Friday, June 18, 2010

ಬಾ ಬಾ ಚಿಟ್ಟೆ ಬಿಳಿ ಬಿಳಿ ಚಿಟ್ಟೆ



ಸುಂದರ ಪರಿಸರದ ಬಗ್ಗೆ ಚಿತ್ರಿಸುವಾಗ ಚಿಟ್ಟೆಯನ್ನು ಲೆಕ್ಕಿಸದಿದ್ದರೆ ಅದಕ್ಕೊಂದು ರೂಪವೇ ಬರುವುದಿಲ್ಲ. ಆಹ್ಲಾದಕರ ವಾತಾವರಣ ಎಂದಕೂಡಲೆ ಅಲ್ಲಿ ಬಣ್ಣ ಬಣ್ಣದ ಚಿಟ್ಟೆಗಳ ಹಾರಾಟ ಕಣ್ಮುಂದೆ ತೇಲುತ್ತದೆ. ಮಕ್ಕಳಿಂದ ಮುದುಕರವರೆಗೂ ಚಿಟ್ಟೆಗಳು ಗಮನ ಸೆಳೆದಿದೆ. ಕವಿಗಳಿಂದ ವರೇಣ್ಯರ ಮನಸ್ಸಿನೊಳಗೆ ಚಿಟ್ಟೆಗಳು ದಾಂಗುಡಿಯನ್ನಿಟಿದೆ. ಸಹಸ್ರಾರು ಜಾತಿಯ ಬಣ್ಣದ ಚಿಟ್ಟೆಗಳಲ್ಲಿ ಅಪರೂಪ ಸೌಂದರ್ಯದ ಚಿಟ್ಟೆಗಳೂ ಇವೆ. ಆದರೆ ಅವು ಕಾಣಸಿಗುವುದು ಅಪರೂಪ. ಕಂಡರೂ ಕ್ಯಾಮೆರಾದ ಕಣ್ಣಿಗೆ ಸಿಗುವುದು ಕಷ್ಟ. ಅಂತಹ ಚಿಟ್ಟೆಯೊಂದು ಮೊನ್ನೆ ನನಗೆ ದರ್ಶನ ನೀಡಿತು. ಊಟಕ್ಕೆ ಕುಳಿತಾಗ ಅಟ್ಟಣಿಗೆಯ ಮೇಲೆ ಏನೋ ಬಿಳಿಯ ವಸ್ತು ಗೋಚರಿಸಿದಂತಾಯಿತು. ಊಟ ಅರ್ದಕ್ಕೆ ನಿಲ್ಲಿಸಿ ಹತ್ತಿರ ಹೋದರೆ, ಅಚ್ಚರಿ ಕಾದಿತ್ತು. ಚಿಟ್ಟೆ...!. "ಬಾ... ಬಾ.. ಚಿಟ್ಟೆ ಬಣ್ಣದ ಚಿಟ್ಟೆ" ಎಂದು ಮಕ್ಕಳ ಪದ್ಯದ ಮೂಲಕ ಕರೆಯಿಸಿಕೊಳ್ಳುವ ಬಟರ್ ಫ್ಲೈ. ಸಾಮಾನ್ಯವಾಗಿ ಬಣ್ಣ ಬಣ್ಣದಲ್ಲಿ ಕಾಣಿಸಿಕೊಳ್ಳುವ ಚಿಟ್ಟೆಯಲ್ಲ ಇದು. ಅಚ್ಚ ಬಿಳಿಯ ಬಣ್ಣ...! ದ ಚಿಟ್ಟೆ ಇದು. ವಾವ್ ಅದರ ಸೌಂದರ್ಯ ವರ್ಣಿಸಲದಳ. ಊಟ ಅಷ್ಟಕ್ಕೆ ನಿಲ್ಲಿಸಿ ಕ್ಯಾಮೆರಾ ತರುವಷ್ಟು ಮಟ್ಟಿಗಿನ ಸೌಂದರ್ಯ ಆ ಚಿಟ್ಟೆಗಿತ್ತು. ಕ್ಯಾಮೆರಾ ಕಣ್ಣೊಳಗೆ ಬಿಳಿ ಚಿಟ್ಟೆಯ ಛಾಯೆ ಸೇರಿಕೊಂಡಾಗಲಷ್ಟೆ ಸಮಾಧಾನ ವಾಗಿದ್ದು. ಬಿಳಿ ಚಿಟ್ಟೆಯ ಬೆನ್ನ ಮೇಲೆ ಬರಿಗಣ್ಣಿಗೆ ಕಾಣುವಂತಹ ಬಂಗಾರದ ಬಣ್ಣದ ಎಳೆಗಳು ಇದ್ದರೂ ದುರದೃಶ್ಟವಶಾತ್ ಕ್ಯಾಮೆರಾದ ಕಣ್ಣಿಗೆ ಅದು ಅಷ್ಟೊಂದು ಸಮರ್ಪಕವಾಗಿ ಬೀಳಲಿಲ್ಲ. ಸಾವಧಾನದಿಂದ ಹತ್ತಿರ ಹೋಗಿ ಪಿಳಕ್ ಪಿಳಕ್ ಎಂದು ಹತ್ತೆಂಟು ಬಾರಿ ಕ್ಯಾಮೆರಾ ಕ್ಲಿಕ್ಕಿಸಿದರೂ ಅಲ್ಲಿಂದ ಚಿಟ್ಟೆ ಮಿಸುಕಾಡಲಿಲ್ಲ. ಬಿಳಿಯ ಚಿಟ್ಟೆಯೊಳಗಿನ ಸೌಂದರ್ಯ ನಿಮಗೆ ಸಂಪೂರ್ಣ ತೋರಿಸಲಾಗದಿದ್ದರೂ ಇಷ್ಟರ ಮಟ್ಟಿಗೆ ಸಿಕ್ಕಿತಲ್ಲ ಎಂಬುದೇ ಸಮಾಧಾನ.
(ವಿಜಯ ಕರ್ನಾಟಕ ಲವಲಲವಿಕೆ ಯಲ್ಲಿ ಪ್ರಕಟಿತ)