Wednesday, September 11, 2013

ಯೋಜನಾಬದ್ಧ ಕೃಷಿಯಿಂದ ಸಮೃದ್ಧಿ

ಕಷ್ಟನಷ್ಟ ಎಲ್ಲಾ ಉದ್ಯೋಗದಲ್ಲಿಯೂ ಸರ್ವೇಸಾಮಾನ್ಯ ಆದರೆ ಇಷ್ಟವಿದ್ದರೆ ಅದರ ಜತೆ ತಾಳ್ಮೆ ಹಾಗೂ ಕೈಗೆತ್ತಿಕೊಳ್ಳುವ ಯೋಜನೆ ಗಳು ಸಮರ್ಪಕವಾಗಿದ್ದರೆ ಎಂತಹಾ ಉದ್ಯೋಗದಲ್ಲಿಯೂ ಯಶಸ್ಸು ಸಾದ್ಯ, ಬೇರೆಲ್ಲಾ ಉದ್ಯೋಗಕ್ಕೆ ಹೋಲಿಸಿದಲ್ಲಿ ಕೃಷಿಕ್ಷೇತ್ರ ಯಶಸ್ಸಿನ ಜತೆ ಉತ್ತಮ ಆರೋಗ್ಯ ಹಾಗೂ ನೆಮ್ಮದಿ ಬೋನಸ್ ಎಂಬುದಕ್ಕೆ ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪದ ಕಾನ್ಲೆ ಬಾಬು ಸ್ಕರಿಯಾಚನ್ ಉದಾಹರಣೆಯಾಗಿ ನಿಲ್ಲುತ್ತಾರೆ. ಕಾನ್ಲೆ ರೈಲ್ವೆ ನಿಲ್ದಾಣದಿಂದ ಕೂಗಳತೆಯ ದೂರದಲ್ಲಿ ಬಾಬುರವರ ಸಮೃದ್ಧ ಕೃಷಿಕ್ಷೇತ್ರ ಕಾಣಿಸುತ್ತದೆ. ಕೇರಳ ಮೂಲದ ಬಾಬು ಸ್ಕರಿಯಾಚನ್ ೨೮ ವರ್ಷದ ಹಿಂದೆ ತಂದೆಯ ಜತೆ ಕೇರಳದ ಕ್ಯಾಲಿಕಟ್ ನಿಂದ ಸಾಗರ ತಾಲ್ಲೂಕಿನ ಕಾನ್ಲೆ ಗ್ರಾಮಕ್ಕೆ ಬಂದು ೬೦ ಎಕರೆ ಕೃಷಿ ಬರಡು ಭೂಮಿ ಖರೀದಿಸಿದರು. ಅಲ್ಲಿಂದ ತಮ್ಮ ಬದುಕನ್ನು ಕೃಷಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡ ಬಾಬು ಒಂದೊಂದೇ ಮೆಟ್ಟಿಲೇರುತ್ತಾ ಚಿಕ್ಕ ಸಂಸಾರ ದೊಡ್ಡ ಕೃಷಿ ಕ್ಷೇತ್ರ ಎಂಬ ನೀತಿ ಪಾಲಿಸಿ ಯಶಸ್ಸಿನ ಜತೆ ನೆಮ್ಮದಿ ಬದುಕು ಕಟ್ಟಿಕೊಂಡಿದ್ದಾರೆ. ಅವಿಭಕ್ತ ಕುಟುಂಬದಲ್ಲಿ ಖರೀದಿಸಿದ್ದ ಜಮೀನು ಬಾಬುರವರ ಪಾಲಿಗೆ ಬಂದಿದ್ದು ೩೦ ಎಕರೆ. ವಿವಿಧ ಬೆಳೆಗಳಲ್ಲಿ ನಂಬಿಕೆ ಇಟ್ಟಿರುವ ಬಾಬು ಕೃಷಿ ಆರಂಬಿಸಿದ್ದು ಅನಾನಸ್ ಬೆಳೆಯ ಮುಖಾಂತರ. ಅನಾನಸ್ ಜತೆಗೆ ರಬ್ಬರ್ ಬೆಳೆಸಿದರು. ಅನಾನಸ್ ಆದಾಯದಲ್ಲಿ ರಬ್ಬರ್ ತೋಟ ಉಚಿತವಾಗಿ ಇಳುವರಿ ನೀಡಲಾರಂಬಿಸಿತು. ೧೧ ಎಕರೆ ರಬ್ಬರ್, ೮ ಎಕರೆ ತೆಂಗು ೮ ಎಕರೆ ಬಾಳೆ ೩ ಎಕರೆ ಅಡಿಕೆ ಹೀಗೆ ಒಂದು ಕೃಷಿಯ ಲಾಭ ಮತ್ತೊಂದಕ್ಕೆ ತೊಡಗಿಸಿ ೩೦ ಎಕರೆ ಕೃಷಿ ಕ್ಷೇತ್ರ ನಳನಳಿಸುವಂತೆ ಮಾಡಿದ್ದಾರೆ ಬಾಬು. ಅಂತರ ಬೆಳೆ : ಏಕಬೆಳೆ ಕೃಷಿಕರ ಧೈರ್ಯವನ್ನು ಕುಗ್ಗಿಸುತ್ತದೆ, ಆರ್ಥಿಕ ಹಿಂಜರಿತ ಉಂಟಾಗುತ್ತದೆ ಎಂದು ಅಚಲವಾಗಿ ನಂಬಿರುವ ಬಾಬು, ಬೆಳೆಯ ನಡುವೆ ಅಂತರಬೆಳೆ ಬೆಳೆದು ಹೆಚ್ಚಿನ ಲಾಭಗಳಿಸಿದ್ದಾರೆ. ಮಲೆನಾಡಿನಲ್ಲಿ ತೆಂಗು ಬೆಳೆ ಸಮರ್ಪಕವಾಗಿ ಬಾರದು, ತೆಂಗು ಬೆಳೆ ಸಮುದ್ರ ತೀರದಲ್ಲಿ ಎಂಬ ಎಂಬ ನಂಬಿಕೆಯನ್ನು ಬಾಬುರವರು ಹುಸಿಯಾಗಿದ್ದಾರೆ. ತೆಂಗಿನ ಮರ ಉತ್ತಮ ಫಸಲು ನೀಡಲು ಮರದಿಂದ ಮರಕ್ಕೆ ೩೦ ಅಡಿ ಅಂತರ ಕಾಪಾಡಿಕೊಂಡು ನಾಟಿ ಮಾಡಬೇಕು ಹಾಗೂ ಗರಿಷ್ಟ ೨ ಅಡಿ ಹೊಂಡ ತೆಗೆದು ಗಿಡ ನೆಡಬೇಕು, ಬೆಳೆದ ಗಿಡದ ಗರಿಗಳು ಮತ್ತೊಂದು ಗಿಡದ ಗರಿಗೆ ತಾಕದಂತೆ ಇರಬೇಕು ಆವಾಗ ತೆಂಗು ಮಲೆನಾಡಿನಲ್ಲಿ ಲಾಭದಾಯಕ ಎನ್ನುವುದು ಇವರ ಅಭಿಪ್ರಾಯ. ಪ್ರತಿಯೊಂದು ತೆಂಗಿನ ಮರದಿಂದ ೪೦೦ ರಿಂದ ೫೦೦ ತೆಂಗಿನಕಾಯಿ ವರ್ಷವೊಂದಕ್ಕೆ ಪಡೆಯುತ್ತಾರೆ. ಆದರೆ ದರದ ವಿಚಾರದಲ್ಲಿ ತೆಂಗು ಮೂವತ್ತು ವರ್ಷಗಳ ಹಿಂದೆ ಇದೆ, ಆದರೂ ಲಾಭದಾಯಕ, ಕಾಳುಮೆಣಸಿನ ಬಳ್ಳಿ ಪ್ರತೀ ತೆಂಗಿನ ಮರಕ್ಕೆ ಹಚ್ಚಿದರೆ ಲಾಭ ದುಪ್ಪಟ್ಟು. ಅಡಿಕೆಗೂ ಇದೇ ರೀತಿ ೯ ಅಡಿ ಅಂತರ ಇರಬೇಕು, ಹೆಚ್ಚು ಗಿಡ ಕಡಿಮೆ ಫಸಲು ನೀತಿಗಿಂತಲೂ ಕಡಿಮೆ ಗಿಡ ಕಡಿಮೆ ಕೆಲ ಹೆಚ್ಚು ಫಸಲು ಜತೆಗೆ ಹೆಚ್ಚು ಲಾಭ, ಗೊಬ್ಬರ ಹಾಗೂ ನೀರಿನ ಪೂರೈಕೆ ಅತಿಯಾಗಬಾರದು ಮಿತವಾಗಿರಬೇಕು ಎನ್ನುವುದು ಇವರ ಅಭಿಮತ. ರಬ್ಬರ್ ಪರಿಣಿತಿ: ರಬ್ಬರ್ ಬೆಳೆಯಲ್ಲಿ ವಿವಿಧ ರೀತಿಯ ಪ್ರಯೋಗಗಲನ್ನು ನಡೆಸಿ ಬಾಬು ಯಶಸ್ಸು ಕಂಡಿದ್ದಾರೆ. ರಬ್ಬರ್ ಮಂಡಳಿ ನಿಗದಿಪಡಿಸುವ ಅಂತರದಲ್ಲಿ ಗಿದಗಳನ್ನು ನಾಟಿ ಮಾಡಿದರೆ ಸಬ್ಸಿಡಿ ಸಿಗುತ್ತದೆ. ೧೫ ಅಡಿ ಅಂತರ ಮಂಡಳಿಯದು. ಬಾಬು ಕೊಂಚ ಬುದ್ಧಿವಂತಿಕೆ ಉಪಯೋಗಿಸಿ ರಬ್ಬರ್ ತೋಟದ ಕೊನೆಯೆ ಸಾಲಿನಲ್ಲಿ ಕೇವಲ ೫ ಅಡಿ ಅಂತರಕ್ಕೆ ಗಿಡ ನಾಟಿ ಮಾಡಿ ತೋಟದೊಳಗೆ ರಬ್ಬರ್ ಮಂಡಳಿ ನಿಗದಿಪಡಿಸಿದ ಅಂತರದ ನಾಟಿ ಮಾಡಿದ್ದಾರೆ. ಐದು ಅಡಿ ಅಂತರದಲ್ಲಿ ನಾಟಿ ಮಾಡಿದ ರಬ್ಬರ್ ಗಿದಗಳು ಉತ್ತಮ ಗಾತ್ರದಲ್ಲಿ ಬೆಳೆದಿದ್ದು ಅಧಿಕ ಲಾಭವನ್ನು ತರುತ್ತದೆ ಎನ್ನುವುದು ಬಾಬುರವರ ಅನುಭವ. ಬಾಳೆ ಬೆಳೆ: ಬಾಬುರವರು ತೆಂಗಿನತೋಟದ ನಡುವೆ ಬಾಳೆ ಬೆಳೆದು ಯಶಸ್ವಿಯಾಗಿದ್ದಾರೆ. ನೇಂದ್ರ, ಪಚ್ಚಬಾಳೆ, ಪುಟ್ಟಬಾಳೆ ಹಾಗೂ ಸೇಲಂ ಬಾಳೆಗಳನ್ನು ಬೆಳೆಯುವ ಬಾಬು ಬಾಳೆಯೊಂದರಿಂದಲೇ ವರ್ಷಕ್ಕೆ ೩ ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ತೆಂಗಿನ ತೋಟದ ನಡುವೆ ಹಿಟಾಚಿಯಿಂದ ಚರಂಡಿ ತೆಗೆಯಿಸಿ ಬಾಳೆ ನಾಟಿ ಮಾಡುವ ಬಾಬು ಐದು ಕೂಳೆ ಬಾಳೆ ಬೆಳೆದು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ದಡ್ಡಿ ಗೊಬ್ಬರ, ಸಾವಯವ ಗೊಬ್ಬರದ ಜತೆ ಕೊಂಚಮಟ್ಟಿಗಿನ ರಾಸಾಯನಿಕವನ್ನು ವೈಜ್ಞಾನಿಕ ಪದ್ದತಿಯಲ್ಲಿ ಬಳಸಿದಲ್ಲಿ ಕೃಷಿ ಕ್ಷೇತ್ರ ಫಲವತ್ತತೆಯಾಗಿರುತ್ತದೆ ಎನ್ನುತ್ತಾರೆ. ಕೃಷಿ ಸಲಹೆ: ಮಲೆನಾಡಿನಲ್ಲಿ ಕೇರಳದಿಂದ ರಬ್ಬರ್ ಬೆಳೆ ಬಹಳ ಹಿಂದೆಯೇ ಕರೆತಂದ ಕೀರ್ತಿ ಬಾಬುರವರದ್ದು. ಸುತ್ತಮುತ್ತಲಿನ ನೂರಾರು ಕೃಷಿಕರಿಗೆ ಇವರು ರಬ್ಬರ್ ಕೃಷಿ ಬಗ್ಗೆ ಅವರ ಜಾಗಕ್ಕೆ ಹೋಗಿ ನಾಟಿ, ರಬ್ಬರ್ ಟ್ಯಾಪಿಂಗ್, ಮತ್ತು ರಬ್ಬರ್ ಬೆಳೆಯ ಬಗ್ಗೆ ಮಾಹಿತಿ ನೀಡಿ ರೈತರನ್ನು ರಬ್ಬರ್ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ. ಇವರು ಇದನ್ನೆಲ್ಲಾ ಉಚಿತವಾಗಿ ಕೇವಲ ಆಸಕ್ತಿಗಾಗಿ ಮಾಡಿದ್ದಾರೆ. ಮಿನಿ ಗಾರ್ಡನ್: ಬಾಬು ರವರ ಪತ್ನಿ ಮಿನಿಬಾಬು ರವರದು ಹೂ ಕೃಷಿ. ಮನೆಯ ಸುತ್ತಮುತ್ತಲಿನ ಇಂಚಿಂಛು ಜಾಗವೂ ಅಂಥೋರಿಯಂ, ಪಾಪಸ್ ಕಳ್ಳಿ , ಗುಲಾಬಿ, ಕಾಗದಾಳಿ ಮುಂತಾದ ಆಕರ್ಷಕ ಹೂವುಗಳಿಂದ ಮನಮೋಹಕವಾಗಿದೆ. ಹೂವಿನ ಕೃಷಿಯಲ್ಲಿ ತೊಡಗಿಸಿ ಕೊಂಡಿರುವ ಮಿನಿಬಾಬು ಕೃಷಿಯಲ್ಲಿಯೂ ಯಜಮಾನರಿಗೆ ಸಾಥ್ ನೀಡುತ್ತಾರೆ. ಇಲ್ಲಿ ಎಲ್ಲವೂ ಇದೆ: ಸರ್ವ ಋತು ಹಲಸಿನಿಂದ ಹಿಡಿದು, ನಿಂಬೆ, ಪೇರಳೆ, ಬಿಳೀ ಕೆಸ, ಹೀಗೆ ಎಲ್ಲಾ ಜಾತಿಯ ಹಣ್ಣು ಹಂಪಲು ಇವರ ಕ್ಷೇತ್ರದಲ್ಲಿ ಲಭ್ಯ. ೩ ಎಕರೆ ಪ್ರದೇಶಲ್ಲಿನ ತೆಂಗಿನ ನಡುವೆ ಅಂತರ ಬೆಳೆಯಾಗಿರುವ ೧೨೦ ಸಪೋಟ ಗಿಡಗಳು ಇವರಿಗೆ ಆದಾಯದ ಮೂಲವೂ ಹೌದು. ಪಕ್ಷಿಪ್ರೀತಿ: ನಮ್ಮ ರಾಷ್ಟ್ರ ಪಕ್ಷಿ ಇಲ್ಲಿ ಹತ್ತಿರದಿಂದ ನೋಡಲು ಸಿಗುತ್ತದೆ. "ವಿವಿ" ಎಂಬ ಹೆಸರಿನ ನವಿಲು ಈ ಮನೆಯ ಸುತ್ತಮುತ್ತ ಓಡಾಡುತ್ತಲಿರುತ್ತದೆ. ಮನೆಗೆ ಬರುವ ಅತಿಥಿಗಳ ಹಿಂದೆ ಮುಂದೆ ಸುತ್ತಾಡುವ ವಿವಿ ಅತಿಥಿಗಳು ಟಾಟಾ ಹೇಳುವವರೆಗೂ ಅವರ ಹಿಂದೆಯೇ ಓಡಾಡುತ್ತಾ ಇರುತ್ತದೆ. ಅಕ್ಕರೆಯಿಂದ ಮನೆಯ ಗಿರಿರಾಜ ಕೋಳಿಗಳ ಜತೆ ಇರುವ ನವಿಲು ನೋಡುಗರಿಗೆ ಅಚ್ಚರಿ ಮೂಡಿಸುತ್ತದೆ. ಕೇರಳದಲ್ಲಿ ಕೃಷಿ ಕೊಂಚ ಸುಲs ಅಲ್ಲಿ ನೀರಿನ ಸಮಸ್ಯೆ ಕಡಿಮೆ, ಜಾನುವಾರು ಕಾಟವಿಲ್ಲ, ಎಲ್ಲರೂ ಅವರವರ ದನಗಳನ್ನು ಅವರೇ ನೊಡಿಕೊಳ್ಳುತ್ತಾರೆ, ಜತೆಗೆ ಅಲ್ಲಿನ ಕೃಷಿಕರು ಧನಾತ್ಮಕ ಯೋಚನೆಯಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆಟೊ ಓಡಿಸುವುದರಿಂದ ಹಿಡಿದು ಬಸ್ ಮಾಲಿಕರವರೆಗೂ, ಸಣ್ಣ ಅಂಗಡಿಯಿಂದ ಹಿಡಿದು ದೊಡ್ದ ಫ್ಯಾಕ್ಟರಿಯವರೆಗೂ ಕಷ್ಟ ನಷ್ಟಗಳು ಇದ್ದೇ ಇರುತ್ತವೆ, ಅವನ್ನೆ ಹಿಡಿದುಕೊಂಡು ಕೊರಗುತ್ತಾ ಕೈಕಟ್ಟಿ ಕುಳಿತರೆ ಎಲ್ಲಿಯೂ ಯಶಸ್ಸು ಸಿಗುವುದಿಲ್ಲ, ನಾವು ೨೮ ವರ್ಷದ ಹಿಂದೆ ೪ ಸಾವಿರ ಎಕರೆಗೆ ಕೊಂಡಿದ್ದ ಜಮೀನು ನಮ್ಮ ಬೆವರಿನ ಫಲವಾಗಿ ಇಂದು ಎಕರೆಗೆ ೨೦ ಲಕ್ಷ ರೂಪಾಯಿ ಆಗಿದೆ. ಈ ಮಧ್ಯೆ ನಮ್ಮ ಜೀವನ ನಡೆದಿದೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಹಬ್ಬ ಹರಿದಿನ ಎಲ್ಲವೂ ನಮಗೆ ಕೃಷಿಯಿಂದಲೇ ಆಗಿದೆ ಹಾಗಾಗಿ ಇಲ್ಲಿ ನಾನು ನೆಮ್ಮದಿ ಕಂಡಿದ್ದೇನೆ, ಪತ್ನಿ ಪುತ್ರಿ ಯ ಜತೆ ಕಾಲ ಕಳೆಯುವುದಕ್ಕೂ ಸಮಯ ಸಿಕ್ಕಿದೆ, ಸವಾಲುಗಳು ಎಲ್ಲಾ ಕ್ಷೇತ್ರದಲ್ಲಿಯೂ ಇದೆ ಹಾಗೆಯೇ ಇಲ್ಲಿಯೂ ಇದೆ, ನಮ್ಮ ಜಾಣತನದಿಂದ ಅದನ್ನು ಎದುರಿಸಬೇಕು, ಇಲ್ಲಿ ಸೋಮಾರಿತನ ಸಲ್ಲದು ಹಾಗೂ ಆಕಳು ಹಿಂಡಿ, ಕೊಟ್ಟಿಗೆಯ ಸಗಣಿ ತೆಗೆಯುವುದರಿಂದ ಪ್ರಾರಂಭಿಸಿ ತೋಟದ ಮಣ್ಣು ಕೆಲಸವೂ ಕೃಷಿಕನಿಗೆ ಗೊತ್ತಿರಬೇಕು ಮತ್ತು ಮಾಡಲು ಸಿದ್ಧವಿರಬೇಕು ಆವಾಗ ಕೃಷಿ ಕಾರ್ಮಿಕರು ನಮ್ಮೊಟ್ಟಿಗೆ ಸಹಕರಿಸುತ್ತಾರೆ, ಎನ್ನುತ್ತಾರೆ ಬಾಬು ಸ್ಕರಿಯಾಚನ್. ಕೃಷಿಕ್ಷೇತ್ರ ಅತ್ಯಂತ ಉತ್ತಮವಾಗಿದ್ದು ಆದರೆ ಯೋಜನೆ ಯೋಚನೆ ಸಮರ್ಪಕವಾಗಿರಬೇಕು ಎನ್ನುವುದಕ್ಕೆ ಕಾನ್ಲೆ ಬಾಬುರವರು ಸಾಕ್ಷಿ. ಪ್ರಕೃತಿಯ ಹಸಿರನ ನಡುವೆ ಸುಂದರವಾದ ಪುಟ್ಟಮನೆ, ಸುತ್ತಮುತ್ತ ಓಡಾಡುವ ನವಿಲು, ಆಕಳಿನ ಕೂಗು, ಬಣ್ಣಬಣ್ಣದ ಹೂವುಗಳು, ಮೈ ತಬ್ಬುವ ನಾಯಿ, ಕೇಳಿದಷ್ಟೂ ಮಾಹಿತಿ ನಿಡುವ ಬಾಬು ದಂಪತಿಗಳು ಎಂತಹವರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ನಾವು ಹೀಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಸೆ ಮೂಡುತ್ತದೆ. ಬಾಬು ಸ್ಕರಿಯಾಚನ್ ಮೊಬೈಲ್ : ೯೬೩೨೬೦೬೧೬೫ ಹಾಗೂ ಮಿನಿಬಾಬು: ೯೪೪೮೯೪೩೯೦೮

Thursday, March 14, 2013

ಕಾರ್ಪೋರೇಟ್ ಕೃಷಿ.


ಕೃಷಿಗೆ ವ್ಯವಸ್ಥಿತ ರೂಪ ಕೊಟ್ಟು, ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿ, ವರ್ಷಾಂತ್ಯದಲ್ಲಿ ಲಾಭ ನಷ್ಟಗಳ ಲೆಕ್ಕಗಳನ್ನು ಪಾಲಿಸಿ, ಮುಂದಿನ ವರ್ಷಗಳ ಪ್ಲ್ಯಾನ್ ತಯಾರಿಸಿ, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಕಾರ್ಫೊರೇಟ್ ಕೃಷಿಯ ಮುಖ್ಯ ಲಕ್ಷಣ. ಸಾಮಾನ್ಯವಾಗಿ ಭಾರತದಲ್ಲಿ ಹೀಗೆಲ್ಲಾ ಪಾಲಿಸಿ ಕೃಷಿಯನ್ನು ಉದ್ಯಮವಾಗಿ ತೆಗೆದುಕೊಂಡವರ ಸಂಖ್ಯೆ ಬಹು ಕಡಿಮೆ. ಈ ಕೃಷಿ ಪದ್ದತಿ ಪಾಲನೆಯಿಂದ ವರ್ತಮಾನ ಭವಿಷ್ಯಗಳ ಪಕ್ಕಾ ಮಾಹಿತಿ ರೈತನ ಬಳಿ ಇರುತ್ತದೆ. ಮಾಡಿದ ತಪ್ಪುಗಳು ಎಲ್ಲಿ ಎಂದು ತಿಳಿದು ಸರಿಪಡಿಸಿಕೊಳ್ಳಬಹುದು. ಅಂತಹ ಅಪರೂಪದ ಪದ್ದತಿಯನ್ನು ಪಾಲಿಸಿ ಯಶಸ್ವೀ ಕೃಷಿಕ ಎನ್ನಿಸಿಕೊಂಡಿದ್ದಾರೆ ತಾಳಗುಪ್ಪದ ಸಮೀಪದ ಕೆಳಗಿನ ತಲವಾಟದ ಎಂ ಎಸ್. ನರಹರಿ.
ತಾಳಗುಪ್ಪದಿಂದ ಜೋಗಕ್ಕೆ ಸಾಗುವ ರಾಷ್ತ್ರೀಯ ಹೆದ್ದಾರಿ ೨೦೬ ಮಾರ್ಗದಲ್ಲಿ ಮನಮನೆಯ ನಂತರ ಸಿಗುವ "ಮತ್ತುಗ ಫಾರಂ" ಹೌಸ್ ನರಹರಿಯವರ ಕೃಷಿ ಕ್ಷೇತ್ರ. ಮೂಲತಃ ಕೃಷಿಕುಟುಂಬದವರಾಗಿದ್ದ ನರಹರಿಯವರು ತುಮ್ರಿಯ ಸಮೀಪ ಹುಳಿಸೆ ಕೇರಿ ಊರಿನವರು.ಲಿಂಗನಮಕ್ಕಿ ಆಣೆಕಟ್ಟಿನ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡು ಉದ್ಯೋಗದ ನಿಮಿತ್ತ ಬೆಂಗಳೂರು ಸೇರಿದರು. ಅಲ್ಲಿ ಎಷ್ಟೇ ದುಡಿದರೂ ಮನಸ್ಸಿನಲ್ಲಿ ಹುದುಗಿದ್ದ ಕೃಷಿಕ ಕಾಡುತ್ತಲಿದ್ದ, ೧೯೯೭ ರಲ್ಲಿ ೧೦ ಎಕರೆ ಖುಷ್ಕಿ ಜಮೀನು ಖರಿದಿಸಿದ ನರಹರಿ ಬಾಳೆ ಅಡಿಕೆ ಕಾಳು ಮೆಣಸು ಏಲಕ್ಕಿ ಕೃಷಿ ಆರಂಭಿಸಿದರು. ಖುಷ್ಕಿ ಜಮೀನು ಹಾಗೂ ಕಲ್ಲಿನ ಜಾಗವಾದ್ದರಿಂದ ಅಲ್ಲಿ ಕೃಷಿ ಸುಲಭವಾಗಿರಲಿಲ್ಲ, ಲಾರಿಯಲ್ಲಿ ಕಾಡುಮಣ್ಣು ಜಮೀನಿಗೆ ತುಂಬಿಸಿ ಸಾರಯುತ ಮಾಡುವಂತಹ ಪರಿಸ್ಥಿತಿ ಅಂದು ಇತ್ತು. ಬಹಳ ಹಣ ಬೇಡುತ್ತಿದ್ದ ಕೃಷಿಕ್ಷೇತ್ರ ಜನರ ದೃಷ್ಟಿಯಲ್ಲಿ ನರಹರಿ ತಪ್ಪು ಹೆಜ್ಜೆ ಇಡುತ್ತಿದ್ದಾರೆ ಎಂಬ ಮಾತುಗಳು ಸಾಮಾನ್ಯವಾಗಿತ್ತು. ತೆರೆದಬಾವಿ ಜಮೀನಿಗೆ ನೀರುಣಿಸಲು ವಿಫಲವಾದಾಗ ಕೊಳೆಬಾವಿಯ ಮೊರೆಹೋದರು ನರಹರಿ. ಮೂರು ಕೊಳವೆ ಬಾವಿಗಳು ವಿಫಲವಾದಾಗ ಸ್ವಲ್ಪ ಅಧೀರರಾದರೂ ಹತಾಶರಾಗದೆ ಇನ್ನೊಂದು ಪ್ರಯತ್ನಕ್ಕಿಳಿದರು. ನಾಲ್ಕನೆ ಕೊಳವೆ ಬಾವಿ ಕೈ ಹಿಡಿಯಿತು. ವರ್ಷದಿಂದ ವರ್ಷಕ್ಕೆ ಹತ್ತು ಎಕರೆ ಜಾಗದಲ್ಲಿ ಜಲಮರುಪೂರಣ ಕೈಗೊಂಡ ಕಾರಣ ಬೋರ್ ವೆಲ್ ನೀರು ಸಾಕಷ್ಟು ಹೆಚ್ಚಿ ಹತ್ತು ಎಕರೆ ಹಸಿರಿನಿಂದ ನಳನಳಿಸುವಂತಾಯಿತು.
ಪಾಳೇಕರ್ ಕೃಷಿ: ಅನುಸರಿಸಲು ಹಾಗೂ ಕೃಷಿಕ್ಷೇತ್ರ ಹಸಿರಿನಿಂದ ನಳನಳಿಸಲು ಉತ್ತಮ ಪದ್ದತಿಯೆಂದರೆ "ಪಾಳೇಕರ್ ಕೃಷಿ ವಿಧಾನ" ಎಂಬುದು ನರಹರಿಯವರ ಅನುಭವ ವೇದ್ಯ ಮಾತುಗಳು. ರಾಸಾಯನಿಕಗಳಿಮ್ದ ಗಾವುದ ದೂರವಿರುವ ನರಹರಿ ಹತ್ತು ಎಕರೆಗೂ ಸಾವಯಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಗಿಡಕ್ಕೆ ನೀರಿನ ಮೂಲಕ ದ್ರವರೂಪಿಗೊಬ್ಬರ ವಿತರಣೆ ಮಾಡುತ್ತಾರೆ. ಇದರಿಂದಾಗಿ ಒಂದೇ ಖರ್ಚಿನಲ್ಲಿ ಎರಡು ಕೆಲಸ ಸಾಧಿಸಿಕೊಳ್ಳುತ್ತಿದ್ದಾರೆ. ಜೀವ ಚೈತನ್ಯ ಕೃಷಿಯನ್ನು ಎರಡು ವರ್ಷ ಸಂಪೂರ್ಣ ಅಳವಡಿಸಿದ್ದರೂ ಅದು ಹೆಚ್ಚಿನ ಶ್ರಮ ಬೇಡುವುದರಿಂದ ಕೆಲವು ಸುಲಭವಾದಂತಹ ಸಿಂಪರಣೆಗಳನ್ನು ಮಾತ್ರಾ ಉಳಿಸಿಕೊಂಡು ಮಿಕ್ಕಂತೆ ಪಾಳೇಕರ್ ಕೃಷಿ ಅಳವಡಿಸಿ ಯಶಸ್ಸು ಸಾಧಿಸಿದ್ದಾರೆ.
ಬಗ್ಗಡ ಸರಬರಾಜು: ಮನೆಯ ಸ್ನಾನದ, ಹಾಗೂ ಲ್ಯಾಟ್ರೀನ್ ಗುಂಡಿಗಳ ನೀರನ್ನು ಶುದ್ಧಿಕರಣ ಘಟಕ ಸ್ಥಾಪಿಸಿ ಗಿಡಗಳಿಗೆ ಪೂರಸುವುದರ ಮೂಲಕ ಉತ್ತಮ ಪ್ರತಿಫಲ ಕಂಡಿದ್ದಾರೆ ನರಹರಿ. ಅಲ್ಲಿ ಬಳಕೆಯಾಗುವ ಎಲ್ಲಾ ವಸ್ತುಗಳನ್ನೂ ಗೊಬ್ಬರವಾಗಿ ಬಳಸುವುದರಿಂದ ಗೊಬ್ಬರಕ್ಕಾಗಿ ವ್ಯಯಿಸುವ ಖರ್ಚು ಅರ್ದ ಮಿಗಿಸುತ್ತಾರೆ.
ಬಾಳೆ ಕೃಷಿ: ಹತ್ತು ಎಕರೆ ಅಡಿಕೆ ತೋಟದ ಆದಾಯದಷ್ಟೇ ಆದಾಯವನ್ನು ಅಂತರಬೆಳೆಯ ಮೂಲಕ ಗಳಿಸುತ್ತಿದ್ದಾರೆ. ಆರಂಭದಿಂದಲೂ ಬಾಳೆ ಕೃಷಿಗೆ ಒತ್ತು ನೀಡಿದ ನರಹರಿ, ಪಚ್ಚಬಾಳೆ,ಕರಿಬಾಳೆ ಮುಂತಾದವುಗಳ ಕೃಷಿ ನಡೆಯಿಸಿ ಅಂತಿಮವಾಗಿ ಏಲಕ್ಕಿಬಾಳೆಯಿಂದ ಯಶಸ್ಸುಕಂಡುಕೊಂಡಿದ್ದಾರೆ. ೨೫೦೦ ಬಾಳೆಸಸಿ ನಿರಂತರ ಗೊನೆ ಸಿಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದು ವಾರ್ಷಿಕ ಒಂದೂವರೆ ಲಕ್ಷ ರೂಪಾಯಿಗಳ ಆದಾಯ ಬಾಳೆಯಿಂದ ಗಳಿಸುತ್ತಿದ್ದಾರೆ. ಹಾಲುವಾಣ ಗಿಡಗಳಿಗೆ ಕಾಳುಮೆಣಸು ಹಬ್ಬಿಸುವುದರ ಮೂಲಕ ಉತ್ತಮ ಕಾಳುಮೆಣಸು ಆದಾಯ ಹೊಂದಿದ್ದಾರೆ. ಅಂತರಬೆಳೆಯಾಗಿ ಸೆಲೆಕ್ಷೆನ್ ೯ ಕಾಪಿ ಬೆಳೆದಿದ್ದು ಉಪ ಆದಾಯವಾಗಿ ವಾರ್ಷಿಕ ೫-೬ ಕ್ವಿಂಟಾಲ್ ಉತ್ತಮ ಕಾಫಿ ಬೀಜ ಬೆಳೆಯುತ್ತಿದ್ದಾರೆ. ಖುಷ್ಕಿ ಜಮೀನಿಗೆ ಏಲಕ್ಕಿ ಮಾತ್ರಾ ನಿರಂತರ ಒಗ್ಗದು ಎನ್ನುವುದು ನರಹರಿ ಕಂಡುಕೊಂಡ ಸತ್ಯ. ಸ್ಥಳಿಯ ಏಲಕ್ಕಿ ನಾಟಿ ಮಾಡಿ ಒಂದು ಕ್ವಿಂಟಾಲ್ ಏಲಕ್ಕಿ ಬೆಳೆದರೂ ಗಿಡಗಳು ಮೂರು ವರ್ಷದ ನಂತರ ನಿಲ್ಲಲಿಲ್ಲ, ಕೆರಳದಿಂದ ನೆಲ್ಯಾಣಿ ಏಲಕ್ಕಿ ತಂದು ಪ್ರಯತ್ನಿಸಿದರೂ ಒಂದೆರಡು ವರ್ಷ ಆದಾಯ ನೀಡುತ್ತದೆ ನಂತರ ಕಟ್ಟೆ ರೋಗ ವ್ಯಾಪಿಸುತ್ತದೆ . ಬಾಳೆ ಮಾತ್ರಾ ಮಲೆನಾಡಿನ ಅಡಿಕೆ ತೋಟಕ್ಕೆ ಉತ್ತಮ ಉಪಬೆಳೆಯಾಗಿದ್ದು ತೋಟವನ್ನೂ ಹಾಗೂ ಮಾಲೀಕನನ್ನೂ ನೆಮ್ಮದಿಯಿಂದ ಇಡುತ್ತದೆ ಎನ್ನುತ್ತಾರೆ.
ಜೇನು ಕೃಷಿ: ಫಸಲು ಜಾಸ್ತಿಯಾಗಬೇಕಾದರೆ ಜೇನು ಸಾಕಾಣಿಕೆಗೆ ಮೊರೆಹೋಗುವುದು ಒಳಿತು ಎಂಬುದಕ್ಕೆ ಇಲ್ಲಿದೆ ಸಾಕ್ಷಿ. ನ್ತಾಕಿನ ಉಸ್ತುವಾರಿ ನೊಡಿಕೊಳ್ಳುತ್ತಿರುವ ವಿಗ್ನೇಶನಿಗೆ ಜೇನು ಕೃಷಿಯಲ್ಲಿ ಅಪಾರ ಆಸಕ್ತಿ. ಹಾಗಾಗಿ ತೋಟದ ತುಂಬೆಲ್ಲಾ ತುಡುವೆ ಜೇನಿನ ಪೆಟ್ಟಿಗೆಗಳು ನೋಡುಗರಿಗೆ ಸಿಗುತ್ತವೆ. ಜೇನುತುಪ್ಪ ತೆಗೆಯುವುದರ ಬಗ್ಗೆ ಹೆಚ್ಚು ಆಸಕ್ತಿ ತೋರದೇ ಜೇನಿನ ಅಭಿವೃದ್ಧಿ ಬಗ್ಗೆ ಇಲ್ಲಿ ಹೆಚ್ಚು ಗಮನ. ಇದರ ಆದಾಯ ಫಸಲು ಹೆಚ್ಚಳದಲ್ಲಿ ಬರುತ್ತದೆ, ತುಪ್ಪ ಹುಳುಗಳುಗೆ ಮೀಸಲು, ಕೊಂಚ ಮಾತ್ರಾ ಅಂದರೆ ಮನೆಬಳಕೆಗೆ ತೆಗೆಯಬೇಕು ಅನ್ನುವುದು ಅಭಿಪ್ರಾಯ.
ಹೋಂಸ್ಟೆ: ತಮ್ಮ ವಾಸಕ್ಕೆಂದು ಕಟ್ಟಿಸಿರುವ ಮನೆಯನ್ನು ಹೋಂ ಸ್ಟೆ ಯಾಗಿ ಸರ್ಕಾರದ ಅನುಮತಿ ಪಡೆದು ನಡೆಸುತ್ತಿರುವ ನರಹರಿ ಪಟ್ಟಣದ ಜನರಿಗೆ ಹಳ್ಳಿಯ ಬದುಕನ್ನು ತೋರಿಸುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಸ್ಟೆ ಎಟ್ ಮತ್ತುಗ" ಎಂಬ ಹೆಸರಿನಲ್ಲಿ ಈಗಾಗಲೇ ಜನಜನಿತವಾಗಿರುವ ಹೋಂ ಸ್ಟೆ ಮಲೆನಾಡಿನ ಕೃಷಿಕರ ಬದುಕು ಹಾಗೂ ಇಲ್ಲಿಯ ಸಂಸ್ಕೃತಿ, ಮತ್ತು ಮಲೆನಾಡಿನ ಊಟವನ್ನು ನಗರದ ಜನರಿಗೆ ಯಶಸ್ವಿಯಾಗಿ ಪರಿಚಯಿಸಿದ್ದಾರೆ. ಎರಡು ಕುಟುಂಬಗಳ ಉದರ ಪೋಷಣೆ ಹಾಗೂ ಹಳ್ಳಿಯ ಹತ್ತು ಜನರಿಗೆ ಉದ್ಯೋಗ ನೀಡುವುದರ ಮೂಲಕ ಸಾಮಾಜಿಕ ಬದ್ಧತೆಗೂ ಕಾರಣೀಕರ್ತರಾಗಿದ್ದಾರೆ. ತಮ್ಮ ಕೃಷಿ ಕ್ಷೇತ್ರಗಳನ್ನು ಜನರಿಗೆ ಪರಿಚಯಿಸುವುದರ ಮೂಲಕ ಕೃಷಿಕ ಹೀಗೂ ಆದಾಯಗಳಿಸಬಹುದು, ಪಟ್ಟಣದಲ್ಲಿದ್ದವರಿಗೆ ಸಿಗದ ಜೀವನ ಪದ್ದತಿಯನ್ನು ಹೀಗೂ ಕೊಡಬಹುದು ಎಂಬುದನ್ನ ತೊರಿಸಿಕೊಟ್ಟು ಕೃಷಿಕೋ ನಾಸ್ತಿ ದುರ್ಬಿಕ್ಷ್ಯ: ಎಂಬ ಮಾತಿಗೆ ಇಂಬು ನೀಡಿದ್ದಾರೆ.
ಮನುಷ್ಯನಿಗೆ ಶ್ರದ್ಧೆಯಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನರಹರಿಯವರ ಕೃಷಿ ಕ್ಷೇತ್ರ ಸಾಕ್ಷಿಯಾಗಿ ನಿಲ್ಲುತ್ತದೆ. ಪತ್ನಿ ಕಾಮಾಕ್ಷಿ ಕೂಡ ಕೃಷಿ ಆಸಕ್ತಿಯಿರುವುದರಿಂದ ಕೆಲಸ ಸುಲಭವಾಗಿದೆ ಎನ್ನುವುದು ನರಹರಿಯವರ ಮಾತುಗಳು. ನೋಡಿ ಕಲಿ ಮಾಡಿ ತಿಳಿ ಎಂದು ಮೇಲ್ನೋಟದ ಮಾತಾದರೂ ಹತ್ತು ಎಕರೆ ತೋಟ ಹೋಂ ಸ್ಟೇ ಸಹಿತ ಎದ್ದು ನಿಲ್ಲುವುದಕ್ಕೆ ತಗುಲಿದ ಶ್ರಮ ನರಹರಿಯವರ ಅನುಭವಕ್ಕೆ ಮಾತ್ರಾ. ಅದು ಎಲ್ಲರಿಗೂ ತಿಳಿಯಬೇಕು ಎಂದಾದರೆ ಅವರ ಸಂಪರ್ಕದಿಂದ ಸಾದ್ಯ. ಹೀಗೆ ಸಾಧಿಸುವವರ ಸಂಖ್ಯೆ ಜಾಸ್ತಿಯಾದಂತೆಲ್ಲಾ :ಭಾರತ ಸುಂದರ ಹಳ್ಳಿಗಳ ದೇಶ" ಎಂಬ ಸಾಲುಗಳು ಪ್ರಪಂಚಾದ್ಯಂತ ಪಸರಿಸಲು ಸಾದ್ಯವಾಗುತ್ತದೆ.
Mo:9880799975



Friday, March 1, 2013

ಆರಂಭಿಸಿ ಇವತ್ತಿನಿಂದಲೇ

ಆರೋಗ್ಯ ಅನ್ನೋದೊಂದು ಸರಿ ಇದ್ದ ಮನುಷ್ಯನಿಗೆ ಯೋಚನೆ ಇದ್ದೇ ಇರುತ್ತದೆ. ಪುತಪುತನೆ ಹುಟ್ಟುವ ಯೋಚನೆ ಕೆಲವರಿಗಾದರೆ ನಿಧಾನಗತಿಯ ಯೋಚನೆ ಮತ್ತೆ ಕೆಲವರಿಗೆ, ಒಟ್ಟಿನಲ್ಲಿ ಯೋಚನೆ ನಿರಂತರ ಬರುತ್ತಲೇ ಇರುತ್ತದೆ. ಈಗ ವಿಜಯ ಸಾಧಿರುವ ಮನುಷ್ಯ ನ ಯೋಚನೆಗಳೇನು ಅಂಬೋ ಪ್ರಶ್ನೆ ನನಗಂತೂ ಆಗಾಗ ಕಾಡುತ್ತಲಿರುತ್ತದೆ.
           ಹುಟ್ಟುವ ಯೋಚನೆಗಳಿಗೆ ರೂಪ ಬಣ್ಣ ಆಕಾರ ಯಾವುದೂ ಇರುವುದಿಲ್ಲ. ಹುಟ್ಟಿದ ಮೇಲೆ ನಾವೆಷ್ಟು ಆಹಾರ ಹಾಕುತ್ತೇವೆ, ಎಂತಹ ಆಹಾರ ಹಾಕುತ್ತೇವೆ, ಏನು ಆಹಾರ ಹಾಕಿ ಪೋಷಿಸಿ ಬೆಳಸಿ ಬಣ್ಣ ಬಳಿದು ರೂಪ ಕೊಡುತ್ತೇವೆ ಅನ್ನುವುದರ ಮೇಲೆ ಪ್ರಪಂಚ. ಏನೂ ಮಾಡದಿದ್ದರೆ ಬಂದ ಯೋಚನೆ ಬಂದಂತೆ ಮಾಯವಾಗಿರುತ್ತದೆ.
           ಒಂದಿಷ್ಟು ಜನ ನೆಗೆಟೀವ್ ರೂಪ ಕೊಡುತ್ತಾರೆ ಬಂದ ಯೋಚನೆಗೆ, ಇನ್ನು ಕೆಲವು ಜನ ಪಾಸಿಟೀವ್ ರೂಪ ಕೊಡುತ್ತಾರೆ, ಮದ್ಯಸ್ಥರು ಸುಮ್ಮನಿದ್ದುಬಿಡುತ್ತಾರೆ. ಸೂಪರ್ ಸಕ್ಸಸ್ ಪೀಪಲ್ ಗಳಿಗೆ ಅಪ್ಪಿತಪ್ಪಿಯೂ ನೆಗೇಟೀವ್ ಯೋಚನೆ ಹುಟ್ಟುವುದೇ ಇಲ್ಲ, ಅದಕ್ಕೆ ಅವರ ಅಪ್ಪ ಅಮ್ಮ ಮಾಡಿದ ಯೋಚನೆಯೂ ಕಾರಣ ಎನ್ನುವುದು ಸ್ಪಷ್ಟ.

      ಇನ್ನಷ್ಟು ಜನ ಹುಟ್ಟಿದ ನೆಗೇಟಿವ್ ಯೋಚನೆಯನ್ನು ಅದುಮಿ ಪಾಸಿಟೀವ್ ಯೋಚನೆಯನ್ನು ತುರುಕುತ್ತಾರೆ. ಅವರು ಅರ್ದಂಬರ್ದ ಸಕ್ಸಸ್.
      ಮತ್ತಷ್ಟು ಜನ ತಾವು ನೆಗೆಟೀವ್ ಯೋಚನೆ ಮಾಡುವುದಷ್ಟೇ ಅಲ್ಲದೆ ಪ್ರಪಂಚದ ನೆಗೆಟೀವ್ ಗಳನ್ನೆಲ್ಲಾ ತುಂಬಿಕೊಂಡು ಸಿಕ್ಕ ಸಿಕ್ಕವರಿಗೆಲ್ಲಾ ಬಿತ್ತುತ್ತಾ ಸಾಗುತ್ತಾರೆ.
     ಇವೆಲ್ಲಾ ರಗಳೆ ಖುಶ್  ಖುಶ್ ಇದ್ದು ಸಕ್ಸಸ್ ಆಗಬೇಕು ಅಂತ ಇದೆಯಾ?, ಜಸ್ಟ್ ದಿನಾ ಬೆಳಿಗ್ಗೆ ತಣ್ನೀರು ಸ್ನಾನ ಮಾಡಿ, ಅಥವಾ ಈಜು ಹೊಡೆಯಿರಿ ಹೊಳೆಯಲ್ಲಿ ಅಥವಾ ಸೂಪರ್ ಧ್ಯಾನ ಆರಂಭಿಸಿ ಇವತ್ತಿನಿಂದಲೇ.

Thursday, February 28, 2013

ಮಲೆನಾಡಿನಲ್ಲಿ " ಬಯಲುಸೀಮೆಯ ಕೃಷಿ" ಪಂಡಿತ



ಮಲೆನಾಡಿನಲ್ಲಿ ಆರ್ಥಿಕವಾಗಿ ಲಾಭಕರ ಕೃಷಿ ಎಂದರೆ ಅಡಿಕೆ,ರಬ್ಬರ್, ಮೆಣಸು, ಕೋಕೋ, ಮುಂತಾದ ತೋಟಗಾರಿಕಾ ಬೆಳೆಗಳು. ಈ ಬೆಳೆಗಳನ್ನು ನಂಬಿ ಬದುಕು ಸಾಗಿಸುತ್ತಿರುವ ಹಲವು ರೈತರಿದ್ದಾರೆ.ಉಪಬೆಳೆಯನ್ನಾಗಿ ತರಕಾರಿ ಬೆಯುವ ರೈತರ ಸಂಖ್ಯೆ ಇದೆ, ತರಕಾರಿ ಜೋಳ ಮೆಣಸಿನಕಾಯಿ ಕಬ್ಬು ಶೇಂಗಾ ಮುಂತಾದ ಆಹಾರ ಬೆಳೆಗಳನ್ನು ಪ್ರಧಾನ ಬೆಳೆಯನ್ನಾಗಿ ಬೆಳೆಯುವ ರೈತರ ಸಂಖ್ಯೆ ಬಲು ಅಪರೂಪ. ತಾಳಗುಪ್ಪ ಸಮೀಪದ ಶಿರೂರು ಆಲಳ್ಳಿಯ ರೈತರಾದ ಹುಚ್ಚಪ್ಪ ಕಳೆದ ಮೂವತ್ತು ವರ್ಷಗಳಿಂದ ಆಹಾರ ಬೆಳೆಗಳನ್ನೇ ಮುಖ್ಯ ಬೆಳೆಯನ್ನಾಗಿಸಿಕೊಂಡು ಆರ್ಥಿಕ ಸ್ವಾವಲಂಬಿಯಾಗಿ ನೆಮ್ಮದಿ ಹಾಗೂ ಆರೋಗ್ಯ ಪೂರ್ಣ ಜೀವನ ಸಾಗಿಸುತ್ತಿದ್ದಾರೆ.
ಶಿರೂರು ಆಲಳ್ಳಿ ಸಾಗರ-ಜೋಗ ಹೈವೆ ರಸ್ತೆ ಪಕ್ಕದ ಪುಟ್ಟಹಳ್ಳಿ. ಬಹುಪಾಲು ಭತ್ತ ಕಬ್ಬು ಕೃಷಿಕರ ಈ ಹಳ್ಳಿ ಹುಚ್ಚಪ್ಪವರಂತಹ ಕೃಷಿಯಲ್ಲಿ ತೊಡಗಿಸಿಕೊಂಡವರಿಂದ ಕೂಡಿದೆ. ಹೈವೆ ೨೦೬ ರ ಪಕ್ಕದಲ್ಲಿ ಆರೂವರೆ ಎಕರೆ ಕೃಷಿ ಕ್ಷೇತ್ರ ಹುಚ್ಚಪ್ಪನವರದು. ರಸ್ತೆಯಲ್ಲಿ ಸಾಗುವ ಜನರಿಗೆ ಈ ಕ್ಷೇತ್ರ ಒಮ್ಮೆ ಕಣ್ಣಾಡಿಸುವಂತೆ ಹುಚ್ಚಪ್ಪ ಮಾಡಿದ್ದಾರೆ. ತೊಂಡೆಕಾಯಿಯ ಚಪ್ಪರ, ಅದರಪಕ್ಕದಲ್ಲಿ ಹಸಿರಾಗಿ ಹುಲುಸಾಗಿ ಬೆಳೆದ ಶೇಂಗಾ, ತೆನೆದುಂಬಿ ನಿಂತ ಜೋಳ, ಕೆಂಪು ಬಣ್ಣಕ್ಕೆ ತಿರುಗಿನಿಂತ ಮೆಣಸಿನಕಾಯಿ, ಬಸಳೆ ಸೊಪ್ಪಿನ ಸಾಲು, ಹೀರೆಕಾಯಿ, ಮಗೆಕಾಯಿ, ಕಬ್ಬು, ಬೆಂಡೆ, ಹೀಗೆ ಮುಂದುವರೆಯುತ್ತದೆ ಹುಚ್ಚಪ್ಪನವರ ಕೃಷಿ ಕ್ಷೇತ್ರ. ವರ್ಷಪೂರ್ತಿ ಹವಾಮಾನ ಕಾಲಕ್ಕನುಗುಣವಾಗಿ ತರಕಾರಿ ಬೆಳೆಗಳನ್ನು ಬೆಳೆಯುವ ಹುಚ್ಚಪ್ಪ ರೈತಾಪಿ ಜೀವನದಿಂದ ಆರ್ಥಿಕವಾಗಿಯೂ ಮಾನಸಿಕವಾಗಿಯೂ ನೆಮ್ಮದಿಕಂಡುಕೊಂಡಿದ್ದಾರೆ.
ಕೃಷಿಕ ಯಜಮಾನ: ಸ್ವಂತ ಮಣ್ಣಿನಲ್ಲಿ ಬೆಳಗ್ಗೆಯಿಂದ ಸಂಜೆಯ ತನಕ ದುಡಿದರೆ ಅದರ ಸುಖ ವರ್ಣಿಸಲು ಆಗದು ಎನ್ನುವುದು ಹುಚ್ಚಪ್ಪನವರ ಸ್ವಯಂ ಅಬುಭವ. ಪತ್ನಿ ಕೂಡ ಇವರ ಕೃಷಿ ಕೈಂಕರ್ಯಗಳಿಗೆ ಜೊತೆಗೂಡುವುದರಿಂದ ಇನ್ನಷ್ಟು ಖುಷಿ ಇವರಿಗೆ. ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಕೂಡ ರಜಾದ ಸಮಯದಲ್ಲಿ ಕೃಷಿ ಕೆಲಸಗಳಿಗೆ ತೊಡಗಿಕೊಳ್ಳುತ್ತಾರೆ. ದಿನಗೂಲಿ ಜನರಿಗೆ ಜೀವನ ಭದ್ರತೆ ಕಡಿಮೆ ಸರ್ಕಾರ ಉದ್ಯೋಗಖಾತ್ರಿ ಯಂತಹ ಕಾರ್ಯಕ್ರಮದ ಮೂಲಕ ಜೀವನ ಭದ್ರತೆ ಒದಗಿಸುವ ಯತ್ನ ಮಾಡಿದರೂ ಅದೇಕೋ ಆಡಳಿತಶಾಹಿಯ ಸಮಸ್ಯೆಯಿಂದ ಸಮರ್ಪಕ ಜಾರಿಯಾಗಿಲ್ಲ, ಸ್ವಂತ ಜಮೀನಿನಲ್ಲಿ ನಾವೇ ಯಜಮಾನ ನಾವೆ ಕೂಲಿಯಾಳು ಎಂಬ ಭಾವನೆಯಿಂದ ದುಡಿದರೆ ಮಾನಸಿಕ ಆರ್ಥಿಕ ದೈಹಿಕ ನೆಮ್ಮದಿ ಸಿಗುತ್ತದೆ ಎಂದು ಅನುಭವ ಮಾತುಗಳು ಹುಚ್ಚಪ್ಪನವರದ್ದು.
ತರಕಾರಿ ಬೆಳೆ : ರೈತರಿಗೆ ವರ್ಷಪೂರ್ತಿ ಹಣ ನೀಡುವುದು ತರಕಾರಿ ಬೆಳೆಗಳು ಎಂಬುದು ಹುಚ್ಚಪ್ಪನವರ ಅನುಭವ. ತೊಂಡೆಯಂತಹ ತರಕಾರಿಗಳಿಗೆ ಒಮ್ಮೆ ಗುಂಡಿ ತೋಡಿ ನಾಟಿ ಮಾಡಿ ಗೊಬ್ಬರ ಹಾಕಿದರೆ ಮತ್ತೆ ನೀರು ಮಾತ್ರಾ ಉಣಿಸಿದರೆ ವಾರದ ಅಂತ್ಯದಲ್ಲಿ ಆದಾಯ ನಿಡುತ್ತಾ ಸಾಗುತ್ತದೆ. ಮೂರು ತಿಂಗಳ ನಂತರ ಅದೇ ಜಾಗದಲ್ಲಿ ಹೀರೇಕಾಯಿ ಹಾಕಿದರೆ ಅದು ಮೂರು ತಿಂಗಳ ನಿರಂತರ ಆದಾಯ, ಹೀಗೆ ನಮ್ಮ ಭೂಮಿಗೆ ನಮ್ಮ ವಾತಾವರಣಕ್ಕೆ ಬೆಳೆಗಳನ್ನು ಆಯ್ದುಕೊಂಡರೆ ಸುಲಭ, ಮಾರುಕಟ್ಟೆಯ ಸಮಸ್ಯೆ ತರಕಾರಿ ಬೆಳೆಗಳಿಗೆ ಇಲ್ಲ, ಸ್ಥಳಕ್ಕೆ ಬಂದು ಗ್ರಾಹಕರು ನೇರವಾಗಿಯೂ ಒಯ್ಯುತ್ತಾರೆ, ಅಥವಾ ದಲ್ಲಾಳಿಗಳು ಸ್ಥಳಕ್ಕೆ ಬರುತ್ತಾರೆ, ಹಾಗಾಗಿ ನಾವು ಸಮರ್ಪಕವಾಗಿ ಬೆಳೆದರಷ್ಟೇ ಮುಗಿಯಿತು . ವಾರ್ಷಿಕ ಆದಾಯಕ್ಕೆ ಭತ್ತ ಅಡಿಕೆ ಕಬ್ಬು ಮುಂತಾದ ಬೆಳೆಗಳು ಸಹಾಯ ಮಾಡುತ್ತವೆ, ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಕೃಷಿಕನಿಗಿರಬೇಕು ಎನ್ನುವುದು ಹುಚ್ಚಪ್ಪನವರ ಮಾತು.

ಸರ್ಕಾರದ ನಿರ್ಲಕ್ಷ್ಯ: ಸರ್ಕಾರದ ರೈತರ ಕುರಿತಾದ ಕಾಳಜಿಯನ್ನ ಸಮರ್ಪಕವಾಗಿ ಪ್ರಕಟಿಸುತ್ತಿಲ್ಲ ಎನ್ನುವುದು ಹುಚ್ಚಪ್ಪನವರ ಕೊರಗು. ಸಾಲಮನ್ನಾ, ಸುವರ್ಣ ಭೂಮಿ ಮುಂತಾದ ಯೋಜನೆಗಳ ಮೂಲಕ ಸಹಾಯ ಹಸ್ತ ಚಾಚಿದೆ ಎನ್ನುವುದು ಸಮಾಧಾನಕರ ಅಂಶ, ಆರ್ಥಿಕ ಸಹಾಯದ ದೃಷ್ಟಿಯಲ್ಲಿ ಅದು ಸಂತೃಪ್ತಿ ತಂದಿದೆ, ಆದರೆ ರೈತರಿಗಾಗಿಯೇ ಇರುವ ಇಲಾಖೆಯ ಅಧಿಕಾರಿಗಳು ರೈತರಿಗೆ ಜ್ಞಾನ ನೀಡುವುದರ ಜತೆ ಮಾನಸಿಕ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕು. ಕೃಷಿಯನ್ನು ಆರ್ಥಿಕ ದೃಷ್ಟಿಯ ಹೊರತಾಗಿ ಜೀವನ ಪದ್ದತಿಯಾಗಿ ನೋಡಿದಾಗ ಆರ್ಥಿಕ ಸಂಕಷ್ಟಕ್ಕೆ ಬೆಲೆ ಬಾರದು ಎಂದು ನುಡಿಯುತ್ತಾರೆ. ಬ್ಯಾಂಕ್ ಗಳಿಗೆ ರೈತರ ಮೇಲೆ ನಂಬಿಕೆಯೆ ಹೊರಟುಹೋಗಿದೆ ಎನ್ನುವ ಹುಚ್ಚಪ್ಪ, ತಾಳಗುಪ್ಪದ ಬ್ಯಾಂಕನಲ್ಲಿ ತಾವು ಬೋರ್ ವೆಲ್ ಹಾಗೂ ಹೈನುಗಾರಿಕೆಗೋಸ್ಕರ ಸಾಲ ಕೇಳಲು ಹೋದಾಗ ನಾಳೆ ಬನ್ನಿ ಮುಂದಿನ ತಿಂಗಳು ಬನ್ನಿ ಎಂದು ಅಲೆದಾಡಿಸಿ ನಂತರ ಈಗ ಆಗದು ಎಬ ಉತ್ತರ ಪಡೆದ ಕಹಿ ಘಟನೆ ಬೇಸರ ತರಿಸುತ್ತದೆ . ಇದು ಕೇವಲ ಬ್ಯಾಂಕ್ ನವರ ತಪ್ಪಲ್ಲ ಅಥವಾ ತಪ್ಪು ಯಾರದು ಎನ್ನುವ ಪ್ರಶ್ನೆ ಇದಲ್ಲ, ಸರ್ಕಾರದ ಕಂದಾಯ ಇಲಾSಯೂ ಸೇರಿದಂತೆ, ಇತರೆ ಅಧಿಕಾರಿಗಳು ಹೀಗೆ ಒಟ್ಟಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿರದ ಸಮೂ, ರೈತರನ್ನು ನಿಕೃಷ್ಟವಾಗಿ ಕಾಣುತ್ತಿದೆ . ಧರ್ಮಸ್ಥಳ ಸಂಘ ತಮಗೆ ಉತ್ತಮ ಸಹಕಾರ ನೀಡಿದೆ, ಮಾನಸಿಕವಾಗಿ ಆರ್ಥಿಕವಾಗಿ ಬೆಂಬಲಿಸಿದೆ. ಇದೇ ರೀತಿ ಸರ್ಕಾರ ಮತ್ತು ಬ್ಯಾಂಕ್ ಗಳು ರೈತರ ಬೆನ್ನಿಗೆ ನಿಂತರೆ ದೇಶದ ಬೆನ್ನೆಲುಬಾಗಿ ರೈತ ನಿಲ್ಲುತ್ತಾನೆ ಎನ್ನುತ್ತಾರೆ.

೪೪ ವರ್ಷದ ಹುಚ್ಚಪ್ಪನವರ ಕುಂಟುಂಬ ಕೃಷಿಯನ್ನು ನಂಬಿ ಸಂತೃಪ್ತ ಜೀವ ನಡೆಸುತ್ತಿದೆ. ಆರ್ಥಿಕವಾಗಿ ಶ್ರೀಮಂತರು ಅಂತ ಅನ್ನಿಸಿಕೊಳ್ಳದಿದ್ದರೂ ಮಾನಸಿಕವಾಗಿ ದೈಹಿಕವಾಗಿ ಶ್ರೀಮಂತಿಕೆ ಅವರ ಕುಟುಂಬದಲ್ಲಿ ಎದ್ದುಕಾಣಿಸುತ್ತಿದೆ. ಸಮಾಧಾನ ಸಂತೃಪ್ತಿ ಮನೆಮಾಡಿದೆ. ಸಮಾಜಕ್ಕೆ ಆಹಾರ ಪದಾರ್ಥಗಳ ಕೊಡುಗೆಯಾಗಿ ನೀಡಿದ ನೆಮ್ಮದಿ ಆ ಕುಟುಂಬದಲ್ಲಿದೆ ಎನ್ನುವುದು ನಿಸ್ಸಂಶಯ.
ಫೋನ್ ನಂ: ೭೨೫೯೨೭೮೦೫೫ (ವಿಜಯವಾಣಿಯಲ್ಲಿ ಪ್ರಕಟಿತ)

Tuesday, February 26, 2013

ಯಂತ್ರದ ಮಂತ್ರ ಪಠಿಸಿ ಯಶಸ್ವಿಯಾದ ಕೃಷಿಕ



ಇತ್ತೀಚಿನ ದಿವಸಗಳಲ್ಲಿ ಕೃಷಿಕರ ಸಾಮೂಹಿಕ ಕೊರಗು ಎಂದರೆ ಕೃಷಿಕಾರ್ಮಿಕರ ಕೊರತೆ, ದುಬಾರಿ ಕೂಲಿ ಒಂದೆಡೆಯಾದರೆ, ಕೃಷಿಕಾರ್ಮಿಕರೇ ಇಲ್ಲದಿರುವುದು ಇನ್ನೊಂದೆಡೆ. ಈ ನೆಪವನ್ನೊಡ್ಡಿ ಕೃಷಿಯಿಂದ ವಿಮುಖವಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂಬ ಕೂಗು ಎಲ್ಲಡೆ. ಆದರೆ ತಂತ್ರಜ್ಞಾನ ಅತ್ಯುತ್ತಮವಾಗಿರುವ ಇಂದಿನ ದಿನಗಳಲ್ಲಿ ಯಂತ್ರಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಕೃಷಿಕೂಲಿ ಕಾರ್ಮಿಕರ ಕೊರತೆ ಸಮಸ್ಯೆಯೇ ಅಲ್ಲ ಅದು ಕಳ್ಳನಿಗೊಂದು ಪಿಳ್ಳೆ ನೆವ ಅಷ್ಟೆ ಎನ್ನುತ್ತಾ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು ಸ್ವಾವಲಂಬಿಯಾಗಿ, ಎಂಟು ಎಕರೆ ತೋಟ ನಳನಳಿಸುವಂತೆ, ಕೃಷಿಕರಲ್ಲದವರೂ ಬೆಕ್ಕಸಬೆರಗಾಗುವಂತೆ ಮಾಡಿ ತೋರಿಸಿದ್ದಾರೆ ಸಾಗರ ತಾಲ್ಲೂಕು ಸಸರವಳ್ಳಿ ಗ್ರಾಮದ ಸಮೀದ ಊರಿನ ಕಾನುತೋಟದ ಗುರು.
ಸಾಗರದಿಂದ ೧೨ ಕಿಲೋಮೀಟರ್ ದೂರದ ತಾಳಗುಪ್ಪ ಹೊಬಳಿಯಲ್ಲಿರುವ ಕಾನುತೋಟ ಎಂಬುದು ಒಂಟಿಮನೆಯ ಊರು. ಶೇಷಗಿರಿಯಪ್ಪನವರ ಶ್ರಮದಿಂದ ಮೂಡಿದ ಎಂಟು ಎಕರೆ ಅವರ ಹಿರಿಯ ಮಗನಾದ ಗುರುವಿನ ಉಸ್ತುವಾರಿಗೆ ಈಗ ಹದಿನೈದು ವರ್ಷಗಳ ಹಿಂದೆ ಸಿಕ್ಕಿತು. ದೂರದ ಗುಡ್ಡದಿಂದ ಹರಿದು ಬರುವ ಅಬ್ಬಿ ನೀರಿನ ಸಮೃದ್ಧಿ ಒಂದೆಡೆಯಾದರೆ ಒಂಟಿಮನೆಯ ಕಾರಣದಿಂದ ರಸ್ತೆ, ವಿದ್ಯುತ್,ನಂತಹ ಸಾಮೂಹಿಕ ಸವಲತ್ತುಗಳಿಗೆ ಏಕಾಂಗಿ ಹೋರಾಟ ಸಮಸ್ಯೆ ಇನ್ನೊಂದೆಡೆ. ಇವನ್ನೆಲ್ಲಾ ಸಮರ್ಥವಾಗಿ ನಿರ್ವಹಿಸಿದ ಗುರು ಯಶಸ್ವೀ ಕೃಷಿಕ ಎನಿಸಿಕೊಂಡಿದ್ದಾರೆ. ಗುರುರವರ ಕೃಷಿಯಲ್ಲಿನ ಯಾಂತ್ರೀಕರಣದ ಮಜಲು ಮನೆಯ ವಿದ್ಯುತ್ ದೀಪದಿಂದಲೇ ಆರಂಭಗೊಳ್ಳುತ್ತದೆ.
ಅಬ್ಬಿ ನೀರಿನ ಜನರೇಟರ್: ವಿದ್ಯುತ್ ಸಮಸ್ಯೆ ಬಹುವಾಗಿ ಎಲ್ಲರನ್ನು ಕಾಡುವ ಸಂಗತಿ. ದಿನದ ಬಹುಪಾಲು ಸಮಯ ಪವರ್ ಕಟ್ ಎಂಬ ಪೆಡಂಬೂತಕ್ಕೆ ನಲುಗದವರಿಲ್ಲ. ಆದರೆ ಕಾನು ತೋಟದ ಗುರುರವರಿಗೆ ಈ ಸಮಸ್ಯೆ ಕಾಡುವುದಿಲ್ಲ ಎಂಬುದು ಅಚ್ಚರಿಯಾದರೂ ಸತ್ಯ. ಕಾರಣ ಇವರು ತಮ್ಮದೇ ಸ್ವಂತ ವಿದ್ಯುತ್ ಉತ್ಪಾದನಾ ಘಟಕ ಹೊಂದಿದ್ದಾರೆ. ಗುಡ್ಡದಿಂದ ಇಳಿದು ತೋಟದಲ್ಲಿ ಹರಿದು ಹೊಳೆ ಸೇರುತ್ತಿದ್ದ ಅಬ್ಬಿನೀರಿಗೆ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಪೈಪ್ ಹಾಕಿಸಿ ಮನೆಯ ಪಕ್ಕದಲ್ಲಿ ಜನರೇಟರ್ ಒಂದನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಇವರ ಮನೆಯಲ್ಲಿ ಪವರ್ ಕಟ್ ಪ್ರಶ್ನೆ ಇಲ್ಲ. ವಿದ್ಯುತ್ ನಲ್ಲಿ ಸ್ವಾವಲಂಬಿಯಾದರೆ ಕೃಷಿ ಕೈಂಕರ್ಯಗಳಿಗೆ ಯಂತ್ರಬಳಸುವ ಬಹುದೊಡ್ಡ ಸಮಸ್ಯೆ ನಿವಾರಣೆಯಾದಂತೆ ಎಂಬುದು ಗುರುರವರ ಅನುಭವವೇದ್ಯ ಮಾತು.
ಕೃಷಿಉಪಯೋಗಿ ಯಂತ್ರಗಳು: ಅಡಿಕೆ ಗೊನೆಯಿಂದ ಅಡಿಕೆ ಬೇರ್ಪಡಿಸುವ ಯಂತ್ರ, ಅಡಿಕೆ ಸುಲಿಯುವ ಯಂತ್ರ, ಮೆಣಸಿನ ಕಾಳು ಬೇರ್ಪಡಿಸುವ ಯಂತ್ರ, ಅಡಿಕೆ ಬೇಯಿಸಲು ರಾಟೆ,ಕೊಟ್ಟಿಗೆ ತೊಳೆಯುವ ಯಂತ್ರ ಹೀಗೆ ಸಾಲು ಸಾಲು ಯಂತ್ರಗಳ ಬಳಕೆ ಇಲ್ಲಿ ಕಾಣಸಿಗುತ್ತವೆ. ಒಂದೆರಡು ಕೃಷಿ ಕಾರ್ಮಿಕರ ಜತೆ ಸೇರಿಕೊಂಡ ಗುರು ಇವೆಲ್ಲವನ್ನೂ ನಿಭಾಯಿಸುತ್ತಾರೆ. ಇದರಿಂದಾಗಿ ಕೂಲಿಕಾರ್ಮಿಕರ ಅವಲಂಬನೆ ತಪ್ಪುವುದರ ಜತೆ ಕೃಷಿ ಕೆಲಸಗಳು ಸಮಯಕ್ಕೆ ಸರಿಯಾಗಿ ಸಾಗುತ್ತವೆ ಎನ್ನುತ್ತಾರೆ.
ಕಾಳುಮೆಣಸಿನ ಕೃಷಿ: ಮಲೆನಾಡಿನಲ್ಲಿ ಅಡಿಕೆ ಕೃಷಿ ಸಾಮಾನ್ಯ. ಕಾಳುಮೆಣಸಿನ ಕೃಷಿಯನ್ನು ಬಳ್ಳಿಯ ಕಟ್ಟೆ ರೋಗದ ಕಾರಣದಿಂದ ಬಹುಪಾಲು ಕೃಷಿಕರು ಕೈಬಿಟ್ಟಿದ್ದಾರೆ. ಗುರು ರವರು ಉಪಬೆಳೆಯಾಗಿ ಕಾಳುಮೆಣಸಿನ ಕೃಷಿಗೆ ಒತ್ತು ನೀಡಿದ್ದಾರೆ, ಪಣಿಯೂರು, ಕೊಟ್ಟಾಯಾಂ ಕರಿಮುಂಡ, ಕೇರಳ ಕರಿಮುಂಡ, ಮುಂತಾದ ನಾಲ್ಕಾರು ತಳಿಯ ಅಭಿವೃದ್ಧಿಗೆ ಆದ್ಯತೆ ನೀಡಿ ವರ್ಷವೊಂದಕ್ಕೆ ೮ ರಿಂದ ಹತ್ತು ಕ್ವಿಂಟಾಲ್ ಕಾಳು ಮೆಣಸು ಬೆಳೆಯುತ್ತಾರೆ. ಮೆಣಸಿನ ಬಳ್ಳಿಗೆ ಕಟ್ಟೆ ರೋಗ ಇರುವುದು ನಿಜವಾದರೂ ಪ್ರತೀ ವರ್ಷ ಹೆಚ್ಚು ಬಳ್ಳಿಗಳನ್ನು ನಾಟಿ ಮಾಡುವುದರ ಮೂಲಕ ಹಾಗೂ ಅಡಿಕೆ ಮರದ ಬುಡವನ್ನು ಗುದ್ದಲಿಯಿಂದ ಅಗೆಯುವುದನ್ನು ನಿಲ್ಲಿಸುವುದರ ಮೂಲಕ ರೋಗ ಹತೋಟಿ ಸಾದ್ಯ ಎನ್ನುತ್ತಾರೆ ಗುರು.
ದ್ರವ ಗೊಬ್ಬರ: ಅಡಿಕೆ ತೋಟಕ್ಕೆ ಹೆಚ್ಚು ಕಾರ್ಮಿಕರನ್ನು ಬೇಡುವ ಕೆಲಸ ಗೊಬ್ಬರ ಪೂರೈಕೆ ಹಾಗೂ ಮರದಿಂದ ಇಳಿಸಿದ ಅಡಿಕೆ ಗೊನೆಗಳ ಸಾಗಾಟ. ಇವೆರಡಕ್ಕೂ ಗುರುರವರು ಸುಲಭ ಮಾರ್ಗ ಕಂಡುಕೊಂಡಿದ್ದಾರೆ. ದ್ರವರೂಪಿ ಗೊಬ್ಬರದ ಟ್ಯಾಂಕ್ ಮಾಡಿಸಿಕೊಂಡಿರುವ ಗುರುರವರು ತಮ್ಮ ತೋಟದ ಎಲ್ಲಾ ಮರಗಳಿಗೂ ಪೈಪ್ ಮುಖಾಂತರ ಗೊಬ್ಬರ ಹರಿಯಬಿಡುತ್ತಾರೆ. ಇದರಿಂದಾಗಿ ಅಡಿಕೆ ಮರಗಳ ಬುಡ ಬಿಡಿಸುವ ಕೆಲಸವೂ ಇಲ್ಲದರ ಜತೆಗೆ ಹತಾರಗಳ ಕಬ್ಬಿಣದಿಂದ ಮರದ ಬೇರುಗಳು ಹಾನಿಗೊಳಗಾಗುವುದೂ ಇಲ್ಲ. ಅಡಿಕೆ ಗೊನೆಗಳ ಸಾಗಾಟಕ್ಕೆ ಅಡಿಕೆತೋಟದೊಳಗೆ ತೆರೆದ ಜೀಪ್ ಓಡಾಡುವಂತಹ ರಸ್ತೆಯನ್ನು ನಿರ್ಮಿಸಿಕೊಂಡಿದ್ದು ಇದರ ಮೂಲಕ ಅಡಿಕೆಗೊನೆಗಳ ಸಾಗಾಟವನ್ನು ಮಾಡುತ್ತಾರೆ. ಇಷ್ಟೆಲ್ಲಾ ಯಂತ್ರ ಬಳಕೆಯಿಂದ ಒಮ್ಮೊಮ್ಮೆ ದುರಸ್ತಿ ಕಾರ್ಯದ ಸಮಸ್ಯೆ ಇರುವುದು ನಿಜವಾದರೂ ಬಹುಪಾಲು ಒಳ್ಳಯದೇ ಆಗುತ್ತದೆ ಎನ್ನುತ್ತಾರೆ ಗುರು
ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಯಶಸ್ವೀ ಕೃಷಿಕ ಜೀವನ ನಡೆಸುತ್ತಿರುವ ಗುರುರವರಿಗೆ ಪತ್ನಿ ಹೇಮಾ ಸಾಥ್ ನೀಡುತ್ತಿದ್ದಾರೆ.  ಕೃಷಿಗೆ ಪೂರಕವಾಗಿ ಒಗ್ಗಿ ಆಸಕ್ತಿಯಿಂದ ಪತಿಗೆ ಪೂರಕವಾಗಿ ನಡೆದುಕೊಂಡು ಕೃಷಿಕತನದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮನೆಯ ಸುತ್ತಮುತ್ತಲಿನ ಜಾಗಗಳಲ್ಲಿ ಮನೆ ಬಳೆಕೆಯ ಎಲ್ಲಾ ತರಕಾರಿಯನ್ನು ತಾವೇ ಖುದ್ದು ಬೆಳೆದುಕೊಳ್ಳುತ್ತಿದ್ದಾರೆ. ೭೫ ವರ್ಷದ ತಂದೆ ಶೇಷಗಿರಿಯಪ್ಪನವರು ಸ್ವಂತ ಆಸಕ್ತಿಯಿಂದ ಪುಸ್ತಕಗಳನ್ನು ಓದಿ ಕಂದಾಯ ಇಲಾಖೆಯ ಎಲ್ಲಾ ಕಾನೂನುಗಳನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ. ಕೃಷಿಕ ಕೇವಲ ಹೊಲದಲ್ಲಿ ಮಾತ್ರಾ ದುಡಿಯದೆ, ತನಗೆ ಸರ್ಕಾರದಿಂದ ಬರಬೇಕಾದ ಸವಲತ್ತುಗಳನ್ನು ಸ್ವತಃ ತಿಳಿದುಕೊಂಡರೆ, ಕಾನೂನಿನ ಜ್ಞಾನ ಪಡೆದುಕೊಂಡರೆ ಮಾತ್ರಾ ಯಶಸ್ಸು ಎನ್ನುವುದು ಶೇಷಗಿರಿಯಪ್ಪನವರ ಮಾತುಗಳು. ಕಾಲ ಬದಲಾದಂತೆ ಕೃಷಿಕನೂ ಬದಲಾದರೆ ಸ್ವರ್ಗ ಸ್ವ ಸ್ಥಳದಲ್ಲಿ ನಿರ್ಮಿಸಿಕೊಳ್ಳಬಹುದು ಎಂಬುದಕ್ಕೆ ಕಾನುತೋಟದ ಈ ಕೃಷಿ ಕುಟುಂಬ ಉದಾಹರಣೆಯಾಗಿ ನಿಲ್ಲುತ್ತದೆ.
ಫೋನ್: ೦೮೧೮೩೨೩೧೫೬೫

Wednesday, February 20, 2013

ಹಿರೇಮನೆಯಲ್ಲಿ ಹಿಡಿದ ಕಾಳಿಂಗ ಸರ್ಪ(ಕಿಂಗ್ ಕೋಬ್ರಾ)

ಉರಗ ರಕ್ಷಕ: ಸಾಗರದ ಸಮೀಪದ ಮುಂಡಿಗೆಸರ ಊರಿನ ಮನ್ಮಥ ಕುಮಾರ್ ಉರಗ ಪ್ರೇಮಿ. ಇವರು ಇಲ್ಲಿಯವರೆಗೆ ೪೫೦ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಇಪ್ಪತ್ತೇಳು ಸಾವಿರ ಸರ್ಪವನ್ನು ಹಿಡಿದು ಸುರಕ್ಷಿತ ಮರುಜೀವನ ನೀಡಿದ ಕೀರ್ತಿ ಮನ್ಮಥಕುಮಾರ್ ರವರದ್ದು. ಸರ್ಕಾರದ ವೈಲ್ಡ್ ಲೈಫ್ ನಿಂದ ಹಾವುಗಳನ್ನು ಹಿಡಿಯಲು ಹಾಗೂ ಹಾವುಗಳ ಬಗ್ಗೆ ಸಂಶೋಧನೆ ಕೈಗೊಳ್ಳಲು ಅಧಿಕೃತ ಪರವಾನಗಿಯನ್ನು ಕೂಡ ಹೊಂದಿದ್ದಾರೆ. ಹಾವುಗಳು ನಿರುಪದ್ರವಿ ಆದರೆ ಅವುಗಳ ಬಗೆಗೆ ಇರುವ ಮಿಥ್ ಗಳು ಜನರನ್ನು ದಾರಿತಪ್ಪಿಸಿವೆ ಎನ್ನುವ ಮನ್ಮಥ ಕುಮಾರ್ ಸರ್ಪ ಅಥವಾ ಕಾಳಿಂಗ ಸರ್ಪಗಳು ತಾವಾಗಿಯೇ ಯಾರಿಗೂ ಧಾಳಿ ಮಾಡುವುದಿಲ್ಲ, ತಮ್ಮ ಜೀವ ರಕ್ಷಣೆಯ ಅನಿವಾರ್ಯ ಸಂದರ್ಭದಲ್ಲಿ ಮಾತ್ರಾ ಕಡಿಯುತ್ತವೆ ಎನ್ನುತ್ತಾರೆ. ಹಾವು ಹಿಡಿಯುವುದು ತುಂಬಾ ತಾಳ್ಮೆಯ ಕೆಲಸವಾಗಿದ್ದು ಹಠ ಸಾಧನೆಯಿಂದ ನಿರಂತರ ಕಲಿಕೆಯಿಂದ ಎಲ್ಲರೂ ಕಲಿಯಬಹುದು, ಆದರೆ ತುಂಬಾ ಎಚ್ಚರಿಕೆ ಮತ್ತು ಧೈರ್ಯದ ಅವಶ್ಯಕತೆ ಇದೆ ಎನ್ನುತ್ತಾರೆ. ಹಿಂದೆ ಕಾಳಿಂಗ ಸರ್ಪದಿಂದ ಎರಡು ಬಾರಿ ಹಾಗೂ ಸರ್ಪದಿಂದ ಮೂರು ಬಾರಿ ಅವರೂ ಕೂಡ ಕಡಿತಕ್ಕೆ ಒಳಗಾಗಿದ್ದಿದೆ ಆದರೆ ತಕ್ಷಣದ ಪ್ರಥಮ ಚಿಕೆತ್ಸೆಯಿಂದ ಪ್ರಾಣಾಪಾಯಕ್ಕೆ ಒಳಗಾಗಿಲ್ಲ ಎನ್ನುತ್ತಾರೆ. ತಮ್ಮ ಹನ್ನೆರಡನೆಯ ವರ್ಷದಲ್ಲಿ ಕುತೂಹಲದಿಂದ ಹಾವುಗಳನ್ನು ಹಿಡಿಯುವ ಕಾಯಕಕ್ಕೆ ಇಳಿದ ಮನ್ಮಥ ಕುಮಾರ್ ಕರ್ನಾಟಕ ರಾಜ್ಯಾದ್ಯಂತ ಹಾವು ಹಿಡಿದ್ದಾರೆ. ಗುರುಗಳಿಲ್ಲದೇ ಸ್ವಯಂ ಈ ವಿದ್ಯೆಯನ್ನು ಸಾಧಿಸಿರುವ ಮನ್ಮಥ್ ಕುಮಾರ್ ಈಗ ಅರವತ್ತು ವರ್ಷದ ಪ್ರಾಯ. ಬೇಸಿಗೆಯ ದಿನಗಳಲ್ಲಿ ಪ್ರತಿ ನಿತ್ಯ ಹಗಲಿರುಳು ಎನ್ನದೆ ಜನರ ಕರೆಗೆ ಸ್ಪಂದಿಸುವ ಮನ್ಮಥ್ ಕುಮಾರ್ ಕೆಲವು ಸಲ ದಿನವೊಂದಕ್ಕೆ ಎಂಟು ಕಾಳಿಂಗ ಸರ್ಪಗಳನ್ನು ಹಿಡಿದ ಉದಾಹರಣೆ ಇದೆ. ಕೋಲು, ಕಬ್ಬಿಣದ ಸರಳು ಮುಂತಾದ ಯಾವುದೇ ಸಲಕರಣೆಗಳ ಸಹಾಯವಿಲ್ಲದೆ ಹಾವು ಹಿಡಿಯುವುದು ತುಂಬಾ ಅಪಾಯಕಾರಿಯಾಗಿದ್ದರೂ ಕೂಡ ಅವುಗಳನ್ನು ಬಳಸಿದರೆ ಹಾವುಗಳಿಗೆ ಗಾಯವಾಗುತ್ತದೆ ಎನ್ನುವ ಕಾರಣದಿಂದ ಬರಿಗೈಯಲ್ಲಿ ಹಾವು ಹಿಡಿಯುವುದನ್ನು ರೂಢಿಸಿಕೊಂಡಿದ್ದಾರೆ. ಹಾವುಗಳನ್ನು ವೃಥಾ ಕೊಲ್ಲಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಾರೆ ಮನ್ಮಥ್ ಕುಮಾರ್. ಮೊಬೈಲ್: ೯೪೪೮೧೦೪೯೯೧

Saturday, February 9, 2013

ಕಲ್ಲುಬರಡು ಭೂಮಿಯಲ್ಲೊಂದು ಸ್ವರ್ಗ

ಸಾವಯವ ಕೃಷಿಯೆಂಬುದು ಲಾಭ ನಷ್ಟ ಲೆಕ್ಕಾಚಾರದ ಹೊರತಾದ ಜೀವನ ಪದ್ದತಿ ಎಂದು ಅರಿವಾದಾಗ ಮಾತ್ರಾ ನೆಮ್ಮದಿ ಕಾಣಬಹುದು ಎನ್ನುತ್ತಲೆ ತೋಟಕ್ಕಿಳಿಯುತ್ತಾರೆ ತಾಳಗುಪ್ಪದ ಸಮೀಪದ ಐಗಳಕೊಪ್ಪದ ಯಶಸ್ವೀ ಸಾವಯವ ಕೃಷಿಕ ಪುರುಷೋತ್ತಮ. ೫೬ ವರ್ಷ ವಯಸ್ಸಿನ ಈ ಕೃಷಿಕನ ಬದುಕು ಎಂಬುದು ಸವಾಲುಗಳ ಸರಮಾಲೆ. ಹಠ ಛಲ ಇವರ ನರನಾಡಿಗಳಲ್ಲಿ ಹರಿಯುವ ರಕ್ತದ ಕಣಕಣ ದಲ್ಲಿಯೂ ಸೇರಿಕೊಂಡಿದೆ ಎನ್ನುವುದಕ್ಕೆ ಅವರು ಕಲ್ಲುಬರಡು ಭೂಮಿಯಲ್ಲೊಂದು ಸ್ವರ್ಗ ನಿರ್ಮಿಸಿದ್ದೇ ಸಾಕ್ಷಿ.


ಸಾಗರ ತಾಲ್ಲೂಕು ತಾಳಗುಪ್ಪದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಐಗಳಕೊಪ್ಪಕ್ಕೆ ಪುರುಷೋತ್ತಮ ಕಾಲಿಟ್ಟಾಗ ನಡುವಯಸ್ಸು. ಗೋಬರ್ ಗ್ಯಾಸ್ ಕಟ್ಟಡವೊಂದರ ನಿರ್ಮಾಣದಲ್ಲಿ ತೊಡಗಿದ್ದಾಗ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಸೊಂಟದ ತೀವ್ರ ಪೆಟ್ಟಿನಿಂದ ಬಳಲುತ್ತಿದ್ದ ಪುರೋಷೋತ್ತಮ ನೋವನ್ನೂ ಲೆಕ್ಕಿಸದೆ ಕೃಷಿಯಲ್ಲಿ ತೊಡಗಿಸಿಕೊಂಡರು. ೨೦೦೬ ನೇ ಇಸವಿಯಲ್ಲಿ ಖರೀದಿ ಮಾಡಿದ ಐದು ಎಕರೆ ಬರಡು ಭೂಮಿ ಕೃಷಿಗೆ ಇರಲಿ ವಾಸಕ್ಕೂ ಕಷ್ಟಕರ ಎನ್ನುವ ಸ್ಥಿತಿಯಲ್ಲಿತ್ತು. ಪಕ್ಕಾ ಬಯಲು ಸೀಮೆಯ ವಾತಾವರಣದಲ್ಲಿ ಹರ ಸಾಹಸಪಟ್ಟರೆ ಮಳೆ ನಂಬಿ ಒಂದೆರಡೆ ಎಕರೆ ಭತ್ತ ಬೆಳೆಯ ಬಹುದಿತ್ತು. ಆವಾಗ ಪುರುಷೋತ್ತಮರ ಕೈಹಿಡಿದದ್ದು ಗೋಮಾತೆ.
ಗೋ ಶಾಲೆ: ೨೦೦೭ ನೇ ಇಸವಿಯಲ್ಲಿ ಸಣ್ಣ ಪ್ರಮಾಣದಲ್ಲಿ ಗೋ ಶಾಲೆಯೊಂದನ್ನು ತೆರೆದರು.ದಾರಿ ಬದಿಯಲ್ಲಿ ಹೊಟ್ಟೆಗಿಲ್ಲದ ವಯಸ್ಸಾಗಿರುವ ಹಲವು ದನಕರುಗಳಿಗೆ ಆಶ್ರಯದಾತರಾದರು. ಪುರುಷೋತ್ತಮ ಜತೆಜತೆಯಲ್ಲಿ ಡೈರಿ ಉದ್ಯಮ್ಮಕ್ಕೆ ಇಳಿದರು. ಮಿಶ್ರ ತಳಿ ಆಕಳನ್ನು ಹಾಲಿಗಾಗಿ ಸಾಕಾಣಿಕೆ ನಡೆಸಿ ಸಮೀಪದ ತಾಳಗುಪ್ಪ ಡೈರಿಗೆ ಹಾಲು ಹಾಕತೊಡಗಿದರು. ಅಂದು ಪ್ರಾರಂಭಿಸಿದ ಗೋಶಾಲೆಯಲ್ಲಿ ಇಂದು ೬೫ ಆಕಳು ಎಮ್ಮೆಗಳು ಇವೆ. ಅವುಗಳಲ್ಲಿ ೧೩ ಹಾಲು ನೀಡುವಂತಹವು ಮಿಕ್ಕಂತೆ ಕಿಲಾರಿ, ಮಲೆನಾಡು ಗಿಡ್ಡ, ಸಾಯಿವಾಲ್ ಹೀಗೆ ಹತ್ತು ಹಲವು ಜಾತಿಯ ಆಕಳುಗಳು ಇಲ್ಲಿ ನೋಡಲು ಲಭ್ಯ. ಗೋಶಾಲೆಯ ನಿರ್ವಹಣಾ ವೆಚ್ಚ ಅಧಿಕವಾದ್ದರಿಂದ ಅದನ್ನು ಸರಿ ತೂಗಿಸಲು ತಮ್ಮ ಇತರೆ ದುಡಿಮೆಯ ಹಣವನ್ನು ಸುರಿದರು, ಆವಾಗ ಮಗ ರವಿಕಿರಣ್ ಪ್ರಾರಂಬಿಸಿದ್ದು ದ್ರವಗೊಬ್ಬರ ಮಾರಾಟ.
ದ್ರವಗೊಬ್ಬರ: ಕೂಲಿ ಕಾರ್ಮಿಕರ ಕೊರತೆಯಿರುವ ತೋಟದ ಮಾಲಿಕರಿಗೆ ಸುಲಭದಲ್ಲಿ ಗೊಬ್ಬರ ಉಣಿಸಲು ಒಂದು ಮಾರ್ಗಬೇಕಿತ್ತು. ಪುರುಷೋತ್ತಮ ರ ಗೋಶಾಲೆಯಲ್ಲಿ ಸಗಣಿ ಗೋಮೂತ್ರ ಕ್ಕೆ ಬರವಿರಲಿಲ್ಲ. ದೊಡ್ಡದಾದ ಬಯೋಡೈಜೆಸ್ಟರ್ ಪ್ಲಾಂಟ್ ಮಾಡಿಸಿ ಅಲ್ಲಿ ಶೇಖರಣೆಯಾದ ದ್ರವ ರೂಪಿ ಗೊಬ್ಬರವನ್ನು ಸುತ್ತಮುತ್ತಲಿನ ಕೃಷಿಕರ ತೋಟಕ್ಕೆ ಟ್ಯಾಂಕರ್ ಮೂಲಕ ಸರಬರಾಜು ಆರಂಭಿಸಿದರು. ಒಂದು ಲೀಟರ್ ದ್ರವ ರೂಪಿ ಗೊಬ್ಬರಕ್ಕೆ ೨ ರೂಪಾಯಿಯಿಂದ ದೂರಕ್ಕನುಗುಣವಾಗಿ ೩ ರೂಪಾಯಿವರಗೂ ದರ ನಿಗದಿಪಡಿಸಿದರು. ವರ್ಷವೊಂದಕ್ಕೆ ಒಂದೂವರೆ ಲಕ್ಷ ಲೀಟರ್ ದ್ರವರೂಪಿ ಗೊಬ್ಬರ ಮಾರಾಟ ಮಾಡಿ ಗೋಶಾಲೆಯ ಖರ್ಚನ್ನು ಸರಿದೂಗಿಸತೊಡಗಿದರು. ಜತೆಯಲ್ಲಿ ತಮ್ಮ ಕೃಷಿ ಕ್ಷೇತ್ರವನ್ನು ಸಂಪುರ್ಣ ಸಾವಯವ ದ್ರವರೂಪಿ ಗೊಬ್ಬರಕ್ಕೆ ಒಗ್ಗಿಸಿದರು. ಇದರಿಂದಾಗಿ ಐದೆಕರೆ ಕೃಷಿ ಕ್ಷೇತ್ರ ಹಸಿರಿನಿಂದ ನಳನಳಿಸತೊಡಗಿತು.
ತರಕಾರಿಲ್ಲಿಯೂ ಸ್ವಾವಲಂಬಿ: ಹೇರಳವಾಗಿ ಸಿಗುವ ಗೊಬ್ಬರದ ಪ್ರಭಾವದಿಂದ ಪುರುಷೋತ್ತಮರ ಕೃಷಿ ಕ್ಷೇತ್ರದ ತುಂಬೆಲ್ಲಾ ತರಕಾರಿಗಳು ಕಾಣಸಿಗುತ್ತವೆ. ತನ್ನಷ್ಟಕ್ಕೆ ಹುಟ್ಟುವ ತರಕಾರಿಗಳು ಒಂದಿಷ್ಟಾದರೆ, ತೊಂಡೆ ಬಸಳೆ ಮುಂತಾದವುಗಳನ್ನು ಸಾಕಾಷ್ಟು ಬೆಳೆಯುತ್ತಾರೆ
ಎರೆಗೊಬ್ಬರ ಘಟಕ: ಸಾಗಾಟಕ್ಕೆ ಸುಲಭ ಹಾಗೂ ಅತ್ಯಂತ ಪೌಷ್ಟಿಕ ಎಂಬ ಹೆಗ್ಗಳಿಕೆಯ ಎರೆಹುಳು ಗೊಬ್ಬರದ ಘಟಕವೊಂದನ್ನು ಪುರುಷೋತ್ತಮ್ ಹೊಂದಿದ್ದಾರೆ, ವರ್ಷವೊಂದಕ್ಕೆ ಸುಮಾರು ೬೦೦ ಕ್ವಿಂಟಾಲ್ ಎರೆಗೊಬ್ಬರ ಮಾರಾಟ ಮಾಡುತ್ತಾರೆ. ತಮ್ಮ ಕೃಷಿ ಕ್ಷೇತ್ರಕ್ಕೂ ಎರೆ ಗೊಬ್ಬರವೇ ಪ್ರಧಾನ ಬಳಕೆ ಇವರದ್ದು.
ಪಾರಿವಾಳ ಸಾಕಾಣಿಕೆ: : ರವಿಕಿರಣ್ ಕೂಡ ತಂದೆಯಷ್ಟೇ ಶ್ರಮಜೀವಿ, ಹವ್ಯಾಸಕ್ಕಾಗಿ ಪಾರಿವಾಳ ಸಾಕುವ ಈತ ಹೆಚ್ಚಾದ ಜೋಡಿಗಳನ್ನು ಆಸಕ್ತರಿಗೆ ಮಾರಾಟ ಮಾಡುತ್ತಾನೆ.
ಪುರುಷೋತ್ತಮರ ಪತ್ನಿ ಯಶೋಧ ಕೂಡ ಕೃಷಿಯಲ್ಲಿ ಅಪಾರ ಆಸಕ್ತಿಯುಳ್ಳವರು. ತೋಟದಲ್ಲಿ ಬೆಳೆದ ಬಾಳೇಕಾಯಿ ನೇರಮಾರಾಟದಿಂದ ಲಾಭ ಕಡಿಮೆ ಎಂಬ ಲೆಕ್ಕಾಚಾರಕ್ಕೆ ಇಳಿದ ಕುಟುಂಬ ಮನೆಯಲ್ಲಿಯೇ ಚಿಪ್ಸ್ ತಯಾರಿಸಿ ಮಾರಾಟ ಮಾಡಿ ಹಣ ಗಳಿಸುತ್ತಾರೆ. ಇಡೀ ಕುಟುಂಬ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡು ನೆಮ್ಮದಿ ಕಂಡುಕೊಂಡಿದ್ದಾರೆ. ಇಚ್ಚಾಶಕ್ತಿಯಿದ್ದರೆ , ಗೋವಿನ ಅಮೃತವನ್ನುಣಿಸಿದರೆ ಎಂಥಾ ಬರಡು ನೆಲವೂ ಕೂಡ ಹಸಿರಿನಿಂದ ನಳನಳಿಸುವಂತಾಗುತ್ತದೆ ಎನ್ನುವುದಕ್ಕೆ ಐಗಳಕೊಪ್ಪದ ಈ ಕೃಷಿ ಭೂಮಿಯೇ ಸಾಕ್ಷಿ.

Mobile 9448814508-9449171220

Tuesday, January 22, 2013

ಬೆಕ್ಕು ಕೊಂಡು ಹೋಯಿತಲ್ಲ.....


ಸಂಜು ಹದಿಹರೆಯದ ಹುಡುಗ. ತಾಳಗುಪ್ಪದ ಎಸ್.ಸಿ ಕಾಲೋನಿ ನಿವಾಸಿ. ಪಾರಿವಾಳ ಸಾಕುವುದು ಆತನ ಹವ್ಯಾಸ, ಖುಷಿಗಾಗಿ ಒಂದು ಜೊತೆ ಪಾರಿವಾಳಗಳನ್ನು ಕಳೆದ ವರ್ಷ ಮನೆಗೆ ತಂದು ಗೂಡು ಮಾಡಿ ಸಾಕಲಾರಂಬಿಸಿದ್ದು ಇಂದು ಸಣ್ಣ ಪ್ರಮಾಣದ ಆದಾಯಕ್ಕೂ ಕಾರಣವಾಗಿದೆ. ಆಸಕ್ತಿದಾರರು ಸಂಜುವಿನ ಬಳಿ ಬಂದು ಪಾರಿವಾಳಗಳ ಜೋಡಿಯನ್ನು ಹಣ ಕೊಟ್ಟು ಒಯ್ಯುತ್ತಾರೆ. ಜೋಡಿಯೊಂದಕ್ಕೆ ನಾಲ್ಕು ನೂರರಿಂದ ಆರು ನೂರು ರೂಪಾಯಿಗಳ ವರೆಗೆ ಬಿಕರಿಯಾಗುತ್ತವೆ, ಆದಾಯದ ಜತೆಗೆ ಸಾಕಾಣಿಕೆ ಖುಷಿಯೂ ಸಿಗುತ್ತದೆ ಎನ್ನುವ ಸಂಜು, ದೊಡ್ಡ ಪ್ರಮಾಣದಲ್ಲಿ ಪಾರಿವಾಳ ಸಾಕುವ ಇಂಗಿತ ಹೊಂದಿದ್ದಾನೆ. ಪಾರಿವಾಳ ಪ್ರದರ್ಶನ ಸ್ಪರ್ಧೆಯೂ ವರ್ಷದಲ್ಲಿ ಮೂರ್ನಾಲ್ಕು ಬಾರಿ ಸಿಗುವುದರಿಂದ ಅದೂ ಕೂಡ ಹೆಮ್ಮೆಯ ವಿಷಯ ಎನ್ನುವುದು ಸಂಜುವಿನ ಅಭಿಪ್ರಾಯ.

ಸಂಜು ಪತ್ರಿಕೆಗೆ ಫೋಸ್ ಕೊಡಲು ಅಂಗಳದಲ್ಲಿ ಪಾರಿವಾಳಕ್ಕೆ ಅಕ್ಕಿ ಹಾಕಿ ಕುಳಿತಿದ್ದ. ನಾನು ಸಂಭ್ರಮದಿಂದ ಫೋಟೋ ತೆಗೆದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ಅನಾಹುತವೊಂದು ನಡದೇ ಹೋಯಿತು. ಕಳ್ಳ ಬೆಕ್ಕೊಂದು ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನಡಿಯಿಂದ ತೂರಿ ಬಂದು ಪಾರಿವಾಳವೊಂದರ ಮೇಲೆ ಧಾಳಿ ಮಾಡಿ ಹಿಡಿದುಕೊಂಡು ಹೊರಟೇ ಹೋಯಿತು. ಸುತ್ತಮುತ್ತಲಿದ್ದ ಜನರೆಲ್ಲಾ ಬೆಕ್ಕಿನ ಬಾಯಿಗೆ ಸಿಕ್ಕ ಪಾರಿವಾಳ ರಕ್ಷಿಸಲು ಬೆಕ್ಕಿನ ಹಿಂದೆ ಓಡಿದರಾದರೂ ಪ್ರಯೋಜನ ವಾಗಲಿಲ್ಲ. ಕಳ್ಳ ಬೆಕ್ಕು ಪಾಪದ ಪಾರಿವಾಳವನ್ನು ಬಲಿತೆಗೆದುಕೊಂಡೇ ಬಿಟ್ಟಿತು. ನಾನು ಕೂಡ ಬೇಸರದಿಂದ ಮನೆಗೆ ಬಂದು ತೆಗೆದ ಒಂದೊಂದೇ ಫೊಟೋ ನೊಡುತ್ತಾ ಸಾಗಿದಂತೆ. ಕಳ್ಳ ಬೆಕ್ಕಿನ ಕೆಲಸ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಸಿಕ್ಕಿಬಿಟ್ಟಿತ್ತು ಅಕಸ್ಮಾತ್ತಾಗಿ. ಸಂಜುವಿನ ಪಾರಿವಾಳ ಸಾಕಾಣಿಕೆ ವರದಿ ಮಾಡಲು ಹೋಗಿ ಪಾರಿವಾಳವೊಂದನ್ನು ಬಲಿಕೊಟ್ಟ ವಿಷಾದದ ಜತೆಗೆ ಕಳ್ಳ ಬೆಕ್ಕಿನ ರಕ್ಕಸತನವನ್ನು ಸೆರೆಹಿಡಿದಂತಾಗಿತ್ತು.

Thursday, January 17, 2013

ಜೇನು ಮಾಸ್ಟರ್ ಮಂಜಪ್ಪ


ಕೃಷಿಕರ ವೃತ್ತಿಯಲ್ಲಿ ಅತ್ಯಂತ ಸವಾಲಿನ ಹಾಗೂ ಅಷ್ಟೇ ಉತ್ಸಾಹದಾಯಕ ಕೃಷಿ ಎಂದರೆ ಜೇನು ಕೃಷಿ. ಜೇನು ಸಾಕಾಣಿಕೆ ಜೇಬು ತುಂಬುವ ಭರವಸೆಯನ್ನು ನೀಡುವುದಿಲ್ಲ. ಅತ್ಯಂತ ತಾಳ್ಮೆ ಹಾಗೂ ಬಹು ಸಮಯವನ್ನು ಬೇಡುವ ಜೇನು ಕೃಷಿ ತೊಡಗಿಸಿಕೊಂಡಲ್ಲಿ ಆತ್ಮಾನಂದವನ್ನು ನೀಡಬಲ್ಲದು. ಇಂತಹ ಅಪರೂಪದ ಕೃಷಿಯಾದ ಜೇನು ಸಾಕಾಣಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿಯೂ ಯಶಸ್ವಿಯಾಗಿದ್ದಾರೆ ಸಾಗರ ತಾಲ್ಲುಕಿನ ತಾಳಗುಪ್ಪ ಹೋಬಳಿಯ ಖಂಡಿಕಾ ಗ್ರಾಮದ ಕೃಷಿಕ ಮಂಜಪ್ಪ ಕೆ ಎಲ್.
ಇವರು ಒಂದೆಕೆರೆ ಅಡಿಕೆ ತೋಟದ ಮಾಲೀಕರು, ಜತೆಯಲ್ಲಿ ಅಂಚೆ ಇಲಾಖೆಯ ಖಂಡಿಕಾ ಗ್ರಾಮದ ಪೋಸ್ಟ್ ಮಾಸ್ಟರ್. ಬಹು ಹಿಂದಿನಿಂದ ಮನೆಯಲ್ಲಿ ಸಹೋದರ ನಟರಾಜ ಒಂದೆರಡು ಜೇನು ಪೆಟ್ಟಿಗೆ ಇಟ್ಟು ಸಾಕಾಣಿಕೆ ಮಾಡುತ್ತಿದ್ದರು. ಇವರಿಗೆ ೨೦೦೦ ನೇ ಇಸವಿಯಲ್ಲಿ ಜೇನು ಕೃಷಿಯನ್ನು ಕೊಂಚ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಆಸೆ ಬಂತು. ಆಗ ಕಪ್ಪು ತುಡುವೆ ಜೇನನ್ನು ಎಲ್ಲರೂ ಸಾಕುತ್ತಿದ್ದರು. ವೈರಸ್ ಖಾಯಿಲೆಯಿಂದಾಗಿ ಅವುಗಳು ಪೆಟ್ಟಿಗೆಯಲ್ಲಿ ನಿಲ್ಲದೆ ಸಾಕಾಣಿಕೆ ತುಂಬ ಕಷ್ಟದಾಯಕವಾಗುತ್ತಿತ್ತು. ಆಗ ಅವರ ಗಮನ ಸೆಳೆದದ್ದು ಸಿರಸಿಯ ಮಸಿಗದ್ದೆ ಧರ್ಮೇಂದ್ರ ಹೆಗಡೆ ಸಾಕುತ್ತಿದ್ದ ಅರಿಶಿನ ತುಡುವೆ ಜೇನು. ಸಿರಸಿಗೆ ತೆರಳಿ ಎರಡು ಪೆಟ್ಟಿಗೆ ಜೇನು ಹುಳು ತಂದು ಸಾಕಾಣಿಕೆ ಆರಂಬಿಸಿದ ಮಂಜಪ್ಪ ಅಲ್ಲಿಂದೀಚೆಗೆ ನಿರಂತರವಾಗಿ ಬೆಳೆಯುತ್ತಾ ಸಾಗಿದ್ದಾರೆ.
ಸೊಪ್ಪಿನ ಬೆಟ್ಟದಲ್ಲೂ ಆದಾಯ: ಮಲೆನಾಡಿನ ಅಡಿಕೆ ಕೃಷಿಕರಿಗೆ ತೋಟದ ಮೇಲ್ಗಡೆ ಸೊಪ್ಪಿನ ಬೆಟ್ಟ ಮುಫತ್ತಾಗಿ ದೊರೆಯುತ್ತದೆ. ಅಲ್ಲಿನ ಸೊಪ್ಪು ದರಲೆಗಳನ್ನು ಬಳಸಿಕೊಳ್ಳಲು ಸರ್ಕಾರ ಅನುಮತಿ ನೀಡುತ್ತದೆ. ಆದರೆ ಅಲ್ಲಿ ಯಾವುದೇ ಬೆಳೆಗಳನ್ನು ಬೆಳೆಯುವಂತಿಲ್ಲ. ಹಾಗಾಗಿ ಎಲ್ಲಾ ಅಡಿಕೆ ತೋಟದ ಮಾಲೀಕರ ಸೊಪ್ಪಿನ ಬೆಟ್ಟಗಳು ಆದಾಯದ ವಿಷಯದಲ್ಲಿ ನಿರುಪಯುಕ್ತ. ಆದರೆ ಮಂಜಪ್ಪನವರು ಮಾತ್ರಾ ಹೊಸ ಆಲೋಚನೆಯ ಹೊಳವನ್ನು ಹಿಡಿದು ಸಾಗಿದರು. ಇವರು ಮನೆಯ ಪಕ್ಕದ ಸೊಪ್ಪಿನ ಬೆಟ್ಟವನ್ನು ಜೇನು ಸಾಕಾಣಿಕೆಗೆ ಆಯ್ದುಕೊಂಡಿದ್ದಾರೆ. ಕಾಡು ಜಾತಿಯ ಮರಗಳಿರುವ ಸೊಪ್ಪಿನ ಬೆಟ್ಟದ ತುಂಬೆಲ್ಲಾ ಜೇನಿನ ಝೇಂಕಾರ. ಇದರಿಂದಾಗಿ ಜೇನುಗಳ ಆಹಾರ ಸಂಗ್ರಹಣೆ ಸುಲಭವಾಗುವುದರ ಜತೆ ಇಳುವರಿಯೂ ತುಂಬಾ ಹೆಚ್ಚಾಗಿದೆ.
ಜೇನು ಡೈರಿ: ಕೃಷಿಕರು ತಮ್ಮ ಕೈಂಕರ್ಯ ಗಲ ಮಾಹಿತಿಗಳನ್ನು ದಾಖಲಿಸುವುದನ್ನು ಅಭ್ಯಾಸ ಮಾಡಿದರೆ ಅದ್ಭುತ ಯಶಸ್ಸು ಕಾಣಬಹುದು ಎನ್ನುವುದು ಮಂಜಪ್ಪ ಸ್ವತಹ ಕಂಡುಕೊಂಡ ಮಾರ್ಗ. ೨೦೦೦ ನೇ ಇಸವಿಯಿಂದ ಜೇನಿನ ಹಾಗೂ ಜೇನು ಸಾಕಾಣಿಕೆಯ ಸಂಪೂರ್ಣ ಮಾಹಿತಿಯನ್ನಿ ಇವರು ದಾಖಲಿಸಿ ಇಟ್ಟಿದ್ದಾರೆ. ಜೇನು ರಾಣಿ ಹುಟ್ಟಿದ ದಿನಾಂಕದಿಂದ ಹಿಡಿದು ಜೇನು ಗೂಡು ಹಿಸ್ಸೆ ಮಾಡಿಸಿದ ತನಕ ಹಾಗೂ ಜೇನು ತುಪ್ಪ ಯಾವ್ಯಾವ ಪೆಟ್ಟಿಗೆಯಲ್ಲಿ ಎಷ್ಟು ಇಳುವರಿ ಎಂಬ ಮಾಹಿತಿಯನ್ನು ದಾಖಲಿಸುವುದರ ಮುಖಾಂತರ ಇವರು ಯಶಸ್ಸುಗಳಿಸಿದ್ದಾರೆ. ದಾಖಲೆ ಇಟ್ಟಲ್ಲಿ ನಾವು ಯಡವಿದ್ದು ಎಲ್ಲಿ ಎಂಬುದಕ್ಕೆ ಉತ್ತರ ಸಿಗುತ್ತದೆ ತನ್ಮೂಲಕ ನಾವು ತಿದ್ದಿಕೊಳ್ಳ ಬಹುದು ಜತೆಗೆ ಇಂತಹ ದಾಖಲೆಗಳು ಮುಂದಿನ ಪೀಳಿಗೆ ಜೇನು ಕೃಷಿಗೆ ತೊಡಗಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಎನ್ನುತ್ತಾರೆ.
ಅಧಿಕ ಇಳುವರಿ: ಸಾಮಾನ್ಯವಾಗಿ ಮಲೆನಾಡಿನಲ್ಲಿ ಒಂದೆರಡು ಜೇನು ಗೂಡನ್ನು ಇರಿಸಿಕೊಳ್ಳುವ ಕೃಷಿಕರು ಪೆಟ್ಟಿಗೆಯೊಂದರಿಂದ ವರ್ಷವೊಂದಕ್ಕೆ ಮೂರ್ನಾಲ್ಕು ಕೆಜಿ ಜೇನುತುಪ್ಪದ ಇಳುವರಿ ಪಡೆಯುತ್ತಾರೆ. ಆದರೆ ಮಂಜಪ್ಪನವರು ೨೦೧೧-೧೨ ನೇ ಸಾಲಿನಲ್ಲಿ ಒಟ್ಟೂ ಹದಿನಾಲ್ಕು ಪೆಟ್ಟಿಗೆಯಿಂದ ಒಂದೂ ಮುಕ್ಕಾಲು ಕ್ವಿಂಟಾಲ್ ತುಪ್ಪ ಪಡೆದು ದಾಖಲೆ ನಿರ್ಮಿಸಿದ್ದಾರೆ.
ಕೃತಕ ಹಿಸ್ಸೆ: ಜೇನು ಕುಟುಂಬಗಳನ್ನು ಪೆಟ್ಟಿಗೆಯಿಂದ ಓಡಿ ಹೋಗದಂತೆ ರಕ್ಷಿಸಿಕೊಳ್ಳುವುದು ಜೇನು ಸಾಕಾಣಿಕೆಯಲ್ಲಿ ಅತ್ಯಂತ ಮಹತ್ವ ಪೂರ್ಣ ಘಟ್ಟ. ಪ್ರತೀ ವರ್ಷ ಹೊಸ ರಾಣಿಮೊಟ್ಟೆಯೊಡೆದು ಹಿಸ್ಸೆ ಮಾಡಿಕೊಂಡು ಹಾರಿ ಹೂಗುವ ಜೇನು ಗುಂಪನ್ನು ತಡೆಹಿಡಿದುಕೊಳ್ಳಲು ಯಶಸ್ವಿಯಾದರೆ ಜೇನು ಕೃಷಿಕ ಅರ್ದ ಗೆದ್ದಂತೆ. ಇದಕ್ಕಾಗಿ ಮಂಜಪ್ಪ ಆಯ್ದುಕೊಂಡಿದ್ದು ಕೃತಕ ಹಿಸ್ಸೆ ತಂತ್ರ. ಜೇನು ರಾಣಿಮೊಟ್ಟೆಯನ್ನು ಇಟ್ಟ ಕೂಡಲೇ ಅವರು ಮತ್ತೊಂದು ಪೆಟ್ಟಿಗೆಗೆ ಅರ್ದ ತಂಡವನ್ನು ಹಾಕಿ ಎರಡು ಮಾಡುತ್ತಾರೆ. ತಮಗೆ ಹೆಚ್ಚಾಗಿರುವ ಜೇನು ಗೂಡನ್ನು ಆಸಕ್ತ ರೈತರಿಗೆ ಪ್ರತೀ ವರ್ಷ ಮಾರಾಟ ಮಾಡುತ್ತಾರೆ. ಇದರಿಂದಾಗಿ ವಾರ್ಷಿಕವಾಗಿ ಒಂದಿಷ್ಟು ಆದಾಯದ ಜತೆಗೆ ಜೇನುಗೂಡನ್ನು ಉಳಿಸಿಕೊಂಡಂತಾಗುತ್ತದೆ.
ಉತ್ತಮ ಮಾರುಕಟ್ಟೆ: ಪ್ರತೀ ವರ್ಷ ಒಂದೂವರೆ ಕ್ವಿಂಟಾಲ್ ನಿಂದ ಹಿಡಿದು ಎರಡು ಕ್ವಿಂಟಾಲ್ ಜೇನು ತುಪ್ಪ ತೆಗೆಯುವ ಮಂಜಪ್ಪನವರಿಗೆ ಇಲ್ಲಿಯವರೆಗೆ ಮಾರುಕಟ್ಟೆಯ ಸಮಸ್ಯೆ ಎದುರಾಗಿಲ್ಲ. ಶುದ್ಧ ಪೆಟ್ಟಿಗೆಯಲ್ಲಿನ ತುಪ್ಪ ದೊರಕುವುದರಿಂದ ಮಾರ್ಚ್ ತಿಂಗಳಿನಲ್ಲಿ ತುಪ್ಪ ತೆಗೆಯಲಾರಂಬಿಸುತ್ತಿದ್ದಂತೆ ಸ್ಥಳೀಯ ಗಿರಾಕಿಗಳು ಬಂದು ತೆಗೆದುಕೊಂಡು ಹೋಗುತ್ತಾರೆ. ಕೆಜಿಯೊಂದಕ್ಕೆ ೨೫೦ ರೂಪಾಯಿ ದರದಲ್ಲಿ ಬಿಕರಿಯಾಗುವ ಜೇನು ತುಪ್ಪದಿಂದ ವಾರ್ಷಿಕವಾಗಿ ಸುಮಾರು ೫೦ ಸಾವಿರ ರೂಪಾಯಿಗಳ ಆದಾಯ ಹೊಂದಿದ್ದಾರೆ.
ವೃತ್ತಿಯಲ್ಲಿ ಅಂಚೆ ಇಲಾಖೆಯ ನೌಕರನಾಗಿ ಅಡಿಕೆ ತೋಟದ ಕೃಷಿಕನಾಗಿ ಹವ್ಯಾಸಕ್ಕಾಗಿ ಜೇನಿನಲ್ಲಿ ತೊಡಗಿಸಿ ನಂತರ ಆದಾಯದಲ್ಲಿಯೂ ಯಶಸ್ವಿಯಾದ ಮಂಜಪ್ಪನರು ಪತ್ನಿ ಪ್ರಭಾರ ಸಹಕಾರ ವನ್ನೂ ನೆನೆಯುತ್ತಾರೆ. ೨೨ ಪೆಟ್ಟಿಗೆ ಜೇನು ಹೊಂದಿ ಯಶಸ್ಸು ಗಳಿಸಿರುವ ಕೃಷಿಕ ಮಂಜಪ್ಪ ಹಲವು ರೈತರಿಗೆ ಮಾದರಿಯಾಗಿದ್ದಾರೆ.

ಫೋನ್: ೦೮೧೮೩೨೯೬೭೨೫ 08183296725
ಮೊ ;೯೪೮೦೦೧೮೪೬೧ 9480018461
Posted by Picasa

Saturday, January 5, 2013

ನಮ್ಮೂರ ಲಗಾನ್

             
    ನನಗೆ ಕ್ರಿಕೆಟ್ ಎಂದರೆ ಅಷ್ಟಕ್ಕಷ್ಟೆ. ಹಾಗಾಗಲು ಸ್ಪಷ್ಟ ಕಾರಣ ಅಂತ ಏನೂ ಇಲ್ಲ. ಒಂದಿಷ್ಟು ಸಣ್ಣ ಪುಟ್ಟ ಕಾರಣ ಹುಡುಕಿ ಹೇಳಬೇಕು ಅಂತಾದರೆ ಮೊದಲನೆಯದು ನನಗೆ ಅಲ್ಲಿ ಒಂದೇ ತರಹ ಬಟ್ಟೆ ಧರಿಸಿ ಆಡುವ ಹನ್ನೊಂದು ಜನರ ಮುಖ ಪರಿಚಯ ನೆನಪಿರುವುದಿಲ್ಲ, ಎರಡನೆಯದಾಗಿ ಸ್ಪಿನ್, ಗೂಗ್ಲಿ, ಬೌನ್ಸರ್ ಇಂತಿಪ್ಪ ಹತ್ತು ಹಲವು ನನಗೆ ಗೊಂದಲ, ಮೂರನೆಯದಾಗಿ ಅವನು ಹೀಗೆ ಆಡಿದ್ದರೆ ಇನ್ನಷ್ಟು ಹೊತ್ತು ನಿಲ್ಲಬಹುದಿತ್ತು ಎಂಬ ವಿಮರ್ಶೆ ಖಂಡಿತಾ ಒಗ್ಗದು, ನಾಲ್ಕನೆಯದಾಗಿ ಅದೊಂತರಹ ಏಕತಾನತೆ ಕಾಡತೊಡಗಿ ಆಟದ ಕೊನೆಯ ರೋಮಾಂಚಕ ಐದು ನಿಮಿಷ ಮಾತ್ರಾ ನೋಡಿದರೆ ಸಾಕು ಎಂಬ ಭಾವನೆ ಮೂಡಿ ಮೊದಲು ಆಟ ನೋಡದೆ ಅಂತಿಮ ಕ್ಷಣಕ್ಕೆ ಟಿವಿ ಹಾಕಿದರೆ ಆಟ ಮುಗಿದು ನಂತರ ಅದ್ಯಾರೋ ಕೊರೆಯುವುದಷ್ಟೇ ನನ್ನ ಪಾಲಿಗೆ ಉಳಿಯುವಂತಾಗಿ ಬಿಡುತ್ತದೆ. ಒಟ್ಟಿನಲ್ಲಿ ನನಗೆ ಒಗ್ಗಲಿಲ್ಲ ಬಿಟ್ಟಾಕಿ. ಈಗ ವಿಷಯಕ್ಕೆ ಬರುತ್ತೇನೆ
          ಲಗಾನ್ ಚೆನ್ನಾಗಿದೆ ಅಂತ ಬಹಳ ಜನ ಹೇಳಿದ್ದರು. ನಾನು ನೋಡಲಿಲ್ಲ, ಹಳ್ಳಿಯ ಹುಡುಗರ ಕ್ರಿಕೆಟ್ ಕಹಾನಿ ಎಂಬ ವಿಷಯ ನಿಮ್ಮಂತಹ ಜನರ ಮೂಲಕ ತಿಳಿದಿದೆ ಅಷ್ಟೆ. ನಮ್ಮೂರಿನ ಹಳ್ಳಿ ಹುಡುಗರು ಕೂಲಿ ಕೆಲಸ ಮುಗಿಸಿದ ನಂತರ ಪ್ರತಿ ನಿತ್ಯ ಸಂಜೆ ಅವರದ್ದೇ ಆದ ಟೀಂ ಕಟ್ಟಿಕೊಂಡು ಆಡುತ್ತಿರುತ್ತಾರೆ. ನಾನು ನಿತ್ಯ ಅವರ ಮಜವನ್ನು ನೋಡಿ ಅನುಭವಿಸುತ್ತೇನೆ.ವಾರದ ಹಿಂದೆ ಸಂಜೆ ಹುಡುಗರು ಗುಂಪು ಕಟ್ಟಿಕೊಂಡು ನಿಂತಿದ್ದರು. ಅದೇನೋ ಚರ್ಚೆ ನಡೆಯುತ್ತಿತ್ತು. ಕಾರು ನಿಲ್ಲಿಸಿದೆ. ತಾಳಗುಪ್ಪದಲ್ಲಿ ಟೂರ್ನ್ ಮೆಂಟ್ ಇದೆ ಆದರೆ ಪ್ರವೇಶ ಶುಲ್ಕ ಸಾವಿರ ರೂಪಾಯಿ, ಆಡಬೇಕು ದುಡ್ಡಿಲ್ಲ ಎನ್ನುವುದು ಅವರ ಚರ್ಚೆಯ ವಿಷಯ. ಅಲ್ಲೊಂದು ಸಣ್ಣ ಬೆಸರದ ಸಂಗತಿ ಎಂದರೆ ಅವರಿಗೆ ಟೂರ್ನ್ ಮೆಂಟ್ ಗೆ ಹೋಗುವ ಆಸೆ ಆದರೆ ಪ್ರವೇಶ ಶುಲ್ಕ ದ ಸಮಸ್ಯೆ. ನಾನು ಸಮಸ್ಯೆ ಬಗೆಹರಿಸುವ ಜವಾಬ್ದಾರಿ ತೆಗೆದುಕೊಂಡೆ. ಹುಡುಗರು ಖುಷ್ ಆಗಿ ಹುರ್ರೇ ಎಂದರು. ನಾನು ಬುರ್ ಎಂದು ಕಾರು ಓಡಿಸಿ ಕೊಂಡು ಮನೆಗೆ ಹೋದೆ.
           ಒಂದೆರಡು ದಿವಸ ಕಳೆದಿತ್ತು ಹನ್ನೆರಡು ಟೀಂ ಗಳಲ್ಲಿ ಹತ್ತನ್ನು ಸೋಲಿಸಿ ನಮ್ಮ ಹುಡುಗರು ಸೆಮಿ ಫೈನಲ್ ಗೆ ಬಂದು ಬಿಟ್ಟಿದ್ದರು. ಅವರಿಗೆ ಅದೆಷ್ಟು ಆನಂದ ಅಂದರೆ ಇಲ್ಲಿ ಅಕ್ಷರದಲ್ಲಿ ಮೂಡಿಸಲಾಗದು ಬಿಡಿ. ಪೈನಲ್ ದಿವಸವೂ ಬಂತು. ನಾನು ಮರತೆ ಬಿಟ್ಟಿದ್ದೆ. ಸಂಜೆ ಒಂದು ದಂಡು ಜನರೊಂದಿಗೆ ಕಪ್ ಹಿಡಿದು ನಮ್ಮ ಮನೆಗೆ ಬಂದರು ಲಗಾನ್ ಹುಡುಗರು. ನಾನು ಅರೆಕ್ಷಣ ರೋಮಾಂಚಿತನಾದೆ. ಒಂದು ಕೆಜಿ ಸಿಹಿ, ಪಟಾಕಿ ಅಯ್ಯೋ ಅವರ ಸಂಭ್ರಮ ಹೇಳತೀರದು. ಅವರ ಸಂಭ್ರಮ ನೋಡಿ ನನ್ನ ಸಂಬ್ರಮಮದ ಕತೆಯೂ ಅಷ್ಟೆ. ಹುಡುಗರು ಗೆದ್ದ ಮೊತ್ತ ಹನ್ನೊಂದು ಸಾವಿರ ನಗದು. ಅಂತೂ ಒಳ್ಳೆ ಮಜ ಕೊಟ್ಟರು ನಮ್ಮೂರ ಹುಡುಗರು.
                   ನಾನಂತೂ ಭಗವಂತನನ್ನು ಹೀಗೆ ಪ್ರಾರ್ಥಿಸುತ್ತಿದ್ದೇನೆ. "ಇಲ್ಲಿ ಒಳ್ಳೆಯ ಕೆಲಸ ಬಹಳ ಆಗುವುದಿದೆ, ಅದು ನನ್ನ ಮೂಲಕ ಆಗಲಿ" ಎಂಬ ಸ್ವಾರ್ಥ ಪೂರಿತವಾಗಿ. ಫಲಿಸಿದೆ ಬಹಳಷ್ಟು ಫಲಿಸಿದೆ. ಅದರ ಫಲಾನುಭವಿಗಳಲ್ಲಿ ನಮ್ಮೂರ ಈ ಹುಡುಗರು ಎಷ್ಟನೆಯವರು ಎಂದು ಕರಾರುವಕ್ಕಾಗಿ ಹೇಳಬಾರದು, ಕಾರಣ ನನ್ನಲ್ಲಿ ಅಹಂಕಾರ ಮೂಡಿಬಿಡಬಹುದು.

Friday, January 4, 2013

ಗೊತ್ತಿಲ್ಲ ಎನ್ನುವವನು ಮಾತ್ರಾ ನಡುವೆ ನಿಂತ ಸುಖಿ.

                ಅಲ್ಲಿ ನಿಲ್ಲಲ್ಲು ಸಾದ್ಯವಾದರೆ ಅದು ಪರಮ ಸುಖ. ಅಲ್ಲಿ ಎಂಬುದಕ್ಕೆ ಸಮರ್ಪಕವಾದ ಉತ್ತರ ನಿಮಗೆ ನೀವೆ ಕಂಡುಕೊಳ್ಳಬೇಕು. ಅದು ಪಕ್ಕಾ ನಿಮ್ಮ ಮಿದುಳಿನ ಶಕ್ತಿಯನ್ನು ಅವಲಂಬಿಸಿದೆ. ಸುಲಭ ಉದಾಹರಣೆಯ ಮೂಲಕ ಹೇಳಬೇಕೆಂದರೆ ಇತ್ತೀಚೆಗೆ ಸುದ್ದಿಯಾಗುತ್ತಿರುವ  ಅತ್ಯಾಚಾರದ ವಿಷಯ. ಅತ್ಯಾಚಾರ ವಿರೋಧಿಸಿ ಚಿಂತಿಸುವ ಗುಂಪು ದೊಡ್ಡದಿದೆ ನಿಜ ಆದರೆ ವಿಚಿತ್ರ ಗೊತ್ತಾ ...?  ಆ ಅತ್ಯಾಚಾರದ ಪರವೂ ಒಂದು ಗುಂಪು ಇರುತ್ತದೆ. ಅದು ಸಣ್ಣದಿರಬಹುದು. ಆದರೂ ಇರುತ್ತದೆ. ವಿಷಯ ಎಂಬುದು ಗುಂಪಿನ ಬಹುಮತಕ್ಕೆ ಸಂಬಂದಪಟ್ಟಿದ್ದಲ್ಲವಾದ್ದರಿಂದ  ಇರುವಿಕೆಯಂತೂ ಸತ್ಯ. ಈಗ ಯೋಚಿಸಿ ಅಲ್ಲಿನ ಪರವೂ ಕೂಡ ವಿಷಯಕ್ಕೆ ವಿರೋಧವೇ, ವಿರೋಧವೂ ಕೂಡ ವಿಷಯಕ್ಕೆ ಪರವೇ. ತರ್ಕದ ಮೂಲಕ ಹೇಗಾದರೂ ಸಮರ್ಥಿಸಬಹುದು. ಘಟನೆ ನಡೆಯುವ ಕೆಲ ನಿಮಿಷಗಳ ಹಿಂದಿನ ಕ್ಷಣಗಳಲ್ಲಿ ಏನು ನಡೆಯಿತು ಎನ್ನುವುದರ ಮೇಲೆ ಘಟನೆ ನಿಂತಿರುತ್ತದೆಯಾದ್ದರಿಂದ ಅದು ಹೇಗೂ ತಿರುವು  ಪಡೆದುಕೊಳ್ಳಬಹುದು. ಅಲ್ಲಿನ ವ್ಯಕ್ತಿಗಳು  ಮತ್ತು ಅವರೊಡನೆ ನಿಮ್ಮ ನಮ್ಮ ವೈಯಕ್ತಿಕ ಸಂಬಂಧ ಯಾವ ಮಟ್ಟದ್ದು ಎನ್ನುವುದರ ಮೇಲೆ ಘಟನೆ ತಿರುವು ಪಡೆದುಕೊಳ್ಳುತ್ತಾ ಸಾಗುತ್ತದೆ.
            ಅತ್ಯಾಚಾರಿಯು ಹತ್ತಿರದ ಕರುಳ ಸಂಬಂಧಿಯಾದರೆ ಅದಕ್ಕೊಂದು ತಿರುವು, ಅತ್ಯಾಚಾರಕ್ಕೆ ಈಡಾದವರು ಕರುಳ ಸಂಬಂದಿಯಾದರೆ ಅದಕ್ಕೊಂದು ತಿರುವು. ಈ ವಿಷಯಗಳ ನಡುವೆ ಸತ್ಯವೊಂದು ಸುಮ್ಮನೆ ನಗುತ್ತಾ ಕುಳಿತಿರುತ್ತದೆ. ಅದು ತಿಳಿಯುವುದು ಬಹು ಅಪರೂಪದ ಜನಕ್ಕೆ. ಆ ಅಪರೂಪದ ಜನ ನೀವಾಗಬೇಕು ಎಂತಾದರೆ ಆ "ಅಲ್ಲಿ" ನಿಲ್ಲುವುದನ್ನು ಕಲಿಯಬೇಕು. ಈಗ ನಿಮಗೆ ಅರ್ಥವಾಗಿರಬೇಕು ಆ ಅಲ್ಲಿ ಎಂದರೆ  "ನಡುವೆ" ಎಂದು. ಹೌದು ಆಕಸ್ಮಿಕದ ಘಟನೆಯನ್ನು ಪೂರ್ವಯೋಜಿತ ಅಂತಲೂ ಪೂರ್ವಯೋಜಿತ ಘಟನೆಯನ್ನು ಆಕಸ್ಮಿಕ ಅಂತಲೂ ಬಲಾಬಲದ ಮೇಲೆ ತಿರುಚಿದ ಉದಾಹರಣೆ ಸಾಕಷ್ಟಿದೆ. ಅದು ತಿಳಿಯುವುದು ನಡುವೆ ನಿಂತಾಗಲೇ. ಇಡೀ ಜೀವನವನ್ನು ನಡುವೆ ನಿಂತು ಅರ್ಥ ಮಾಡಿಕೊಳ್ಳ ತೊಡಗಿದರೆ ಅದರಂತಹ ಸುಖ ಮತ್ತೊಂದಿಲ್ಲ. ನಡುವೆ ನಿಲ್ಲುವ  ಶೈಲಿಯ ಇನ್ನೂ ಸುಲಭದ ವ್ಯಾಖ್ಯೆ ಎಂದರೆ ದೇವರು ಇದ್ದಾನೆ ಎನ್ನುವವರಿಗೂ ಇಲ್ಲ ಎನ್ನುವವರಿಗೂ ಗುಲಗುಂಜಿ ವ್ಯತ್ಯಾಸ ಇಲ್ಲ. ಎಲ್ಲಾ ಗೊತ್ತಿದ್ದೂ...  "ಗೊತ್ತಿಲ್ಲ" ಎನ್ನುವವನು ಮಾತ್ರಾ ನಡುವೆ ನಿಂತ ಸುಖಿ. ದಲೈಲಾಮ "ನನಗೆ ಗೊತ್ತಿಲ್ಲ" ಎಂಬ ಮಾತಿನಿಂದಲೇ ಉತ್ತರ ಕೊಡಲು ಆರಂಭಿಸುತ್ತಾರೆ. ಹಾಗಾಗಿ ಅವರ ವ್ಯಕ್ತಿತ್ವ  ಜಗತ್ತಿಗೆ ಮತ್ತು ಸತ್ಯ ದರ್ಶನದ ವಿಷಯದಲ್ಲಿ   "ಶಾಂತಿ, ಶಾಂತಿ, ಶಾಂತಿ"

Thursday, January 3, 2013

ಇವರು ಇಂಜನಿಯರಿಂಗ್ "ರೈತ"

              
           ಬಹುಪಾಲು ಎಲ್ಲ ತಂದೆತಾಯಿಂದರ ಕನಸು ಮಕ್ಕಳು ಇಂಜನಿಯರ್ ಅಥವಾ ಡಾಕ್ಟರ್ ಆಗಬೇಕು, ಪಕ್ಕದ ಮನೆಯ ಹುಡುಗರು ಕೃಷಿಕರಾಗಬೇಕು ಎಂಬ ತತ್ವ. ಆದರೆ ತಾಳಗುಪ್ಪದ ಸಮೀಪದ ಶಿರೂರು ಆಳ್ಳಿಯ ಮೂಗೀಮನೆ ಸುಬ್ರಾಯ ಹಾಗೂ ಕನಕಲತ ದಂಪತಿಗಳು ೧೨ ವರ್ಷದ ಕೆಳಗೆ ಇಂಜನಿಯರ್ ಮಗ ಮನೆಗೆ ಬರುತ್ತಾನೆ ಮರಳಿ ಕೃಷಿಗೆ ತೊಡಗಿಸಿಕೊಳ್ಳುತ್ತಾನೆ ಎಂದರೆ ಸಂಭ್ರಮಿಸಿದರು. ಅದರ ಪ್ರತಿಫಲ ಕೃಷಿಕ ಪ್ರಪಂಚಕ್ಕೆ ಇಂಜನಿಯರ್ ಕೊಡುಗೆಯಾದಂತಾಯಿತು.
         ೧೯೯೧ ನೆ ಇಸವಿಯಲ್ಲಿ ಟೆಲಿಕಮ್ಯುನಿಕೇಷನ್ ವಿಭಾಗದಲ್ಲಿ ಬಿಇ ಮುಗಿಸಿದ ಗಣೇಶ್ ಎಂ ಎಸ್ ಆಯ್ದುಕೊಂಡಿದ್ದು ನೌಕರಿಯನ್ನಲ್ಲ ಕೈಗಾರಿಕೆಯನ್ನ. ಮೈಸೂರಿನಲ್ಲಿ ಇಂಜನಿಯರಿಂಗ್ ಇಂಡಸ್ಟ್ರಿ ಆರಂಭಿಸಿದರು. ಉದ್ಯಮ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಯಶಸ್ವಿಯೂ ಆದರು, ಆದರೆ ಮನಸ್ಸಿಗೆ ನೆಮ್ಮದಿ ಮಾತ್ರಾ ಸಿಕ್ಕಿರಲಿಲ್ಲ. ಮಲೆನಾಡಿನ ತುಡಿತ ಕೃಷಿಯಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿ ೧೯೯೯ ನೇ ಇಸವಿಯಲ್ಲಿ ಇಂಜನಿಯರಿಂಗ್ ಉದ್ಯಮಕ್ಕೆ ವಿದಾಯ ಹೇಳಿ ಮರಳಿದರು ಮಣ್ಣಿಗೆ.
   ದೇಶ ಸುತ್ತಿ ಕೋಶ ಓದಿ ವಾಪಾಸು ಬಂದ ಇಂಜನಿಯರಿಂಗ್ ಪದವಿಧರ ಗಣೇಶ್ ಆರಂಭದಲ್ಲಿ ಕೃಷಿಗೆ ಒಗ್ಗಿಕೊಳ್ಳುವುದು ತುಸು ಕಷ್ಟ ಎನಿಸಿತು. ಕೃಷಿಯನ್ನು ಉದ್ಯಮದ ಲೆಕ್ಕಾಚಾರಕ್ಕೆ ತೆಗೆದುಕೊಂಡರೆ ಹಾಗೂ ಲಾಭ ನಷ್ಟದ ಲೆಕ್ಕಾಚಾರದ ಬಳಕೆಯಿಂದ ಮಾತ್ರಾ ಯಶಸ್ಸು ಎನಿಸಿ ಕೃಷಿ ಉದ್ಯಮ ಆರಂಭಿಸಿದರು.
ಬೇವಿನ ಹಿಂಡಿ ಉದ್ಯಮ: ತಮ್ಮ ಸ್ವಂತ ತೋಟದ ಬಳಕೆಗೆ ಗೊಬ್ಬರ ಅವಶ್ಯಕತೆ ಇತ್ತು ಅದರ ಜತೆ ಇತರೇ ಕೃಷಿಕರ ಅವಶ್ಯಕತೆಯನ್ನು ಪೂರೈಸುವ ಸಣ್ಣ ಪ್ರಮಾಣದ ಬೇವಿನ ಹಿಂಡಿ ಗೊಬ್ಬರ ಘಟಕ ಪ್ರಾರಂಭಿಸಿದರು. ಬಯಲು ಸೀಮೆಯಿಂದ ಬೇವಿನ ಬೀಜ ತರಿಸಿ ಅದನ್ನು ಹುಡಿಮಾಡಿ ಇತರೆ ರೈತರಿಗೆ ಕೊಂಚ ಕಡಿಮೆ ದರದಲ್ಲಿ ವಿತರಿಸಿದರು. ಇದರಿಂದಾಗಿ ಅವರ ತೋಟಕ್ಕೂ ಕಡಿಮೆ ವೆಚ್ಚದಲ್ಲಿ ಗೊಬ್ಬರ ದಕ್ಕಿತು. ಇಂತಹ ಸಣ್ಣ ಪ್ರಯತ್ನಗಳಿಂದಾಗಿ ಕೃಷಿಯನ್ನು ಲಾಭಕರ ಉದ್ಯಮವನ್ನಾಗಿಸಬಹುದೆಂದು ಗಣೇಶ್ ತೋರಿಸಿಕೊಟ್ಟಿದ್ದಾರೆ.


ನಾಟಿ ಯಂತ್ರ: ಒಮ್ಮೆ ಕೃಷಿ ಪ್ರವಾಸಕ್ಕೆಂದು ಯಲ್ಲಾಪುರಕ್ಕೆ ಹೋದಾಗ ಅಲ್ಲಿನ ಕೃಷಿಕರೊಬ್ಬರು ಭತ್ತದ ಸಸಿ ನಾಟಿಮಾಡಲು ಕೈಯಂತ್ರ ಬಳಸುತ್ತಿರುವುದನ್ನು ಗಣೇಶ್ ಗಮನಿಸಿದರು. ಆದರೆ ಆ ಯಂತ್ರ ಪರಿಪೂರ್ಣವಾಗಿರಲಿಲ್ಲ. ಒಂದು ಎಕರೆ ಭತ್ತದ ಸಸಿ ನಾಟಿ ಮಾಡುವಷ್ಟರಲ್ಲಿ ಯಂತ್ರ ದುರಸ್ತಿಕಾರ್ಯಕ್ಕೆ ಬರುತ್ತಿತ್ತು. ಗಣೇಶ್ ಆ ಯಂತ್ರದ ಮಾದರಿಯನ್ನು ಸುಧಾರಿಸಿ ಭತ್ತ ನಾಟಿ ಮಾಡುವ ಯಂತ್ರ ನಿರ್ಮಿಸಿದ್ದಾರೆ. ಲೀಲಾಜಾಲವಾಗಿ ಹತ್ತು ಎಕರೆ ನಾಟಿ ಮಾಡುವುದರ ಮೂಲಕ ಯಶಸ್ಸು ಸಾಧಿಸಿದ್ದಾರೆ. ಇಂತಹ ಹಲವು ಯಂತ್ರಗಳನ್ನು ತಾವೇ ತಯಾರಿಸಿ ಕೃಷಿಕರಿಗೆ ನೀಡಿದ್ದಾರೆ.
ಕೈಕೊಟ್ಟ ಉದ್ಯೋಗ ಖಾತ್ರಿ: ಕೂಲಿಜನರ ಸಹಾಯಕ್ಕೆಂದು ಬಂದ ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಿಂದ ರೈತರ ಸಂಕಷ್ಟ ಹೆಚ್ಚಾಗಿದೆ ಎನ್ನಿವುದು ಗಣೇಶ್ ಅಭಿಮತ. ಕೂಲಿಕಾರರನ್ನು ಇನ್ನಷ್ಟು ಸೋಮಾರಿಯನ್ನಾಗಿಸಿ ಅತ್ತ ಖಾತ್ರಿಯೂ ಇಲ್ಲ ಇತ್ತ ಕೃಷಿ ಕಾರ್ಯುಗಳೂ ಇಲ್ಲದಂತಾಗಿದೆ. ಇದರ ದುಶ್ಪರಿಣಾಮ ಕೃಷಿಕರು ಎದುರಿಸುವಂತಾಗಿದೆ. ಆದರೆ ಕೃಷಿಕಾರ್ಮಿಕರ ಕೊರತೆಗೆ ಹೆದರದೆ ಗಣೇಶ್ ಯಂತ್ರಗಳ ಬಳಕೆಯನ್ನು ಅವಲಂಬಿಸಿದರು. ಗದ್ದೆ ಕೊಯ್ಲಿಗೆ ಯಂತ್ರವನ್ನು ಬಳಸಿ ಹಣ ಉಳಿಸಿದರು. ಇದರಿಂದಾಗಿ ಸ್ವಾವಲಂಬಿಯಾದೆ ಎನ್ನುತ್ಟಾರೆ.
ಭತ್ತದ ಆಸಕ್ತಿ: ಆರ್ಥಿಕ ಬೆಳೆಯಾಗಿ ಅಡಿಕೆ ಬೆಳೆಯುತ್ತಿದ್ದರೂ ಗಣೇಶ್ ರವರಿಗೆ ಭತ್ತದ ಮೇಲೆ ಅಪಾರ ಪ್ರೀತಿ. ಕೃಷಿಯಲ್ಲಿ ತೊಡಗಿಸಿಕೊಂಡ ಆರಂಭದಲ್ಲಿಯೇ ಮಲೆನಾಡಿನಲ್ಲಿ ಯಾರೂ ಬೆ:ಳೆಯದಿದ್ದ ಡೈಮಂಡ್ ಸೋನಾ ತಳಿಯ ಭತ್ತ ಬೆಳೆದು ಲಾಭ ಗಳಿಸಿದರು. ಮಲೆನಾಡಿನಲ್ಲಿ ಭತ್ತದ ಬೆಳೆ ಲಾಭದಾಯಕವಲ್ಲ ಎಂಬ ನುಡಿಯನ್ನು ಸುಳ್ಳು ಮಾಡಿದ್ದಾರೆ ಗಣೇಶ್. ೧೨ ಎಕರೆ ಗದ್ದೆಯಲ್ಲಿ ೧೬೦ ಕ್ವಿಂಟಾಲ್ ಭತ್ತ ಬೆಳೆದು ದಾಖಲೆ ನಿರ್ಮಿಸಿದ್ದಾರೆ. ಭತ್ತದ ಬೆಳೆ ಬೈ ಹುಲ್ಲನ್ನೂ ಸೇರಿಸಿದರೆ ಶೇಕಡಾ ಮೂವತ್ತರಷ್ಟು ಲಾಭ ಮಾಡಬಹುದು ಎನ್ನುವುದು ಗಣೇಶ್ ಅಭಿಪ್ರಾಯ.
ಬಯೋ ಡೈಜೆಸ್ಟರ್: ಗೊಬ್ಬರ ಸಾಗಾಟ ತೋಟಕ್ಕೆ ಕಷ್ಟ ಹಾಗೂ ಹೆಚ್ಚಿನ ಕೂಲಿಯನ್ನು ಬೇಡುತ್ತದೆ ಎನ್ನುವುದು ಅರಿವಾದಾಗ ಮೊರೆಹೋಗಿದ್ದು ಬಯೋ ಡೈಜೆಸ್ಟರ್ ಘಟಕ. ತೋಟದ ಎಲ್ಲಾ ಗಿಡಗಳಿಗೆ ನೀರಿನ ಮೂಲಕ ಗೊಬ್ಬರ ಸೇರುವುದರಿಂದ ಅತ್ಯಂತ ಪರಿಣಾಮಕಾರಿ. ತಾನು ಕೃಷಿ ಆರಂಭಿಸಿದ ಸಮಯದಲ್ಲಿ ೨-೩ ಸಾವಿರ ದಷ್ಟು ಸಿಗುತ್ತಿದ್ದ ತೆಂಗಿನಕಾಯಿ ಈಗ ೧೨-೧೩ ಸಾವಿರಕ್ಕೇರಿದೆ ಎನ್ನುತ್ತಾರೆ.


ಕೈಮಗ್ಗ ಘಟಕ: ಹೆಗ್ಗೋಡಿನ ಚರಕದ ಮಾದರಿಯಲ್ಲಿ ಸಣ್ಣದಾದ ಕೈಮಗ್ಗದ ಘಟಕ ನಡೆಸುತ್ತಿರುವ ಗಣೇಶ್ ಅದು ಖುಷಿಗೆ ಎನ್ನುತ್ತಾರೆ. ಕೃಷಿಯ ಜತೆ ಖುಷಿಯೂ ಬೇಕು ಆರ್ಥಿಕವಾಗಿ ಮಗ್ಗಗಳು ಲಾಭದಾಯಕವಲ್ಲ ಆದರೆ ನಾಲ್ಕಾರು ಜನಕ್ಕೆ ಉದ್ಯೋಗ ನೀಡಿದ ಖುಷಿ ಹಾಗೂ ಅವಶ್ಯಕವಾದ ಬಟ್ಟೆಯನ್ನು ನಾವು ಸಮಾಜಕ್ಕೆ ನೀಡುತ್ತಿರುವ ನೆಮ್ಮದಿಗಾಗಿ ಚರಕದ ಸಹಯೋಗದೊಂದಿಗೆ ಕೈಮಗ್ಗದ ಘಟಕ ಸ್ಥಾಪಿಸಿದ್ದೇನೆ ಎನ್ನುತ್ತಾರೆ.
ಮಂಗಗಳ ಕಾಟಕ್ಕೆ ನಾಯಿಯೇ ಮದ್ದು: ಮಂಗಗಳು ಹೇರಳ ಅಡಿಕೆಚಿಗುರು ಕಾಯಿಗಳನ್ನು ತಿಂದು ಅಪಾರ ಹಾನಿ ಮಾಡುತ್ತಿದ್ದವು. ಕಾವಲಿಗೆ ಜನರನ್ನು ಇಟ್ಟರೂ ನಿಯಂತ್ರಣಕ್ಕೆ ಬರಲಿಲ್ಲ, ಆಗ ಸಿಕ್ಕಿದ್ದು ಈ ಉಪಾಯ. ಹಾದಿಬದಿಯಲ್ಲಿರುವ ಹತ್ತೆಂಟು ಬೀದಿನಾಯಿಯನ್ನು ಸಾಕಿದ್ದಾರೆ. ಸಾಕುವ ಖರ್ಚೂ ಕಡಿಮೆ ಮಂಗಗಳ ಕಾಟದಿಂದಲೂ ಮುಕ್ತಿ ಎನ್ನುವುದು ಗಣೇಶರ ಅನುಭವದ ಮಾತುಗಳು.
ಅಮೆರಿಕಾದ ನಗರದಲ್ಲೋ ಜಪಾನ್ ನ ಏರ್ ಕಂಡೀಷನ್ ರೂಂ ನಲ್ಲೋ ಕುಳಿತು ಉದ್ಯೋಗ ಮಾಡಬಹುದಾಗಿದ್ದ ಗಣೇಶ್ ಸ್ವಂತ ಮಣ್ಣಿನ ಆಸಕ್ತಿಯಿಂದ ಉತ್ತಮ ಕೃಷಿಕರೆನಿಸಿಕೊಂಡು ಕೃಷಿಯಲ್ಲಿ ಲಾಭವಿಲ್ಲ ಎನ್ನುವ ಮಾತಿಗೆ ಅರ್ಥವಿಲ್ಲ ಎಂಬುದನ್ನು ತೊರಿಸಿಕೊಟ್ಟಿದ್ದಾರೆ. ಕೃಷಿಯನ್ನೂ ಉದ್ಯಮವೆಂದು ಪರಿಗಣಿಸಿದರೆ ಅಷ್ಟೇ ಆಸ್ಥೆಯಿಂದ ಲೆಕ್ಕಾಚಾರಕ್ಕಿಳಿದು ಕೆಲಸ ಮಾಡಿ ತೊಡಗಿಸಿಕೊಂಡಲ್ಲಿ ಮಣ್ಣು ಕೈಬಿಡದು ಎನ್ನುವುದು ಗಣೇಶ್ ರ ಅನುಭವದಿಂದ ಬಂದ ಮಾತುಗಳು.
ಫೋನ್:  08183207625  -೦೮೧೮೩ ೨೦೭೬೨೫
ಮೊಬೈಲ್: 9449328304 -೯೪೪೯೩೨೮೩೦೪
(ವಿಜಯವಾಣಿಯಲ್ಲಿ ಪ್ರಕಟಿತ)