Monday, February 7, 2011

ಆ ಕತೆಯನ್ನು ಹೇಳಲು ಚಪ್ಪಲಿ ಉದಾಹರಣೆ ನೀಡಬೇಕಾಯಿತು.


ಈಗ ಖುರ್ಚಿಯಮೇಲೆ ಕುಳಿತು ಈ ನನ್ನ ಕೊರೆತವನ್ನು ಓದುತ್ತಿರುವ ಮಹನೀಯರುಗಳಾದ ನೀವು ಒಂದು ಸಣ್ಣ ಪರೀಕ್ಷೆ ಮಾಡಬೇಕಿದೆ. ಅದೇನೂ ಅಂತಹ ಕಷ್ಟದ್ದಲ್ಲ. ಖುರ್ಚಿಯಿಂದ ಲಕಲಕ ಮಿರುಗುವ ಮೆತ್ತನೆಯ ಹಾಸಿನಮೇಲೆ ಊರಿದ್ದ ನಿಮ್ಮ ಒಂದು ಕಾಲನ್ನು ಎತ್ತಿ ಶೂ ಅಥವಾ ಚಪ್ಪಲಿ ಕಳಚಿ ಸಾಕ್ಸ್ ಬಿಚ್ಚಿ ಅಂಗಾಲನ್ನು ಒಮ್ಮೆ ಮುಟ್ಟಿ ನೋಡಿ. ವಾವ್ ಎಷ್ಟು ಬೆಳ್ಳ ಬೆಳ್ಳಗೆ ಕೆಂಪ ಕೆಂಪಗೆ ಎಷ್ಟೊಂದು ನುಣುಪಾಗಿ ಇದೆ ಅಲ್ವೇ?. ಕ್ಲೀನ್ ಅಂದ್ರೆ ಕ್ಲೀನ್, ಒಂಥರಾ ನಿಮ್ಮ ಕಾಲಿನ ಬಗ್ಗೆ ಅದು ಇರುವ ರೀತಿಯ ಬಗ್ಗೆ ಹೆಮ್ಮೆ ಮೂಡುತ್ತದೆ. "ಅಯ್ಯೋ ನೋಡು ನನ್ನ ಕಾಲು ಎಷ್ಟು ಸ್ಮೂತ್ ಆಗಿ ಇದೆ" ಎಂಬ ಡೈಲಾಗ್ ಬಿಗಿಯಬಹುದು. ಇರಲಿ ಬಿಡಿ ಆದರೆ ವಿಪರ್ಯಾಸವೆಂದರೆ ವಾಸ್ತವದ ಅಂಶವೆಂದರೆ ನುಣ್ಣಗೆ ಮೆತ್ತಗೆ ಸೂಪರ್ ಆಗಿರುವ ಅಂಗಾಲು ಇದೆಯಲ್ಲ ಪ್ರಕೃತಿ ಅದನ್ನು ಹಾಗಿರಲು ಕೊಟ್ಟಿದ್ದಲ್ಲ. ಕಲ್ಲಿರಲಿ ಮುಳ್ಳಿರಲಿ ಅದನ್ನು ಮೆಟ್ಟಿ ನಿಲ್ಲಲು ಅಂಗಾಲೆಂಬ ಆ ರಚನೆಯನ್ನು ಗಟ್ಟಿಯಾಗಿ ಮಾಡಿತ್ತು. ಅದು ಒರಟು ಇದ್ದಷ್ಟೂ ಹೆಮ್ಮೆಯ ಸಂಗತಿಯಾಗಿತ್ತು. ಆದರೆ ಚಪ್ಪಲಿ ಧರಿಸಿ ನಾವು(ಕೊನೆಗೆ ಅಡಿಗೆ ಮನೆಯಲ್ಲಿಯೂ) ಆ ಭಾಗವನ್ನು ರಕ್ಷಿಸ ಹೊರಟು ಪ್ರಕೃತಿ ಕೊಟ್ಟ ಅದ್ಬುತ ಚಪ್ಪಲಿಯನ್ನು ಮೆತ್ತಗೆ ಮಾಡಿ ಕಾಲಗಳೇ ಸಂದು ಹೋಗಿವೆ. ಚಪ್ಪಲಿಯಿಲ್ಲದೆ ಈಗ ನೀವು ರಸ್ತೆಯ ಮೇಲೆ ಹೊರಟರೆ "ಅಯ್ಯೋ ಅಮ್ಮಾ.." ಧ್ವನಿಯೇ ನಡಿಗೆಗಿಂತ ಜಾಸ್ತಿ ಹೊರಡುತ್ತದೆ. ಮುಂದೊಂದು ದಿನ ಮೇಗಾಲಿನಷ್ಟೇ ಮೆತ್ತಗಿನ ರಚನೆಯುಳ್ಳ ಅಂಗಾಲು ಹೊಂದಿರುವ ಪೀಳಿಗೆ ಹುಟ್ಟತೊಡಗಿದರೆ ಆಶ್ಚರ್ಯ ವಿಲ್ಲ. ಕಾರಣ ಬಳಸದ ಭಾಗವನ್ನು ಪ್ರಕೃತಿ ಕಸಿದುಕೊಳ್ಳುತ್ತದೆ. ಅಥವಾ ನಮ್ಮ ಮಿದುಳು ಮರೆತುಬಿಡುತ್ತದೆ. ನಾನು ಹೇಳಹೊರಟಿರುವುದೇ ಒಂದು ಈಗ ಕೊರೆದದ್ದೇ ಮತ್ತೊಂದು ಈಗ ವಿಷಯಕ್ಕೆ ಬರುತ್ತೇನೆ.
ನಮ್ಮ ಹೋಂ ಸ್ಟೇ ಪಕ್ಕದಲ್ಲಿ ಒಂದು ಜೇನುಪೆಟ್ಟಿಗೆ ಇಟ್ಟಿದ್ದೇನೆ. ಅಲ್ಲಿಗೆ ಬರುವವರು ಭಯಮಿಶ್ರಿತ ಕುತೂಹಲದಿಂದ ಅದರತ್ತ ಒಮ್ಮೆ ಸಾಗುತ್ತಾರೆ. ಸ್ವಲ್ಪ ಆಸಕ್ತಿ ಇರುವವರು ಮಾಹಿತಿ ಕೇಳುತ್ತಾರೆ. ಆಗ ನಾನು ನೆಲಬಿಟ್ಟುಬಿಡುತ್ತೇನೆ....!. ಸರಿ ಅದು ಹಾಗೆ ಇದು ಹೀಗೆ ಎಂಬ ಬೈರಿಗೆ ಶುರು, ಕೊನೆಯದಾಗಿ ಜೇನುತುಪ್ಪ ಟೇಸ್ಟ್ ನೋಡ್ತೀರಾ? ಎಂಬ ಪ್ರಶ್ನೆ ನನ್ನಿಂದ ಹೊರಡುತ್ತಿದ್ದಂತೆ ಅವರಿಗೂ ಒಂದು ಖುಷಿ ಮುಖ ಅರಳುತ್ತದೆ. ಮೊನ್ನೆ ಹೀಗೆ ಆಯಿತು. ತತ್ತಿ ತೆಗೆದು ತುಪ್ಪ ಬೇರ್ಪಡಿಸಿ ತಿನ್ನಲು ಕೊಟ್ಟೆ. ಅವರ ಮುಖ ಅದೇಕೋ ಅರಳಲಿಲ್ಲ, ಇದು ಜೇನು ತುಪ್ಪಾನಾ? ಎಂಬ ಪ್ರಶ್ನೆ ಕೇಳಿದರು. ನಾನು ಏನು ಹೇಳಲಿ?. ಆದರೂ ಯಾಕೆ ಚೆನ್ನಾಗಿಲ್ವಾ? ಎಂದು ಕೇಳಿದೆ. "ಇಲ್ಲ ಟೇಸ್ಟ್ ಸೂಪರ್ ಆಗಿದೆ, ಆದರೆ ನಾವು ಡಾಬರ್ ಹನಿ ಯೂಸ್ ಮಾಡ್ತೀವಿ ಅದರ ಟೇಸ್ಟ್ ಬೇರೆಯಪ್ಪಾ." ಎನ್ನುತ್ತಾ ರಾಗ ಎಳೆದರು. ಅಲ್ಲಿಗೆ ನನಗೆ ಮುಂದಿನ ದಿನಗಳಲ್ಲಿ ನಿಜವಾದ ಜೇನುತುಪ್ಪದ ಗತಿ ಅರಿವಾಯಿತು. , ಆ ಕತೆಯನ್ನು ನಿಮಗೆ ಹೇಳಲು ಚಪ್ಪಲಿ ಉದಾಹರಣೆ ನೀಡಬೇಕಾಯಿತು.
ಆಯ್ತಪ್ಪಾ ಆಯ್ತು ನಿನ್ನ ಪ್ರಕಾರ ಮುಂದೊಂದು ದಿನ ಡಾಬರ್ ನವರದ್ದು ಮಾತ್ರಾ ಹನಿ ಮಿಕ್ಕೆಲ್ಲವೂ ಡೂಪ್ಲಿಕೇಟ್ ಅಂತ ಆಗುತ್ತದೆ ಎಂಬುದು ನಿನ್ನ ಭಾವನೆ, ಆದರೆ ಹಾಗೆಲ್ಲಾ ಆಗುವುದಿಲ್ಲ ಅಂತ ನೀವು ಹೇಳಬಹುದು, ಆಗಲಿ ಬಿಡಲಿ ನನಗದು ವಿಷಯವಲ್ಲ ನಾನು ನಿಮಗೆ ನಿಜವಾಗಿಯೂ ಮಾಹಿತಿಕೊಡ ಹೊರಟಿದ್ದು ಇವೆರಡೂ ಅಲ್ಲ, "ಆಯ್ತು ಚೊರೆ ಮಾಡಬೇಡಾ, ಹೇಳು "ಎಂದಿರಾ, ವಾಕೆ ಅದನ್ನ ಕೇಳಿ
ಜೇನುತುಪ್ಪಕ್ಕೆ ಯಾವ ಬಣ್ಣ? ಅಂತ ಕೇಳಿದರೆ ಕೆಂಪು ಮಿಶ್ರಿತ ಹಳದಿ, ಅಲ್ಲಲ್ಲ ಜೇನುತುಪ್ಪದ್ದೇ ಬಣ್ಣ ಅಂತ ಇದೆಯಲ್ಲ ಅಂತಲೂ ಅನ್ನಬಹುದು. ಆದರೆ ಜೇನು ಸಾಕಾಣಿಕಾದಾರರು ಸ್ವಲ್ಪ ಹಠ ತೊಟ್ಟರೆ ಬೇರೆಬೇರೆ ಬಣ್ಣದ ಜೇನುತುಪ್ಪ ತೆಗೆಯಬಹುದು. ಈಗ ಈ ಬಾಟಲಿಯಲ್ಲಿ ನಿಮಗೆ ಕಾಣುತ್ತಿರುವ ಜೇನುತುಪ್ಪ ಪಕ್ಕಾ ಪಕ್ಕಾ ಅರಿಶಿನ ಬಣ್ಣದ್ದು. ಅಂಟವಾಳ ಎಂಬ ಗಿಡ ಹೂ ಬಿಟ್ಟಾಗ ಅದರ ಬಳಿಯಿದ್ದ ಜೇನುಕುಟುಂಬ ಸಂಗ್ರಹಿಸಿದ ತುಪ್ಪ ಇದು. ಭರ್ಜರಿ ದಪ್ಪದ ತುಪ್ಪ ತಿನ್ನಲು ಬಲು ರುಚಿ. ವರ್ಷಕ್ಕೆ ಹೆಚ್ಚೆಂದರೆ ಒಂದೆರಡು ಬಾಟಲಿ ಸಿಗಬಹುದು ದರ ಮಾತ್ರಾ ಸಿಕ್ಕಾಪಟ್ಟೆ ಕೆಜಿಗೆ ಮಿಕ್ಕತುಪ್ಪ ೨೫೦ ಆದರೆ ಇದು ಡಬಲ್. ಹೀಗೆ ಕಾಫಿ ಹೂ ಬಿಟ್ಟಾಗ ಅದರ ರುಚಿ ಬಣ್ಣ , ಸೀಗೆ ಹೂವಿನ ತುಪ್ಪವಾದರೆ ಕಡುಕೆಂಪು ಕಹಿ ರುಚಿ, ಮಾವಿನ ಹೂವು ಹೆರೆತರೆ ಸ್ವಲ್ಪ ಸಿಹಿ ಸ್ವಲ್ಪ ಹುಳಿ, ಹೀಗೆ ಮಕರಂದ ಪರಾಗ ಬದಲಾವಣೆಯಾದಾಗ ತುಪ್ಪದ ಬಣ್ಣ ರುಚಿಯೂ ಬದಲಾಗುತ್ತದೆ. ಡಾಬರ್ ನಂತೆ ಒಂದೇ ರುಚಿ ಒಂದೇ ಬಣ್ಣದ್ದು ಖಾಯಂ ಎಂದರೆ ಒಂದೋ ಅದು ಕೇವಲ ಜೇನಿನ ತುಪ್ಪ ಅಲ್ಲ ಅಥವಾ ಅದು ಔಷಧೀಯ ಗುಣ ಹೊಂದಿಲ್ಲ ಎಂಬರ್ಥ . ಹಾಗಾಗಿ ಇನ್ನು ಮುಂದೆ ಜೇನು ತುಪ್ಪದ ಬಣ್ಣ ಯಾವುದು ಎಂದು ಯಾರಾದರೂ ಕೇಳಿದರೆ ಕೆಂಪು ಅರಿಶಿನ ಕಾಫಿ ಪುಡಿ ಕಲರ್ ಎಂದು ಪಟಪಟನೆ ಮೂರ್ನಾಲ್ಕು ಹೇಳಿಬಿಡಿ, ಅದೇ ಸರಿಯುತ್ತರ ಅದಕ್ಕೆ.

5 comments:

ಚುಕ್ಕಿಚಿತ್ತಾರ said...

ಹೌದು..
ನಾನೊ೦ದ್ಸಲ ಊರಿ೦ದ ಬರಕಾದ್ರೆ ತ೦ದ ಜೇನುತುಪ್ಪ ಕಹಿ ಇತ್ತು.. ಆಮೇಲೆ ಗೊತ್ತಾತು..ಹೀ೦ಗೀ೦ಗೆ ಅ೦ತ.. ಶಿ೦ಗೆ ಹೂವಿನ ಜೇನುತುಪ್ಪ ಆರೋಗ್ಯಕ್ಕೆ ಭಾರೀ ಒಳ್ಳೇದಡ ಹೇಳ್ಕ್ಯ೦ಡು ಅ೦ತೂ ಖಾಲೀ ಮಾಡಿದ್ಯ..!
ಚನ್ನಾಗಾಯ್ದು ಬರಹ..

sanjaykattimani said...

I heard about this "ಚೊರೆ" word 15+ years back. Good to know about the varieties of Honey :)

Digwas Bellemane said...

ರಾಘವೇ೦ದ್ರರವರೆ...ನೀವು ತು೦ಬ ಚೆನ್ನಾಗಿ ಬರಿತೀರ.ನಾನೂ ನಿಮ್ಮ ಬರಹದ ಅಭಿಮಾನಿ.

ಧನ್ಯವಾದಗಳು..

http://chithrapata.blogspot.com/

Govinda Nelyaru said...

ಉಳಿದ ಆಹಾರ ವಸ್ತುಗಳಂತೆ ಜೇನು ಸಹಾ ಇಂದು ಕಲಬರೆಕೆಗೆ ಒಳಗಾಗಿದೆ. ಮಾರುಕಟ್ಟೆಯಿಂದ ಖರೀದಿಸಲು ಭಯವಾಗುತ್ತದೆ. ಒಮ್ಮೆ ಪುತ್ತೂರು ಜೇನು ಸೊಸೈಟಿಯಿಂದ ತಂದ ಜೇನು ಸಕ್ಕರೆ ಪಾಕವಾಗಿತ್ತು. ವಿಪರೀತ antibiotics ಇರುವ ಕಾರಣ ವಿದೇಶಿ ಮಾರುಕಟ್ಟೆಯಲ್ಲಿ ತಿರಸ್ಕೃತವಾದ ಜೇನು ಇಲ್ಲಿ ಮಾರಾಟವಾಗುತ್ತಿದೆ. Dabur ಇತರ ದೊಡ್ಡ ಯಾಪಾರಿಗಳಿಂದ ಪಡಕೊಳ್ಳುತ್ತದೆ ವಿನಾ ರೈತರಿಂದಲ್ಲ. ಡಾಬೂರ್ ಬಗೆಗೆ ಬರೆದಿದ್ದಾರೆ Sample non-compliant with EIC standards. Would be rejected if placed for exports. ಹೆಚ್ಚಿನ ವಿವರಕ್ಕೆ http://downtoearth.org.in/node/1947

ಸೀತಾರಾಮ. ಕೆ. / SITARAM.K said...

ಅದ್ಭುತ ಮಾಹಿತಿ ರಾಘಣ್ಣ