Monday, January 24, 2011

ಗಟ್ಟಿ ಕೌಪೀನವೂ ಮಾಯವಾದ ಸೊಂಟನೋವೂ...

"ಶೀ.... ಆಗಿದ್ದಾದರೂ ಎಂತು ಇವೆಂಗೆ, ಮಳ್ಳು ಕೌಪೀನ ಅಂತೆಲ್ಲ ಬರೆದು....ಚಿ..." ಅಂತ ನೀವು ಗೊಣಗಬಹುದು. ಆದರೆ ಬೆನ್ನು ಹಾಗೂ ಸೊಂಟನೋವು ಬಾಧಿತರ ಸಂಘದ ಸದಸ್ಯರು ನೀವು ಆಗಿದ್ದರೆ ಅಂತಹಾ ಅವೆಲ್ಲಾ ಖಂಡಿತಾ ಗೌಣವಾಗುತ್ತದೆ.
ಹೌದು ಇದೆಲ್ಲಾ ಶುರುವಾಗುವುದು ಪುರೋಹಿತ ಭಟ್ಟರೊಬ್ಬರ ಸೊಂಟನೋವಿನ ಕತೆಯಿಂದ. ಹೇಳಿ ಕೇಳಿ(ರವಿಬೆಳೆಗೆರೆ ಕೇಳಿ ಅಲ್ಲ) ಪುರೋಹಿತರು ಅಂದಮೇಲೆ ಕೇಳುವುದೇ ಬೇಡ. ನಿತ್ಯ ತಿರುಗಾಟ ನಿತ್ಯ ಕಾರ್ಯಕ್ರಮ , ಹಾಗೆಲ್ಲಾ ತಿರುಗಾಟ ಎಂದಕೂಡಲೆ ಅದರ ಹಿಂದೆಯೇ ಬೆನ್ನಿಗಂಟಿಕೊಂಡಿದ್ದು ಸೊಂಟನೋವು. ಈಗ ಆರು ತಿಂಗಳ ಹಿಂದೆ ಸಿಕ್ಕಾಗ "ಅಯ್ಯೋ ಈ ಸೊಂಟನೋವಿಂದ ಕೆಟ್ಟೆ ಮಾರಾಯ" ಅಂತ ಅಂದಿದ್ದರು . "ಅಯ್ಯೋ... ಶರೀರೆ ಜರ್ಜರೇ...ವ್ಯಾಧಿಗ್ರಸ್ಥೇ ಕಲವರೇ...ಔಷಧೀ ಜಾಹ್ನವೀ....." ಎಂಬ ಎಂಬ ಮಂತ್ರ ನೀವು ಸರಿಯಾಗಿ ಹೇಳಿ ತೀರ್ಥ ತೆಗೆದುಕೊಳ್ಳಲಿಲ್ಲ ಅಂತ ಕಾಣುತ್ತೆ ಹಾಗಾಗಿ ನೋವು, ಪರಮ ನಂಬಿಕೆಯಿಂದ ಹಾಗೆ ತೀರ್ಥ ತೆಗೆದುಕೊಂಡಿದ್ದರೆ ಸೊಂಟನೋವು ಬರಲೇ ಬಾರದಿತ್ತು, ಹಾಗೂ ಬಂದರೆ ಮಂತ್ರ ಸುಳ್ಳು ಬಾರದಿದ್ದರೆ ಸತ್ಯ. ಅಂತ ಅಲ್ಲವಾ" ಎಂದು ತಮಾಷೆ ಮಾಡಿದ್ದೆ. " ಥೋ ನೀನು ಬುಡಕ್ಕೆ ತಂದಿಟ್ಟೆ ಮಾರಾಯ" ಎಂದು ಉಸ್ ಗುಟ್ಟಿದ್ದರು.
ನಿನ್ನೆ ನಮ್ಮ ಮನೆಗೆ ಭಟ್ಟರು ಬಂದಿದ್ದರು. ನಡಿಗೆ ಲಕಲಕ ಮುಖದಲ್ಲಿ ಪಕಪಕ. ಸೊಂಟನೋವಿನ ಸುದ್ಧಿಯೇ ಇಲ್ಲ. ಅರೆ ಇದೇನು ಅಂತ ಆಶ್ಚರ್ಯ ನನಗೆ. ಕುತೂಹಲ ತಡೆಯಲಾರದೇ ಕೇಳಿಯೇ ಬಿಟ್ಟೆ. ಆಗ ಅವರು ಹೇಳಿದ್ದಿಷ್ಟು. ಹೀಗೆ ಪೌರೋಹಿತ್ಯಕ್ಕೆ ಹೋದಾಗ ೭೫ ವರ್ಷದ ವೃದ್ಧರ ಬಳಿ ತಮ್ಮ ನೋವು ಹೇಳಿಕೊಂಡರಂತೆ, ನಿಮಗೂ ಈ ವಯಸ್ಸಲ್ಲಿ ಹೀಗೇನಾ ಎಂದರಂತೆ, ಅದಕ್ಕೆ ಅವರು ಇಲ್ಲ ನನಗೆ ಸೊಂಟವೇ ಇಲ್ಲ ಎನ್ನುವಷ್ಟು ಅರಾಂ ಇದೆ, ಎಂದರಂತೆ. ಇವರು ಕುತೂಹಲದಿಂದ ಕಾರಣ ಕೇಳಿದರಂತೆ. ಆವಾಗ ಅವರು ನನಗೂ ಹಿಂದೆ ಬಾಧಿಸುತ್ತಿತ್ತು ಹೀಗೆ ಯಾರೋ ಹೇಳಿದರು ಕೌಪೀನ ಗಟ್ಟಿಯಾಗಿ ಧರಿಸು ಕಿರಿಕಿರಿ ಮಾಯವಾಗುತ್ತದೆ ಎಂದು ಹಾಗೆಯೇ ಅನುಸರಿಸಿದೆ ಈಗ ಬಿಲ್ ಕುಲ್ ಆರಾಂ ಎಂದರಂತೆ. ಸಲಹೆ ಸಿಕ್ಕಿದ ಪುರೋಹಿತ ಭಟ್ಟರು ಪೇಟೆಯಿಂದ ಬರುವಾಗ ನಾಲ್ಕು ಕೌಪೀನದೊಂದಿಗೆ ಮನೆಗೆ ಬಂದು ಬಿಗಿಯಾಗಿ ಧರಿಸಲು ಆರಂಬಿಸಿದರಂತೆ. ಅಲ್ಲಿಂದ ಎರಡು ತಿಂಗಳ ನಂತರ ಸೊಂಟನೋವು ಬೆನ್ನುನೋವು ಮೊದಲಾದ ಕಿರಿಕಿರಿಯೆಲ್ಲಾ ಮಂಗಮಾಯವಾಯಿತಂತೆ. ಅಲ್ಲಿಯವರೆಗೆ ಆಲೋಪತಿ-ಹೋಮಿಯೋಪತಿ(ಶ್ರೀರಾಮುಲು ಅವರ ಹೋಮೋಪತಿ ಅಲ್ಲ)-ಗಣಪತಿ ಹೀಗೆ ಹತ್ತಾರು ಬಗೆಯ ಪ್ರಯೋಗಕ್ಕೆ ಸೊಂಟನೋವು ಬಗ್ಗದ್ದು ಜಸ್ಟ್ ನಾಲ್ಕಿಂಚು ಅಗಲದ ಕೌಪೀನಕ್ಕೆ ಹೆದರಿ ಮಾಯವಾಯಿತಂತೆ. ಜತೆಯಲ್ಲಿ ವಾತ ಓಡಿಸಲು ರಾತ್ರಿ ಕಂಬಳಿಯಮೇಲೆ ಮಲಗುವುದು ಎಕ್ಸ್ಟ್ರಾ ಬೆನಿಫಿಟ್ ಎಂಬುದು ಅವರ ಸಲಹೆ. ಸೊಂಟ ನೋವು ಇದ್ದವರು ಪ್ರಯೋಗಿಸಿ ನೋಡಿ ಇಲ್ಲದಿದ್ದವರು ನೆನಪಿಟ್ಟುಕೊಳ್ಳಿ ಸೊಂಟನೋವು ಬರುವ ತನಕ. ಒಟ್ಟಿನಲ್ಲಿ ಕೌ-ಗಳಿಗೂ ಕೌ ಪೀನ ಗಳಿಗೂ ಮತ್ತೆ ಕಾಲ ಬಂದರೂ ಬಂದೀತೆ.

1 comment:

Muthu said...

ಶರ್ಮಣ್ಣ.... ಅದಕ್ಕೆ ಹಿಂದೆ ಜ್ಞಾನಿಗಳು ಹಾಡಿದ್ದು....
ಕೇಳ್ಯ ಲಂಗೋಟಿ ಬಲು ಒಳ್ಳೇದ್ ಅಣ್ಣ....