Wednesday, January 14, 2009

ಚಳಿಯಲ್ಲಿಯೂ ಸೆಖೆಯಾದರೆ ಸಾರ್ಥಕ....!

ಭಾರತೀಶ ಪಿ ಬರೆದನೆಂದರೆ ಅದರಲ್ಲಿ ಒಂದು ಮಜ ಇರುತ್ತದೆ. ನನಗೆ ಆಗಾಗ ವಿಚಾರಗಳ ನ್ನು ಪೂರೈಕೆಮಾಡುವ ಮಾಹಿತಿದಾರ. ಹಿತೈಷಿ, ಅವನ ಒಂದಿಷ್ಟು ಆಲೋಚನೆಗಳು ನಿಮಗೆ. - ಕೆ.ಆರ್.ಶರ್ಮಾ.ತಲವಾಟ


ವಳಲಂಬೆಯವರ 'ವಿಚಾರವಾದ, ವಿಜ್ಞಾನ, ಅಧ್ಯಾತ್ಮ ಮತ್ತು ದೇವರು' ನೋಡಿದೆ. ಪೂರ್ತಿ ಓದುವಷ್ಟು ಸ್ವಾರಸ್ಯ ಕಾಣಲಿಲ್ಲ. ಮೂರು ಅಧ್ಯಾಯ ಓದಿದೆ. ವಿಚಾರ ಸರಣಿ ಇಷ್ಟವಾಗಲಿಲ್ಲ. ಆದರೂ, ಇದ್ದಕ್ಕಿದ್ದಂತೆ ನಿಗಿ-ನಿಗಿ ಹೊಳೆಯುವ ಮಾತನ್ನು ಆಡಿಬಿಡುತ್ತಾರೆ. ಅದು ಅಲ್ಲಿಗೇ ನಿಂತು ಮತ್ತೆಲ್ಲಿಗೋ ಹೋಗುತ್ತಾರೆ.ಕಷ್ಟ-ಸುಖಗಳ ಸವಕಲು ವಿಶ್ಲೇಷಣೆ ಹಿಡಿಸಲಿಲ್ಲ. ಸುಖದ ಅನುಭೂತಿಗೆ ಕಷ್ಟ ಅನಿವಾರ್ಯ ಅಂತ ಪ್ರತಿಪಾದಿಸುವುದು ಹಿಡಿಸಲಿಲ್ಲ. ಅನ್ನ ಚೆನ್ನಾಗಿದೆ ಅಂತ ಹೇಳಲು ಹಳಸಲು ಅನ್ನ ತಿಂದಿರಲೇಬೇಕೇ? ಸಕ್ಕರೆಯ ಸಿಹಿ ಆಹಾ! ಅನ್ನುವಂತಿತ್ತು ಎಂದಾಗಲು ಖಾರ, ಕಹಿ ತಿಂದ ಅನುಭವ ಬೇಕೇಬೇಕೇ? ತಾರೆ ಜಮೀನ್ ಪರ್್ನ ಡೀಪ್ ಫೀಲ್್ಗೆ ಖರಾಬ್ ಸಿನೆಮಾ ನೋಡಿರಲೇಬೇಕಿತ್ತೇ? ಹಾಗಾಗಿ, ಸುಖಕ್ಕೆ ಕಷ್ಟದ ಕಾರ್ಪಣ್ಯ ಅನಿವಾರ್ಯವಲ್ಲ. ಅದು ಅದರ ಪಾಡಿಗೆ, ಇದು ಇದರ ಪಾಡಿಗೆ. ಹಾಂ! ಮಾತೊಂದನ್ನು ಕೇಳಿರಬಹುದು. ಶ್ರೀಮಂತನಿಗೆ ಬಡವನ ಬವಣೆ ಅರ್ಥವಾಗಬೇಕಾದರೆ ಕನಿಷ್ಠ ಒಂದು ದಿನವಾದರೂ ಅವನು ತಿಪ್ಪೆಗೆ ಬೀಳಬೇಕು. ಸಾಮಾನ್ಯ ಸಂದರ್ಭದಲ್ಲಿ ಇದರ ಅನಿವಾರ್ಯತೆ ಇಲ್ಲ. ಅಂತಸ್ತಿನ ಅಂತರ ಹೃದಯ ತರಂಗಗಳನ್ನು ಅರಿಯಲು ಅಡ್ಡ ಬರುವುದಿಲ್ಲ. ಹಾಗಾಗದೇ ಶ್ರೀಮಂತನಿಗೆ ಅಂತಸ್ತಿನ ಅಮಲು ಏರಿ ಉಡಾಫೆಯಾದರೆ ಕನಿಷ್ಠ ಒಂದು ದಿನವಾದರೂ ತಿಪ್ಪೆಗೆ ಬಿದ್ದರೆ ಅರ್ಥವಾಗಬಹುದೇನೋ ಎಂದು ಚಿಂತಿಸುವುದರಲ್ಲಿ ಅರ್ಥವಿದೆ. ಆದ್ದರಿಂದ ಸುಖ ಬೇಕಾದರೆ ಕಷ್ಟಪಡಲೇಬೇಕು ಎಂಬುದನ್ನು ಒಪ್ಪಲಾಗುವುದಿಲ್ಲ. ಸಾಮಾನ್ಯನನ್ನು ಗಮನದಲ್ಲಿರಿಸಿಕೊಂಡು ಇದನ್ನು ಬರೆದಿದ್ದರೆ, ಇದು ನನ್ನ-ನಿನ್ನನ್ನು ಹೆದರಿಸದೇ ಬಿಡದು. ಹಿಮಾಲಯದ ಅಘೋರಿಗಳ ಚಮತ್ಕಾರ ಅನ್ನೋ ತರಹದ ಮಾತುಕತೆಯೇ ಸಿಕ್ಕಾಪಟ್ಟೆ ಹೊಳೆಯುತ್ತ ಹೋಗುತ್ತದೆ. ಅಧ್ಯಾತ್ಮ ಸಾಮಾನ್ಯನ ಬದುಕಿಗೆ ಸಿಗುವಂತಹುದಲ್ಲ, ಬದುಕುತ್ತಿರುವ ರೀತಿಗೆ ಅದು ಯಾವುದೋ ಲೋಕದ ಮಾಯೆ ಎಂಬೆಲ್ಲ ರೀತಿಯಲ್ಲಿ ಸಾರುತ್ತ ಅವಧೂತರ ಬದುಕನ್ನೇ ವೈಭವೀಕರಿಸುತ್ತ ಹೋಗುತ್ತದೆ. ಅದು ಇಷ್ಟವಾಗಲಿಲ್ಲ. ಹರೀಶ ಹೇಳಿದ ಒಂದು ಮಾತು. ಹಾವಿನ ಹತ್ತಿರ ಹೋಗಲು ಹೆದರುವುದು ನಾರ್ಮಲ್ ಕೇಸ್. ಅಯ್ಯೋ! ಹತ್ತಿರ ಹೋಗಲು ಹೆದರಿದರೆ ಸೋತಂತೆ ಆಗುತ್ತದೆ ಎಂದು ಅಂದುಕೊಂಡು ಹತ್ತಿರ ಹೋಗುವವನಿಗೆ ಔಷಧಿ ಕೊಡಿಸಬೇಕು. ಏಕೆಂದರೆ ಹಾವು ಕಚ್ಚುತ್ತದೆ. ಕಚ್ಚಿದರೆ ಸಾಯದೇ ಇರುವಷ್ಟು ಅವನು ಶಕ್ತನಲ್ಲ. ಆದರೂ ಹತ್ತಿರ ಹೋಗುತ್ತೇನೆಂದು ಹಟ ಹಿಡಿದರೆ ಔಷಧಿಯ ಹೊರತಾಗಿ ಬೇರೆ ದಾರಿ ಇಲ್ಲ. ಅವರು ಹೇಳುವ ಯೋಗಿಗಳು ಹಾಗಿರುವುದಿಲ್ಲ. ಎಲ್ಲವನ್ನೂ ಮಾಡಬೇಕು, ಎಲ್ಲ ಪರಿಸ್ಥಿತಿಗಳಿಗೂ ಒಗ್ಗಿಕೊಳ್ಳಬೇಕು, ಸಿಕ್ಕಿದ್ದನ್ನೇ ತಿಂದು ಅರಗಿಸಿಕೊಳ್ಳಬೇಕು ಎಂಬ ಹಾದಿಯಲ್ಲೇ ಇರುತ್ತಾರೆ. ಒಂಥರಾ ಫ್ಯಾಂಟಸಿ ಪ್ರಪಂಚದಲ್ಲಿ ಬದುಕುವ ತವಕ. ಯಾವುದೋ ಒಂದು ಅಂತಿಮ ಸುಖಕ್ಕಾಗಿ ಪಯಣ. ಯಾವತ್ತೂ ಪಯಣದ ಆರಂಭ ಆ ಅಂತಿಮ ಸುಖಕ್ಕೆ ವಿರುದ್ಧವಾಗಿರುವ ಜೀವನ ಸನ್ನಿವೇಶದಿಂದಲೇ ಆಗಿರುವುದು ವಿಚಿತ್ರವಾಗಿ ಕಾಣುತ್ತದೆ. ಹಾಗಾದರೆ ಆ ಅಂತಿಮ ಸುಖದ ಪಯಣ ಇರುವ ಪರಿಸ್ಥಿತಿಯಿಂದಲೇ ಸಾಧ್ಯವಿಲ್ಲವೇ! ಆತಂಕ ಕಾಡದಿರದು. ನಾನು ಒಬ್ಬಂಟಿ, ನನಗೆ ಯಾರೂ ಇಲ್ಲ, ನನ್ನನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ, ನನ್ನ ಕಷ್ಟಕ್ಕೆ ಯಾರೂ ಆಗಿಬರುತ್ತಿಲ್ಲ ಎಂಬ ಅಭದ್ರ ಭಾವಗಳು ಕಾಡುತ್ತಿರುವಾಗ, ಅದರಿಂದ ಮೇಲೆ ಬರಲು, ನಾನೂ ಎಲ್ಲರಂತೆ, ಎಲ್ಲವಂತೆ ಈ ವ್ಯವಸ್ಥೆಯ ಒಂದು ಭಾಗವೆಂಬ ದರ್ಶನ ಆಗಬೇಕು ಎಂಬ ಸಾಹಿತ್ಯ ಸಾಗಿದ್ದರೆ ಹೃದಯಕ್ಕೆ ಹದವಾಗಿ ತಟ್ಟುತ್ತಿತ್ತು. ಅಂತಹ ಅಧ್ಯಾತ್ಮ ಪ್ರತಿಕ್ಷಣಗಳ ಸಮಗ್ರ-ಸುಂದರ ಅನುಭೂತಿಗೆ ಅನಿವಾರ್ಯವೆಂದು ಅರ್ಥವಾಗುತ್ತಿತ್ತು. ಈ ಅನುಭೂತಿ ಸುಖವಾಗುತ್ತಿತ್ತು, ಅದಕ್ಕೆ ಅಡ್ಡಬರುವ ಸಂಗತಿಗಳೇ ಕಷ್ಟವಾಗುತ್ತಿತ್ತು. ಈ ಅನುಭೂತಿಯ ಈ ಬದುಕು ದಿವ್ಯವಾಗುತ್ತಿತ್ತು ಎಂಬ ಸಂದೇಶ ಸಾರಲು ಆಗಿದ್ದಿದ್ದರೆ ಅವರ ಸಾಹಿತ್ಯ ಸುಂದರವಾಗುತ್ತಿತ್ತು. ಈಗದು ಆಕಾಶದ ಬುಟ್ಟಿಯಾಗಿದೆ. ತಲುಪಲು ಕಷ್ಟವಾಗುತ್ತಿದೆ. ತಲುಪದಿದ್ದರೂ ತೊಂದರೆ ಇಲ್ಲವೇನೋ ಎಂದು ಅನಿಸುತ್ತಿದೆ. ಅದಿಲ್ಲದೇ ಈಗ ಬದುಕುತ್ತಿಲ್ಲವೇ ಎಂಬ ಸಮಾಧಾನವೂ ಸಿಗುತ್ತಿದೆ.ಮತ್ತೆ, ಧರ್ಮಗಳ ಜೀವಂತಿಕೆಯ ವಿಷಯ ಬಂದಾಗ ಉದಾಹರಣೆಯನ್ನೇ ಅವಲಂಬಿಸಿ ಉಸಿರಾಡುತ್ತಾರೆ. ಹಳೆಯ ನಾಗರಿಕತೆಗಳ ಸಂದರ್ಭದಲ್ಲಿ ಹಲವು ಧರ್ಮಗಳಿದ್ದವು. ಹೊಸ ಮತಗಳ ತೀವ್ರ ಧಾಳಿಯಿಂದ ಎಲ್ಲವೂ ಮಣ್ಣಲ್ಲಿ ಮಣ್ಣಾದವು. ಆದರೆ, ನಮ್ಮ ಹಿಂದೂ ಧರ್ಮ ಮಾತ್ರ ಹಾಗಾಗಲಿಲ್ಲ. ಹಿಂದೂ ಧರ್ಮ ಎಲ್ಲವನ್ನೂ ಬುದ್ಧಿವಂತಿಕೆಯಿಂದ ಒಪ್ಪಿಕೊಂಡಿದ್ದರಿಂದ ಅದು ಅಳಿಯದೇ ಹಾಗೇ ಉಳಿದಿದೆ ಎಂಬ ವಾದವನ್ನು ಮಂಡಿಸುತ್ತಾರೆ. Practically, is it possible, acceptable for such a long time? ಇಲ್ಲ ಅನಿಸುತ್ತಿದೆ. ಧರ್ಮ ಹಿಂದೂವೋ ಮತ್ತೊಂದೋ ಗೊತ್ತಿಲ್ಲ. ಮೊದಲದು ಬದುಕಲು ಬಿಡಬೇಕು. ಹೊಟ್ಟೆ ಹೊರೆದುಕೊಳ್ಳಲು ದಾರಿ ಹಾಕಿಕೊಡಬೇಕು. ಮತ್ತೂ ಆಗುವುದಾದರೆ ನಮ್ಮನ್ನು ಬೆಳೆಯಲು ಬಿಡಬೇಕು. ಮತ್ತೂ ಆಗುವುದಾದರೆ ಕೈ ಹಿಡಿದು ಬೆಳೆಸಬೇಕು. ಒಟ್ಟಿನಲ್ಲಿ, ಧರ್ಮ ಜೀವದ ಜೀವಂತಿಕೆಯಾಗಿರಬೇಕು. ಹಾಗಾದರೆ ಅದು ಅನಂತಕಾಲ ಬಾಳುತ್ತದೆ. ಆ ಧರ್ಮದ ಹೆಸರು ಬದಲಾಗಬಹುದೇನೋ? ಗೊತ್ತಿಲ್ಲ. ಉಸಿರು ಮಾತ್ರ ನಿರಂತರವಾಗಿರುತ್ತದೆ..ಧರ್ಮದ ಥೀಮ್ ಅಂತಿದ್ದರೆ ಎಂಜಾಯ್ ಮಾಡುತ್ತೇನೆ.

3 comments:

Anonymous said...

ನಾನೇರಿ, ಭಾರತೀಶ.
ಇದನ್ನು ಬರೆದಿದ್ದು ನಾನೇ ಹೌದಾದರೂ ಸುಮಾರು ಬಾರಿ ಓದಿದ್ಧೇನೆ. ಪ್ರತಿ ಬಾರಿಯೂ ಒಂಥರಾ ರೋಮಾಂಚಕ ವಿಸ್ಮಯ ಆಗುತ್ತಿತ್ತು. ಅವಳನ್ನು, ಆ ಪ್ರಕೃತಿಯನ್ನು ಒಂದಿಷ್ಟು ಅರ್ಥ ಮಾಡಿಕೊಂಡೆ ಎಂದು ಅನ್ನಿಸಿದ್ದಕ್ಕೇ ಇಷ್ಟು ಖುಷಿಯಾಗುತ್ತಿರುವಾಗ, ತನ್ನೊಡಲಲ್ಲಿ ಅದೆಷ್ಟೆಷ್ಟೋ ಗೂಢ-ನಿಗೂಢಗಳನ್ನು ಹುದುಗಿಸಿಕೊಂಡ ಅವಳಿಗೆ ಅದೆಷ್ಟು! ರೋಮಾಂಚನವಾಗಬೇಡ. She can pass her time in more grand way. So, she is very lucky. ನಾವೂ ಅವಳ ಭಾಗವತೋತ್ತಮರಲ್ಲಿ ಒಬ್ಬರು ಎನ್ನುವುದು ಕಂಡರೆ ನಾವೂ ಎಷ್ಟು! ಧನ್ಯರಲ್ಲವೇ. Then, we can also pass the time in a more better way.

Anonymous said...

hello sharmaravare..

you are writing deep feeling articles.. with lots of sentiments.. good to read and become psychological for some time.. I have one suggetion the picture you have put on the blog scares the people during each visit.. I would suggent you change the picture.. and still you can keep the title Eradu taleya haavu naanalla.. nimma thoughts enu idara bagge. keep writing..

Regards
Ravi

ಯಜ್ಞೇಶ್ (yajnesh) said...

ಭಾರತೀಶ್,

ಬರವಣಿಗೆಯ ಶೈಲಿ ತುಂಬಾ ಹಿಡಿಸಿತು. ರಾಘಣ್ಣ ಲೇಖನಕ್ಕೆ ಥ್ಯಾಂಕ್ಸ್