Thursday, June 30, 2011

ಕಬ್ಬಿಣದ ಸಟ್ಟುಗವೂ ಪರಿ ಪರಿಮಳ ಒಗ್ಗರಣೆಯೂ

ಹೌದೇ ಹೌದು ಬಿಡಿ. ಏನು? ಹೌದೇ ಹೌದು ಅಂತ ಅಂದಿರಾ..? ಹಾಗಾದರೆ ಕೊರೆಯಿಸಿಕೊಳ್ಳಲು ತಯಾರಾಗಿ. ಇತಿಹಾಸ ಮರುಕಳಿಸುತ್ತದೆ ಎಂಬ ವಿಚಾರ ಹೌದೇ ಹೌದು ಅಂತ ಅಂದೆ. ನನಗೆ ಅದರ ಅರಿವಾದದ್ದು ಮೊನ್ನೆ ಕೊಡ್ಲುತೋಟದ ರಮೇಶ ಎಂಬ ಹಳ್ಳಿವೈದ್ಯರ ಬಳಿ ಅರ್ದಾಂಗಿಗೆ ಥಂಡಿ ಔಷಧಿ ತೆಗೆದುಕೊಳ್ಳಲು ಹೋದಾಗ. ಕಟಕಟ ಎಂದು ಸದ್ದು ಮಾಡುತ್ತಾ ಕಂಪ್ಯೂಟರ್ ಮುಂದೆ ಕುಳಿತು ಕುಟ್ಟುತ್ತಿರುವ ಈ ನನ್ನ ದೇಹದಿಂದ ಹಿಡಿದು ಮೌನವಾಗಿ ಈ ಅಕ್ಷರಗಳನ್ನು ನಿಮ್ಮ ಮಿದುಳಿನೊಳಗೆ ದೃಶ್ಯವಾಗಿ ರೂಪಿಸಿಕೊಳ್ಳುತ್ತಿರುವ ನಿಮ್ಮ ದೇಹಕ್ಕೆ ಹಲವಾರು ಬಗೆಬಗೆ ಅಂಶಗಳು ಆಹಾರ ರೂಪದಲ್ಲಿ ಬೇಕಂತೆ. ನನಗೆ ಗೊತ್ತಿರುವ ಅಂಶವೆಂದರೆ ಹಸಿವಾದಾಗ ಮುಕ್ಕಲು ನೇರ್ಲೇ ಹಣ್ಣಿನಿಂದ ಹಿಡಿದು ನೆಲ್ಲಿ ಸಟ್ಟಿನವರೆಗೆ, ಹೂರಣ ಹೋಳಿಗೆಯಿಂದ ಹಿಡಿದು ಅವಲಕ್ಕಿ ಚುಡುವಾದವರೆಗೆ ಅಂತಿಮವಾಗಿ ಮಸಾಲೆದೋಸೆಯಿಂದ ಹಿಡಿದು ಪರೋಟಾ ಕುರ್ಮಾದ ತನಕ ಯಾವುದಾದರೂ ಆದೀತು. ಆದರೆ ಈ ದೇಹವೆಂಬ ದೇಹ ಆರೋಗ್ಯವಾಗಿ ನಳನಳಿಸಿ ಪಳಪಳನೆ ಮಿಂಚಲು ಕಬ್ಬಿಣ ಮುಂತಾದ ಸತು ಸತ್ವಗಳು ಬೇಕಂತೆ. ತನ್ಮೂಲಕ ವಾತ-ಪಿತ್ಥ -ಕಫ ಎಂಬುದು ಸಮಪಾತದಲ್ಲಿ ಇದ್ದು ಖಾಯಿಲೆ-ಕಸಾಲೆ ಗಾವುದ ದೂರವಂತೆ, ಇರಲಿ ಇರಲಿ ಅದು ವೈದ್ಯಲೋಕದ ಘಟಾನುಘಟಿಗಳಿಗೆ ಬಿಟ್ಟು ನಮ್ಮ ನಿಮ್ಮಂತ ಪಾಮರರ ಮಟ್ಟಕ್ಕೆ ಮಾತನಾಡೊಣ.
ದೇಹಕ್ಕೆ ಕಬ್ಬಿಣದ ಅಂಶ ಸೊಪ್ಪು ತರಕಾರಿಗಳ ಮೂಲಕ ಪೂರೈಕೆಯಾಗುತ್ತದೆಯಂತೆ. ಜತೆಜತೆಯಲ್ಲಿ ಒಗ್ಗರಣೆ ಹಾಕುವ ಸಟ್ಟುಗವೂ ಕೂಡ ದೇಹಕ್ಕೆ ಕಬ್ಬಿಣದ ಅಂಶ ಪೂರೈಸುತ್ತದೆಯಂತೆ. ಅದಕ್ಕೆ ಹಿಂದಿನವರು ಕಬ್ಬಿಣದ ಸೌಟನ್ನು ಒಗ್ಗರಣೆಗೆ ಬಳಸುತ್ತಿದಾರಂತೆ,ಮತ್ತು ಅವರು ಸಿಕ್ಕಾಪಟ್ಟೆ ಗಟ್ಟಿಯಂತೆ ಕಬ್ಬಿಣದಂತೆ. ಕಾಲನ ಹೊಡೆತಕ್ಕೆ ಸಿಕ್ಕಿದ ಕರಿಕಪ್ಪನೆಯ ಅಂದವಿಲ್ಲದ ಆಕಾರವಿಲ್ಲದ ಕಬ್ಬಿಣದ ಒಗ್ಗರಣೆ ಸೌಟು ತಳಕು ಬಳುಕಿನ ಸ್ಟೀಲ್ ಒಗ್ಗರಣೆ ಸೌಟಿನೆದುರು ಸೋತು ಸುಣ್ಣವಾಗಿ ಅಟ್ಟ ಸೇರಿದ ಹತ್ತಿಪ್ಪತ್ತು ವರ್ಷಗಳ ನಂತರ ಮನುಷ್ಯರಿಗೆ ಅವರ ದೇಹದಲ್ಲಿ ಅದರಲ್ಲಿಯೂ ಒಂದು ತೂಕ ಹೆಚ್ಚಾಗಿ ಹೆಂಗಸರಿಗೆ ಕಬ್ಬಿಣದ ಅಂಶದ ಕೊರತೆಯಿಂದ ಉಂಟಾಗುವ ಖಾಯಿಲೆಯ ಪ್ರಮಾಣ ಹೆಚ್ಚಾಗಿದೆಯಂತೆ. ಅದಕ್ಕೆ ಪ್ರಮುಖ ಕಾರಣ ಒಗ್ಗರಣೆಗೆ ಬಳಸುತ್ತಿದ್ದ ಕಬ್ಬಿಣದ ಸೌಟು ಅಟ್ಟ ಸೇರಿದ್ದು. ಇಂತಿಪ್ಪ ವಿಚಾರಗಳು ನಾಟಿ ವೈದ್ಯರ ಮೂಲಕ ನನ್ನಾಕೆಯ ಮಿದುಳಿನೊಳಗೆ ಅಚ್ಚಾಗಿ ನಂತರ ಕಬ್ಬಿಣದ ಸೌಟು ಮಾರುಕಟ್ಟೆಯಿಂದ ತರಲು ಆದೇಶ ಹೊರಬಿತ್ತು.
ಮಾರುಕಟ್ಟೆಯಲ್ಲಿ ಕಬ್ಬಿಣದ ಒಗ್ಗರಣೆ ಸೌಟು ಅಂದರೆ ಮಿಕಿಮಿಕಿ ನೋಡುವ ಪರಿಸ್ಥಿತಿ. ಅದು ಮಾರುಕಟ್ಟೆಯಿಂದ ಮಾಯವಾಗಿ ಮೂವತ್ತು ವರ್ಷಗಳೇ ಸಂದಿವೆಯಂತೆ. ಅದು ನಿಜವಾದ್ ಪ್ಯೂರ್..! ಕಬ್ಬಿಣದ ಹುಟ್ಟಿನ ಹಿಡಿಕೆ ಚಪ್ಪಟೆಯಾಗಿ ಇರುತ್ತದೆಯಂತೆ. ಒರಿಜಿನಲ್ ಕಬ್ಬಿಣ ರೌಂಡ್ ಆಕಾರ ಹಾಗೂ ಸಿಕ್ಕಾಪಟ್ಟೆ ದೊಡ್ಡ ತಟ್ಟೆ ಮಾಡಲು ಆಗದಂತೆ ಎಂಬ ಮಾಹಿತಿಯೊಂದಿಗೆ ಹತ್ತಾರು ಅಂಗಡಿ ತಿರುಗಿದೆ. ಕೊನೆಯದಾಗಿ ಜೇಡರ ವಾಸಸ್ಥಾನದಂತಿದ್ದ ಕಪ್ಪನೆಯ ಒಂದು ಅಂಗಡಿಯಲ್ಲಿ ಸಿಕ್ಕಿತು. ಆತನಿಗೋ ಪರಮಸಂತೋಷ, ಗಿರಾಕಿ ಕೇಳದೇ ಇದ್ದ ವಸ್ತು ನಾನು ಕೇಳಿದ್ದೆ. ಖುಶ್ ಖುಷಿಯಾಗಿ ಹುಡುಕಿ ತಂದುಕೊಟ್ಟ ಚಪ್ಪಟೆ ಹಿಡಿಕೆಯ ಸಣ್ಣ ಬಟ್ಟಲಿನ ಕಬ್ಬಿಣದ ಒಗ್ಗರಣೆ ಸೌಟನ್ನ. ದರ ಕೇಳಿದೆ. ನೂರಾ ಅರವತ್ತು ಅಂದ. ಒಮ್ಮೆ ತಲೆ ದಿಂ ಅಂತು. "ಇಲ್ಲಾ ಸಾರ್, ಈಗ ಒರಿಜಿನಲ್ ಸಟ್ಟುಗ ಇಲ್ಲೆಲ್ಲೂ ಸಿಗೋದಿಲ್ಲ ತಮಿಳುನಾಡಿನಿಂದ ತರಿಸಬೇಕು, ಅದಕ್ಕೆ ದುಬಾರಿ" ಎಂದ. ಮಡದಿಯ ಸಂತೋಷದೆದುರು ನೂರಾ ಅರವತ್ತು ಯಾವಲೆಕ್ಕ ಅಂತ ಅನ್ನಿಸಿ ತೆತ್ತು ಮನೆಗೆ ತಂದೆ.
ಅದಕ್ಕೆ ಸೊಪ್ಪುಸದೆಗಳಿಂದ ಅದನ್ನು ತಿಕ್ಕಿ ತೀಡಿ ೨-೩ ದಿನಗಳ ನಂತರ ಒಗ್ಗರಣೆಗಾಗಿ ಅದನ್ನು ನನ್ನವಳು ಬಳಸತೊಡಗಿದ್ದಾಳೆ. ನೀವೂ ಬನ್ನಿ ಅದರಲ್ಲಿನ ಒಗ್ಗರಣೆಯ ಪದಾರ್ಥ ತಿಂದು ಕಬ್ಬಿಣದಂತೆ ಗಟ್ಟಿಯಾಗಿ ಆರೋಗ್ಯವಂತಾರಗಬಹುದು ಎಂಬುದು ನನ್ನ ಈಗಿನ ಮಾತು. ಈಗ ಹೇಳಿ ನಿಮಗೂ ಹೌದೇ ಹೌದು ಅಂತ ಅನ್ನಿಸುತ್ತಿಲ್ಲವೇ?