Sunday, January 23, 2011

ಈಗ ಜಸ್ಟ್ ಮೂವತ್ತೈದು ವರ್ಷಗಳ ಹಿಂದೆ

, ಕಾಲ ಹೀಗಿರಲಿಲ್ಲ, ಇಲ್ಲ ಬಿಡಿ ಹೀಗಿರೋಕೆ ಹೇಗೆ ಸಾದ್ಯ?. ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿರುವ ಕಾಲ ಇದು. ಜನರೆಲ್ಲಾ ಹೇಳುವಂತೆ ಆ ಕಾಲ ಸುಖದ ಸುಪ್ಪತ್ತಿಗೆಯಲ್ಲ. ಅದು ಬರೀ ಓಳು ದಿನನಿತ್ಯ ಗೋಳು. ನೋಡಿ ಅಂದು ಸೈಕಲ್ ಇತ್ತೆಂದರೆ ಅದೇ ಘನಂದಾರಿ ಲೆವಲ್ಲು. ಯುವಕರೆಂಬ ಯುಕರು ಬೆಲ್ ಬಾಟಮ್ ಪ್ಯಾಂಟ್ ಹಾಕಿ ಇಳಿಜಾರಿನ ರಸ್ತೆಯಲ್ಲಿ ಪೆಡಲ್ ಹಿಂದೆ ಸರಸರ ತಿರುಗಿಸುತ್ತಾ ಹೋದರೆ ಅದೇ ಹೆಣ್ಣು ಹೈಕಳಿಗೆ ಕಾಳು ಹಾಕುವ ಅತ್ಯಂತ ಹೈಲೆವಲ್ ವಿಧಾನ.ಸೈಕಲ್ ಇರುವ ಸಂಖ್ಯೆ ಊರಲ್ಲಿ ಶೇಕಡಾ ಇಪ್ಪತ್ತರಷ್ಟು. ಅವರೇನು ಅವರ ಗತ್ತೇನು, ಅಯ್ಯೋ ವರ್ಣಿಸಲು ಪದಗಳೇ ಇಲ್ಲ ಬಿಡಿ. ರ್ಯಾಲಿ-ಹರ್ಕ್ಯುಲೆಸ್ ಎಂಬ ಎರಡು ಕಂಪನಿಯ ಸೈಕಲ್ ಆದರೆ ಅದರ ಗತ್ತು ಇನ್ನೂ ಒಂದು ತೂಕ ಹೆಚ್ಚಿನದು. ಅದಕ್ಕೊಂದು ಡೈನಮಾ ಇದ್ದರಂತೂ ಮುಗಿದೇ ಹೋಯಿತು. ಆತನಿಗೆ ಸ್ವರ್ಗ ಮೂರೇ ಗೇಣು. ಸ್ಯಾಂಕ್ಯೂ ಎಂಬ ಕಂಪನಿಯ ಡೈನಮೋ ಸಿಕ್ಕಾಪಟ್ಟೆ ಫೇಮಸ್. "ಅವನು ಸೈಕಲ್ ಮಾರಿದನಂತೆ , ಆದರೆ ಡೈನಮೋ ಕೊಡಲಿಲ್ಲವಂತೆ" ಎಂಬುದು ಸಂಜೆ ಕಟ್ಟೆ ಪಂಚಾಯ್ತಿಯ ವಿಷಯ. ಆನಂತರ ಡೈನಮೋಕ್ಕೆ ಡಿಪ್ ಎಂಡ್ ಡಿಮ್ ಸ್ವಿಚ್ ಬಂತು ಆಗ ಇನ್ನೂ ಒಂದು ಲೆವಲ್ ತೂಕ. ರಾತ್ರಿ ಮಾತ್ರಾ ಉಪಯೋಗಕ್ಕೆ ಬರುವ ಡೈನಮೋ ಹಗಲು ಪ್ರದರ್ಶನದ ವಸ್ತು, ಸೀಟ್ ಮೇಲೆ ಕೂತು ನೆಲಕ್ಕೆ ಒಂದುಕಾಲು ಊರಿ ಡೈನಮೊದತ್ತ ವಾರೇನೋಟ ಬೀರಿದರೆ ಅದೊಂದು ಸ್ಟೈಲ್. ಸೈಕಲ್ ಎಂಬ ಸೈಕಲ್ ನ ಚಿಕ್ಕಮಕ್ಕಳಿಗೆ ಹೊಡೆಯುವುದಕ್ಕೆ ಕೊಡುವುದಿರಲಿ ಮುಟ್ಟುವುದಕ್ಕೂ ಕೊಡುತ್ತಿರಲಿಲ್ಲ. ಎಲ್ಲೋ ಅಪರೂಪಕ್ಕೆ ಒಂದು ಅಂಬಾಸಡರ್ ಎಂಬ ಬೃಹತ್ ಕಾರು. ಅದು ಬಂದರೆ ಅದರ ಹಿಂದೆ ಒಂದು ದೊಡ್ಡ ಹುಡುಗರ ದಂಡು, ಆನಂತರದ ದಿನಗಳಲ್ಲಿ ಸುವೇಗಾ -ವಿಕ್ಕಿ-ಲೂನಾ ಎಂಬ ಟೂವೀಲರ್ ಬಂತು. ಪೆರ್ ಪೆರ್ ಎಂದು ಅರ್ದ ಪೆಡಲ್ ತುಳಿಯುತ್ತಾ ಅರ್ದ ಇಂಜೆನ್ನಿನ ಸಹಾಯದಿಂದ ಸಾಗುವ ಗಾಡಿಗಳು. ಇವೆಲ್ಲಾ ಬಂದರೂ ಸೈಕಲ್ ವ್ಯಾಲ್ಯೂ ಕಡಿಮೆಯಾಗಲಿಲ್ಲ. ಇನ್ನು ರೆಡಿಯೋ ಕತೆಯೂ ಅಷ್ಟೆ. ಪ್ರತೀ ವರ್ಷ ಅದಕ್ಕೆ ಲೈಸೆನ್ಸ್ ಪಡೆಯಬೇಕಿತ್ತು. ಲೈಸೆನ್ಸ್ ಪಡೆಯದ ರೇಡಿಯೋಗಳನ್ನು ಇನಿಸ್ಪೆಕ್ಟರ್ ಬಂದು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದರು.ಸಿಕ್ಕಾಪಟ್ಟೆ ಅಚ್ಚರಿ ಹುಟ್ಟಿಸಿದ್ದು ಪ್ಯಾನಾಸಾನಿಕ್ ಕಂಪನಿಯ ಟೇಪ್ ರೆಕಾರ್ಡರ್. ವಾವ್ ನಮ್ಮ ದನಿಯನ್ನು ಮರುಕ್ಷಣ ರಿಪೀಟ್ ಮಾಡುವ ಯಂತ್ರ ಕಂಡು ಕಣ್ಣು ಅಗಲಮಾಡಿಕೊಂಡು ಬೆಕ್ಕಸಬೆರೆಗಾಗಿದ್ದಿದೆ. ನಂತರದ್ದು ಫೋನು, ಅಯ್ಯಾ ಆ ಪೋನು ಬಂದ ಹೊಸತರ ಕತೆ ಕೇಳುವುದೇ ಬೇಡ.
ಈಗ ಅದನ್ನೆಲ್ಲಾ ನೆನೆಸಿಕೊಂಡರೆ ಸುಳ್ಳೇನೋ ಅಂತ ಅನ್ನಿಸುತ್ತಿದೆ. ಹಾಗಂತ ತೀರಾ ಹಿಂದಿನ ಕತೆಗಳಲ್ಲ ಇವು ಜಸ್ಟ್ ಮೂವತ್ತು ವರ್ಷದ ಹಿಂದಿನದು. ಹಾಗಾಗಿ ನನಗಂತೂ ೨೦೩೦ ರಲ್ಲಿ ಉಪ್ಪಿಯ ಸೂಪರ್ ಕಲ್ಪನೆ ತೀರಾ ಬಾಲಿಷವಲ್ಲ ಅಂತ ಅನ್ನಿಸತೊಡಗಿದೆ.

2 comments:

ಚುಕ್ಕಿಚಿತ್ತಾರ said...

ನಮ್ಮನೆಲಿ ಅಪ್ಪಯ್ಯನ ಹತ್ತಿರ ಸುಮಾರು ಐವತ್ತು ವರ್ಷದಷ್ಟು ಹಳೆ ಸೆಕೆ೦ಡ್ ಹ್ಯಾ೦ಡ್ ಸೈಕಲ್ ಇದ್ದು..ಅದರ ನಿಜವಾದ ವಯಸ್ಸು ಗೊತ್ತಿಲ್ಲೆ..! ಮತ್ತು ಅದರ ಎಲ್ಲಾ ಪಾರ್ಟ್ಸ್ ಆಗಾಗ ಚೇ೦ಜ್ ಆಯ್ದು.. ಒರಿಜಿನಲ್ ಒ೦ದೂ ಇಲ್ಲೆ.. ಅದ್ರ ಮೇಲೆ ಮಕ್ಕಳ೦ಗೆ ಅಪ್ಪಯ್ಯ೦ಗೆ ಪ್ರೀತಿ..! ಅದ್ರಲ್ಲಿ ಇತಿಹಾಸವೇ ಇದ್ದು..!
ಚನ್ನಾಗಾಯ್ದು ಬರೆದಿದ್ದು..

Ravi Hegde said...

ರೆಡಿಯೋಗೆ ಲೈಸೆನ್ಸ್ ಬ್ರಿಟಿಷರ ಕಾಲದ್ದಲ್ಲವೇ?
black&white ನೆನಪು ಚೆನ್ನಾಗಿದೆ.
ರವಿ