Friday, August 15, 2008

ಗೋಪಿ ಹಕ್ಕಿಯ ಸುಮಧುರಗಾನ


"ಏಳು ನಾರಾಯಣನೆ...ಏಳು ಲಕ್ಷ್ಮೀರಮಣ...ಏಳು ಶ್ರೀಗಿರಿವಾಸ .. ಏಳು ಏಳೂ. ಕಾಸಿದ ಹಾಲನ್ನು ಕಾವಡಿಯಲಿ ಹೆಪ್ಪಿಟ್ಟು ಲೇಸಾಗಿ ಹೊಸ ಬೆಣ್ಣೆ ಕಡೆದೂ.... " ಹೀಗೆಯೇ ಇರಬೇಕು ಅಮ್ಮನ ಹಾಡು ಮುಂದುವರೆಯುತ್ತಿತ್ತು. ಹಾಡಿನ ಲಯಕ್ಕೆ ಮಜ್ಜಿಗೆ ಕಡೆಯುವ ಗರಗರ ಸದ್ದು . ಶೃತಿಗೆ ಸಿಳ್ಳೆ ಹೊಡೆಯುವ ಗೋಪಿ ಹಕ್ಕಿ. ಸಮಯ ಬೆಳಗ್ಗೆ ಐದೂವರೆ. ನಾನು ಮಜ್ಜಿಗೆ ಕಡೆಯುವ ಕಡಗಲಿನ ಬುರುಡೆಯ ಮೇಲೆ ಅಂಗೈಯನ್ನಿಟ್ಟು ಅದೇನೋ ಹಿತವನ್ನು ಅನುಭವಿಸುತ್ತಿದ್ದೆ. ಇವೆಲ್ಲಾ ಸರಿ ಸುಮಾರು ಮೂವತ್ತು ವರ್ಷದ ಹಿಂದಿನ ಘಟನೆ. ಹೀಗೆ ನನ್ನ ಬೆಳಗು ಆರಂಭವಾಗುತ್ತಿತ್ತು.
ಮೊನ್ನೆ ಸುಮಾರು ಹದಿನೈದು ದಿವಸ ಕರೆಂಟು ಇರಲಿಲ್ಲ. ಹಾಗಾಗಿ ಅಮ್ಮ ಮಜ್ಜಿಗೆ ಕಡೆಯಲು ಅಟ್ಟ ಸೇರಿದ್ದ ಕಡಗಲನ್ನು ಇಳಿಸಿ ತಂದಿದ್ದಳು. ಕರೆಂಟಿಲ್ಲದ ಕಾರಣ ಲಯವಿಲ್ಲದೇ ಕೇವಲ ಗರ್.......... ಎಂದು ಒಂದೇ ಸವನೆ ತಲೆಚಿಟ್ಟುಹಿಡಿಸುವಂತಹ ಶಬ್ಧದ ದ ಮೋಟಾರ್ ಗೆ ರಜ. ಚಿತ್ತಾರದ ಬುರುಡೆಹೊಂದಿರುವ ಮೊಳ ಉದ್ದದ ಕಡಗಲಿಗೆ ಹಗ್ಗ ಹಾಕಿ ಮೊಸರಿನ ಪಾತ್ರೆಯೊಳಗೆ ಇಳಿಬಿಟ್ಟು ಚಕ್ಕಳಮಕ್ಕಳ ಹಾಕಿ ಕುಳಿತ ಅಮ್ಮ ಅವಳಿಗೆ ತಿಳಿಯದಂತೆ ಮೂವತ್ತು ವರ್ಷ ಹಿಂದಕ್ಕೆ ಹೋಗಿದ್ದಳು. ಮಜ್ಜಿಗೆ ಕಡೆಯುವಾಗಿನ ಅದೇ ಹಾಡು ಗುಣುಗುಣಿಸುತ್ತಿದ್ದಳು. ಆದರೆ ಗಂಟೆ ಎಂಟಾದ್ದರಿಂದ ಗೋಪಿ ಹಕ್ಕಿಯ ಸಿಳ್ಳೆಯ ಶೃತಿ ಇರಲಿಲ್ಲ.
ಹಾ ಹೌದು ಈ ಸುಶ್ರಾವ್ಯವಾಗೆ ಚುಮು ಚುಮು ಬೆಳಕಿನಲ್ಲಿ ಸಿಳ್ಳೆ ಹೊಡೆಯುವ ಈ ಗೋಪಿ ಹಕ್ಕಿ ಎಂದು ಅಮ್ಮ ಹೇಳಿದ್ದುಬಿಟ್ಟರೆ ಅದರ ಹೆಸರನ್ನು ನಾನು ಇಲ್ಲಿಯವರೆಗೆ ಎಲ್ಲಿಯೂ ಕೇಳಿಲ್ಲ. ಪಕ್ಷಿ ತಜ್ಞ ಸಲೀಂ ಆಲಿಗೆ ಕೇಳಿದ್ದರೆ ವಿವರವಾಗಿ ಹೇಳುತ್ತಿದ್ದರೇನೋ. ಆದರೆ ನಾನು ಹೆಸರನ್ನು ಕೇಳಲಿ ಬಿಡಲಿ ಅದಂತೂ ಸುಮಧುರವಾಗಿ ಇಂದಿಗೂ ಬೆಳಗಿನ ಜಾವ ಸಿಳ್ಳೆಹೊಡೆಯುತ್ತಲೇ ಇರುತ್ತದೆ. ಮೂವತ್ತು ವರ್ಷದ ಹಿಂದಿನ ಹಕ್ಕಿಯ ಮೊಮ್ಮಗನೋ ಮರಿಮಗನೋ ಅಥವಾ ಳೋ ಇರಬೇಕು. ಅದೆಂತಾ ಸೂಪರ್ ಸ್ವರ ಅದರಿದ್ದು. ಜತೆಗೆ ಮಜ್ಜಿಗೆಯ ಗರ್ ಗರಾ ಗರ್ ಗರಾ ಹಾಗೂ ಏಳು ನಾರಾಯಣನೇ ಎಂಬ ಹೆಚ್ಚು ಕಮ್ಮಿ ಗೋಪಿ ಹಕ್ಕಿಯ ಸ್ವರದಂತಯೇ ಇದ್ದ ಅಮ್ಮನ ದನಿಯಲ್ಲಿನ ಹಾಡು. ಆಹಾ ಎಂತಾ ಮಧುರಾ ಯಾತನೆ..? ಅಂತ ಅನ್ನಬಹುದು ಈಗ.
ತಂತ್ರಜ್ಞಾನ ಮುಂದುವರೆದಂತೆ ನಾವು ಇಂತಹ ಮಧುರ ನೆನಪುಗಳನ್ನು ಕಳೆದುಕೊಳ್ಳುತ್ತೇವೆ. ಅಥವಾ ತಂತ್ರಜ್ಞಾನ ಮುಂದುವರೆದಿದ್ದರಿಂದ ಅವೆಲ್ಲಾ ಮಧುರ ಅಂತ ಅನ್ನಿಸಿರಬಹುದು ಅಂತಲೂ ಅನಬಹುದು. ಈಗ ಅಮ್ಮನಿಗೆ ಎಪ್ಪತ್ನಾಲ್ಕು ವಯಸ್ಸಾಗಿದೆ. ಮಜ್ಜಿಗೆ ಕಡೆಯುವ ನೀರು ಸೇದುವ ಕೆಲಸ ಆವು ಸುಲಭಮಾಡಿದ್ದೇವೆ. ಹಾಗಾಗಿ ಬಿ.ಪಿ ಗಂಟು ನೋವು ಶಾಶ್ವತವಾಗಿದೆ. ಆದರೆ ಮೊನ್ನೆ ಕರೆಂಟ್ ಹೋದ ವಾರಗಳಲ್ಲಿ ಕಡಗಲಿನಿಂದ ಮಜ್ಜಿಗೆ ಕಡೆದು ಹಾಡನ್ನು ಗುಣುಗುಣಿಸಿ ಒಳ್ಳೆಯ ಲಹರಿಯಲ್ಲಿದ್ದಳು. ಬಹುಶಃ ಹಳೆಯ ನೆನಪು ಬಂದಿರಬೇಕು. ಅಥವಾ ದೇಹ ಸ್ವಲ್ಪ ವ್ಯಾಯಾಮದಿಂದ ಲಹರಿಗೆ ಬಂತೋ. ಏನೇ ಇರಲಿ ಕರೆಂಟ್ ಹೀಗೆ ಕೈಕೊಟ್ಟರೂ ಒಳ್ಳೆಯದೇ ಅಂತ ಅನ್ನಿಸಿದ್ದು ಸುಳ್ಳಲ್ಲ.
ಕೊನೆಯದಾಗಿ: ಇಂದಿನ ತಂತ್ರಜ್ಞಾನ ಅಂದಿನ ಮನಸ್ಥಿತಿ ಇದ್ದರೆ ಸ್ವರ್ಗ ಧರೆಗಿಳಿಸಬಹುದು ಎನ್ನುತ್ತಾರೆ ನಮ್ಮ ಆನಂದರಾಮಶಾಸ್ತ್ರಿಗಳು. ಅದು ನಿಜ ಅಂತ ನನಗೂ ಅನ್ನಿಸಿದೆ.

1 comment:

Ramya said...

Raghu mava,

Technology and mindset bagge neenu helidu correct.

But your this post took me back to my kadvinamane days where we used to wait for ajji to finish her duty and place a small portion of Butter on Kadgoolu so that as soon as she is gone we used to steal it and when ajji asks we used to say Kadgollu ate that Butter...

Good old days waiting get back there....