Wednesday, February 23, 2011

ಹಿಂಗೆ ದುಡ್ಡು ಕೊಡೋಕೆ ಯಾರಿಗೇನು ಮಳ್ಳ, ...!

ನಮಗೆ ಬರುವ ಆಲೋಚನೆಗಳನ್ನೆಲ್ಲಾ ಅನುಷ್ಠಾನಕ್ಕೆ ತೊಡಗಿಸಿದರೆ ಏನಾಗುತ್ತೆ? ಎಂಬ ಪ್ರಶ್ನೆ ನನಗೆ ಹಲವಾರು ಬಾರಿ ಕಾಡುತ್ತಿರುತ್ತದೆ. ಹಾಗೆ ಮಾಡಿದರೆ ಇಂವ ಯಡವಟ್ಟು ಎನ್ನುವ ಹೆಸರೂ ಬರುತ್ತದೆ ಎಂಬ ಅನುಭವ ಆಗಿದೆ. ಅದು ಹೀಗೆ,
ನನಗೆ ಭತ್ತ ಬೆಳೆಯುವ ರೈತರೆಂದರೆ ಅದೋನೋ ಒಂಥರಾ ಅಕ್ಕರೆ. ಪಾಪ ಅವರುಗಳು ವರ್ಷಪೂರ್ತಿ(ಮಲೆನಾಡಿನಲ್ಲಿ ಅಂತಿಟ್ಟುಕೊಳ್ಳಿ) ಕಷ್ಟಪಟ್ಟರೂ ಪೂರ್ತಿ ಹೊಟ್ಟೆ ತುಂಬುವುದಿಲ್ಲ. ಹಾಗಾಗಿ ಅಂತಹ ರೈತರು ನನ್ನ ಸಾಮಿಪ್ಯಕ್ಕೆ ಸಿಕ್ಕಾಗ ಖುಶಿಯಾಗಿ ಮಾತನಾಡಿಸುತ್ತಲೇ ಇರುತ್ತೇನೆ. ಆದರೂ ಒಮ್ಮೊಮ್ಮೆ ಈ ಪ್ರೀತಿ ತೀರಾ ಯಡವಟ್ಟಿನ ಪ್ರಸಂಗಗಳಿಗೆ ನಾಂದಿಯಾಗುತ್ತದೆ.
ಒಂದು ದಿನ ಕಳೆದವರ್ಷ ಬಿರುಬೇಸಿಗೆಯಲ್ಲಿ ಸಾಗರಕ್ಕೆ ಹೋಗುತ್ತಿದ್ದೆ, ಅಕ್ಕಪಕ್ಕ ಭತ್ತದ ಗದ್ದೆಗಳು ಬಿಸಿಲಿಗೆ ಬಾಯ್ದೆರೆದು ನಿಂತಿದ್ದವು. ಹಾಗೆ ಹೋಗುತ್ತಿದಾಗ ಗದ್ದೆಬಯಲಿನಲ್ಲಿ ಎತ್ತು ಮೇಯಿಸಿಕೊಂಡು ವಯಸ್ಕನೊಬ್ಬನಿದ್ದ. ನನ್ನ ಮಂಡೆಗೆ ಒಂದು ಆಲೋಚನೆ ಪಳಕ್ಕನೆ ಮಿಂಚಿತು. ಪಾಪ ಈ ಭತ್ತ ಬೆಳೆಯುವವರು ಇಲ್ಲದಿದ್ದರೆ ಪ್ರಪಂಚ ಬಲು ಕಷ್ಟ, ನಮಗಾಗಿ ಅವರುಗಳು ಅವರ ಸ್ವಾರ್ಥದ ನಡುವೆಯೂ ಒಂದಷ್ಟು ಕೆಲಸ ಮಾಡುತ್ತಾರೆ, ಹಾಗಾಗಿ ನಾವೂ ಅವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬಾರದೇಕೆ?, ಆಲೋಚನೆ ಮೂಡಮೂಡುತ್ತಿದ್ದಂತೆ ಕಾರು ರಸ್ತೆಬದಿಗೆ ನಿಲ್ಲಿಸಿ ಆತನತ್ತ ಹೆಜ್ಜೆ ಹಾಕತೊಡಗಿದೆ.
ಆತ ನನಗೆ ಅಪರಿಚಿತ ಹಾಗೆಯೇ ಆತನಿಗೆ ನಾನೂ... ಆದ್ದರಿಂದ ಆತ ನನ್ನನ್ನೇ ಎವೆಯಿಕ್ಕದೇ ನೋಡತೊಡಗಿದ. ನಾನು ಸೀದಾ ಅವನ ಹೋಗಿ " ನಾನು ....... ಊರಿನವನು ನನ್ನ ಹೆಸರು ...... ನೀವು ಭತ್ತ ಬೆಳೆದು ಉಪಕಾರ ಮಾಡುತ್ತೀರಿ, ಅದಕ್ಕಾಗಿ ನನಗೆ ಖುಷಿ, ನಾನು ನಿಮಗೆ ಸ್ವಲ್ಪ ಸಹಾಯ ಮಾಡಬೇಕೆಂದಿದ್ದೇನೆ ಎಂದು ಐದು ನೂರು ರೂಪಾಯಿ ಅವನಿಗೆ ಕೊಡಲು ಹೋದೆ.
ನಾನು ಕೊಟ್ಟ ಐದುನೂರು ರೂಪಾಯಿ ನೋಟು ಇಸಕೊಂಡು ಹಿಂದೆ ಮುಂದೆ ತಿರುಗಿಸಿ ನೋಡಿ ಆನಂತರ ಕೈಯೆತ್ತಿ ದೂರದಲ್ಲಿ ಇದ್ದ ಮತ್ತೊಬ್ಬನನ್ನು ಕೂಗಿ ಕರೆದ. ಸರಿ ನನ್ನ ಕೆಲಸವಾಯಿತಲ್ಲ ಎಂದು ನಾನು "ಆಯ್ತು ಬರ್ತೇನೆ" ಎಂದೆ. "ಸ್ವಲ್ಪ ಅಂವ ಬರಾಗಂಟ ಇರ್ರಿ" ಎಂದ ರೈತ. ಆಯ್ತಪ್ಪ ಎನ್ನುತ್ತಾ ನಿಂತೆ. ಕೆಲ ಸಮಯದ ನಂತರ ಆತ ಬಂದ, ಅವನೂ ಇವನು ಅದೇನೋ ಗುಸುಗುಸು ಪಿಸಪಿಸ ಮಾಡಿಕೊಂಡರು, ನಂತರ ಮತ್ತೊಬ್ಬಾತ ನನ್ನ ಬಳಿ ಬಂದು, ಊರು ಕೇರಿ ಎಲ್ಲಾ ವಿಚಾರಿಸಿದ . ಎಲ್ಲಾ ಹೇಳಿದ ಮೇಲೆ ಮೊದಲನೆಯವನ ಬಳಿ ಇದ್ದ ಐದುನೂರು ರೂಪಾಯಿ ಇಸಿದು ನನ್ನ ಕೈಗೆ ಕೊಡುತ್ತಾ " ಸುಮ್ನೆ ಇದ್ನ ತಗಂಡು ವಾಪಾಸು ಹೋಗಿ, ನಿಮ್ಮ ಆಟ ಎಲ್ಲಾ ನಮ್ತಾವ ನಡಿಯಾದಿಲ್ಲ" ಎಂದ . ನನಗೆ ಕಕ್ಕಾಬಿಕ್ಕಿ, ಯಾವ ಆಟ? ಆತನನ್ನು ಕೇಳಿದೆ. "ಅಯ್ಯಾ ಸುಮ್ನಿರಿ, ಸುಮ್ನೆ ಹಾದಿಮೇಲೆ ಹೋಗೋರಿಗೆಲ್ಲ ಹಿಂಗೆ ದುಡ್ಡು ಕೊಡೋಕೆ ಯಾರಿಗೇನು ಮಳ್ಳ, ಅದರ ಹಿಂದಿನ ಮರ್ಮ ನಂಗೆ ಗೊತ್ತೈತಿ, ಸುಮ್ನೆ ರೈಟ್ ಹೇಳಿ" ಎಂದು ಸ್ವಲ್ಪ ಬಿರುಸಾಗಿ ಹೇಳಿದ. ಬೇರೆ ದಾರಿ ಕಾಣದೆ ನಾನು ತೆಪ್ಪನೆಯ ಮುಖ ಹಾಕಿಕೊಂಡು ವಾಪಾಸು ಹೊರಟೆ.
ನಾನು ಒಂಥರಾ ವಿಚಿತ್ರ ಪರಿಸ್ಥಿತಿಗೆ ಸಿಕ್ಕಿದ್ದೆ. ಹೌದು ನಾನು ಮಾಡಿದ್ದ ಕೆಲಸ ಎಲ್ಲರೂ ಮಾಡದಿರುವದ್ದು, ಮತ್ತೆ ಹಾಗೆಲ್ಲ ಹೀಗೆಲ್ಲಾ ಮಾಡಬಾರದು ಅಂತ ಸಮಾಜ ಅಘೋಷಿತವಾಗಿ ತೀರ್ಮಾನಿಸಿಬಿಟ್ಟಿದೆ. ಹೀಗೆಲ್ಲಾ ಸಹಜವಾಗಿರದ್ದನ್ನು ಮಾಡಹೊರಟರೆ ಹೀಗೆ ಆಗುವುದು ಎನ್ನುತ್ತಾ ನನ್ನ ಮಂಡೆಗೆ ಹೊಳೆದ ಉಪಾಯವನ್ನು ಶಪಿಸುತ್ತಾ ಕಾರಿನತ್ತ ಹೆಜ್ಜೆಹಾಕಿದೆ. ಆನಂತರವೂ ಚೌರ ಮಾಡಿಸದ ದಿನಗಳಲ್ಲಿ ಮಂಡೆಯೊಳಗಿನಿಂದ ಇದೇ ತರಹ ಐಡಿಯಾಗಳು ಬರುತ್ತಲೇ ಇರುತ್ತವೆ ಆದರೆ ಅನುಷ್ಠಾನಕ್ಕೆ ಹೋಗಿರಲಿಲ್ಲ. ಮತ್ತೆ ಬ್ಲಾಗಿನ ಹಿಂದಿನ ಪೋಸ್ಟ್ ನಲ್ಲಿ ಅದೇ ತರಹದ ಅನುಭವ ಆಗಿ ಬೆಚ್ಚಿದೆ. ಥೋ.....ಛೆ ...ಎನ್ನುತ್ತಾ.

6 comments:

ಮನಸಿನ ಮಾತುಗಳು said...

ನಂಗೂ ಒಂದು ಪ್ರಸಂಗ ನೆನಪು ಬತಾ ಇದ್ದು ನಿನ್ article ನೋಡಿ.ಮೊನ್ನೆ ನಾನು BMTC ಬಸ್ಸಲ್ಲಿ ಬರ್ತಾ ಇದ್ದೆ.ನನಗೆ ಸೀಟ್ ಸಿಕ್ಕಿತ್ತು.. ಸ್ವಲ್ಪ ದೂರ ಹೋದ ಮೇಲೆ ತುಂಬಾ ವಯಸ್ಸಾದ ಒಂದು ಮಹಿಳೆ ಬಂದರು.ನಾನು ಕೂತಿದ್ದೇನೂ "ಹಿರಿಯ ಮಹಿಳೆಯರಿಗೆ"ಮೀಸಲಾತಿ ಸೀಟ್ ಆಗಿರಲಿಲ್ಲ.ಬಸ್ ತುಂಬಾ ರಶ್ ಇತ್ತು.ಅವ್ರು ನಿಂತೇ ಇದ್ದಿದ್ದನ್ನು ನೋಡ್ತಾ ನನಗೆ ಕೂತ್ಕೊಳ್ಳೋಕೆ ಮನಸು ಬರಲಿಲ್ಲ.ಸೀಟ್ ಬಿಟ್ಟು ಕೂತ್ಕೊಳ್ಳಿ ಅಂದೆ. ಅದಕ್ಕೆ ಅವ್ರು..." see lady.I know I am aged. You may not make me realize. No thanks. Please sit down " ಅಂದು ಬಿಟ್ರು.ನಾನು ಮಾಡಿದ್ದು ಸರಿಯೋ ತಪ್ಪೋ ಕಡೆವರೆಗೂ ನನಗೆ ಗೊತ್ತಾಗಲೇ ಇಲ್ಲ!!

ಸೀತಾರಾಮ. ಕೆ. / SITARAM.K said...

ಇಂತಹ ಪ್ರಸಂಗಗಳು ಸಾಮಾನ್ಯ. ನನಗು ಅನಿಸಿ ಇಂಥಹ ಪ್ರಸಂಗ ಊಹಿಸಿ ಹಿಂದೆ ಸರಿದದ್ದುಂಟು.

ಶಿವಕುಮಾರ said...

nimma chinnadantha gunakke namma namana.
naanu kooda bhatta beleyuva rathana maga, nijavagiyu bhatta beleyorige dakkodu astaralle ide,
hagene namage devru shramada jothege swabhimaananu swalpa jaasti ,antha tilkotene,.monne naanu nam ajji hallili ondu ajjige help madona andaglu heege aytu....

ಮಹಾಬಲಗಿರಿ ಭಟ್ಟ said...

ಆನಂತರವೂ ಚೌರ ಮಾಡಿಸದ ದಿನಗಳಲ್ಲಿ ಮಂಡೆಯೊಳಗಿನಿಂದ ಇದೇ ತರಹ ಐಡಿಯಾಗಳು ಬರುತ್ತಲೇ ಇರುತ್ತವೆ ಆದರೆ ಅನುಷ್ಠಾನಕ್ಕೆ ಹೋಗಿರಲಿಲ್ಲ. :):):):)

Dr.D.T.Krishna Murthy. said...

ವಿಚಿತ್ರ ಜಗತ್ತಿನ ವಿಚಿತ್ರ ನಡವಳಿಕೆ!ಸಹಾಯ ಮಾಡುವುದೂ ಎಂತಹ ಎಡವಟ್ಟಿಗೆ ಸಿಗಿಸಬಹುದು!

Sumanth Hegde said...

HI,

i also have same feeling. and would like to help them in one or the otherway, but not sure how...

HaageSumane