Friday, June 18, 2010

ನಿಸರಿ" ತುಪ್ಪದ ಸಿರಿ


ಜೇನು ತುಪ್ಪ ಸಾಮಾನ್ಯವಾಗಿ ಎಲ್ಲರೂ ರುಚಿ ನೋಡಿರುತ್ತಾರೆ. ಆದರೆ ನಿಸರಿತುಪ್ಪ ತಿಂದಿದ್ದೀರಾ? ಎಂಬ ಪ್ರಶ್ನೆಗೆ ಉತ್ತರ ಸ್ವಲ್ಪ ಗೊಂದಲವಾದದ್ದೇ. ಜೇನುತುಪ್ಪದ ರುಚಿಯನ್ನೇ ಹೋಲುವ ಮತ್ತು ಜೇನುತುಪ್ಪಕ್ಕಿಂತ ದುಪ್ಪಟ್ಟು ಔಷಧೀಯ ಗುಣವಿರುವ ಹಾಗೂ ಜೇನುತುಪ್ಪಕ್ಕಿಂತ ಹೆಚ್ಚಿನ ಬೆಲೆಯ ನಿಸರಿ(ಮಿಸರಿ) ತುಪ್ಪ ಸ್ವಾದಿಷ್ಠಕರ ಎಂಬುದು ನಿಜ. ಆದರೆ ನಿಸರಿ ತುಪ್ಪದ ಲಭ್ಯತೆಯ ಪ್ರಮಾಣ ಕಡಿಮೆ. ಕಾರಣ ಜೇನಿಗಿಂತ ಹತ್ತು ಪಟ್ಟು ಚಿಕ್ಕಪ್ರಮಾಣದ ಕೀಟವಾದ ನಿಸರಿ ಸಾಮಾನ್ಯವಾಗಿ ಮನುಷ್ಯನಿಗೆ ತುಪ್ಪತೆಗೆಯಲಾರದಂತಹ ಜಾಗಗಳಲ್ಲಿ ಗೂಡು ಕಟ್ಟಿಬಿಡುತ್ತವೆ. ಕಾಂಪೌಂಡಿನ ಪೊಡಕಿನಲ್ಲಿ ಆವುಗಳ ವಾಸಸ್ಥಾನ. ತುಪ್ಪ ತೆಗೆಯಲು ಹೊರಟರೆ ಕಾಂಪೌಂಡ್ ಧ್ವಂಸ. ಹಾಗಾಗಿ ಅವು ಸೇಫ್. ಇನ್ನು ಅಪರೂಪಕ್ಕೊಬ್ಬರು ನಿಸರಿ ಸಾಕಾಣಿಕೆ ಮಾಡಿದ್ದರೂ ತುಪ್ಪ ಹೇರಳವಾಗಿ ಸಿಗದ ಕಾರಣ ಮಾರುಕಟ್ಟೆಯಲ್ಲಿ ಅಪರೂಪ. ಅವೆಲ್ಲ ನಿಸರಿಯ ಕತೆಯಾಯಿತು ಈಗ ಈ ಲೇಖನಕ್ಕೆ ಕಾರಣವಾಗುವಂತೆ ಒಂದು ನಿಸರಿಯ ತಂಡ ಅಪರೂಪದ ಜಾಗದಲ್ಲಿ ತನ್ನ ಸಂಸಾರ ಹೂಡಿ ಪ್ರತೀವರ್ಷವೂ ಅರ್ದ ಕೆಜಿಯಷ್ಟು ತುಪ್ಪವನ್ನು ಲೀಲಾಜಾಲವಾಗಿ ನೀಡುತ್ತಿದೆ. ಅದರ ವಿಷಯದತ್ತ ಹೊರಳೋಣ. ಸಾಗರ ತಾಲ್ಲೂಕಿನ ತಲವಾಟದ ಜಯಕೃಷ್ಣರವರು ತಮ್ಮ ಅಡಿಗೆ ಮನೆಯಲ್ಲಿನ ಗೂಡು ಎಲ್ಲರಿಗೂ ಕಾಣಿಸಬಾರದೆಂದು ಕ್ಯಾಲೆಂಡರ್ ನೇತುಹಾಕಿದ್ದರು. ಈಗ ನಾಲ್ಕುವರ್ಷದ ಹಿಂದೆ ಅಡಿಗೆ ಮನೆ ಚೊಕ್ಕಟಮಾಡುವಾಗ ಕ್ಯಾಲೆಂಡರ್ ತೆಗೆದರೆ ಕಪ್ಪನೆಯ ರಾಶಿಯೊಂದು ಕಂಡು ಬೆಚ್ಚಿಬಿದ್ದರು. ಟಾರ್ಚ್ ತೆಗೆದುಕೊಂಡು ಬಂದು ಹತ್ತಿರದಿಂದ ನೋಡಿದಾಗ ತಿಳಿದದ್ದು ಅದು ಅಪಾಯಕಾರಿಯಲ್ಲದ ಮತ್ತು ಆದಾಯ ತರುವ ನಿಸರಿ ಗೂಡು ಎಂದು. ಸಾಕಾಣಿಕೆ ಮಾಡಲು ಹೊರಟರೆ ದುರ್ಲಭವಾದ ನಿಸರಿ ಅದಾಗಿಯೇ ಬಂದು ಸೇರಿಕೊಂಡಿತ್ತು.ಗೋಡೆಯ ಆಚೆಬದಿಯ ಸಣ್ಣ ಕಿಂಡಿಯ ಮೂಲಕ ತನ್ನ ಹಾರಾಟವನ್ನು ಮಾಡಿಕೊಂಡು ಗೂಡಿನ ಒಳಗಿನ ಖಾಲಿಜಾಗವನ್ನು ತನ್ನ ತತ್ತಿ ಹಾಗೂ ತುಪ್ಪ ಸಂಗ್ರಹಾಗಾರವನ್ನಾಗಿಸಿಕೊಂಡಿತ್ತು ಅದು. ನಿಸರಿಯ ಗೂಡಿಗೆ ಒಂದೆರಡು ತೂತು ಮಾಡಿ ತಟ್ಟೆ ಇಟ್ಟ ಜಯಕೃಷ್ಣರಿಗೆ ತಟ್ಟೆ ತುಂಬಾ ಸ್ವಾದಿಷ್ಠ ತುಪ್ಪ. ಅಲ್ಲಿಂದೀಚೆಗೆ ಪ್ರತೀ ವರ್ಷವೂ ಪುಕ್ಕಟೆಯಾಗಿ ನಿಸರಿ ತುಪ್ಪ ಸಿಗುತ್ತಿದೆ ಅವರಿಗೆ. ಜತೆಯಲ್ಲಿ ನಿಸರಿಯ ಸಂಸಾರದ ಒಳಹೊರಗನ್ನು ಕಣ್ತುಂಬಾ ನೋಡುವ ಸೌಭಾಗ್ಯವೂ ಅವರದ್ದು. ತುಪ್ಪ ತೆಗೆದನಂತರ ಮತ್ತೆ ಕ್ಯಾಲೆಂಡರ್ ತೂಗುಹಾಕಿ ಮುಂದಿನ ದಿನಾಂಕ ನಿರೀಕ್ಷಿಸುತ್ತಾ ಉಳಿದರಾಯಿತು. ನೋಡಿ ದೇವರು ಕೊಟ್ಟರೆ ಹೇಗೆಲ್ಲಾ ಕೊಡುತ್ತಾನೆ....?
(ವಿಜಯ ಕರ್ನಾಟಕ ಲವಲವಿಕೆ ಯಲ್ಲಿ ಪ್ರಕಟಿತ ಬರಹ)

3 comments:

ಭಾವಜೀವಿ... said...

ನಮ್ಮ ಮನೆಯಲ್ಲೂ ಸಹ ನಿಸಿರಿ(ನಾವು ನಸರಿ ಎನ್ನುತ್ತೇವೆ) ಕುಟುಂಬ ಒಂದಿತ್ತು. ಅಡಿಕೆ ತುಂಡಿನ ನಡುವೆ ಇದ್ದ ಈ ಸಂಸಾರವು ಸುಮಾರು ೫೦ ಕ್ಕೂ ಹೆಚ್ಚಿನ ವರುಷಗಳಷ್ಟು ಹಳೆಯದಾಗಿತ್ತು. ಜೇನಿನಷ್ಟು ತುಪ್ಪ ನೀಡದೆ ಇದ್ದರೂ ಸಹ ನಮಗೆ ಸಾಕಾಗುವಷ್ಟು ತುಪ್ಪ ದೊರೆಯುತ್ತಿತ್ತು. ತುಪ್ಪ ತೆಗೆಯುವಾಗ ನಿಸಿರಿ ಹುಳಗಳು ಕಚ್ಚದೆ ಇದ್ದರೂ ನಮ್ಮ ತಲೆಯ ಒಳಗೆಲ್ಲಾ ತೂರಿಕೊಳ್ಳುತ್ತಿದ್ದವು. ಏನು ಕಾರಣವೊ ಗೊತ್ತಿಲ್ಲ, ಕಳೆದ ವರುಷ ಆ ಗೂಡನ್ನು ತೊರೆದು ಹೊರಟುಹೋದವು! ಈಗ ಖಾಲಿ ಗೂಡು ನೇತಾಡುತ್ತಿದೆ! :(

ಸಾಗರದಾಚೆಯ ಇಂಚರ said...

ನನಗೆ ಅದರ ನೆನಪು ತರಿಸಿದಿರಿ,

ಎಲ್ಲಿಂದ ತಿನ್ನಲಿ :)

ಮನದಾಳದಿಂದ............ said...

ನಸರಿ ಜೇನು ತುಪ್ಪದ ಸ್ವಾದ ನನಗೆ ಅಚ್ಚುಮೆಚ್ಚು. ನಮ್ಮ ಮನೆಯಲ್ಲಿ ನಸರಿಗೆಂದೇ ನಾಲ್ಕು ಅಡಿಕೆ ತುಂಡುಗಳನ್ನು ಮನೆಯ ಸುತ್ತಲೂ ಕಟ್ಟಿದ್ದೇವೆ. ಪ್ರತಿವರ್ಷ ತುಪ್ಪ ಸಿಗುತ್ತದೆ.........
ಅದರ ರುಚಿಯನ್ನು ನೆನಪಿಸಿದ ನಿಮಗೆ ಧನ್ಯವಾದಗಳು..........