Tuesday, February 9, 2010

ಅಪ್ಪಿಯೂ ಕೆರೆ ಕುಂಟೆಯೂ


ನೀರೆಂದರೆ ಭಯವೇನೆ... ಆದರೂ ಸ್ವಲ್ಪವೇ ಸ್ವಲ್ಪ ನೀರಿನ ಚಟ ಹತ್ತಿತೆಂದರೆ ಅದರ ಮಜ ಅನುಭವಿಸದವರಿಗೆ ಗೊತ್ತು. ಇಳಿಯುವ ಮುಂಚೆ ಛಳಿ ಛಳಿ ಛಳಿ ಅಯ್ ಅಮ್ಮಾ ಇಲ್ಲಪ್ಪ ನನ್ನ ಬಳಿ ಸಾದ್ಯವಾಗದು ಅಂತೆಲ್ಲ ಅನ್ನಿಸುವುದು ಇದೆ. ಆದರೆ ಒಮ್ಮೆ ಧುಮಿಕಿದರೆ ಆಮೇಲೆ ನೀರಿಗಿಳಿದಮೇಲೆ ಛಳಿಯ...... .
ನಾವೂ ಸಣ್ಣಕ್ಕಿದ್ದಾಗ ನೀರಿನಲ್ಲಿ ಆಟವಾಡಿದ್ದುಂಟು. ತೋಟದ ಮೈನ್ ಕಾದಿಗೆಯ ಹೆಗ್ಗಟ್ಟಿನಲ್ಲಿ ನಮ್ಮದು ಹಾರಾಟಾ ನೀರಾಟ ಎಲ್ಲ. ಹೆಚ್ಚೆಂದರೆ ನಾಲ್ಕು ಅಡಿ ಆಳದ ನೀರಿರುವ ಹೆಗ್ಗಟ್ಟು ಅಂದು ನಮಗೆ ದೊಡ್ಡ ಸಮುದ್ರವಿದ್ದಂತೆ. ದಡಾಲ್ ಎಂದು ಧುಮುಕಿದ ಮರುಕ್ಷಣ ಕೆಂಪುಬಣ್ಣಕ್ಕೆ ತಿರುಗುವ ನಾಲ್ಕಡಿ ನೀರಿನಲ್ಲಿ ಪಚ ಪಚ ಅಂತ ಕೈಕಾಲು ಬಡಿದು ಮನೆ ಸೇರಿದರೆ ಅಂದೆಲ್ಲಾ ಮೈ ತುರಿಕೆ. ಆನಂತರ ಸ್ವಲ್ಪ ಪ್ರಮೋಷನ್. ಬಾಳೆ ದಿಂಡನ್ನು ಕಡಿದು ಅದಕೆ ಹಗರು ಹೊಡೆದು ಅದನ್ನು ಹಿಡಿದುಕೊಂಡು ಹತ್ತಡಿ ಆಳದ ಯಕ್ಷಮ್ಮನ ಕೆರೆ ನಮ್ಮ ಸ್ವಿಮಿಂಗ್ ಪೂಲ್. ಅಲ್ಲಿ ನೀರು ಸ್ವಚ್ಛ. ಹೀಗೆಲ್ಲಾ ಮಾಡಿ ಈಜು ಕಲಿತಿದ್ದಾಗಿದೆ.
ಈಗ ಮಗ ಈಸಬೇಕು ಅಂದಾಗ ಅಪ್ಪಯ್ಯನೆಂಬ ಅಪ್ಪಯ್ಯನಾದ ನಾನು ಸಕಲ ವ್ಯವಸ್ಥೆ ಮಾಡಿಕೊಡಬೇಕು. ಜಾಕೆಟ್ ಸ್ವಚ್ಛನೀರಿನ ಕೆರೆ ಆನಂತರ ಅಪ್ಪಿಯ ಅಮ್ಮನ ಅಣತಿಯಂತೆ ಅಪ್ಪಿ ಅತ್ತಿತ್ತ ಆಗದಂತೆ ಅಪ್ಪಿಯ ಅಪ್ಪನಾದ ನನ್ನಿಂದ ಸರ್ಪಗಾವಲು( ಅದು ಕೆರೆಯಾದ್ದರಿಂದ ನೀರುಳ್ಳೆಗಾವಲು ಅಂತ ಬದಲಾಯಿಸಿಕೊಳ್ಳಿ)
ಇರಲಿ ಕಾಲಕ್ಕೆ ತಕ್ಕಂತೆ ಅವೆಲ್ಲಾ . ವಿಷಯ ಅದೆಲ್ಲ ಈ ನೀರಿನಲ್ಲಿ ಈಸು ಇದೆಯಲ್ಲಾ ಪ್ರಕೃತಿ ಸಕಲ ಪ್ರಾಣಿಗಳಿಗೆ ಸಹಜವಾಗಿಟ್ಟಿದೆ. ಹುಟ್ಟಾ ಸಣ್ಣ ನೀರನ್ನೇ ನೋಡಿರದ ನಾಯಿಯನ್ನು ನೀರಿಗೆಸೆದರೆ ಪಟಪಟ ಈಸುತ್ತಾ ಕ್ಷಣಮಾತ್ರದಲ್ಲಿ ದಡ ಸೇರಿಬಿಡುತ್ತದೆ. ದನ ಎಮ್ಮೆ ಕುದುರೆ ಯಾವುದೇ ಇರಲಿ ಅದು ಹೀಗೆಯೇ. ಆದರೆ ಅದೇ ವರ್ಗಕ್ಕೆ ಸೇರಿದ ಪ್ರಾಣಿಯಾದ ಮನುಷ್ಯನಾದ ನಮಗೆ ಮಾತ್ರಾ ಹಾಗಲ್ಲ. ಅದೊಂದು ವಿದ್ಯೆ ಅದನ್ನು ಕಲಿಯಬೇಕು ಅಂಬ ಭಯಬಿತ್ತಲಾಗಿದೆ ಬಿಂಬಿಸಲಾಗಿದೆ.
ವಾಸ್ತವ ಹಾಗಲ್ಲ. ನೀರೆಂಬ ನೀರಿನಲ್ಲಿ ನಮ್ಮ ಭಯ ನಮ್ಮನ್ನು ಮುಳುಗಿಸುತ್ತದೆ ಧೈರ್ಯ ನಮ್ಮನ್ನು ತೇಲಿಸುತ್ತದೆ. ಧೈರ್ಯ ಎಂಬುದು ಮಟಾಮಾಯವಾದ್ದರಿಂದ ಈಸನ್ನು ನಾವು ಕಲಿಯಬೇಕಿದೆ. ಕಲಿತು ತೇಲಬೇಕಿದೆ. ತೇಲಿ ಸ್ವರ್ಗ ಸುಖವನ್ನು ಅನುಭವಿಸಬೇಕಿದೆ.
ತಲೆತಲಾಂತರದಿಂದ ಭಯದ ಬೀಜ ಮನುಷ್ಯನ ಜೀನ್ ಗಳಲ್ಲಿ ಹೊಕ್ಕು ಪ್ರಕೃತಿ ಪುಕ್ಕಟ್ಟೆ ನೀಡಿದ್ದ ಶಕ್ತಿಯನ್ನು ನಾವು ಹುಲುಮಾನವರಿಗೆ ಹಣ ಕೊಟ್ಟು ಕಲಿಯಬೇಕಾದ್ ಪರಿಸ್ಥಿತಿ ಬಂದಿದೆ. ಹಾಗಂತ ಇದನ್ನು ಓದಿದ ನೀವು ನನಗೆ ಭಯ ಇಲ್ಲಪ್ಪ ಎಂದು ದುಡುಂ ಎಂದು ನೀರಿನಲ್ಲಿ ಹಾರಿಬಿಟ್ಟೀರಿ. ಹಾರಿದಮೇಲೆ ಅವರು ಇವರು ಹೇಳಿದ ಕತೆ ನೇನಪಾಗಿ ಗಟಗಟ ನೀರು ಕುಡಿದು ಹೊಗೆಹಾಕಿಸಿಕೊಳ್ಳಬೇಕಾಗುತ್ತದೆ. ಹೀಗೆ ನಾವು ನೀವು ಮತು ನಮ್ಮ ಮರಿ ಮಕ್ಕಳವರೆಗೂ ನೀರೆಂದರೆ ಭಯ ಅಲ್ಲ ಸಹಜ ಎಂದು ಹೇಳುತ್ತಾ ಸಾಗಿದರೆ ಮುಂದೆ ಯಾವುದೋ ಪೀಳಿಗೆಯಲ್ಲಿ ಧೈರ್ಯ ಬರಬಹುದು. ಅಲ್ಲಿಯವರೆಗೆ ಕಾಯುವುದು ನಮ್ಮ ನಿಮ್ಮ ಕೈಯಲಿ ಆಗದ ಕೆಲಸ. ಹಾಗಾಗಿ ಈಗ ಕಲಿಯುವುದೇ ಲೇಸು. ಕಲಿತು ಮಜ ಅನುಭವಿಸುವುದೇ ಮಜ. ಆಗ ಧೈರ್ಯ ಹುಟ್ಟುತ್ತದೆ ಮನಸ್ಸಿನಾಳದಲ್ಲಿ ಅದು ಮೆದುಳಮೂಲಕ ರಕ್ತಕ್ಕೆ ಇಳಿದು ನಿಮ್ಮ ಪೀಳಿಗೆಯಲ್ಲಿ ಮುಂದುವರೆದರೆ ಆಗ " ನೀರೆಂದರೆ ಖುಷಿಯೇನೆ ತಕದಿಮಿ ತಕದಿಮಿ ಮಜವೇನೆ..." ಅಂತ ಹಾಡಬಹುದು.

2 comments:

ಯಜ್ಞೇಶ್ (yajnesh) said...

ಸೂಪರ್ ಲೇಖನ..

ನಂಗೆ ಇನ್ನೂ ಈಜಕ್ಕೆ ಬತ್ತಲ್ಲೆ ಮಾರಾಯ :(

ಕಲಿಯೋ ಟೈಮ್ ನಲ್ಲಿ ಮನೇಲಿ ಕೊಳಕು ಹೊಳೆನಲ್ಲಿ ಯಾರ್ಯಾರು ಏನೇನು ಮಾಡಿರ್ತ್ವೋ ಅಂತ ಮನೇಲಿ ಎಲ್ಲಾ ಬೈದಿದ್ದರಿಂದ ಇನ್ನೂ ಕಲಿಯಕೆ ಆಗಲ್ಲೆ. ಇನ್ನೂ ಬೆಂದಕಾಳೂರಲ್ಲಿ ಹೋಗಿ ಕಲಿಯಕೆ ಸೋಮಾರಿತನ.. ನೀನು ಜವಾಬ್ದಾರಿಯುತ ಅಪ್ಪಯ್ಯ ಆಗಿ ಮಗಂಗೆ ಈಜು ಕಲ್ಸಿದ್ದು ಗ್ರೇಟ್....

ನಿನ್ನ ಈ ಲೇಖನ ನಂಗೆ ನಾ ಈಜು ಕಲಿತಿದ್ದು ಅಥವಾ ಕಲಿಯಲು ಪ್ರಯತ್ನ ಪಟ್ಟಿದ್ದನ್ನು ಬರೆಯಕೆ ಪ್ರೇರಣೆ ನೀಡ್ತು

Mruthyu said...

ಪ್ರಕೃತಿ ಸಹಜವಾದ ಈಜನ್ನು ಮಾತ್ರವಲ್ಲ ನಾವು ಮರೆತಿದ್ದು..ಇನ್ನೂ ಎಷ್ಟೆಷ್ಟೋ...ಸಹಜ ಪ್ರಕೃತಿಯನ್ನು ಮರೆಯುವುದೇ ನಾಗರಿಕತೆಯ ಮುಖ್ಯಲಕ್ಷಣವಿರಬಹುದು....ನಾವೆಲ್ಲ ಸಿಕ್ಕಾಪಟ್ಟೆ ನಾಗರೀಕರಾಗಲು ಒದ್ದಾಡುತ್ತಿದ್ದೇವಲ್ಲವಾ?