Saturday, May 24, 2008

ಗುರುಗಳು ಮತ್ತು ಹಿತೋಪದೇಶ


ನನಗೆ ನಮ್ಮ ರಾಮಚಂದ್ರಾಪುರಮಠದ ಗುರುಗಳು ಅಂದ್ರೆ ಆಂತರಂಗಿಕವಾಗಿ ತುಂಬಾ ಇಷ್ಟ. ಶಾಸ್ತ್ರ ಸಂಪ್ರದಾಯಗಳು ಒತ್ತಟ್ಟಿಗಿರಲಿ ಅವರು ಸ್ವದೇಶಿ ಗೋತಳಿ ಅಭಿವೃದ್ಧಿ ಎಂಬ ಕಾರ್ಯಕ್ರಮದ ಮೂಲಕ ದೂರದ ಗುಜರಾತಿನಿಂದ ಕಾಂಕ್ರಿಜ್ ತಳಿಯ ಆಕಳನ್ನು ತರಿಸಿಕೊಟ್ಟಿದ್ದಾರೆ. ನಾವು ಕೃಷಿಕರು ತಿಪ್ಪರಲಾಗ ಹಾಕಿದರೂ ಅಲ್ಲಿಂದ ಆ ಉತ್ತಮ ತಳಿಯ ಆಕಳನ್ನು ಅಲ್ಲಿಂದ ತರಿಸಿಕೊಳ್ಳಲಾಗುತ್ತಿರಲಿಲ್ಲ. ನಮ್ಮ ಮನೆಯ ಕೊಟ್ಟಿಗೆಯಲ್ಲಿ ಆ ಆಕಳು(ಸೀತೆ) ಬಂದು ಮೂರು ವರ್ಷ ಆಗಿದೆ. ಕರು ಹಾಕಿದೆ(ಲಕ್ಷ್ಮಿ) ಅದರ ನೋಡಲು ಎರಡು ಕಣ್ಣು ಸಾಲದು.ಕಳೆದ ವರ್ಷ ಬೆಂಗಳೂರಿನ ಪ್ರಸನ್ನ ಅಂತ ಬಿ.ಎಚ್.ಇ.ಎಲ್ ಎಂಪ್ಲಾಯ್ ಬಂದಿದ್ದರು, ಅವರು ಈಗ ಫೋನ್ ಮಾಡಿದಾಗ ಕೇಳುವುದು ಆಕಳ ಸುದ್ದಿಯನ್ನೇ. ಅದೆಲ್ಲಾ ಒತ್ತಟ್ಟಿಗಿರಲಿ ವಿಷಯಕ್ಕೆ ಬರುತ್ತೇನೆ. ನಮ್ಮ ಗುರುಗಳು ಗಂವಾರ ಎಂಬ ಗುಲ್ಬರ್ಗದ ಹಳ್ಳಿಯಲ್ಲಿ ಶಿವಸತ್ರ ಏರ್ಪಡಿಸಿದ್ದರು. ಅಲ್ಲಿಗೆ ನಾನು ಹೋಗಿದ್ದೆ. ಅಲ್ಲಿ ವೇದಿಕೆಯಲ್ಲಿ ಒಂದು ದಿನ ಪ್ರಜಾವಾಣಿಯ ರಂಜಾನ್ ದರ್ಗ ಮಾತಾನಾಡಿದರು. ಅವರು ಬಸವಣ್ಣನ ತತ್ವ ಇಷ್ಟವಾದ ವ್ಯಕ್ತಿಯಂತೆ. ಅವರು ಬಂದ ದಿವಸವೇ ನಮ್ಮ ಶ್ರೀಗಳು ಸಾವಯವ ಗೊಬ್ಬರ ಗೋಮೂತ್ರ, ಅದರಿಂದ ಭೂಮಿಯ ಫಲವತ್ತತೆಯ ಕುರಿತು ಆಶೀರ್ವಚನ ನೀಡಿದರು. ಅದು ಅವರಿಗೆ ಬಹಳ ಇಷ್ಟವಾಯಿತಂತೆ. ಮಾರನೆ ದಿನ ಶಿವನ ಕುರಿತು ಉಪನ್ಯಾಸ ಗುರುಗಳಿಂದ. ಅದು ಪುರಾಣದ ಕತೆಗಳಂತೆ ಒಳ್ಳೆಯ ಜೀವನಕ್ಕೆ ದಾರಿ ತೋರಿಸುವ ಮಾರ್ಗದರ್ಶಿಯಂತೆ ಇತ್ತು. ಶ್ರೀಗಳ ಆಶೀರ್ವಚನ ವೆಂದರೆ ಸಾತ್ವಿಕರೀತಿಯಲ್ಲಿ ಬದುಕುವ ಮಾರ್ಗದರ್ಶನ . ರಾಮನ ಕತೆ , ಶಬರಿ ಕತೆ, ಶಿವನ ಕತೆ, ಅಲ್ಲೊಂದು ಇಲ್ಲೊಂದು ಉಪಕತೆ ಹೀಗೆ ಸಾಗುತ್ತಿರುತ್ತದೆ. ಗುರುಗಳನ್ನು ನಂಬಿ ಬರುವವರೆಲ್ಲರೂ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸ ಹೊರಟವರು ಮತ್ತು ಅನುಸರಿಸುತ್ತಾ ಇರುವವರು.
ಈಗ ನನಗೆ ಸಮಸ್ಯೆ ಇರುವುದು ಎಲ್ಲಿ ಗೊತ್ತಾ.? ಕೆಟ್ಟದಾಗಿ ಬದುಕುತ್ತಿರುವವರು ಪ್ರವಚನಕ್ಕೆ ಬರುವುದೇ ಇಲ್ಲ. ಬಂದವರು ಒಳ್ಳೆಯ ದಾರಿಯಲ್ಲಿ ಇರುವವರು ಎಂದಾಯಿತು. ಮತ್ತೇಕೆ ಗೊತ್ತಿದ್ದವರಿಗೆ ಅದನ್ನೇ ಹೇಳುತ್ತಾರೆ. ಎಂದು ನನ್ನ ಹತ್ತಿರದ ಮುತ್ತುಬಾವ ಕೇಳಿದರು. ಅರೆ ಹೌದಲ್ಲ ಅಂತ ಅನಿಸಿತು.
ತಪ್ಪೋ ಒಪ್ಪೋ ಯಾರಿಗೆ ಗೊತ್ತು ? ಸಾತ್ವಿಕರಿಗೆ ಪದೆ ಪದೇ ಹೇಳುವುದಕ್ಕಿಂತ, ದಾರಿ ತಪ್ಪಿದವರನ್ನು ಎಳೆದು ತರುವುದೇ ಲೇಸೇನೋ ಅಂತ ಅನ್ನಿಸಿಬಿಟ್ಟಿತು.ಅರೆ ದಾರಿ ತಪ್ಪಿದವರು ಅಂತ ಯಾರನ್ನ ಗುರುತಿಸುವುದು? ಹೇಗೆ ಗುರುತಿಸುವುದು ಮಾನದಂಡ ಯಾವುದು? ನಾವೇ ತಪ್ಪು ದಾರಿಯಲ್ಲಿರಬಹುದು? ಇದು ಸರಿ ಅಂತ ಹೇಗೆ? ಎಂಬಂತಹ ನೂರಾರು ಪ್ರಶ್ನೆಗಳು ಮಳೆಗಾಲದ ಆರಂಭದಲ್ಲಿ ಒಂದರ ಹಿಂದೆ ಬರುವ ವರಲೆಯಂತೆ ಹುಟ್ಟಿಬರಲು ಶುರುವಾಯಿತು. ಓ ಹೋ ಇದು ನನ್ನ ಮಟ್ಟಕ್ಕೆ ಅಲ್ಲ ಎಂದು ಕೈಬಿಟ್ಟೆ. ಕವಳದ ಸಿಬಿಲಿನಲ್ಲಿ ಕೈ ಇಟ್ಟೆ.
ಇದು ಅಗಾಧ ಪ್ರಪಂಚ, ಗುಟ್ಟು ಬಿಟ್ಟು ಕೊಡದ ಪ್ರಕೃತಿ. ಕುರುಡರು ಆನೆ ಮುಟ್ಟಿದ ಕತೆ. ಲೋಕದ ಡೊಂಕು ... ಅಬ್ಬಾ ನನ್ನ ಬಳಿ ಅಂತೂ ಸಾಧ್ಯವಿಲ್ಲದ್ದು . ಇಲ್ಲಿ ಯಾವುದು ತಪ್ಪೋ ಯಾವುದು ಸರಿಯೋ ಅರ್ಥವಾಗದ ಗೊಂದಲ. ಪಿ.ಭಾರತೀಶ ಹೇಳುವಂತೆ ಶೀಘ್ರದಲ್ಲಿ ಏನೋ ಒಂದು ಸಂಭವಿಸುತ್ತದೆ ಎಂಬ ನಿರೀಕ್ಷೆಯಲ್ಲಿ ಹಿಂದಿನಿಂದಲೂ ಮುಂದಿನತನಕವೂ ಬದುಕು.

1 comment:

Anonymous said...

nannage nimma alochana lahari tumba istta athu ragaveshwrarara intha karyagallannu yella rithiinda suport maduttene