Tuesday, June 22, 2010

ಭಯ ಮತ್ತು ಸತ್ಯ


ಈಜಲು ನೀರಿಗಿಳಿದಾಗ ಸರಳವಾದ ವಾಕ್ಯವೊಂದು ನೀರಿಗಿಳಿಯಲು ಹುಮ್ಮಸ್ಸು ನೀಡುತ್ತದೆ. "ನೋಡ್ರಪ್ಪಾ... ನೀರಿನಲ್ಲಿ ಭಯ ಅನ್ನೋದು ನಿಮ್ಮನ್ನು ಮುಳುಗಿಸುತ್ತದೆ. ಧೈರ್ಯ ಅನ್ನೋದು ನಿಮ್ಮನ್ನು ತೇಲಿಸುತ್ತದೆ" ಎಂದು ಮಾಸ್ಟರ್ ಹೇಳಿದಾಗ ಓಹ್ ಇದಾ ನೀರಿನ ಉಪಾಯ ಎಂದು ಗಟ್ಟಿಯಾಗಿ ನಂಬಿ ದುಡುಂ ಅಂತ ನೀರಿಗೆ ಹಾರಬಹುದು. ಮತ್ತು ಆರಾಮವಾಗಿ ಈಜು ಕಲಿಯಬಹುದು ಹಾಗೂ ಜಯಿಸಬಹುದು. ಅದೇ ರೀತಿ ಮುಂದುವರೆದಾಗ ಈಜು ಬಂತು ಅಂದಾಗ ಅದೇ ಮಾಸ್ಟರ್ " ಅಲ್ಲಪ್ಪಾ ನೀರಿನಲ್ಲಿ ಧೈರ್ಯ ತೇಲಿಸುತ್ತೆ ನಿಜ ಆದರೆ ಹುಂಬ ಧೈರ್ಯವೂ ತೇಲಿಸುತ್ತೆ ಇನ್ನೊಂದು ರೀತಿಯಲ್ಲಿ ಅನ್ನೋದು ನೆನಪಿರಬೇಕು" ಅಂತ ಹೇಳಿದಾಗ ಅದೂ ಸತ್ಯ ಅಂತ ಅನ್ನಿಸುತ್ತದೆ. ಹುಂಬ ಧೈರ್ಯ ದೇಹವನ್ನು ಜೀವವಿಲ್ಲದೇ ತೇಲಿಸುತ್ತದೆ ಎಂಬುದು ಸತ್ಯದ ಮಾತು. ಹಾಗಾಗಿ ನೀರು ಬೆಂಕಿಯ ವಿಷಯಗಳಲ್ಲಿ ಧೈರ್ಯ ಒಳ್ಳೆಯದೇ ಆದರೆ ಹುಂಬ ಧೈರ್ಯ ಖಂಡಿತಾ ಒಳ್ಳೆಯದಲ್ಲ.
ಮನೆಯ ಅಂಗಳದಲ್ಲಿ ಪಟ್ಟಾಂಗ ಹೊಡೆಯುತ್ತಾ ಕುಂತಾಗ ಮಾತಿನ ಚಾಲಾಕಿ ಜನರು ಹೇಳುತ್ತಾರೆ " ಅಲ್ಲ ಭಗವಂತ ಪ್ರಾಣಿಗಳಿಗೆ ಈಜು ಎನ್ನುವುದನ್ನು ಸಹಜವಾಗಿ ಕಲಿಸಿರುತ್ತಾನೆ. ಬೇಕಾದರೆ ನಾಯಿಮರಿಯನ್ನು ನೀರಿಗೆ ಎಸೆಯಿರಿ ಅದು ಪಟಪಟನೆ ಈಜಿಕೊಂಡು ದಡ ಸೇರುತ್ತದೆ. ಆದರೆ ಮನುಷ್ಯನೆಂಬ ಮನುಷ್ಯ ಭಯ ಎಂಬ ವಿಷಬೀಜವನ್ನು ಮನಸ್ಸಿನಾಳಕ್ಕೆ ಬಿತ್ತಿಕೊಂಡಿರುವುದರಿಂದ ಯಾರಾದರೂ ಆತನನ್ನು ಬಲಾತ್ಕಾರವಾಗಿ ನೀರಿಗೆ ದಬ್ಬಿದಾಗ ನೀರಿನಲ್ಲಿ ತಾನು ಸಾಯುತ್ತೇನೆ ಎಂಬ ಒಂದೇ ವಿಷಯದ ನೆನಪಾಗಿ ಕೈಕಾಲು ಆಡಿಸುವುದನ್ನು ನಿಲ್ಲಿಸುತ್ತಾನೆ, ಆಗ ಸಾವನ್ನಪ್ಪುತ್ತಾನೆ". ನಿಜ, ಆ ಮಾತುಗಳು ನಿಜ ಹಾಗಂತ ಅಷ್ಟೆಲ್ಲಾ ಭಾಷಣ ಬಿಗಿಯುತ್ತಿರುವ ಅವರನ್ನು ನೀರಿಗೆ ತಳ್ಳಿದರೂ ಅವರೂ ಕೂಡ ಪತಪತ ಕೈಕಾಲು ಬಡಿದು ಕಣ್ಣುಗುಡ್ಡೆ ಮೇಲಕ್ಕೆ ಸೇರಿಸಿಕೊಳ್ಳುತ್ತಾರೆ. ಅಷ್ಟೆಲ್ಲಾ ತಿಳುವಳಿಕೆ ಇದ್ದ ಅವರೇಕೆ ಹಾಗೆ ಎಂಬ ಆಲೋಚನೆ ನಿಮಗೆ ಬಂದರೆ ನೀವು ಯೋಚನಾ ಶೀಲರು ಎಂದರ್ಥ. ಆದರೆ ಅದಕ್ಕೆ ಉತ್ತರ ಮಾತ್ರಾ ತೀರಾ ಪೇಲವ. ಸೇಫಾಗಿ ತಾನು ಕುಳಿತ ಮನುಷ್ಯ ಸೋತ ಕಂಗಾಲಾದ ಮನುಷ್ಯರಿಗೆ ಉಪದೇಶ ಕೊಡಬಲ್ಲ ಆದರೆ ಅದೇ ಕಷ್ಟ ತನಗೆ ಬಂದಾಗ ಅವನ ಆಳದಲ್ಲಿ ಹುಗಿದುಹೋದ ಭಯವೆಂಬ ವಾಕ್ಯಗಳು ದುತ್ತನೆ ಎದ್ದು ನಿಲ್ಲುತ್ತವೆ. ಪರಿಹಾರ ವಿಲ್ಲ ಸ್ವಂತಕ್ಕೆ ನಿಲುಗಡೆಯಿಲ್ಲ ಉಪದೇಶಕ್ಕೆ ಎಂಬ ವಾಕ್ಯವೇ ಸತ್ಯ.
ಭಯ ಎನ್ನುವುದು ಮನುಷ್ಯನ ಒಂದು ಅವಸ್ಥೆ. ಅದು ಅತಿಯಾದಾಗ ರೋಗ. ಆದರೆ ಭಯವೇ ಇಲ್ಲದ ಮನುಷ್ಯ ಅಂತಾದರೆ ಅದೂ ಒಂದು ರೋಗವೇ ಹೊರತು ಆರೋಗ್ಯ ಅಲ್ಲ. ಅತಿಯಾದರೆ ಅಮೃತವೂ ವಿಷ ಎಂದಾದಮೇಲೆ ವಿಷ ವಿಷವಾಗದಿರುತ್ತದೆಯೇ? ಧೈರ್ಯ ಅನ್ನುವುದೂ ಭಯದಂತೆಯೇ ಅದೂ ಯಾವಾಗಲೂ ಎಲ್ಲಾ ಸಮಯದಲ್ಲೂ ಇರಲು ಸಾದ್ಯವಿಲ್ಲ. ಆಗಾಗ ಬರುತ್ತಿರಬೇಕು ಮತ್ತೆ ಅದರ ಹಿಂದೆ ಭಯವೂ ಇರಬೇಕು. ನಿರ್ಭಯ ದ ಹಿಂದೆಯೂ ಭಯ ಇದೆ ಅಭಯದ ಹಿಂದೆಯೂ ಭಯ ಇದೆ. ಭಯಂಕರದಲ್ಲಿಯೂ ಭಯ ಇದೆ. ಆದರೆ ಬೇರೆ ಬೇರೆ ಅಷ್ಟೆ.
ಅಂತಿಮವಾಗಿ: ಭಕ್ತನೊಬ್ಬ ಜೀವನದಲ್ಲಿ ಭಯಗ್ರಸ್ಥನಾಗಿ ಗುರುಗಳೊಬ್ಬರ ಬಳಿ ಹೋಗಿ "ಮಹಾನ್,,, ನನಗೆ ಜೀವಭಯ ಶುರುವಾಗಿದೆ. ನಾನು ಸತ್ಯ ಹೇಳುತ್ತಾ ಬದುಕುತ್ತೇನೆ ಎಂಬ ಸ್ವಘೋಷಿತ ತೀರ್ಮಾನಕ್ಕೆ ಬಂದೆ ಹಾಗೇಯೇ ನಡೆದುಕೊಂಡೆ. ಆದರೆ ಈಗ ಅದರ ಪರಿಣಾಮ ನನ್ನ ಸುತ್ತೆಲ್ಲಾ ವೈರಿಗಳು ತುಂಬಿಕೊಂಡಿದ್ದಾರೆಂಬ ಭಯ ನನ್ನನ್ನು ನಿತ್ಯ ಕಾಡುತ್ತಿದೆ. ಅದಕ್ಕಾಗಿ ಜೀವಭಯದಿಂದ ಪ್ರತಿನಿತ್ಯ ನರಳುವಂತಾಗಿದೆ. ಪರಿಹಾರ ಕೊಡಿ " ದೀನನಾಗಿ ಕೇಳಿದ.
ಅದಕ್ಕೆ ಗುರುಗಳು " ಹೆದರಬೇಡ ಭಕ್ತಾ, ಸತ್ಯ ಹೇಳುವುದರಿಂದ ಯಾರೂ ನಿನ್ನನ್ನು ಏನೂ ಮಾಡಲಾಗದು, ಭಗವಂತ ನಿನ್ನ ಪರವಾಗಿ ಇರುತ್ತಾನೆ, ನಾನು ನಿನಗೆ ಅಭಯ ನೀಡುತ್ತೇನೆ" ಎಂದು ಹೇಳಿ ಪ್ರಸಾದ ನೀಡಿದರು.
ಕಾಲ್ಮುಟ್ಟಿ ನಮಸ್ಕಾರ ಮಾಡಿ ಪ್ರಸಾದ ತೆಗೆದುಕೊಂಡ ಭಕ್ತನಿಗೆ ಎದ್ದುನಿಂತ ತಕ್ಷಣ ಗುರುಗಳ ಹಿಂದೆ ನಿಂತ ಅಂಗರಕ್ಷಕರು
ಕಾಣಿಸಿದರು. ಮರುಕ್ಷಣ ಆತ " ಗುರುಗಳಿಗೆ ಜೀವಭಯ ಇದ್ದಂತಿದೆ, ಹಿಂದೆ ಈ ಪಾಟಿ ಅಂಗರಕ್ಷಕರು ಇದ್ದಾರೆ, ಇನ್ನು ನನಗೆಂತ ಈ ಹೂವಿನ ಪ್ರಸಾದದ ಅಭಯ" ಎಂದು ಸತ್ಯ ನುಡಿದುಬಿಟ್ಟ.
ತಕ್ಷಣ ಅಂಗರಕ್ಷಕರು ಆತನನ್ನು ದರದರ ಎಳೆದುಕೊಂಡು ಆಚೆಬಿಟ್ಟರು. ಗುರುಗಳು ವ್ಯಗ್ರರಾದರು. ಭಕ್ತ ಸತ್ಯ ಹೇಳಿದ್ದರ ಪರಿಣಾಮವಾಗಿ ದಬ್ಬಿಸಿಕೊಂಡು ಮನೆಸೇರಿದ. ಅವನ ಭಯ ಹೊರಟುಹೋಯಿತು.


2 comments:

ಸಾಗರದಾಚೆಯ ಇಂಚರ said...

ನಿಜ
ಮನಸ್ಸು ಭಯಗ್ರಸ್ತವಾದರೆ ಎಲ್ಲದರಲ್ಲಿ ಭಯ

ಸೀತಾರಾಮ. ಕೆ. / SITARAM.K said...

ಚೆ೦ದದ ಲೇಖನ. ತು೦ಬಾ ಖುಷಿಯಾಯಿತು. ಭಯದಿ೦ದ ಮಾನವನ ಸಾಧನೆಗಳಿಗೆ ತಡೆ ಉ೦ಟಾಗಿದೆ. ಆದರೆ ಉಪದೇಶ ನಿರ೦ತರವಾಗಿದೆ. ವಾಸ್ತವವನ್ನು ಚೆನ್ನಾಗಿ ಹೇಳಿದ್ದಿರಾ...