Sunday, June 26, 2011

ಹೌದೇ ಹೌದು ಇದು ಹಾಗೆ ಬೇಕಾದರೂ ಅರ್ಥ ಕೊಡುತ್ತದೆ.

ಕೆಲ ವರ್ಷದ ಹಿಂದೆ ಚಂದನ ಟಿವಿ ವಾಹಿನಿಯಲ್ಲಿ "ಬೆಳಗು" ಎಂಬ ಕಾರ್ಯಕ್ರಮದಲ್ಲಿ ನನಗೊಂದು ಅವಕಾಶ ಕೊಟ್ಟಿದ್ದರು ಕೊರೆದು ಬಿಸಾಕಲು. ಸರಿ ಬಿಡಿ ಅಲ್ಲಿ ಕಡಿದು ಕಟ್ಟೆ ಹಾಕಿದ್ದರ ಬಗ್ಗೆ ಹೇಳಿ ಗರಿ ಗರಿ ಒಂದೂವರೆ ಸಾವಿರ ರೂಪಾಯಿ ಚೆಕ್ ರೂಪದ ಹಣ ಜೇಬಿಗಿಳಿಸಿದ್ದಾಯಿತು ಅದರ ಕತೆ ಬಿಟ್ಟು ಅದೇಕೆ ಈಗ ನೆನಪಾಯಿತು ಎಂಬುದರ ಬಗ್ಗೆ ಹೊರಡೊಣ.
ಚಂದನ ವಾಹಿನಿಯ ಸಂದರ್ಶಕ ಕಾರ್ಯಕ್ರಮದ ಮುಂಚೆ ಪಳಪಳ ಮಿಂಚಿಸಲು ನಿಮ್ಮದೆ ಆದ ಒಂದು ವಾಕ್ಯದ ಹಿತನುಡಿ ಕೊಡಿ ಅಂತ ಕೇಳಿದರು. ಹಾಗೆಲ್ಲಾ ದಿಡೀರನೆ ಒಂದು ವಾಕ್ಯದ ಹಿತನುಡಿ ಕೊಡಲು ನಾನೇನು ಕಗ್ಗ ಬರೆದೆ ಡಿವಿಜಿಯೋ ಅಥವಾ ಈಗಿನ ಹಲವರ ಬಾಯಲ್ಲಿ ಹೊರಡುವ ಗ್ನಾನಿಯೋ...! ಅಲ್ಲವಲ್ಲ. ಆದರೂ ಎಂತದೋ ಒಂದು ಸಾಲು ಹೇಳಲೇಬೇಕೆಂದು ಅವರು ವಿನಂತಿಸಿದ ಪರಿಣಾಮವಾಗಿ ಸಿಕ್ಕಾಪಟ್ಟೆ ತ್ರಾಸು ತೆಗೆದುಕೊಂಡು ಹೇಳಿದೆ " ನಮ್ಮ ಇಂದಿನ ಯೋಚನೆಗಳು ನಾಳೆಯನ್ನು ಕಟ್ಟಿಕೊಡುತ್ತವೆ". ಹಾಗೆ ಹೇಳಿದವನು ಅಂದೇ ಮರತೆ. ಆದರೆ ಜನ ಮರೆಯಲಿಲ್ಲ. ಅದೆಲ್ಲಾ ಕಳೆದು ಒಂದು ವರ್ಷದ ನಂತರ ಪರಿಚಯದ ಜನರೊಬ್ಬರು "ಏಯ್ ನಿನ್ನ ಸಂದರ್ಶನ ಮತ್ತೆ ಡಿಡಿ ಯಲ್ಲಿ ಬಂದಿತ್ತು," ಅಂದರು. ಒಳಗೊಳಗೆ ಖುಷಿಯಾಗಿ "ಓಹೋ" ಎಂದೆ. ಮುಂದುವರೆಸಿದ ಅವರು " ಆದರೆ ನೀನು ಅಂದು ಹೇಳಿದ ಸ್ಲೋಗನ್ ಮಾತ್ರಾ ಮತ್ತೆ ಹಾಕ್ಲೇ ಇಲ್ವಪ್ಪ, ತುಂಬಾ ಚೆನ್ನಾಗಿತ್ತು ಅದು" ಎಂದರು. ನಾನು ಕಕ್ಕಾಬಿಕ್ಕಿ ಏನು ಹೇಳಿದ್ದೆ ಅಂತ ನನಗೆ ನೆನಪಿಲ್ಲ ಆದರೆ ಅವರಿಗೆ ನೆನಪಿದೆ, ಹಾಗಂತ ಆ ಸಾಲು ಎಲ್ಲಿಂದಲೋ ಕದ್ದಿದಲ್ಲ ತನ್ನಷ್ಟಕ್ಕೆ ನನ್ನಿಂದ ಹುಟ್ಟಿದ್ದು ಆದರೆ ನೆನಪಿಲ್ಲ. ನನ್ನ ತಡಬಡಾಯಿಸುವಿಕೆ ಅವರಿಗೆ ಅರ್ಥವಾಯಿತಿರಬೇಕು ಅವರೇ ಮತ್ತೆ ಅದೇ ಸಾಲನ್ನು ಹೇಳಿದರು, ಮತ್ತು ಅವರದೇ ಆದ ದಾಟಿಯಲ್ಲಿ ಅದನ್ನು ತುಂಬಾ ಚನ್ನಾಗಿ ವ್ಯಾಖ್ಯಾನಿಸಿದರು. ನಾನು ಅಷ್ಟೆಲ್ಲಾ ಅರ್ಥ ಇಟ್ಟು ಹೇಳಿದ್ದಂತೂ ಅದು ಆಗಿರಲಿಲ್ಲ ಆದರೆ ಅದೊಂದು ಸಾಲು ಹಿಡಿದು ಅವರು ಸುಮಾರು ಹೊಳವುಗಳನ್ನು ಅದರಮೇಲೆ ನೀಡಿದರು.
ನನ್ನಿಂದಲೇ ಹೊರಟ ಆ ಸಾಲುಗಳು ಆಕಾಶಕ್ಕೆ ನೆಗೆದು ಅವರಮನೆ ಟಿವಿಯಲ್ಲಿ ಕಂಡು ಅವರ ಮಿದುಳೊಳಗೆ ಮಥನಗೊಂಡು ವಿವಿಧ ಅರ್ಥ ಹೊಂದಿ ಮತ್ತೆ ನನಗೆ ಒಂದು ವರ್ಷದ ನಂತರ ಬಂದು, ನನಗೆ ಮರತೇ ಹೋಗಿರುವಾಗ ಕದ ತಟ್ಟಿತ್ತು. ಅಬ್ಬಾ ಈ ನೆನಪಿನ ಕೋಶಗಳ ತಾಕತ್ತೇ ಅಂತ ನನಗೆ ಆ ಕ್ಷಣ ಅನಿಸಿ ಇಲ್ಲಿಯವರೆಗೂ ಹಲಬಾರಿ ಕಾಡುತ್ತಿರುತ್ತದೆ. ಕಗ್ಗ ಬರೆದ ಡಿವಿಜಿಯವರಿಗೆ ಅವರ ಜೀವನದಲ್ಲಿ ಅವುಗಳನ್ನು ಪಾಲಿಸಲಾಗಲಿಲ್ಲವೇನೋ ಅಥವಾ ಅದರ ಅನುಭವ ಸಾರವನ್ನು ಜೀವನಕ್ಕೆ ಅಳವಡಿಸಿಕೊಳ್ಳಲಾಗಲಿಲ್ಲವೇನೋ ಆದರೆ ಓದಿದ ಹಲವರು ತಮ್ಮ ನೆನಪಿನ ಕೋಶದಲ್ಲಿ ಭದ್ರವಾಗಿಟ್ಟುಕೊಂಡು ಬೇಕಾದ ಸಮಯದಲ್ಲಿ ಬಳಸಿಕೊಳ್ಳುತ್ತಿರಬಹುದು.
ಅದೇ ರೀತಿ ಮೊನ್ನೆ ಜಿ ಟಾಕ್ ಸ್ಟೇಟಸ್ ನಲ್ಲಿ ಹಾಗೆ ಸುಮ್ಮನೆ "ಕಂಡ ಕೂಡ್ಲೆ ಇಷ್ಟವಾಗೋರು ಆಮೇಲೆ ಕಷ್ಟವಾಗ್ತಾರೆ" ಅಂತ ಜಡಿದೆ. ದಿಗ್ವಾಸ್ "ಬಹಳ ಚನ್ನಾಗಿದೆ ನಿನ್ನ ಸ್ಟೇಟಸ್" ಅಂದ, ಲಕ್ಷ್ಮಿ "ನಿಮ್ಮ ಲವ್ ಎಟ್ ಫಸ್ಟ್ ಸೈಟ್ ಕತೆ ನಂಗೂ ಹೇಳ್ರಿ... ಕವಿತಂಗೆ(ನನ್ನ ಅರ್ದಾಂಗಿ) ಹೆದ್ರಿಕೋ ಬೇಡಿ, ನಾನೂ ಹೇಳಲ್ಲ " ಅನ್ನೋದೆ...!. ಅಯ್ಯ ಈ ಸ್ಲೋಗನ್ನಿಗೂ ಲವ್ ಎಟ್ ಫಸ್ಟ್ ಸೈಟ್ ಗೂ ಎತ್ತೆಣದೆತ್ತಣ ಸಂಬಂಧ ಅಂತ ನನಗೆ ಅನ್ನಿಸಿ ಹ ಹ ಹ ಎಂದಷ್ಟೇ ಹೇಳಿ ಟೈಪಿಸಿದೆ. ಆದರೆ ಕೆಲಕ್ಷಣಗಳ ನಂತರ ಪಕಪಕನೆ ಮಿಂಚಿತು ಹೌದೇ ಹೌದು ಇದು ಹಾಗೆ ಬೇಕಾದರೂ ಅರ್ಥ ಕೊಡುತ್ತದೆ. ಲಗುಬಗೆಯಿಂದ ಸಿಕ್ಕಾಪಟ್ಟೆ ಅನಾಹುತವಾಗುವುದರ ಮೊದಲು "ಕಿವಿಯಲ್ಲಿ ಒಂದು ಹುಳ ಬಿಟ್ರೆ ಮಂಡೆಯಲ್ಲಿ ನೂರು ಹುಳ ತುಂಬಿಕೊಳ್ಳುತ್ತೆ" ಅಂತ ಸ್ಟೇಟಸ್ ಬದಲಾಯಿಸಿದೆ. ಇದಕ್ಕೂ ಇನ್ನು ಯಾವ್ಯಾವ ಅರ್ಥ ಇದೆಯೋ ಯಾರು ಬಲ್ಲ? ಅವರವರ ಭಾವಕ್ಕೆ...ಅವರವರ ಭಕುತಿಗೆ ಅಂದುಬಿಡೋಣವೆ..?

4 comments:

ವಿ.ರಾ.ಹೆ. said...

ಪ್ರಶಸ್ತಿ ಬಂದ ಸಿನೆಮಾಗಳ ಬಗ್ಗೆ ಹೊಗಳಿ ಬರೆದಿರ್ತಾರಲ್ಲ, ಅದನ್ನು ಓದಿದಾಗ ನನಗೂ ಹಾಗೇ ಅನ್ಸುತ್ತೆ. ಆ ಪುಣ್ಯಾತ್ಮ ನಿರ್ದೇಶಕ ಹಾಗೆಲ್ಲಾ ಅನ್ಕೊಂಡು ಸಿನೆಮಾ ತೆಗೆದಿರ್ತಾನೋ ಇಲ್ವೋ, ಇವರಿಗೆ ಅದರಲ್ಲಿ ಏನೇನೆಲ್ಲಾ ಕಂಡಿರುತ್ತದೆ! ಇಲಿಯನ್ನು ಹುಲಿಮಾಡಿ ಹೇಳುವವರೇ ಜಾಸ್ತಿ ಇರುವಾಗ ಈ ನಿಮ್ಮ ಪ್ರಾಮಾಣಿಕತೆ ಇಷ್ಟವಾಯಿತು.

ಸೀತಾರಾಮ. ಕೆ. / SITARAM.K said...

nice!
Daarshanikaru heege ondondu vaakya manassige tochidante helibittu kelugarige saavira artha hachcuva kelasakke bittu amele daarshanikaraagibiduttaare...

Rakesh S Joshi said...

ಚೆನ್ನಾಗಿದೆ ಅರ್ಥ-ಅನರ್ಥಗಳು.. :D

RK Rajarama said...

ಅನಿಲ್ ರಮೇಶ್ ಬರೆದಿದ್ದಾರಲ್ಲ ಅದೇ ಆದರೂ ಆಗಬಹುದು.
ಆದರೆ ಈ 'ಗ್ನಾನಿ' ಅನ್ನುವ ಶಬ್ದವನ್ನು ಟೀವೀಯಲ್ಲಿ ಕೇಳಿ ಕೇಳಿ ತಲೆ ಚಿಟ್ಟು ಹಿಡಿದು ಹೋಗಿದೆ. ನಿಮ್ಮಂತಹ ಪತ್ರಿಕಾಕರ್ತರುಗಳು ಇದರ ಬಗ್ಗೆ ಸ್ವಲ್ಪ ಆಂದೋಲನ ಎಬ್ಬಿಸಬೇಕು. ಯಾಕೆ ಜನ 'ಜ್ಞ' ಶಬ್ದವನ್ನು ಉಚ್ಚರಿಸಲಾರರು? ಗ್ನಾನಿ ಎನ್ನುವುದು ಜ್ಞಾನಿ ಎನ್ನುವ ಶಬ್ದದ ತತ್ಸಮವೋ ತದ್ಭವವೋ ಇನ್ನೆಂತದೋ ಅಂತೂ ಆಗಿರಲಾರದಲ್ಲವೇ? ಈಗ ಪ್ರಾಥಮಿಕ ಶಾಲೆಗಳಲ್ಲಿ ಕ್ಷ ಮತ್ತು ಜ್ಞ ಅಕ್ಷರಗಳನ್ನೇ ತೆಗೆದುಹಾಕಿದ್ದಾರಂತೆ ಎನ್ನುವ ಸುದ್ದಿ ಕೇಳಿ ಷಾಕ್ ಆಗುತ್ತಿದೆ. (ಸತ್ಯವೋ ಸುಳ್ಳೋ ಪರಾಮರ್ಶಿಸಬೇಕು) ಕೃತಜ್ನತೆಗೂ ಕೃತಘ್ನತೆಗೂ ಭೇದವಿಲ್ಲದ ಕೃತಘ್ನ ಜನ!