Sunday, May 25, 2008

ಮಾರ್ತಾಂಡಣ್ಣನ ಅಡಿಗೆ ಮತ್ತು ಹಡಿನಬಾಳು ಹೆಡಿಗೆ ಅಲ್ಲ ಹೆಗಡೆ


ಬಚ್ಚಗಾರಿನ ಹೆಸರಿನಲ್ಲಿ ಯಕ್ಷಗಾನ ಮೇಳವೊಂದಿತ್ತು. ಚಿಟ್ಟಾಣಿ ಸುಬ್ರಹ್ಮಣ್ಯ ಶುಂಠಿ ಸತ್ಯ ಭಟ್ಟರು ಸೇರಿ ಕಟ್ಟಿದ ಮೇಳ. ನಾನು ಮೇಳ ಆರಂಭವಾದ ಒಂದು ವಾರ ಅದರಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದೆ.

ಮೇಳದ ತಿರುಗಾಟ, ಹೊತ್ತಿಲ್ಲದ ಹೊತ್ತಲ್ಲಿ ಗೊತ್ತಿರದ ಊರಲ್ಲಿ ಎಲ್ಲೆಂದರಲ್ಲಿ ಊಟ, ನಿದ್ರೆ, ಸ್ನಾನ. ಅಯ್ಯೋ ಯಾರಿಗೆ ಬೇಕು ಆ ಅವಸ್ಥೆ ಅನ್ನಿಸುವಷ್ಟು. ಇಂತಹ ಮೇಳದ ಅಡಿಗೆ ಭಟ್ಟರಾಗಿ ನಮ್ಮೂರಿನ ಮಾರ್ತಾಂಡಣ್ಣ. ನನಗೆ ಗುರ್ತಿದ್ದ ಜನ ಆದ್ದರಿಂದ ಸ್ವಲ್ಪ ಕಾಳಜಿ ವಹಿಸಿ ಒಂದು ವಾರವೂ ಕಾಳಜಿಯಿಂದ ಊಟ ಹಾಕಿದ್ದ. ಕುಸುಬಲಕ್ಕಿಯ ಗಟ್ಟಿ ಅನ್ನ ಒಗ್ಗದು ಅಂತ ಬೆಣಚಿಗೆ ಅಕ್ಕಿ ಅನ್ನ ಸರಿ ರಾತ್ರಿಯವರೆಗೂ ಕಾದಿಟ್ಟು ಬಡಿಸಿದ್ದ. ಮಾರ್ತಾಂಡಣ್ಣ ವಿಶಿಷ್ಠ ವ್ಯಕ್ತಿತ್ವದ ಜನ. ಕೀರಲು ಧ್ವನಿಯ ಆತನ ಮಾತೇ ತಮಾಷೆ. ಜೀವನವನ್ನು ತಲೆಗೇರಿಸಿಕೊಂಡು ಕುಂತವನಲ್ಲ. ಹೇಗೆ ಬಂತೋ ಹಾಗೆ ಸಾಗುವವನು.ಮನೆಯಲ್ಲಿ ಒಂದು ಎಕರೆ ಅಡಿಕೆ ತೋಟ ಅಷ್ಟೇನೂ ಉತ್ತಮವಲ್ಲದ ಆರ್ಥಿಕ ಪರಿಸ್ಥಿತಿ. ಹೊಸತಾದ ಮೇಳದಲ್ಲಿ ವ್ಯವಸ್ಥೆ ಸಸೂತ್ರ ಇರಲಿಲ್ಲ. ಇದ್ದುದ್ದರಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ಅಡಿಗೆ ಮಾಡಬೇಕಾಗುತ್ತಿತ್ತು. ಮಹಾಬಲ ಹೆಗಡೆ ಕೆರೆಮನೆ ಊಟಕ್ಕೆ ಕುಳಿತಾಗ ಸಾರು ಆಂದರು. ಮಾರ್ತಾಂಡಣ್ಣ ಬಕೇಟಿಗೆ ಹುಟ್ಟು ಹಾಕಿ ಸಾರು ಬಡಿಸಿದರು. ಸ್ವಲ್ಪ ಸಮಯದ ನಂತರ ಸಾಂಬಾರು ಎಂದರು ಮಾರ್ತಾಂಡಣ್ಣ ಮತ್ತದೇ ಸಾರಿನ ಬಕೇಟಿಗೆ ಹುಟ್ಟು ಹಾಕಿ ಬಡಿಸಿದ. ಮಹಾಬಲ ಹೆಗಡೆಯವರಿಗೆ ಅಚ್ಚರಿಯಾಗಿರಬೇಕು ಇದೇನೋ ಹೀಗೆ? ಎಂದರು. " ಪರಿಸ್ಥಿತಿ ಅಷ್ಟೆ. ಮೇಲಿಂದ ಹಾಕಿರೆ ಸಾರು ಅಂಡಿಂದ ಹಾಕಿರೆ ಹುಳಿ, ಪಾತ್ರೆ ಇಲ್ಲೆ ಆನೆಂತ ಮಾಡದು ಅಂದ. ಕೆರೆಮನೆ ಹೆಗಡೆಯವರಿಗೆ ನಗು ತಡೆಯಲಾಗಲ್ಲಿ. ಬೊಕ್ ಅಂತ ಅನ್ನದ ಸಮೇತ ನಕ್ಕರು. ಅಷ್ಟರಲ್ಲಿ ಹಡಿನಬಾಳು ಶ್ರೀಪಾದ ಹೆಗಡೆ ಎಂಬ ಕಲಾವಿದ(ಅವರು ಯಕ್ಷಗಾನದ ದೊಡ್ಡ ಕಲಾವಿದರಂತೆ) ಊಟಕ್ಕೆ ಬಂದರು. ರಂಗದಲ್ಲಿ ಭೀಮ, ಕೀಚಕ ಮುಂತಾದ ದೊಡ್ಡ ಪಾತ್ರ ಮಾಡುವ ಜನ ಎಂಬ ಗತ್ತು ಇತ್ತು. ಮೇಲಿಂದು ಸಾರು ಅಂಡಿದ್ದು ಸಾಂಬಾರು ತತ್ವ ಅವರಿಗೂ ಅನ್ವಯಿಸಿದ ಮಾರ್ತಾಂಡಣ್ಣ. ಸಾಂಬಾರು ಅನ್ನದ ತಟ್ಟೆಗೆ ಬಿದ್ದ ತಕ್ಷಣ ಕೀಚಕ ಮಹಾಶಯನ ಪಿತ್ತ ನೆತ್ತಿಗೇರಿತು " ಆ ಇದೇನು ಊಟವಾ ಮಣ್ಣ, ಸಾರಾ ಸಾಂಬಾರ, ನಾಯಿಯೂ ತಿನ್ನದು" ಎಂದು ಕೌರವನ ಗತ್ತಿನಲ್ಲಿ ಬಟ್ಟಲು ಸಮೇತ ಬೀಸಿ ಎಸೆದರು. ಬಟ್ಟಲು ಟಣ್ ಟಣ್ ಸದ್ದು ಮಾಡುತ್ತಾ ಅಲ್ಲಿಯೇ ಇದ್ದ ಬಾವಿ ಕಟ್ಟೆಗೆ ಬಡಿದು ಕೆಳಗೆ ಬಿತ್ತು. ಅನ್ನ ಸುತ್ತಲೆಲ್ಲಾ ಚೆಲ್ಲಾಡಿತು. ನಾನು ಮಾರ್ತಾಂಡಣ್ಣನ ಮುಖ ನೋಡಿದೆ. ಪಾಪ ಅಬ್ಬರ ಎಂದರೇನೆಂದು ಅರಿಯದ ತಮಾಷೆಯ ಆ ಜೀವಿ ಅಸಾಹಾಯಕತೆಯಿಂದ ನೋಡುತ್ತಿದ್ದ.

ಇವೆಲ್ಲಾ ಕಳೆದು ಈಗ ಇಪ್ಪತ್ತೈದು ವರ್ಷ ಸಂದಿದೆ. ಮಾರ್ತಾಂಡಣ್ಣನಿಗೆ ಅದೇ ಬೀಡಿ ಅದೇ ಕೀರಲು ಧ್ವನಿ ಹಾಗೂ ಅದೇ ಮುಖ. ಆದರೆ ಅವನ ಮಗ ಉದಯ ಕಷ್ಟಪಟ್ಟು ಇಂಜನಿಯರಿಂಗ್ ಓದಿ ಅಮೆರಿಕೆಯಲ್ಲಿದ್ದಾನೆ. ಮನೆಗೆ ಒಳ್ಳೆಯದನ್ನು ಮಾಡಿದ್ದಾನೆ. ಅಪ್ಪನನ್ನು ಚೆನ್ನಾಗಿ ನೋಡಿಕೊಂಡಿದ್ದಾನೆ. ಅಂದು ಅಡುಗೆ ಮಾಡುತ್ತಿದ್ದ ಮಾರ್ತಾಂಡಣ್ಣನ ಬಾಯಲ್ಲಿ ಅಮೆರಿಕಾದ ಕತೆ ಹೇಳುವಂತೆ ಮಾಡಿದ್ದಾನೆ. ಮೊನ್ನೆ ಅದ್ದೂರಿಯಿಂದ ಮಗನ ಮದುವೆ ಮಾಡಿದ ಮಾರ್ತಾಂಡಣ್ಣ. ನನಗೆ ಮಗ ಪತ್ರಿಕೆ ಕಳುಹಿಸಿದ್ದ. ಆದರೆ ಹೋಗಲಾಗಲಿಲ್ಲ. ಅಂದು ರಾಜನ ವರ್ತನೆ ತೋರಿದ್ದ ಹಡಿನಬಾಳು ಹೆಗಡೆಯವರು ಹಾಗೂ ಅವರ ಮಗ ಏನಾಗಿದ್ದಾನೋ ಗೊತ್ತಿಲ್ಲ. ನಾನಂತೂ ಯಕ್ಷಗಾನದ ಕಡೆ ತಲೆ ಹಾಕಿ ಮಲಗದೇ ಇಪ್ಪತ್ತು ವರ್ಷ ಆಯಿತು.

2 comments:

Narayana murthy said...

sumaaru ippattidu varshada modalu meladalli adige maaduppidda sajjana maartaandanna indu magana kaaladalli andare tanna ilivayassinalli sukadinda idane aadre andu keechakeeya pravrutti mereda sreepaadanna ade badavanasittu,kuchagi akki anna,ade aarakkerada moorakkiliyada poshaka vesha idarondige jeevana nadesuttiddare.

madhu said...

Hum...kalachakra tirgta irtu...doddavaru sannavaragta, sannavaru doddavaragta.... a touching write...