Wednesday, February 23, 2011

ನಂಬಿ ಕೆಟ್ಟವರಿಲ್ಲವೋ ಎಂಬುದೂ ಇನ್ನೊಂದು ನಂಬಿಕೆಯಷ್ಟೆ.


ಸೂರ್ಯಾಸ್ತ ಯಾ ಸೂರ್ಯೋದಯ ಎರಡೂ ಅದ್ಬುತ ಕ್ಷಣಗಳು ಅಂತ ನಾನು ಹೊಸತಾಗಿ ನಿಮಗೆ ಹೇಳಬೇಕಾಗಿಲ್ಲ.ಹಗಲು ಗಡದ್ದಾಗಿ ನಿದ್ರೆ ಹೊಡೆದು ಸಂಜೆ ದಡಕ್ಕೆನೆ ಎದ್ದು ಸೂರ್ಯನನ್ನು ನೋಡಿದರೆ ಉದಯವೋ ಅಸ್ತವೋ ಅಂತ ಹೇಳುವಲ್ಲಿ ಗೊಂದಲವಾದೀತು. ನಮಗೆ ಬಾಲ್ಯದಲ್ಲಿ ಇಂಥಹಾ ಅನುಭವ ವರ್ಷದಲ್ಲಿ ಎರಡು ಮೂರು ಬಾರಿಯಾದರೂ ಆಗುತ್ತಿತ್ತು. ಯಕ್ಷಗಾನ ಹೇಗೂ ನಿಮಗೆ ಗೊತ್ತಿದೆ, ರಾತ್ರಿ ಪೂರ್ತಿ ನಿದ್ದೆಗೆಟ್ಟು ಬೆಳಿಗ್ಗೆ ಮನೆಗೆ ಬಂದು ಮಲಗಿದರೆ ಕಿವಿಯಲ್ಲಿ ಚಂಡೆ ಮದ್ದಲೆಯದೇ ಸದ್ದು ಕಣ್ಮುಂದೆ ಕನಸೇ ಅಲ್ಲ ಎನ್ನುವಷ್ಟು ಪಕ್ಕಾ ವೇಷಧಾರಿಗಳ ಆರ್ಭಟ. ಹೀಗೆ ಸಂಜೆಯವರೆಗೂ ಮಲಗಿ ನಿದ್ರೆ ಪೂರ್ತಿಯಾದ ಮೇಲೆ ದಡಕ್ಕನೆ ಎದ್ದು ಮುಖ ತೊಳೆದು ಒಂದು ಭಸ್ಮ ಜಡಿದು ಹೂವು ಕೊಯಲು ಹೊರಟ ಘಟನೆ ಬೇಕಾದಷ್ಟಿದೆ. ಮನೆಯ ಹಿರಿಯರು "ಅಪೀ ಈ ಮೂರ್ಸಂಜೆ ಹೊತ್ತಲ್ಲಿ ಎತ್ಲಾಗೆ ಹೊಂಟ್ಯ..?" ಎಂದು ಕೇಳಿದಾಗ ಕಕ್ಕಾಬಿಕ್ಕಿಯಾಗಿ ನಂತರ "ಅಯ್ಯೋ" ಅಂದಿದ್ದು ಹಲಬಾರಿ. ಸರಿ ಅವೆಲ್ಲಾ "ಸುನೇರೇ ಫಲ್" ಬಿಡಿ, ಅಂದಿನ ಘಟನೆಯನ್ನು ಒಂಟಿಯಾಗಿ ಕುಂತು ಆಕಾಶ ನೋಡುತ್ತಾ ನೆನಪಿಸಿಕೊಂಡರೆ ತನ್ನಷ್ಟಕ್ಕೆ ಒಂದು ಮುಗುಳ್ನಗೆ ಮುಖದಲ್ಲಿ ಮೂಡುತ್ತದೆ. ಈಗ ನನಗೆ ಅವೆಲ್ಲಾ ನೆನಪಾಗಿದ್ದು ಏಕೆಂದರೆ ಶ್ರೀಕಾಂತ ದತ್ತ ಸೂರ್ಯಾಸ್ತದ ಫೋಟೋ ನೋಡಿ ಎಂದು ಮೈಲ್ ಮಾಡಿದಾಗಲೆ.

ಕ್ಯಾಮೆರಾ ಹುಚ್ಚಿನವರ ಮೊದಲ ಆದ್ಯತೆ ಸೂರ್ಯೋದಯ ಎಂಡ್ ಸೂರ್ಯಾಸ್ತ. ನಡು ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ಕುಡಿದ ನೀರನ್ನೂ ಸುಸೂ ಮಾಡಲು ಬಿಡದ ಹಾಗೆ ಬೆವರಿನ ಮೂಲಕ ಕಕ್ಕಿಸುವ ಆ ಬೆಂಕಿಯ ಉಂಡೆ ಸಂಜೆ ಮತ್ತು ಬೆಳಿಗ್ಗೆ ಬೇಡವೆಂದರೂ ನಮ್ಮ ನಿಮ್ಮ ಬಾಯಲ್ಲಿ ವಾವ್ ಎನ್ನಿಸಿಬಿಡುತ್ತಾನೆ. ಅಂತಹ ಅದ್ಬುತದ ಕ್ಷಣಗಳನ್ನು ನೋಡಿದ ಕಣ್ಣುಗಳೂ ಪರಮಪಾವನ. ನಾನು ನನ್ನ ನಲವತ್ನಾಲ್ಕನೇ ವಯಸ್ಸಿನವರೆಗೆ ಸುಮಾರು ನೂರು ಸೂರ್ಯೋದಯ ಸೂರ್ಯಾಸ್ತವನ್ನು ಅನುಭವಿಸಿದ್ದೇನೆ. ಮನೆಯಲ್ಲಿ ಕುಳಿತು ಕಣ್ಮುಚ್ಚಿದರೆ ನೋಡಿದ ಹಲವಾರು ಸೂರ್ಯೋದಯದ ಕ್ಷಣಗಳು ಕಣ್ಮುಂದೆ ಬಂದು ನಿಲ್ಲುವಷ್ಟು ಅನುಭವಿಸಿ ಮಜ ತೆಗೆದುಕೊಂಡಿದ್ದೇನೆ. "ಸಾಕು, ನೀ ಏನೋ ಹೇಳ ಹೊರಟಿದ್ದೀಯಾ ಎಂಬುದು ಪೀಠಿಕೆ ನೋಡಿದ ಕೂಡಲೆ ತಿಳಿಯಿತು ಹೇಳುವುದು ಹೇಳಿ ಮುಗಿಸಿ ಮಾರಾಯ" ಎಂದಿರಾ ಆಯ್ತು ಅದರತ್ತ ಹೊರಳುತ್ತೇನೆ.

ಗಾಯಿತ್ರಿ ಮಂತ್ರ ಎಂಬುದಿದೆಯಲ್ಲ ಅದು ಸೂರ್ಯದೇವನ ಕುರಿತಾದ್ದು ಅಂತ ಸಿಕ್ಕಾಪಟ್ಟೆ ಬಲ್ಲವರು ಯಾರೋ ಹೇಳಿದರು. ಉಷ:ಕಾಲದಲ್ಲಿ ಸೂರ್ಯನತ್ತ ಮುಖಮಾಡಿ ನಿಂತು ಗಾಯತ್ರಿ ಮಂತ್ರ ಪಠಿಸುತ್ತಾ(ಕಣ್ಮುಚ್ಚಿ ಎನ್ನುವುದು ಅಂಡರ್ ಸ್ಟುಡ್) ಅರ್ಘ್ಯ ನೀಡಿದರೆ ಸಿಕ್ಕಾಪಟ್ಟೆ ಶಕ್ತಿ ಎಂದರು ಇನ್ನೂ ತುಸು ಜಾಸ್ತಿ ಬಲ್ಲವರು. ಸರಿ ಬಿಡಿ ಹಾಗಿದ್ದಮೇಲೆ ಅದರಲ್ಲೇನಿದೆ ಎಂದೆ. ಸಿಂಪಲ್ "ಹೇ ಸೂರ್ಯ ದೇವಾ ನನ್ನಲ್ಲಿರುವ ಧೀ ಶಕ್ತಿಯನ್ನು ಪ್ರಚೋದಿಸು" ಎಂಬುದು ಭಾವಾರ್ಥ ಎಂದು ಅಲ್ಲಿಂದ ಜಾರಿಕೊಂಡರು. ಸಾಕು ಬಿಡಿ ಅಷ್ಟು ಹೇಳಿದರೆ. ಆದರೆ ಅನುಷ್ಠಾನದಲ್ಲಿ ಸ್ವಲ್ಪ ವ್ಯತ್ಯಯ ಆಗಿದೆ ಅಂತ ನನಗನ್ನಿಸತೊಡಗಿತು. ಉದಯಿಸುತ್ತಿರುವ ಸುಂದರ ಸೂರ್ಯನೆದುರು ಕಣ್ಮುಚ್ಚಿ ಗಾಯತ್ರಿ ಜಪ ಮಾಡಲು ಅಣತಿಯಿತ್ತರೆ ಮನಸ್ಸು ಮಂತ್ರದಲ್ಲಿನ "ಗಾಯಿಸ್ತ್ರೀ"ಯನ್ನಷ್ಟೇ ಹಿಡಕೊಂಡು ಎಲ್ಲೆಲ್ಲೋ ಹಾರಾಡುತ್ತದೆ ಎಂಬ ನಮ್ಮ ಹದಿಹರೆಯದವರ ಮಾತು ನೆನಪಾಗಿ ವ್ಯತ್ಯಾಸವಾದ ಲಿಂಕ್ ಎಲ್ಲಿ ಅಂತ ಪಳಕ್ಕನೆ ತಿಳಿಯಿತು. ಉದಯಿಸುತ್ತಿರುವ ಸೂರ್ಯನೆದುರು ಕಣ್ಬಿಟ್ಟು ಗಾಯತ್ರಿ ಹೇಳಿದರೆ ಎಂಬ ಆಲೋಚನೆ ಬಂದದ್ದೇ ಪ್ರಯತ್ನಿಸಿದೆ. ಸಕ್ಸಸ್ ಸೂಪರ್ ಸಕ್ಸಸ್. ಆನಂತರ ಮನೆಗೆ ಬಂದು ಕಣ್ಮುಚ್ಚಿ ಗಾಯತ್ರಿ ಹೇಳಿದಾಗಲೆಲ್ಲೆ ನನ್ನ ಕಣ್ಮುಂದೆ ಸೂರ್ಯೋದಯವಾಗತೊಡಗಿತು. ವಾವ್ ಸೂಪರ್ ಇದೆ ಕಣ್ರಿ.

ಎಂಬಲ್ಲಿಗೆ ಸೂರ್ಯೋದಯವನ್ನು ಕಣ್ತುಂಬಾ ಅನುಭವಿಸಬೇಕು ಪ್ರಶಾಂತ ಮನಸ್ಥಿತಿಯಿಂದ ಎಂಬುದು ತಿಳಿಯಿತು. ಅದಕ್ಕೇನೂ ಗಾಯತ್ರಿ ಮಂತ್ರವೇ ಆಗಿರಬೇಕೆಂದಿಲ್ಲ ಜಸ್ಟ್ ನಿಮ್ಮ ಉಸಿರಾಟವನ್ನು ಗಮನಿಸುತ್ತಾ ಅನುಭವಿಸಿದರೂ ಆಯಿತು. ಒಟ್ಟಿನಲ್ಲಿ ನಿಮ್ಮ ಮಿದುಳಿನೊಳಗೆ ಸೂರ್ಯೋದಯದ ದೃಶ್ಯಾವಳಿಗಳು ದಟ್ಟವಾದ ಕೋಶವಾಗಿ ಅದು ದಾಖಲಿಸ್ಪಡುವಂತೆ ಆಸ್ವಾದಿಸಬೇಕು,ನಂತರ ಆತ ನಮ್ಮ ಆಸ್ತಿಯಾಗುತ್ತಾನೆ. ಬೇಕಾದಾಗ ಉದ್ಭವಿಸುತ್ತಾನೆ ಮತ್ತೆ ಧೀ ಶಕ್ತಿಯನ್ನು ಕೊಡುತ್ತಾನೆ. (ನೆನಪಿರಲಿ ಧೀ ಶಕ್ತಿಯೆಂದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಏರಿಸುವುದೋ, ಅಥವಾ ನಿಮಗಾಗದವರನ್ನು ಮುಗಿಸಲೋ, ಯಾ ಚಂದದ ಹುಡುಗಿಯನ್ನೋ ದಕ್ಕಿಸಿಕೊಳ್ಳಲೋ ಇರುವುದಲ್ಲ ,). ಅದೇ ಚುಮುಚುಮು ಬೆಳಿಗ್ಗೆ ಗುಡ್ಡದ ನೆತ್ತಿಯನ್ನೇರಿ ಸೂರ್ಯೋದಯದ ಹೊತ್ತಿಗೆ ಕಣ್ಮುಚ್ಚಿ ಕುಳಿತುಕೊಂಡು ನೂರಾ ಎಂಟೇನು ಸಾವಿರದಾ ಎಂಟು ಗಾಯಿತ್ರಿ ಜಪ ಮಾಡಿದರೂ ಯಾವ ಸೂರ್ಯನೂ ಮನ:ಪಟಲದಲ್ಲಿ ಮೂಡಲು ಸಾದ್ಯವಿಲ್ಲ. ಮುನ್ನಾದಿನ ನೋಡಿದ ಟಿವಿ ಸೀರಿಯಲ್ಲಿನ ರಾಗಿಣಿಯೋ, ಟಿ ಎನ್ ಸೀತಾರಾಮೋ ಮೂಡಿ ತಕತೈ ತಕತೈ ಕುಣಿಯುತ್ತಿರುತ್ತಾರೆ. ಹಾಗಾಗದೇ ಸೂಪರ್ ತೇಜಸ್ಸು ಲವಲವಿಕೆ ನಿಮ್ಮದಾಗಬೇಕಿದ್ದಲ್ಲಿ ಸೂರ್ಯನನ್ನು ತುಂಬಿಸಿಟ್ಟುಕೊಂಡು ಶಕ್ತಿ ಪಡೆಯಬೇಕು. ಹಾ ಹೇಳಲು ಮರೆತೆ ಅದೊಂದು ಶಕ್ತಿ ಅಂತ ನಂಬಿಕೆ ಅಷ್ಟೆ. ಮತ್ತು ನಂಬಿ ಕೆಟ್ಟವರಿಲ್ಲವೋ ಎಂಬುದೂ ಇನ್ನೊಂದು ನಂಬಿಕೆಯಷ್ಟೆ.

4 comments:

Ramya said...

I am not sure I have a strong NAMBIKE that, involving Nature in prayers in Hindu Mythology or for the matter of fact in other religions also was to make sure that Man respected and protected nature around him... thats the reason concept of God was so much linked to Nature and the fear was induced to stop humans from destroying it... But now such values rarely exists :) NAMBIKE or TRUST... in few years will be just a word

- BTW neenu helaku anta ankaidyo adu nange 2 sarthi oodidmele artha aathu eega naanu bardipa comment nangu innu artha agtha ille :D

ಮಹೇಶ ಪ್ರಸಾದ ನೀರ್ಕಜೆ said...

ಗಾಯತ್ರಿ ಮಂತ್ರ ಸೂರ್ಯನ ಕುರಿತಾಗಿ ಅಥವಾ ಗಾಯತ್ರಿ ಕುರಿತಾಗಿ ಇರುವ ಮಂತ್ರ ಅಲ್ಲ ಅಂತ ಹಲವರ ಅಭಿಮತ. ನಾನೂ ಅದು ಸಾರ್ಯನ ಕುರಿತಾದ್ದು ಅಂತ ತಿಳಿದುಕೊಂಡಿಲ್ಲ.

ಅದೇನಿದ್ದರೂ ಸಂಧ್ಯಾಕಾಲವನ್ನು ಅನುಭವಿಸಲು ಯಾವ ಮಂತ್ರವಾದರೇನು ಎನ್ನುವ ಮತಕ್ಕೆ ನನ್ನ ಅಭಿಮತ :)

Muthu said...

ಸೂರ್ಯ ದೇವ ನಮ್ಮ 'ಧೀ'(ಬುದ್ಧಿ) ಶಕ್ತಿಯನ್ನು ಪ್ರಚೋದನೆಗೊಳಿಸಲಿ ಎಂಬುದು ಗಾಯಿತ್ರಿ ಮಂತ್ರದ ಸಾಮಾನ್ಯ ಅರ್ಥ.ಪೂಜ್ಯ ಡಿ.ವಿ.ಜಿ.ಅವರು
ಗಾಯಿತ್ರಿ ಮಂತ್ರವನ್ನು ಅನುವಾದಿಸಿದ್ದು ಹೀಗೆ.
"ಜಗವ ಪೆತ್ತಾ ದೇವನತಿ ಪೂಜ್ಯ ತೇಜಗಳ \
ಬಗೆವೆವಾತಂ ಪ್ರೇರಿಸುಗೆ ನಮ್ಮ ಬುದ್ಧಿಗಳ"\\
ಶ್ರೀ.ಕುವೆಂಪು ಕೂಡ ಸೂರ್ಯೋದಯದ ಬ್ರಾಹ್ಮೀ
ಮಹೂರ್ತದ ಸಂದರ್ಭದಲ್ಲಿ ಸಂಕಲ್ಪ ಶಕ್ತಿಯಿಂದ
ಹೊರ ಹೊಮ್ಮಿದ ಗಾಯಿತ್ರಿಯಿಂದ ವಸುಂಧರೆ
ವಿಧ್ಯುನ್ಮಯಿಯಾಗಿ,ಮೃಣ್ಮಯವೂ,ಚಿನ್ಮಯವಾಗಿ,
ಅತಿ ಮಾನಸ ದಿವ್ಯ ಪ್ರೇಮದಿಂದ ಅಮೃತಮಯ
ವಾದುದನ್ನ ತಮ್ಮ "ಅಪತ್ರಿಕಾ ವಾರ್ತೆ"
ಎಂಬ ಕವನದಲ್ಲಿ ಅದ್ಭುತವಾಗಿ ವರ್ಣಿಸಿದ್ದಾರೆ.
ಶಬ್ದ ಗಾರುಡಿಗ,ಬೇಂದ್ರೆ ಅಜ್ಜಾರು,ಬೆಳಗಿನ
ಮುಂಜಾವನ್ನ ಅದ್ಭುತವಾಗಿ ವರ್ಣಿಸಿದ್ದು ಹೀಗೆ;
"ಮೂಡಲ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದ....!,ನುಣ್ಣನ್ ಎರಕವಾ ಹೊಯ್ದ ....
....ದೇವಾನು ಜಗವೆಲ್ಲ ತೋಯ್ದ...!
ಗಾಯಿತ್ರಿ ಮಂತ್ರವನ್ನು ಕನಿಷ್ಠ ೨೪ ಸಲ ಹೇಳಬೇಕೆನ್ನುವದಕ್ಕೂ ಹೀಗೊಂದು ಅರ್ಥ
ಹೇಳುತ್ತಾರೆ. ಪಂಚಭೂತಗಳು (೫),
ದಶದಿಕ್ಕುಗಳು(೧೦),ನವಗ್ರಹಗಳು (೯)
೫ +೧೦ +೯ =೨೪.ಇವೆಲ್ಲ ಗಾಯಿತ್ರಿ ದೇವಿಗೆ
ನೀಡಿರುವ ಸಂಕೇತಗಳು.ಗಾಯಿತ್ರಿ ಮಂತ್ರದ
ಒಂದೊಂದು ಅಕ್ಷರಕ್ಕೂ ದೇವತೆ ಮತ್ತು ಅಂಗ
ವಿನ್ಯಾಸಗಳನ್ನು ಸೂಚಿಸಲಾಗಿದೆ. ಗಾಯಿತ್ರಿ
ಮಂತ್ರದ ೨೪ ಅಕ್ಷರಗಳನ್ನು ಉಚ್ಚರಿಸುವುದರಿಂದ
ಶರೀರದ ಅಂಗಗಳು ಜಾಗೃತವಾಗುತ್ತದೆ.ಈ
ಶಕ್ತಿಯಿಂದ ವಿಶ್ವ ದರ್ಶನ ಲಭಿಸುತ್ತದೆ ಎಂಬ
ನಂಬಿಕೆ ಇದೆ.
ಇವೆಲ್ಲಾ ಗ್ರಂಥದ ಮಾತು ಎಂದು ಕೊಂಡರು, ಬಿಡಿ..ಕೊನೆಗೆ ನಾನು ದನಿಗೂಡಿಸುವುದು "ನಂಬಿ ಕೆಟ್ಟವರಿಲ್ಲವೋ" ಎನ್ನುವ ದಾಸರ ಪದಕ್ಕೆ.
ಜೊತೆಗೆ ಮತ್ತೆ ಪೂಜ್ಯ ಗುಂಡಪ್ಪನವರ
"ಬಿಂಬವೋ ಕಂಬವೋ..ನಂಬಿಕೆಯ ಮಾತ್ರದಿಂ, ದಿಂಬುಗೊಳುವುದು ಜೀವ....
ಈಗ ಇಷ್ಟು ಸಾಕು.... ನಮಸ್ಕಾರ.

Digwas Bellemane said...

ಈ ಚಿತ್ರ ಎಲ್ಲಿದು ಹೇಳಿದ್ರೆ ಇಲ್ಲೆ.