Wednesday, June 23, 2010

ನನ್ನದೊಂದು....................

"ನಮಸ್ಕಾರ ನನ್ನ ಹೆಸರು ................. ಅಂತ, ನಾನು ಬರಹಗಾರ, ಫ್ರೀಲಾನ್ಸರ್ , ನಿನ್ನೆ " ಕಡಲಮುತ್ತು" ಅಂತ ಕತೆ ಬಂದಿದೆ, ನೀವು ನೋಡಿಲ್ವಾ? "
"ಓಹೋ"
"ನನ್ನ ಕಥೆ ಕವನ ಎಲ್ಲಾ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ"
"ಓ ಹೌದಾ"
"ನಾಳೆ ಪುರವಣಿಯಲ್ಲಿ ಇನ್ನೊಂದು ಪ್ರಕಟವಾಗುತ್ತದೆ, ಒಂದು ಬ್ಲಾಗೂ ದಿನಾ ಅಪ್ಡೇಟ್ ಮಾಡ್ತೀನಿ"
" ಒಹ್ ಹೌದಾ , ಜೀವನಕ್ಕೆ ಏನು ಮಾಡ್ಕೋಂಡಿದೀರಾ?.
"........................"
ಎಂಬಲ್ಲಿಗೆ ಈ ಬರಹಗಾರನ ಮಾತು ......!
ನಾನು ಕೇಳಿದಂತೆ ಕಂಡಂತೆ ಬರಹಗಾರರ ದೊಡ್ಡ ದೌರ್ಬಲ್ಯವೆಂದರೆ " ನನ್ನದೊಂದು ಕತೆ ಬಂದಿದೆ ನೋಡಿದಿರಾ?" ಎಂಬ ಪ್ರಶ್ನೆ. ಇದು ತಿಂಗಳ ಸಂಬಳಕ್ಕಾಗಿ ಪತ್ರಿಕೆಗಳಲ್ಲಿ ಇರುವವರ ಕತೆ ಅಲ್ಲ. ಫ್ರೀ ಲ್ಯಾನ್ಸರ್ ಗಳ ವ್ಯಥೆ. ಬರೆಯುವುದು ಎಂದರೆ ಅದೊಂದು ಚಟ. ಬರೆದು ಬರೆದು ಪ್ರಕಟಣೆಗಾಗಿ ಪತ್ರಿಕೆಗಳಿಗೆ ಕಳುಹಿಸಿ ಆಕಾಶ ನೋಡುತ್ತಾ ಕೂರುವುದು ನಂತರದ ಕೆಲಸ. ಮತ್ತೆ ಪ್ರಕಟವಾದಮೇಲೆ ಅವರಿವರಿಗೆ "ನನ್ನದೊಂದು..." ಅಂತ ಹೇಳುತ್ತಾ ಸಾಗುವುದು ಮಗದೊಂದು ಕಾರ್ಯ. ಹಾಗೆಲ್ಲ ಆದಮೇಲೆ ಓದಿದವರಿಂದ ಶಬ್ಬಾಶ್ ಎನ್ನಿಸಿಕೊಳ್ಳಬೇಕು ಎನ್ನುತ್ತಾ ಅಲೆಯುವುದು ಇನ್ನೊಂದು ಕೆಲಸ. ಹೀಗೆ ಸಾಗುತ್ತಲಿರುತ್ತದೆ ಬರಹಗಾರನ ವರಾತ. ಪ್ರಪಂಚ ತುಂಬಾ ಅಗಾಧವಾದುದು ಇಲ್ಲಿ ಎಲ್ಲರೂ ತಮ್ಮ ಅಸ್ತಿತ್ವಕ್ಕಾಗಿ ತಿಳಿದೋ ತಿಳಿಯದೆಯೋ ಅವಿರತಶ್ರಮ ಹಾಕುತ್ತಿರುತ್ತಾರೆ. ಅಂತಹ ಒಂದು ಶ್ರಮದ ಭಾಗ ಈ "ನನ್ನದೊಂದು...." . ಇಲ್ಲಿ ಚೋಟುದ್ದದ ಹೆಸರಿನ ಹೊರತಾಗಿ ಹಣದ ಪ್ರಸ್ತಾಪ ಕಷ್ಟ. ಎಲ್ಲರ ಪರಿಸ್ಥಿತಿ ತೀರಾ ಭಿನ್ನ ಅಲ್ಲ.
ಇದ್ದಕ್ಕಿದಂತೆ ಮಂಡೆಯಲ್ಲಿ ಪಳಕ್ಕೆಂದು ಮಿಂಚುವ ಯೋಚನೆಗೆ ಅಕ್ಷರ ರೂಪ ಕೊಟ್ಟು ಅದರ ಜತೆ ಒಂದು ಫೋಟೋ ಲಗತ್ತಿಸಿ ಮೈಲ್ ಮಾಡಿದ ತಕ್ಷಣ ಇದು ಯಾವಾಗ ಪ್ರಕಟವಾಗುತ್ತದೆ ಎಂಬ ಚಿಂತೆ ಪ್ರಾರಂಭ. ಪತ್ರಿಕಾಲಯದಲ್ಲಿ ಯಾರಾದರೂ ಪರಿಚಯಸ್ತರಿದ್ದರೆ ಅವರಿಗೊಂದು ಫೋನು. ಮೂರ್ನಾಲ್ಕು ದಿವಸಗಳಕಾಲ ಪ್ರಕಟವಾಗದಿದ್ದರೆ "ನಾನೊಂದು ಕವನ ಕಳುಹಿಸಿದ್ದೆ..." ಅಂತ ಒಂದು ಮೈಲು. ಅಲ್ಲೋ ಪತ್ರಿಕಾಲಯದಲ್ಲಿ ಇಂತಹ ಬರಹಗಾರರ ದಂಡೇ ನಿತ್ಯ ಮೈಲ್ ಮಾಡುತ್ತಲಿರುತ್ತದೆ. ಅವರಾದರೂ ಎಂತ ಮಾಡಬಲ್ಲರು ಪಾಪ. ಅಂತೂ ಇಂತೂ ಕಳುಹಿಸಿದ್ದ ಲೇಖನ ಅಕಸ್ಮಾತ್ ಪ್ರಕಟವಾದರೆ ಶ್ರದ್ದೆಯಿಂದ ಅದನ್ನು ಅಟ್ಯಾಚ್ ಮಾಡಿ ಆಪ್ತಮಿತ್ರರಿಗೆ ಮತ್ತೆ ಮೈಲ್. ಜೀವನದ ಗಡಿಬಿಡಿಯಲ್ಲಿ ಇಂತಹ ಹಲವಾರು ಮೈಲ್ ಇರುತ್ತವೆ ಅದರ ಜತೆ ಇದು ಟ್ರಾಶ್ ಸೇರುತ್ತದೆ. ಇನ್ನು ಕೆಲವರು ಓದದೆ "ಸೂಪರ್" ಅಂತ ವಾಪಾಸು ಮೈಲ್ ಮಾಡುತ್ತಾರೆ ಸೌಜನ್ಯಕ್ಕಾಗಿ. ಇನ್ನು ತೀರಾ ಹತ್ತಿರದವರು ಓದಿ ಎಸ್ ಎಂ ಎಸ್ ಜಡಿಯುತ್ತಾರೆ. ಆವಾಗ ಹೊಟ್ಟೆಯ ಕಳ್ಳಿನಿಂದ ಬುಳ್ ಅಂತ ಸಂತೋಷ ಉಕ್ಕುತ್ತದೆ. ಬಿಡಿ ಅದರ ಮಜವೇ ಮಜ. ಇನ್ನು ಬರಹಗಾರರ ನಿತ್ಯ ದರ್ಶನಕ್ಕೆ ಸಿಗುವ ವ್ಯಕ್ತಿಯಾಗಿದ್ದರೆ ಕೆಲವು ವಿಶ್ ಗಳೂ ದೊರೆಯಬಹುದು. ಆದರೆ ಅಪರೂಪಕ್ಕೊಮ್ಮೆ ವಿಚಿತ್ರಗಳು ಸಂಭವಿಸಿಬಿಡುತ್ತವೆ.
ಮಟಮಟ ಮಧ್ಯಾಹ್ನ ಜೋಂಪು ನಿದ್ರೆಯಲ್ಲಿದ್ದೆ. ಯಾರೋ ಎರಡು ಜನರು ಮನೆಬಾಗಿಲಿಗೆ ಬಂದು ನಿಂತಿದ್ದರು. ಬಾಗಿಲು ತೆರೆದೆ, ಬನ್ನಿ ಎಂದೆ. ಗುರುತು ಪರಿಚಯ ಇದ್ದ ಮುಖ ಆಗಿರಲಿಲ್ಲ. ಕುಳಿತುಕೊಳ್ಳಿ ಅಂತ ಆಸನ ತೊರಿಸಿದೆ.
"ನೀವು ಎಲ್ಲಿಯವರೆಗೆ ಓದಿದ್ದೀರಿ" ಒಬ್ಬರು ಪ್ರಶ್ನಿಸಿದರು. ತಬ್ಬಿಬಾದೆ ಆದರೂ ಮಣ್ಣು ಹೊತ್ತ ವರ್ಷಗಳನ್ನು ಹೇಳಿದೆ. ಅವರು ತೀರಾ ಪರಿಚಯಸ್ತರಂತೆ ಮಾತನಾಡುತ್ತಿದ್ದರು ಹಾಗಾಗಿ ಪರಿಚಯ ಇಲ್ಲ ಅನ್ನಲು ಮುಜುಗರವಾಗಿ ಮುಗುಮ್ಮಾದೆ. ಅವರೇ ಮುಂದುವರೆಸಿದರು, "ನೀವು ಕುವೆಂಪು ರವರ ................. ಪುಸ್ತಕ ಓದಿದ್ದೀರಾ?". ಯಂತ ಹೇಳಲಿ? ನಾನು ಅದನ್ನು ಓದಿರಲಿಲ್ಲ. "ನಿಮ್ಮ ಗುಲ್ಲು ಕತೆ ಓದಿದ್ದೇ, ಅದರಲ್ಲಿ ಬರುವ ಬುಡಾನ್ ಸಾಬಿಯ ಪಾತ್ರ ಬಹಳ ಹಿಡಿಸಿತು" ಎಂದರು. ಆವಾಗ ನಾನು ಟ್ರಾಕ್ ಗೆ ಬಂದೆ, ಓಹ್ ಇವರು ನನ್ನ ಕತಾಪ್ರಿಯರು. " ನನ್ನ ಹೆಸರು ದೂರಪ್ಪನವರ್ ಅಂತ ಜೋಗದಲ್ಲಿ ಗ್ರಂಥಾಲಯ ಅಧಿಕಾರಿ, ನಿಮ್ಮ ಎಲ್ಲಾ ಕತೆಗಳನ್ನು ಓದಿದ್ದೀನಿ, ಇವತ್ತು ಬಂದ "ಬೇಲಿ" ಕತೆ ಚೆನ್ನಾಗಿದೆ, ನಿಮ್ಮ ಶೈಲಿ ಚೆನ್ನಾಗಿದೆ." ನಾನು ಒಳಗೊಳಗೆ ಆಕಾಶದಲ್ಲಿ ತೇಲಾಡುತ್ತಿದ್ದೆ. ಹೀಗೆಲ್ಲಾ ಮನೆಬಾಗಿಲಿಗೆ ಬಂದು (ಕಾರಣ ನಮ್ಮ ಮನೆ ತೀರಾ ಒಳಪ್ರದೇಶದಲ್ಲಿದೆ) ಇವರು ಕಂಗ್ರಾಟ್ಸ್ ಹೇಳಿರಬೇಕಾದರೆ ವಾವ್. ತಕ್ಷಣ ಕಾಫಿ ಚಿಪ್ಸ್ ಆತಿಥ್ಯ ನೀಡಿದೆ. ಅವರು ಅರ್ದ ಘಂಟೆ ಹರಟಿ ಕೊನೆಯದಾಗಿ ಒಂದು ಕಥಾ ಸಂಕಲನ ತನ್ನಿ ವರ್ಷಕ್ಕೆ ಐದು ಕತೆಗಳ ಪುಸ್ತಕವಾದರೂ ಸಾಕು ಎಂದು ಹುರುದುಂಬಿಸಿದರು. ಕಥಾಸಂಕಲನ ತರಬೇಕು ಅನ್ನುವುದು ನನ್ನ ಆಶಯವೂ ಆಗಿತ್ತು, ಆದರೆ ಆರ್ಥಿಕ ಮುಗ್ಗಟ್ಟು ಅವಕಾಶ ನೀಡಿರಲಿಲ್ಲ. ಹೀಗೆ ಐದು ಕತೆಗಳ ಪುಟ್ಟ ಪುಸ್ತಕವಾದರೆ ಪ್ರಯತ್ನಿಸಬಾರದೇಕೆ ಅಂತ ಅನ್ನಿಸಿತು. ಇದೇ ವಿಷಯ ನವ್ಯಾಳ ಜತೆ ಚಾಟ್ ಮಾಡುತ್ತಿದ್ದೆ. "ಅಯ್ಯೋ ಮಾವ ಅದಕ್ಯಾಕೆ ನಾನು ಒಂದಿಷ್ಟು ದುಡ್ಡು ಕೊಡುತ್ತೇನೆ ಅಂದುಬಿಡೋದೆ. ನನ್ನೋಳಗಿನ ನನಗೆ ಛೆ ಅಂತ ಅನ್ನಿಸಿತು. ಇದು ಸರಿಯಾ ಅಂತ ಸಾವಿರ ಬಾರಿ ಪ್ರಶ್ನೆ ಕೇಳಿಕೊಂಡೆ. ಹಿಂದೆ " ಒಂದು ಜೇನಿನ ಹಿಂದೆ" ಅಂತ ಒಂದು ಪುಸ್ತಕ ಪ್ರಕಟಿಸಿ ಕೈ ಸುಟ್ಟುಕೊಂಡಿದ್ದು ನೆನಪಾಯಿತು. ಆವಾಗ ವೆನಿಲಾ ಇತ್ತು ನಡೆಯಿತು. ಈಗ ಹೆಚ್ಚುವರಿ ಆದಾಯ..?. ಇರಲಿ ದೂರಪ್ಪನವರು ಪುಟಕೊಟ್ಟ ಆಸೆಗೆ ನವ್ಯಾಳ ಆಸರೆ ಹುಮ್ಮಸ್ಸು ಬಂತಾದ್ದರಿಂದ ಮುದ್ರಣಾಲಯಕ್ಕೆ ಹೋದೆ. ಮಾದುಗೆ ಎಲ್ಲಾ ಹೇಳಿದೆ. ನವ್ಯಾ ಕೊಟ್ಟ ಹಣ ಅಡ್ವಾನ್ಸ್ ಕೊಟ್ಟೆ, ನಾನು ಒಂದಿಷ್ಟು ಹಣ ಹೊಂಚಿದೆ, ಮಿಕ್ಕದ್ದು ಕಥಾ ಸಂಕಲನ ಹೊರಬಂದಮೇಲೆ ಅಂತ ಮನೆಸೇರಿದೆ.
ಇನ್ನು ಅಪ್ಪಯ್ಯನ ಬಳಿ " ನಾನು ಸಂಸಾರದಿಂದ ಒಂದು ರೂಪಾಯಿ ಹಾಕಿಲ್ಲ, ಪುಸ್ತಕದಿಂದ ಐವತ್ತು ಸಾವಿರ ರೂಪಾಯಿ ಲಾಭವಾಗುತ್ತದೆ" ಎಂದು ಹಳೇ ಸುಳ್ಳು ಹೇಳಬೇಕಾಗಿದೆ. ಒಂದು ಚಿಕ್ಕ ಸಮಾರಂಭ ಮಾಡಿ ಅಲ್ಲಿ ವೇದಿಕೆಯಲ್ಲಿದ್ದವರಿಂದ " ನಮ್ಮೂರಿನ ಆಸ್ತಿ ಇವರು, ಕತೆ ಬರೆಯುವುದೆಂದರೆ ಸಾಮಾನ್ಯವಲ್ಲ, ಅತ್ಯುತ್ತಮ ಕೆಲಸ ಮಾಡಿದ್ದಾರೆ" ಎಂದು ಸುಳ್ಳೆಪಳ್ಳೆ ಹೊಗಳಿಸಿಕೊಳ್ಳಬೇಕಾಗಿದೆ. ಮತ್ತು "ಕಥಾ ಸಂಕಲನ ಹೊರತಂದಿದ್ದೇನೋ ಸರಿ ಜೀವನಕ್ಕೆ ಏನು ಮಾಡಿಕೊಂಡಿದ್ದೀಯಾ?" ಎಂದು ಕೇಳದೆ ಹೀಗೆ ಕಥಾ ಸಂಕಲನ ನಿಜವಾಗಲೂ ಬರಲು ಸಹಕರಿಸಿದವರಿಗೆ ಮನದಾಳದ ನಮನ ಸಲ್ಲಿಸಬೇಕಾಗಿದೆ. ನಂತರ ಮತ್ತೆ ಅಂತಿಮವಾಗಿ "ನನ್ನದೊಂದು ಕಥಾ ಸಂಕಲನ ಬಂದಿದೆ......" ಎನ್ನುತ್ತಾ ಸಾಗಬೇಕಾಗಿದೆ. ಮೈಲ್ ಮಾಡಬೇಕಿದೆ, ಬ್ಲಾಗ್ ಬರೆಯಬೇಕಿದೆ. ದೆ ದೆ ದೆ ದೆ...............

14 comments:

Sushrutha Dodderi said...

;)

ಸಿಂಧು sindhu said...

:) ಒಳ್ಳೆಯದಾಗಲಿ.
ಪುಸ್ತಕದ ಹೆಸರು ತಿಳಿಸಿದರೆ, ಇಲ್ಲಿ ತಗೊಳ್ಳುತ್ತೇನೆ.

ಪ್ರೀತಿಯಿಂದ
ಸಿಂಧು

ವಿ.ರಾ.ಹೆ. said...

;-)

book booked

ಮನದಾಳದಿಂದ............ said...

ಬರಹಗಾರನ ಒಳ ಪುಸ್ತಕ ತೆರೆದು ತೋರಿಸಿದ್ದೀರಾ...........
ನಿಮ್ಮ ಪುಸ್ತಕ ಬೇಗ ಬಿಡುಗಡೆಯಾಗಿ ನಿಮ್ಮ ಅಪ್ಪನಿಗೆ ಹೇಳುವ ಸುಳ್ಳು ನಿಜವಾಗಲಿ.

ಶ್ರೀನಿಧಿ.ಡಿ.ಎಸ್ said...

gud luck!:)

Unknown said...

ಧನ್ಯವಾದಗಳು To
ಸು.ಸಿಂಧು-ವಿರಾಹೆ-ಮನದಾಳದಿಂದ ಮತ್ತು ಶ್ರೀನಿಧಿ

ಸೀತಾರಾಮ. ಕೆ. / SITARAM.K said...

bareyodu ontaraa huchche! chennagi bidisittiddiraa e huchchina mukhaa1

ರಾಜೇಶ್ ನಾಯ್ಕ said...

ಸಂತೋಷದ ವಿಷಯ. ಗುಡ್ ಲಕ್

jithendra hindumane said...

ರಾಘು ಎನಗೊಂದು ಪುಸ್ತಕ ಇಟ್ಟುಬಿಡು. ತುಂಬಾ ಸಂತೋಷದ ವಿಷಯ. ಆದರೆ ಕಾಂಪ್ಲಮೆಂಟರಿ ಕಾಪಿ ಬ್ಯಾಡ.ದುಡ್ಡು ಕೊಟ್ಟು ಓದವು....

ಸಾಗರದಾಚೆಯ ಇಂಚರ said...

All the best

ಯಜ್ಞೇಶ್ (yajnesh) said...

nangu ondu book.. All the best raghu mava

ModMani said...

ಸರ್ ಶುಭವಾಗಲಿ..

Unknown said...

ಧನ್ಯವಾದಗಳು ಟು

ರಾಜೇಶ್ ನಾಯ್ಕ್-ಜಿತು-ಪ್ರ(ಸಾ.ಇಂ)ಯ-ಮತ್ತು ಮೊದ್ಮಣಿ

ಮೃತ್ಯುಂಜಯ ಹೊಸಮನೆ said...

ನಿನ್ನ ಒಂದೂ ಕತೆ ಓದದಿದ್ದರೂ ಭರ್ಜರಿಯಾದ ಮುನ್ನುಡಿ ಬರೆದಿಟ್ಟೆದ್ದೆ. [ಮುನ್ನುಡಿ ಬರೆಯಲು ಕತೆಯ ಬಗ್ಗೆ ನಮಗೆ ಏನು ಅನಿಸುತ್ತೆ ಎಂಬುದಕ್ಕಿಂತ ಕತೆಗಾರನ ಬಗ್ಗೆ ಏನು ಅನ್ನಿಸುತ್ತೆ ಅನ್ನೋದು ಮುಖ್ಯ!].ಪುಸ್ತಕ ತರ್ತಿರೋ ಸುದ್ದಿ ತಿಳಿಸ್ಲೇ ಇಲ್ಲ..