ್ಚಿದ್ದು ಬಿಟ್ಟರೆ ತಾನು ಕಷ್ಟದಲ್ಲಿದ್ದು ನಮಗೆ ಊಟಕೊಡುತ್ತಿರುವ ಗಂಗಯ್ಯನಿಗೆ ಏನೂ ಮಾಡಲಾಗುತ್ತಿಲ್ಲವಲ್ಲ ಎಂಬ ಹತಾಶೆ ಕಾಡತೊಡಗಿತು. ನಮ್ಮ ನಮಸ್ಕಾರ ಸನ್ಮಾನ ಎಲ್ಲವೂ ಗಿಡದಲ್ಲಿರುವ ಹೂವಿಗೆ ಸಲ್ಲುತ್ತಿದೆ , ಬೇರಿಗೆ ನೀರೂ ಹಾಕಲಾರೆವು ಅಂತ ಅನ್ನಿಸಿ ಶಿವಣ್ಣನ ಸನ್ಮಾನಕ್ಕೆ ಕೊಡಲು ತೆಗೆದಿರಿಸಿ ಕೊಂಡಿದ್ದ ಸಾವಿರ ರೂಪಾಯಿಯನ್ನು ಗಂಗಯ್ಯನಿಗೆ ಕೊಟ್ಟು ಮನೆಯತ್ತ ಹೆಜ್ಜೆ ಹಾಕಿದೆ. ಎದುರಿನಿಂದ ಇಬ್ಬರು ಬರುತ್ತಿದ್ದರು ಅವರಲ್ಲಿ ಒಬ್ಬಾತ ಮೊಬೈಲ್ ಮೂಲಕ ಹೇಳುತ್ತಿದ್ದ ." ಶಿವಣ್ಣ ಇವತ್ತು ರಾತ್ರಿ ಊರಿಗೆ ಬರ್ತಾನಂತೆ ನಾನೂರು ರೂಪಾಯಿ ಬುಕ್ ಇಸ್ಪೀಟ್ ಆಡೋಣ ಅಂದಿದ್ದಾನೆ ಬೇಗ ಬಂದುಬಿಡು..." . ಅವರ ಮಾತುಗಳನ್ನು ಕೇಳಿಸಿಕೊಂಡು ಒಮ್ಮೆ ಗಂಗಯ್ಯನತ್ತ ನೋಡಿದೆ ಆತ ಇನ್ನೂ ಸಾವಿರ ರೂಪಾಯಿ ಕೈಯಲ್ಲೇ ಹಿಡಿದುಕೊಂಡು ಗರಬಡಿದವನಂತೆ ನಿಂತಿದ್ದ. ಕಣ್ಣಾಲೆಗಳು ತುಂಬಿಕೊಂಡಿದ್ದವು. ಸನ್ಮಾನಕ್ಕೆ ಬೆಂಗಳೂರಿಗೆ ಹೋಗದಿದ್ದರೆ ಇನ್ನೂ ಆರು ನೂರು ರೂಪಾಯಿ ಗಂಗಯ್ಯನಿಗೆ ಹೆಚ್ಚು ಕೊಡಬಹುದಿತ್ತಲ್ಲ್ಲ ಎಂದೆನಿಸಿತು.
ಮನೆಗೆ ಬಂದು ಟಿವಿ ಆನ್ ಮಾಡಿದಾಗ ಸಂದೀಪ್ ಉನ್ನಿಕೃಷ್ಣನ್ ಅಶೋಕ್ ಕಾಮ್ಟೆ ಕರ್ಕೆರಾ ಹೀಗೆ ಹಲವಾರು ಪೋಲೀಸ್ ಅಧಿಕಾರಿಗಳ ಅಂತಿಮ ಯಾತ್ರೆ ನಡೆಯುತ್ತಿತ್ತು. ಬಾಂಬೆಯಲ್ಲಿನ ನರಮೇಧ ನರ್ತಿಸುತ್ತಿತ್ತು. ಸನ್ಮಾನ, ಹಣ ಹೆಸರು ದ್ವೇಷ ರಾಗ ಎಲ್ಲವೂ ಒಂಥರಾ ಪೇಲವ ಅಂತ ಅನ್ನಿಸಿತು. ಅವರಿಗೆಲ್ಲಾ ಅಂತರಾಳದಿಂದ ಸಲಾಂ ಎಂಬಷ್ಟೇ ಹೇಳಿ ಮಗುಮ್ಮಾದೆ. ಇದು ಪ್ರಪಂಚ ಇಲ್ಲಿ ಯಾರಿಗಾಗಿಯೋ ಯಾರೋ ಸಾಯುತ್ತಾರೆ ಮತ್ಯಾರೋ ಅದನ್ನು ಉಪಯೋಗಿಸಿಕೊಳ್ಳುತ್ತಾರೆ. ಅವರವರ ಹಣೆಬರಹ ಇವೆಲ್ಲಾ ಎಂಬ ಕರ್ಮ ಸಿದ್ಧಾಂತ ಒಳ್ಳೆಯದು ಸುಖಕ್ಕೆ ನೆಮ್ಮದಿಗೆ ಅಂದುಕೊಂಡೆ.
ಕೊನೆಯದಾಗಿ: ವೃದ್ಧ ತಂದೆಯೆದುರು ಮಗ " ಇದೊಂದು ದರಿದ್ರ ಪೀಡೆ, ಯಾವಾಗ ತೊಲಗುತ್ತೋ ಏನೋ?,ಇದರಿಂದಾಗಿ ನನ್ನ ಬದುಕೆ ಅಸಹನೀಯವಾಗಿದೆ" ಎಂದು ಹೇಳಿದ. ವೃದ್ಧನ ಕಣ್ಣುಗಳಿಂದ ದಳ ದಳ ನೀರು ಇಳಿಯ ತೊಡಗಿತು. ಹತ್ತಿರದಲ್ಲಿದ್ದವರು ಯಾರೋ ಕೇಳಿದರು. " ಕಣ್ಣೀರಿಡುತ್ತಿದ್ದೀರಲ್ಲ ....ಮಗನ ಕಟು ಮಾತುಗಳಿಂದ ಬೇಸರವಾಯಿತಾ?" . ವೃದ್ಧ ಹೇಳಿದ " ಇಲ್ಲ ಅಂದು ನಾನು ನನ್ನ ಅಪ್ಪನಿಗೆ ಹೀಗೆಯೇ ಹೇಳಿದ್ದು ನೆನಪಾಯಿತು".

9 comments:

ಮೂರ್ತಿ ಹೊಸಬಾಳೆ. said...

ha ha ha raagumaava sanmaana maadisikollalu yogyate,arhate baruvudE ispeetinalli kaledukondu saala maadikondavarige hendada chatakke jeevana mudupaagittavarige.

Shankar Prasad ಶಂಕರ ಪ್ರಸಾದ said...

ಈ ಬರಹ ಓದಿ,ಶಿವಣ್ಣನ ಬಗ್ಗೆ ಹೇಕರಿಕೆ ಪಡಬೇಕೋ, ಗಂಗಯ್ಯನ ಬಗ್ಗೆ ದುಃಖಿಸಬೇಕೋ, ಅರ್ಥ ಆಗ್ತಾ ಇಲ್ಲಾ..ಸ್ವಲ್ಪ ಸಹಾಯ ಮಾಡ್ತೀರ ?

ಕಟ್ಟೆ ಶಂಕ್ರ

Unknown said...

ಎಂತ ಹೇಳಲಿ ಶಂಕ್ರಣ್ಣ. ಶಿವಣ್ಣನಂತಹವರಿಗೆ ಸನ್ಮಾನ ಮಾಡಿ ಒಂದು ಲಕ್ಷ ಕೊಟ್ಟು ಕಳುಹಿಸಿದ ಬೆಂಗಳೂರಿಗರನ್ನು ಕೇಳಬೇಕು.ಘೋಮುಖ ವ್ಯಾಘ್ರರ ಕಥೆ ಇದು. ಕೊನೆಯ ಪಕ್ಷ ಶಿವಣ್ಣನ ಮೊದಲನೇ ಹೆಂಡತಿಗಾದರೂ ಅಷ್ಟಿಷ್ಟು ಹಣ ಕೊಟ್ಟಿದ್ದರೆ ಅವರಿಗೆ ಪುಣ್ಯವಾದರೂ....! ಬರ್ತಿತ್ತೇನೋ.?

venu said...

Ye Raghumava,
beligge beliggene shreemaan 'shivanna' navara charitre odi moodu off aytu marayre....

Sanmanakke duddannu kottu vedike javaabdari yannu vahisikondu... intavarige che bidu hogli....
nange naachike agta ide raghumava...

ಯಜ್ಞೇಶ್ (yajnesh) said...

ರಾಘಣ್ಣ,

ನನಗೆ ಆ ವ್ಯಕ್ತಿಯ ಬಗ್ಗೆ ತಿಳಿದಿರಲಿಲ್ಲ. ಆತ್ಮೀಯರೊಬ್ಬರು ಬಂದು ಅವರು ಕಷ್ಟದಲ್ಲಿದ್ದಾರೆ ಅಂತೆಲ್ಲಾ ಹೇಳಿದ್ದರು. ಅದಕ್ಕಾಗಿ ನಾನೂ ಐನೂರು ರೂ ಕೊಟ್ಟಿದ್ದೆ...ನೀನು ಅವತ್ತು ಅಲ್ಲಿಗೆ ಬಂದಿದ್ದು ಗೊತ್ತಾಗ್ಲಿಲ್ಲ. ನಾನು ಸ್ವಲ್ಪ ಹೊತ್ತು ಕಾರ್ಯಕ್ರಮದಲ್ಲಿ ಇದ್ದಿದ್ದೆ. ಆಮೇಲೆ ಮೇಲೆ ದೇವಸ್ಥಾನದಲ್ಲಿ ಕಾರ್ತೀಕವಿದ್ದಿದ್ದರಿಂದ ಅಲ್ಲಿಗೆ ಹೋಗಿದ್ದೆ.

ಕಾರ್ಯಕ್ರಮದ ಸ್ಥಳ ಬದಲಾಗಿದ್ದು ಅವರು ಶ್ರೀಮಠದ ಭಕ್ತರು ಅನ್ನುವ ಕಾರಣದಿಂದಲ್ಲವಂತೆ. ಅದು ಮೊದಲು ನಿಗದಿಯಾಗಿದ್ದು ಬಯಲು ರಂಗ ಮಂದಿರದಲ್ಲಿ. ಬೆಂಗಳೂರಿನಲ್ಲಿ ಈಗ ಮಳೆಗಾಲವಾಗಿದ್ದರಿಂದ ಅದು ಶ್ರೀಮಠಕ್ಕೆ ಸ್ಥಳಾಂತರಗೊಂಡಿತು ಅನ್ನುವ ವಿಷಯ ಮೂರನೇ ವ್ಯಕ್ತಿಗಳಿಂದ ನನಗೆ ತಿಳಿಯಲ್ಪಟ್ಟಿತು. ಅದನ್ನು ಪರಾಮರ್ಶಿಸಲು ನಾನು ಹೋಗಲಿಲ್ಲ.

ನಿಜವಾಗಿಯೂ ಕಷ್ಟದಲ್ಲಿದ್ದವರಿಗೆ ನೀನು ಸಹಾಯ ಮಾಡಿದ್ದು ಶ್ಲಾಘನೀಯ.

ಎಚ್. ಆನಂದರಾಮ ಶಾಸ್ತ್ರೀ said...

ಸತ್ಯದರ್ಶನ

Unknown said...

ವೇಣು
ವಿಷಯ ಗೊತ್ತಿಲ್ಲದೆ ಹಲವಾರು ಬಾರಿ ಹೀಗೆ ಆಗುತ್ತೆ.
ಯಜ್ಞೇಶ್
ಕಾರ್ಯಕ್ರಮ ಬದಲಾದ ಕಾರಣ ಮಳೆ ಸರಿ. ಆದರೆ ಹೋಲಿಸಿದ್ದು ಹೀಗೆ ಅಷ್ಟೆ.
ಆನಂದರಾಮ ಶಾಶ್ತ್ರಿಗಳೇ
ಪ್ರಯತ್ನ ಷ್ಟೆ, ಪ್ರಯೋಜನ ಇಲ್ಲ

Harisha - ಹರೀಶ said...

ಶಿವಣ್ಣನ ಮೊದಲನೆಯ ಅಭಿಪ್ರಾಯ ಸರಿ ಇದೆ.. ಅನರ್ಹರಿಗೇ ಸನ್ಮಾನ, ಪ್ರಶಸ್ತಿಗಳು ಸಿಗುವುದು ಹೆಚ್ಚು.

Anonymous said...

Bharjari baradyalo