ಈ ಚಿಗುರುಮೀಸೆ ಹುಡುಗ ಗೆರೆಗಳಮೂಲಕ ಚಕಚಕನೆ ತದ್ರೂಪು ಚಿತ್ರ ಬಿಡಿಸುತ್ತಾನೆ, ರಾಗಿ ಬೀಜ ಬಿತ್ತಿ ಗುಡ್ಡ ಅಕ್ಷರ ಸಹಿತ ಕಲಾಕೃತಿ ರಚಿಸುತ್ತಾನೆ, ಹೀಗೆಲ್ಲಾ ಮಾಡುತ್ತಾನೆ ಎಂದಕೂಡಲೆ ಈತ ಯಾವುದೋ ಚಿತ್ರಶಾಲೆಯಲ್ಲಿ ಕಲಿತು ಬಂದ ಹುಡುಗ ಅಂತ ಅನಿಸಿದರೆ ಅದು ಸುಳ್ಳು, ಗುರುಗಳಿಲ್ಲದೆ ಸ್ವಂತ ಆಸಕ್ತಿಯಿಂದ ಗೆರೆಗಳಮೂಲಕ ಮೋಡಿಮಾಡುವ ಈ ಹುಡುಗ ಹೊನ್ನಾವರ ತಾಲ್ಲೂಕು ಚಂದಾಪುರ ಸಮೀಪ ಹೊಸಾಡು ಗ್ರಾಮದವನು. ಈತನ ಪ್ರತಿಭೆ ಅಚಾನಕ್ಕಾಗಿ ಹೊರಬಂದಿದ್ದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಸಮೀಪ ಬಾನ್ಕುಳಿಯಲ್ಲಿ ಮೆ ೫ ರಿಂದ ೭ ರವರೆಗೆ ನಡೆಯುತ್ತಿರುವ ಶಂಕರಪಂಚಮಿ ಕಾರ್ಯಕ್ರಮದಲ್ಲಿ. ಬಾನ್ಕುಳಿ ಶ್ರೀ ರಾಮಚಂದ್ರಾಪುರ ಮಠದ ಶಾಖೆಯ ಗೊಶಾಲೆಯಲ್ಲಿ ಅರ್ಕ ಹಾಗೂ ಎರೆಗೊಬ್ಬರ ತಯಾರಿಕಾ ಘಟಕದಲ್ಲಿ ಕೆಲಸಕ್ಕೆಂದು ಹೊನ್ನವರದಿಂದ ಬಂದ ಈ ಹುಡಗುನ ಹೆಸರು ಯೋಗೇಶ. ಎಸ್.ಎಸ್.ಎಲ್.ಸಿ ವರೆಗೆ ವಿದ್ಯಾಭ್ಯಾಸ ಮಾಡಿದ ಈತ ಆರ್ಥಿಕ ತೊಂದರೆಯಿಂದ ಮುಂದೆ ಓದಲಿಲ್ಲ. ಆದರೆ ಚಿತ್ರ ಬಿಡಿಸುವ ಹುಚ್ಚು ಬಾಲ್ಯದಿಂದಲೂ ಇತ್ತು. ಬಾನ್ಕುಳಿಯಲ್ಲಿ ಶಂಕರಪಂಚಮಿ ಕಾರ್ಯಕ್ರಮ ನಿಗದಿಯಾದಾಗ ನಾನು ನನ್ನ ಕೊಡುಗೆಯನ್ನು ನೀಡುತ್ತೇನೆ ಎಂದು ಆಡಳಿತದವರನ್ನು ಕೇಳಿಕೊಂq. ಅವರಿಗೂ ಇವನಲ್ಲಿದ್ದ ಪ್ರತಿಭೆ ಎಂತದ್ದು ಎಂದು ತಿಳಿದಿರಲಿಲ್ಲ, ಆದರೂ ಒಪ್ಪಿಗೆ ಕೊಟ್ಟರು. ಕಾರ್ಯಕ್ರಮ ಆರಂಭದ ನಾಲ್ಕುದಿವಸದ ಮುಂಚೆ ಗೋಣಿತಾಟು ರಾಗಿ ಮಣ್ಣು ಸಗಣಿ ಬಳಸಿ ಏನೇನೋ ಮಾಡುತ್ತಿದ್ದ ಈತನನ್ನು ಯಾರೂ ಹೆಚ್ಚು ಗಮನಿಸಲಿಲ್ಲ. ಆದರೆ ಈತ ಗೋಣಿಚೀಲದಲ್ಲಿ ರಾಗಿ ಬೀಜ ಬಿತ್ತಿ ಬಾನ್ಕುಳಿ ಮಠದ ಪ್ರತಿಕೃತಿಯನ್ನು ತಯಾರಿಸಿಟ್ಟಿದ್ದ. ಅಲ್ಲಿ ತಾನು ಇಲ್ಲಿಯವರೆಗೆ ಬಿಡಿಸಿದ್ದ ರೇಖಾಚಿತ್ರಗಳನ್ನು ಪೇರಿಸಿಟ್ಟಿದ್ದ. ಅಲ್ಲಿಯವರೆಗೆ ಸುದ್ದಿಯಲ್ಲಿಲ್ಲದ ಈತ ದಿಡೀರನೇ ಪ್ರಸಿದ್ಧಿಯಾಗಿದ್ದ. ಶಂಕರಪಂಚಮಿ ಕಾರ್ಯಕ್ರಮಕ್ಕೆ ಬಂದ ಸಾರ್ವಜನಿಕರೆಲ್ಲರೂ ಅತ್ಯಂತ ಸಂತೊಷದಿಂದ ಯೋಗೇಶನ ಪ್ರತಿಭೆಯನ್ನು ಹೊಗಳಿದ್ದಾರೆ. ರಾಘವೇಶ್ವರಭಾರತೀ ಸ್ವಾಮಿಗಳು ಯೋಗೇಶನ ಪ್ರತಿಭೆಗೆ ಮೆಚ್ಚಿ ಮಂಗಳವಾರ ಬೃಹತ್ ವೇದಿಕೆಯಲ್ಲಿ ಸನ್ಮಾನ ಮಾಡಿದ್ದಾರೆ. ನಾನು ನನ್ನ ಖುಷಿಗಾಗಿ ಚಿತ್ರ ಬರೆಯುತ್ತೇನೆ, ನಾನು ಯಾರ ಬಳಿಯೂ ಕಲಿತಿಲ್ಲ, ಮೊಬೈಲ್ ನಲ್ಲಿ ಫೋಟೋ ತೆಗೆದುಕೊಮ್ಡು ಅದರಂತೆ ಚಿತ್ರ ಬರೆಯುತ್ತೇನೆ, ಎಂದು ಮುಗ್ದವಾಗಿ ಹೇಳುತ್ತಾನೆ ಯೋಗೇಶ. ನನಗೆ ಶ್ರೀಗಳು ಹುರುದುಂಬಿಸಿದ್ದಾರೆ ಬಂದ ಎಲ್ಲಾ ಜನರು ಬೆನ್ನುತಟ್ಟಿದ್ದಾರೆ ಎನೋ ಒಂಥರಾ ಖುಷಿ ಎನ್ನುತ್ತಾನೆ. ಪ್ರತಿಭೆ ಎನ್ನುವುದು ಸುಪ್ತವಾಗಿರುತ್ತದೆ, ಪ್ರಕಟವಾಗಲು ಸಮಯ ಬರಬೇಕು ಎನ್ನುವುದಕ್ಕೆ ಈ ಕೂಲಿಕಾರ್ಮಿಕ ಯೋಗೇಶನೇ ಸಾಕ್ಷಿ. ಮೊಬೈಲ್: ಯೋಗೇಶ್ 9449488421
2 comments:
ಅಬ್ಬಬ್ಬ!!! ಎಷ್ಟು ದಿನಗಳಾಗಿತ್ತು ನಿಮ್ಮ ಬರಹಗಳಿಲ್ಲದೆ? ನಿಮ್ಮ ಹಳೆಯ ಬ್ಲಾಗ್ ಗಳನ್ನೇ ತಿರುವಿ ಹಾಕ್ತಾ ಇದ್ದೆ(೨೦೧೩,೨೦೧೨,೨೦೧೧ ಹೀಗೆ). ಮತ್ತೆ ಕೊರ್ಟು ಕಛೇರಿ ಅಂತ ಪುರುಸೊತ್ತಿಲ್ದೆ ಇರ್ಬಹ್ದು ಅಂದ್ಕೊನ್ಡೆ.
ಯೋಗೇಶ್ ರಚಿಸಿದ ಕಲಾಕೃತಿಯ ಒಂದು ಚಿತ್ರವನ್ನಾದರೂ ಹಾಕಿದರೆ ಚೆನ್ನಾಗಿತ್ತು.
Post a Comment