ಈ ನನ್ನ ಅಕ್ಷರರೂಪದಲ್ಲಿರುವ ಬರಹಗಳನ್ನು ನೀವು ಓದುತ್ತಿರುವ ಈ ಸಮಯದಲ್ಲಿ ಇದನ್ನು ಬರೆದಿರುವ ನಾನು ಬೇರೆಯದೇ ಆದ ಕೆಲಸವನ್ನು ಮಾಡುತ್ತಿರುತ್ತೇನೆ. ಮುಂದೊಂದು ದಿನ ಇದು ಎಂದೋ ಬರೆದ ಬರಹವಾಗಿರುತ್ತದೆ. ಬರೆದ ನಾನೆಂಬ ನಾನು ಕಾಲವಾದಮೇಲೆಯೂ ನನ್ನ ಭಾವನೆಗಳು ಉಳಿದಿರುತ್ತವೆ. ಈ ಅಕ್ಷರವೆಂಬ ಮೋಡಿಯ ಮೂಲಕ ನಿಮ್ಮ ಮುಖದಲ್ಲಿ ಸಣ್ಣದೊಂದು ಮುಗುಳ್ನಗೆಯಿಂದ ವಿಕಟಾಟ್ಟಹಾಸದ ಭಾವನೆಗಳನ್ನು ನಾನು ಹೊರಡಿಸಬಹುದು. ಹಾಗೆಯೇ ಬ್ರಹ್ಮೇತಿ ಸಿಟ್ಟನ್ನು ತರಿಸಬಹುದು, ದಳದಳ ಉದುರುವ ಗಳಗಳ ಕಣ್ಣೀರು ತರಿಸಬಹುದು, ವ್ಯಗ್ರ ಮನಸ್ಸಿಗೆ ಸಮಾಧಾನ ನೀಡಬಹುದು, ಸಮಾಧಾನದ ಮನಸ್ಸನ್ನು ವ್ಯಗ್ರಗೊಳಿಸಬಹುದು. ಅಥವಾ ಕೊರೆದು ಕೊರೆದು ಬೇಸರ ಹುಟ್ಟಿಸಬಹುದು ಎಂಬೆಲ್ಲಾ ಮಾತುಗಳು ನನ್ನ ತಾಕತ್ತನ್ನು ಅವಲಂಬಿಸುತ್ತದೆ ಎನ್ನುವುದು ಮತ್ತೆ ಬೇರೆಯದೇ ವಿಷಯ. ಇರಲಿ ಈಗ ನಾನು ಹೇಳ ಹೊರಟಿರುವ ವಿಷಯ ಇದ್ಯಾವುದೂ ಅಲ್ಲ ಹಾಗಂತ ಮಡೆಸ್ನಾನ ಹಾಗೂ ಕ್ರಿಕೆಟ್ ಹರಾಜಿನ ಬಗ್ಗೆ ಚಂದವಾಗಿ ಬರೆದು ಕೆಲಓದುಗರಿಂದ ಭಿನ್ನವಾಗಿ ಅರ್ಥೈಸಿಕೊಂಡು ಸಣ್ಣ ವಿವಾದಕ್ಕೆ ಕಾರಣರಾದ ಹೆಗೋಡು ಅಕ್ಷರರ ಬಗ್ಗೆಯೂ ಅಲ್ಲ ಕೇವಲ ಮನುಷ್ಯನೆಂಬ ಮನುಷ್ಯ ಸೃಷ್ಟಿಸಿಕೊಂಡ ಪದಗಳಿಗೆ ಕಾರಣವಾಗುವ ಅಕ್ಷರಗಳೇ ಇಲ್ಲದಿದ್ದರೆ ಎಂಬ ಸ್ಥಿತಿಯ ಬಗ್ಗೆ.
ಈಗಿನ "ವಾವ್" ಎಂಬ ಅರ್ಥದ ಉದ್ಘಾರ ಮೊದಲ ಅಕ್ಷರ ಸೃಷ್ಟಿಸಿ ಅದನ್ನು ಮತ್ತೊಬ್ಬಾತ ಹಾಗೆಯೇ ಓದಿದಾಗ ಹೊರಟಿರುತ್ತದೆ ಖಂಡಿತ. ಎಂತಹಾ ಸಂತೋಷದ ಕ್ಷಣವಲ್ಲವೆ ಅದು. ಮನುಷ್ಯ ನಾಗರೀಕತೆ ಎಂದು ಈಗ ಕರೆದುಕೊಳ್ಳುತ್ತಿರುವ ಆರಂಭದ ಹೆಜ್ಜೆಗೆಳು ಅವು. ಕೇವಲ ಕೈಸನ್ನೆ ಗಳಿಂದ ಆ ಊ ಗಳಿಂದ ಮುಂದಿನ ಹಂತವಾದ ಮಾಹಿತಿಯ ವಿನಿಮಯದ ಮೊದಲ ಹೆಜ್ಜೆ. ಈಗ ಸುಮ್ಮನೆ ಆರಾಮು ಖುರ್ಚಿಯಲ್ಲಿ ಕುಳಿತು ಆಕಾಶ ನೋಡುತ್ತಾ "ಅಕ್ಷರ" ಸೃಷ್ಟಿಯ ಮೊದಲ ಮೆಟ್ಟಿಲುಗಳ ಕಲ್ಪಿಸಿಕೊಂಡರೆ ಮೈ ನವಿರೇಳುತ್ತದೆ. ಮೊದಲ ಅ ಎಲ್ಲಿ ಸೃಷ್ಟಿಯಾಯಿತೋ ಆನಂತರ ತಡವಾಗಲಿಲ್ಲ, ಭವ್ಯ ಭವಿಷ್ಯದ ಕನಸು ಹೊತ್ತ ಲಕ್ಷಾಂತರ ಜನ ತಮಗೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಕೆಲ ಅಕ್ಷರಗಳ ಮೂಲಕ ಕೊಟ್ಯಾಂತರ ಶಬ್ಧಗಳ ಸೃಷ್ಟಿಗೆ ಕಾರಣವಾಗುತ್ತಾ ಸಾಗಿದರು. ಹಲವರು ಈ ಅಕ್ಷರ ಜಗತ್ತಿಗೆ ತಮ್ಮ ಜೀವನವನ್ನೆಲ್ಲಾ ಮುಡಿಪಾಗಿ ಇಟ್ಟರು. ಇವೆಲ್ಲಾ ಗತಿಸಿ ಸಹಸ್ರಾರು ವರ್ಷಗಳೇ ಸಂದುಹೋದವು. ದಿನದಿಂದ ದಿನಕ್ಕೆ ಅಕ್ಷರ ಜಗತ್ತು ವಿಶ್ವರೂಪ ತಾಳಿ ತನಗೆ ಬೇಕಾದ ರೀತಿಯಲ್ಲಿ ನರ್ತಿಸತೊಡಗಿದೆ.
ಮನುಷ್ಯ ಸೃಷ್ಟಿಯ ಅಕ್ಷರದ ಬಳಕೆ ಎಲ್ಲಾ ಒಳ್ಳೆಯದಕ್ಕೇ ಆಗುತ್ತಿದೆ ಅಂತೇನೂ ಇಲ್ಲ. ಉನ್ನತಿಗೆ ಸಾಗಿಸಬೇಕಾಗಿದ್ದ ಅಕ್ಷರಗಳ ಗುಚ್ಛ ಅವನತಿಗೆ ಒಯ್ದ ದಾಖಲೆಗಳೂ ಇವೆ. ಅವನ್ನೆಲ್ಲಾ ಇಲ್ಲಿ ಕೊರೆಯುತ್ತಾ ಕೂತರೆ ನೀವು ನನಗೆ ಉಗಿಯುವುದು ಖಂಡಿತಾ, ಹಾಗಾಗಿ ಹೇಳಲೇಬೇಕಾಗಿರುವ ಹೇಳಹೊರಟಿರುವ ಮಾತನ್ನು ಹೇಳುತ್ತಾ ಮುಗಿಸುತ್ತೇನೆ.
ಈಗ ನಾವು ನೀವೆಲ್ಲಾ ಕಾಗದದಲ್ಲಿಯೋ ಅಥವಾ ಕಂಪ್ಯೂಟರ್ ನಲ್ಲಿಯೋ ಮೂಡುವ ಅಕ್ಷರಗಳನ್ನು ಕಣ್ಗಳ ಮೂಲಕ ರೀಡಿ ಮಿದುಳಿನಲ್ಲಿ ಭಾವನೆಗಳನ್ನು ಮೂಡಿಸಿಕೊಳ್ಳುತ್ತಿರುವುದು ಸರಿಯಷ್ಟೆ. ಅಂಥಹ ಜನರಿಗೆ ಓದುಗರು ಅನ್ನುತ್ತಾರೆ. ಸರಿ ತಾನೆ?. ಹೀಗೆ ಮಿದುಳಿನಲ್ಲಿ ಮೂಡಿದ ಭಾವನೆಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಯತಾವತ್ ಮತ್ತೊಂದು ಮಿದುಳಿನಲ್ಲಿ ಭಾವನೆಗಳನ್ನು ಮೂಡಿಸುವವನಿಗೆ ಬರಹಗಾರ ಎನ್ನುತ್ತಾರೆ. ಇಂತಹ ಅವಸ್ಥೆಗಳ ಅನುಭವಕ್ಕೆ ನಿಮ್ಮ ಮೆದುಳು ಅಕ್ಷರಗಳನ್ನು ಕಲಿತಿರಬೇಕು, ಅದು ಯಾವುದೇ ಭಾಷೆಯದೇ ಆಗಿರಲಿ. ಈಗ ನಮ್ಮ ನಿಮ್ಮ ಮಿದುಳಿಗೆ ಅಕ್ಷರ ಕಲಿತಾಗಿದೆ. ಹಾಗಾಗಿ ಅಲ್ಲಿ ಯೋಚನೆಗಳ ಸರಮಾಲೆಯೇ ಸೃಷ್ಟಿಯಾಗುತ್ತಿದೆ,ಅಂತ್ಯವಿಲ್ಲದ ಆರಂಭ ಗೊತ್ತಿಲ್ಲದ ಯೋಚನೆಗಳು ಯೋಚನೆಗಳು ಯೋಚನೆಗಳು ಅವು. ಈಗ ಒಂದು ಕೆಲಸ ಮಾಡೋಣ ಸಹಸ್ರ ವರ್ಷಗಳ ಅಥವಾ ಅದಕ್ಕೂ ಹಿಂದೆ ಅಕ್ಷರ ತಿಳಿಯದ ಮನುಷ್ಯ ಏನು ಯೋಚಿಸುತ್ತಿದ್ದ..? ಕೇವಲ ಕಣ್ಣಿಗೆ ಕಂಡ ದೃಶ್ಯಗಳಷ್ಟೆ ಅವನ ಯೋಚನೆ. ಅಲ್ಲಿ ಶಬ್ದಗಳಿಲ್ಲ ಅಕ್ಷರಗಳ ಗೊಡವೆಯಿಲ್ಲ.
ಅಂತಹ ಒಂದು ಅವಸ್ಥೆಯನ್ನ ನಾವೂ ನೀವು ಬಲಾತ್ಕಾರವಾಗಿ ಅನುಭವಿಸಬೇಕಿದೆ. ಅಕಸ್ಮಾತ ಒಂದೈದು ನಿಮಿಷ ಹಾಗೆ ನೀವು ನಿಮ್ಮ ಮಿದುಳನ್ನು ಖಾಲಿ ಇಡಲು ಸಮರ್ಥರಾದಿರಾದರೆ ನಿಮ್ಮಂಥ ಜಿಂಗಾಲಾಲ್ ಜನ ಮತ್ತೊಬ್ಬರು ಈ ಪ್ರಪಂಚದಲ್ಲಿ ಇರುವುದಿಲ್ಲ. ಟ್ರೈ ಮಾಡಿ ನೋಡಿ.
ವಿಸೂ: ಅಕ್ಷರದ ಈ ಬರಹ ರಗಳೆಯಾಗಿ ನಿಮ್ಮ ಮಿದುಳಿಗೆ ಅನಿಸಿದರೆ ನನ್ನ ತಪ್ಪಲ್ಲ. ಅರ್ಥೈಸಿಕೊಳ್ಳಲು ನಿಮ್ಮ ಮಿದುಳು ಅಸಮರ್ಥವಾಗಿದೆ ಅಂತ ಅರ್ಥ ಆಗ್ಲೂ ನಿಮ್ಮ ಲೈಪ್ ಜಿಂಗಲಾಲ.
No comments:
Post a Comment