Friday, August 15, 2008

ಸಾಗಿ ಮುಂದೆ ಹೆಣ್ಣುಹುಡ್ರ ಹಿಂದೆಆಗಸ್ಟ್ ಹದಿನೈದು ಎಂದರೆ ನಮಗೆ ಗಿಜಿಗಿಜಿ ಮಳೆಗಾಲ. ಶಾಲೆಗೆ ಹೋಗುವ ಮಕ್ಕಳಿಗೆ ಸ್ವಾತಂತ್ರೋತ್ಸವ. ಪಾಪ ಮಲೆನಾಡಿನ ಮಕ್ಕಳು ಬ್ರಿಟೀಷರನ್ನು ಇದೊಂದೇ ಕಾರಣಕ್ಕೆ ಶಪಿಸುತ್ತಾರೆ. ಅಕ್ಟೋಬರ್ ತಿಂಗಳಿಅಲ್ಲಾದರೂ ಅವರು ಬಿಟ್ಟು ಹೋಗಿದ್ದರೆ ಬಿಳಿ ಅಂಗಿಯನ್ನು ಕೆಸರಾಗದಂತೆ ಕಾಪಾಡಿಕೊಳ್ಳುವುದು, ಪ್ರಭಾತ್ಪೇರಿಯಲ್ಲಿ ಸೊಯಕ್ ಅಂತ ಜಾರಿ ಬಿದ್ದು ನಗೆಪಾಟಲಿಗೀಡಾಗುವುದು ತಪ್ಪುತ್ತಿತ್ತಲ್ಲ ಎಂದು ಅವರ ಕೊರಗು. ಹಿರಿಯರು ಎಂಬ ಹಿರಿಯರು ಅಂದು ಬಂದು ತಾಸುಗಟ್ಟಲೆ ಸರ್ವ ತಂತ್ರ ಸ್ವತಂತ್ರ್ಯದ ಬಗ್ಗೆ ಕೊರೆಯುವುದು ಅರ್ಥವಾಗದಿದ್ದರೂ ಸಹಿಸಿಕೊಳ್ಳಬಹುದು ಕಾರಣ ಕೊರೆತ ಮುಗಿದ ತಕ್ಷಣ ಚಾಕೊಲೇಟ್ ಇದೆ. ಆದರೆ ಜಾರಿಬಿದ್ದು ಬಿಳಿಬಟ್ಟೆ ಕೆಂಪಗಾದರೆ,ಎಳೇ ಕೈ ಲಟಕ್ ಎಂದರೆ ಬೆಳಿಗ್ಗೆ ಬೆಳಿಗ್ಗೆ ಅನುಭವಿಸಿದ ಸ್ವಾತಂತ್ರ್ಯದ ಬಗೆಗಿನ ಭಾಷಣ ಮನೆಗೆ ಹೋಗುವಷ್ಟರಲ್ಲಿ ಮಾಯವಾಗುತ್ತಲ್ಲ ಎಂಬ ಕೊರಗು ಅವರದ್ದು. ಇರಲಿ ಬಂತಲ್ಲ ಯಾವತ್ತಾದರೇನು ಅಂಬ ನಿರುಮ್ಮಳ ಭಾವಕ್ಕೆ ಇಳಿಯುವುದು ಅನಿವಾರ್ಯ. ಈ ತರಹ ಸರ್ಕಾರಿ ಹಬ್ಬಗಳನ್ನು ನಾವು ಹಾಗೂ ನೀವೂ ಸಣ್ಣಕ್ಕಿದ್ದಾಗ ಆಚರಿಸಿದ್ದೇವೆ. ಇಂದೂ ಆಚರಿಸುತ್ತಿದ್ದಾರೆ ಮುಂದೂ ಆಚರಿಸುತ್ತಾರೆ, ಅರ್ಥ ಯಾರಿಗೆ ಎಷ್ಟೆಷ್ಟೋ ಭಗವಂತನೇ ಬಲ್ಲ. ಬೋಲೋ ಭಾರತ್ ಮಾತಾಕಿ............... ಜೈ, ವಂದೇ.......... ಮಾತರಂ, ಸಾಗಿ ಮುಂದೆ ............ ಭಾರತೀಯರ ಹಿಂದೆ, ಮುಂತಾದ ಘೋಷಣೆಯನ್ನು ಕೂಗುತ್ತಾ ಸಾಗುವ ಪ್ರಭಾತ್ ಪೇರಿಯ ಮಜ ಅಂದಿನಿಂದಲೂ ಇದೆ. ಇಂದೂ ಇದೆ. ಅದರ ಜತೆ ಜತೆಯಲ್ಲಿ ತಲೆಮಾರಿನಿಂದ ತಲೆಮಾರಿಗೆ ಒಂದಷ್ಟು ಕಳ್ಳ ಘೋಷಣೆಗಳು ಅದು ಹೇಗೋ ಉಳಿದುಕೊಂಡು ಬಂದಿವೆ. ನನಗೆ ಆಶ್ಚರ್ಯ ವಾಗುವುದು ಅಲ್ಲಿಯೇ. ಇಂದು ಬೆಳಿಗ್ಗೆ ಸಾಲಾಗಿ ಮಕ್ಕಳು ಘೋಷಣೆ ಕೂಗುತ್ತಾ ಹೊರಟಿದ್ದರು. ಒಬ್ಬಾತ ವಂದೇ ಅಂತ ಗಂಟಲುಅರ ಕಿತ್ತುಬರುವಂತೆ ಕೂಗುತ್ತಿದ್ದ ಉಳಿದ ಮಕ್ಕಳೆಲ್ಲರೂ ಮಾತರಂ ಅನುತ್ತಿದ್ದರು. ನನ್ನ ಪಕ್ಕದಲ್ಲಿ ನಿಂತಿದ್ದ ಹುಡುಗನೊಬ್ಬ ಮಾತ್ರಾ ವಂದೇ ಅಂದಕೂಡಲೇ ಮಾಸ್ತರಂ. ಅನ್ನುತ್ತಿದ್ದ. ಉಳಿದ ಮೂರ್ನಾಲ್ಕು ಹುಡುಗರು ಕಿಸಕ್ಕನೆ ನಗುತ್ತಿದ್ದರು.(ನಮ್ಮ ಶಾಲೆಯಲ್ಲಿ ಒಬ್ಬರೇ ಮಾಸ್ತರಾದ್ದರಿಂದ ಅದಕ್ಕೆ ಮಹತ್ವ). ನಾವೂ ಸಣ್ಣಕ್ಕಿದ್ದಾಗ ಹಾಗೆಯೇ ಚಾಲ್ತಿಯಲ್ಲಿತ್ತು. ಬೋಲೋ ಭಾರತ್ ಮಾತಾಕಿ ಎಂದು ಒಬ್ಬಾತ ಅರಚಿ ಅದಕ್ಕೆ ಮಿಕ್ಕೆಲ್ಲರೂ ಜೈ ಎಂದರೆ ಆ ನೂರಾರು ದನಿಯ ಸಂದಿಯಲ್ಲಿ ಜಗದೀಶ ಎಂಬೊಬ್ಬ ಹುಡುಗ ಇಂದಿರಾಗಾಂಧಿ ನೇತಾಕಿ ಅನ್ನುತ್ತಿದ್ದ. ನಾವು ಅರ್ಥಗೊತ್ತಿಲ್ಲದಿದ್ದರೂ ಕಿಸಕ್ಕನೆ ನಗುತ್ತಿದ್ದೆವು. ಸಾಗಿ ಮುಂದೆ ಎಂದರೆ ಭಾರತೀಯರ ಹಿಂದೆ ಎಂದು ಉಳಿದವರು ಕೂಗಿದರೆ ಜಗದೀಶ ಹೆಣ್ಣುಹುಡ್ರ ಹಿಂದೆ ಎನ್ನುತ್ತಿದ್ದ. ಕೌಮೇತಿ ರಂಗೆ ಜಂಡೆ ನಮ್ಮ ಮೇಷ್ಟ್ರ ಹೆಂಡ್ತಿ ಮುಂಡೆ, ಹೀಗೆ ಹತ್ತಾರು ಅಬದ್ಧ ಸಾಲುಗಳು ಅವನಿಗೆ ಬಾಯಿಪಾಠ . ಇವತ್ತು ಅದೇ ರೀತಿ ಹುಡುಗನೊಬ್ಬ ಪ್ರಾಸಬದ್ಧವಾಗಿ ಹೇಳುತ್ತಿದ್ದ ಉಳಿದವರು ಯಥಾಪ್ರಕಾರ ಕಿಸಕ್ಕನೆ..... ಪ್ರಾಥಮಿಕ ಶಾಲೆಯ ವಯಸ್ಸಿನ ಮಕ್ಕಳಿಗೆ ಸ್ವಾತಂತ್ರ್ಯ ಎಂದರೆ ಒಟ್ಟಿನಲ್ಲಿ ಒಂದು ಹಬ್ಬ. ದೊಡ್ಡವರಿಗೆ ಮನೆಯಲ್ಲಿ ರಜಾದ ನಿದ್ರೆ . ಇವೆಲ್ಲಾ ಅಂದು ಇಂದು ಮುಂದೂ ಹೀಗೆ. ಆಯಾ ವಯಸ್ಸಿಗೆ ತಕ್ಕಂತೆ ಸಾಗುತ್ತಲಿರುತ್ತದೆ ಪ್ರಪಂಚ.

ಕೊನೆಯದಾಗಿ: ಇಂದು ಬ್ರಿಟೀಷರು ನಮ್ಮನ್ನು ತೊರೆದು ಹೋದ ದಿನ. ನನಗೆ ಒಮ್ಮೊಮ್ಮೆ ಅನಿಸುತ್ತದೆ ಅವರು ಇದ್ದಿದ್ದರೆ ಚೆನ್ನಿತ್ತೇನೋ......ಎನಿ ವೆ ಹ್ಯಾಪಿ ಇಂಡಿಪೆಂಡೆನ್ಸ್ ಡೆ.

2 comments:

Harish - ಹರೀಶ said...

>> ನನಗೆ ಒಮ್ಮೊಮ್ಮೆ ಅನಿಸುತ್ತದೆ ಅವರು ಇದ್ದಿದ್ದರೆ ಚೆನ್ನಿತ್ತೇನೋ

ಯಾಕೋಪ್ಪಾ ಒಂದೊಂದ್ಸಲ ನಂಗೂ ಹಂಗೇ ಅನ್ಸುತ್ತೆ!

shreeshum said...

harish

yes idu bahala janara abhipraya
thanks