Monday, May 26, 2008

ಬಂತು ಮಳೆ . ಚಳಕ್ ಎಂತು ಬೆನ್ನಿನ ಎಳೆ







26-05-2008



ನಿನ್ನೆ ಘೋರಾಕಾರದ ಬಿಸಿಲು. ಯಡ್ಡಿ ಚುನಾವಣೆಯ ದಗೆ,ಅವರು ಗೆಲ್ತಾರಾ ಇವರು ಸೋಲ್ತಾರಾ ಅನ್ನೋ ಬಿಸಿ ಬಿಸಿ ಚರ್ಚೆಯ ನಡುವೆ ಬೆವರೋ ಬೆವರು. ಆದರೆ ಇಂದು ಬೆಳಿಗ್ಗೆ ಯಡ್ಡಾದಿಡ್ಡಿ ಮಳೆ. ಬೆಂಗಳೂರಲ್ಲಿ ಯಡ್ಡಿಗೆ ತಂಪಾಗುತ್ತದೆಯೋ ಇಲ್ಲವೋ ಇನ್ನೂ ಸರಿಯಾಗಿ ಗೊತ್ತಿಲ್ಲ. ಆದರೆ ಇಲ್ಲಂತೂ ಧರೆ ತಂಪಾಯ್ತು. ಈ ತರ ದಿಡೀರನೆ ವಾತಾವರಣ ಬದಲಾದಗಲೆಲ್ಲ ಮನಸ್ಸು ಮುದುಡಿಕೊಂಡುಬಿಡುತ್ತದೆ. ಅದೇನೋ ಹೇಳಲಾರದ ತಿಳಿಯದ ಬೇಸರ. ಈ ಬೇಸರದ ನಡುವೆಯೇ ಮಳೆಯನ್ನು ನೋಡಲು ಕಿಟಿಕಿಯ ಮೂಲಕ ಕಣ್ಣಾಡಿಸಿದೆ. ಆವಾಗ ಕಣ್ಣಿಗೆ ಕಂಡಿದ್ದು ನನ್ನನ್ನು ಹದಿನೈದು ವರ್ಷದಿಂದ ಹಿಂಡಿ ಹಿಪ್ಪೆ ಮಾಡುತ್ತಿರುವ ಬೆನ್ನು ನೋವಿಗೆ ಕಾರಣವಾದ ಕರೆಂಟು ಕಂಬ. ಸ್ವಯಂಕೃತಾಪರಾಧದ ಆ ಘಟನೆ ನೆನಪಾಯಿತು.


ಅಂದು ಮೆ ೧೩ ೧೯೯೩. ಹೀಗೆ ಸಂಜೆ ಮಳೆ ಬಂತು. ಮಳೆ ಬಂದ ಸ್ವಲ್ಪ ಹೊತ್ತಿನಲ್ಲಿಯೇ ಕರೆಂಟ್ ಡಮಾರ್. ಕರೆಂಟಿಲ್ಲದೆ ಹೊತ್ತು ಕಳೆಯುವುದು ಎಂದರೆ ಬಲು ಬೇಸರ. ಮೂರು ಫೇಸಿನ ಲೈನ್ ನಲ್ಲಿ ಒಂದು ಫೇಸ್ ಕರೆಂಟು ಇತ್ತು. ಮನೆಗೆ ಕರೆಂಟ್ ತರುವ ಉಮೇದಿನಲ್ಲಿ ಕಂಬ ಹತ್ತಿದೆ. ಕಂಬ ಹತ್ತಿ ಕರೆಂಟ್ ತಂದಿದ್ದು ಅದೇ ಮೊದಲನೇ ಸರಿ ಆಗಿರಲಿಲ್ಲ. ಆದರೆ ಈ ಬಾರಿ ಅದೇನು ವ್ಯತ್ಯಾಸವಾಯಿತೋ ತಿಳಿಯಲಿಲ್ಲ. ಒಂದು ವೈರ್ ತಿರುಗಿ ಕೈಮೇಲೆ ಕುಳಿತುಕೊಂಡಿತು. ಜುಮ ಜುಮ ಇಡೀ ಮೈ ಅದೇನೋ ಆಗುತ್ತಿದೆ. ಕರೆಂಟು ಹೊಡೆಯುತ್ತಿರುವುದು ನಾನು ಕಂಬದ ಮೇಲೆ ಇರುವುದು ಎಲ್ಲಾ ತಿಳಿಯುತ್ತಿದೆ. ಆದರೆ ತಪ್ಪಿಸಿಕೊಳ್ಳಲಾಗುತ್ತಿಲ್ಲ. ಮೂರ್ನಾಲ್ಕು ಅಸಾಹಾಯಕ ಪ್ರಯತ್ನದ ನಡುವೆ ಸಾವಿನಂಚಿನ ಅನುಭವವಾದಂತಾಯಿತು. ಅಂತಹ ಸಂದರ್ಭದಲ್ಲಿ ಮನೆಯವರೆಲ್ಲಾ ನೆನಪಿಗೆ ಬಂದರು. ನನ್ನ ಇಡೀ ದೇಹ ಸಣ್ಣವಾಗುತ್ತಿರುವಂತೆಯೂ ಹಾಗೆ ಹಾಗೂ ಹಗೂರವಾದಂತೆಯೂ ಅನುಭವ ಆಗತೊಡಗಿತು. ಅಂತಹ ಸಂದರ್ಭದಲ್ಲಿಯೂ ಸಾವು ಎಂದರೆ ಇದೇನಾ, ವಾವ್ ಎನ್ನುವ ಅನುಭವ. ನಾನು ಹತ್ತಿದ ಕಂಬದೆದುರು ನಾವು ಸಣ್ಣಕ್ಕಿದ್ದ ಕಾಲದಿಂದಲೂ ನಂಬಿದ ಯಕ್ಷಿ ಬಣ್ಣ ಇತ್ತು ಜುಮ ಜುಮ ಕರೆಂಟಿನ ಷಾಕ್ ನ ನಡುವೆ ಯಕ್ಷಿಬಣ್ಣ ಕಂಡಿತು. ಅದೇನು ಪವಾಡವೋ, ಸತ್ಯವೋ, ಅಥವಾ ನನ್ನ ನಂಬಿಕೆಯೂ ನನಗೆ ಇಂದೂ ಅರ್ಥವಾಗಿಲ್ಲ. ಯಕ್ಷಿಕಲ್ಲು ಕಣ್ಣಿಗೆ ಕಂಡ ಮರುಕ್ಷಣ ನನ್ನ ಕೈಗೆ ತಗುಲಿದ್ದ ವೈರ್ ತಪ್ಪಿತು. ಕಂಬದ ಮೇಲಿಂದ ದಡಾರನೆ ಕೆಳಗೆ ಬಿದ್ದೆ. ೫೦ ಅಡಿ ಕೆಳಗೆ ಬೀಳಬೇಕಾಗಿದ್ದ ಜಾಗದಲ್ಲಿ ಸಣ್ಣ ಗಿಡವೊಂದರ ಕಾರಣದಿಂದ ೨೦ ಅಡಿ ಕೆಳಗೆ ಬಿದ್ದೆ. ಸ್ಪೈನಲ್ ಕಾರ್ಡ್ ಡಮಾರ್ ಅಂತು. ಅಲ್ಲಿಂದ ಸಾಗರಕ್ಕೆ ನಂತರ ಮಣಿಪಾಲಿಗೆ ೧೫ ದಿವಸದ ನಂತರ ವಾಪಾಸು ಮನೆಗೆ ಆನಂತರ ಮೂರು ತಿಂಗಳು ಅಪೂಟ್ ಬೆಡ್ ರೆಸ್ಟ್. ಮತ್ತೆ ನಂತರವೆಂದರೆ ಹಾಗೂ ಅದರ ಕೊಡುಗೆಯೆಂದರೆ ಈ ಗಳಿಗೆಯವರೆಗೂ ನಿರಂತರ ಕಾಡುವ ಬೆನ್ನು ನೋವು. ಆ ನೋವನ್ನು ಸಹಿಸಬಹುದು ೩೬ ಹರೆಯದ ಭಟ್ಟು ಬಾಯಿ ಕ್ಯಾನ್ಸರ್ ಬಂದು ಆಲೋಪತಿಯೆಲ್ಲಾ ಮೋಸ ನಾಟಿಯೇ ಸರಿ ಎಂದು ಮೂರುತಿಂಗಳಿಂದ ಚಕ್ಕೆ ತೆಯ್ದು ಹಚ್ಚುತ್ತಾ ಶೀಘ್ರದಲ್ಲಿಯೇ ಹುಷಾರಾಗ್ತು ನೋಡು ಎನ್ನುತ್ತಾ ಮಲಗಿದ್ದಾನೆ. ಅದಕ್ಕಿಂತ ಈ ನೋವೇ ಎಷ್ಟೋ ವಾಸಿ ಎಂಬ ಸಮಾಧಾನ.



ಇದು ಒಂದು ಗಳಿಗೆಯ ಕರೆಂಟ್ ಪಡೆಯಲು ಹೋದ ಕತೆ. ಕೆ.ಇ.ಬಿ ಯವರು ಕೇಸ್ ಹಾಕುತ್ತಾರೆ ಎಂದು ಯಾರೋ ಹೇಳಿದ್ದರಿಂದ. ಮನೆಯ ಆಂಟೆನಾ ಸರಿಮಾಡಲು ಹೋಗಿ ಕೆಳಗೆ ಬಿದ್ದೆ ಎಂಬ ಹಸಿ ಸುಳ್ಳು ಹೇಳಯಾಯಿತು. ಇವತ್ತು ಆವತ್ತಿನ ತರಹದ್ದೇ ಮಳೆ ಬಂದಿದೆ ಇನ್ನು ಯಾರಿಗೆ ಕಾದಿದೆಯೋ...

1 comment:

Unknown said...

Oho!..I still remember this incident!..I was thinking that you fell from there while repairing dish antena!!

Now I will write complaint to KEB talaguppa!..after 15 years!!