Monday, June 27, 2011

ಆಣೆ ಪುರಾಣ ...!

"ದೇವ್ರಾಣೆ ಯಂಗೊತ್ತಿಲ್ಲೆ", (ನನಗೆ ಗೊತ್ತಿಲ್ಲ) ಎಂದು ನಾವೆಲ್ಲ ಸಣ್ಣಕ್ಕಿದ್ದಾಗ ಗೊತ್ತಿದ್ದ ವಿಷಯಗಳಿಗೂ ಹೇಳುತ್ತಿದ್ದೆವು. ಗೊತ್ತಿಲ್ಲದ ವಿಷಯಕ್ಕಂತೂ ಹೇಗೂ ಹೇಳುತ್ತಿದ್ದೆವು. ಆದರೆ ಪರಿಣಾಮ ದುಷ್ಪರಿಣಾಮ ಎರಡೂ ಆಗಿದ್ದ ಸಾಕ್ಷಿಗಳು ಇಲ್ಲ ಬಿಡಿ. ವಾರದಿಂದೀಚೆಗೆ ನಮ್ಮ ರಾಜ್ಯ ಮಟ್ಟದಲ್ಲಿ ಆಣೆ ಪ್ರಮಾಣ ಪ್ರಹಸನ ನಡೆಯುತ್ತಿದ್ದಾಗ ನನಗೂ ಅವೆಲ್ಲಾ ನೆನಪಿಗೆ ಬಂತು. ನಮ್ಮೂರಲ್ಲಿ ಒಬ್ಬರಿದ್ದಾರೆ. ಅವರ ಬಳಿ ಯಾರಾದರೂ "ಒಂದು ನೂರು ರೂಪಾಯಿ ಇದ್ರೆ ಕೊಡು" ಅಂತ ಕೇಳಿದರೆ ಅವರು ಅದಕ್ಕೆ "ದೇವ್ರಾಣೆ ದಮಡಿ ಕಾಸೂ ಇಲ್ಲ ಮಾರಾಯ" ಎನ್ನುತ್ತಾರೆ ಲಾಗಾಯ್ತಿನಿಂದಲೂ. ಹಾಗೆ ಅವರು ಧೈರ್ಯವಾಗಿ ದೇವರನ್ನು ಆಣೆಕಟ್ಟಿ ತನ್ನ ಬಳಿ ಇರುವ ದುಡ್ಡನ್ನು ಇಲ್ಲ ಎನ್ನುತ್ತಲೇ ಬಂದಿದ್ದಾರೆ, ದೇವ್ರಾಣೆ ಕಟ್ಟಿದ್ದರಿಂದ ಯಾವ ಪರಿಣಾಮವೂ ಆಗಿಲ್ಲ ಅವರು ಜತನವಾಗಿ ಕಾಪಿಟ್ಟುಕೊಂಡು ಬಂದ ದುಡ್ಡಿನ ಗಂಟಿನ ಮೇಲೆ. ಇರಲಿಬಿಡಿ ನಮಗೆ ನಿಮಗೆ ಯಾತಕ್ಕೆ ಬೇರೆಯವರ ಗಂಟಿನ ಚಿಂತೆ. ನಮ್ಮೂರಲ್ಲಿ ಒಬ್ಬಾತನಿದ್ದ, ಆತ ಸಂಜೆಮುಂದೆ ಸ್ವಲ್ಪ ಗಳಾಸು ತೆಗೆದುಕೊಂಡು ರಂಗಾಗುತ್ತಿದ್ದ. ಆ ರಂಗಾದ ಸಮಯದಲ್ಲಿ "ಏಯ್ ಏನಾ ಮಾರಾಯ ನಿನ್ನಂಥೋರು ಹೀಗೆ ಕುಡಿದರೆ ಎಂತಾ ಕಥೆಯಾ" ಎಂದು ಯಾರಾದರೂ ಕೇಳಿದರೆ "ಅಮ್ಮನ ಮೇಲಾಣೆ ನಾನು ಕುಡಿಯದು ಬಿಟ್ಟು ಒಂದು ವರ್ಷ ಆತು’ ಎನ್ನುತ್ತಾ ಅರಾಮಾಗಿದ್ದ. ಮತ್ತೊಂದು ಘಟನೆ ಒಳ್ಳೆ ಮಜ ಇದೆ. ನನ್ನ ಮೊಬೈಲ್ ಕಾಣೆಯಾಯಿತು. ಅದಕ್ಕೆ ಕಾರಣ ಗ್ಯಾರೇಜ್ ಹುಡುಗ ಅಂತ ಪಕ್ಕಾ ಆಗಿಹೋಯಿತು. ಆತನ ಬಳಿ ವಿಚಾರಿಸಿದಾಗ ಆತ ಹಿಂದುಮುಂದು ನೋಡದೆ "ಧರ್ಮಸ್ಥಳದ ದೇವರಾಣೆ ನಾನು ಕದ್ದಿಲ್ಲ,ನಾನು ಅಂಥಹವನಲ್ಲ" ಎಂದು ಅಳತೊಡಗಿದ. ನನ್ನ ಜತೆಯಲ್ಲಿದವನೊಬ್ಬ "ಬೋ...ಮಗನೆ ನಿನಗೆ ಆಣೆ ಭಾಷೆ ಬೇರೆ ಕೇಡು, ತಲೆ ಬುಲ್ಡೆ ಬಿಚ್ಚೋ ತರಹ ಬಡಿತೇನೆ ನೋಡು ಈಗ " ಎನ್ನುತ್ತಾ ಕೈಯೆತ್ತಿಕೊಂಡು ಹೊಡೆಯಲು ಹೋದಾಗ "ಅಯ್ಯೋ ಹೊಡಿಬ್ಯಾಡಣ್ಣ ಮನೇಲಿ ಇದೆ ಮೊಬೈಲ್, ತರ್ತೀನಿ ಈಗ" ಎನ್ನುತ್ತಾ ಓಟ ಕಿತ್ತ. ಅದು ಕಳೆದು ಎರಡು ವರ್ಷ ಸಂದಿದೆ ಆತ ಅರಾಮಾಗಿ "ದಸ್ ನಂಬರ್ ಸ್ಪ್ಯಾನರ್ ಲಾರೇ..."ಎನ್ನುತ್ತಾ ಅರಾಂ ಆಗಿದ್ದಾನೆ. ಆಯ್ತು ಈಗ ನೇರವಾಗಿ ಹೇಳಹೊರಟಿರುವುದನ್ನು ಹೇಳಿಬಿಡುತ್ತೇನೆ ಕೇಳಿ.
ಸಿ ಎಂ ಎಂಡ್ ಮಾಜಿ ಸಿ ಎಂ ಆಣೆ ಪ್ರಮಾಣ ಮಾಡುತ್ತೇನೆಂದು ಜಗಜ್ಜಾಹೀರು ಮಾಡಿದಾಗ ನಿಜವಾಗಿ ಬೆಚ್ಚಿಬಿದ್ದವರು ವಿರೇಂದ್ರ ಹೆಗ್ಗಡೆಯವರಂತೆ. ಕಾರಣ ಇಬ್ಬರೂ ಸ್ಥಳಕ್ಕೆ ಬಂದು ಆಣೆ ಮಾಡಿ ವಾಪಾಸು ತೆರಳಿ ವಾರದೊಳಗೋ, ತಿಂಗಳೊಳಗೋ ಸಣ್ಣಪುಟ್ಟ ಬರ್ ಬರ್ ಭೇಧಿಯಿಂದ ಹಿಡಿದು ಬೃಹತ್ ಪ್ರಮಾಣದ ಯಾವುದೇ ತೊಂದರೆ ಆದರೆ ಸರಿ, ಕ್ಷೇತ್ರದ ಸತ್ಯಾಸತ್ಯತೆಯ ಬಗ್ಗೆ ಮತ್ತಷ್ಟು ರಕ್ಕೆಪುಕ್ಕ ಸಿಗುತ್ತದೆ. ಆದರೆ ಎನೂ ಆಗದೇ ಇದ್ದರೆ ...! ಆವಾಗ ಕ್ಷೇತ್ರದ ಆಣೆಗೆ ರಾಜ್ಯದಲ್ಲಿ ಸಿಕ್ಕಾಪಟ್ಟೆ ಹಿನ್ನಡೆ...! ತತ್ ಪರಿಣಾಮ ಕ್ಷೇತ್ರದ ಬೊಕ್ಕಸ....! ಇವೆಲ್ಲಾ ರಗಳೆಯೇ ಬೇಡ ಎಂದು ಫೋನ್ ಟೊಂಯ್ ಪಂಯ್ ಎಂದು ದಿಲ್ಲಿಯ ತಲೆಯವರೆಗೂ ಹರಿಬಿಟ್ಟರಂತೆ. ಅಲ್ಲಿಂದ ಗಡ್ಕರಿ ಯಡ್ಡಿಗೆ ಗುದ್ದಿದರಂತೆ ಎಂಬಲ್ಲಿಗೆ ಆಣೆಪ್ರಮಾಣ ಬಂದ್ ಆಯಿತೆಂದು ನನ್ನ ಮಿತ್ರನೊಬ್ಬ ಇಲ್ಲಿ ಆಣೆಪ್ರಮಾಣ ಮಾಡಿ ಹೇಳುತ್ತಿದ್ದಾನೆ. ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು.

3 comments:

ಸೀತಾರಾಮ. ಕೆ. / SITARAM.K said...
This comment has been removed by the author.
sridharbandri said...

ಸ್ವಾಮಿ ಮೊನ್ನೆ ದೂರದರ್ಶನದ ವಾಹಿನಿಯೊಂದರಲ್ಲಿ ಭಾಗವಹಿಸಿದ್ದ ಮಹನೀಯರೊಬ್ಬರು ಹೇಳುತ್ತಿದ್ದರು, ಅದೇನೆಂದರೆ ರಾಜಕೀಯ ವ್ಯಕ್ತಿಗಳು ಅಧಿಕಾರ ಸ್ವೀಕರಿಸುವಾಗ ದೇವರ ಮೇಲೆ ಪ್ರಮಾಣ ಮಾಡಿಯೇ ತಾನು ಸಂವಿಧಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆಂದು ನುಡಿಯುತ್ತಾರೆ. ಹಾಗೆಯೇ ಭಗವಂತನ ಮೇಲೆ ಪ್ರಮಾಣ ಮಾಡಿಯೇ ಕೋರ್ಟಿನಲ್ಲಿ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಾರೆ. ಅವರಿಗೆಲ್ಲಾ ದೇವರು ಏನಾದರೂ ಮಾಡಿದ್ದಾನೆಯೇ? ಎಲ್ಲರಿಗೂ ಗೊತ್ತಾಗುವಂತೆ ಇಲ್ಲ ಆದ್ದರಿಂದ ಈ ಹಾಮು ಮತ್ತು ಮಾಮುಗಳು ಧೈರ್ಯವಾಗಿ ಮಂಜುನಾಥನ ಮೇಲೆಯೇ ಆಣೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ/ಇಳಿದಿದ್ದಾರೆ. ನಿಜಕ್ಕೂ ನಮ್ಮ ಕನ್ನಡಿಗರನ್ನು ಆ ಧರ್ಮಸ್ಥಳದ ಶ್ರೀ ಮಂಜುನಾಥನೇ ಕಾಪಾಡಬೇಕು.

ಸೀತಾರಾಮ. ಕೆ. / SITARAM.K said...

ದೇವರಾಣೆಗೂ ನಿಜವಾದ ಮಾತು.....