Saturday, January 22, 2011

ಸತ್ಯವೆಂದರೆ ಸತ್ತರೂ ಸತ್ಯವೆ

ನಿಮಗೆ ತಥ್ ಅಂತ ಹಲವಾರು ಬಾರಿ ಅನ್ನಿಸಿರುತ್ತದೆ. ಸರ್ಕಾರಿ ಅಧಿಕಾರಿಗಳ ಲಂಚಗುಳಿತನವೋ,ರಾಜಕಾರಣಿಗಳ ಧನದಾಹವೋ, ಎಲ್ಲೆಲ್ಲಿಯೋ ನಡೆಯುವ ಮೋಸವೋ, ಹೀಗೆ ಹತ್ತು ಹಲವಾರು ಘಟನೆಗಳನ್ನು ಕೇಳಿದಾಗ ಪತ್ರಿಕೆಗಳಲ್ಲಿ ಓದಿದಾಗ ಅಥವಾ ಕಣ್ಣಾರೆ ನೋಡಿದಾಗ. ಆವಾಗೆಲ್ಲಾ ನಮ್ಮ ಭವ್ಯ ಭಾರತದ ಬಗ್ಗೆ ಕೇವಲವಾಗಿ ಮಾತನಾಡಿಬಿಡುತ್ತೇವೆ. ಈ ದೇಶದ ಕತೆ ಇಷ್ಟೇ ಕಣಣ್ಣೋ ಅಂತಲೋ ಅಥವಾ ಕತೆ ಮುಗಿದೇ ಹೋಯಿತು ಅಂತ ಅಂದುಬಿಡುತ್ತೇವೆ. ಈ ದೇಶದಲ್ಲಿ ಹಣ ಹಾಗೂ ಪ್ರಭಾವ ಇದ್ದರೆ ಏನೂ ಮಾಡಬಹುದು ಅಂತಲೂ ಅನ್ನುತ್ತೇವೆ. ಇರಿ ಒಂದು ನಿಮಿಷ ಹಾಗೆಯೇ ಇರಿ ನಾ ಕಂಡ ಒಂದು ಉದಾಹರಣೆ ಹೇಳುತ್ತೇನೆ. ಆಗ ನಿಮಗೆ ಅರ್ಥವಾಗುತ್ತದೆ. ನಮ್ಮ ಭಾರತ ದೇಶದ ಕಾನೂನು ಕಟ್ಟಲೆ ಕೋರ್ಟು ಕಛೇರಿ ಎಷ್ಟೊಂದು ಗಟ್ಟಿಯಾಗಿದೆ ಅಂತ ನಿಮಗೆ ಅರ್ಥವಾಗುತ್ತದೆ.
ಆತ ವೃತಿಯಲ್ಲಿ ಜ್ಯೋತಿಷಿ ಉಪವೃತ್ತಿಯಲ್ಲಿ ಕೃಷಿಕ. ಮೊದಲು ಉಲ್ಟಾ ಆಗಿತ್ತು, ಜನರ ಸಂಕಷ್ಟಗಳು ಪ್ರಪಂಚದಲ್ಲಿ ಹೆಚ್ಚಿದಂತೆಲ್ಲಾ ಬದಲಾಯಿತು ಅಷ್ಟೆ. ಆತ ನೂರಾರು ವರ್ಷದಿಂದ ಊರವರು ಪೂಜೆ ಪುನಸ್ಕಾರ ಮಾಡುತ್ತಿದ್ದ ಅರಳಿ ಮರ ಇರುವ ಜಾಗಕ್ಕೆಸೇರಿದಂತೆ ಇರುವ ರಸ್ತೆಗೂ ಬೇಲಿ ಹಾಕಿದ. ಕಾನೂನು ಎಲ್ಲ ತನ್ನ ಕೈಯಲ್ಲಿ ಇದೆ ಅಂದ. ಊರಿನ ನಾಲ್ಕಾರು ಮಂದಿ ಯುವಕರು ಹೋರಾಟಕ್ಕಿಳಿದರು. ಏನೆಲ್ಲಾ ನಾಟಕ ಮಾಡಿದ, ಒಂದು ಹಂತದಲ್ಲಿ ಯುವಕರಿಗೆ ಸೋಲೇ ಗತಿ ಎಂಬ ಹಂತ ಸೃಷ್ಟಿಯಾಯಿತು. ಆಗ ಅಸಿಸ್ಟೆಂಟ್ ಕಮಿಷನರ್ ತಹಾಶೀಲ್ದಾರ್ ಆದಿಯಾಗಿ ಯುವಕರ ಬೆಂಬಲಕೆ ನಿಂತರು. ಆತನಿಗೆ "ಉದಯ ಕರ್ನಾಟಕ" ಎಂಬ ಟ್ಯಾಬ್ಲಾಯ್ಡ್ ಬೆಂಬಲಕ್ಕೆ ಬಂತು. ಆದರೂ ಯುವಕರು ಜಗ್ಗಲಿಲ್ಲ. ಆನಂತರ ಜ್ಯೋತಿಷಿ ಹೈಕೋರ್ಟ್ ಮೆಟ್ಟಲೇರಿದ. ಆಗ ಯುವಕರೂ ಕೂಡ ಅಸಾಹಾಯಕರಾದರು. ಜ್ಯೋತಿಷಿ ಬೀಗಿದ. ಯುವಕರು ತಣ್ಣಗಾದರು. ಆದರೆ ಸತ್ಯದ ಸಾಹಸ ಬಿಡಲಿಲ್ಲ. ಆತನಿಗೆ ಕೇಸು ಕೋರ್ಟಿನಲ್ಲಿದೆ ಎಂಬುದೇ ಅಸ್ತ್ರ. ಕೊನೆಗೂ ಒಂದು ವರ್ಷದ ನಂತರ ಹೈಕೋರ್ಟ್ ಆತನ ಕೇಸನ್ನು ನಿರ್ದಾಕ್ಷಿಣ್ಯವಾಗಿ ವಜಾಗೊಳಿಸಿತು. ಎಂಬಲ್ಲಿಗೆ ಸಾರ್ವಜನಿಕರ ಆಸ್ತಿ ಬಹುಜನರ ಉಪಯೋಗಕ್ಕೆ ಉಳಿಯಿತು.
ಈಗ ಹೇಳಿ, ನಮ್ಮಲ್ಲೂ ಸತ್ಯ ನ್ಯಾಯ ನೀತಿ ಧರ್ಮ ಇದೆ ತಾನೆ?. ಆದರೆ ಅದನ್ನು ದಕ್ಕಿಸಿಕೊಳ್ಳಲು ಸ್ವಲ್ಪ ತಾಳ್ಮೆ ಇರಬೇಕು ಅಷ್ಟೆ. ಕೇಳುವವರು ಇರಬೇಕು ಅಷ್ಟೆ. ಕೇಳುಗರ ಸಂಖ್ಯೆ ಹೆಚ್ಚಿದಂತೆಲ್ಲಾ ನ್ಯಾಯ ನೀತಿ ಧರ್ಮ ತನ್ನಷ್ಟಕ್ಕೆ ಮೇರುಗುಗೊಳ್ಳುತ್ತದೆ.

4 comments:

Maani said...

Jayate...Jayate..Jayate... Satyameva...Jayate.

Muthu said...

Patience is bitter, but its fruit is very sweet...

prasca said...

ನಿಮ್ಮ ಮಾತು ಸತ್ಯ.
ಆದರೆ ಎಲ್ಲದಕ್ಕೂ ನ್ಯಾಯಾಲಯಗಳೇ ಮೂಗುದಾರ ಹಾಕಬೇಕಾಗಿ ಬಂದರೆ ಹೇಗೆ? ಪ್ರತಿಯೊಂದಕ್ಕೂ ನ್ಯಾಯಲಯಗಳ ಬಾಗಿಲು ಬಡಿಯುತ್ತಾ ಕೂರುವುದು ಸಾಧ್ಯವೆ?
ನಿಮ್ಮ ಉದಾಹರಣೆಯಲ್ಲಿ ಸಾರ್ವಜನಿಕ ಆಸ್ತಿ ನಷ್ಟವೆಂಬುದು ಯಾವ ವ್ಯಕ್ತಿಗೆ ಸಂಭಂಧಿಸಿದ್ದಲ್ಲ. ಆದರೆ ಇದೇ ಪ್ರಕರಣ ವೈಯಕ್ತಿಕವಾಗಿದ್ದರೆ? ತನ್ನದೆ ಜಾಗ (ಆಸ್ತಿ) ಉಳಿಸಿಕೊಳ್ಳಲು ನ್ಯಾಯಾಲಯದಲ್ಲಿ ಹೋರಾಡಿ ನ್ಯಾಯ ದೊರಕಿಸಿಕೊಳ್ಳುವ ಸಮಯಕ್ಕೆ ತನ್ನಲ್ಲಿದ್ದ ಹಣವನ್ನೆಲ್ಲ ನಷ್ಟ ಮಾಡಿಕೊಳ್ಳಬೇಕಾಗುತ್ತದೆಯಲ್ಲವೆ? ಆಕ್ರಮಿಸಿಕೊಂಡವನಿಗೆ ಅನುಭವಿಸಿದ್ದಷ್ಟು ಲಾಭವೇ ಅಲ್ಲವೆ? ಅಲ್ಲಿ ನ್ಯಾಯ ಸಿಕ್ಕಂತಾಗುತ್ತದಯೆ?

Gowtham said...

ಓಹ್! ಕೇಸ್ ತೀರ್ಮಾನ ಯಾವಾಗಾತು?