ಫೋನ್ ಇಟ್ಟವನು ಕಣ್ಮುಚ್ಚಿ ಕುಳಿತಿದ್ದೆ. ನೋಡುಗರಿಗೆ ಅದು ಧ್ಯಾನ ಮುದ್ರೆ. ನನ್ನೊಳಗೆ ಅವೆಲ್ಲಾ ಯಾವುದೂ ಇರಲಿಲ್ಲ. ಮನಸ್ಸು ಬಹಳ ಗಲಿಬಿಲಿಗೊಂಡಿತ್ತು. ಅದನ್ನು ಸಮಾಧಾನ ಸ್ಥಿತಿಗೆ ತಂದು ನಿಲ್ಲಿಸುವುದು ಅದೇಕೋ ನನ್ನ ಬಳಿ ಆಗುತ್ತಿರಲಿಲ್ಲ. ಗಲಿಬಿಲಿಗೆ ಮುಖ್ಯ ಕಾರಣ ಮಂಜ. ಆಮೇಲೆ ಮಿಕ್ಕಿದ್ದು
ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಮಂಜನಿಗೆ ಅದ್ಯಾರೋ ಗೇಣಿ ಗದ್ದೆ ಮಾಡು ಅಂತ ತಲೆ ತುಂಬಿದರೋ ಗೊತ್ತಿಲ್ಲ. ಮಲೆನಾಡಿನಲ್ಲಿ ಭತ್ತದ ಗದ್ದೆ ಅಷ್ಟೊಂದು ಲಾಭದಾಯಕ ಅಲ್ಲ. ಜಮೀನು ಸ್ವಂತದ್ದಾದರೆ ಅಷ್ಟಿಷ್ಟು ಉಳಿಯುತ್ತದೆ, ಗೇಣಿಗೆ ಮಾಡಿ ಲಾಭ ಮಾಡುವುದು ಕಷ್ಟಕರ. ಆದರೆ ಮಂಜನಿಗೆ ಲಾಭ ನಷ್ಟದ ಅಂದಾಜು ಇರಲಿಲ್ಲ, ಎಕರೆ ಗದ್ದೆಗೆ ಹತ್ತು ಚೀಲ ಬತ್ತ ಗೇಣಿ ಕೊಡುವುದಾಗಿ ಮಾತನಾಡಿ ಗದ್ದೆ ಮಾಡಿದ. ಗದ್ದೆ ಯಜಮಾನರು ಸರ್ಕಾರಿ ಗೊಬ್ಬರ ಕೊಡುವುದು ಎಂಬುದು ತೀರ್ಮಾನವಾಗಿತ್ತು. ಅವರು ಅದ್ಯಾವುದೋ ಸಾದಾರಣ ಗೊಬ್ಬರ ಕೊಟ್ಟರು. ಆರು ತಿಂಗಳುಗಳ ಕಾಲ ಗಂಡಹೆಂಡತಿ ಇಬ್ಬರೂ ಖುಷಿಯಾಗಿ ದುಡಿದರು. ಫಸಲು ಕಣ ಸೇರಿದಾಗ ಗೇಣಿಗೆ ಗದ್ದೆ ಕೊಟ್ಟವರು ಭತ್ತ ಒಯ್ಯಲು ಬಂದರು. ಅವರಿಗೆ ಕೊಡಬೇಕಾದ ಹತ್ತು ಚೀಲ ಕೊಟ್ಟ ನಂತರ ಇವನಿಗೆ ಉಳಿದದ್ದು ಕೇವಲ ಅರ್ದ ಚೀಲ ಭತ್ತ. ಮಂಜನ ತಲೆ ಮೇಲೆ ಒಂದಿಷ್ಟು ಸಾಲ. ಗಂಡ ಹೆಂಡತಿ ಇಬ್ಬರೂ ಹತಾಶರಾದರು. ಗೇಣಿಗೆ ಕೊಟ್ಟವರು ಸ್ವಲ್ಪ ಕರುಣೆ ತೋರಬಹುದಿತ್ತು. ಇಲ್ಲ ಅವರು ಖಡಕ್ಕಾಗಿ ವರ್ತಿಸಿದರು. ನೋವನ್ನು ನುಂಗಿದ ಹತಾಶ ಜೀವಗಳು ಮನೆಗೆ ಹೋಗಿ ಕದ ಹಾಕಿಕೊಂಡರು. ಆ ಕದವಾದರೋ ತಳ್ಳಿದರೆ ಬೀಳುವಂತಹದು.
ಮಂಜನ ಕತೆ ಕೇಳಿದ ವ್ಯಥೆಗೆ ನಾನೊಂದಿಷ್ಟು ಹಣ ಕೊಟ್ಟೆ. ಅದು ತೀರಾ ದೊಡ್ಡ ಮೊತ್ತವಲ್ಲ. ಇರಲಿ ಅವರವರ ಪಾಡು ಅವರವರಿಗೆ, ಆದರೂ ಅನ್ನದಾತ ಬೆವರು ಸುರಿಸಿದರೂ ಹೀಗೇಕೆ ಎಂಬ ಪ್ರಶ್ನೆ ಹಲವುಬಾರಿ ನನಗೆ ಕಾಡುತ್ತದೆ ಉತ್ತರ ಸಿಗದೆ.
ಈಗ ಮೊದಲು ಬಂದ ಫೋನಿನ ವಿಚಾರಕ್ಕೆ ಬರೋಣ. ಅವರು ಒಳ್ಳೆಯ ಉದ್ಯೋಗದಲ್ಲಿದ್ದಾರೆ. ತಿಂಗಳ ಸಂಬಳ ಬರೋಬ್ಬರಿ ಆರಂಕಿಯದು. "ಇವತ್ತು ನಮ್ಮದು ಸ್ಟ್ರೈಕ್ ಇತ್ತು, ದರಿದ್ರ ರಾಜಕೀಯದೋರು ತಮ್ಮ ಸಂಬಳ ಏರ್ಸೋದಕ್ಕೆ ತಂಟೇನೂ ಇಲ್ಲ ತಕರಾರು ಇಲ್ಲ, ನಮ್ದು ಎಲ್ಲಾ ರೆಕಮಂಡೇಷನ್ ಆಗಿದೆ ಮಾರಾಯ, ದೇವರು ಕೊಟ್ಟರು ಪೂಜಾರಿ ಕೊಡ ಎಂಬಂತೆ ಸಕ್ರೇಟರಿಯೇಟ್ ನಲ್ಲಿ ಹಿಡಿದುಕೊಂಡಿದ್ದಾರೆ ----ನನ್ ಮಕ್ಳು...."
ಕಟ್ ಮಾಡಿ ಕಣ್ಮುಚಿದೆ, ಅದೇ ಅದೇ ಕಾಣಿಸುತ್ತೆ, ಮತ್ತೆ--- ಹೊರಗಡೆ ಪ್ರಪಂಚಕ್ಕೆ ನನ್ನದು ಧ್ಯಾನಮುದ್ರೆ...!
5 comments:
ಲೇಖನ ಮನ ಮಿಡಿಯುವಂತಿದೆ.ಧನ್ಯವಾದಗಳು.
ತುಂಬಾ ಚೆನ್ನಾಗಿ ಬರೆದಿದ್ದೀರಾ ಸರ್...
ಸಮಾಜದ ವಿಪರ್ಯಾಸವನ್ನ ಮತ್ತು ಬದುಕಿನ ವಿಡ೦ಬಣೆಯನ್ನ ಮಾರ್ಮಿಕವಾಗಿ ಮಾಡಿದ್ದಿರಾ... ಮನ ಆರ್ದ್ರವಾಯಿತು.
ವಾಸ್ತವ ಸ್ಥಿತಿಯನ್ನು ವಿಡ೦ಬನಾತ್ಮಕವಾಗಿ ಚೆನ್ನಾಗಿ ವಿವರಿಸಿದ್ದೀರಿ..
ಶುಭಾಶಯಗಳು
ಅನ೦ತ್
ಅವರು ಬಹುಷಃ ಗುರುಗಳನ್ನು ಮನೆಗೆ ಕರೆಸಿ ಭರ್ಜರಿ ಮಡಿ ಉಟ್ಟು, ಪಾದ ಪೂಜೆ ಮಾಡಿ ಗುರುವರ್ಯರಿಂದ ಇಂಥವರ ಸಂತತಿ ಜಾಸ್ತಿಯಾಗಲಿ ಎಂಬ ಆಶೀರ್ವಾದವನ್ನು ಪಡೆದು ದೊಡ್ಡವರು ಎನಿಸಿಕೊಳ್ಳುತ್ತಾರೆ ಬಿಡಿ. ಬಡವರು ಈಗ ದೇವರಿಗೂ ಬೇಡವಾದವರು.
Post a Comment