Tuesday, May 27, 2008

ಅಪ್ಪಯ್ಯನ ಗಾಯಿತ್ರಿ ಮಂತ್ರ ಮತ್ತು ನನ್ನ ಅಬದ್ಧ ಪ್ರಲಾಪ


ಕೆಲಸ ಮಾಡಿ ಕೆಟ್ಟೊರಿಲ್ಲ, ಕೂತು ಹಾಳೋದೋರು ಇಲ್ಲ ಹಾಗೆಯೇ ಸಂಧ್ಯಾವಂದನೆ ಮಾಡಿ ಹಾಳೋದವರಿಲ್ಲ, ಮಾಡದೇ ಕೆಟ್ಟು ಹೋದೋರು ಇಲ್ಲ. ದೇವರು ಕೆಲಸ ಜಪತಪ ಪೂಜೆ ಅವೆಲ್ಲಾ ಅವರವರಿಗೆ ಬಿಟ್ಟಿದ್ದು. 78 ವರ್ಷದ ನನ್ನ ಅಪ್ಪಯ್ಯ ಮಾತ್ರಾ ನನಗೆ ಬುದ್ದಿ ಬಲ್ಲಾದಲ್ಲಿಂದ ಬೆಳಿಗ್ಗೆ ಆರು ಗಂಟೆಗೆ ಎದ್ದು ಕಾಫಿ ಕುಡಿದು ಒಂದು ಕವಳ ಹಾಕಿ ನಂತರ ಖುಷಿ ಖುಷಿಯಾದ ನಾಲ್ಕು ಮಾತಾಡಿ ಸ್ನಾನಕ್ಕೆ ಹೋಗುತ್ತಾರೆ. ಅನಾಮತ್ತು ಎರಡು ತಾಸು ಪೂಜೆ ಜಪ ತಪದ ನಂತರ ಗರಂ ಆಗುತ್ತಾರೆ. ಆವಾಗ ಬೆಳ್ಳಣ್ಣೆಯ ಶಂಭುಲಿಂಗೇಶ್ವರ ನ ಮುಖಭಾವ ಅವರದ್ದು. ಮತ್ತೆ ಸರಳಆಗಬೇಕು ಅಂದರೆ ಮಧ್ಯಾಹ್ನ ಊಟ ಮಾಡಿ ಮಲಗೇಳಬೇಕು. ಅವರ ಆ ಗರಂ ವರ್ತನೆಗೆ ಎರಡು ತಾಸಿನ ಪೂಜೆಯೇ ಕಾರಣ ಅಂತ ಅವರ ಐದೂ ಮಕ್ಕಳಾದ ನಮ್ಮೆಲ್ಲರ ಒಟ್ಟೂ ಅಭಿಮತ, ಗಾಯಿತ್ರಿ ಜಪದಿಂದ ಶಕ್ತಿ ಬರುತ್ತದೆ ಅಂತ ಎಲ್ಲರ ಆಂಬೋಣ . ಆದರೆ ಶಕ್ತಿ ಬರುತ್ತದೆ ಅಂತ ನಂಬಿಕೊಂಡವರ ಮುಖವಂತೂ ಖಂಡಿತಾ ಘನಗಂಬೀರವಾಗುತ್ತದೆ. ಇವತ್ತು 108 ಗಾಯಿತ್ರಿ ಜಪ 216 ಅಷ್ಟಾಕ್ಷರಿ ಜಪ 432 ಪಂಚಾಕ್ಷರಿ ಜಪ ನನ್ನಿಂದ ಮಾಡಲ್ಪಟ್ಟಿದೆ ಹಾಗಾಗಿ ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆ ಆಳವಾಗಿ ಕುಳಿತುಕೊಂಡಿತು ಎಂದರೆ ಕಣ್ಣು ಮುಖ ಹಾಗೂ ವರ್ತನೆಗಳಲ್ಲಿ ಸ್ವಾಭಿಮಾನ ತುಂಬಿ ತುಳುಕಾಡುತ್ತದೆ. ಅರ್ದ ಜನ ಆ ಮುಖಭಾವಕ್ಕೆ ಬೀಳುತ್ತಾರೆ. ಇನ್ನರ್ಧ ಜನ ಲೆಕ್ಕಕ್ಕೆ ಇಲ್ಲ ಜಮಾಕ್ಕೂ ಇಲ್ಲ. ಈ ಮೇಲಿನ ಫೋಟೊ ಪೂಜೆ ಮುಗಿಸಿ ಸಾಗರಕ್ಕೆ ಹೊರಟಾಗ ತೆಗದದ್ದು. ಕವಳ ಬಾಯಲ್ಲಿ ತುಂಬಿದ್ದರೂ ಅದೇನು ಗತ್ತು ನೋಡಿ. ಬಿ.ಪಿ ಇಲ್ಲ ಷುಗರ್ ಇಲ್ಲ ದೇಹಕ್ಕೆ ೮೦ ರ ಸನಿಹದ ವಯಸು ಮನಸ್ಸಿಗೆ ೨೦ ಲವಲವಿಕೆಯ ವಯಸು. ರಾತ್ರಿ 3 ಗಂಟೆಗೆ ತಿರುಗಾಟದಿಂದ ಬಂದು ಮಲಗಿದರೂ ಬೆಳಿಗ್ಗೆ 6 ಗಂಟೆಗೆ ಎದ್ದು ಪೂಜೆ ಜಪ ತಪ ತಪ್ಪಿಸುವಂತಿಲ್ಲ. ೧೦ ಗಂಟೆಗೆ ಮತ್ತೆ ತಾಳಗುಪ್ಪಕ್ಕೆ ಒಂದು ರೌಂಡ್ ಹೊರಡಲು ರೆಡಿ. 40 ರ ಹರೆಯದ ನಾನು ಸುಸ್ತಾಗಿದ್ದೇನೆ. ಅಪ್ಪಯ್ಯನನ್ನು ಅವರ ಉತ್ಸಾಹಕ್ಕೆ ತಕ್ಕಂತೆ ತಿರುಗಾಡಿಸಲು ಆಗುತ್ತಿಲ್ಲ. ನಮಗೆ ಜೀವನೋತ್ಸಾಹ ಅಷ್ಟೊಂದು ಇಲ್ಲ.
ಅಪ್ಪಯ್ಯನ ಈ ಜೀವನೋತ್ಸಾಹಕ್ಕೆ ಗಾಯಿತ್ರಿ ಜಪವೇ ಕಾರಣವೆ.? ಎಂಬ ಪ್ರಶ್ನೆ ಕಾಡುತ್ತದೆ. ನಮ್ಮಗಳ ಗೊಡ್ಡು ಅಹಂಕಾರದಿಂದ ಹಾಗೆಲ್ಲಾ ಪ್ರಶ್ನೆ. ಆದರೆ ವಾಸ್ತವವೆಂದರೆ "ಅಯ್ಯೋ ಮಂಕೆ ದಾಸರು ಹೇಳಿದ್ದಾರೆ ನಂಬಿಕೆಟ್ಟವರಿಲ್ಲವೋ... ಎಂದು ಹಾಗಾಗಿ ನಂಬು, ಕೊಂಕದೆ ಕೊನಲದೆ ನಂಬು ಆವಾಗ ಎಲ್ಲಾ ಉತ್ಸಾಹಗಳೂ ಪುಟಿದೇಳುತ್ತದೆ. ನಂಬದಿದ್ದರೆ ಗೊಂದಲದ ಗೂಡಾಗುತ್ತದೆ. ಆಮೇಲೆ ದೇಹ ಲಡ್ಡಾದ ನಂತರ ಅನಿವಾರ್ಯವಾಗಿ ನಂಬಲು ತೊಡಗುತ್ತದೆ. " ಎನ್ನುತ್ತದೆ ಒಳಮನಸ್ಸು.
ಸ್ನಾನ ಮಾಡುವಾಗ "ಏನಾದರಾಗಲಿ ಇವತ್ತಿನಿಂದ ನಾನೂ ಸಂದ್ಯಾವಂದನೆ ಮಾಡಬೇಕು ಅಂತ ಮನಸ್ಸು ತೀರ್ಮಾನಿಸಿದ ಮರಕ್ಷಣದಿಂದ ಗಾಯಿತ್ರಿಜಪ ಮಾಡುವಾಗಲೂ ಒಂದೇ ಪ್ರಶ್ನೆ " ಇವೆಲ್ಲಾ ಸತ್ಯವಾ? ಇವೆಲ್ಲ ಅವಶ್ಯಕತೆ ಇದೆಯಾ?" ಕಳ್ಳ ಮನಸ್ಸುಇದು ಮಾಡಿದರೆ ಒಂದು ಮಾಡದಿದ್ದರೆ ಮತ್ತೊಂದು. ಆ ಪ್ರಶ್ನೆ ಏಳದೆ ಇದ್ದವರು ಸುಖಿಗಳು. ಪ್ರಶ್ನೆ ಎದ್ದೂ ನಗಣ್ಯ ಪ್ರಶ್ನೆಯನ್ನು ಮಾಡಿದವರು ಮದ್ಯಮವಂತರು. ಪ್ರಶ್ನೆಗೆ ಉತ್ತರ ಹುಡುಕಿತ್ತೀನಿ ಎಂದು ಪ್ರಾರ್ಥನೆಗಳನ್ನು ನಿಲ್ಲಿಸುವವರು ಗ್ರಹಚಾರವಂತರು. ನಾನಂತೂ ಮೂರನೆಯದು ಮುಗಿಸಿ ಎರಡನೆಯ ಹಂತಕ್ಕೆ ಏರಿದ್ದೇನೆ.

1 comment:

Anonymous said...

108 ಗಾಯಿತ್ರಿ ಜಪ 216 ಅಷ್ಟಾಕ್ಷರಿ ಜಪ 432 ಪಂಚಾಕ್ಷರಿ ಜಪ

ಇವೆಲ್ಲ ಅರ್ಥ ತಿಳಿದುಕೊ೦ಡು ಮಾಡಿದರೆ ಏನೋ ಪ್ರಯೋಜನವಾದೀತು.. ಇಲ್ಲದಿದ್ದಲ್ಲಿ ಸ೦ಸ್ಕೃತಿ ನಮ್ಮ ನಾಲಿಗೆ ಕ್ಲೀನ್ ಮಾಡತ್ತೆ ಅನ್ನೋ ಭಾವನೆಯಲ್ಲೇ ಇರಬೇಕಾಗತ್ತೆ. ಅಲ್ಲ ಸ೦ಸ್ಕೃತ ಏನು ಹಲ್ಲುಪುಡಿನ.. ನಾಲಿಗೆ ಶುದ್ಧಿ ಮಾಡಕ್ಕೆ ?