Monday, March 23, 2009

ಒದ್ದೆ ಕಟ್ಟಿಗೆ (ನೀಳ್ಗತೆ)



ಉಬ್ಸಂಡೆಯಿಂದ ಗಾಳಿ ಊದಿ ಊದಿ ಬಸವಿಯ ಕಣ್ಣಿಂದ ಬಳ ಬಳ ನೀರು ಬಂತೇ ವಿನಹ ಅಡಿಗೆ ಒಲೆಯ ಬೆಂಕಿ ಹತ್ತಲಿಲ್ಲ. ಆದ್ರಮಳೆ ಶುರುವಾದಲ್ಲಿಂದ ಇದೇ ರಗಳೆ, ಆ ಮಳೆಯೊ ಒಂದೇ ಸವನೆ ಧೋ ಅಂತ ಸುರಿಯುತ್ತಿತ್ತು.ಕಟ್ಟಿಗೆ ಎಲ್ಲಾ ಒದ್ದೆಯಾಗಿ ಚಸ್ ಪಸ್ ಎಂದು ನೀರು ಉಗಳುತ್ತಾ ಒಲೆಯ ಬುಡವನ್ನೆಲ್ಲಾ ರಾಡಿ ಮಾಡುತ್ತಿತ್ತೇ ಹೊರತು ಅನ್ನದ ಪಾತ್ರೆಯ ಅಂಡೂ ಬಿಸಿಯಾಗುತ್ತಿರಲಿಲ್ಲ.
"ಅಮ್ಮಾ....ಬೇಸಿಗೆಯಲ್ಲಿ ಒಣ ಕಟ್ಟಿಗೆ ಮಾಡಿಟ್ಟುಕೊಂಡಿದ್ದರೆ ಈ ಸಮಸ್ಯೆ ಇತ್ತಾ.. ಈಗ ನೋಡು ಒದ್ದಾಟ" ಎಂದು ಚಾವಡಿಯಿಂದ ಸೀತೆ ಹೇಳಿದ್ದು ಕೇಳಿ ಬಸವಿಗೆ ಕೆಂಡದಷ್ಟು ಕೋಪ ಬಂತು.
"ಉಪದೇಸ ಎಲ್ಲಾರು ಮಾಡ್ತ್ರು, ನಾನೇನ್ ಕಮ್ಮಿ ಅಂತ ನೀನೂ ಹೇಳೂಕೆ ಸುರುಮಾಡಿದ್ಯಲೆ, ನೀನೆ ಒಣ ಕಟ್ಟಿಗೆನಾ ಮಾಡ್ಲಕ್ಕಿತ್ತಲೆ, ಬ್ಯಾಸಿಗೆ ರಜ್ದಾಗೆ ಮನೇಲೆ ಕೂಕಂಡು ಇದ್ಯಲಾ ...ನಂಗೆ ಮೈ ಹುಸಾರು ಇದ್ದೀರೆ ಇಷ್ಟೆಲ್ಲಾ ರಗಳೆ ಇತ್ತಾ...ನಿಂಗೆ ಇನ್ನೂ ಸರಿ ನೆತ್ತಿಗಂಪು ಆರ್‍ಲಿಲ್ಲೆ ನಂಗೆ ಬುದ್ದಿ ಹೇಳೂಕೆ ಹೊಂಟಿದ್ಯಲೆ ನೀನು ಎಲ್ಲಾ ನನ್ನ ಹಣೇಬರಹ, ಬಾವಿಗೆ ಬಿದ್ರೆ ಆಳಿಗೊಂದು ಕಲ್ಲು ಎಲ್ಲಾರು ಹಾಕ್ತ್ರು ಕಾಣ್" ಎನ್ನುತ್ತಾ ಉರಿಯದ ಒದ್ದೆ ಕಟ್ಟಿಗೆಯ ಮೇಲಿನ ಸಿಟ್ಟನ್ನು ಮಗಳಮೇಲೆ ತಿರಿಸಿಕೊಂಡ ಬಸವಿ ಚಿಮಣಿ ಬುಡ್ಡಿಯನ್ನು ಬಗ್ಗಿಸಿ ಸೀಮೆಎಣ್ಣೆಯನ್ನು ಕಟ್ಟಿಗೆಯ ಮೇಲೆ ಸುರಿದಳು. ಕಟ್ಟಿಗೆಯ ಮೇಲೆ ಒಮ್ಮೆಲೆ ಬಿದ್ದ ಸೀಮೆಎಣ್ಣೆಗೆ ಬಗ್ ಎಂದು ಉರಿದ ಬೆಂಕಿ ಒಲೆಯಮೇಲಿದ್ದ ಅನ್ನದ ಪಾತ್ರೆಯನ್ನೂ ಮಿಕ್ಕಿ ಮೇಲಕ್ಕೇರಿತು. ಸೀಮೆ ಎಣ್ಣೆಯ ಶಕ್ತಿ ಬತ್ತಿದೊಡನೆ ಮತ್ತೆ ನಿಧಾನ ಇಳಿದು ಸ್ವಲ್ಪ ಸಮಯದಲ್ಲಿಯೇ ಅನ್ನಕ್ಕಿಟ್ಟ ಎಸರು ಕೊತಕೊತ ಸದ್ದು ಬರತೊಡಗಿತು. ಅರ್ದ ಸಿದ್ದೆ ಅಕ್ಕಿಯನ್ನು ಕುದಿಯುವ ನೀರಿಗೆ ಹಾಕಿ ಒಲೆಯ ಮುಂದೆ ಕುಳಿತ ಬಸವಿಗೆ ಸೀತೆ ಹೇಳಿದ್ದು ನಿಜ ಅಂತ ಅನಿಸಿತು.
ಇಷ್ಟು ವರ್ಷ ಸೌದಿಕಟ್ಟಿಗೆಯ ವಿಷಯದಲ್ಲಿ ಬಸವಿ ತುಂಬಾ ಮುಂಜಾಗರೂಕತೆಯಿಂದ ಇರುತ್ತಿದ್ದಳು, ಚಳಿ ಮುಗಿದು ಬೇಸಿಗೆ ಶುರುವಾಗುತ್ತಿದ್ದಂತೆ ನಿತ್ಯ ಒಡೆಯರ ಮನೆಯಿಂದ ಕೆಲಸ ಮುಗಿಸಿ ವಾಪಾಸು ಬರುವಾಗ ಒಂದು ಹೊರೆ ಕಟ್ಟಿಗೆ ಮನೆಗೆ ತಂದು ಅರ್ದ ನಿತ್ಯದ ಉಪಯೋಗಕ್ಕೆ ಬಳಸಿ ಮಿಕ್ಕರ್ದವನ್ನು ಮಳೆಗಾಲಕ್ಕೆ ಎತ್ತಿಡುತ್ತಿದ್ದಳು. ಪ್ರತಿನಿತ್ಯ ಉಳಿತಾಯದ ಕಟ್ಟಿಗೆ ಇಡೀ ಮಳೆಗಾಲ ಕಳೆಯಲು ಸಾಕಾಗುತ್ತಿತ್ತು. ಅಕಸ್ಮಾತ್ ಕಡಿಮೆಯಾಗಬಹುದೆಂಬ ಗುಮಾನಿಯಿದ್ದ ವರ್ಷಗಳಲ್ಲಿ ಮಳೆಗಾಲ ಹದಿನೈದು ದಿನ ಇದೆ ಅನ್ನುವಾಗ ಒಡೆಯರ ಮನೆಗೆ ಬರುವ ಗಂಡಾಳುಗಳಿಗೆ ಕೆಲ್ಸ ಬಿಟ್ಟ ಮೇಲೆ ಖರ್ಚಿಗೆ ಐದೋ ಹತ್ತೋ ರೂಪಾಯಿ ಕೊಟ್ಟು ಒಂದೆರಡು ಮಾರು ಕಟ್ಟಿಗೆ ಮಾಡಿಸಿಕೊಳ್ಳುತ್ತಿದ್ದುದೂ ಉಂಟು. ಆದರೆ ಈ ವರ್ಷ ಮಾತ್ರ ಹಾಗಾಗಲೆ ಇಲ್ಲ. ಬೇಸಿಗೆ ತುಂಬಾ ವಾರಕ್ಕೆರಡು ದಿನ ಜ್ವರ ಮತ್ತೆ ಮೂರು ದಿನ ಗಿರ, ಹಾಗಾಗಿ ಕಟ್ಟಿಗೆಯನ್ನು ಸುರಿವ ಮಳೆಯ ಮಧ್ಯೆ ಸೊಪ್ಪಿನ ಬೆಟ್ಟದಲ್ಲಿ ಆರಿಸಿಕೊಂಡು ಅಡಿಗೆ ಮಾಡುವುದು ಅನಿವಾರ್ಯವಾಗಿತ್ತು. ಆ ಅನಿವಾರ್ಯತೆ ಕಣ್ಣಿನಿಂದ ನೀರನ್ನು ಉಕ್ಕಿಸುತ್ತಿತ್ತು.
"ಅಮ್ಮಾ ನಂಗೆ ಇವತ್ತಿಂದ ಪರೀಕ್ಷೆ ಸುರು, ಎರಡು ಗಂಟೆಗೆ ಕಾಲೇಜಿಗೆ ಹೊಯ್ಕು ಬೇಗ ಅಡಿಗೆ ಮಾಡು" ಚಾವಡಿಯಿಂದ ಮಗಳ ಅಣತಿಗೆ ಬಸವಿಗೆ ತನ್ನ ಶಾಲೆಯ ದಿನಗಳ ನೆನಪಾಯಿತು. ತಾನೂ ಹೀಗೆ ಅಬ್ಬೆಯನ್ನು ಕಾಡುತ್ತಿದ್ದೆ, ಅಂದಿನ ಅಬ್ಬೆಯ ಕಷ್ಟ ಲೆಕ್ಕಿಸದೆ ಗದರುತ್ತಿದ್ದೆ, ಗಿಜರಾಯುತ್ತಿದ್ದೆ ಆದರೆ ಅವೆಲ್ಲಾ ಕನಸಿನಂತೆ ಕರಗಿ ಹೋದವು, ತಾನು ಎಂಟನೇ ಕ್ಲಾಸಿಗೆ ದೊಡ್ಡವಳಾಗಿರದಿದ್ದರೆ ಪೇಟೆ ಪಟ್ಟಣ ಸೇರಿ ಸುಖವಾಗಿರಬಹುದಿತ್ತು. ಆದರೆ ವಿಧಿ ಯೌವನ ರೂಪದಲ್ಲಿ ಬಂದು ಓದು ಅರ್ದಕ್ಕೆ ನಿಲ್ಲುವಂತಾಯಿತು. ತನ್ನ ಜತೆಯವರಾದ, ತನ್ನಷ್ಟೇ ಓದಿದ ಬ್ರಾಹ್ಮಣ, ಗೌಡರ ಜಾತಿಯ ಶೈಲಜಾ, ಸರೋಜ ಮುಂತಾದ ಹೆಣ್ಣು ಮಕ್ಕಳೆಲ್ಲಾ ಪಟ್ಟಣ ಸೇರಿ ವರ್ಷಕ್ಕೊಮ್ಮೆ ಗಂಡನೊಟ್ಟಿಗೆ ಇಂಜನಿಯರ್, ಡಾಕ್ಟರ್ ಓದುತ್ತಿರುವ ಮಕ್ಕಳನ್ನು ಕೂರಿಸಿಕೊಂಡು ಬಣ್ಣ ಬಣ್ಣದ ಕಾರಿನಲ್ಲಿ ಬಿಡಾರದ ಮುಂದೆ ಹಾದು ಹೋಗುವಾಗ ತನ್ನ ಗತಿ ನೆನಸಿಕೊಂಡು ತಥ್ ಅಂತ ಅನ್ನಿಸುತ್ತಿತ್ತು ಬಸವಿಗೆ. ಓದಿನಲ್ಲಿ ತನಗಿಂತ ಹಿಂದೆಯೇ ಇದ್ದ ಅವರ ಈಗಿನ ನಸೀಬು ಕಂಡು ಮನಸ್ಸು ಕುಬ್ಜವಾಗುತ್ತಿತ್ತು. ಅವರು ಅಕಸ್ಮಾತ್ ಎದುರು ಕಂಡರೆ ಮಾತನಾಡಿಸಬೇಕಾದೀತೆಂದು ಅಡ್ಡ ಮುಖ ಹಾಕಿಕೊಳ್ಳುತ್ತಿದ್ದಳು ಬಸವಿ. ಇದಕ್ಕೆಲ್ಲಾ ತನ್ನ ಹೆತ್ತಬ್ಬೆಯೇ ಕಾರಣ ಅಂತ ಅನ್ನಿಸಿ ಒಮ್ಮೊಮ್ಮೆ ಅವಳ ಮೇಲೆ ರೋಷ ಉಕ್ಕಿ ಅಂತಿಮವಾಗಿ ಮತ್ತದೆ ಅಸಾಹಾಯಕ ಕಣ್ಣೀರಿನ ರೂಪ ತಳೆದು ಹಣೆಬರಹ ದೂಷಿಸುವ ತನಕ ಬಂದು ನಿಲ್ಲುತ್ತಿತ್ತು.ಯಾರೋ ಉಳ್ಳವರನ್ನು ಮದುವೆಯಾಗಿ ತನ್ನನ್ನು ಹಡೆದಿದ್ದರೆ ಪಾಡು ಹೀಗಿರಲಿಲ್ಲ.ಅವೆಲ್ಲಾ ರೆ.... ಪ್ರಪಂಚದ ವಿಷಯವಾಗಿದ್ದರಿಂದ ಕೊರಗಿ ಪ್ರಯೋಜನವಿಲ್ಲವೆಂದೆನಿಸಿ ಸುಮ್ಮನುಳಿಯುವುದನ್ನು ಒತ್ತಾಯಪೂರ್ವಕವಾಗಿ ಅಭ್ಯಾಸ ಮಾಡಿಕೊಂಡಿದ್ದಳು. ಆವಾಗ ಪ್ರಪಂಚ ತಿಳಿಯದ ವಯಸ್ಸು ತನ್ನದು, ತಿಳುವಳಿಕೆಯುಳ್ಳ ಅಬ್ಬೆಯಾಗಿದ್ದರೆ ಹೊಡೆದು ಬಡಿದು ತನ್ನನ್ನು ತಿದ್ದುತ್ತಿದಳು ಆದರೆ ಹಾಗೆ ಮಾಡಲಿಲ್ಲ ಎಂಬುದು ಬಸವಿಗೆ ಹರೆಯ ಮುಗಿದಾಗಲೂ ಅಬ್ಬೆ ಮೇಲಿದ್ದ ರೋಷ. ಆದರೆ ತಾನು ಪಟ್ಟ ಕಷ್ಟ, ಪಾಡು ತನ್ನ ಮಗಳು ಅನುಭವಿಸಬಾರದೆಂಬ ಛಲ ತೊಟ್ಟು ಮಗಳಿಗೆ ತನ್ನತನವನ್ನೆಲ್ಲಾ ಧಾರೆ ಎರೆದು ಓದಿನಲ್ಲಿ ತೊಡಗಿಸಿದ್ದಳು. ಒಮ್ಮೊಮ್ಮೆ ತನ್ನವರೆನ್ನುವವರು ಹತ್ತಿರ ಇದ್ದಿದ್ದರೆ ಪರಿಸ್ಥಿತಿ ಸುಲಭವಾಗಿತ್ತೇನೋ ಅಂತಲೂ ಅನ್ನಿಸುತ್ತಿತ್ತು.ತನ್ನವರೆಂಬ ಬಂಧು ಬಳಗ ಇಲ್ಲದ್ದಕ್ಕೆ ಹಳಿಯುವುದು ಯಾರನ್ನು? ಅಬ್ಬೆಯನ್ನೋ ಅಥವಾ ತಾನು ಕಾಣದ ಅಪ್ಪನನ್ನೋ ಎಂಬ ಪ್ರಶ್ನೆಗೆ ಉತ್ತರ ಕಾಣದೆ ಸುಮ್ಮನುಳಿಯುತ್ತಿದ್ದಳು.
***************
ಬಸವಿ ದೂರದ ಕುಂದಾಪುರದಿಂದ ಘಟ್ಟದ ಮೇಲಿನ ತಟ್ಟಿಕೆರೆ ಎಂಬ ಅಡಿಕೆ ಭಾಗಾಯ್ತುದಾರರ ಊರಿಗೆ ಬಂದು ನೆಲೆ ನಿಲ್ಲುವಾಗ ಆರು ವರ್ಷದ ಕೂಸು. ಸಣ್ಣ ವಯಸ್ಸಿನಲ್ಲೇ ಗಂಡನ ಕಳೆದುಕೊಂಡ ಬಸವಿಯ ಅಬ್ಬೆ ಸೇರುಗಾರರ ತಂಡಕ್ಕೆ ಅಡಿಗೆಗಾಗಿ ಬಂದು ತಟ್ಟಿಕೆರೆ ಊರಿನ ಬುಡದಲ್ಲಿ ಇರುವ ಬಿಡಾರ ಸೇರಿದ್ದಳು. ಬೇಸಿಗೆಯಲ್ಲಿ ಅಡಿಕೆ ತೋಟದ ಕೆಲಸ ಮುಗಿಸಿ ಮಳೆಗಾಲ ಶುರುವಾಯಿತು ಎನ್ನುವಾಗ ದುಡಿದ ದುಡ್ಡಿನೊಂದಿಗೆ ವಾಪಾಸು ಊರಿಗೆ ಹೊರಟ ಸೇರುಗಾರರ ತಂಡದೊಂದಿಗೆ ಬಸವಿ ಮತ್ತವಳ ಅಬ್ಬೆಯೂ ಹೊರಡಬೇಕಾಗಿತ್ತು. ಮೊದಲೆರಡು ವರ್ಷ ಹೀಗೆಯೇ ಸಾಗಿತ್ತು. ಮಳೆಗಾಲ ಘಟ್ಟದ ಕೆಳೆಗೆ, ಚಳಿಗಾಲ ಹಾಗೂ ಬೇಸಿಗೆ ಘಟ್ಟದ ಮೇಲೆ. ಬಸವಿ ಹಾಗೂ ಅವಳ ಅಬ್ಬೆ ಘಟ್ಟದ ಮೇಲೆ ಬರಲು ಶುರುಮಾಡಿದ ಮೂರನೇ ವರ್ಷ ತಟ್ಟಿಕೆರೆ ಊರಿನಲ್ಲಿಯೇ ದೊಡ್ಡ ಅಡಿಕೆ ತೋಟದ ಮಾಲಿಕರಾದ ರಾಮೇಗೌಡ್ರ ಮನೆಗೆ ನಿತ್ಯ ಕೆಲಸಕ್ಕೆ ಹೆಣ್ಣಾಳು ಬೇಕು ಅಂದಿದ್ದರಿಂದ ಹಾಗೂ ಕುಂದಾಪುರದಲ್ಲಿಯೂ ಬಸವಿಯ ಅಬ್ಬೆಗೆ ಹೇಳಿಕೊಳ್ಳಬಹುದಾದ ಯಾರೂ ಇಲ್ಲದ್ದರಿಂದ, ಮತ್ತು ಒಂದು ಕಡೆ ನೆಲೆ ನಿಂತರೆ ಮಗಳ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತದೆಯೆಂದು ಕುಂದಾಪುರದ ದಾರಿ ಮರೆತಳು. ಆಗಲೇ ಶಾಲೆಯಿಲ್ಲದೆ ಎರಡು ವರ್ಷ ಕಳೆದ ಬಸವಿಯನ್ನು ತಟ್ಟಿಕೆರೆ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸಿ ಅವಳನ್ನು ವಿದ್ಯಾವಂತೆ ಯನ್ನಾಗಿ ಮಾಡುವ ಕನಸು ಕಂಡು ಶಾಶ್ವತವಾಗಿ ತಟ್ಟಿಕೆರೆ ಗ್ರಾಮ ವಾಸಿಯಾಗಿದ್ದರು ಬಸವಿ ಮತ್ತು ಅವಳ ಅಬ್ಬೆ.
ಹಗಲು ರಾತ್ರಿ, ಮಳೆಗಾಲ,ಚಳಿಗಾಲ ಬೇಸಿಗೆ, ಅದು ಹೇಗೆ ಕಳೆಯಿತೋ ಬಸವಿಗೆ ತಿಳಿಯದಂತೆ ಏಳನೆ ಇಯತ್ತೆ ತಟ್ಟಿಕೆರೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಯಿತು. ಓದಿನಲ್ಲಿ ಚೂಟಿಯಾಗಿದ್ದ ಬಸವಿ ಊರಿನ ಶ್ರೀಮಂತ ಮಕ್ಕಳಿಗಿಂತ ಒಂದು ಹೆಜ್ಜೆ ಮುಂದು ಹಾಗಾಗಿ ಓದು ನಿಲ್ಲಿಸುವಂತಿಲ್ಲ. ಎಂಟನೆ ಕ್ಲಾಸಿಗೆ ಮೂರು ಕಿಲೋಮೀಟರ್ ದೂರದ ತಾಳಗುಪ್ಪಕ್ಕೆ ಹೋಗಬೇಕು. ಅಬ್ಬೆಗೆ ಬುದ್ದಿವಂತ ಮಗಳ ಬಗ್ಗೆ ಹೆಮ್ಮೆ, ಹಾಗಾಗಿ ತಂಟೆ ತಕರಾರಿಲ್ಲದೆ ದಿನನಿತ್ಯ ಬಸವಿಯ ಹೈಸ್ಕೂಲ್ ಪ್ರಯಾಣ ಆರಂಭವಾಯಿತು.
ಏಳನೇ ಕ್ಲಾಸಿನಲ್ಲಿ ಓದುವಾಗಲೇ ವಯಸ್ಸಿಗಿಂತ ಹೆಚ್ಚು ಬೆಳೆದಿದ್ದ ಬಸವಿ ಹೈಸ್ಕೂಲ್ ಸೇರುತ್ತಿದ್ದಂತೆ ಇನ್ನಷ್ಟು ಆಕರ್ಷಣೆಯಾಗಿ ದೊಡ್ಡವಳಾದಳು. ಅಲ್ಲಿಯವರೆಗೆ ಓದಿನಲ್ಲಿ ಮುಂದಿದ್ದ ಬಸವಿಯ ಗಮನ ಈಗ ತನ್ನದೇ ದೇಹದತ್ತ ಹೊರಳಿದ್ದರಿಂದ ಓದು ಬೇಸರ ತರಿಸತೊಡಗಿತು. ಊರಿನ ಗಂಡುಗಲಿಗಳ ಕಣ್ಣು ಬಸವಿಯನ್ನು ಹರಿದು ತಿನ್ನುವಂತೆ ನೋಡುವಾಗ ಬಸವಿಗೆ ಅದೇನೋ ಹೇಳಲಾಗದ ಹಿತವಾದ ಅನುಭವ. ಅದೆಲ್ಲಿಂದಲೋ ರಾಜಕುಮಾರ ಬಂದು ತನ್ನನ್ನು ಎತ್ತಿ ಕೊಂಡೊಯ್ಯುವ ಕನಸುಗಳು ಬಸವಿಯನ್ನು ನಿತ್ಯ ಕಾಡತೊಡಗಿತು. ಆ ರಾಜಕುಮಾರನ ಮುಖ ಒಮ್ಮೊಮ್ಮೆ ತಟ್ಟಿಕೆರೆ ರಾಮೇಗೌಡ್ರ ಮಗ ವಿಜಯನಂತೆಯೂ ಮತ್ತೊಮ್ಮೆ ಕೃಷ್ಣಹೆಗಡೆಯ ಮಗ ಶ್ಯಾಮನಂತೆಯೂ ಕಾಣಿಸತೊಡಗಿತು. ಓದು ಒಕ್ಕಾಲು ಬುದ್ದಿ ಮುಕ್ಕಾಲು ಆಗಿ ದೇಹದ ಉಬ್ಬುತಗ್ಗುಗಳನ್ನು ಗಮನಿಸುತ್ತಾ ಬಸವಿಯ ಕನ್ನಡಿಯ ಸಖ್ಯ ಜಾಸ್ತಿಯಾಗಿದ್ದನ್ನು ಗಮನಿಸಿದ ಅಬ್ಬೆ ಮಗಳಿಗೆ ಬುದ್ದಿಮಾತು ಹೇಳಿದಳು. ಆದರೆ ಅದನ್ನು ಗಮನಿಸುವ ಹಂತವನ್ನು ಬಸವಿ ಆಗಲೇ ದಾಟಿಬಿಟ್ಟಿದ್ದಳು.
ಅಬ್ಬೆ ಕೆಲಸಕ್ಕಾಗಿ ರಾಮೇ ಗೌಡ್ರ ಮನೆಗೆ ಹೊರಡುತ್ತಿದ್ದಂತೆ ಬಸವಿ ಶಾಲೆಯ ನೆಪದಲ್ಲಿ ಮನೆಯಿಂದ ಹೊರಡುತ್ತಿದ್ದಳು. ಆದರೆ ಮಧ್ಯೆ ದಾರಿ ಶಾಲೆಯ ತಪ್ಪಲು ಪ್ರಾರಂಭವಾಯಿತು. ಅದೇನೂ ಒಮ್ಮಿಂದೊಮ್ಮೆಲೆ ಶುರುವಾಗಲಿಲ್ಲ. ಶಾಲೆಗೆ ರಜ ಇದ್ದ ಒಂದು ದಿನ ಅಬ್ಬೆಯೊಟ್ಟಿಗೆ ರಾಮೇಗೌಡ್ರ ಮನೆಗೆ ಹೋದಾಗ ಕಡುಕಪ್ಪು ಕತ್ತಲಿನ ಪಣತದ ಮನೆಯಲ್ಲಿ ಗೌಡರ ಹಿರೇಮಗ ವಿಜಯ ಬಸವಿಯ ಕೈ ಹಿಡಿದು ಬರಸೆಳೆದ. ಬಸವಿಗಿಂತ ನಾಲ್ಕೈದು ವರ್ಷ ದೊಡ್ದವನಾದ ವಿಜಯನ ಬಿಸಿಯುಸಿರು ಬಸವಿಗೆ ಹಿತವಾದ ಅನುಭವ ನೀಡಿತು. ಯಾರಾದರೂ ನೋಡಿಯಾರೆಂಬ ಭಯದಿಂದ ಕೊಸರಾಡಿ ತಪ್ಪಿಸಿಕೊಂಡು ಓಡುವ ಯತ್ನ ಮಾಡಬೇಕೆಂದೆನಿಸಿದರೂ ಬುದ್ದಿ ಮಾನ್ಯಮಾಡಲಿಲ್ಲ. ವಿಜಯನ ಬಿಸಿಯಪ್ಪುಗೆಯಿಂದ ಮುಂದಿನ ಹೆಜ್ಜೆಗೆ ಅಡಿಯೇರಲು ಹೆಚ್ಚಿನ ದಿನ ಹಿಡಿಯಲಿಲ್ಲ, ಶಾಲೆಗೆ ಹೋಗುವ ದಾರಿಯಲ್ಲಿ ಸಿಗುವ ಹೊಳಿಗೆರೆ ತಿರುವಿನ ಮೇಲ್ಬಾಗದ ನಿರ್ಜನ ಜಾಗ ವಿಜಯ ಮತ್ತು ಬಸವಿಯ ನೆಚ್ಚಿನ ತಾಣವಾಯಿತು. ದುಡ್ಡಿನ ಜನರ ಸಹವಾಸವಾದ್ದರಿಂದ ಬಸವಿಯ ದೇಹ ಬಣ್ಣ ಬಣ್ಣದ ಬಟ್ಟೆಗಳಿಂದ ಹಾಗೂ ಕಾಗೆಬಂಗಾರದ ಆಭರಣಗಳಿಂದ ತುಂಬಿ ತುಳುಕಾಡತೊಡಗಿತು.ಏರು ಯೌವ್ವನ, ಖರ್ಚಿಗೆ ಕಾಸು, ಯಾರಿಗೆ ಬೇಕು ಪುಸ್ತಕ ಪಾಠ ಎನ್ನುವಂತಾಯಿತು ಬಸವಿಯ ಸ್ಥಿತಿ. ಬಸವಿಯ ಪ್ರೇಮ ಸಲ್ಲಾಪದ ಕಥೆಯನ್ನು ವಿಜಯ ತನ್ನ ಸ್ನೇಹಿತ ಶ್ಯಾಮನಿಗೆ ಹೇಳಿದ, ದಿನ ಕಳೆದಂತೆ ಶ್ಯಾಮನೂ ಬಸವಿಗೆ ಜತೆಯಾದ. ಶ್ಯಾಮ ನ ಜೇಬಿನಲ್ಲಿ ಕಾಸಿನ ಕೊರತೆಯಿದ್ದುದರಿಂದ ಪ್ರೀತಿ ಪ್ರೇಮದ ಮಾತುಗಳ ಕನಸು ಬಸವಿಯನ್ನು ಆಕಾಶಕ್ಕೆ ಒಯ್ದಿತು. ಹೀಗೆ ಕುತೂಹಲಕ್ಕೆ ಶುರುವಾದದ್ದು ಶಾಲೆಯನ್ನು ತೊರೆಯುವಂತೆ ಮಾಡಿತು. ಬಸವಿ ಒಂದು ದಿನ ಶ್ಯಾಮನೊಟ್ಟಿಗೆ ಮಗದೊಂದು ದಿನ ವಿಜಯನೊಟ್ಟಿಗೆ ಸಮಯ ಕಳೆದು ಶಾಲೆ ಮುಗಿಯುವ ಸಮಯಕ್ಕೆ ಮನೆ ಸೇರುತ್ತಿದ್ದಳು. ಸುದ್ದಿ ಊರಿನವರಿಗೆ ತಲುಪಿ ಎಲ್ಲಾರ ಬಾಯಲ್ಲಿ ಹೊರಳಿ, ಹೊಳ್ಯಾಡಿ ಅಬ್ಬೆಯ ಕಿವಿ ತಲುಪಿದಾಗ ತಿಂಗಳುಗಳು ಉರುಳಿದ್ದವು. ಬಸವಿಯ ಬಗ್ಗೆ ನೂರಾರು ಕನಸುಕಂಡಿದ್ದ ಅಬ್ಬೆ ,
"ಹೆಣ್ಣೆ.. ಪರಪಂಚ ಅಂದ್ರೆ ಎಂತು ಅಂತ ತಿಳ್ಕಂಡಿದೆ, ಹಿಂಗೆಲ್ಲಾ ಮಾಡುಕಾಗ, ಆ ದ್ಯಾವ್ರು ನಿಂಗೂ ಸುಖದ ಕಾಲ ಕೊಡ್ತಾ,ಆವಾಗ ಮೊಗೆ ಮೊಗೆದು ಅನುಬವಿಸು...... ಈಗ ಓದು ಮಗಳೆ, ನನ್ನ ಬಾಳಂತೂ ಇದ್ಯೆ ಇಲ್ದೇನೆ ಕೂಲಿನಾಲಿ ಮಾಡುವಂಗಾಯ್ತು, ನೀನಾರು ಓದಿ ದುಡೂಕೆ ಸುರುಮಾಡಿರೆ ಅದ್ನ ಕಂಡ್ಕಂಡು ಕಣ್ಮುಚ್ತೆ" ಎಂದು ಬುದ್ದಿವಾದ ಹೇಳಿದಳು, ಬಸವಿಗೆ ಒಮ್ಮೊಮ್ಮೆ ಅಬ್ಬೆ ಹೇಳಿದ್ದು ಸರಿ ಅನ್ನಿಸಿ ಮನಸ್ಸು ಗಟ್ಟಿ ಮಾಡಿಕೊಂಡು ಶಪಥ ಮಾಡಿಕೊಳ್ಳುತ್ತಿದ್ದಳು. ಆದರೆ ತಿಂಗಳಿನ ನಡು ದಿನಗಳಲ್ಲಿ ಹರೆಯದ ದೇಹದ ಬಯಕೆಗಳು ವಿಜಯ, ಶ್ಯಾಮರ ಬಿಗಿಯಾದ ಅಪ್ಪುಗೆಯನ್ನು ಬೇಡತೊಡಗುತ್ತಿತ್ತು. ನನಸಿನಲ್ಲಿ ತಡೆಹಿಡಿದದ್ದು ಕನಸಿನಲ್ಲಿಯೂ ಕಾಡಿ ಅಲ್ಲಿ ಕಂಡಿದ್ದು ನನಸು ಮಾಡುವುದು ಅನಿವಾರ್ಯವಾಗತೊಡಗಿತು. ಅದೇನೋ ಅಷ್ಟಕ್ಕಾದರೂ ನಿಲ್ಲುತ್ತಿತ್ತೇನೋ ಅಷ್ಟರಲ್ಲಿ ಶ್ರೀಮಂತರ ಮನೆ ಹುಡುಗಿಯರಾದ ಶೈಲಜ, ಸರೋಜ ಮುಂತಾದವರೆಲ್ಲಾ ಬಸವಿಗೆ ಜತೆಯಾದರು. ಅವರಿಗೆ ಓದು ಅನವಶ್ಯಕವಾಗಿ, ಪ್ರಕೃತಿ ಸಹಜ ಕುತೂಹಲ ಕಾಡುತ್ತಿತ್ತು. ಓದು ಬೇಡದ ಜತೆಗಾರರ ಸಂಖ್ಯೆ ದಿನದಿಂದ ದಿನಕ್ಕೆ ಏರಿತು. ಅಬ್ಬೆ ಪದೆ ಪದೆ " "ಮಗಾ ಬಡವರು ಮಾಡಿದ್ರೆ ತಪ್ಪು ಉಳ್ಳೋರು ಮಾಡಿದ್ರೆ ನ್ಯಾಯ. ಪರಪಂಚದ ನಿಯಮ ಅದನ್ನೆಲ್ಲಾ ಬದ್ಲು ಮಾಡೂಕೆ ಯಾರಿಂದ್ಲೂ ಆತಿಲ್ಲೆ, ನವಿಲು ಕುಣಿಯುತ್ ಅಂತ ಕೆಂಬೂತ ಕುಣಿದ ಕಥೆಯಾಗುತ್ ಬೇಡ ಕೆಟ್ಟ ಸಹವಾಸ ಬಿಡು" ಎಂದು ಎಷ್ಟು ಹೇಳಿದರೂ ಬಸವಿ ಬಗ್ಗದಿದ್ದಾಗ ಅಬ್ಬೆ ಸುಮ್ಮನುಳಿದಿದ್ದಳು.
ದಿನಕಳೆಯುತ್ತಿದ್ದಂತೆ ಬಸವಿಯ ದೇಹದಲ್ಲಾದ ವ್ಯತ್ಯಯ ಬೆಳಗಿನ ವಾಂತಿಯಾಗಿ ಕಾಡತೊಡಗಿದ್ದನ್ನು ಗಮನಿಸಿದ ಅಬ್ಬೆ ಕೆಂಡಾಮಂಡಲವಾದಳು. "ಬೋಸುಡಿ, ನಿನ್ನ ಈ ಅವಸ್ಥೆಗೆ ಅದ್ಯಾವ ಮಿಂಡ ಕಾರಣ ಅಂತ ಹೇಳು,ಅವನ ರುಂಡ ಚೆಲ್ಲಾಡ್ತೆ, ನನ್ನ ಜೀವ ಕಷ್ಟದಲ್ಲೇ ಕಳೀತು, ನೀನಾರು ಸುಖ ಕಾಣ್ಲಿ ಅಂದ್ರೆ ಅಡ್ಡ ದಾರಿ ಹಿಡ್ದ್ಯಲೆ ಹಡ್ಬೆ ರಂಡೆ, ಅವನ ಪಿಂಡ ಅವನ ಮನೆಯಲ್ಲಿ ಇಳ್ಸುವ " ಎಂದು ಕೋಲು ಪುಡಿಗಟ್ಟಿದಳು. ಅಬ್ಬೆಗೆ ಕೈಸೋತಿತೇ ವಿನಹ ಬಸವಿ ಬಾಯ್ಬಿಡಲಿಲ್ಲ. ಬಸವಿ ಅಂದುಸಂಜೆ ಹೊಳಿಗೆರೆ ತಿರುವಿನ ಸೊಪ್ಪಿನ ಬೆಟ್ಟದಲ್ಲಿ ವಾಂತಿಯ ವಿಷಯವನ್ನು ಶ್ಯಾಮನಿಗೆ ಹೇಳಿದರೆ ಅವನು ವಿಜಯನತ್ತಲೂ, ವಿಜಯನಿಗೆ ಹೇಳಿದರೆ ಅವನು ಶ್ಯಾಮನತ್ತಲೂ ಕೈತೋರಿಸಿ ಮಾಯವಾದರು. ಬಸವಿಗೆ ಜಾತಿ ಜನಿವಾರಗಳು,ಶ್ರೀಮಂತಿಕೆ ,ಬಡತನಗಳೆಲ್ಲಾ ಜೀವನಕ್ಕೆ ಅಡ್ಡಿಬರುತ್ತದೆಯೆಂಬ ನಿಜ ಪ್ರಪಂಚದ ಅರಿವಾಗಿದ್ದು ಆವಾಗಲೇ. ಆದರೆ ಕಾಲ ಮಿಂಚಿತ್ತು. ಇದಕ್ಕೆ ಬಸವಿ ತನ್ನ ಬುದ್ಧಿ ಮಟ್ಟದಲ್ಲಿ ತನ್ನದೇ ಒಂದು ಪರಿಹಾರ ಮಾರ್ಗವನ್ನು ಯೋಚಿಸಿ ಮಾರನೇ ದಿನ ಬೆಳಗಿನ ಜಾವ ನೀರು ಕಡಿಮೆ ಇರುವ ತಟ್ಟಿಕೆರೆ ದೇವಸ್ಥಾನದ ಬಾವಿಗೆ ಹಾರಿ,ಕೆಳಗಿನಿಂದ "ನನ್ನ ಮ್ಯಾಲೆ ಎತ್ತುಕೆ ಶ್ಯಾಮ ಬರ್ಕು....ವಿಜಯ ಬರ್ಕು...ನಂಗೆ ಜೀವನ ಕೊಡ್ಕು ಇಲ್ದಿದ್ರೆ ನಾನಿಲ್ಲೆ ಸಾಯ್ತೆ", ಎಂದು ಕೂಗತೊಡಗಿದಳು. ಊರಿಗೆ ಊರೇ ಬಾವಿಯ ಸುತ್ತ ಸೇರಿತು. ಬಸವಿ ಯಾರದ್ದೇ ಒಬ್ಬರ ಹೆಸರು ಹೇಳಿ ಕೂಗಿದ್ದರೆ ಪರಿಹಾರ ಸುಲಭವಾಗುತ್ತಿತ್ತೇನೋ. ಆದರೆ ಇಬ್ಬರ ಹೆಸರನ್ನು ಕೂಗಿದ್ದರಿಂದ ನ್ಯಾಯ ಪಂಚಾಯ್ತಿ ನಡೆದು ಹುಡುಗರಿಬ್ಬರೂ ಸಾಚಾ, ಬಸವಿಯೇ ಹಾದರಗಿತ್ತಿ ಎಂಬ ಹಣೆಪಟ್ಟಿ ಹಚ್ಚಿ ಕೈತೊಳೆದುಕೊಂಡಿತು. ಬಸವಿ ಇವೆಲ್ಲಾ ಸತ್ಯ ಅಂತ ಹೇಳಲು ಶೈಲಜಾ, ಸರೋಜ,ಅವರನ್ನೆಲ್ಲಾ ಕರೆದಳು. ಅವರಾದರೂ ಬರುತ್ತಿದ್ದರೇನೋ ಆದರೆ ಅವರ ಮನೆಯವರು ತಮ್ಮ ಮಕ್ಕಳ ಬಾಯಿಂದ ಇವೆಲ್ಲಾ ತಮಗೆ ಗೊತ್ತಿಲ್ಲ ಎಂದು ಆಣೆ ಪ್ರಮಾಣಗಳ ಸಹಿತ ಹೇಳಿಸಿ ಮಕ್ಕಳನ್ನು ಮನೆ ಸೇರಿಸಿ ಅಗಳಿ ಹಾಕಿಟ್ಟುಕೊಂಡರು.
ಬಸವಿಗೆ ಉಳಿದದ್ದು ಆಗ ಅಬ್ಬೆ ಮಾತ್ರ. ಅಬ್ಬೆಯ ಮುಂದೆ ಅತ್ತೂ ಕರೆದು ಸೋತು ಸುಣ್ಣವಾದಳು. ಹೆತ್ತ ಹೃದಯ ಕರಗಿ ನೀರಾಯಿತು. "ಮಗಳೆ ಪರಪಂಚ ಎಂದ್ರೆ ಹಂಗೆ,ನಮ್ಮ ಹುಸಾರು ನಮ್ಗೆ ಇಲ್ದೀರೆ ಹಿಂಗೆ ಆಗತ್ತ್, ಆ ದ್ಯಾವ್ರಿಗೂ ಕಣ್ಣಿಲ್ಲೆ, ಬಡತನಕ್ಕೆ ಕಷ್ಟ, ಅದೂ ರೂಪ ಇದ್ರಂತೂ ಇನ್ನೂ ಕಷ್ಟ ಬಡವರು ಅಂದ್ರೆ ಒದ್ದೆ ಕಟ್ಟಿಗೆ ಹಂಗೆ ಇರ್ಕು, ಆವಾಗ ಯಾರೂ ಹತ್ರ ಬರೂದಿಲ್ಲೆ, ಹತ್ರ ಬಂದೋರು ಒಣಗಿಸಿ ಉರಿಸ್ತ್ರು,ಆವಾಗ ಎಂತೂ ಆತಿಲ್ಲೆ, ಎಂತಾರು ಆಗ್ಲಿ ಆಗಿದ್ದು ಆಗಿ ಹೋಯ್ತಲ... ಒಂದ್ಸಾರಿ ಗೌಡ್ರ ಕೈ ಕಾಲು ಹಿಡಿತೇ" ಎಂದು ಗೌಡ್ರ ಮನೆಗೆ ಹೋದಾಗ ಅಬ್ಬೆ ವಾಪಾಸು ಬರುವವರೆಗೂ ತನಗೆ ವಿಜಯ ಗಂಡನಾಗುತ್ತಾನೆ ಎಂದು ಸಣ್ಣ ಆಸೆ ಬಸವಿಗೆ ಚಿಗುರಿತ್ತು. ಅಬ್ಬೆ ಗೌಡ್ರ ಮನೆಯಿಂದ ವಾಪಾಸು ಬಂದಾಗ ಬಸವಿಯ ಮದುವೆ ಸುದ್ದಿಯನ್ನು ಹೊತ್ತು ತಂದಿದ್ದಳು ಆದರೆ ವರ ಮಾತ್ರ ಗೌಡ್ರ ಮನೆಯಲ್ಲಿ ಲಾಗಾಯ್ತಿನಿಂದ ಕೆಲಸಕ್ಕಿದ್ದ ಒಂಟಿ ಜೀವಿ ಅರವತ್ತರ ಹರೆಯದ ಗೂರುಕೆಮ್ಮಿನ ಕೊಗ್ಗ. ಬಸವಿ ಗೋಳಾಡಿದಳು, ಅತ್ತು ರಂಪ ಮಾಡಿದಳು. ಆದರೆ ಕೇಳುವವರು ಅಲ್ಲಿ ಯಾರೂ ಇರಲಿಲ್ಲ.ಬಸವಿಯ ಹೊರತಾದ ಪ್ರಪಂಚ ಕಿವುಡಾಗಿತ್ತು.ಈಗಾಗಲೇ ಬಸವಿಯ ಹೊಟ್ಟೆಯಲ್ಲಿದ್ದ ಜೀವಕ್ಕೆ ಅಪ್ಪನೊಬ್ಬ ಬೇಕಾಗಿತ್ತಾದ್ದರಿಂದ ಅವಳೂ ಅನಿವಾರ್ಯವಾಗಿ ಸುಮ್ಮನುಳಿದಳು. ಬಸವಿಯ ಮದುವೆಯಾಗಿ ಏಳೂವರೆ ತಿಂಗಳಿಗೆ ಸೀತೆಯನ್ನು ಹೆತ್ತಳು. ಆದೇನೋ ಉಳ್ಳವರ ಅದೃಷ್ಟಕ್ಕೆ ಕೂಸು ಬಸವಿಯನ್ನು ಹೋಲುತ್ತಿತ್ತು. ಬಸವಿ ಹೆತ್ತ ಕೂಸನ್ನು ನೋಡಿ ತನ್ನದೇ ಕೂಸು ದಿನತುಂಬುವ ಮೊದಲೇ ಹುಟ್ಟಿದೆ ಎಂದು ತಿಳಿದುಕೊಂಡು ಕೊಗ್ಗ ಕಣ್ಮುಚ್ಚಿದ. ಕೂಸು ಬಸವಿಯನ್ನೇ ಹೋಲುತ್ತಿದ್ದುರಿಂದ ಅಬ್ಬೆಯೂ ಅನುಮಾನ ಪಡದೆ ಮಗಳು ಇಷ್ಟಾದರೂ ನಿಯತ್ತಿನಿಂದ ಇದ್ದಾಳಲ್ಲ ಎಂದು ತಿಳಿದುಕೊಂಡು ಸ್ವಲ್ಪ ವರ್ಷಗಳಲ್ಲಿ ಕಣ್ಮುಚ್ಚಿದಳು. ನಂತರದ ದಿನಗಳಲ್ಲಿ ಊರಿನ ಉಳ್ಳ ಕಚ್ಚೆಹರುಕ ಗಂಡಸರು ತಮ್ಮ ಮನೆಯಲ್ಲಿ ಕಳೆಯದಿರುವ ಜಾನುವಾರು ಹುಡುಕುವ ನೆಪದಲ್ಲಿ ಬಿಡಾರದ ಬಳಿ ಅಡ್ಡಾಡುವುದು ಸಹಜವಾಯಿತು. ಗಂಡನೂ ಬದುಕಿಲ್ಲದ್ದರಿಂದ ಬಸವಿ ಎಲ್ಲಾ ಮುನ್ನೆಚ್ಚರಿಕೆಯನ್ನೂ ಪಾಲಿಸುತ್ತಿದ್ದಳು, ಮಗಳ ಭವಿಷ್ಯ ಚೆನ್ನಾಗಿರಬೇಕು ಎಂದಾದರೆ ಅವಳನ್ನು ಓದಿಸಬೇಕು, ಓದಿಸಲು ಹಣ ಬೇಕು, ಹಣ ಬೇಕು ಎಂದಾದರೆ ಹಾಗೆಲ್ಲಾ ಮಾಡುವುದು ಬಸವಿಗೆ ಅನಿವಾರ್ಯವಾಗಿತ್ತು. ಅಬ್ಬೆಯಿಂದ ಬಳುವಳಿಯಾಗಿ ಬಂದ ಗೌಡರ ಮನೆ ಕೆಲಸದ ಜತೆ ಇದೊಂದು ಹೆಚ್ಚಿನ ಕೆಲಸ ಬಸವಿಯದಾಯಿತು.
******************
"ಅಮ್ಮಾ ಊಟಕ್ಕೆ ಬರುದಾ... ಓದೂ ಕಾಲು ಗಂಟೆ ಆಯ್ತು ನಂಗೆ ಬಸ್ಸು ತಪ್ಪಿಹೋರೆ ಕಷ್ಟ,ಇವತ್ತಿಂದ ಒಂದುವಾರ ನಂಗೆ ಪರೀಕ್ಷೆ ಇತ್ತು,ಇಲ್ಲಿ ಇದ್ರೆ ನಂಗೆ ಓದೂಕೆ ಆತಿಲ್ಲೆ ಹಂಗಾಗಿ ಒಂದುವಾರ ನಾನು ಮನೆಗೆ ಬರೂದಿಲ್ಲೆ, ಫ್ರೆಂಡ್ಸ್ ಮನೆಯಲ್ಲೇ ಉಳ್ಕತ್ತೆ, ವಾರಕ್ಕೆ ಬೇಕಾಪು ಬಟ್ಟೆನೂ ತಕಂಡು ಹೋತೆ" ಎನ್ನುತ್ತಾ ಒಳಗೆ ಬಂದ ಸೀತೆಗೆ
"ಆಯ್ತು ಮಗಾ ನಿಂಗೆ ಓದೂಕೆ ಎಲ್ಲಿ ಆರಾಮೋ ಅಲ್ಲಿಯೇ ಇರು, ಒಟ್ನಲ್ಲಿ ನೀ ಓದಿ ಒಂದು ನೌಕರಿ ಅಂತ ಹಿಡದ್ರೆ ಆವತ್ತೆ ನಾನು ಕಣ್ಮುಚ್ತೆ" ಎನ್ನುತ್ತಾ ಬಟ್ಟಲು ಹಾಕಿ ಅನ್ನ ಸಾರು ಬಡಿಸಿದಳು. ತಲೆ ಬಗ್ಗಿಸಿ ಊಟ ಮಾಡುತ್ತಿದ್ದ ಮಗಳನ್ನು ಕಂಡ ಬಸವಿಗೆ ಹೆಮ್ಮೆ ಅನ್ನಿಸಿತು. ತಾನು ಮಾಡಿದ ತಪ್ಪು ತನ್ನ ಜೀವನಕ್ಕೆ ಅಂತ್ಯವಾಗಬೇಕು ಎಂದು ಮಗಳ ಬಳಿ ತನ್ನದೇ ಕಥೆಯನ್ನು ಹೇಳಿ ಶ್ರೀಮಂತರ ಬಲೆಗೆ ಬೀಳದಂತೆ ಬೆಳಸಿದ್ದು ಸಾರ್ಥಕವಾಯಿತು. ತನ್ನ ಬಾಳಂತೂ ಅನಿವಾರ್ಯವಾಗಿ ಶ್ರೀಮಂತರ ದಬ್ಬಾಳಿಕೆಗೆ, ಅಟ್ಟಹಾಸಕ್ಕೆ ಈಡಾಯಿತು, ಅದರಲ್ಲಿ ತನ್ನ ಪಾಲು ಎಷ್ಟಿತ್ತು ಎನ್ನುವುದು ಗೊತ್ತಾಗದ ಕಾಲ, ಆದರೆ ಅವುಗಳನ್ನು ಪ್ರಶ್ನಿಸುವ ಮನಸ್ಥಿತಿಗೆ ಮಗಳು ಮಾನಸಿಕವಾಗಿ ಏರಿದ್ದು ಬಾಳು ಹಸನಾಗಲು ಸಾಕು ಎಂಬ ತೀರ್ಮಾನಕ್ಕೆ ಬಸವಿ ಬಂದಿದ್ದಳು. ಈಗಿನ ಕಾಲದ ಮಕ್ಕಳ ತಿಳುವಳಿಕೆಯೇ ಬೇರೆ. ಇವತ್ತಿನ ಕಾಲದಲ್ಲಿಯೂ ಕಾಟ ಕೊಡುವ ಗಂಡುಗಳು ಇದ್ದರೂ ಸೀತೆಯಂತಹವರನ್ನು ಯಾರೂ ಏನೂ ಮಾಡಲಾಗದು. ಒಂಬತ್ತನೆ ಕ್ಲಾಸಿಗೆ ಹೋಗುತ್ತಿದ್ದಾಗಲೇ ಸೀತೆ ಯಾರೋ ಹುಡುಗರು ರಾಕೆಟ್ ಬಿಟ್ಟರೆಂದು ಚಪ್ಪಲಿ ತೋರಿಸಿ ಮನೆಗೆ ಬಂದಿದ್ದಳು. ಈಗ ಕಾಲೇಜಿನಲ್ಲಿ ಹತ್ತಾರು ಹುಡುಗರೊಡನೆ ವಿಧ್ಯಾರ್ಥಿ ಸಂಘಕ್ಕೆ ಓಡಾಡಿ ತನ್ನಂತೆ ಶೋಷಿತರ ಹಿತ ಕಾಯುವ ನಾಯಕಿಯಾಗಿ ಬೆಳೆದು ನಿಂತಿದ್ದಳು. ನಿತ್ಯ ಕಾಲೇಜಿನಲ್ಲಿ ದುಡ್ಡಿನ ಸೊಕ್ಕಿನಿಂದ ಮೆರೆಯುವ ಹುಡುಗರಿಗೆ ಚಳ್ಳೆ ಹಣ್ಣು ತಿನ್ನಿಸಿದ ಕಥೆಯನ್ನೆಲ್ಲಾ ಬಸವಿಗೆ ಬಂದು ಹೇಳುತ್ತಿದ್ದಳು. ಇನ್ನೊಂದೆರಡು ವರ್ಷ ಹೀಗೆ ಓದಿದದರೆ ನಂತರ ಮಗಳು ಸಾವಿರಗಟ್ಟಲೆ ದುಡಿದು ಮನೆಗೆ ತರುತ್ತಾಳೆ ಅಲ್ಲಿಗೆ ತನ್ನ ಗೋಳಿನ ಗೋಳಿನ ಜೀವನಕ್ಕೂ ಮುಕ್ತಿ. ತನ್ನ ವ್ಯಕ್ತಿತ್ವಕ್ಕೊಂದು ಗೌರವವೂ ಬರುತ್ತದೆ. ಇಂದು ಮಗಳು ಹೇಳುವ ಕಾಲೇಜಿನ ಸಾಹಸದ ಕಥೆ, ತನ್ನ ಕಾಲದಲ್ಲಿ ತಾನೂ ಅಬ್ಬೆಗೆ ಹೀಗೆಲ್ಲಾ ಹೇಳುವಂತಿದ್ದರೆ, ಅಥವಾ ತನ್ನಂತೆ ಅಬ್ಬೆ ಮಗಳನ್ನು ವಿಚಾರಿಸಿಕೊಂಡಿದ್ದರೆ ತನ್ನ ಬಾಳೂ ಹಸನಾಗುತ್ತಿತ್ತೇನೋ ಎಂದೆನಿಸಿತು ಬಸವಿಗೆ.
ಸೀತೆ ಕಾಲೇಜಿಗೆ ಹೊರಟನಂತರ ಬಸವಿ ಊಟ ಮಾಡಿ ಪಾತ್ರೆ ತೊಳೆದಿಟ್ಟು, ಉಳಿದ ಒದ್ದೆ ಕಟ್ಟಿಗೆಯನ್ನು ಬೆಚ್ಚಗಿದ್ದ ಒಲೆಯ ಬಳಿ ಆರಲು ಇಟ್ಟು ರಾಮೇಗೌಡ್ರ ಮನೆಗೆ ಹೋದಳು. ಗೌಡ್ರ ಮನೆ ಮೆಟ್ಟಿಲು ಹತ್ತುತ್ತಿದ್ದಂತೆ ಜಗುಲಿಯಿಂದ ಗೌಡತಿ " ಬಸವಿ ನಿನ್ನ ಮಗಳ ಫೋಟೋ ಪೇಪರ್ರಲ್ಲಿ ಬಂದಿದೆಯಲ್ಲೇ, ಶೋಷಿತರ ವಿದ್ಯಾರ್ಥಿ ಸಂಘದಲ್ಲಿ ನಕ್ಸಲರ ಪರವಾಗಿ ಅವಳು ಕೆಲಸ ಮಾಡ್ತಾ ಇದಾಳಂತೆ, ಅದಕ್ಕೆ ಪೋಲೀಸರು ಹೆಸರು ಹಾಕಿದಾರೆ" ಎಂದು ಹೇಳಿದಳು.
ಮೊದಲ ಸುದ್ದಿಯಿಂದ ಹರ್ಷಿತಳಾದ ಬಸವಿಗೆ ಕೊನೆಯಲ್ಲಿನ ಪೋಲೀಸ್ ಶಬ್ಧ ಕಿವಿಗೆ ಬಿದ್ದಾಕ್ಷಣ ಎದೆ ಒಡೆದ ಅನುಭವ ಆಯಿತು.
"ಎಂತ ಅಮ್ಮ ಸರಿ ಹೇಳಿನಿ" ಎಂದು ಗಾಬರಿಯಿಂದ ಕೆಳಿದಳು ಬಸವಿ.
ಅದ್ಯಂತದೊ ನಕ್ಸಲ್ ಪಟ್ಟಿಯಂತಪಾ ನಂಗೆ ಸರಿ ಗೊತ್ತಿಲ್ಲ ಇವ್ರನ್ನ ಕೇಳು ಎನ್ನುತ್ತಾ ಗೌಡ್ತಿ ಒಳ ಸೇರಿದಳು.
ಮಗಳು ಏನೋ ಯಡವಟ್ಟು ಮಾಡಿಕೊಂಡಿದ್ದಾಳೆಂದು ಬಸವಿಗೆ ಅನಿಸಿ , ಅವಳನ್ನು ಕೇಳಲು ಬಸ್ ಸ್ಟ್ಯಾಂಡಿನತ್ತ ಒಟಕಿತ್ತಳು. ಆದರೆ ಅಷ್ಟರಲ್ಲಿ ಬಸ್ಸು ಹೊರಟು ಹೋಗಿತ್ತು. ಡವಗುಟ್ಟುವ ಎದೆಬಡಿತ ನಿಯಂತ್ರಿಸಲಾಗದೆ ಮನೆಗೆ ಬಂದು ಚಾವಡಿಯ ಮಂಚದ ಮೇಲೆ ಕುಸಿದುಕುಳಿತಳು.
" ಅಮ್ಮಾ ನಾನು ಶ್ರೀಮಂತರ ಸೊಕ್ಕಿಗೆ ಬಂದೂಕಿನಿಂದ ಉತ್ತರ ಕೊಡಲು ನನ್ನ ಒಡನಾಡಿ ಕಾಮ್ರೆಡ್ ಶಿವುವಿನೊಡನೆ ಹೋಗುತ್ತಿದ್ದೇನೆ" ಎಂಬ ಒಂದೇ ವಾಕ್ಯ ಬರೆದ ಹಾಳೆ ಚಾವಡಿಯ ಮಂಚದ ಮೇಲಿಂದ ಬಸವಿಯನ್ನು ನೋಡಿ ಅಣಕಿಸಿತು.
."ಅಯ್ಯೋ ಮಗಳೆ ...... ಶ್ರೀಮಂತರನ್ನೆದುರಿಸಲು ಶ್ರೀಮಂತಳಾಗು ಎಂದರೆ ಮತ್ತೆ ಬಡವಿಯಾದೆಯಲ್ಲೇ..ಬಾಣಲೆಯಿಂದ ಬೆಂಕಿಗೆ ಬಿದ್ದೆಯಲ್ಲೇ.... " ಎನ್ನುತ್ತಾ ಗೋಳಾಡಿದಳು. ಆದರೆ ಬಸವಿಯ ಗೋಳಾಟಕ್ಕೆ ಸಮಾಧಾನ ಹೇಳಲು ಅಲ್ಲಿ ಯಾರೂ ಇರಲಿಲ್ಲ. ಒಮ್ಮೆ ಬಸವಿಗೆ ಇಡೀ ಪ್ರಪಂಚವೇ ತನ್ನನ್ನು ನೋಡಿ ನಕ್ಕಂತಾಯಿತು. ಉರಿವ ಹೊಟ್ಟೆಯ ತಣಿಸಲೆಂದು ನೀರು ಕುಡಿಯಲು ಅಡಿಗೆ ಮನೆಗೆ ಬಂದಳು. ಅಲ್ಲಿ ಒಲೆಯ ಬಳಿ ರಾತ್ರಿ ಅಡಿಗೆಗೆಂದು ಆರಲು ಇಟ್ಟ ಒದ್ದೆ ಕಟ್ಟಿಗೆಗಳಿಗೆ ಕೆಂಪು ಬಣ್ಣದ ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚಿ ಆಹುತಿ ತೆಗದುಕೊಳ್ಳುತ್ತಿತ್ತು. ಅಸಾಹಾಯಕಳಾದ ಬಸವಿಗೆ ಒಮ್ಮೆ ಅಬ್ಬೆಯ ನೆನಪಾಗಿ ಒಲೆಯ ಬುಡದಲ್ಲಿ ಕುಸಿದು ಕುಳಿತಳು, ತನಗೆ ಸಮಾಧಾನ ಮಾಡಲು ಅಬ್ಬೆಯೂ ಇಲ್ಲ ತನ್ನ ಸಿಟ್ಟು ತೀರಿಸಿಕೊಳ್ಳಲು ಮಗಳೂ ಕಣ್ಣೆದುರಿಗಿಲ್ಲ, "ಅಬ್ಬೆ ನೀನೆ ಅದೃಷ್ಟವಂತೆ ನಿನ್ನ ಸಿಟ್ಟಿಗೆ ನಾನು ಕಣ್ಣೆದುರಿಗಿದ್ದೆ ಈಗ ನನಗೆ ಯಾರೂ ಇಲ್ಲವಲ್ಲೇ...." ಆಕಾಶದತ್ತ ಮುಖ ಮಾಡಿ ಗೋಳಾಡತೊಡಗಿದಳು ಬಸವಿ.
ಕಟ್ಟಿಗೆಯ ತುಂಡಿನಲ್ಲಿದ್ದ ಕೆಂಪು ಬಣ್ಣದ ಬೆಂಕಿಯ ಕೆಂಡದ ಚೂರೊಂದು ಚಟ್ ಎಂದು ಸಿಡಿದು ಬಸವಿಯ ಸೀರೆಯ ಮೇಲೆ ಹಾರಿ ಬಿತ್ತು. ಬಸವಿಗೆ ಅದನ್ನು ಕೊಡವಿಕೊಳ್ಳುವಷ್ಟು ಅರಿವು ಇರಲಿಲ್ಲ. ಆ ಪ್ರಯತ್ನಕ್ಕೆ ಅರ್ಥವೂ ಇರಲಿಲ್ಲ ಕಾರಣ ಒದ್ದೆಕಟ್ಟಿಗೆಯ ಕೆಂಪುಕೆಂಡ ಆಗಲೆ ಬಸವಿ ಮತ್ತು ಸೀತೆಯನ್ನು ವಾಪಾಸುಬರಲಾಗದಷ್ಟು ನುಂಗಿಹಾಕಿತ್ತು.
**************************

1 comment:

Unknown said...

idu neelgate alla satya kathe anta agbekittu