Wednesday, June 29, 2011

ಬಿಸಿಲೇರಿ.....! ಬಾಟಲ್ ನ ಎದುರು ನಿಕ್ಕಿಯಾಗುತ್ತಿದೆ....!

ಲಿಂಗನಮಕ್ಕಿಯ ಹಿನ್ನೀರಿನಲ್ಲಿ ಮೇ ತಿಂಗಳಿನಲ್ಲಿ ಬಗಲಿಗೊಂದು ಕ್ಯಾಮೆರಾ ನೇತಾಕಿ ಓಡಾಡಿದರೆ ಇಂತಹ ಸಾವಿರ ಫೋಟೋ ತೆಗೆಯಬಹುದು. ಅಲ್ಲಿನ ಸೌಂದರ್ಯ ನೋಡಿ "ವಾವ್" ಎನ್ನಬಹುದು. ಜತೆಗೆ ನಲ್ಲೆಯೋ ನಲ್ಲನೋ ಇದ್ದರೆ ಬಿರುಕುಬಿಟ್ಟ ಮಣ್ಣಿನ ಮೇಲೆ ಚರ್ ಪರ್ ಎಂದು ಓಡಾಡುತ್ತ ಕೈಕೈ ಹಿಡಿದುಕೊಂಡು ಸಿನೆಮಾ ಹಾಡು ಗುಣುಗುಣಿಸಬಹುದು. ತೀರಾ ಸ್ವರ ಕೆಟ್ಟದಾಗಿರದಿದ್ದರೆ ಹಾಡನ್ನು ಗಂಟಲು ಬಿರಿಯುವಂತೆ ಕೂಗಿಯೂ ಹೇಳಬಹುದು. ಅಲ್ಲಿ ನೀವು ನೀವೆ ನಾವು ನಾವೆ. ಕಿಲೋಮೀಟರ್ ಗಟ್ಟಲೆ ಸಾಗಿದರೂ ಜನರಿಲ್ಲ ಜಂಜಾಟವಿಲ್ಲ. ಪಶ್ಚಿಮಘಟ್ಟದ ಸಾಲುಗಳು ನಿಮ್ಮನ್ನೂ ಉದ್ದಕ್ಕೂ ಸ್ವಾಗತಿಸುತ್ತವೆ. ಬಕ್ಕತಲೆಯ ಸುತ್ತ ಕರಿಕೂದಲು ಹಬ್ಬಿದಂತೆ ಭಾಸವಾಗುವ ನದಿಗುಂಟ ನಿರ್ಮಾನುಷ ಸ್ವರ್ಗ. ಇದು ಇಂದಿನ ಕಾಲದ ಶರಾವತಿ ನದಿಯ ಹಿನ್ನೀರಿನ ಚಿತ್ರಣ.
ನಿಮಗೆ ಈಗ ಸರಿಸುಮಾರು ಐವತ್ತು ವರ್ಷದ ಹಿಂದೆ ಕತೆಗಳಮೂಲಕ ಹಿಂದೆ ಹೋಗುವ ಆಸಕ್ತಿಯಿದ್ದರೆ ಹೀಗೆ ಸಾಗುವ ಮಾರ್ಗದಲ್ಲಿ ನೂರಾರು ಹಳ್ಳಿಗಳಿದ್ದವು. ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ಆ ಹಳ್ಳಿಗಳನ್ನು ಮುಳುಗಿಸಲಾಯಿತು. ಬಿಡಿ ಅಭಿವೃದ್ಧಿಗೋಸ್ಕರ ಒಂದಿಷ್ಟು ಜನರ ತ್ಯಾಗ ಬಲಿದಾನ ಎಂಬುದು ನಾಗರಿಕ ಪ್ರಪಂಚದ ಅನಿವಾರ್ಯತೆ. ನಮಗೆ ಅದನ್ನೆಲ್ಲಾ ಪೊಳ್ಳುವಾದಗಳಿಂದ ವಿರೋಧಿಸಿ ಬದುಕುವ ತಾಕತ್ತೂ ಇಲ್ಲ. ಕಾಡು ಕಡಿಯಬಾರದು ಆಣೆಕಟ್ಟು ಕಟ್ಟಬಾರದು ನಿರಂತರ ವಿದ್ಯುತ್ ನೀಡಬೇಕು, ಮುಂತಾದ ಅರ್ಥವಿಲ್ಲದ ತರ್ಕಕ್ಕೆ ಸಮಯ ಹಾಳುಮಾಡಿಕೊಳ್ಳುವುದು ಬೇಡ. ನಾನು ಈಗ ಹೇಳಹೊರಟಿರುವುದು ಇಂತಿಪ್ಪ ಪಶ್ಚಿಮಘಟ್ಟದ ವಲಯವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸರ್ಕಾರ ಸೇರಿಸುತ್ತಲಿದೆ ಎಂಬುದು. ಕೇರಳದವರೆಗೂ ಹರಡಿಕೊಂಡಿರುವ ಪಶ್ಚಿಮಘಟ್ಟ ಅತ್ಯದ್ಬುತ ಜೈವಿಕ ಸಸ್ಯ ಸಂಪತ್ತನ್ನು ಹೊಂದಿತ್ತು ಈಗ ಬಾಗಶಃ ಹೊಂದಿದೆ. ಇಲ್ಲಿ ಸಿಂಗಳೀಕ ಎನ್ನುವ ಅಪರೂಪದ ಪ್ರಾಣಿಯಿಂದ ಹಿಡಿದು ಉಡ,ಕಬ್ಬೆಕ್ಕು, ಪುನುಗುಬೆಕ್ಕು, ಇತ್ಯಾದಿ ಇತ್ಯಾದಿ ನೂರಾರು ಜಾತಿಯ ಪ್ರಾಣಿ ಪಕ್ಷಿ ಕೀಟ ಪ್ರಪಂಚವಿದೆ. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಇದನ್ನು ಸೇರಿಸಿ ತನ್ಮೂಲಕ ಇಲ್ಲಿಯವೆರೆಗೆ ಇರುವ ಆ ಜೀವಿಗಳನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡು ಹೋಗುವ ಗುರಿ ನಮ್ಮ ಸರ್ಕಾರದ್ದು. ಅದಕ್ಕೆ ರಾಜ್ಯ ಸರ್ಕಾರ ವಿರೋಧಿಸುತ್ತಿದೆ ಅಂತ ಪೇಪರ್ ನ್ಯೂಸು. ಹೀಗೆ ಯುನೆಸ್ಕೋ ಗೆ ಸೇರಿಸುವುದರಿಂದ ಇಲ್ಲಿನ ಜನಜೀವನದ ಮೇಲೆ ಅನೇಕ ದುಷ್ಪರಿಣಾಮ ಖಂಡಿತ ಎಂಬುದು ಒಂದಷ್ಟು ಜನರ ವಾದವಾದರೆ ಇಲ್ಲ ಹಾಗೆ ಮಾಡುವುದರಿಂದ ಸಿಕ್ಕಾಪಟ್ಟೆ ಅನುಕೂಲ ಎಂಬುದು ಮತ್ತೊಂದಿಷ್ಟು ಜನರ ಆಂಬೋಣ. ಸಮರ್ಪಕ ರೀತಿಯ ಕಾರ್ಯ ಕಾರಣಗಳು ಯಾರಿಗೂ ತಿಳಿದಿಲ್ಲ. ಹಿಂದೆ ಕಾಂಗ್ರೆಸ್ ಸರ್ಕಾರ ವಿದ್ದಾಗ ಅನಂತ ಹೆಗಡೆ ಅಶೀಸರ ಎಂಬಂತಹ ಹತ್ತು ಹಲವಾರು ಪರಿಸರ ವಾದಿಗಳು ಇದ್ದರು. ಈಗ ಅವರೆಲ್ಲಾ ಗೂಟದಕಾರಿನ ಪರಿಸವಾದಿಗಳು ಬಿಜೆಪಿ ಸರ್ಕಾರದಲ್ಲಿ...!. ಹಾಗಾಗಿ ಜನಸಾಮಾನ್ಯರು ಗೊಂದಲದಲ್ಲಿ ಕಣ್ಣುಕಣ್ಣು ಬಿಡುವಂತಾಗಿದೆ.
ಇಲ್ಲಿ ಉತ್ತುತ್ತಲಿದ್ದಾರೆ ರೈತರು.ಇಲ್ಲಿ ಬಿತ್ತುತ್ತಲಿದ್ದಾರೆ ರೈತರು, ಅವರುಗಳಿಗೆ ಇದ್ಯಾವುದರ ಪರಿವೆಯೂ ಇಲ್ಲ. ಅಲ್ಲಿ ಮೇಲ್ಮಟ್ಟದಲ್ಲಿ ಇವರದೇ ಜೀವನದ ಕುರಿತು ತೀರ್ಮಾನಗಳು ಎಸಿ ರೂಂ ನಲ್ಲಿ ಬಿಸ್ಲೇರಿ ಬಾಟಲ್ ನ ಎದುರು ನಿಕ್ಕಿಯಾಗುತ್ತಿದೆ. ಮುಂದೊಂದು ದಿನ ಚಿತ್ರದಲ್ಲಿನ ಮರದ ಚಕ್ಕಳಗಳಂತೆ ಇಲ್ಲಿನ ಮನುಷ್ಯರಾದರೂ ಆಶ್ಚರ್ಯವಿಲ್ಲ ಅಥವಾ ಪ್ರಕೃತಿ ಗರಿಬಿಚ್ಚಿ ನರ್ತಿಸತೊಡಗಿದರೂ ಆಶ್ಚರ್ಯವಿಲ್ಲ.
ಒಟ್ಟಿನಲ್ಲಿ ಏನೇನೋ ಆಗುತ್ತದೆ "ತೆನವಿನಾ ತೃಣಮಪಿ ನಚಲತಿ" ಅಂತ ನಾವು ನೋಡುತ್ತಾ ಇರುವುದು ಕ್ಷೇಮ.