Thursday, May 29, 2008

ಹೊನ್ನೇಮರಡು ಪರಿಸರ ಶಿಕ್ಷಣ ಮತ್ತು ನನ್ನ ಮುಚ್ಕಣ್ಣು



ಕಣ್ಣುಮುಚ್ಚಿ ಗಮನಿಸಿ ಕೇಳಿ ಎಂದು ನೊಮಿತೋ ಮೆಡಂ ಹೇಳುತ್ತಾರೆ. ಬಿದಿರುಮಳೆಯಿಂದ ಆವರಿಸಿದ ರೌಂಡ್ ಬಯಲು ಮಂಟಪದಲ್ಲಿ ಬಣ್ಣ ಬಣ್ಣದ ಅಂಗಿತೊಟ್ಟ ಬೆಂಗಳೂರಿನ ಹಾಲುಗಲ್ಲದ ಹಸುಳೆಗಳು ಹಸಿರುಹೊದಿಕೆಯ ಕೆಳಗೆ ಕಣ್ಣುಮುಚ್ಚಿ ಕುಳಿತುಕೊಂಡರು. ನಾನೂ ಅವರ ಜತೆ ಸೇರಿಕೊಂಡೆ , ಚಿಲಿಪಿಲಿ ಹಕ್ಕಿಗಳ ಕೂಗು, ಎಣಿಸುತ್ತಾ ಸಾಗಿದೆ ಹದಿನೆಂಟು ತರಹದ ಕೂಗು ಕೇಳಿಸಿತು. ನೊಮಿತೋ ಮೆಡಂ ಈಗ ಕಣ್ಣು ಬಿಡಿ ಎಂದು ಗಡಸು ದನಿಯಲ್ಲಿ ಹೇಳಿದಾಗ ಒಲ್ಲದ ಮನಸ್ಸಿನಿಂದ ಕಣ್ತೆರೆದೆ. ಅಬ್ಬಾ ಎಷ್ಟೊಂದು ಮಜ. ಅದ್ಯಾವುದೋ ಹೊಸ ಲೋಕಕ್ಕೆ ಬಂದ ಅನುಭವ. ಒಂಟಿಮನೆಯ ಕಾಡಿನ ನಡುವೆಯೇ ವಾಸವಾಗಿರುವ ನಲವತ್ತು ವರ್ಷದ ನಾನು ಇಷ್ಟೊಂದು ಕಾಲವೂ ಹೀಗೆ ಕಣ್ಮಿಚ್ಚಿಕೊಂಡು ಹಕ್ಕಿಯ ಸ್ವರ ಕೇಳಿರಲಿಲ್ಲ . ಗುಜರಾತಿನ ನೊಮಿತು ಬೆಂಗಳೂರಿನ ಸ್ವಾಮಿಯನ್ನು ಮದುವೆಯಾಗಿ ಇಬ್ಬರೂ ಹೊನ್ನೆಮರಡು ಎಂಬ ಕುಗ್ರಾಮಕ್ಕೆ ಬಂದು ನನಗೆ ಇದನ್ನು ಹೇಳಿಕೊಡಬೇಕಾಯಿತು. ಕಣ್ಮುಚ್ಚಿ ದೇವರ ಧ್ಯಾನ ಮಾಡು ಎಂದಾಗ ಹಿರಿಯರ ಅಣತಿ ಮೀರಲಾರದೆ ಹೆದರಿಕೆಯಿಂದ ಕಣ್ಮುಚ್ಚಿಕುಳಿತು ಬೇಡದ ಆಲೋಚನೆ ತಡೆಗಟ್ಟಲಾಗದೆ ಒದ್ದಾಡಿಹೋಗಿದ್ದೆ. ದೇವರ ಎದುರಿನಿಂದ ಎದ್ದೆಳುವಾಗ ದೇಹವೆಲ್ಲಾ ಮಣಭಾರವಾದಂತೆ ಅನ್ನಿಸಿತ್ತು. ಆದರೆ ಈಗ ಹಾಗಲ್ಲ. ದೇವರು ಎಂಬ ವಿಷಯ ನಮ್ಮ ಎಣಿಕೆಗೆ ಸಿಗುವಂತಹದ್ದಲ್ಲ, ಅದರ ಮೊದಲ ಮೆಟ್ಟಿಲು ಪ್ರಕೃತಿಯಿಂದಲೂ ಏರಲು ಸಾಧ್ಯ ಅಂಬ ಸುಲುಬೋಪಾಯವನ್ನು ಹೊನ್ನೇಮರಡುವಿನಲ್ಲಿ ಕಲಿತೆ. ಅದೆಲ್ಲಾ ಇರಲಿ ಬೆಂಗಳೂರಿನ ಎಂಟು ಹತ್ತು ವರ್ಷ ವಯಸ್ಸಿನ ಬೋರ್ಡಿಂಗ್ ಸ್ಕೂಲಿನ ಮಕ್ಕಳು ಮುನ್ನೂರು ಕಿಲೋಮೀಟರ್ ದೂರದ ಹೊನ್ನೆಮರಡುವಿಗೆ ಬಂದು ಪರಿಸರವನ್ನು ಅಭ್ಯಾಸ ಮಾಡುತ್ತಾರೆ. ಈಜು ಕಲಿಯುತ್ತಾರೆ. ಗುಡ್ಡ ಹತ್ತುತ್ತಾರೆ. ನಲಿಯುತ್ತಾರೆ.ಕುಣಿಯುತ್ತಾರೆ. ಮತ್ತೆ ಸವಿನೆನಪಿನೊಂದಿಗೆ ವಾಪಾಸು ಹೋಗುತ್ತಾರೆ. ಇಲ್ಲಿ ಆಟದ ಮೂಲಕ ಪಾಠ ಕಲಿಯುತ್ತಾರೆ. ಇದೇ ಪರಿಸರದಲ್ಲಿನ ನಮ್ಮ ಮಕ್ಕಳು ಟಿ.ವಿ ಬಿಟ್ಟೇಳುವುದಿಲ್ಲ. ಕಾರ್ಟೂನ್ ನೆಟ್ವರ್ಕ್ ತುಂಬಾ ಇಷ್ಟ ಅಂತಾರೆ. ಗೀಜಗ, ಕೆಂಬೂತ ಹಸಿರು ಗಿಳಿ, ರೇಷ್ಮೆ ಹುಳ, ಗೋಪಿ ಹಕ್ಕಿ ಯಾವುದೂ ಅವುಕ್ಕೆ ಗೊತ್ತಿಲ್ಲ.

ತಪ್ಪು ನಮ್ಮದು ಅಂತ ಅನ್ನಿಸುತ್ತದೆ . ಸ್ವರ್ಗದಲ್ಲಿದ್ದ ಅವುಕ್ಕೆ ನಾವು ಕಂಪ್ಯೂಟರ್ ಕಲಿಸಲು ಒದ್ದಾಡುತ್ತೇವೆ. ಕಂಪ್ಯೂಟರ್ ಕೊನೆಗೂ ಕಲಿಯಬಹುದು ಎಂದು ಬೆಂಗಳೂರಿನ ಮಕ್ಕಳು ಪರಿಸರ ಪಾಠ ಕಲಿಯುತ್ತಿವೆ, ಒಟ್ಟನಲ್ಲಿ ದೂರದ ಬೆಟ್ಟ ನುಣ್ಣಗೆ.

No comments: