Sunday, January 11, 2009

ಮೊಬೈಲ್ ಮತ್ತು ಫಯಾಜ್

" ಅಣ್ಣಾ ನೀವು ಕೊಡ್ಸಿದ ಶರ್ಟು ಹ್ಯಾಂಗೆ ಕಾಣಿಸ್ತೈತಣ್ಣಾ" ಅಂತ ಫಯಾಜ್ ಕೇಳಿದಾಗ ಏನು ಹೇಳಬೇಕೆಂದು ತಿಳಿಯದೇ ಬೆಪ್ಪಾದೆ. ಅಬ್ಬಾ ಇದೆಂತಾ ಹುಡುಗರ ಮನಸ್ಸಪ್ಪಾ ಅಂತ ಅನ್ನಿಸಿತು. ನನಗೆ ಹಾಗೆ ಅನ್ನಿಸಲು ಕಾರಣ ಹಾಗೂ ಅವನಿಗೆ ಶರ್ಟು ನಾನು ಕೊಡಿಸಿದ್ದಕ್ಕೆ ಕಾರಣ ಮುಂತಾದವುಗಳೆಲ್ಲಾ ಸವಿವವರವಾಗಿ ನಿಮಗೆ ತಿಳಿಯಲು ಒಂದೆರಡು ದಿವಸ ಹಿಂದೆ ಹೋಗಬೇಕು.
"ರೀ ಎನ್ನ ಮೊಬೈಲ್ ಎಲ್ಲಿಟ್ಟಿದ್ದೀ?"
ಮನೆಯಾಕೆ ಯಿಂದ ಶುಕ್ರವಾರ ಬೆಳಿಗ್ಗೆ ಬಂತು ಪ್ರಶ್ನೆ. ತಲೆ ಕೆರೆದುಕೊಂಡೆ ನಿನ್ನೆ ಸಂಜೆ ತೆಗೆದುಕೊಂಡಿದ್ದು ಹೌದು ಆದರೆ ಇಟ್ಟದ್ದು ಎಲ್ಲಿ ಅಂತ ಸರಕ್ಕನೆ ನೆನಪಾಗುತ್ತಿಲ್ಲ. ಸ್ವಲ್ಪ ಫ್ಲ್ಯಾಷ್ ಬ್ಯಾಕ್ ಗೆ ಹೋದಮೇಲೆ ನೆನಪಾಯಿತು ಹೌದು ಅಂಗಳದ ಅಂಚಿನ ಕಾಂಪೌಂಡ್ ಮೇಲೆ ಇಟ್ಟಿದ್ದೆ (ನಮ್ಮ ಮನೆಯಲ್ಲಿ ಹಾಗೆ ಮನೆಯ ಹೊರಗಡೆ ಮೊಬೈಲ್ ಇಡುವುದು ಅನಿವಾರ್ಯ. ಕಾರಣ ಮನೆಯೊಳಗೆ ಸಿಗ್ನಲ್ ಬರುವುದೇ ಇಲ್ಲ) . "ಕಂಟ್ನದ ಮೇಲೆ ಇಟ್ಟಿದ್ದಿ ನೋಡು" ಅಟ್ಟದಿಂದ ಕೂಗಿ ಹೇಳಿದೆ. "ಇಲ್ಲಿಲ್ಲೆ" ಮತ್ತೆ ಆ ಕಡೆಯಿಂದ ಸಿಟ್ಟಿನಿಂದ ಬಂತು ಉತ್ತರ ಜತೆಯಲ್ಲಿಯೇ " ಅಂವ ಬೇಜವಾಬ್ದಾರಿ ಎಲ್ಲಿಟ್ಟಿದ್ನ" ಎಂಬ ಅಪ್ಪಯ್ಯನ ವಗ್ಗರಣೆ. ಅಡಿಕೆ ಇಳಿಸುತ್ತಿದ್ದ ತಲೆಬಿಸಿ ಬಿಸಿಲಿನ ಝಳ ದ ಜತೆ ಮೊಬೈಲ್ ಕಾಣೆಯಾದ್ದು ಇನ್ನಷ್ಟು ರಂಗೇರಿತು. ಅಟ್ಟದಿಂದ ಇಳಿದು ಬಂದು ನಾನಿಟ್ಟ ಜಾಗದಲ್ಲಿ ಹುಡಿಕಾಡಿದೆ. ಮತ್ತೂ ನೆನಪು ಮಾಡಿಕೊಂಡು ಇಡದಿದ್ದ..! ಜಾಗದಲ್ಲೂ ಹುಡುಕಾಡಿದೆ. ಮೊಬೈಲ್ ಕಾಣೆಯಾದ ತಲೆಬಿಸಿ ಅಮ್ಮ, ಅಪ್ಪಿ . ಅಪ್ಪಯ್ಯ ಆಕೆ ಹೀಗೆ ಎಲ್ಲರಿಗೂ ವರ್ಗಾವಣೆಯಾಗಿ ಒಬ್ಬೊಬ್ಬರಿಂದ ಒನ್ನೊಂದು ತರಹದ ಮಾತುಗಳು ಹರಿದಾಡಲಾರಂಬಿಸಿತು ಎಂಬಲ್ಲಿಗೆ ಮೊಬೈಲ್ ಕಾಣೆಯಾಗಿದೆ ಎಂಬ ವಿಷಯ ಮನದಟ್ಟಾಯಿತು. ಕಾಣೆಯಾಗುವುದಾದರೂ ಹೇಗೆ? ಕಾಡಿನ ನಡುವೆ ಇರುವ ಒಂಟಿ ಮನೆ. ಮನೆಯಲ್ಲಿ ಯಾರೂ ತೆಗೆದುಕೊಂಡಿಲ್ಲ. ಆಗಲೆ ಮೊಬೈಲ್ ಕಳೆದು ಹನ್ನೆರಡು ತಾಸು ಕಳೆದಿದೆ. ಲ್ಯಾಂಡ್ ಲೈನ್ ನಿಂದ ಮೊಬೈಲ್ ಗೆ ಡಯಲ್ ಮಾಡಿದ ಅಪ್ಪಿ " ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ" ಉತ್ತರ ಬಂತು. ಯಾರಾದರೂ ಕದ್ದಿದ್ದರೆ "ಸ್ವಿಚ್ ಆಫ್ ಮಾಡಿದ್ದಾರೆ" ಎಂಬ ಸಂದೇಶ ಬರಬೇಕಿತ್ತು ಹಾಗಾಗಿ ಯಾರೂ ಕದ್ದಿಲ್ಲ ಮತ್ತೆಲ್ಲಿಯೂ ಮರೆತಿಟ್ಟರಬೇಕು ಎಂಬ ತೀರ್ಮಾನ ಹೊರಬಿತ್ತು. ಸರಿ ಮತ್ತೆ ಹುಡುಕಾಟ ಹಿತ್ತಿಲು ಬಾಗಿಲು ಸಜ್ಜೆ ನ್ಯಾಗಂದಿಗೆ ಹೀಗೆ ಕಂಡಕಂಡಲ್ಲೆಲ್ಲಾ ... ಫಲಿತಾಂಶ ಮಾತ್ರಾ ಶೂನ್ಯ.
"ನಿನ್ನೆ ಸಂಜೆ ಪಂಪ್ ಸೆಟ್ ರಿಪೇರಿಗೆ ಅಶೋಕ ಬಂದಿದ್ದ ಅವನೊಟ್ಟಿಗೆ ಒಬ್ಬ ಗ್ಯಾರೇಜ್ ಹುಡ್ಗ ಬಂದಿದ್ನಲ್ಲ.... ಹಾ ಅವನದೇ ಈ ಕೆಲಸ " ಮನೆಯಾಕೆಯಿಂದ ತೀರ್ಮಾನ ಬಂತು. ಸರಿ ಅದೇ ಹುಡುಗ ಮೊಬೈಲ್ ತೆಗೆದುಕೊಂಡು ಹೋಗಿದ್ದಿರಬಹುದು ಆದರೆ ಈಗ ಹದಿನಾಲ್ಕು ತಾಸುಗಳು ಕಳೆದಮೇಲೆ ಹೇಗೆ ಕೇಳುವುದು?. ಆತ ಉದ್ದೇಶಪೂರ್ವಕವಾಗಿ ಕದ್ದೊಯ್ದಿದ್ದರೆ ಈಗಾಗಲೇ ಹಬೇಸ್ ಮಾಡಿಯಾಗಿರುತ್ತದೆ. ಮತ್ತೆ ತನ್ನಮೇಲೆ ವೃಥಾ ಕಳ್ಳತನದ ಆರೋಪ ಹೊರಿಸಿದಿರಿ ಅಂತ ಆತ ಗಲಾಟೆ ಶುರುಮಾಡಬಹುದು ಎಂಬಂತಹ ಯೋಚನೆಗಳ ನಡುವೆ ಗ್ಯಾರೇಜ್ ಅಶೋಕನಿಗೆ ಏನಾದರಾಗಲಿ ತಣ್ಣಗೆ ಸುಮ್ಮನೆ ಒಂದುಸಾರಿ ಕೇಳು ಎಂದು ಫೋನಲ್ಲಿ ಹೇಳಿದೆ. ಆ ಕಡೆಯಿಂದ ಉತ್ತರ ಎಷ್ಟು ಹೊತ್ತಾದರೂ ಬರಲಿಲ್ಲ. ಆಗ ನನಗೇಕೋ ಅನುಮಾನದ ಹುತ್ತ ಬಲವಾಗತೊಡಗಿ ತಾಳಗುಪ್ಪಕ್ಕೆ ಬೈಕನ್ನೇರಿ ಹೊರಟೆ. ನಾನು ಗ್ಯಾರೇಜ್ ಬಳಿ ಬೈಕ್ ನಿಲ್ಲಿಸುತ್ತಿದ್ದಂತೆ ಹುಡುಗ ನನ್ನ ನೋಡಿ " ಎನಣ್ಣಾ ನಿನ್ನೆ ನಿಮ್ಮನ್ನ ನೋಡಿದ್ದೆ" ಎಂದು ಅರ್ಥವಿಲ್ಲದ ಮಾತನ್ನಾಡಿದ. ಆಗ ನನ್ನ ಸಂಶಯಕ್ಕೆ ರಕ್ಕೆಪುಕ್ಕ ಸೇರಿತು. ಅಶೋಕ " ನಾನು ಇನ್ನೂ ಅವನ ಬಳಿ ಕೇಳಿಲ್ಲ ಅಷ್ಟರಲ್ಲಿ ನೀನು ಬಂದೆ" ಎಂದ. ಸರಿಬಿಡು ಎನ್ನುತ್ತಾ ನಾನೇ ಡೈರೆಕ್ಟಾಗಿ " ಎಯ್ ತಮ್ಮಾ ನಿನ್ನೆ ನಮ್ಮ ಮನೆಯ ಕಾಂಪೌಂಡ್ ಮೇಲಿದ್ದ ಮೊಬೈಲ್ ನೋಡಿದ್ದೆಯಾ?" ಅಂತ ಕೇಳಿದೆ.
"ಇಲ್ಲ " ಹುಡುಗ ಹೆದರುತ್ತಾ ಹೇಳಿದ.
"ನೋಡು ನಮ್ಮ ಮನೆಗೆ ನಿನ್ನೆ ಮತ್ಯಾರು ಬರ್ಲಿಲ್ಲ ಮೊಬೈಲ್ ನೀನು ನೋಡಿದ್ದು ಮಾತ್ರ ಅಲ್ಲ ತಗಂಡು ಬಂದಿದ್ದೀ ಸುಮ್ಮನೆ ಕೊಡು ಇಲ್ಲದಿದ್ದರೆ ನಾನು ಪೋಲೀಸ್ ಕಂಪ್ಲೇಂಟ್ ಕೊಡುತ್ತೇನೆ" ಸ್ವಲ್ಪ ಬಿರುಸಾಗಿ ಹೇಳಿದೆ.
ನಾನು ಪೋಲೀಸ್ ಶಬ್ಧ ಬಳಸಿದ್ದರಿಂದ ಆತ " ಹೋ.." ಎಂದು ಅಳಲು ಶುರುಮಾಡಿ." ಇಲ್ಲಣ್ಣ ನಾನು ಬಡವ ಇರಬಹುದು ದುಡುದು ತಿಂತೀನಿ ಕದಿಯಲ್ಲ, " ಅಂತ ಹೇಳುತ್ತಾ ಧಾರಾಕಾರ ಕಣ್ಣೀರ ಕೋಡಿ ಹರಿಸತೊಡಗಿದ.
ಆತ ಅಳುವ ಪರಿ ನನಗೆ ಸಹಿಸಲಾಗಲಿಲ್ಲ. ನನಗೂ ಒಂಥರಾ ವ್ಯಥೆ ಕಾಡತೊಡಗಿತು. ಈ ಹುಡುಗನ ವರ್ತನೆ ನೋಡಿದರೆ ಕದ್ದದ್ದು ಈತ ಅಂತ ಹೇಳಲಾಗದು ಅದೂ ನಾನೇನು ಕಣ್ಣಲ್ಲಿ ಕಂಡಿಲ್ಲ ಹೀಗೆ ವೃಥಾ ಆರೋಪ ಹೊರಿಸಿದ ನೂರಾರು ಕಥೆಗಳು ಕಣ್ಮುಂದೆ ತೇಲಿಬಂದು ಸ್ವಲ್ಪ ಅಧಿರನಾದೆ. "ಸರಿ ಹೋಗಲಿ ಬಿಡು ತಪ್ಪು ನನ್ನದೆ ನೀನು ಕದ್ದಿಲ್ಲ ಅಂದ್ರೆ ಹೋಗ್ಲಿ ಬಿಡು" ಅಂತ ಸಮಾಧಾನ ಮಾಡಿದೆ. ಆದರೆ ಈಗ ಆತ ಅಳು ಜೋರುಮಾಡಿದ. ಅಯ್ಯೋ ಒಂದು ಮಾಡಲು ಹೋಗಿ ಇನ್ನೊಂದು ಮಾಡಿಕೊಂಡತಾಯಿತಲ್ಲ ಎಂದು ಆತನ ಅಳು ನಿಲ್ಲಿಸಲು ಹರಸಾಹಸ ಪ್ರಾರಂಭಿಸಿದೆ. ಕೊನೆಗೆ ಆತನ ಜೇಬಿಗೆ ನೂರರ ಒಂದು ನೋಟು ತುರುಕಿ ಆಯಿತು ನೀನು ಕದ್ದಿಲ್ಲ ಎಂದಮೇಲೆ ತಪ್ಪು ನನ್ನದೆ ಎಂದು ಸಮಾಧಾನ ಪಡಿಸಿದೆ. ನೂರರ ನೋಟು ಜೇಬಿಗೆ ಸೇರಿದಮೇಲೆ ಸ್ವಲ್ಪ ಸಮಾಧಾನ ಪಟ್ಟುಕೊಂದ ಹುಡುಗ ಗ್ಯಾರೇಜ್ ಕೆಲಸದಲ್ಲಿ ತಲ್ಲೀನನಾದ. ನಾನು ಹೋದ ಮೊಬೈಲ್ ಹೋಯಿತು ಜತೆಗೆ ನೂರೂ ಕೈಬಿಟ್ಟಿತು ಇನ್ನೇನು ಮಾಡುವುದಪ್ಪಾ ಎಂದು ಅಲ್ಲೇ ಖುರ್ಚಿಯಲ್ಲಿ ಕುಳಿತೆ. ಗ್ಯಾರೇಜನಲ್ಲಿ ಸೇರಿದ ಇತರೆ ಮಂದಿ ನನ್ನನ್ನು ಒಂಥರಾ ಅಪರಾಧಿ ಎಂಬಂತೆ ನೋಡತೊಡಗಿದರು. ಹಾಗೆಲ್ಲ ಸುಮ್ಮ ಸುಮ್ಮನೆ ಆನುಮಾನ ಪಡಬಾರದು ಎಂದು ನನಗೆ ಉಪದೇಶಾಮೃತ ಶುರುವಾಯಿತು. ಇನ್ನು ಇಲ್ಲಿ ಹೆಚ್ಚು ಹೊತ್ತು ಇದ್ದರೆ ನಾನು ಧರ್ಮದೇಟು ತಿನ್ನಬೇಕಾಯಿತೆಂದು ಹೊರಡಲನುವಾದೆ. ಅಷ್ಟರಲ್ಲಿ ಡೈರಿ ಪ್ರಕಾಶ ಬಂದ ಆತನ ಬಳಿ " ನನ್ನ ಮೊಬೈಲ್ ಕಳೆದಿದೆ ಸಿಮ್ ಬ್ಲಾಕ್ ಮಾಡಿಸಬೇಕಿತ್ತು" ಮುಂತಾಗಿ ಸವಿವರವಾಗಿ ಫಯಾಜ್ ಬಂದಿದ್ದು ನೂರು ಕೊಟ್ಟಿದ್ದು ಆತ ಅತ್ತದ್ದು ಹೇಳಿದೆ. ಆತ "ತಥ್ಥೇರಿಕಿ ಅವುಕ್ಕೆ ನಿನ್ನ ಭಾಷೆ ಅಲ್ಲ ತಡಿ ನೋಡ್ತಾ ಇರು ಈಗ" ಎನ್ನುತ್ತಾ ಹುಡುಗನನ್ನು ಗ್ಯಾರೇಜ್ ಹಿಂದೆ ಎಳೆದುಕೊಂಡು ಹೋದ. ನನಗೋ ಗಾಬರಿಯಾಯಿತು. ಮೊದಲೇ ಸೀನ್ ಕ್ರಿಯೇಟ್ ಆಗಿದೆ ಇನ್ನು ಮತ್ತೇನಾದರೂ ಗಲಾಟೆ ಆದೀತೆಂಬ ಭಯ. "ಏಯ್ ಹೋಗ್ಲಿ ಬಿಡಾ" ಎನ್ನುತ್ತಾ ನಾನೂ ಪ್ರಕಾಶನ ಹಿಂದೆ ಓಡಿದೆ. ಆದರೆ ಅಷ್ಟರಲ್ಲಿ ಪ್ರಕಾಶನ ರಭಸಕ್ಕೆ ಹುಡುಗ ಬಾಯಿಬಿಟ್ಟಾಗಿತ್ತು. ಪ್ರಕಾಶ ಹೆಂಗೆ? ಎನ್ನುತ್ತಾ ಹುಬು ಹಾರಿಸಿದ. "ಅವು ಸಾಬ್ರ ಹುಡುಗ್ರು ತಮಾ ಹಂಗಾಂದ್ರೆ ಹಂಗೆ ಹಿಂಗಾದ್ರೆ ಹಿಂಗೆ ನೀ ಲೂಸ್ ತರಹ ನೂರು ರೂಪಾಯಿ ಕೊಟ್ಟಿದ್ಯಲಾ" ಅಂತ ನನಗೆ ಅಂದ. ಫಯಾಜ್ ನ ಮುಖ ನೋಡಿದೆ ಕಣ್ಣೀರು ಧಾರಾಕಾರ ಇಳಿಯುತ್ತಿತ್ತು. " ಹೋಗ್ಲಿ ಬಿಡು ಅಳಬೇಡ , ಇನ್ನು ಈ ತರಹ ಮಾಡಬೇಡ" ಅಂತ ಸಮಾಧಾನ ಮಾಡಿದೆ. ನನಗೋ ಒಂಥರಾ ಪಿಚ್ಚೆನಿಸಿತು. ಛೆ ಪಾಪ ಈಗ ಸುತ್ತಮುತ್ತಲಿನವರೆಲ್ಲಾ ಆತನ ವಿರುದ್ಧ ತಿರುಗಿಬಿದ್ದಿದ್ದರು. ಉಪದೇಶಾಮೃತ ಆತನತ್ತ ತಿರುಗಿತ್ತು. ಕೆಲವರು ಹೊಡೆದು ಹೀರೋ ಆಗಲು ಮುನ್ನುಗ್ಗುತ್ತಿದ್ದರು. ನಾನು ಇನ್ನು ಅವಾಂತರವಾದೀತೆಂದು ಫಯಾಜ್ ನನ್ನು ಬೈಕಲ್ಲಿ ಕೂರಿಸಿಕೊಂಡು ಪೇಟೆಗೆ ಕರೆದುಕೊಂಡು ಹೋಗಿ ಮಹಳದಕರ್ ಟೆಕ್ಸಟೈಲ್ಸ್ ನಲ್ಲಿ ಒಂದು ಒಳ್ಳೆಯ ಟಿ ಶರ್ಟ್ ಕೊಡಿಸಿದೆ.
ಆತನ ಕಣ್ಣುಗಳಲ್ಲಿ ಅದೇನೋ ಹೊಳಪು ಕಂಡೆ ಮತ್ತು ಮನೆಗೆ ಬಂದು ಹುಡುಗನನ್ನು ಹೆದರಿಸಿ ಜೋರು ಮಾಡಿ ಅವಾಜ್ ಹಾಕಿ ಮೊಬೈಲ್ ಇಸಕೊಂಡು ಬಂದೆ ಅಂತ ಒಂದು ಸುಳ್ಳು ಹೇಳಿ ಮನೆಯವರೆದುರು ಹೀರೋ ಆದೆ.
ಭಾನುವಾರ ನಾ ಕೊಡಿಸಿದ್ದ ಟಿ ಶರ್ಟ್ ಹಾಕಿಕೊಂಡಿದ್ದ ಫಯಾಜ್ ಮಿರಿಮಿರಿ ಮಿಂಚುತ್ತಿದ್ದ ಮತ್ತು ನನ್ನನ್ನೇ ಹಾಗೆ ಕೇಳಿದ. ನಾನು ಮೊಬೈಲ್ ಸಿಕ್ಕಿದ್ದರಿಂದ ನನಗೆ ಉಳಿದ ಹಣ ಎಷ್ಟು ಎನ್ನುವ ಲೆಕ್ಕಾಚಾರದಲ್ಲಿ ಮುಳುಗಿದೆ. ಮುಂದೊಂದು ದಿನ ಆ ಹುಡುಗನಿಗೆ ನಾನು ಶರ್ಟ್ ಕೊಡಿಸಿದ್ದು ಹಣ ಕೊಟ್ಟಿದ್ದು ಅರ್ಥವಾದರೆ ಸಾರ್ಥಕ. ಆಗದಿದ್ದರೆ ಅವನ ಅಲ್ಲಲ್ಲ ಯಾರ್ಯಾರದೋ ಹಣೆಬರಹದಲ್ಲಿ ಏನೇನು ಕಳೆದುಕೊಳ್ಳಬೇಕೆಂದು ಬರೆದಿದೆಯೋ ಬಲ್ಲವರ್ಯಾರು?.



3 comments:

Harisha - ಹರೀಶ said...

ಮೊಬೈಲ್ ಕದ್ದಿದ್ದಕ್ಕೆ ಅವಂಗೆ ಒಂದು ನೂರು ರೂಪಾಯಿ, ಒಂದು ಶರ್ಟು ಸಿಗದಾದ್ರೆ ಮತ್ತೆ ಮುಂದೆ ಕದೀತ್ನಿಲ್ಲೆ ಅಂತ ಏನ್ ಗ್ಯಾರಂಟಿ?

Unknown said...

ಅವನು ಕದ್ದು ಒದೆ ತಿನ್ನಲಿ .ನನ್ನಿಂದ ಒದೆಯಲಾಗಲಿಲ್ಲ.ಹಾಗಾಗಿ ಈ ಸಿಂಪಲ್ ಉಪಾಯ. ಹಾಗಾಗಿ ಅರ್ಥವಾದರೆ ಸಾರ್ಥಕ ಎಂದು ಅರೆದದ್ದು.

ಪುಸ್ತಕ ಮುಟ್ಚಾ?

Harisha - ಹರೀಶ said...

ಗೊತ್ತಿಲ್ಲೆ.. ನಾಳೆ ಊರಿಗೆ ಹೋಗ್ತಾ ಇದ್ದಿ.. :-)