ಕರ್ಮಣ್ಯೇ.....
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಮಾ ಕರ್ಮಫಲಹೇತುರ್ಭೂಃ ಮಾ ತೇ ಸಂಗೋಸ್ತ್ವಕರ್ಮಣಿ ಎಂದು ಶ್ರೀಕೃಷ್ಣ ಹೇಳಿದ್ದಾನೆ. ಅದಕ್ಕಾಗಿ ನಮ್ಮ ಕೆಲಸ ನಾವು ಮಾಡುತ್ತಿರಬೇಕು ಫಲವನ್ನು ಭಗವಂತನ ಇಚ್ಛೆಗೆ ಬಿಡಬೇಕು ಎಂಬ ಸಣ್ಣ ವೇದಾಂತದ ಭಾಷಣದೊಂದಿಗೆ ಕೆಲಸ ಆರಂಭಿಸುತ್ತೇವೆ. ಆದರೆ ಜೇನುಗಳಿಗೆ ಈ ಶ್ಲೋಕ ಗೊತ್ತಿಲ್ಲದೆಯೇ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿವೆ. ಅದರ ಅರ್ಥ ಅವುಗಳು ಪ್ರಕೃತಿ ಸಹಜವಾದ ಜಗತ್ತಿನ ನಿಯಮವನ್ನು ಯಾವ ಪಠ್ಯಪುಸ್ತಕಗಳ ಸಹಾಯವಿಲ್ಲದೆ ಪಾಲಿಸುತ್ತಿವೆ, ಹಾಗಾಗಿ ಮಾನಸಿಕ ಗೊಂದಲದಲ್ಲಿರುವ ವ್ಯಕ್ತಿಗಳಿಗೆ ಸಹಜಜೀವನವನ್ನು ಅನುಸರಿಸಲು ಜೇನುಹುಳುಗಳ ಜೀವನ ಪದ್ಧತಿಯಿಂದ ಉತ್ತಮ ಮಾರ್ಗದರ್ಶನ ಸಿಗುತ್ತದೆ. ಜೇನಿನ ಸಂಪೂರ್ಣ ಜೀವನಕ್ರಮ ಅರಿಯಲು ಒಂದು ತುಡುವೆಜೇನಿನ ಸಂಸಾರವನ್ನು ಮನೆಯಬಳಿ ಪೆಟ್ಟಿಗೆಯಲ್ಲಿಟ್ಟು ಸಾಕಿಕೊಳ್ಳಬೇಕು. ದಿನನಿತ್ಯ ಪೆಟ್ಟಿಗೆಯ ಬಳಿಯ ನಮ್ಮ ಓಡಾಟ, ಜೇನಿನ ಸಂಸಾರದ ಒಡನಾಟ ಎಂತಹ ಮನುಷ್ಯರ ಸ್ವಭಾವವನ್ನೂ ಬದಲಾಯಿಸಿಬಿಡುತ್ತವೆ. ಧೈರ್ಯವಿಲ್ಲದವರಿಗೆ ಧೈರ್ಯವನ್ನು, ಶ್ರದ್ಧೆಯಿಲ್ಲದವರಿಗೆ ಶ್ರದ್ಧೆಯನ್ನು, ಜೀವನದ ಏಕತಾನತೆಯಿಂದ ಬೇಸತ್ತು ಜೀವನ ಎಂದರೆ ಇಷ್ಟೇನಾ.. ಎಂದು ಅಲವತ್ತುಕೊಳ್ಳುವವರಿಗೆ ಜೀವನೋತ್ಸಾಹವನ್ನು ತಂದುಕೊಡುವಲ್ಲಿ ಜೇನುಹುಳುಗಳು ಸಹಾಯಕವಾಗಬಲ್ಲದು ಎಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ಕಿರುಬೆರಳಿನ ಉಗುರಿನ ಗಾತ್ರದ ಜೇನುಹುಳುಗಳು ನಮಗೇನು ಪಾಠ ಹೇಳಿಕೊಡಬಲ್ಲವು ಎಂಬ ತಾತ್ಸಾರದ ಪ್ರಶ್ನೆ ಹಲವರಿಗೆ ಬಂದೀತಾದರೂ, ಮನುಷ್ಯನ ಮಾನಸಿಕ ನೆಮ್ಮದಿಯ ಪಾಠಕ್ಕೆ ಜೇನು ಅಂತಲ್ಲ, ನಮ್ಮ ಸುತ್ತಮುತ್ತಲಿನ ಜೀವ ಜಗತ್ತನ್ನು ಕೂಲಂಕಷವಾಗಿ ನೋಡಿದರೆ ಈ ಭೂಮಿಯಲ್ಲಿ ಬದುಕಿ ಬಾಳುತ್ತಿರುವ ಪ್ರತಿಯೊಂದು ಜೀವಿಯಿಂದಲೂ ನಾವು ಕಲಿಯಬಹುದು. ಅವುಗಳಲ್ಲಿ ನಾವೇ ಪೆಟ್ಟಿಗೆಯಲ್ಲಿ ಸಾಕಿದ ಜೇನುಹುಳುಗಳಿಗೆ ಒಂದು ತೂಕ ಜಾಸ್ತಿ ಹೆಗ್ಗಳಿಕೆ ನೀಡಬಹುದು ಕಾರಣ, ಅವುಗಳ ಜೀವನಕ್ರಮವು ಮನುಷ್ಯನ ಜೀವನಕ್ರಮವನ್ನು ಹೋಲುತ್ತದೆ. ಹಾಗಾಗಿ ನಾವೇ ಒಂದು ಜೇನು ಸಂಸಾರ ಸಾಕಿಕೊಂಡರೆ ಅವುಗಳನ್ನು ಸುಲಭವಾಗಿ ಅಭ್ಯಸಿಸಬಹುದು, ಜತೆಯಲ್ಲಿ ಅವು ನಮ್ಮ ದೇಹಕ್ಕೆ ಬೇಕಾಗುವ ಔಷಧೀಯ ಗುಣಗಳುಳ್ಳ ಸ್ವಾದಿಷ್ಟ ತುಪ್ಪವನ್ನು ನೀಡುವುದರಿಂದ ಮಾನಸಿಕವಾಗಿ ನೆಮ್ಮದಿಯಾಗಿ ಬಾಳಿ ಬದುಕುವ ಜೀವನದ ಪಾಠ ಹೇಳಿಕೊಡುತ್ತವೆ. ಕಲಿಯುವ ಆಸಕ್ತಿ, ಮನಸ್ಸು ಇರಬೇಕಷ್ಟೆ. ಅವುಗಳು ಕಲಿಸುವ ಜೀವನದ ಪಾಠಗಳನ್ನು ಮನುಷ್ಯರಿಂದ ಕಲಿಯಬೇಕಾದಲ್ಲಿ ಅದಕ್ಕೆ ಪಿಂಡಿಗಟ್ಟಲೆ ಹಣವನ್ನು ಕಕ್ಕಬೇಕಾದೀತು.
ಜೇನಿನ ಕುರಿತಾದ ಹೊಸತಾದ ವಿಚಾರಗಳನ್ನು ಆನಂದರಾಮ ಶಾಸ್ತ್ರಿ ಹೇಳುತ್ತಿದ್ದರೆ ನಾನು ಬಿಟ್ಟ ಬಾಯಿಬಿಟ್ಟುಕೊಂಡು ಅವನನ್ನೇ ನೋಡುತ್ತಿದ್ದೆ. ಇದೆಂತಹ ವಿಚಿತ್ರ ! ಒಂದು ಸಣ್ಣ ಜೇನುಹುಳಕ್ಕೂ ಈ ಗಾತ್ರದ ಮನುಷ್ಯನಿಗೂ ಎತ್ತಣದೆತ್ತಣ ಸಂಬಂಧ, ನಾವು ಅವುಗಳಿಂದ ಕಲಿಯಬೇಕಾದ್ದು ಇದೆ ಎನ್ನುವ ಮಾತುಗಳು ನನಗೆ ಮೊದಲು ಪೇಲವವಾಗಿ ಕಂಡರೂ,
ಆತನ ಸ್ಪಷ್ಟವಾದ ಹಾಗೂ ಖಚಿತವಾದ ನಿಲುವಿನ ಹೋಲಿಕೆಗಳು ನನ್ನನ್ನು ಆಕರ್ಷಿಸತೊಡಗಿತು. ಜೊತೆಯಲ್ಲಿ ನನ್ನ ಆಸಕ್ತಿಯ ವಿಚಾರ ಇವನಿಗೆ ಅದು ಹೇಗೆ ತಿಳಿಯಿತು ಎಂದು ಆಶ್ಚರ್ಯವಾಗುತ್ತಿತ್ತು. ಕಾರಣ ನನಗೆ ಆತ ಅಕಸ್ಮಾತ್ತಾಗಿ ಘಂಟೆಯ ಹಿಂದಷ್ಟೇ ಪರಿಚಯವಾಗಿದ್ದ. ತಾಳಗುಪ್ಪದ ಹೆಗಡೆಯವರು ತಾವು ಬೆಳ್ಳೂರು ಆಂಜನೇಯನ ದೇವಸ್ಥಾನಕ್ಕೆ ಹೋಗಬೇಕಿರುವುದರಿಂದ ಬೆಳಿಗಿನ ಜಾವ ನಾಲ್ಕುಗಂಟೆಗೆ ಕಾರು ತೆಗೆದುಕೊಂಡು ಬಾ ಎಂದು ಹೇಳಿದ್ದರು. ಬೆಳಿಗ್ಗೆ ಸರಿಯಾದ ಸಮಯಕ್ಕೆ ಹೊರಟು ಆರುವರೆಗೆಲ್ಲಾ ಬೆಳ್ಳೂರು ತಲುಪಿದ್ದೆವು.
ದೇವಸ್ಥಾನದಲ್ಲಿನ ಭಟ್ಟರ ಮೈಮೇಲೆ ಆಂಜನೇಯ ಅವತರಿಸಿ ಹೇಳಿಕೆ ನೀಡಲು ಮಧ್ಯಾಹ್ನ ಹನ್ನೊಂದು ಗಂಟೆಯವರೆಗೆ ನಾವು ಕಾಯಬೇಕೆಂದು ತಿಳಿಯಿತು. ಅಲ್ಲಿ ನನಗೆ ಮಾಡಲು ಬೇರೆ ಕೆಲಸವಿರಲಿಲ್ಲ. ದೇವರು ಮೈಮೇಲೆ ಬರುವುದನ್ನು ನೋಡಲು ಕುತೂಹಲ ಇತ್ತಾದರೂ ಅದಕ್ಕೆ ಇನ್ನೂ ಎರಡು ತಾಸು ಕಾಯಬೇಕಾಗಿತ್ತು. ಹಾಗಾಗಿ ಬೆಳ್ಳೂರಿನಿಂದ ಗೇರುಸೊಪ್ಪಕ್ಕೆ ಹೋಗಿ ಕೆ.ಪಿ.ಸಿ.ಕ್ಯಾಂಟಿನ್ನಿನಲ್ಲಿ ಇಡ್ಲಿ ತಿಂದು ಬರೋಣ ಎಂದು ಕಾರು ತೆಗೆದುಕೊಂಡು ಹೋದೆ. ಅಲ್ಲಿ ಗಡದ್ದಾಗಿ ಹೊಟ್ಟೆಬಿರಿ ತಿಂಡಿ ತಿಂದು ವಾಪಾಸು ಹೊರಡುವಾಗ ಆತ ನನ್ನ ಬಳಿ ಬಂದು ತಮ್ಮ ಕಾರು ಬೆಳ್ಳೂರಿಗೆ ಹೋಗುತ್ತಾ? ನಾನು ಕಾರಿನಲ್ಲಿ ಬರಬಹುದಾ? ಎಂದು ಕೇಳಿದ. ಸ್ವಚ್ಛವಾದ ಬಿಳಿವಸ್ತ್ರ ಧರಿಸಿದ್ದ ಆತನ ಮುಖದಲ್ಲಿ ವ್ಯಕ್ತಪಡಿಸಲು ಬಾರದ ಒಂದು ಪ್ರಭಾವವಿತ್ತು. ಅವನ ಕಣ್ಣುಗಳಲ್ಲಿ ಅದೇನೋ ಸೆಳೆತವಿತ್ತು. ನನಗೆ ಹೆಚ್ಚು ಹೊತ್ತು ಆತನ ಮುಖ ನೋಡಲಾಗಲಿಲ್ಲ. ಒಮ್ಮೊಮ್ಮೆ ಅವೆಲ್ಲಾ ಒಂದು ಭ್ರಮೆ ಎಂದೆನಿಸಿದರೂ ಆಕ್ಷಣದಲ್ಲಿ ನನಗೆ ಆ ಅನುಭವವಾಗಿತ್ತು. ಆತನ ಕೋರಿಕೆ ನಿರಾಕರಿಸದೆ ಅಥವಾ ಅದ್ಯಾವುದೋ ಒಂದು ನಿರಾಕರಿಸಲಾಗದ ಸೆಳತಕ್ಕೆ ಸಿಕ್ಕಿ ಆಯಿತು ಬನ್ನಿ ಎಂದು ಕಾರಿನ ಮುಂದಿನಬಾಗಿಲು ತೆಗೆದೆ. ಆದರೆ ಆತ ಅಲ್ಲಿ ಕುಳಿತುಕೊಳ್ಳದೆ ಅವನಾಗಿಯೇ ಹಿಂದಿನಬಾಗಿಲು ತೆರೆದುಕೊಂಡು ಕುಳಿತ.
ಆತನನ್ನು ಕಾರಿಗೆ ಹತ್ತಿಸಿಕೊಂಡಮೇಲೆ ನನ್ನ ಬಗ್ಗೆ ನನಗೆ ಆಶ್ಚರ್ಯವಾಯಿತು. ಕಾರಣ ಸಾಮಾನ್ಯವಾಗಿ ಅಪರಿಚಿತರನ್ನು ನನ್ನ ಕಾರಿನೊಳಕ್ಕೆ ಹತ್ತಿಸಿಕೊಳ್ಳುತ್ತಿರಲಿಲ್ಲ, ಒಂದೆರಡು ಬಾರಿ ಹಾಗೆ ಅಪರಿಚಿತರನ್ನು ಹತ್ತಿಸಿಕೊಂಡಿದ್ದರಿಂದ ಅತೀ ಕೆಟ್ಟ ಅನುಭವವಾಗಿತ್ತು. ಹಾಗಿದ್ದರೂ ನಾನು ಆತ ಕೇಳಿದ ತಕ್ಷಣ ಒಂದು ಕ್ಷಣವೂ ಯೋಚಿಸದೇ ಆಯಿತು ಎಂದಿದ್ದು ಹೇಗೆ? ಆದರೆ ಉತ್ತರ ಸಿಗದಿದ್ದರಿಂದ ಸುಮ್ಮನುಳಿದೆ.
ಸ್ವಲ್ಪ ದೂರ ಕಾರಿನಲ್ಲಿ ಸಾಗುತ್ತಿರುವಷ್ಟರಲ್ಲಿ ನನಗೆ ಆತನ ಹೆಸರು, ಊರು ಕೇಳಬೇಕಿತ್ತು ಅಂತ ಅನಿಸಿತು. ಹಾಗೆ ಅನ್ನಿಸಿದ ಕೂಡಲೆ ಹೆಸರು ಕೇಳಲು ಅವನತ್ತ ತಿರುಗಿದೆ, ಅಷ್ಟರಲ್ಲಿ ಆತ ಗಂಭೀರವಾಗಿ ನನ್ನ ಪ್ರಶ್ನೆ ಮೊದಲೆ ತಿಳಿದವನಂತೆ ನನ್ನ ಹೆಸರು ಆನಂದರಾಮಶಾಸ್ತ್ರಿ, ನನ್ನ ಹುಟ್ಟೂರು ಹಳ್ಳಿಕೇರಿ ಎಂದು ಹೇಳಿ ಮುಗುಳ್ನಕ್ಕ. ನನಗೆ ಆಗ ಮಾತ್ರ ಈತ ಏನೋ ವಿಶೇಷ ಶಕ್ತಿಯಿರುವ ಮನುಷ್ಯ ಎಂದೆನಿಸಿತು. ಮರುಕ್ಷಣ, ಅಲ್ಲ ಇದು ಕಾಕತಾಳೀಯ ಸಾಮಾನ್ಯವಾಗಿ ಪರಸ್ಪರ ಪರಿಚಯಕ್ಕಾಗಿ ಎಲ್ಲರೂ ಅನುಸರಿಸುವ ವಿಧಾನ ಎಂದು
ಸಮಾಧಾನ ಪಟ್ಟುಕೊಂಡೆ. ಅಂತಹಾ ವಿಶೇಷಶಕ್ತಿ ಅವನಲ್ಲಿ ಇದ್ದಿದ್ದೇ ಹೌದಾಗಿದ್ದರೆ ಆತ ಬೆಳ್ಳೂರಿನ ಆಂಜನೇಯ ದೇವಸ್ಥಾನಕ್ಕೆ ಹೇಳಿಕೆಯ ಮೂಲಕ ಪರಿಹಾರ ಕಂಡುಕೊಳ್ಳಲು ಸಮಸ್ಯೆ ಹೊತ್ತುಕೊಂಡು ಯಾಕೆ ಬರುತ್ತಿದ್ದ ಎಂದೆನಿಸಿತು. ಕಾರಿನಲ್ಲಿ ಕುಳಿತ ಆತ ತನ್ನ ಹೆಸರನ್ನು ಆನಂದರಾಮಶಾಸ್ತ್ರಿ ಎಂದು ಹೇಳಿ ಸುಮ್ಮನುಳಿದ. ಆತ ನನ್ನ ಹೆಸರನ್ನು ಕೇಳಲಿಲ್ಲ ಹಾಗಾಗಿ ನಾನೂ ಹೇಳದೆ ಸುಮ್ಮನುಳಿದೆ.
ಕಾರಿನಿಂದ ಇಳಿದ ಆತ ಒಂದು ಮುಗುಳ್ನಕ್ಕು ದೇವಸ್ಥಾನದೊಳಗೆ ಹೊರಟುಹೋದ. ನಾನು ಕೂಡ ಕಾರನ್ನು ಅರಳಿಮರದ ನೆರಳಿನಲ್ಲಿ ನಿಲ್ಲಿಸಿ ದೇವಸ್ಥಾನ ಪ್ರವೇಶಿಸಿದೆ.
ಆಂಜನೇಯನ ದರ್ಶನಕ್ಕೆ ನೂರಾರು ಜನರು ಸೇರಿದ್ದರು. ಭಟ್ಟರ ಮೈಮೇಲೆ ಅವತರಿಸಿದ ಆಂಜನೇಯ ಭಕ್ತರ ಸಮಸ್ಯೆಗೆ ಪರಿಹಾರ ಸೂಚಿಸುತ್ತಿದ್ದ. ಗರ್ಭಗುಡಿಯ ಹೊರಗಡೆ ಜಗುಲಿಯಲ್ಲಿ ನೂರಾರು ಜನರು ಭಯಭಕ್ತಿಯಿಂದ ತಮ್ಮ ಸರದಿಗಾಗಿ ಕಾಯುತ್ತಾ ಕುಳಿತಿದ್ದರು. ಒಳಗಡೆ ಆಂಜನೇಯ ಮೈಮೇಲೆ ಬಂದ ಭಟ್ಟರನ್ನು ಗಟ್ಟಿಮುಟ್ಟಾದ ಎರಡು ಜನ ಹಿಡಿದುಕೊಂಡಿದ್ದರು. ಅವರನ್ನೂ ಜಗ್ಗಿಕೊಂಡು ಭಟ್ಟರು ಹಾರಿ ಹಾರಿ ಕುಣಿದು ಕುಪ್ಪಳಿಸಿ,ಏನೋ ಇಂಥಾ ಸಮಸ್ಯೆ ಇಟ್ಟುಕೊಂಡು, ಇಷ್ಟು ದಿವಸದ ಮೇಲೆ ಬಂದಿದ್ದೀಯಲ್ಲ, ಆಗ್ಲಿ ನೀನೇನು ಭಯಪಡಬೇಡ ನಿನಗೆ ನನ್ನ ಆಶೀರ್ವಾದ ಇದೆ. ಕೋರ್ಟುಕೇಸು ನಿನ್ನಂತಲೇ ಆಗುತ್ತೆ ಹೋಗು, ತೆಗೆದುಕೋ ಪ್ರಸಾದ ಎಂದು ಪಕ್ಕದಲ್ಲಿದ್ದ ತಾಮ್ರದ ಚೊಂಬಿನಿಂದ ಅವನ ಮೈಮೇಲೆ ನೀರನ್ನು ಚಿಮುಕಿಸಿ, ತೆಂಗಿನ ಕಾಯಿ ಕೊಡುತ್ತಿದ್ದರು. ಬಹುಶಃ ಆ ಭಕ್ತ ತನ್ನ ವಕೀಲರು ಇದೇ ಮಾತನ್ನು ಹೇಳಿದರೂ ನಂಬುತ್ತಿರಲಿಲ್ಲವೇನೋ, ಅಲ್ಲಿಯೇ ಕೇಸು ಗೆದ್ದ ಮುಖಭಾವದೊಂದಿಗೆ ಪ್ರಸಾದವನ್ನು ಕಣ್ಣಿಗೊತ್ತಿಕೊಂಡು ಹೊರಗಡೆ ಬಂದ. ನಂತರ ಮತ್ತೊಬ್ಬ ಭಕ್ತನ ಹೆಸರನ್ನು ಕೂಗಲಾಯಿತು. ಆತ ಬರುವ ಅಲ್ಪವಿರಾಮದ ವೇಳೆಯಲ್ಲಿ ಆಂಜನೇಯನ ಅವತಾರಿ ಭಟ್ಟರು ಬಾಯಿಯಲ್ಲಿ ಇಡೀ ಬಾಳೆಗೊನೆ ಕಚ್ಚಿ ಎಳೆದಾಡುತ್ತಾ, ಒಮ್ಮೆ ಹಾರಿ ಕುಣಿದು ಕುಪ್ಪಳಿಸಿದರು. ಹೀಗೆ ಒಬ್ಬರ ನಂತರ ಮತ್ತೊಬ್ಬ ಭಕ್ತರ ನಿತ್ಯ ಜೀವನದ ಸಮಸ್ಯೆಗಳಿಗೆ ಹಾಗು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಅದನ್ನೇ ನೋಡುತ್ತಿದ್ದ ನನಗೆ ಇದು ದೇವರ ಅವತಾರವಲ್ಲ ಮಂಗಚೇಷ್ಟೆ ಎಂದು ಒಮ್ಮೆ ಅನಿಸಿತಾದರೂ ಮರುಕ್ಷಣ ನನಗೆ ಜೀವನದಲ್ಲಿ ಬಗೆಹರಿಸಲಾರದ ಸಮಸ್ಯೆ ಇಲ್ಲದಿರುವುದೂ ಹಾಗೆ ಅನ್ನಿಸಲು ಕಾರಣವಿರಬಹುದು ಎಂದೆನಿಸಿತು. ಪರಿಹರಿಸಲಾಗದ ಸಮಸ್ಯೆಗಳು ಮನುಷ್ಯನಿಗೆ ಬಂದಾಗ ಇಂತಹ ದೇವರುಗಳ ಸಹಾಯ ಬೇಕಾಗಬಹುದೇನೊ? ಯಾವುದನ್ನು ನಂಬದಿದ್ದರೂ ಹತ್ತೆಂಟು ತಾಸು ಕುಣಿದು ಕುಪ್ಪಳಿಸುತ್ತಾ ಹಲ್ಲಿನಿಂದ ಬಾಳೆಗೊನೆ ಜಗ್ಗಾಡುವುದನ್ನು ನೋಡಿದರೆ ನಾಸ್ತಿಕನೂ ದೇವರ ಬಗ್ಗೆ ನಂಬಲು ಆರಂಭಿಸಿಬಿಡಬಹುದಿತ್ತು ಎಂದು ಯೋಚಿಸುತ್ತಾ ಅಲ್ಲಿಂದ ಹೊರಗಡೆ ಬಂದು ಸುತ್ತಾಡುತ್ತಾ ದೇವಸ್ಥಾನದ ಕೆಳಗಡೆ ತೋಟದ ಕಡೆ ಸಾಗಿದ್ದ ದಾರಿಗೆ ಹೊರಳಿದೆ.
ದೇವಸ್ಥಾನದಿಂದ ತೋಟಕ್ಕೆ ಸಾಗುವ ದಾರಿಯಲ್ಲಿ ಬೃಹತ್ತಾದ ನಂದಿಮರದಲ್ಲೊಂದು ಹೆಜ್ಜೇನು ಗೂಡುಕಟ್ಟಿತ್ತು. ಹೆಜ್ಜೇನು ಕಂಡೊಡನೆ ಪಟಾಕಿನಾರಾಯಣ ನೆನಪಿಗೆ ಬಂದ. ಅಂದು ನಾರಾಯಣನೂ ಸೇರಿದಂತೆ ನಮ್ಮೆಲ್ಲರ ಮುಖವನ್ನು ಆಂಜನೇಯನ ದವಡೆ ತರಹ ಮಾಡಿದ್ದ ಹೆಜ್ಜೇನು ಇಂದು ಮನಸ್ಸು ಮಾಡಿದರೆ ದೇವಸ್ಥಾನದಲ್ಲಿ ಇದ್ದ ಎಲ್ಲರ ಮೈಮೇಲೆ ಆಂಜನೇಯನನ್ನು ಅವತರಿಸಬಹುದಿತ್ತು. ಪಟಾಕಿಯನ್ನು ಕರೆತಂದಿದ್ದರೆ ಆತ ಇದ್ಯಾವ ಮಹಾ ಈಗ ಓಡಿಸ್ತೆ ಕಾಣಿ ಎನ್ನುತ್ತಿದ್ದನೇನೋ ಎನಿಸಿ ನಗು ಬಂತು. ಅರ್ಧಗಂಟೆ ಹೆಜ್ಜೇನಿನ ಗೂಡನ್ನೇ ನೋಡುತ್ತಾ ಅಲ್ಲಿಯೇ ಕುಳಿತೆ. ನಂತರ ಅಲ್ಲಿಂದ ವಾಪಾಸು ದೇವಸ್ಥಾನಕ್ಕೆ ಹೊರಟಾಗ ಆತ ಕಾಣಿಸಿದ... ಆನಂದರಾಮ ಶಾಸ್ತ್ರಿ.
ದೇವಸ್ಥಾನದ ಕೆಳಭಾಗದಲ್ಲಿರುವ ಕಟ್ಟಡದಲ್ಲಿ ಬೋನಿನೊಳಗೆ ಕೂಡಿ ಹಾಕಿದ್ದ ಬಿಳಿಮಂಗನನ್ನು ಆಚೆ ಬಿಟ್ಟುಕೊಂಡು ಮೂಸಂಬಿ ಹಣ್ಣು ತಿನ್ನಲು ಕೊಟ್ಟು ಅದನ್ನು ನೋಡುತ್ತಾ ನಿಂತಿದ್ದ. ನನ್ನನ್ನು ನೋಡಿದವನು ಏಕಾಏಕಿ ಕರ್ಮಣ್ಯೇವಾಧಿಕಾರಸ್ತೇ... ಎಂದು ಜೇನಿನ ಜೀವನಕ್ಕೂ ಮನುಷ್ಯರ ಬಾಳಿಗೂ ತಾಳೆಮಾಡಿ ವೇದಾಂತ ಹೇಳತೊಡಗಿದ. ಆತನಿಗೆ ಮಾನವಾತೀತಶಕ್ತಿ ಏನಾದರೂ ಇರಬಹುದಾ ಎಂದು ನನಗನ್ನಿಸಿದ್ದು ಆವಾಗಲೇ. ನಾನು ಅವನಿಗೆ ಒಂದೆರಡು ಘಂಟೆಯ ಹಿಂದಷ್ಟೆ ಪರಿಚಯವಾದವನಾದ್ದರಿಂದ, ನನ್ನ ಹೆಸರು, ಊರು, ದೆಸೆ ಯಾವುದೂ ಆತನಿಗೆ ಯಾವಕಾರಣಕ್ಕೂ ತಿಳಿಯಲು ಸಾಧ್ಯವಿರಲಿಲ್ಲ. ಅವುಗಳೇ ಗೊತ್ತಿರಲು ಸಾಧ್ಯವಿರಲಿಲ್ಲ ಎಂದಾದಮೇಲೆ ಇನ್ನು ನನ್ನ ಆಸಕ್ತಿ ತಿಳಿದಿರಲು ಹೇಗೆ ಸಾಧ್ಯ?, ಆದರೂ ನನ್ನ ಮನದಿಂಗಿತವನ್ನು ತಿಳಿದವನಂತೆ ಜೇನಿನ ಕುರಿತಾಗಿ ನನ್ನ ಬಳಿ ಮಾತನಾಡತೊಡಗಿದ್ದ. ಮತ್ತೊಬ್ಬರ ಮನದೊಳಗಿನ ಯೋಚನೆ ತಿಳಿಯುವ ವಿದ್ಯೆಗಳಿವೆ, ಮತ್ತೊಬ್ಬರಿಗೆ ನಮ್ಮ ಯೋಚನೆಯನ್ನು ತಲುಪಿಸಲು ಟೆಲಿಪತಿಯಿಂದ ಸಾಧ್ಯ ಎಂದು ನನ್ನ ಬಳಿ ಯಾರಾದರೂ ಹೇಳಿದಾಗ ನಾನು ಅವರನ್ನು ಅಪಹಾಸ್ಯ ಮಾಡುತ್ತಿದ್ದೆ. ಆದರೆ ಈಗ ಅವು ನನ್ನ ಅನುಭವಕ್ಕೆ ಬಂದಿದ್ದರಿಂದ ದಿಗ್ಭ್ರಾಂತನಾಗಿದ್ದೆ. ನನ್ನ ಸ್ಥಿತಿಯನ್ನು ಆತ ಗಮನಿಸದೆ ಜೇನು ಮತ್ತು ಜೀವನದ ವಿಚಾರ ಮುಂದುವರೆಸಿದ. ನನಗೆ ಮುಂದಿನ ಎರಡು ತಾಸುಗಳು ಕಳದದ್ದೇ ತಿಳಿಯಲಿಲ್ಲ.
* * * * *
ಜೇನ ಸುದ್ದಿದಿನದಿಂದ ದಿನಕ್ಕೆ ಮಳೆ ಜಾಸ್ತಿಯಾಗುತ್ತಿತ್ತು. ಅದೇಕೊ ಮಳೆಗಾಲ ಈ ವರ್ಷ ಸುದೀರ್ಘ ಎಂದೆನಿಸತೊಡಗಿತ್ತು. ಅದಕ್ಕೆ ಮುಖ್ಯ ಕಾರಣ ನನ್ನ ಜೇನು ಸಾಕುವ ಹುಚ್ಚು. ಮಳೆಗಾಲ ಬೇಗನೆ ಮುಗಿದರೆ ಚೆನ್ನನನ್ನು ಹಿಡಿದು ಜೇನನ್ನು ಪತ್ತೆ ಮಾಡಬಹುದಲ್ಲಾ ಎನ್ನುವ ಆತುರ. ಜೇನು ತುಪ್ಪ ಮಾರಾಟಮಾಡಿ ಬೇಕಾದಷ್ಟು ದುಡ್ಡು ಸಂಪಾದನೆ ಮಾಡಬಹುದು ಎನ್ನುವ ಗುರಿಯಿಂದ ಹೊರಟ ನನ್ನ ಹುಚ್ಚು ಈಗ ಜೇನಿನಲ್ಲಿ ಸಹಜ ನೆಮ್ಮದಿಯ ಜೀವನಕ್ಕೆ ಬೇಕಾಗುವ ಅಧ್ಯಾತ್ಮವನ್ನು ಹುಡುಕುವವರೆಗೂ ಮುಂದುವರೆದ ಕಾರಣ ಚಳಿಗಾಲದ ಆಗಮನವನ್ನು ಕಾತರದಿಂದ ಕಾಯುವಂತಾಗಿತ್ತು. ಆದರೆ ಕಾಲವೆನ್ನುವುದು ನಮ್ಮ ಕೈಯಲ್ಲಿ ಇಲ್ಲವಲ್ಲ, ಕಾಯುವುದು ಅನಿವಾರ್ಯ ಎಂದು ಸುಮ್ಮನುಳಿದಿದ್ದೆ. ಅಷ್ಟರಲ್ಲಿ ನನಗೆ ಪ್ರಿಯವಾದ ಸುದ್ದಿಯೊಂದು ಸಿಕ್ಕಿತು.
ಈ ನಡುವೆ ನಾನು ಜೇನು ಸಾಕುವುದರ ಬಗ್ಗೆ ಹೆಚ್ಚು ಮಾತನಾಡಲು ಆರಂಭಿಸಿದ್ದೆ. ಮೊದಲೆ ಹೇಳಿಕೇಳಿ ವಾಚಾಳಿಯಾಗಿದ್ದ ನನ್ನ ಮೇಲೆ ಹಿಂದಿನಿಂದ ಕೊರೆತೇಶ್ವರ ಎಂದು ಆಡಿಕೊಳ್ಳುತ್ತಿದ್ದರು. ಆದರೆ ಓಡಾಡಲು ಕಾರು, ಕೈಯಲ್ಲಿ ಮೊಬೈಲ್, ಮನೆಯಲ್ಲಿ ಕಂಪ್ಯೂಟರ್, ಡಿಜಿಟಲ್‌ಕ್ಯಾಮೆರಾ ಹಾಗು ಪತ್ರಿಕೆಗಳಲ್ಲಿ ಅಲ್ಲೊಂದು ಇಲ್ಲೊಂದು ಪ್ರಕಟವಾಗುತ್ತಿದ್ದ ಲೇಖನಗಳಿಂದಾಗಿ ಈತ ಬಹಳ ದುಡ್ಡಿದ್ದವ ಅಂದುಕೊಂಡು ಎದುರುಗಡೆಯಿಂದ ಏನೂ ಅನ್ನುತ್ತಿರಲಿಲ್ಲ. ದುಡ್ಡೆಲ್ಲವೂ ಇಂತಹ ಬೇಡದ್ದಕ್ಕೆ ಖಾಲಿಯಾಗಿದೆ ಎಂದು ತಿಳಿದಿದ್ದರೆ ಎದುರೇ ಅನ್ನುತ್ತಿದ್ದರೇನೋ! ಅದೇನೆ ಇರಲಿ ನನ್ನ ಜೇನಿನ ಹುಚ್ಚು ಊರಲ್ಲೆಲ್ಲಾ ಸುದ್ದಿಯಾಗಿದ್ದ ಕಾರಣ ಮತ್ತು ನಾನು ಅದರ ಬಗ್ಗೆ ಹೆಚ್ಚು ಮಾತನಾಡುತ್ತಿದ್ದುದರಿಂದ ನನ್ನಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದುದು ನನಗೆ ತಿಳಿಯುತ್ತಿತ್ತು. ನಾನು ಗೊತ್ತಾಗಿಯೂ ಗೊತ್ತಾಗದವನಂತೆ ಸುಮ್ಮನುಳಿಯುತ್ತಿದ್ದೆ. ನನ್ನ ಜೇನು ಸಾಕುವ ಹುಚ್ಚು ಊರೆಲ್ಲಾ ಸುದ್ದಿಯಾಗಿ ಹಿಂದಿನಿಂದ ಆಡಿಕೊಳ್ಳುವ ವಿಷಯವಾದರೂ ಅದರಿಂದ ಒಂದು ಮಹದುಪಕಾರವಾಗಿತ್ತು. ಯಾರೇ ಜೇನು ಕಂಡರೂ ನನಗೆ ಸುದ್ದಿ ಮುಟ್ಟಿಸುತ್ತಿದ್ದರು.
ಅಂತಹ ಒಂದು ದಿನ, ಈ ಮಳೆಗಾಲದಲ್ಲಿ ಜೇನು ಸಿಕ್ಕುವುದೇ ಇಲ್ಲ ಎಂದುಕೊಂಡಿದ್ದ ನನಗೆ ಕನ್ನರ್ಸೆ ನಾರಾಯಣಸ್ವಾಮಿ ಫೋನ್‌ಮಾಡಿ ನಮ್ಮ ಮನೆಯ ಸೊಪ್ಪಿನ ಬೆಟ್ಟದಲ್ಲಿ ಒಂದು ಸಳ್ಳೆ ಮರ ಪಲ್ಟಿ ಹೊಡೆದಿದೆ ಅದರ ಪೊಟರೆಯಿಂದ ಜೇನು ಹುಳುಗಳು ಹಾರಾಡುತ್ತಿವೆ ಹಿಡಿಯುವುದಾದರೆ ಬೇಗ ಬಾ ಎಂದ. ನನಗೆ ನಿಧಿ ಸಿಕ್ಕಷ್ಟು ಸಂತೊಷವಾಯಿತು. ಲಗುಬಗೆಯಿಂದ ಜೇನನ್ನು ಕೂಡಲು ಒಂದು ಪೆಟ್ಟಿಗೆಯನ್ನು ನನ್ನ ತೊಂಬತ್ತೊಂದನೆ ಮಾಡೆಲ್ ಮಾರುತಿಯಲ್ಲಿ ಹೇರಿಕೊಂಡು ಹೊರಟೆ. ಕನ್ನರ್ಸೆ ಸ್ವಾಮಿಯ ತೋಟದ ಮೇಲ್ಭಾಗದಲ್ಲಿ ಹತ್ತಡಿ ಎತ್ತರದ ಸಳ್ಳೆ ಮರ ಮಗಚಿಕೊಂಡುಬಿದ್ದಿತ್ತು. ಮರದ ಅರ್ಧಭಾಗದಲ್ಲಿದ್ದ ಪೊಟರೆಯಿಂದ ಜೇನುಹುಳುಗಳು ಹಾರಾಟ ನಡೆಸುತ್ತಿದ್ದವು. ನಿಧಾನ ಹತ್ತಿರ ಹೋದೆ. ಪೊಟರೆಯೇನು ತೀರಾ ಆಳವಿರಲಿಲ್ಲ. ಹೊರಗಿನಿಂದಲೇ ಬಿಳಿ ಬಣ್ಣದ ಜೇನುತತ್ತಿ ಕಣ್ಣಿಗೆ ಕಾಣಿಸುತ್ತಿತ್ತು. ಹುಳ ಗಾಬರಿಯಾಗಿ ಹೊರಗಡೆ ಹಾರಾಡುತ್ತಿದ್ದುದರಿಂದ ತೀರಾ ಹತ್ತಿರ ಹೋಗಿ ಗೂಡನ್ನು ನೋಡುವಂತಿರಲಿಲ್ಲ. ಹುಳುಗಳು ಸ್ವಲ್ಪ ಶಾಂತವಾಗುವವರೆಗೆ ಕಾಯಬೇಕಾಗಿತ್ತು. ಅಲ್ಲಿಯವರೆಗೆ ಸುತ್ತಮುತ್ತಲಿನ ಜಾಗ ಚೊಕ್ಕಟ ಮಾಡಿಕೊಳ್ಳಲು, ಸುತ್ತಮುತ್ತಲಿನ ಮರಗಿಡಗಳ ಸೊಪ್ಪನ್ನು ಸವರಲು ಸ್ವಾಮಿಯ ಬಳಿ ಕತ್ತಿ ಇಸಿದುಕೊಂಡು ಎಡಗೈಯಲ್ಲಿ ಸಣ್ಣದಾಗಿದ್ದ ಅಕೇಶಿಯಾ ಗಿಡದ ಕೊಂಬೆ ಹಿಡಿದೆ.......ಒಮ್ಮೆಲೆ ಮೈಯೆಲ್ಲಾ ನಡುಗಿದಂತಾಗಿ ಇಡೀ ದೇಹ ಜುಂ ಎಂದಿತು. ಅಯ್ಯಮ್ಮಾ... ಎಂದು ಕೂಗಿಕೊಂಡೆ ನನಗೆ ಏನಾಗುತ್ತಿದೆ ಎಂದು ತಿಳಿಯುವುದರೊಳಗೆ ಕೈಯಲ್ಲಿದ್ದ ಕತ್ತಿ ಮಾರುದೂರ ಠಣಾರೆಂದು ಸದ್ದು ಮಾಡುತ್ತಾ ಹಾರಿ ಬಿತ್ತು. ದಿಢೀರನೆ ಆದ ಆಘಾತದಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ನಾನು ಕೂಗಿದ್ದನ್ನು ಕೇಳಿ ನನ್ನಿಂದ ಅನತಿ ದೂರದಲ್ಲಿದ್ದ ಸ್ವಾಮಿ ನನ್ನ ಬಳಿ ಓಡಿ ಬಂದ. ಅಷ್ಟೊತ್ತಿಗೆ ನಾನು ಸ್ವಲ್ಪ ಚೇತರಿಸಿಕೊಂಡಿದ್ದೆ. ಅಷ್ಟರಲ್ಲಿ ಆತನೂ ಅಯ್ಯಯ್ಯೋ ಕರೆಂಟು ಹೊಡಿತ್ರೋ ಎಂದು ಕೂಗುತ್ತಾ ಮಾರು ದೂರ ಹಾರಿದ. ಅವನು ಹಾಗೆ ಕೂಗಿದ್ದರಿಂದ ನನಗೂ ಹೊಡೆದದ್ದು ಕರೆಂಟು ಎಂದು ತಿಳಿಯಿತು. ನಾರಾಯಣಸ್ವಾಮಿ ಹಾರುವ ಗಡಿಬಿಡಿಯಲ್ಲಿ ಮರದ ಬೊಡ್ಡೆ ಕಾಲಿಗೆ ತಾಕಿ ದಢಾರನೆ ಮಗುಚಿ ಬಿದ್ದ. ನಾನು ಅವನು ಬಿದ್ದಲ್ಲಿಗೆ ಓಡಿದೆ. ಸಣ್ಣ ಪುಟ್ಟ ತರಚು ಗಾಯವನ್ನು ಹೊರತು ಪಡಿಸಿದರೆ ಅಂತಹಾ ದೊಡ್ಡ ಏಟು ಆಗಿರಲಿಲ್ಲ. ಜೇನು ಹಿಡಿದು ಪೆಟ್ಟಿಗೆ ಕೂಡಲು ಬಂದ ನಾವು ಇಬ್ಬರೂ ಸೇರಿ ಅಕೇಶಿಯಾ ಗಿಡ ಕರೆಂಟು ಹೊಡೆಯುವ ಕಾರಣ ಕಂಡು ಹಿಡಿಯಬೇಕಾಗಿತ್ತು. ಅದು ತಿಳಿಯದೆ ಜೇನಿನ ಸುದ್ದಿಗೆ ಹೋಗುವಂತಿರಲಿಲ್ಲ.
ನೇರವಾಗಿ ಕೆಳಮುಖ ತೋಟಕ್ಕೆ ಬೀಳಬೇಕಾಗಿದ್ದ ಸಳ್ಳೆ ಮರ ದೊಡ್ಡದಾದ ಕಲ್ಲು ಬಂಡೆ ಅಡ್ದಸಿಕ್ಕಿದ್ದರಿಂದ ತಿರುಗಿ ಸೊಪ್ಪಿನ ಬೆಟ್ಟದಲ್ಲಿಯೇ ಬಿದ್ದಿತ್ತು. ಉದ್ದವಾಗಿ ಬೆಳೆದ ಅಕೇಶಿಯಾ ಗಿಡದಮೇಲೆ ಸಳ್ಳೆ ಮರದ ಬಲವಾದ ಕೊಂಬೆ ಹೋಗಿ ಕುಳಿತಿದ್ದರಿಂದ ಬಳಲೆಯಾಗಿದ್ದ ಅಕೇಶಿಯಾದ ತುದಿ ಅಲ್ಲಿಯೇ ಮೇಲೆ ಹಾದು ಹೋಗಿದ್ದ ಹನ್ನೊಂದು ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ತಂತಿಗೆ ತಾಗಿಕೊಂಡಿತ್ತು. ಮಳೆಗಾಲದಲ್ಲಿ ಪದೆ ಪದೆ ಸುಟ್ಟುಹೋಗುವ ಫ್ಯೂಸ್‌ತಂತಿಯನ್ನು ಬದಲಾಯಿಸಲು ಬರುವುದು ರಗಳೆ ಎಂದು ಲೈನ್‌ಮನ್ ದಪ್ಪನೆಯ ವೈರ್ ಸುತ್ತಿದ್ದ ಪರಿಣಾಮವಾಗಿ ಕರೆಂಟ್ ಅರ್ಥ್ ಆಗುತ್ತಿದ್ದರೂ ಫ್ಯೂಸ್ ಹೋಗಿರಲಿಲ್ಲ. ನಾವು ಜೇನು ಸಿಕ್ಕ ಸಂತೋಷದಲ್ಲಿ ಇದ್ಯಾವುದನ್ನೂ ಗಮನಿಸುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಕರೆಂಟ್ ನಮಗೆ ಹೊಡೆದಿತ್ತು. ಅದ್ಯಾವ ಪುಣ್ಯವೋ ನಾವು ಬದುಕುಳಿದದ್ದು. ಇನ್ನು ಜೇನನ್ನು ಪೆಟ್ಟಿಗೆಗೆ ಕೂಡಬೇಕಾದರೆ ಮೆಸ್ಕಾಂಗೆ ಫೋನ್‌ಮಾಡಿ ಕರೆಂಟ್ ತೆಗೆಸಬೇಕು. ಅದಕ್ಕೆ ಕನಿಷ್ಟವೆಂದರೂ ಇನ್ನು ಒಂದು ಘಂಟೆ ಬೇಕು. ಆಗಲೆ ಮಧ್ಯಾಹ್ನ ಹನ್ನೆರಡುವರೆ ಆಗಿತ್ತು. ಏನು ಮಾಡಬೇಕೆಂದು ತೋಚಲಿಲ್ಲ. ಅಷ್ಟರಲ್ಲಿ ಕರೆಂಟ್ ಷಾಕ್‌ನಿಂದ ಕಂಗೆಟ್ಟಿದ್ದ ಸ್ವಾಮಿ,
ಸಾಕು ಮನೆಗೆ ಹೋಗೋಣ ಜೇನೂ ಬೇಡ ಗೀನೂ ಬೇಡ, ಜೀವ ಇದ್ದರೆ ಜೇನುತುಪ್ಪ ಕೊಂಡು ತಿನ್ನಬಹುದು, ಅಷ್ಟಕ್ಕೂ ಮಿಕ್ಕಿ ಜೇನು ಹಿಡಿಯಲೇ ಬೇಕು ಎಂದಾದರೆ ಮಧ್ಯಾಹ್ನದ ಮೇಲೆ ಕರೆಂಟ್ ತೆಗಿಸಿಕೊಂಡು ಬಂದರಾಯಿತು ಈಗ ಹೋಗೋಣ ಬಾ ಎಂದು ಹೊರಟ.
ನನಗೆ ಬರಿಗೈಯಲ್ಲಿ ಮನೆಗೆ ಹೋಗಲು ಸುತಾರಾಂ ಇಷ್ಟವಿರಲಿಲ್ಲ. ಒಮ್ಮೆ ಜೇನು ಹಾರಾಡುತ್ತಿದ್ದ ಸಳ್ಳೆಮರದ ಪೊಟರೆಯತ್ತ ನೋಡಿದೆ. ಅವು ಶಾಂತವಾಗಿದ್ದವು. ಅಲ್ಲೊಂದು ಇಲ್ಲೊಂದು ಹುಳ ಹಾರಾಡುತ್ತಿತ್ತು. ಅಕಸ್ಮಾತ್ ನಾವು ಊಟ ಮಾಡಿ ಬರುವುದರೊಳಗೆ ಅವು ಹಾರಿಹೋದg ಎಂಬ ಸಂಶಯ ಕಾಡಿತು. ಆದರೆ ಅಲ್ಲಿ ಉತ್ತರಿಸಲು ಅನುಭವವಿರುವ ಮತ್ಯಾರೂ ಇಲ್ಲದ್ದರಿಂದ ಮನೆಗೆ ಹೊರಡುವುದು ಅನಿವಾರ್ಯವಾಗಿತ್ತು. ಊಟಮಾಡಿ ಚೆನ್ನನನ್ನೋ ಅಥವಾ ಪ್ರಶಾಂತನನ್ನೊ ಕರೆದುಕೊಂಡು ಬಂದರೆ ಆಯಿತೆಂದು ನಾರಾಯಣಸ್ವಾಮಿಯ ಜೊತೆಗೂಡಿದೆ. ಮನೆಗೆ ಹೊರಟಾಗ ನಾನು ಎಸೆದ ಕತ್ತಿಯ ನೆನಪಾಗಿ ವಾಪಾಸು ಹೋದೆ, ಅದು ಎಷ್ಟು ರಭಸದಿಂದ ಕೈಬಿಟ್ಟಿತ್ತೋ ಏನೋ ಎಷ್ಟು ಹುಡುಕಿದರೂ ಸಿಗಲಿಲ್ಲ. ಕುರುಚಲು ಗಿಡದ ಮರೆಯಲ್ಲಿ ಎಲ್ಲೋ ಕಣ್ಮರೆಯಾಗಿತ್ತು. ನಾರಾಯಣಸ್ವಾಮಿ ಕೈಯಲ್ಲಿ ಸೊಂಟ ನೀವಿಕೊಳ್ಳುತ್ತಾ ತನ್ನಷ್ಟಕ್ಕೆತಾನು ಅದೇನೋ ಗೊಣಗಿದ. ಕಂಡೋರಿಗೆ ಉಪಕಾರ ಅಂತಲೋ ಎನೋ ಅಂದಂತೆ ಕೇಳಿಸಿತು. ಬಹುಶಃ ನನಗೆ ಜೇನು ತೋರಿಸಲು ಹೋಗಿ ತಾನು ಪೆಟ್ಟುತಿನ್ನುವಂತಾಯಿತಲ್ಲ ಎಂದು ಬೇಸರಿಸಿಕೊಂಡನೇನೋ ಎಂದು ನನ್ನ ಜೇನಿನ ಹುಚ್ಚಿನಿಂದ ನೀನು ಪೆಟ್ಟು ತಿನ್ನುವಂತಾಯಿತಲ್ಲ ಛೆ ಎಂದು ಹೇಳಿದೆ. ಅದಕ್ಕೆ ಆತ ಹಾಗೆನಿಲ್ಲ ಬಿಡು ಇವೆಲ್ಲಾ ಮಾಮೂಲಿ, ನೀನು ಬೇಕಂತಲೇ ಮಾಡಿಲ್ಲವಲ್ಲ, ಸದ್ಯ ಇಷ್ಟರಲ್ಲೇ ಗ್ರಹಚಾರ ಹೋಯಿತು, ನನಗೆ ಅದಕ್ಕೇನು ಬೇಸರವಿಲ್ಲ ಬಿಡು, ಕತ್ತಿ ಸಿಗದಿದ್ದರೆ ಹೋಗಲಿ ಎಂದು ಹೇಳಿದ. ಉಪಚಾರಕ್ಕಾಗಿ ಹಾಗೇನೋ ಹೇಳಿದ, ಆದರೆ ಅವನ ಮುಖಚರ್ಯೆ ನನ್ನಮೇಲೆ ಆತ ಬೇಸರ ಮಾಡಿಕೊಂಡಂತೆ ನನಗೆ ಅನಿಸಿತು. ವಿನಾಕಾರಣ ಅವನಿಗೆ ತೊಂದರೆಕೊಟ್ಟೆನಲ್ಲಾ ಎಂದು ನನಗೆ ಬೇಸರವಾಗತೊಡಗಿತು. ಆವಾಗ ನನಗೆ ಆನಂದರಾಮ ಶಾಸ್ತ್ರಿ ನೆನಪಾದ.
* * * * *
ತ್ರಿಯಂಬಕಂ ಯಜಾಮಹೆ ಸುಗಂಧಿಂ ಪುಷ್ಠಿವರ್ಧನಂ ಊರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷಿ ಯಮಾಮೃತಾತ್ ಈ ಶ್ಲೋಕ ಕೇಳಿದ್ದೀರಲ್ಲ?, ಶಾಸ್ತ್ರಿ ನನ್ನನ್ನು ಪ್ರಶ್ನಿಸಿದ್ದ.
ಹೌದು, ಬಹಳ ಹಿಂದೆ ಚಿಕ್ಕವನಿದ್ದಾಗ ಕೇಳಿ ಕಷ್ಟಪಟ್ಟು ಕಲಿತಿದ್ದೇನೆ
ಆದರೆ ನಾನು ಕಲಿತಿಲ್ಲ, ಆದರೂ ಇಂತಹಾ ಹಲವಾರು ಶ್ಲೋಕಗಳನ್ನು ಹೇಳಬಲ್ಲೆ ಎಂದ ಆನಂದರಾಮಶಾಸ್ತ್ರಿ. ನನಗೆ ಆತನ ಮಾತು ಒಗಟಾಗಿ ತೋಚಿತು. ಕಲಿತಿಲ್ಲ ಎನ್ನುತ್ತಾನೆ, ಆದರೆ ಅಸ್ಖಲಿತವಾಗಿ ಓತಪ್ರೋತವಾಗಿ ಶ್ಲೋಕ ಹೇಳುತ್ತಾನೆ, ಅದು ಹೇಗೆ ಸಾಧ್ಯ ಎಂದೆನಿಸಿ ಮುಗುಳ್ನಗುತ್ತಾ ಮತ್ತೆ ಶ್ಲೋಕ ಕಂಠಪಾಠ ಮಾಡದೆ ಅಷ್ಟೊಂದು ಸುಲಲಿತವಾಗಿ ಹೇಳಿದ ಪರಿ ಕುತೂಹಲದಿಂದ ಕೇಳಿದೆ.
ಶ್ಲೋಕ ಹೇಳಲು ಕಂಠಪಾಠವೇ ಆಗಬೇಕಾಗಿಲ್ಲ, ಹೊಸ ಹೊಸ ಸಿನಿಮಾ ಹಾಡುಗಳನ್ನು ಹಾದಿಹೋಕರೆಲ್ಲಾ ಹಾಡಿಕೊಳ್ಳುತ್ತಾ ಹೋಗುತ್ತಾರಲ್ಲ ಅವರೇನು ಅವುಗಳನ್ನು ಕಂಠಪಾಠ ಮಾಡುತ್ತಾರೆ ಎಂದುಕೊಂಡಿರಾ?, ಹಾಗೆನಿಲ್ಲಾ ಆಸಕ್ತಿಯಿಂದ ಒಂದೆರಡು ಬಾರಿಕೇಳಿರುತ್ತಾರೆ.
ಹಾಗಾದರೆ ನೀವೂ ಆ ಶ್ಲೋಕವನ್ನು ಸಿನಿಮಾದ ಹಾಡಿನಂತೆ ಆಸಕ್ತಿಯಿಂದ ಕೇಳಿದ್ದಕ್ಕೆ ಬಂತಾ?
ಇಲ್ಲ.... ಸಿನೆಮಾ ಹಾಡಿನಲ್ಲಿನ ರಾಗಗಳು ನಮ್ಮಲ್ಲಿ ಆಸಕ್ತಿಯನ್ನು ಮೂಡಿಸುತ್ತವೆ, ಆದರೆ ಶ್ಲೋಕಗಳ ಮೆಲೆ ಆಸಕ್ತಿ ಮೂಡುವುದು ಅಪರೂಪ
ಮತ್ತೆ?,
ನನ್ನ ಬಾಲ್ಯದಲ್ಲಿ ಅಜ್ಜ ದಿನನಿತ್ಯ ಇಂತಹಾ ಹಲವಾರು ಶ್ಲೋಕಗಳನ್ನು ತಮ್ಮಷ್ಟಕ್ಕೆ ಹೇಳುತ್ತಿದ್ದರು. ಅದು ಹಾಗೆಯೇ ನನ್ನ ಮಿದುಳಿನಲ್ಲಿ ತನ್ನಷ್ಟಕ್ಕೆ ಅಚ್ಚಾಯಿತು. ಅದು ನನಗೆ ಬೇಕಾ, ಶ್ಲೋಕಗಳ ಅವಶ್ಯಕತೆ ನನಗೆ ಇದೆಯಾ ಅಂತಲೂ ನನಗೆ ತಿಳಿಯದ ವಯಸ್ಸು ಅದು. ಆದರೆ ಈಗ ಶ್ಲೋಕಗಳ ಅವಶ್ಯಕತೆ ನನಗಿಲ್ಲ ಎಂದರೂ ನನ್ನಿಂದ ಅದನ್ನು ಮರೆತುಬಿಡಲು ಆಗುವುದಿಲ್ಲ. ಬಾಯಲ್ಲಿ ಹೇಳದೆ ಇರಬಹುದು, ಆದರೆ ಅಜ್ಜನ ನೆನಪಾದಾಗಲ್ಲೆಲ್ಲಾ ಶ್ಲೋಕಗಳನ್ನು ಮನಸ್ಸು ಗುಣುಗುಣಿಸಲು ಪ್ರಾರಂಭಿಸಿಬಿಡುತ್ತೆ. ಮನುಷ್ಯನಲ್ಲಿನ ಬೇಸರವೂ ಹಾಗೇನೆ.
ಪ್ರಪಂಚದ ಯಾವ ಜೀವಿಗಳಲ್ಲಿಯೂ ಇರದ ಮನುಷ್ಯನಲ್ಲಿ ಮಾತ್ರ ನೆಲೆಗೊಂಡಿರುವ ಮತ್ತು ಅವನ ಜೀವನದ ಬಹುಪಾಲು ಆನಂದದ ಕ್ಷಣಗಳನ್ನು ತಿನ್ನುತ್ತಿರುವ ಅವಸ್ಥೆಯೇ ಬೇಸರ. ಕೋಪ ಸರಿ, ದುಃಖ ಸರಿ, ಆನಂದ ಸರಿ. ಅವೆಲ್ಲಾ ಪ್ರಕೃತಿಯೇ ಕಲ್ಪಿಸಿದ ವ್ಯವಸ್ಥೆ ಆದರೆ ಈ ಬೇಸರ ಎನ್ನುವುದು ಪರಿಹರಿಸಲಾಗದ ಅವಸ್ಥೆ. ಕೋಪ ಬಂದಾಗ ಹಾರಾಡಿ ಕೂಗಾಡಿ ವ್ಯಕ್ತಪಡಿಸಿಬಿಡಬಹುದು, ಕಣ್ಣೀರಕೋಡಿ ಹರಿಸಿದರೆ ದು:ಖ ಶಮನವಾಗಬಹುದು. ಕುಣಿದು ಕುಪ್ಪಳಿಸಿ ಆನಂದ ಹೊಂದಬಹುದು. ಆದರೆ ಬೇಸರ ಎನ್ನುವುದು ಮಾತ್ರ ವಿಚಿತ್ರ ಅವಸ್ಥೆ. ಅದಕ್ಕೆ ಬರಲು ಕಾರಣ ಇರುವುದಿಲ್ಲ, ಹೋಗಲೂ ತಿಳಿಯುವುದಿಲ್ಲ. ಹೋದದ್ದೂ ತಿಳಿಯುವುದಿಲ್ಲ. ದುಃಖದಂತಹ ಅನುಭವ ಹಾಗಂತ ದುಃಖವೂ ಅಲ್ಲ, ಮತ್ತು ಅದು ಪ್ರಕೃತಿ ನೀಡಿದ್ದೂ ಅಲ್ಲ ಮನುಷ್ಯ ತಲೆತಲೆಮಾರುಗಳಿಂದ ಸೃಷ್ಟಿಸಿಕೊಂಡ ಅವ್ಯವಸ್ಥೆ.
ಹುಟ್ಟಿದ ಒಂದು ವರ್ಷದವರೆಗೆ ಮಗು ಹಸಿವಾದಾಗ ಅಥವಾ ತನಗೆ ಕಿರಿಕಿರಿಯಾದಾಗ ಅಳುತ್ತದೆ, ಹೆಚ್ಚಿನ ಸಮಯ ನಿದ್ರೆ ಮಾಡುತ್ತದೆ, ಎಲ್ಲವೂ ಸರಿಯಿದ್ದರೆ ಬಾಹ್ಯ ಪ್ರಪಂಚವನ್ನು ನೋಡುತ್ತಾ ಕೈಕಾಲುಗಳನ್ನು ಅತ್ತಿತ್ತ ಆಡಿಸುತ್ತಾ, ಪಿಳಿಪಿಳಿ ಕಣ್ಣುಬಿಟ್ಟು ತನ್ನಷ್ಟಕ್ಕೆ ಮಲಗಿರುತ್ತದೆ. ಬೆಳೆದಂತೆ ತನಗೆ ಬೇಕಾಗಿದ್ದು ಸಿಗದಾಗ ಕೋಪದಿಂದ ರಚ್ಚೆ ಹಿಡಿಯುತ್ತದೆ. ಅಲ್ಲಿಯವರೆಗೆ ಅದು ಸರಿ. ಆದರೆ ತಾಯಿಯಂದಿರು ಬಾಹ್ಯ ಪ್ರಪಂಚದ ಅರ್ಥವಿಲ್ಲದ ನ್ಯೂನತೆಯನ್ನು ಅವರಿಗೂ ಅರಿವಿಲ್ಲದಂತೆ ತುಂಬತೊಡಗುತ್ತಾರೆ. ಗಂಟೆಗಟ್ಟಲೆ ಒಂಟಿಯಾಗಿ ಆಟವಾಡುತ್ತಿದ್ದ ಮಗು ಯಾವುದೋ ಕಾರಣದಿಂದ ಅತ್ತರೆ, ಓಡಿ ಬಂದು ಒಬ್ಬನೆ ಆಡಿ ಬೇಸರ ಆಯಿತಾ ಮಗಾ. ಅಮ್ಮ ನಿನ್ನ ಬಿಟ್ಟು ಹೋಗಿದ್ಲಾ? ಎನ್ನುವ ಸ್ವಗತದ ಮಾತುಗಳನ್ನು ಆಡುತ್ತಾರೆ. ಅಳುವಾಗ ಆಗುವ ಅನುಭವವನ್ನು ಮಗು ಬೇಸರ ಎಂದು ತಪ್ಪಾಗಿ ಗ್ರಹಿಸಿಬಿಡುತ್ತದೆ ಮತ್ತು ಒಂಟಿಯಾಗಿರುವುದು ಎಂದರೆ ಬೇಸರ ಎನ್ನುವ ಭಾವನೆ ಬೆಳೆಯುತ್ತದೆ. ಹಾಗಾಗಿ ಸುಮ್ಮನೆ ಒಂಟಿಯಾಗಿ ಇದ್ದಾಗ ಬೇಸರವಾಗುವುದು ಮತ್ತು ಬೇಸರವಾದಾಗ ಒಂಟಿಯಾಗಿ ಸುಮ್ಮನೆ ಕೂರುವುದು ಎಂಬ ಹೊಸ ವಿಧಾನ ಚಾಲ್ತಿಗೆ ತನ್ನಷ್ಟಕ್ಕೆ ಬಂತು.
ಸಣ್ಣ ವಯಸ್ಸಿನಿಂದಲೇ ದಿನನಿತ್ಯ ಹಲವಾರು ಬಾರಿ ಬೇಸರ ಎಂಬ ಶಬ್ದವನ್ನು ಕೇಳಿ ನಿಧಾನವಾಗಿ ಬೇಸರ ಎಂಬ ಅರ್ಥವಿಲ್ಲದ ಹೊಸ ಅನುಭವ ಮಗುವಿನ ಮನಸ್ಸಿನಲ್ಲಿ ಅಚ್ಚುಬೀಳತೊಡಗುತ್ತದೆ. ಶುದ್ಧಮನಸ್ಸಿಗೆ ಅವಶ್ಯಕತೆ ಇದೆಯೋ ಇಲ್ಲವೋ ಕಿವಿಯ ಮೂಲಕ ಶ್ಲೋಕ ಹೇಗೆ ತಾನಾಗಿಯೇ ಅಚ್ಚೊತ್ತುತ್ತದೆಯೋ ಅದೇರೀತಿ ಬೇಸರವೆಂಬ ಶಬ್ದಕ್ಕೆ ದುಃಖದ ಅನುಭವ ಸೇರಿ ನೆನಪಿನಾಳಕ್ಕೆ ಇಳಿದುಬಿಡುತ್ತವೆ.ಪ್ರಕೃತಿ ಸಹಜವಾಗಿದ್ದದ್ದು ಮೂರೇ ವಿಧಾನ. ಒಂದು ಕೋಪ, ಇನ್ನೊಂದು ದುಃಖ, ಮತ್ತೊಂದು ಸಮಾಧಾನ. ಕೋಪವನ್ನು ಕೂಗಾಡಿಯೂ, ದುಃಖವನ್ನು ಕಣ್ಣೀರಿನ ಮೂಲಕವೂ ಹೊರಹಾಕಿಕೊಳ್ಳಬಹುದು. ಅವುಗಳು ಶಾಶ್ವತ ಅವಸ್ಥೆಗಳಲ್ಲ. ಆದರೆ ಕಾರಣವಿಲ್ಲದ ಬೇಸರವನ್ನು ಅನುಭವಿಸಬಹುದೇ ವಿನಃ ಹೊರಹಾಕಲು ಸಾಧ್ಯವಿಲ್ಲ. ಹಾಗಾಗಿ ಬೇಸರ ಎನ್ನುವುದು ನಮ್ಮ ಕಳ್ಳಮನಸ್ಸಿನ ತಪ್ಪುಕಲ್ಪನೆಯ ಸೃಷ್ಟಿಯೇ ಹೊರತು ಸಹಜ ಅಲ್ಲ. ಮನಸ್ಸಿನಿಂದ ಯಾವುದನ್ನು ಹೊರಹಾಕಲು ಸಾಧ್ಯವಿಲ್ಲವೋ ಅದು ನಂತರ ವಿಕೃತಿಯಾಗಿ ಕಾಡತೊಡಗುತ್ತದೆ. ಪ್ರಕೃತಿ ತಾನಾಗಿ ಆರಂಭಿಸಿದ ಎಲ್ಲಾ ವ್ಯವಸ್ಥೆಗೆ ಅಂತ್ಯವನ್ನೂ ಕಲ್ಪಿಸಿದೆ. ಆದರೆ ಮನುಷ್ಯನ ತಪ್ಪುಗ್ರಹಿಕೆಯಿಂದಾದ ದೋಷಕ್ಕೆ ಅಂತ್ಯವೇ ಇಲ್ಲ. ಇದಕ್ಕೆಲ್ಲಾ ಮನುಷ್ಯ ತಾನು ಬುದ್ದಿಜೀವಿ ಎಂದು ತಿಳಿದುಕೊಂಡಿದ್ದೇ ಕಾರಣ.
ಆ ಕಾರಣಕ್ಕೆ ನನಗೆ ಜೇನಿನ ಜೀವನ ಅತ್ಯಂತ ಇಷ್ಟವಾಗುವುದು. ಪ್ರಕೃತಿ ಕಲ್ಪಿಸಿಕೊಟ್ಟ ಜೀವನದ ವ್ಯವಸ್ಥೆಯನ್ನು ಅವು ಚಾಚೂ ತಪ್ಪದಂತೆ ಅನುಸರಿಸುತ್ತಿವೆ. ಅವು ತಮ್ಮ ಯೋಚನಾ ಸಾಮರ್ಥ್ಯವನ್ನು ಜೀವನದ ನಿಯಮಗಳ ಮೇಲೆ ಹೇರಿಲ್ಲ. ಮನುಷ್ಯನಂತೆ ಕುಟುಂಬವ್ಯವಸ್ಥೆಯಲ್ಲಿ ಬದುಕುತ್ತಿರುವ ಅವುಗಳಿಂದ ನಾವು ಇಂದೂ ಕೂಡ ಆನಂದದಿಂದ ಬದುಕುವುದನ್ನು ಕಲಿಯಬಹುದು. ಅವುಗಳಲ್ಲಿನ ಮೂಲತತ್ವವನ್ನು ನಾವು ಇವತ್ತೂ ಸುಲಭದಲ್ಲಿ ಪಾಲಿಸಬಹುದು. ಆ ಆನಂದದ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕಾದ ಆಸೆಯಿದ್ದವರು ಒಮ್ಮೆ ಜೇನಿನೊಳಗೆ ಪರಕಾಯಪ್ರವೇಶ ಮಾಡಿಬರಬೇಕಷ್ಟೆ. ಅದು ಭವಿಷ್ಯದ ದೃಷ್ಟಿಯಿಂದಲಾದರೂ ಉತ್ತಮಮಾರ್ಗ.
ಪರಕಾಯ ಪ್ರವೇಶ... ಭವಿಷ್ಯ.. ಮಾಟಮಂತ್ರ ! ಇಂದಿನ ಕಾಲದಲ್ಲಿಯೂ ನೀವು ಅಂತದ್ದನ್ನೆಲ್ಲಾ ನಂಬುತ್ತೀರಾ... ಕೂಡಲೆ ಕುತೂಹಲದಿಂದ ಕೇಳಿದೆ.
ಇಂದೂ ನಂಬುತ್ತೀರಾ ಎಂದರೆ ನಿಮ್ಮ ಅರ್ಥದಲ್ಲಿ ಅದು ಸುಳ್ಳು, ಆಗದು ಎಂಬ ಅಪನಂಬಿಕೆ ಇರುವಂತಿದೆ
ಮತ್ತಿನ್ನೇನು ಅವೆಲ್ಲಾ ಕಲ್ಪನಾಲೋಕದ ಕಥೆಗಳಲ್ಲಿ ಮಾತ್ರ ಸಾಧ್ಯವಲ್ಲವೇ?
ಹಾಗಂತ ಸುಲಭವಾಗಿ ಅಲ್ಲಗಳೆಯಬೇಡಿ, ನಾನು ನಿಮಗೆ ಭವಿಷ್ಯ ಮತ್ತು ಪರಕಾಯಪ್ರವೇಶದಂತಹ ಹಲವಾರು ವಿಷಯಗಳ ನಿಜವಾದ ಅರ್ಥ ಮತ್ತು ಇಂದಿನ ಅನರ್ಥ ಎರಡನ್ನೂ ವಿಷದಪಡಿಸುತ್ತೇನೆ ಎಂದು ಮುಗುಳ್ನಕ್ಕ.
* * * * *
ಶಾಸ್ತ್ರಿ ಅಂದು ಹೇಳಿದ ವೇದಾಂತಗಳು ನೂರಕ್ಕೆ ನೂರು ಒಪ್ಪಿಕೊಳ್ಳುವಂತಿಲ್ಲದಿದ್ದರೂ ಅವನ ತರ್ಕದ ರೀತಿ ಅಲ್ಲಗಳೆಯುವಂತಿರಲಿಲ್ಲ. ಅಥವಾ ಜೇನಿನ ಪುಸ್ತಕ ನಾನು ಓದಿಲ್ಲದಿದ್ದರೆ, ಅದರ ಬಗ್ಗೆ ಆಸಕ್ತಿ ಇಲ್ಲದಿದ್ದರೆ, ಅವನ ಹೋಲಿಕೆಗಳು ಅರ್ಥವಾಗದೆ ನನಗೂ ಅದು ಪೇಲವವೆಂದು ಅನ್ನಿಸಿಬಿಡುತ್ತಿತ್ತು. ಕಾರಣವಿಲ್ಲದ ಬೇಸರ ಹಲವು ಬಾರಿ ನನ್ನನ್ನೂ ಕಾಡುತ್ತಿತ್ತು. ಈಗಲಾದರೂ ನನ್ನ ಬೇಸರಕ್ಕೆ ಸಣ್ಣದೊಂದು ಕಾರಣವಿತ್ತು, ಆದರೆ ಬಹಳಷ್ಟು ಸಾರಿ ನನ್ನ ಬೇಸರಕ್ಕೆ ಕಾರಣವೂ ಇರಲಿಲ್ಲ ಮತ್ತು ಪರಿಹಾರಕ್ಕೆ ಉತ್ತರವೂ ಇರಲಿಲ್ಲ. ನಾರಾಯಣ ಸ್ವಾಮಿ ಬೇಸರಮಾಡಿಕೊಂಡನೇನೋ ಎಂದು ಊಹಿಸಿ ಅದಕ್ಕಾಗಿ ನಾನು ಬೇಸರಮಾಡಿಕೊಳ್ಳುವಷ್ಟರ ಮಟ್ಟಿಗೆ ಬೇಸರಕಾಡುವ ಹುಟ್ಟುಸ್ವಭಾವ ನನ್ನದಾದ್ದರಿಂದ, ಆನಂದರಾಮ ಶಾಸ್ತ್ರಿಯ ವೇದಾಂತ ನೆನಪಾಗಿ ಅತ್ಯಂತ ಸುಲಭವಾಗಿ ಬೇಸರವನ್ನು ನೀಗಿಕೊಂಡು ಊಟಮಾಡಿ ಬರಲು ಮನೆಗೆ ಹೋದೆ.
* * * * (ಮುಂದುವರೆಯುತ್ತದೆ)
ಹಿಂದಿನ ಓದಿಗೆhttp://shreeshum.blogspot.com/2010/08/blog-post_31.html