Saturday, August 16, 2008

ಇಂದ್ರನ ಝಾಪು - ಮಹೀಂದ್ರಾ ಜೀಪು


ನೂರೋ ನೂರೈವತ್ತೋ ಎಕರೆ ಕಾಫಿ ಎಸ್ಟೇಟ್, ಅದರಲ್ಲಿ ಅಡಿಕೆ, ಕಾಳುಮೆಣಸು ಮುಂತಾದ ಸಮೃದ್ಧ ಬೆಳೆ. ತೋಟದ ನಡುವೆ ಒಂದು ಮನೆ. ಎಸ್ಟೇಟ್ ಗುಡ್ಡ ಸುತ್ತಲು ಕೆಂಪು ಮಣ್ಣಿನಬಳಸುದಾರಿ, ಆರೋಗ್ಯವಂತ ಶರೀರ ಮತ್ತು ವಿಶಾಲ ಮನಸ್ಸು ಜತೆಯಲ್ಲಿ ಸಣ್ಣ ಸಂಸಾರ ಇಷ್ಟಿದ್ದಾಗ ಆಹಾ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಆನಂದರಾಮ. ಆದರೆ ಒಂದೇ ಒಂದು ಐಟಮ್ ಇಂತಹ ಜೀವನಕ್ಕೆ ರಂಗೇರಲು ಬಿಟ್ಟಿರಲ್ಲ ಎಂದು ನೀವು ಹೇಳಬಹುದು. ಹೌದು ಅದನ್ನೇ ನಾನು ಹೇಳಹೊರಟಿರುವುದು. ಸ್ವರ್ಗ ಲೋಕದ ದೊರೆ ಇಂದ್ರದೇವನ ಝಾಪಿನ ಜೀಪು ಮಹೀಂದ್ರ. ಫೋರ್ ವೀಲ್ ಡ್ರೈವ್, ಲಾಂಗ್ ಡ್ರೈವ್ ಗೆ ಎ.ಸಿ. ಅಬ್ಬಾ ಅದರಲ್ಲಿ ಹತ್ತಿ ಕುಳಿತು ಕೇವಲ ಎಸ್ಟೇಟ್ ಸುತ್ತುವುದೇನು ಪ್ರಪಂಚವನ್ನೇ ಸುತ್ತಬಹುದು. ಇಂದು ನೂರಾರು ತರಹದ ವಾಹನ ನಮ್ಮ ದೇಶಕ್ಕೆ ಬಂದಿರಬಹುದು. ಆದರೆ ನಮ್ಮ ರೈತಾಪಿ ಜೀವನಕ್ಕೆ ಮಹಿಂದ್ರಾ ಮುಂದೆ ಸಾಟಿಯಿಲ್ಲ. ಈಗ ಇದನ್ನು ಬರೆಯಲು ಪ್ರೇರಣೆಯಾದ ಕತೆ ಹೇಳುತ್ತೇನೆ ಕೇಳಿ.
ನಮ್ಮ ಹಿರಿಯಣ್ಣ ಮಧುಸೂದನ ಪೆಜತ್ತಾಯರು ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊಳೆಯವರು. ಅಲ್ಲಿ ಅವರು ಹಿಂದೆ ನಾನು ಹೇಳಿದಂತೆ ರಾಯಲ್ ಜೀವನ ಸಾಗಿಸಿದವರು( ಪ್ರಸ್ತುತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಸೇರಿ, ಅಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ನಮ್ಮ ಕಟ್ಟೆ ಪ್ರಕಾಶನದ ಮೂಲಕ ಅವರೇ ಅಷ್ಟೂ ಖರ್ಚನ್ನು ಭರಿಸಿ, ನಮ್ಮ ರಕ್ಷಕ ರಕ್ಷಾ ಹಾಗೂ ಕಾಗದದ ದೋಣಿ ಎಂಬ ಎರಡು ಪುಸ್ತಕ ಹೊರತರುತ್ತಿದ್ದಾರೆ, ನಮ್ಮ ತಲವಾಟ ಶಾಲೆಗೆ ಕಂಪ್ಯೂಟರ್ ಕೊಟ್ಟಿದ್ದಾರೆ- ಅವರ ಋಣ ನಾವು ತೀರಿಸಲಾಗದು ಅದರ ಕತೆ ಮುಂದೆ ಎಂದಾದರೊಂದು ದಿನ ಓದೋಣ) ಅವರ ಎಸ್ಟೇಟ್ನಲ್ಲಿ ಸಿನೆಮಾದ ಹೀರೋ ಜೀವನ ನಡೆಸಿದಂತೆ ಡಬಲ್ ಬ್ಯಾರಲ್ ಗನ್, ಪಿಸ್ತೂಲ್ ಗತ್ತಿನ ಮಹಿಂದ್ರಾ ಜೀಪ್ ಮುಂತಾದವುಗಳನ್ನಿಟ್ಟುಕೊಂಡು ಹಾಗೂ ಅವೆಲ್ಲಾ ಸಕಲ ಸೌಕರ್ಯ ಇದ್ದರೂ ಪಕ್ಕಾ ಮಣ್ಣಿನ ಮಗನಂತೆ ಬಾಳಿ ರೈತರ ಎಲ್ಲಾ ನೋವುಗಳನೂ ಅನುಭವಿಸಿ ಗೌರವಯುತ ರೈತನಾಗಿ ಇಂದಿಗೂ ಜೀವನ ಸಾಗಿಸುತ್ತಿದ್ದಾರೆ. ಕಾಲ ನಿಲ್ಲದಲ್ಲ ಪೆಜತ್ತಾಯರ ಮನಸ್ಸು ಇಪ್ಪತ್ತರ ಹರೆಯದಲ್ಲಿದ್ದರೂ ಈಗ ಅವರ ದೇಹ ಸ್ವಲ್ಪ ನಂಡಾಗಿದೆ ಹಾಗಾಗಿ ಈಗ ನನಗೆ ಜೀಪು ಹತ್ತಿ ಓಡಾಡಬಾರದು ಎಂದಿದ್ದಾರೆ, ನಾನು ಅತಿಯಾಗಿ ಪ್ರೀತಿಸುತ್ತಿದ್ದ ಜೀಪನ್ನು ಇಲ್ಲಿಯವರೆಗೂ ಜತನವಾಗಿ ಕಾಪಾಡಿಕೊಂಡು ಬಂದಿದ್ದೇನೆ, ಈ ಬೆಂಗಳೂರಿನ ಲ್ಲಿ ಈಗ ಅದನ್ನು ನಿಲ್ಲಿಸಲೂ ಜಾಗ ಇಲ್ಲ, ಹಾಗಾಗಿ ಅನಿವಾರ್ಯವಾಗಿ ಕೊಡುತ್ತೇನೆ ಎಂದು ಫೋನಾಯಿಸಿದರು. ಅದೇ ಬೇಸರದ ಸಂಗತಿ, ಹಲವು ಬಾರಿ ಈ ಮನುಷ್ಯ ನಿರ್ಮಿತ ಯಂತ್ರಗಳು ನಮ್ಮ ಸಹವರ್ತಿಯಾಗಿಬಿಡುತ್ತವೆ. ಅದನ್ನು ನಾವು ಒಂದು ಜೀವಿಯೆಂಬಂತೆ ಪ್ರೀತಿಸತೊಡಗುತ್ತೇವೆ. ಅದೊಂದು ವಸ್ತು ಎಂದು ನಮಗೆ ಅನ್ನಿಸುವುದಿಲ್ಲ. ಆದರೆ ಪರಿಸ್ಥಿತಿ ನಮ್ಮನ್ನು ಅದರಿಂದ ನಮ್ಮನ್ನು ದೂರಮಾಡುತ್ತದೆ. ಆವಾಗಿನ ನೋವು ಅನಿರ್ವಚನೀಯ. ಅದು ಮೊಬೈಲ್ ಇರಬಹುದು ಅಥವಾ ಮಜ್ಜಿಗೆ ಕಡೆಯುವ ಮಿಷನ್ ಇರಬಹುದು ಬೈಕ್ ಇರಬಹುದು ಕೊನೇ ಒಂದು ಚಂದದ ಎರಡು ರೂಪಾಯಿ ಬೆಲೆಯ ಪೆನ್ ಇರಬಹುದು. ಪೆಜೆತ್ತಾಯ್ಅರಿಗೆ ಮಹಿಂದ್ರಾ ಜೀಪು ಅಂತಹ ಅವಸ್ಥೆ ತಂದಿಟ್ಟಿದೆ. ಹಾಗಾಗಿ ಅವರು ಅದನ್ನು ಚಂದವಾಗಿ ನ ೋಡಿಕೊಳ್ಳುವ ಒಬ್ಬ ಗಿರಾಕಿಯನ್ನು ಹುಡುಕುತ್ತಿದ್ದಾರೆ. ಬೆಲೆ ಒಂದು ಲಕ್ಷ ರೂಪಾಯಿ. ಇದು ಹಣದ ಪ್ರಶ್ನೆ ಅನ್ನುವುದಕ್ಕಿಂತಲೂ ಒಂಥರಾ ಗುಣದ ಪ್ರಶ್ನೆ. ಅನಿವಾರ್ಯ. ಮಾರುಕಟ್ಟೆಯಲ್ಲಿ ನೂರು ತರಹದ ವಾಹನ ಸಾವಿರ ಸಿಕ್ಕಬಹುದು ಆದರೆ ಅವರವರ ಪ್ರೀತಿ ಮಾತ್ರಾ ಸಿಕ್ಕುವುದು ಕಷ್ಟ. ಇವೆಲ್ಲದರ ನಡುವೆ ನಾನು ಪೆಜತ್ತಾಯರಿಗೆ ಜೀಪು ಕೊಡಬೇಡಿ ಅದು ಸೂಪರ್ ಇದೆ ಅಂತ ವಾರಾತ ಮಾಡುತ್ತಿದೇನೆ. ನ ನಗೆ ಅಷ್ಟು ಹೇಳಿದರಷ್ಟೇ ಮುಗಿಯಿತು ಆದರೆ ಅ ವರಿಗೆ ಅದನ್ನು ಜತನವಾಗಿ ಕಾಪಾಡುವ ಸಮಸ್ಯೆ.
ಕೊನೆಯದಾಗಿ: ಆನಂದ ರಾಮ ಶಾಸ್ತ್ರಿಗಳ ಬಳಿ ಇವೆಲ್ಲವನ್ನು ಹೇಳಿದೆ. "ಕಾಲ ಎಲ್ಲವಕ್ಕೂ ಸಮರ್ಪಕವಾಗಿ ಉತ್ತರಿಸುತ್ತದೆ" ಎಂದು ನಿರುಮ್ಮಳವಾಗಿ ಹೇಳಿದರು. ನನಗೆ ಅರ್ಥವಾಗಿಲ್ಲ ಕಾಲವನ್ನೇ ಕೇಳಬೇಕು.

No comments: