Friday, May 30, 2008

ಒಂಟಿತನ ಮತ್ತು ಪ್ರಪಂಚ


ಗುಂಪಿನಲ್ಲಿದ್ದಾಗ ಉನ್ಮಾದವಿರುತ್ತದೆ. ಉತ್ಸಾಹವಿರುತ್ತದೆ. ನಿಮ್ಮ ಗುಂಪಿಗೆ ವಿರುದ್ಧವಾಗಿ ಮತ್ತೊಂದು ಗುಂಪು ಇದ್ದರಂತೂ ಇನ್ನಷ್ಟು ಉಮೇದು ಇರುತ್ತದೆ. ಒಂಟಿಯಾಗಿದ್ದಾಗ ಅದು ಸ್ವಲ್ಪ ಕಷ್ಟ. ಇನ್ನು ನೀವು ಹುಟ್ಟಾ ಮೌನಿಗಳಾದರೆ ಗುಂಪೂ ಒಂದೇ ಒಂಟಿತನವೂ ಒಂದೆ. ಒಂಟಿಯಾಗಿ ಒಳಗೊಳಗೆ ಖುಷಿಯಾಗಿ ನಗುನಗುತ್ತಾ ಇರುವವರು ಎಲ್ಲಿಯೂ ಗೆಲ್ಲಬಹುದು. ಅದೇ ವಾಚಾಳಿ ಸ್ವಭಾವ ನಿಮ್ಮದಾಗಿದ್ದರೆ ಒಂಟಿಯಾಗುವ ಸಮಯಕ್ಕೆ ಬಹಳ ಮಹತ್ವ. . ಅದ್ಯಾವುದೋ ಚಿಂತೆ ನಿಮಗೆ ಕಾಡುತ್ತಿದೆ ಆದರೆ ಜನರೆದಿರು ಹೇಳಲಾಗುತ್ತಿಲ್ಲ ಎಂಬಂತಹ ಯೋಚನೆಗಳು ಮುತ್ತತೊಡಗಿದರೆ ಅಲ್ಲಿಗೆ ಲೈಫ್ ಕಷ್ಟಕರವಾದಂತೆ. ಅದೇನೂ ಚಿಂತೆಯೇ ಆಗಬೇಕೆಂದಿಲ್ಲ. ಗಂಡ ತಂದಿರುವ ನೆಕ್ ಲೆಸ್, ಬಂಗಾರದ ಬಳೆ ಬೇರೆಯವರಿಗೆ ತೋರಿಸಿದ ಹೊರತೂ ಸಮಾಧಾನವಾಗದಿದ್ದಂತಹ ಮನಸ್ಥಿತಿ ತಲುಪಿದರೆ ಜೀವನ ರಗಳೆಗೆ ಬಿದ್ದಂತೆ. ನಾವು ಸಹಜವಾಗಿ ತೋರಿಸುತ್ತಿದ್ದೇವೆ ಎಂಬ ವಸ್ತುಗಳು ಎದುರಿದ್ದವರಿಗೆ ಅವಮಾನ ಅಂತ ಅನ್ನಿಸಿ ಬೇಸರದ ಸ್ವರ ಅಥವಾ ಮುಖ ಹೊರಹೊಮ್ಮಲು ಸಾಕು. ಗುಂಪಿನಿಂದ ಹೊರಬಂದು ಒಂಟಿತನದ ನಿಮ್ಮ ಚಿಂತೆಗೆ ಇಷ್ಟು ಸಾಕು .ನಾನು ಇಲ್ಲಿಯವರೆಗೆ ಅಕ್ಕಿಬೆಳೆದಿಲ್ಲ ಬಟ್ಟೆ ನೇಯ್ದಿಲ್ಲ ಆದರೂ ನನ್ನ ಇಲ್ಲಿಯವರೆಗಿನ ಜೀವನದಲ್ಲಿ ಅಂತಹ ನಿತ್ಯಾವಶ್ಯಕ ವಸ್ತುಗಳು ನಿರಂತರ ಪೂರೈಕೆಯಾಗುತ್ತಿವೆ. ಎಂಬಂತ ಆಲೋಚನೆಗಳಾದರೂ ಆದೀತು, ಬರ್ಬಾದ್ ಆಗಲು. ಆವಾಗ ಆಗುವುದಿಷ್ಟೆ ಗುಂಪಿನಲ್ಲಿದ್ದಾಗ ಮರೆಯುತ್ತವೆ. ಹಾಸಿಗೆಗೆ ತಲೆಕೊಟ್ಟಾಗ, ಸಂಡಾಸಿನಲ್ಲಿ ಕಾಲುಮಡಚಿದಾಗ, ಊಟಕ್ಕೆ ಕುಂತಾಗ ಧುತ್ತನೆ ಕಾಡತೊಡಗುತ್ತವೆ. ಅದು ಟೆನ್ಷನ್ ರೂಪ ತಾಳಿ ಏನು ಇದು? ಪರಿಹಾರ ಹೇಗೆ? ಎಂಬ ನೂರಾರು ಯೋಚನೆ. ಒಂದಿಷ್ಟು ಜನ ವೈದ್ಯರ ಬಳಿ ಒಂದಿಷ್ಟು ಜನ ಶಾಸ್ತಿಗಳ ಬಳಿ ಮತ್ತೊಂದಿಷ್ಟು ಜನ ಸಲಹೆಕಾರರ ಬಳಿ ಓಡುತ್ತಾರೆ. ಸಮಸ್ಯೆ ಇರುವುದು ನಮ್ಮಲ್ಲಿ ಎಂದು ಗೊತ್ತಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ಇವಕ್ಕೆಲ್ಲಾ ಮೀರಲು , ಒಂಟಿತನವನ್ನು ಇಷ್ಟಕರ ಮಾಡಿಕೊಳ್ಳಬೇಕು . ಅದಕ್ಕೆ ಸುಲಭೋಪಾಯ ವೆಂದರೆ ವರ್ತಮಾನವನ್ನು ಗಮನಿಸುವುದು ಮತ್ತು ವರ್ತಮಾನವನ್ನಷ್ಟೇ ಆಲೋಚಿಸುವುದು. ಮತ್ತು ವರ್ತಮಾನವನ್ನೂ ಕೂಡ ಅತ್ಯಂತ ಕಡಿಮೆ ಯೋಚಿಸುವುದು. ಒಂಟಿತನದಲ್ಲಿ ಉತ್ಸಾಹದಿಂದಿರುವ ವ್ಯಕ್ತಿ ಹಾಗೂ ಅವನ ಆಲೋಚನೆಗಳು ಮುಂದೆ ಗುಂಪಿನಲ್ಲಿ ಸೂಪರ್ ಸಕ್ಸಸ್, ಅದೇ ಗುಂಪಿನ ಆಲೋಚನೆಗಳು ಒಂಟಿಯಾದಾಗ ಫೆಲ್ಯೂರ್. ಹಾಗಾಗಿ ಒಂಟಿಯಾಗಿ ಒಳ್ಳೆ ಆಲೋಚನೆ ಮಾಡಿ ಮತ್ತು ಗುಂಪಿನಲ್ಲಿ ಹೀರೋಗಳಾಗಿ.. ಗುಂಪಿನಲ್ಲಿ ಹೀರೋಗಳಾಗಿ ನಂತರ ಒಂಟಿಯಾದಾಗ ಜೀರೋಗಳಾಗಬೇಡಿ ಕಾರಣ ನಾವು ಇಲ್ಲಿಗೆ ಬಂದಿದ್ದು ಒಂಟಿ ಹೋಗುವುದು ಒಂಟಿ ಮಿಕ್ಕೆಲ್ಲ ನೆಪಗಳಷ್ಟೆ.
ಕೊನೆಯದಾಗಿ ಈ ಮೇಲಿನ ಸಲಹೆಗಳು ನಿಮಗೆ ಇಷ್ಟವಾದರೆ ನೀವು ಸಮಸ್ಯೆಯಲ್ಲಿದ್ದೀರಿ ಎಂದರ್ಥ. ಹಾಗಾಗಿ ಶೀಘ್ರದಲ್ಲಿ ಪರಿಹರಿಸಿಕೊಳ್ಳಿ, ರಗಳೆಯಾದರೆ ನೀವು ಸರಿಯಾಗಿದ್ದೀರಿ ಎಂದರ್ಥ ಮುಂದುವರೆಯಿರಿ . ಹ್ಯಾಪಿ ಒಂಟಿ
ನನಗೆ ಕೊನೆಯ ಸಾಲೂ ಸೇರಿದಂತೆ ಎಲ್ಲವೂ ಇಷ್ಟವಾಯಿತು. ಪರಿಹರಿಸಿಕೊಳ್ಳಬೇಕು. ನೀವು? ನನಗೆ ಗೊತ್ತಿಲ್ಲ

No comments: