Sunday, January 23, 2011

ವಾವ್-ಛೆ-ಥೋ-ಹೆ ಹೆ ಹೆ-ಹಹಹ

ಕಾರ್ ಕಾರ್ ಕಾರ್ ಕೆಸ್ರಲ್ಲಿ ಕಾರ್ ಅಂತ ಯಾರದ್ದೋ ಕಾರು ಕೆಸರಲ್ಲಿ ತೊಪ್ಪೆಯಾದಾಗ ಅಂದುಬಿಡಬಹುದು. ಆದರೆ ನೀವೇ ಪ್ರೀತಿಸಿದ ಲಕ್ಷಗಟ್ಟಲೇ ತೆತ್ತು ಕೊಂಡ ಕಾರು ಕೆಸರಲ್ಲಿ ಸಿಕ್ಕಿ ಒರ್ರರ್ರೋ ಅಂತ ಚಕ್ರ ತಿರುಗಿದಾಗ ಹೊಟ್ತೆಯೊಳಗೆ ಹುಣಿಸೆಹಣ್ಣು ಹಾಕಿ ಕಿವಿಚಿದಂತಾಗುತ್ತದೆ.
ಮಲೆನಾಡಿನ ಮಳೆಗಾಲದ ಸೊಬಗು ಬೆಚಗೆ ಕುಳಿತು ಕೇಳಲು ಬಲು ಚಂದ ಆಹಾ ಆನಂದ. ಹೊರಗೆ ಜಡಿಮಳೆ,ಒಳಗೆ ಹೊಡಚಲು, ಹಲಿಸಿನ ಬೀಜದ ಘಮ ಘಮ ಗೇರುಬೀಜ ಸುಟ್ಟ ಪರಿಮಳ ವಾಹ್ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು ಅಂತ ಬಿರುಬೇಸಿಗೆಯದಿನದಲ್ಲಿ ಕತೆ ಕುಟ್ಟಬಹುದು. ಆದರೆ ಜಡಿಮಳೆಯ ರಸ್ತೆ ನೆನೆಸಿಕೊಂಡಾಗ ಅವೆಲ್ಲಾ ಪಟ್ಟಂಗದ ಕತೆಗಳು ಅಂತ ರೇಜಿಗೆ ಹುಟ್ಟಿಸಿಬಿಡುತ್ತದೆ.
ಲಕ್ಷಗಟ್ಟಲೆ ಬೆಲೆಯ ಷವರ್ಲೆ ಕಾರು ತೆಗೆದುಕೊಂಡು ನಾನೂ ವಿಶಾಲಕ್ಕ ಎಂಡ್ ಮುತ್ತುಬಾವಯ್ಯ ಹೊನ್ನೆಮರಡುಗೆ ಹೋರಟಿದ್ದೇ ಮೊದಲ ತಪ್ಪು. ಇರಲಿ ತಪ್ಪುಗಳ ಹಣೇಬರಹವೇ ಅಷ್ಟು ಆದಮೇಲೆ ಗೊತ್ತಾಗುತ್ತೆ ಮತ್ತೆ ಹೊಸ ತಪ್ಪು ನಡೆಯುವರೆಗೂ ನೆನಪಿರುತ್ತೆ. ಅಯ್ಯಾ ಅಂಕುಡೊಂಕಿನ ಕೆಸರು ಗುಂಡಿಯ ರಸ್ತೆಯಲ್ಲಿ ಇಳಿಯುತ್ತಾ ಹತ್ತುತ್ತಾ ಅಂತೂ ಮುಕ್ಕಾಲು ದಾರಿ ತಲುಪಿಯಾಯಿತು. ಇನ್ನೇನು ಅರ್ದ ಕಿಲೋಮೀಟರ್ ಹೊನ್ನೇಮರಡು ಎನ್ನುವಷ್ಟರಲ್ಲಿ ಷವರ್ಲೆ ಹೊಂಡದೊಳಗೆ ದುಡುಂ. ಎಷ್ಟೇ ಆಕ್ಸಿಲೇಟರ್ ಓತ್ತಿದರೂ ಚಕ್ರವಷ್ಟೇ ಗರಗರ ಬರಬರ. ಡ್ರೈವ್ ಮಾಡುತ್ತಿದ್ದ ನನಗಂತೂ ಮಾನಮರ್ವಾದೆ ಮೂರು ಕಾಸಿಗೆ ಹರಾಜಾಗಿಹೋಯಿತು. ಎನೋ ಓನರ್ ಪಕ್ಕದಲ್ಲಿ ಇರದಿದ್ದರೆ ನಾನು ಸೇಫಾಗಿ ಹೋಗಿ ಬಂದೆ ಅಂತ ಸುಳ್ಳನ್ನಾದರೂ ಒಗೆಯಬಹುದಿತ್ತು. ಆದರೆ ಇಲ್ಲಿ ಹಾಗಲ್ಲ. ಓನರ್ರೂ ಇಲ್ಲಿಯೇ ಹಾಜರ್ರು. ಅಂತೂ ಇಂತು ಅಲ್ಲಿಯೇ ಕೆಲವರ ಸಹಾಯದಿಂದ ಕಾರು ಮೇಲೆ ಬಂತು. ಆನಂತರ ಓನರ್ ತಮ್ಮ ಕಾರಿನ ಪರಿಸ್ಥಿತಿ ತೋರಿಸಿಕೊಂಡ ಪರಿ ಇದು. ವಾವ್-ಛೆ-ಥೋ-ಹೆ ಹೆ ಹೆ-ಹಹಹ-ಮುಂತಾದ ಏನು ಬೇಕಾದರೂ ಅಂದುಕೊಳ್ಳುವ ಸ್ವಾತಂತ್ರ್ಯ ನಿಮಗೆ.

No comments: