Monday, December 26, 2011

ಆದರೆ ನಾವು ನೀವು ಜಂಜಡದಲ್ಲಿ ಮುಳುಗಿದ್ದೇವೆ ನೋಡುವುದೆಲ್ಲಿ?

"ಹಂಸ ಪಕ್ಷಿ" ಹೆಸರೇ ಎಂತ ಚಂದ ಅಲ್ವಾ?, ಇನ್ನು ಅದರ ನೋಡಲು ಅದರ ಒನಪು ವಯ್ಯಾರ ವೀಕ್ಷಿಸಲು, ಅದರ ದನಿ ಕೇಳಲು ಸಿಕ್ಕರೆ ಅದರ ಮಜವೇ ಬೇರೆಯದು ಬಿಡಿ. ಅಂತಹ ಹಂಸದ ಜೋಡಿಯೊಂದನ್ನು ಖರೀದಿಸಿ ನಮ್ಮ ಹೊಸಮನೆಯ ಬಳಿಯ ಕೆರೆಯಲ್ಲಿ ತಂದು ಬಿಟ್ಟಿದ್ದೇನೆ. ವಾರದಿಂದ ಅದರ ಅಂದ ಚಂದ ಆಹಾರ ವಿಹಾರ ನೋಡುವ ಮಜ ನಡೆಯುತ್ತಿದೆ.
ಬೂರ್ಲುಕೆರೆ ಪ್ರಕಾಶರ ಮನೆಯಿಂದ ಒಂದು ಗಂಡು ಹಾಗು ಒಂದು ಹೆಣ್ಣು ಹಂಸವನ್ನು ಸಂಜೆ ತಂದು ರಾಮಕೃಷ್ಣನ ಮನೆಯ ಜಗುಲಿಯಲ್ಲಿ ಬಿಟ್ಟಾಯಿತು. ಬೆಳಿಗ್ಗೆ ಮುಂಚೆ ಹಂಸಗಳ ನಡೆ ಯ ಬಗ್ಗೆ ಕುತೂಹಲದಿಂದ ಓಡಿದೆ. ಜಗುಲಿಯಲ್ಲಿ ಅಕ್ಕಿಯ ತಿನ್ನುತಿದ್ದವು. ಅಕ್ಕಿ ತಿಂದ ಮೇಲೆ ಅಲ್ಲಿಯೇ ಹತ್ತಿರವಿರುವ ಹೊಂಡಕ್ಕೆ ಹಂಸಗಳನ್ನು ಇಳಿಸಲಾಯಿತು. ಅದೇಕೋ ಅಲ್ಲಿ ಅವು ಸರಿಯಾಗಿ ನಿಲ್ಲಲಿಲ್ಲ. ಸರಿ ಏನು ಮಾಡುತ್ತವೆ ಎಂದು ನೋಡೋಣ ಎಂದು ಸುಮ್ಮನುಳಿದೆವು. ನಿಧಾನ ಹೊಂಡದಿಂದ ಮೇಲೆಬಂದ ಜೋಡಿ ಕೆರೆಯತ್ತ ಹೊರಟವು. ನನಗೆ ಪರಮಾಶ್ಚರ್ಯ. ಆ ಜಾಗದಿಂದ ಮನುಷ್ಯ ನಿಂತರೆ ಮೇಲೆ ಒಂದು ಕೆರೆ ಇದೆ ಎಂದು ಊಹಿಸಲು ಆಗುವುದಿಲ್ಲ. ಆದರೆ ಹಂಸಗಳಿಗೆ ಅಲ್ಲೊಂದು ಬರೊಬ್ಬರಿ ಕೆರೆ ಇದೆ ಅಂತ ಅರ್ಥವಾಗಿತ್ತು. ಪ್ರಕೃತಿಯ ತಾಕತ್ತಿಗೆ ನಾನು ಒಮ್ಮೆ ಬೆರಗಾದೆ. ಅತ್ತ ಕಡೆನೋಡುತ್ತಾ ಟ್ರೊಂಯ್ ಟ್ರೊಂಯ್ ಎಂದು ಕೂಗುತ್ತಾ ಹೆಜ್ಜೆಯ ಮೇಲೆ ಹೆಜ್ಜೆಯ ನೀಡುತ್ತಾ ಎರಡೂ ಹಂಸಗಳು ಕೆರೆಯತ್ತ ಮೊದಲೇ ನೋಡಿ ಬಂದಿರುವಂತೆ ದಾರಿಯಲ್ಲಿ ಹೊರಟವು. ದೊಡ್ಡ ಹಂಸ ರಸ್ತೆಯಲ್ಲಿ ಸಾಗಿ ಕೆರೆ ಏರಿ ಮೇಲೆ ನಿಂತು "ಟ್ರೊಂಯ್" ಎಂದು ಒಮ್ಮೆ ಕೂಗಿ ಮತ್ತೊಂದು ಹಂಸದತ್ತ ತಿರುಗಿ ಹೇಳಿದ ಪರಿ ಇದೆಯಲ್ಲಾ ಅದರ ಕ್ಷಣ ವರ್ಣಿಸಲಾಗದು ಬಿಡಿ. ಅಂತೂ ಮಜ ಇದೆ ಗಮನಿಸುವುದರಲ್ಲಿ ಪ್ರಕೃತಿಯನ್ನ, ಆದರೆ ನಾವು ನೀವು ಜಂಜಡದಲ್ಲಿ ಮುಳುಗಿದ್ದೇವೆ ನೋಡುವುದೆಲ್ಲಿ?

Thursday, December 8, 2011

ಕೆಂಪು ಟವೆಲ್ಲು ಮತ್ತು......

ನಗುವುದು ಆರೋಗ್ಯ, ನಗಿಸುವುದು ಕಲೆ. ಅದಕ್ಕೆ ಜೋಕ್ ಗಳು ಸಾವಿರಾಋ ಸೃಷ್ಟಿಯಾಗಿವೆ. ಹಾಗಂತ ಗೊತ್ತಿದ್ದ ನಗೆಹನಿಗಳನ್ನು ಸಮಯ ಸಂದರ್ಭಕ್ಕನುಸಾರವಾಗಿ ಹೇಳುವುದು ಮತ್ತೊಂದು ಕಲೆ. ಅಂತಹ ಕಲೆಗಾರರ ಸಂಖ್ಯೆ ವಿರಳ. ನಮ್ಮ ನಿಮ್ಮ ಜತೆಯ ಜನ ಅಂತಹವರು ಸಿಕ್ಕಿದರೆ ಧಾವಂತದ ಬದುಕಿನಲ್ಲಿಯೂ ಸಣ್ಣ ಮಜ ಸಿಗುತ್ತದೆ.
ನಮ್ಮ ತಲವಾಟದ ಹರಿಭಟ್ರ ಗಣಪತಿ ಅಂತಹ ಅಪರೂಪದ ಜನ. ಎಲ್ಲೋ ಅಪರೂಪಕ್ಕೆ ಮಾತನಾಡುವ ಆತ ಗುಂಪಿನಲ್ಲಿ ಒಂದು ಮಜ ಕೊಡುತ್ತಾನೆ. ನಿನ್ನೆ ಒಂದು ಪ್ರಸಂಗದ ಜಲಕ್ ಇಲ್ಲಿದೆ.
ಡೈರಿ ಕಟ್ಟೆಯಲ್ಲಿ ಹತ್ತೆಂಟು ಜನ ಸೇರಿದಾಗ ತಾಸರ್ದ ತಾಸು ಹರಟುವುದು ದಿನಚರಿ. ಹಾಗೆ ಹರಟುತ್ತಾ ಕುಳಿತಾಗ ಯಾರೋ ಒಬ್ಬರು ಹೇಳಿದರು. "ನನ್ನ ಮಗಂಗೆ ನಿನ್ನೆಯಿಂದ ಬೇಧಿ ಮಾರಾಯ, ಎಂಥ ಔಷಧಿ ಮಾಡಿದರು ನಿಲ್ತಾನೆ ಇಲ್ಲ" ಎಂದ.
ಅದಕ್ಕೆ ಗಣಪತಿ "ಕೆಂಪು ಟವೆಲ್ ತೋರ್ಸಾ, ನಿಂತು ಹೋಗುತ್ತೆ ಬೇಧಿ" ಎಂದ.
ಎಲ್ಲರಿಗೂ ಆಶ್ಚರ್ಯ, ಅದೆಂತಾ ಮದ್ದು, ಕೆಂಪು ಟವೆಲ್ ತೋರಿಸುವುದಕ್ಕೂ ಭೇಧಿ ನಿಲ್ಲುವುದಕ್ಕೂ ಎತ್ತಣದೆತ್ತಣ ಸಂಬಂಧ ಅಂತ ಎಲ್ಲರೂ ಗಣಪತಿಯತ್ತ ಮಿಕಿಮಿಕಿ ನೋಡತೊಡಗಿದರು. ಆತ ಮೌನಿ. ಅಂತೂ ಕುತೂಹಲ ತಡೆಯಲಾರದೆ "ಅದೇಗೆ?" ಎಂದು ಗಂಟು ಬಿದ್ದಾಗ ಆತ ಘನಗಂಭೀರ ಮುಖಾರವಿಂದದೊಡನೆ " ಅಲ್ಲಾ,, ಕೆಂಪು ಬಟ್ಟೆ ತೋರಿಸಿದರೆ ಅಷ್ಟುದ್ದಾ ರೈಲೇ ನಿಲ್ಲುತ್ತದೆಯಂತೆ... ಇನ್ನು ಅಪ್ಪಿಯ ಭೇಧಿ ನಿಲ್ಲದೇ ಇರುತ್ತಾ...." ಎಂದು ಹೇಳಿದಾಗ.... ನಂತರ ಎಲ್ಲರೂ ಘೊಳ್ಳಂತ ನಕ್ಕಿದ್ದು ಎಷ್ಟು ಅಂತ ವಿವರಿಸುವ ಅಗತ್ಯ ಇಲ್ಲ ತಾನೆ...?

Tuesday, November 29, 2011

ನನಗೆ ಈಗ ಅವರ ಭಾಷೆ ಅರ್ಥವಾಗುತ್ತಿದೆ.

ನಾನು ಹಾಗೂ ನನ್ನ ಸ್ವಭಾವ ಸಿಕ್ಕಾಪಟ್ಟೆ ಬದಲಾಗಿದೆಯಾ? ಎಂಬ ಪ್ರಶ್ನೆ ನನ್ನನ್ನೇ ನಾನು ಕೇಳಿಕೊಂಡೆ. "ಹೌದು" ಎಂಬ ಉತ್ತರ ಆಳದಿಂದ ಬಂತು. ಒಂಥರಾ ಹಿಂಡಿತು ಮನಸ್ಸು. ಆ ಪ್ರಶ್ನೆ ನನ್ನನ್ನು ನಾನು ಕೇಳಿಕೊಳ್ಳುವುದಕ್ಕೆ ಕಾರಣವಿದೆ.
ಇತ್ತೀಚಿಗೆ ನನಗೆ ಬರೆಯಲಾಗುತ್ತಿಲ್ಲ. ಬ್ಲಾಗ್ ಬರಹ ಪುಸ್ತಕ ಬಿಡುಗಡೇಯಾದಬಳಿಕ ನಾನೆಲ್ಲೋ ಬ್ಲಾಗೆಲ್ಲೋ. ನಿತ್ಯ ಬೆಳಿಗ್ಗೆ ಎದ್ದು ಕೊಟ್ಟಿಗೆ ಕೆಲಸ ಮುಗಿಸಿ, ತೋಟ ತಿರುಗಿ, ಜೇನು ಪೆಟ್ಟಿಗೆಯ ಮುಚ್ಚಳ ತೆಗೆದು ನೋಡುತ್ತಾ ಕೆಲಸ ಮಾಡುತ್ತಾ ಕುಳಿತರೆ ಮತ್ತೆ ತಿಂಡಿ ಸಮಯಕ್ಕೆ ನನ್ನನ್ನು ಕರೆಯಬೇಕು. ತಿಂಡಿ ತಿಂದು ಒಂದಿಷ್ಟು ಬರೆದರೆ ಅದೇನೋ ನಿರುಮ್ಮಳ ಭಾವ. ಬರಹದಲ್ಲಿ ಸತ್ವ ಇದೆಯೋ..? ಅದರಿಂದ ಯಾರಿಗಾದರೂ ಪ್ರಯೋಜನವೋ..? ಅವರು ಹೇಗೆ ಅರ್ಥಮಾಡಿಕೊಂಡರು, ಅದರ ಭಾವಾರ್ಥವೇನು, ಧನ್ಯಾರ್ಥವೇನೂ..? ಆಳದ ಮಾತೇನು..? ಎಂಬಂತಹ ವಿಷಯದ ಗೊಂದಲ ನನ್ನಲ್ಲಿ ಇರಲಿಲ್ಲ. ಬರೆಯಬೇಕು ಬರೆದಿದ್ದೇನೆ ಅಷ್ಟೆ, ಅದು ನನ್ನ ಮಟ್ಟ ಇಷ್ಟೆ.
ಆದರೆ ಮನೆಯೆಂಬ ಮನೆ ಕಟ್ಟಿಸತೊಡಗಿದೆ ನೋಡಿ, ಹೊಸ ಪ್ರಪಂಚ ಅನಾವರಣಗೊಳ್ಳತೊಡಗಿತು. ನನ್ನ ದಿನಚರಿ, ಸ್ವಭಾವ ಗುಣ ಎಲ್ಲಾ ಅಯೋಮಯ. ಈಗ ನಿತ್ಯ ತರ್ಲೆ ಅರ್ಜಿಗಳಿಗೆ ಉತ್ತರ ಕೊಡುವುದು, ಅನಂತನ ತರ್ಲೆ ಪಟಾಲಂ ನ ಕಿರುಕುಳಕ್ಕೆ ಪ್ರತಿಕ್ರಿಯಿಸುವುದು, ಯಾರು ಯಾವಾಗ ಯಾವ ಅರ್ಜಿ ಹಾಕುತ್ತಾರೆ?, ಅದಕ್ಕೆ ಯಾರ್ ಹಿಡಿದು ಸರಿಮಾಡಿಸಬೇಕು ಅಂತ ಪ್ಲಾನ್ ಹೆಣೆಯುವುದು, ಮುಂತಾದ ಬೇಡದ ಕೆಲಸಗಳು ತಲೆತುಂಬಿಕೊಂಡು ಕಾಡಿ ಕರಡಿ ಬೆಂಡಾಗಿ, ನನ್ನಲ್ಲಿನ ಕಥೆಗಾರ ಮರೆಯಾಗತೊಡಗಿದ್ದಾನೆ. ಜೇನುಗಳೆಲ್ಲಾ ಪೆಟ್ಟಿಗೆ ಬಿಟ್ಟು ಹೊರಟುಹೋಗಿದೆ. ನಿಮ್ಮ ಹಾಗೂ ನಿಮ್ಮ ಕಾಮೆಂಟ್ ನೆನಪು ಎಲ್ಲೋ ಆಳದಲ್ಲಿ ಕುಟುಕಿದಂತಾಗುತ್ತಿದೆ ಅಷ್ಟ್ಯೆ
ತಾಳಗುಪ್ಪದಲ್ಲಿ ಲಿಂಗರಾಜು ಎಂಬೊಬರಿದ್ದಾರೆ. ಅವರು ಮಾತೆತ್ತಿದರೆ "ಚಪ್ಪಲಿಲಿ ಹೊಡಿ ಸೂಳೆಮಂಗಂಗೆ" ಅಂತಾರೆ. ರಾಜಣ್ಣ ನೀವು ಹೀಗೆಕೆ? ಎಂದೆ. ನಾನು ಒಳ್ಳೆಯವನಾಗಿದ್ದೆ, ಆದರೆ ಸಮಾಜ ನನ್ನನ್ನು ಒಳ್ಳೆಯವನ್ನಾಗಿಸಲಿಲ್ಲ, ಹಾಗೆಯೇ ಎಲ್ಲರೂ..." ಎಂದರು. ನನಗೆ ಈಗ ಅವರ ಭಾಷೆ ಅರ್ಥವಾಗುತ್ತಿದೆ.

Monday, November 7, 2011

ಮನೆಬಾಗಿಲನ್ನು ತಟ್ಟುತ್ತವೆ ಪಾತ್ರಗಳು

ಹಂಸಗಾರು ಶ್ರೀಧರಣ್ಣ ಹೇಳಿದ್ದ " ರಾಘು ಕಥೆಗಳಲ್ಲಿನ ಪಾತ್ರಗಳು ಎದ್ದು ಬಂದು ಮನೆ ಬಾಗಿಲು ತಟ್ಟುತ್ತವೆ" ಅಂತ ಕತೆಗಾರರೊಬ್ಬರು ಹೇಳಿದ್ದರು, ಅದರ ಅನುಭವ ನಿನಗಾಗ ಬಹುದು ಎಂದು. ಈ ಮಾತು ಆತ ನನಗೆ ಹೇಳಿದ್ದು "ಕಟ್ಟು ಕತೆಯ ಕಟ್ಟು" ಕಥಾಸಂಕಲನ ಹೊರ ಬಂದ ವರ್ಷ. ನನಗೆ ಅದರ ಅನುಭವ ಆಗಿರಲಿಲ್ಲ. ಕತೆಗಳಲ್ಲಿನ ಪಾತ್ರಗಳು ಎದ್ದು ಬಂದು ಮನೆಬಾಗಿಲ ತಟ್ಟುವುದರ ಅನುಭವ ಈಗ ನನಗೆ. ಅದೊಂದು ವಿಚಿತ್ರ ಮಜ ಕೂಡ.
ನಾನು ಸರಿ ಸುಮಾರು ಮೂವತ್ತು ಕತೆಗಳನ್ನು ಬರೆದಿದ್ದೇನೆ, ಅದು ಕನ್ನಡದ ಪತ್ರಿಗೆಳಲ್ಲಿ ಪ್ರಕಟವಾಗಿವೆ, ಅದರ ಸಂಕಲನ ಹೊರಬಂದಿದೆ. ಕಥೆಗಳೆಂದರೆ ಅಷ್ಟೆ, ನಾವೇಷ್ಟೇ ಬೇಡವೆಂದು ಪ್ರಯತ್ನಿಸಿದರೂ ನಮ್ಮ ಸುತ್ತಮುತ್ತಲ ಘಟನೆಗಳು, ವ್ಯಕ್ತಿಗಳು, ಪಾತ್ರಗಳ ರೂಪದಲ್ಲಿ ಸೇರಿಕೊಂಡುಬಿಡುತ್ತವೆ. ಮೋಸಗಾರರು, ಲಂಪಟರು ಎಂದೆಲ್ಲಾ ಕರೆಯಿಸಿಕೊಳ್ಳುವ ಮಂದಿಗಳೂ ಅದರ ಕಥಾವಸ್ತುವಾಗುತ್ತಾರೆ, ಸಜ್ಜನರ ಅಸಹಾಯಕತೆಯೂ ಕಥೆಗಳಾಗುತ್ತವೆ. ಆದರೆ ಪ್ರಕೃತಿಯ ವೈಚಿತ್ರವೆಂದರೆ ಎಂಥಾ ಘನಾಂಧಾರಿ ಮೋಸಮಾಡುವ ವ್ಯಕ್ತಿಯೂ ಕೂಡ ತನ್ನನ್ನು ತನ್ನ ಬದುಕನ್ನು ಸಮರ್ಥಿಸಿಕೊಳ್ಳುತ್ತಾ ಮುಂದೆಸಾಗಿಸುವ ಬುದ್ಧಿಯನ್ನು ನೀಡಿದೆ ಸೃಷ್ಟಿ.
ಲಂಚ ಹೊಡೆದವನಿಂದ ಹಿಡಿದು, ಕೊಲೆ ಮಾಡಿದವನ ವರೆಗೂ, ಅತ್ಯಾಚಾರ ಮಾಡುವವನಿಂದ ಹಿಡಿದು ಪ್ರೀತಿಸಿ ಕೈಕೊಟ್ಟವನ ವರೆಗೂ, ಅಪ್ಪ ಅಮ್ಮನ ಹೊರಹಾಕಿದವನಿಂದ ಹಿಡಿದು ಹೆಂಡತಿ ಬಿಟ್ಟವನವರೆಗೂ, ಹೆಂಡ ಕುಡಿದವನಿಂದ ಹಿಡಿದು ಚರಸ್ ಮಾರಿದವನವರೆಗೂ, ಸಾರ್ವಜನಿಕ ಜಾಗ ಕಬಳಿಸುವವನಿಂದ ಹಿಡಿದು ಸಾರ್ವಜನಿಕರನ್ನು ತಿಂದು ಮುಗಿಸುವವನವರೆಗೂ, ಅವನದೇ ಆದ ಸಮರ್ಥನೆಯ ಕಾರಣಗಳು ಇರುತ್ತವೆ. ಸಮಾಜ ಒಪ್ಪಲಿ ಬಿಡಲಿ ಆತನ ಸಮರ್ಥನೆ ಸಮಜಾಯಿಶಿ ಜೀವನಾಂತ್ಯದವರೆಗೂ .... ಆದರೆ..
ಕತೆಗಳಲ್ಲಿ ಬರುವ ಪಾತ್ರಗಳನ್ನು ತನಗೆ ಆತ ಹೋಲಿಸಿಕೊಳ್ಳತೊಡಗುತ್ತಾನೆ. ತಾನು ಮಾಡಿದ ತಪ್ಪು ಕುಂತಾಗ ನಿಂತಾಗ ಕಾಡತೊಡಗುತ್ತವೆ. ಒಪ್ಪಿಕೊಳ್ಳಲು ಇಗೋ ಮನಸ್ಸುಕೊಡದು. ಆಗ ಕಾಣಿಸುವವನೇ ಕತೆಗಾರ. ದಡಕ್ಕನೆ ಎದ್ದು ಕತೆಗಾರನ ಮನೆಬಾಗಿಲನ್ನು ತಟ್ಟುತ್ತವೆ ಪಾತ್ರಗಳು. ಕತೆಗಾರ ನ್ಯಾಯಯುತವಾಗಿ ಇದ್ದರೆ... (ಇದ್ದರೆ ಏನು ?ಇರಬೇಕು, ) ಬಾಗಿಲ ತಟ್ಟಿ ತಟ್ಟಿ ಮಾಯವಾಗುತ್ತವೆ, ಇಲ್ಲದಿದ್ದಲ್ಲಿ ಅನುಭವಿಸಬೇಕು ನ್ಯಾಯವೆಂದರೆ ಹಾಗೇನೆ, ಅದು ಎಲ್ಲರಿಗೂ ಒಂದೆ,
ಬಾಗಿಲು ತಟ್ಟುವವರ ಕೈ ನೋವಾಗುವ ತನಕ ಸುಮ್ಮನಿರಬೇಕಷ್ಟೆ.

Saturday, November 5, 2011

ಗೊತ್ತಿಲ್ಲ ಗುರಿಯಿಲ್ಲ...!

ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೆಯೂ ಇರಬಹುದು. ಆದರೆ ಒಂದಂತೂ ಸತ್ಯ "ಜೀವನದಲ್ಲಿ ಭವಿಷ್ಯದ ಪ್ರಶ್ನೆಗಳಿಗೆ" ಸಮರ್ಪಕವಾದ ಉತ್ತರವೆಂದರೆ "ಗೊತ್ತಿಲ್ಲ" ಎಂಬುದು. ಅರೆ ಹೌದೇ ಹೌದು ಅಂತಲೂ ಅಥವಾ ಅಲ್ಲವೇ ಅಲ್ಲ ಅಂತಲೂ ಎಲ್ಲರಿಗೂ ಅವರವರದೇ ಆದ ತರ್ಕದ ರೀತಿಯಲ್ಲಿ ಅನ್ನಿಸಿದರೂ ಅನ್ನಿಸದಿದ್ದರೂ ಉತ್ತರ ಮಾತ್ರಾ ಅದೇ. ಆದರೆ ಮಜ ಎಂದರೆ ಆ ಮೂರಕ್ಷರದ ಉತ್ತರ ಹೇಳಿ ನಿರುಂಬಳವಾಗಿ ಕುಳಿತುಕೊಳ್ಳಲು ಮನಸ್ಸೆಂಬ ಮನಸ್ಸು ಬಿಡುವುದಿಲ್ಲ. ಹಾಗೆ ಬಿಡದಿದ್ದ ಪರಿಣಾಮ ವಾಗಿ ಗುರಿ ನಿಶ್ಚಿತಗೊಳ್ಳುತ್ತದೆ. ಯಾವಾಗ ಗುರಿ ನಿಶ್ಚಿತಗೊಂಡಿತೋ ಅಲ್ಲಿಗೆ ನಾವು ನೀವು ಗೊತ್ತಿಲ್ಲ ಅನ್ನುವಂತಿಲ್ಲ. ಆದರೂಕೂಡ ಗೊತ್ತಿಲ್ಲ ಎನ್ನುವುದೂ ಸತ್ಯವಂತೂ ಹೌದು. ಹಾಗಾದರೆ ಹೀಗೆ ಮಾಡೋಣ ಗುರಿ ನಿಶ್ಚಯಿಸೋಣ ಗೊತ್ತಿಲ್ಲ ಅನ್ನೋಣ. ಅಯ್ಯ ಅದೇಗೆ ಸಾದ್ಯ?, ಗುರಿ ಎಂಬುದು ನಿಶ್ಚಯವಾದಮೇಲೆ ಗೊತ್ತಿಲ್ಲ ಎಂದರೆ ಅದಕ್ಕೆ ನೆಗೇಟೀವ್ ಅಟ್ಯಾಚ್ ಆಗುತ್ತದೆ. ಅಲ್ಲಿಗೆ ಅದು ಗುರಿಯಮೇಲೆ ಪರಿಣಾಮ ಬೀರಬಹುದು. ಸರಿಬಿಡಿ ಗೊತ್ತಿಲ್ಲ ಅನ್ನುವುದು ಬೇಡ ಗುರಿ ನಿಶ್ಚಯಿಸಿ ಸುಮ್ಮನಿದ್ದುಬಿಡೋಣ ಅಥವಾ ಸುಲಭವಾಗಿ ಗೊತ್ತಿಲ್ಲ ಅಂದುಬಿಡೋಣ ಎಂಬಲ್ಲಿಗೆ ಗೊತ್ತಿಲ್ಲ ಗುರಿಯಿಲ್ಲ ಎಂಬುದರ ವ್ಯಾಖ್ಯಾನ ಮುಕ್ತಾಯವು. ಇದನ್ನು ಓದಿದ ನಂತರ ಸಿಕ್ಕಾಪಟ್ಟೆ ಗೊಂದಲಕ್ಕೆ ಬಿದ್ದರೆ "ಗೊತ್ತಿಲ್ಲ" ಎನ್ನಿ ಇಲ್ಲದಿದ್ದರೆ ಗುರಿ ಇದೆ ಎನ್ನಿ....!/.

Saturday, October 29, 2011

"ಬ್ಲಾಗ್ ಬರಹ" ಬಿಡುಗಡೆಯಾಯಿತು.



ಕಾರ್ಯಕ್ರಮ ಚನ್ನಾಗಿ ನಡೆಯಿತು. ಎಂಟುಗಂಟೆಗೆ ಧಾರಾಕಾರ ಮಳೆ, ಆದರೂ ಕರೆಂಟು ಹೋಗಲಿಲ್ಲ. ವಿ ಎಸ್ ಹೆಗಡೆ ಬೊಂಬಾಟ್ ಮಾತನಾಡಿದರು( ನನ್ನ ಹೊಗಳಿದ್ದು ಎಂಬ ಒಂದೇ ಕಾರ್ಣಕ್ಕೆ ಅಲ್ಲ....!) ತಿನ ಶ್ರಿನಿವಾಸ, ಹಿತಕರ ಜೈನ್, ಲಲಿತಾ ನಾರಾಯಣ್, ಶಾಂಭವಿ ಹಾಗೂ ಎಂಬತ್ತು ಜನ ಪ್ರೇಕ್ಷಕರ ಸಮ್ಮುಖದಲ್ಲಿ "ಬ್ಲಾಗ್ ಬರಹ" ಬಿಡುಗಡೆಯಾಯಿತು.

ಇನ್ನು ನೀವು ಸಿಕ್ಕಾಗ ಇದೊಂದು ಪುಸ್ತಕ ಕೊಡುವ ಕೆಲಸ ಇದೆ. ಸೂಪರ್ ಅಂತ ನಿಮ್ಮ ಬಾಯಿಂದ ಬರುತ್ತೆ ಅಂತ ಗೊತ್ತು. ಅದಕ್ಕೆ ಅಡ್ವಾನ್ಸ್ ತ್ಯಾಂಕ್ಸ್.

Tuesday, October 25, 2011

........ಎಂಬುದು ನನ್ನ ಮುನ್ನುಡಿ

"ನನಗೆ ಗೊತ್ತಿಲ್ಲ" ಎಂಬ ಸರಳ ವಾಕ್ಯದೊಡನೆ ಜೀವನವನ್ನು ಸ್ವಾಗತಿಸಿದರೆ ಮಾಹಿತಿಗಳು ದಶದಿಕ್ಕಿನಿಂದ ನಮ್ಮನ್ನು ಆವರಿಸಿಕೊಳ್ಳತೊಡಗುತ್ತದೆ. ಅಂತಹ ಮಾಹಿತಿಗಳಲ್ಲಿ ನಮಗೆ ಬೇಕಾದ್ದನ್ನು ಜತನವಾಗಿಟ್ಟುಕೊಂಡು ಮಿಕ್ಕಿದ್ದನ್ನು ಉಫ಼್ ಎನ್ನಿಸುವ ತಾಕತ್ತು ಇದ್ದರೆ ಬದುಕು ಸುಂದರ ಜೀವನ ಸುಮಧುರ. ಈ ಸುಂದರ ಜೀವನ ಎಂಬುದು ಮಗದೊಮ್ಮೆ ಅವರವರ ಕಲ್ಪನೆಯ ಕೂಸು. ಕಲ್ಪನಾ ಶಕ್ತಿ ಎಷ್ಟರಮಟ್ಟಿಗೆ ಇದೆ ಎಂಬ ವಿಷಯವನ್ನವಲಂಬಿಸಿ ತರ್ಕಕ್ಕೆ ಒಡ್ಡಿ ಕಡೆದು ಮೊಸರು ಬೆಣ್ಣೆಯನ್ನು ತೆಗೆದು ಉಳಿದ ಮಜ್ಜಿಗೆಯನ್ನೂ ಗುಟುಕರಿಸುವ ಶಕ್ತಿ ಆಯಾ ಮನುಷ್ಯರ ಚೈತನ್ಯಕ್ಕೆ ಸಂಬಧಿಸಿದ ವಿಚಾರ.
ಎಲ್ಲರ ಬದುಕೂ ಹುಟ್ಟಿನಿಂದ ಸಾವಿನವರೆಗೂ ಘಟನೆಗಳ ಸರಮಾಲೆಯೇ. ನಮ್ಮೀ ದೇಹವೆಂಬ ಬಳ್ಳಿಯ ಸುತ್ತ ಘಟನೆಗಳು ತನ್ನಷ್ಟಕ್ಕೇ ನಡೆಯುತ್ತವೆಯೋ, ಅಥವಾ ಅದರ ಸೃಷ್ಟಿಕರ್ತರು ನಾವೋ ಎಂಬುದು ನಿಖರವಾದ ಉತ್ತರವಿಲ್ಲದ ಪ್ರಶ್ನೆ. ನಮ್ಮ ಪಂಚೇಂದ್ರಿಯಗಳ ಮೂಲಕ ಗ್ರಹಿಸುವ ವಿಷಯಗಳನ್ನು ವಿಚಾರಗಳನ್ನು ಮೂರನೆಯವರಾಗಿ ಕುಳಿತು ವಿವೇಚನೆಗೆ ಹರಿಬಿಟ್ಟಾಗ ಸೃಷ್ಟಿಯ ಎತ್ತರ ಆಳದ ಬಗ್ಗೆ ಹಾಗೂ ಅಗಾಧ ಶಕ್ತಿಯ ಬಗ್ಗೆ ಅರೆಕ್ಷಣ ಅಚ್ಚರಿಮೂಡದಿರದು. ಈ ಎಲ್ಲಾ ಸಮಗ್ರವನ್ನೂ ಎಲ್ಲರೂ ದಾಖಲಿಸುತ್ತಾ ಸಾಗಿದರೆ ಅದು ಅಂತ್ಯವಿಲ್ಲದ ಅಳತೆಯ ಬೃಹತ್ ಗ್ರಂಥವಾಗಿಬಿಡಬಹುದು. ಹಿಗೆಲ್ಲಾ ಅನಾಹುತಕ್ಕೆ ಭಗವಂತ ಅಣತಿ ನೀಡಲಾರ. ಎಲ್ಲರ ಅನುಭವಾಮೃತವನ್ನೂ ಮತ್ತೊಬ್ಬರಿಗೆ ಹಂಚಿಕೊಳ್ಳಲು ಅವಕಾಶ ನೀಡಲಾರ. ಹಾಗಂತ ಹಠ ಹಿಡಿದವನ ಆಸೆಯನ್ನು ಪೂರೈಸದೇಯೂ ಇರಲಾರ. ಹಾಗೆ ಆ ಸೃಷ್ಟಿಕರ್ತ ಪೂರೈಸಿದ ನನ್ನ ಆಸೆ ಈಗ ನಿಮ್ಮ ಕೈಯಲ್ಲಿರುವ "ಬ್ಲಾಗ್ ಬರಹಗಳು".
ಇದರೊಳಗೆ ಏನಿದೆ ಏನಿಲ್ಲ ಎನ್ನುವುದಕ್ಕಿಂತ ನಾನು ಕಂಡಿರುವ ನೋಡಿರುವ ಕೇಳಿರುವ ಘಟನೆಗಳ ಸಣ್ಣದೊಂದು ಗುಚ್ಛವಿದೆ ಅನ್ನಬಹುದು. ಇದು ಎಷ್ಟರಮಟ್ಟಿಗೆ ನಿಮಗೆ ನಿಮ್ಮ ಜೀವನಕ್ಕೆ ಸಹಾಯವಾಗುತ್ತದೆಯೋ ನನಗೆ ಗೊತ್ತಿಲ್ಲ. ನನಗಂತೂ ಮನಸ್ಸಿಗೆ ಅದೇನೋ ಆನಂದಭಾವವನ್ನು ತಂದಿಡುತ್ತದೆ. ನನ್ನ ಈ ಆನಂದಕ್ಕೆ ಸಹಕರಿಸಿದ ನಿಮಗೆ, ಮುದ್ರಿಸಿದ ಗಣಪತಿ ಪ್ರಿಂಟರ್ಸ್ ಹಾಗೂ ಸಿಬ್ಬಂದಿಗೆ, ವಿಶೇಷವಾಗಿ ವೇಣುಮಾಧವನಿಗೆ, ನನ್ನ ಮನೆಯವರಿಗೆ, ನೆಂಟರಿಷ್ಟರಿಗೆ, ಕಟ್ಟೆ ಮಿತ್ರರಿಗೆ, ತಲವಾಟ ಗ್ರಾಮಪಂಚಾಯ್ತಿ ಅಧ್ಯಕ್ಷರು ಸದಸ್ಯರು ಹಾಗೂ ಜನರಿಗೆ, ೨೦೦೮ ರಿಂದಲೂ ನನ್ನ ಬ್ಲಾಗನ್ನು ನೆಟ್ ಲ್ಲಿ ಓದುತ್ತಾ ಕಾಮೆಂಟ್ ದಾಖಲಿಸುತ್ತಾ ಬಂದಿರುವವರಿಗೆ ಹಾಗೂ ಬ್ಲಾಗ್ ಮಿತ್ರರಿಗೆ, ಉಚಿತವಾಗಿ ತಾಣ ಒದಗಿಸಿಕೊಟ್ಟ ಗೂಗಲ್ ನವರಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಅನಂತಾನಂತ ವಂದನೆಗಳು. ಕಾನೂನಿನ ಕೆಳಗೆ ತೂರಿಕೊಳ್ಳಲು ಕಾನೂನು ಇದೆಯಂತೆ ಆದರೆ ಮನುಷ್ಯಧರ್ಮದ ಕೆಳಗೆ ಮತ್ತೆ ಇರುವುದು ಮನುಷ್ಯಧರ್ಮವೇ ಅಂತೆ. ಹಾಗಾಗಿ ಆ ಸೃಷ್ಟಿಕರ್ತನ ಹತ್ತಿರ ನನ್ನ ನಿತ್ಯ ಬೇಡಿಕೆ "ಹೇ ಭಗವಂತಾ, ಇಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳು ಆಗಬೇಕಿದೆ, ಅದು ನನ್ನ ಮೂಲಕ ಆಗಲಿ, ತನ್ಮೂಲಕ ನನಗೆ ನೆಮ್ಮದಿ ಸಿಗಲಿ" ಎಂಬ ನನ್ನದೂ ಸ್ವಾರ್ಥವನ್ನೂ ಸೇರಿಸುತ್ತಾ ನಿಮಗೆ ನನ್ನ ಬರಹಕ್ಕೆ ಸ್ವಾಗತ,


-ಆರ್.ಶರ್ಮಾ.ತಲವಾಟ

೯೩೪೨೨೫೩೨೪೦

Monday, October 24, 2011

ಕರುಳು ಚುರುಕ್ ಎನ್ನುತ್ತದೆ



ನಮ್ಮ ಮಲೆನಾಡು ಈಗ ಅತ್ಯಂತ ಸುಂದರ. ಮಳೆಗಾಲ ಮುಗಿದಿದೆ ಚಳಿಗಾಲ ಶುರುವಾಗಿಲ್ಲ. ಬೆಳಿಗ್ಗೆ ಎಂಟರತನಕ ಇಬ್ಬನಿಯ ರಂಗು, ಅದರ ನಡುವೆ ಸೂರ್ಯನ ಇಣುಕು. ಎಲ್ಲೆಲ್ಲಿಯೂ ಹಸಿರು ಹಸಿರು ಹಸಿರು. ಕೆರೆಕಟ್ಟೆಗಳು ತುಂಬಿ ತುಳುಕಾಡುತ್ತಲಿರುತ್ತವೆ. ಶುದ್ಧ ನೀರಿನ ಜುಳುಜುಳು ಸದ್ದು, ವಲಸೆ ಹಕ್ಕಿಗಳ ಹಾರಾಟ, ಕಾಡುಕೋಳಿಗಳ, ಕೆರೆಬಾತುಕೋಳಿಗಳ, ಚೀರಾಟ. ಸರಿ ಸರಿ ಇಲ್ಲಿಯವರೆಗೆ ಒಂಥರಾ ಒಳ್ಳೆಯ ಪದಗಳಿತ್ತು ಈಗ ಇದ್ದಕ್ಕಿದ್ದಂತೆ ಚೀರಾಟ ಎಂಬ ಪದ ಬಂದು ಒಂಥರಾ ಇರಿಸುಮುರಿಸಾಯಿತಿರಬೇಕು ನಿಮಗೆ, ಅದಕ್ಕೆ ಕಾರಣಗಳಿವೆ ಹೇಳುತ್ತೇನೆ ಕೇಳಿ.

ಮಳೆಗಾಲ ಮುಗಿಯುತ್ತಿದ್ದಂತೆ ಬಯಲುಸೀಮೆಯಿಂದ ಅದ್ಯಾವುದೋ ತಂಡ ಪ್ರತೀ ವರ್ಷ ಈ ಸಮಯಕ್ಕೆ ಸರಿಯಾಗಿ ಊರಮುಂದೆ ಬಂದು ಟೆಂಟ್ ಹಾಕುತ್ತದೆ. ಹತ್ತೆಂಟು ಜನರ ಆ ತಂಡದಲ್ಲಿ ಹಿರಿಯರು ಮೂರ್ನಾಲ್ಕು, ಯುವಕರು ಮತ್ತೆ ಮೂರ್ನಾಲ್ಕು ಚಿಳ್ಳೆಪಿಳ್ಳೆ ಮೂರ್ನಾಲ್ಕು ಹಾಗೂ ಒಂದಿಬ್ಬರು ಹೆಂಗಸರು. ಅವರ ತಂಡ ಬಂತೆಂದರೆ ನನಗೆ ಮಾತ್ರಾ ಕರುಳು ಚುರುಕ್ ಎನ್ನುತ್ತದೆ. ಕಾರಣ ಅವರು ನಮ್ಮ ಹಳ್ಳಿಯ ಸುತ್ತಮುತ್ತ ಕಾಡಿನಲ್ಲಿರುವ ಕೋಳಿ ಹಾಗೂ ಕೆರೆಯಲ್ಲಿರುವ ಬಾತುಕೋಳಿಯನ್ನು ಬೆನ್ನೆತ್ತಿ ಬೇಟೆಯಾಡುತ್ತಾರೆ. ಅವರು ಬೇಟೆಯಲ್ಲಿ ನಿಸ್ಸೀಮರು. ಬಗಲಲ್ಲಿ ಕವಣೆ ಕೈಯಲ್ಲಿ ಚೀಲ ಹಿಡಿದು ಹೊರಟರೆಂದರೆ ವಾಪಾಸು ಚೀಲ ಫುಲ್ ಕೋಳಿ ಗ್ಯಾರಂಟಿ. ಅವುಕ್ಕೆ ಕೋಳಿಯೇ ಆಗಬೇಕೆಂದಿಲ್ಲ ಏನಾದರೂ ಆದಿತು. ಮೊನ್ನೆ ನಮ್ಮ ಗ್ರಾಮಪಂಚಾಯಿತಿಯ ಗಿಡ್ಡ ಗೊಣಗುತ್ತಿದ್ದ. ನಮ್ಮ ಪಂಚಾಯ್ತಿಗೆ ಬರುತ್ತಿದ್ದ ಬೆಕ್ಕು ಪತ್ತೆಯೇ ಇಲ್ಲ ಮಾರಾಯರೇ", ಎಂಬಲ್ಲಿಗೆ ವಿಶೇಷ ಅಡುಗೆಯಾಗಿ ಅಲ್ಲಿಯೇ ಪಕ್ಕದಲ್ಲಿ ಡರ್ ತೇಗಿನ ಮುಖಾಂತರ ಹೊರಡುತ್ತಿದೆ ಬೆಕ್ಕು.

ಕೊಂದ ಪಾಪ ತಿಂದು ಪರಿಹಾರವಂತೆ ನಾವು ಅದನ್ನೆಲ್ಲಾ ಕಂಡೂ ಕಾಣದಂತೆ ಇರುವುದು ಕ್ಷೇಮ, ಹೇಳಲು ಹೋದರೆ ವಿವಾದವಾದರೂ ಆದೀತೆ. ಹಾಗಾಘಿ ನಾವು ನೀವೆಲ್ಲ ಯಥಾಪ್ರಕಾರ " ಆಹಾ ಎಂತಹ ಹಸಿರು, ಎಂಥಹಾ ಇಬ್ಬನಿ" ಎನ್ನುತ್ತಾ ಇದ್ದುಬಿಡೋಣ, ಏನಂತೀರಿ?.

Friday, October 21, 2011

ಅದಕ್ಕೆ ಸರ್ಕಾರ ಸಂಬಳ ಕೊಡುತ್ತೆ’

ಈಗ ಆರು ತಿಂಗಳಿಂದೀಚೆಗೆ ನನಗೆ ಹೊಸ ಹೊಸ ಜನರ ಹೊಸ ಹೊಸ ಪ್ರಪಂಚದ ಅನಾವರಣ. ಅದರಲ್ಲೊಂದು ಇದು. ನನಗೆ ರೆವಿನ್ಯೂ ಡಿಪಾರ್ಟ್ ಮೆಂಟಿನಿಂದ ವಂಶವೃಕ್ಷ, ಹಿಡುವಳಿ ಪ್ರಮಾಣಪತ್ರ ಹಾಗೂ ಆದಾಯಪ್ರಮಾಣ ಪತ್ರ ಬೇಕಿತ್ತು. ಸರಿ ಮಾಮೂಲಿಯಂತೆ ಅರ್ಜಿ ಬರೆದು ನೆಮ್ಮದಿಕೇಂದ್ರಕ್ಕೆ ಸಲ್ಲಿಸಿದೆ. ಜನಸಾಮಾನ್ಯರು ಹೇಳುವಂತೆ ಸರ್ಕಾರದ ಇಲಾಖೆಯೆಂದರೆ ಲಂಚ ತಡ ಮುಂತಾದ ಆರೋಪ ನನ್ನ ಮನಸಿನಾಳದಲ್ಲಿಯೂ ಹುಗಿದಿತ್ತು. ನೆಮ್ಮದಿ ಕೇಂದ್ರದಾಕೆ ನನ್ನ ಮೊಬೈಲ್ ನಂಬರ್ ಅರ್ಜಿಯಲ್ಲಿ ಬರೆಯಿಸಿಕೊಂಡು ಎಂಡಾಸ್ ಮೆಂಟ್ ಕೊಟ್ಟಳು. ಸರಿಯಾಗಿ ಎಂಟು ದಿವಸಕ್ಕೆ ಮೊಬೈಲ್ ಗೆ ಎಸ್ ಎಂ ಎಸ್ ಬಂತು ಯುವರ್ ಸರ್ಟಿಫಿಕೇಟ್ ಈಸ್ ರೆಡಿ, ಪ್ಲೀಸ್ ಕಲೆಕ್ಟ್ ಪ್ರಂ ನೆಮ್ಮದಿಕೇಂದ್ರ" ಎಂದು.
ಬೆಳಿಗ್ಗೆ ಹತ್ತೂವರೆಗೆ ತಾಳಗುಪ್ಪದ ನೆಮ್ಮದಿ ಕೇಂದ್ರದ ಬಾಗಿಲಲ್ಲಿ ನಿಂತೆ. ಎಸ್ ಎಂ ಎಸ್ ನಂಬರ್ ಕೇಳಿದ ಆಕೆ ಚಕಚಕನೆ ಪ್ರಿಂಟ್ ಔಟ್ ಕೊಟ್ಟಳು ಪ್ರಮಾಣ ಪತ್ರದ್ದು. ಸರ್ಕಾರಿ ಫೀ ಹತ್ತು ರೂಪಾಯಿಯನ್ನಷ್ಟೇ ಕೇಳಿದ್ದು ಮತ್ತು ನಾನು ಕೊಟ್ಟಿದ್ದು. ಎಂಬಲ್ಲಿಗೆ ಲಂಚದ ಕಿಂಚಿತ್ತೂ ಬೇಡಿಕೆಯಿಲ್ಲದೆ ನನಗೆ ಎಂಟು ದಿವಸದೊಳಗೆ ಸಿಕ್ಕ ಖುಷಿಯಲ್ಲಿ "ಮೇಡಂ ನಿಮ್ಮ ಡಿಪಾರ್ಟ್ ಮೆಂಟ್ ಅಂದ್ರೆ ಲಂಚ ಅಂತಾರಲ್ಲ , ನನಗೆ ಅಂತ ಅನುಭವ ಆಗಲೇ ಇಲ್ಲವಲ್ಲ ಎಂದೆ" . ಏನಪ್ಪ ಎಂದು ಮುಗಳ್ನಕ್ಕಳು ಆಕೆ,
ಇನ್ನು ವಂಶವೃಕ್ಷದ್ದು ಕತೆ. ಅದನ್ನ ವಿಲೇಜ್ ಅಕೌಂಟೆಟ್ ಹತ್ತಿರ ಖುದ್ದಾಗಿ ಪಡೆದುಕೊಳ್ಳಬೇಕು, ನೆಮ್ಮದಿ ಕೇಂದ್ರದ ಅವಶ್ಯಕತೆ ಅದಕ್ಕಿಲ್ಲ. ಸೀದಾ ವಿ ಎ ಹತ್ತಿರ ಹೋಗಿ ವಂಶವೃಕ್ಷದ ಬೇಡಿಕೆ ಇಟ್ಟೆ. ಕ್ಷಣ ಮಾತ್ರದಲ್ಲಿ ಅವರದೇ ಹಾಳೆ ಅವರದೇ ಪೆನ್ ನಲ್ಲಿ ನನ್ನ ವಂಶವೃಕ್ಷ ಕೈ ಸೇರಿತು. ಓಹ್ ಇದಕ್ಕೆ ನಾನು ಲಂಚ ಕೊಡಬೇಕೇನೋ ಎಂದು ಐವತ್ತರ ಒಂದು ನೋಟು ಅಂಜುತ್ತಾ ಕೊಡಲು ಹೋದೆ. ವಿ ಎ ಮಂಜುಳಾ ಮೇಡಂ "ಹಣ ಯಾಕೆ?’ ಅಂದರು. ನಾನು ಹಾಂ ಅದೂ ಇದೂ ಅಂದೆ. ನೋಡಿ ನಾನು ನನ್ನ ಡ್ಯೂಟಿ ಮಾಡಿದ್ದೇನೆ, ಅದಕ್ಕೆ ಸರ್ಕಾರ ಸಂಬಳ ಕೊಡುತ್ತೆ’ ಅಂತ ಅಂದರು.
ನಾನು ಯಾವ ತೀರ್ಮಾನಕ್ಕೆ ಬರಬೇಕು ಅಂತ ತಿಳಿಯದೇ ಬೆಕ್ಕಸಬೆರಗಾದೆ. ಬಹುಶಃ ನ್ಯಾಯವಾದ ಪ್ರಮಾಣ ಪತ್ರಗಳಿಗೆ ಲಂಚ ದ ಹೆಸರು ಅಗತ್ಯ ಬೀಳುವುದಿಲ್ಲ ಅಂತ ಅಂದುಕೊಂಡೆ.ಇಂತಹ ಪ್ರಾಮಾಣಿಕರು ಹಲವರಿದ್ದಾರೆ, ಆದರೆ ಜನರು ಅವರ ಸುದ್ದಿಯನ್ನು ಮರೆಮಾಚಿ ಎಲ್ಲಿಯೋ ಹತ್ತು ಪರ್ಸೆಂಟ್ ಅಧಿಕಾರಗಳ ಕತೆಯನ್ನು ತೇಲಿಬಿಡುತ್ತಾರೇನೋ ಅಂತಲೂ ಅನ್ನಿಸಿದ್ದು ಸುಳ್ಳಲ್ಲ

ಮತ್ತೆ ಸಿಕ್ಕಾಗ ನಗೋಣ, ಹರಟೋಣ,




ಬಂತು ದೀಪಗಳ ಹಬ್ಬ ದೀಪಾವಳಿ. ಎಲ್ಲರ ಮನೆ ದೀಪ ಬೆಳಗಲಿ. ಹ್ಯಾಪಿ ದೀಪಾವಳಿ, ದೀಪಾವಳಿ ಹಬ್ಬದ ಶುಭಾಶಯಗಳು, ಹೀಗೆಲ್ಲಾ ನಾನು ನೀವು ಅನ್ನುವ ದಿವಸ ಅಕ ಇಕ ಅನ್ನುವುದರಒಳಗೆ ಬಂದೇಬಿಟ್ಟಿತು. ನಿಮಗೆ ಇದು ಎಷ್ಟನೇ ದೀಪಾವಳಿಯೋ ಗೊತ್ತಿಲ್ಲ. ನನಗಂತೂ ನಲವತ್ನಾಲ್ಕನೆಯದು ಅಂತ ಡೇಟ್ ಆಫ್ ಬರ್ತ್ ಹೇಳುತ್ತೆ. ಆದರೆ ನೆನಪಿಗೆ ಒಂದಿಪ್ಪತ್ತೈದು ಮೂವತ್ತು ಬರಬಹುದು. ದನಗಳ ಹಬ್ಬ ನಮ್ಮ ಹಳ್ಳಿಯಲ್ಲಿ ಪಟಾಕಿ ಹಬ್ಬ ನಿಮ್ಮ ಪಟ್ಟಣಗಳಲ್ಲಿ. ಕಡುಬು ಕಜ್ಜಾಯ ನಮ್ಮಲ್ಲಿ ನಿಮ್ಮಲ್ಲಿ ಒಂದೇ. ಇರಲಿ ಅವೆಲ್ಲದರ ನಡುವೆ ನನ್ನದೊಂದು ಸಣ್ಣ ವಿಷಯವಿದೆ.

ಈ ಬ್ಲಾಗ್ ೨೦೦೮ ರಲ್ಲಿ ನಾನು ಶುರುಮಾಡಿದ್ದು. ಏನು ಬರೆದೆನೋ ಏನು ಬಿಟ್ಟೆನೋ ನನಗಂತೂ ಒಮ್ಮೊಮ್ಮೆ ಅತಿ ಅನಿಸುವಷ್ಟಾಗಿದೆ. ಆದರೆ ಮಜ ಬಂದಿದೆ. ನೀವು ಏನು ಓದಿದಿರೋ ಏನು ಬಿಟ್ಟಿರೋ ಒಮ್ಮೊಮ್ಮೆ ಅತಿ ಅಂತಲೂ ಅನ್ನಿಸಿರಬಹುದು. ಇರಲಿ ಅದನ್ನು ಹೊಟ್ಟೆಗೆ ಹಾಕಿಕೊಳ್ಳಿ. ಆದರೆ ನನಗೆ ಈ ಬ್ಲಾಗಿಗೆ ನನ್ನ ವರಾತ ಹಂಚಿಕೊಳ್ಳಲು ಸಹಕಾರ ನೀಡಿದವರು ನೀವು. ಕಾಮೆಂಟ್ ಬಾಕ್ಸ್ ನಲ್ಲಿ ನಾನು ಉತ್ತರ ನೀಡದಿದ್ದರೂ( ಕ್ಷಮಿಸಿ ನನ್ನ ಸ್ಲೋ ನೆಟ್ ಕಾರಣದಿಂದ ಇಲ್ಲಿ ಕಾಮೆಂಟ್ ಬಾಕ್ಸ್ ಓಪನ್ ಆಗೋದು ತುಂಬಾ ಅಪರೂಪ, ಹಾಗಾಗಿ ನಾನು ಕಾಮೆಂಟ್ ಗೆ೪ ತ್ಯಾಂಕ್ಸ್ ಹೇಳಲು ಕಷ್ಟ ಹೊರತು ಸೊಕ್ಕಿನಿಂದಲ್ಲ) ಓದಿ ಕಾಮೆಂಟ್ ಜಡಿದು ಹುರುಪು ತುಂಬಿದ್ದೀರಿ. ಸೀತಾರಾಂ ರಿಂದ ಹಿಡಿದು ಮಾವೆಂಸ, ಜಿತು, ದಿಲೀಪ್, ವಿರಾ ಹೆಗಡೆ, ವಿಜಯಶ್ರೀ, ಡಾ ಕೃಷ್ಣಮೂರ್ತಿ, ಮುತ್ತು, ಹೊಸಮನೆ, ರಮ್ಯಾ, ತೇಜಸ್ವಿನಿ, ಅರವಿಂದ್ ಜಿ ಜೆ, ಪರಾಂಜಪೆ, ಪ್ರಕಾಶಣ್ಣ, ಸುಶ್ರುತ, ವಿನಾಯಕ, ಭಾರತೀಶ, ಮನ್ ಮುಕ್ತಾ, ಶಾಂತಲಾ ಭಂಡಿ, ಪ್ರೀತಿಯಿಂದ ಸಿಂಧು, ಆದಿತ್ಯ ಬೇದೂರು, ಪ್ರಸನ್ನ ಕನ್ನಡಿಗ, ನವ್ಯ, ನಾಣು, ಮಂಜುನಾಥ್, ರಾಜ್ ಬಾವಯ್ಯ, ರತ್ನಕ್ಕ, ಕಾವ್ಯ, ದಿವ್ಯ, ದಿಗ್ವಾಸ್ ಹೆಗಡೆ ಸುಬ್ರಹ್ಮಣ್ಯ, ವೇಣು, ಯಜ್ನೇಶ್, ಜಗದೀಶ್ ಶರ್ಮಾ, ಹೀಗೆ ಹೇಳುತ್ತಾ ಹೋದರೆ ಇಡೀ ಬ್ಲಾಗರ್ ರೇ ಬೇಕಾದೀತು. ಇನ್ನೂ ಕಾಮೆಂಟ್ ಹಾಕದೇ ಓದುವವರ ಲಿಸ್ಟ್ ಬೇರೆಯೇ ಇದೆ, ಇರಲಿ ಹೆಸರು ಕೈಬಿಟ್ಟವರಿಗೂ ನಿಮಗೂ ತ್ಯಾಂಕ್ಸ್.

ಈ ಎಲ್ಲಾ ವಿಷಯದ ಜತೆ ಇದೇ ೨೭-೧೦-೧೧ ರ ಗುರುವಾರ ತಲವಾಟ ಶಾಲೆಯಲ್ಲಿ (ನಾನು ನಾಲ್ಕಕ್ಷರ ಕಲಿತ ಜಾಗ) ನನ್ನ ಬ್ಲಾಗ್ ಬರಹ ಪುಸ್ತಕ ಬಿಡುಗಡೆ ಅಂತ್ ಮುಹೂರ್ತ ಇಟ್ಟಾಗಿದೆ. ನೋಡಿ ನೀವು ಅಲ್ಲಿಂದ ಇಲ್ಲಿಗೆ ಇದಕ್ಕಾಗಿಯೇ ಬರಲು ಆಗುವುದಿಲ್ಲ ಅನ್ನೋದು ನನಗೆ ಗೊತ್ತು, ಅಕಸ್ಮಾತ್ ಹಬ್ಬಕ್ಕೆ ಊರಿಗೆ ಬಂದಿದ್ದರೆ ಅಂದು ಬನ್ನಿ. ನಾನಂತೂ ಅಂದು ಬಾಸಿಂಗ ಕಟ್ಟಿದ ದೀಪಾವಳಿಯ ಎತ್ತಿನಂತಾಗಿರುತ್ತೇನೆ. ಅಕಸ್ಮಾತ್ ನಿಮ್ಮನ್ನು ಖುದ್ದು ಮಾತನಾಡಿಸಲು ಆಗದೆಯೂ ಇರಬಹುದು. ಹಾಗಾಗಿ ಬೇಸರಬೇಡ . ಮತ್ತೆ ಸಿಕ್ಕಾಗ ನಗೋಣ, ಹರಟೋಣ,

ಬನ್ನಿ, ಮತ್ತೆ ನಾನು ಫೋನ್ ಮಾಡುವುದಿಲ್ಲ,

Thursday, October 20, 2011

ಎರಡನೆಯವರಾದ ವಕೀಲರ .......

ಸರಿ ಅದು ವಕಾರಾದಿ ವೈದ್ಯರ ಕತೆಯಾಯಿತು ಇನ್ನು ಎರಡನೆಯವರಾದ ವಕೀಲರ ಕತೆಯತ್ತ ನೋಡೋಣ.
ಈಗ ಮೂರು ತಿಂಗಳ ಹಿಂದೆ ನಾ ಕಟ್ಟಿಸುತ್ತಿರುವ ಮನೆಯೆ ಮೌಲ್ಡ್ ಸಮಯ. "ರಾಗು, ನೀ ಮೌಲ್ಡ್ ಹಾಕುವ ಸಮಯಕ್ಕೆ ಸರಿಯಾಗಿ ಕೋರ್ಟ್ ನಿಂದ ಸ್ಟೆ ತರುತ್ತಾರಂತೆ" ಎಂಬ ಸುದ್ದಿ ಕಿವಿಗೆ ಬಿತ್ತು. ಒಮ್ಮೆ ಗಾಬರಿಯಾದೆ. ಹೌದಪ್ಪ ಹೌದು ಮೂರ್ನಾಲ್ಕು ಲಕ್ಷದ ಮೆಟೀರಿಯಲ್ ತಂದಿಟ್ಟುಕೊಂಡು ಅಕಸ್ಮಾತ್ ಸ್ಟೆ ಬಂದುಬಿಟ್ಟರೆ ಕತೆಯೇನು? ಎಂದು ಒಳಮನಸ್ಸು ಪದೇಪದೇ ಒಳಗಿನಿಂದ ನಡುಕವನ್ನು ಸೃಷ್ಟಿಮಾಡಿ ಹೊರಬಿಡತೊಡಗಿತು. ಕೋರ್ಟು ಕಾನೂನು ನನಗೆ ಗೊತ್ತಿಲ್ಲ. ಮಾಡುವುದೇನು?. ಹೈಕೋರ್ಟ್ ಲಾಯರ್ ಸ್ನೇಹಿತ ಬಾಬುವಿಗೆ ಫೋನಾಯಿಸಿದೆ. ಆತ "ಅಯ್ಯೋ ಬಿಡ ಮಾರಾಯ ಹಾಗೆಲ್ಲ ಸ್ಟೆ ತರುವುದಕ್ಕೆ ಬರುವುದಿಲ್ಲ, ನಿನ್ನ ಸ್ವಂತ ಜಮೀನಿನಲ್ಲಿ ಮನೆಕಟ್ಟಿಸುವುದು ನಿನಗೆ ಸಂವಿಧಾನ ಕೊಟ್ಟ ಹಕ್ಕು, ಕೋರ್ಟ್ ಎಂದರೆ ನೀವೆಲ್ಲಾ ಏನೆಂದು ತಿಳಿದುಕೊಂಡಿದ್ದೀರಿ, ಆದರೂ ಸ್ಥಳೀಯ ವಕೀಲರನ್ನು ಒಮ್ಮೆ ಭೇಟಿ ಮಾಡಿ ಪರಿಚಯ ಮಾಡಿಕೋ, ಅದು ಒಳ್ಳೆಯದು" ಎಂದ. ಅಕ್ಕನ ಮಗ ಮಂಜು ಪಕ್ಕನೆ ನೆನಪಾದ. ಆತನ ಮುಖಾಂತರ ಲಾಯರ್ ರಮಣರ ಮನೆಯ ಮೆಟ್ಟಿಲೇರಿದೆ ಕಡತ ಸಹಿತ. ಹಾಗೆಯೇ ಪರಿಚಯ ಜತೆಗೆ ಸಮಸ್ಯೆ ಹೇಳಿಕೊಂಡೆ. ಇದಕ್ಕೊಂದು ಕೇವಿಯಟ್ ಬೇಕು( ಹಾಗೆಂದರೆ ಏನೂ ಅಂತಾನೂ ನನಗೆಗ್ೊತ್ತಿರಲಿಲ್ಲ) ಕಡತವನ್ನು ಪರಾಮರ್ಶಿಸಿ ಕೇವಿಯಟ್ ಅಂದರೆ ಅನ್ಯತಾ ಕೋರ್ಟ್ ಜಗಳ ಮೈಮೇಲೆಎ ಳೆದುಕೊಂಡಂತೆ. ಇದಕ್ಕೆಲ್ಲಾ ಹಾಗೆಲ್ಲ ಸ್ಟೆ ತರಲು ಬರುವುದಿಲ್ಲ, ಅಕಸ್ಮಾತ್ ಬಂದರೂ ನಾವಿದ್ದೇವೆ ಬಿಡಿ ಚಿಂತೆ" ಎಂದರು. ಒಳಗಿನಿಂದ ಧೈರ್ಯದ ಸೆಲೆ ಒಸರತೊಡಗಿತು. "ಫೀ ಎಷ್ಟು? ಎಂದೆ. "ಅಯ್ಯ ಇದೆಕ್ಕೆಲ್ಲಾ ಎಂತಾ ಫೀ" ಎಂದು ಬೀಳ್ಕೊಟ್ಟರು.
ಮತ್ತೊಂದು ಪ್ರಕರಣದಲ್ಲಿ ಖಂಡಿಕದ ರಾಗಣ್ಣ ಹಾಗೂ ಅರುಣ ಎಂಬ ವಕೀಲರ ಭೇಟಿಯಾಗುವ ಸಂದರ್ಭ ಬಂತು. ಅವರೂ ಹಾಗೆಯೇ ಸುಮ್ನೆ ಯಾಕೆ ಕೋರ್ಟು ಕಛೇರಿ, ಸುಮ್ಮನಿದ್ದು ಬಿಡಿ" ಎಂದರು.
ಅಲ್ಲಿಯತನಕ ಪರಿಚಯವೇ ಇಲ್ಲದ ನನ್ನನ್ನು ಸುಲಭವಾಗಿ ಹಾದಿತಪ್ಪಿಸಿ ದುಡ್ಡು ತೆಗೆದುಕೊಳ್ಳಬಹುದಾಗಿದ್ದ ಸಂದರ್ಭದಲ್ಲಿಯೂ ಸಮಾಧಾನದ ಮಾತನ್ನಾಡಿ ಮನೆಗೆ ಕಳುಹಿಸಿದ ವಕೀಲರು ನಮಗೆ ಸಿಕ್ಕರೆ ಜೀವನ ಸುಗಮವಲ್ಲದೇ ಮತ್ತಿನ್ನೇನು?. ಅವರು ಕುಂತಿದ್ದು ನ್ಯಾಯಕ್ಕಾಗಿ ಎಂದು ಮತ್ತೆ ಹೊಸತಾಗಿ ಹೇಳಬೇಕಾಗಿಲ್ಲ ತಾನೆ. ತ್ಯಾಂಕ್ಸ್ ವಕೀಲರೇ ಎನ್ನುತ್ತಾ ಎರಡನೆಯವರು ನಮ್ಮ ಜೀವನದಲ್ಲಿ ಸುಗಮ ದಾರಿ ಮಾಡಿಕೊಡಬಲ್ಲರು ಎಂಬ ಪುರಾಣ ಮುಕ್ತಾಯೂ ಇನ್ನು ಮೂರನೆಯವರು.

Tuesday, October 18, 2011

ಸೋಲನ್ನು ಮೆಟ್ಟಿಲು ಮಾಡಿಕೊಂಡು ..........

ಜೀವನ ಎಂದಮೇಲೆ ಸೋಲು ಗೆಲುವು,ಹುಟ್ಟು ಸಾವು, ನೋವು ನಲಿವು, ಎಂಬಂತದೆಲ್ಲಾ ಇದ್ದದ್ದೇ. ಅದರಾಚೆ ಎಂದರೆ ಶೂನ್ಯ ಭಾವ ಅಷ್ಟೆ. ಅಲ್ಲಿ ಮಜ ಇಲ್ಲ ಅಥವಾ ಗೊತ್ತಿಲ್ಲ. ಈಗ ಅಂತಹ ಗೊತ್ತಿಲ್ಲದ ವಿಚಾರಗಳನ್ನೆಲ್ಲಾ ಬದಿಗೊತ್ತಿ ಚೂರುಪಾರು ಗೊತ್ತಾಗುತ್ತದೆ, ಗೊತ್ತಾಗುತ್ತಿದೆ ಎನ್ನುವ ವಿಚಾರದತ್ತ ಹೊರಳೋಣ.


"ಗೆಲುವು" ಎಂಬ ಮೂರಕ್ಷರದ ಪದ ಇದೆಯಲ್ಲ, ಅದನ್ನು ಸಾಕಾರಗೊಳಿಸಿಕೊಳ್ಳಲು ಸೋಲನ್ನು ಮೆಟ್ಟಿಲು ಮಾಡಿಕೊಳ್ಳಬೇಕು" ಎಂಬ ವಿಚಾರ ಬಹು ವಿಶೇಷವಾಗಿದೆ. ಗೆಲುವು ಸೋಲುಗಳು ವಿಷಯಾಧಾರಿತವಾದದ್ದು. ಅವನು ಯಾವುದನ್ನು ಯಾಕಾಗಿ ಎಷ್ಟು ಪ್ರಮಾಣದಲ್ಲಿ ಗೆಲ್ಲಲು ಹೊರಟಿದ್ದಾನೆ ಎಂಬುದರ ಮೇಲೆ ಫಲಿತಾಂಶ. ಗೆಲುವನ್ನ ಸಾವಿನಲ್ಲೂ ಕಾಣಬಹುದು ಸೋಲನ್ನು ಬದುಕಿದ್ದೂ ಕಾಣಬಹುದು. ಅದಕ್ಕೊಂದು ಮಜವಾದ್ ಕತೆ ಮಾಡಿದ್ದಾರೆ ಯಾರೋ ಬುದ್ಧಿವಂತರು. ಒಮ್ಮೆ ಓದಿ.


ಅಕ್ಕಪಕ್ಕದಲ್ಲಿ ಮನೆ ಕಟ್ಟಿಕೊಂಡವರಿಬ್ಬರು ಕೆಲ ವರ್ಷ ಅತೀ ಆತ್ಮೀಯತೆಯಿಂದ ಇದ್ದರು. ಆ ಅತಿ ಯ ಪರಿಣಾಮ ಅವರಿಬ್ಬರು ಪರಮ ಶತ್ರುಗಳಾಗಿ ಬದಲಾದರು. ಬೆಳಗಿನಿಂದ ಸಂಜೆಯ ತನಕ ಪುರ್ಸೊತ್ತು ಸಿಕ್ಕಾಗಲೆಲ್ಲ ಜಗಳ ಜಗಳ ಜಗಳ. ಬಾಯಿಮಾತಿನಿಂದ ಶುರುವಾದ ಜಗಳ ಪೋಲೀಸ್ ಸ್ಟೇಷನ್ ಕೋರ್ಟು ಮೆಟ್ಟಿಲೇರಿತು. ಗಡಿ ವ್ಯಾಜ್ಯ, ಸದ್ದಿನ ವ್ಯಾಜ್ಯ ಸಪ್ಪಳದ ವ್ಯಾಜ್ಯ ಹೀಗೆ ಒಂದರ ಹಿಂದೊಂದು ಕಾರಣಗಳು. ಒಂದರಲ್ಲಿ ಒಬ್ಬನಿಗೆ ಸೋಲಾದರೆ ಮತ್ತೊಂದರಲ್ಲಿ ಮತ್ತೊಬ್ಬನಿಗೆ ಸೋಲು, ಗೆಲುವೂ ಹಾಗೆ ಹೇಗೂ ಉಲ್ಟಾ. ಹೀಗೆ ಗಲಾಟೆ ದೊಂಬಿಯಲ್ಲಿ ನೆರೆಹೊರೆಯವರಿಬ್ಬರೂ ತಮ್ಮ ಆಯುಷ್ಯವನ್ನೇ ಕಳೆಯುತ್ತಾ ಬಂದರು.


ಇಂತಿಪ್ಪ ಸಂದರ್ಭದಲ್ಲಿ ಒಂದು ಮನೆಯವನಿಗೆ ಖಾಯಿಲೆ ದೇಹಕ್ಕೆ ಆವರಿಸಿತು. ದಿನದಿಂದ ದಿನಕ್ಕೆ ಖಾಯಿಲೆ ಉಲ್ಬಣಿಸಿ ಇನ್ನು ಹೆಚ್ಚು ದಿನ ಆತ ಬದುಕಲಾರ ಎಂಬ ಸ್ಥಿತಿಗೆ ಬಂತು. ಮತ್ತೊಬ್ಬನಿಗೆ ಒಳಗೊಳಗೆ ಆನಂದ. "ಉರದಾ ಉರದಾ ಈಗ ನೋಡು ಅನುಭವಿಸುತ್ತಾ ಇದ್ದಾನೆ" ಎಂದು ಒಳಗೊಳಗೆ ಬೀಗತೊಡಗಿದ. ಹೀಗೆ ಒಳಾನಂದವನ್ನು ಅನುಭವಿಸುತ್ತಾ ಇರಬೇಕಾದ ಸಂದರ್ಭದಲ್ಲಿ ಪಕ್ಕದ ಮನೆಯವನಿಂದ ಒಮ್ಮೆ ತನ್ನನ್ನು ಭೇಟಿ ಮಾಡಿ ಹೋಗುವಂತೆ ಆಹ್ವಾನ ಬಂತು. ಈತನಿಗೂ ಜಗಳ ಸಾಕಾಗಿತ್ತು, ಪಾಪ ಇನ್ನು ಸತ್ತು ಹೋಗುತ್ತಾನೆ ,ಇನ್ನೆಂಥಾ ದ್ವೇಷ ಎನ್ನುತ್ತಾ ಸೀದಾ ಮಲಗಿದವನ ಹಾಸಿಗೆಯ ಬಳಿಗೆ ಬಂದ. ಆಗ ಖಾಯಿಲೆಯಾತ " ನೋಡು ನಾನು ಕ್ಷಮಿಸಲಾರದ ತಪ್ಪುಗಳನ್ನು ಮಾಡಿದ್ದೇನೆ, ಅದಕ್ಕಾಗಿ ಭಗವಂತ ನನಗೆ ಈ ಶಿಕ್ಷೆ ಕೊಟ್ಟಿದ್ದಾನೆ" ಎಂದು ಕಣ್ಣೀರ್ಗರೆದ. ಈತನಿಗೂ ಛೆ ಅಂತ ಅನಿಸಿತು. "ಆಯಿತು ಆಗಿದ್ದೆಲ್ಲಾ , ಮರೆತುಬಿಡು, ನನ್ನ ಗ್ರಹಚಾರವೂ ಹಾಗಿತ್ತು, ಎಲ್ಲಾ ಭಗವಂತನ ಆಟ" ಎಂದು ಕಣ್ಣೀರ್ಗರೆದ. ಅಲ್ಲಿಯತನಕ ಪರಮ ಶತ್ರುಗಳಾಗಿದ್ದವರು ಮತ್ತೆ ಪರಮಮಿತ್ರರಾಗಿ ಹರಟಿದರು. ಖಾಯಿಲೆ ಮರೆತು ನಕ್ಕ ಮತ್ತೊಬ್ಬ. ಸ್ವಲ್ಪ ಸಮಯದ ನಂತರ ಖಾಯಿಲೆಯಾತ " ನನ್ನದೊಂದು ಕೊನೆಯ ಆಸೆ ಇದೆ ಈಡೇರಿಸಿಕೊಡುತ್ತೀಯಾ ಮಿತ್ರ" ಎಂದು ಕೈ ಹಿಡಿದು ಕೇಳಿದ. "ಆಯಿತು ಹೇಳು" ಎಂದ ಈತ.


"ನಾನು ಹೇಗೂ ಇನ್ನೊಂದೆರಡು ದಿವಸದಲ್ಲಿ ಸಾಯುತ್ತೇನೆ, ನಾನು ಸತ್ತಮೇಲೆ ನನ್ನ ಗುಧದ್ವಾರದಲ್ಲಿ ನೀನು ಹಾರೆಯೊಂದನ್ನು ತೂರಿಸಬೇಕು, ಇದು ನಾನು ನಿನಗೆ ಕೊಟ್ಟ ತೊಂದರೆಗಾಗಿ ಪ್ರಾಯಶ್ಚಿತ್ತ, ಮುಂದಿನ ಜನ್ಮದಲ್ಲಾದರೂ ಒಳ್ಳೆಯ ಬುದ್ಧಿ ನನಗೆ ದೇವರು ಕೊಡಲಿ" ಎಂದ


ಹಳೆ ಶತ್ರು ಪ್ರಸೆಂಟ್ ಮಿತ್ರನ ವಿಚಿತ್ರ ಬಯಕೆಯನ್ನು ಈತ ಅನಿವಾರ್ಯವಾಗಿ ಒಪ್ಪಿಕೊಂಡ. ಎರಡಿ ದಿವಸದನಂತರ ಆತ ಸಾವನ್ನಪ್ಪಿದ. ಈತ ಕೊಟ್ಟ ಮಾತಿನಂತೆ ಸಾವು ಖಚಿತವಾದನಂತರ ಒಂದು ಬರೊಬ್ಬರಿ ಕಬ್ಬಿಣದ ಹಾರೆಯನ್ನು "ಅಲ್ಲಿ" ತೂರಿಸಿದ. ನಂತರ ಜನ ಒಬ್ಬೊಬ್ಬರಾಗಿ ಬರತೊಡಗಿದರು, ಎಲ್ಲರೂ ಹಾರೆಯ ವಿಷಯ ಕುತೂಹಲದಿಂದ ಕೇಳತೊಡಗಿದರು. ಈತ ನಡೆದ ಕತೆ ಹೇಳಿ ತಾನೇ ತೂರಿಸಿದ್ದು ಎಂದ. ಆದರೆ ಜನರಿಗೇಕೋ ಅನುಮಾನ, ಗುಸು ಗುಸು ಪಿಸ ಪಿಸ. ಈ ಗುಸುಗುಸು ಪಿಸಪಿಸ ಕ್ಕೆ ದನಿಯಾಗಿ ಕೆಲ ಸಮಯದ ನಂತರ ಪೋಲೀಸರು ಬಂದರು. ಮತ್ತು ಹಾರೆಯನ್ನು "ಅಲ್ಲಿ" ಹಾಕಿ ಶತ್ರುವಾಗಿದ್ದ ಆತನನ್ನು ಕೊಂದ ಆಪಾದನೆಯ ಮೇಲೆ ಆರೆಸ್ಟ್ ಮಾಡಿ ಈತನನ್ನು ಜೈಲಿಗಟ್ಟಿದರು.


ಆತ ಸಾವೆಂಬ ಸೋಲನ್ನು ಮೆಟ್ಟಿಲು ಮಾಡಿಕೊಂಡು ಶತ್ರುವನ್ನು ಸೋಲಿಸಿ ತಾನು ಗೆಲುವು ಕಂಡಿದ್ದ.

Monday, October 17, 2011

ಕತೆಯೇ ಸರಿ.

ಇಪ್ಪತ್ತು ವರ್ಷದ ಹಿಂದಿರಬಹುದು. ಮುಖದಲ್ಲಿನ ಭಾವ ಮಸುಕು ಆದರೆ ದನಿ ಇನ್ನೂ ನೆನಪಿದೆ" ರಾಗೂ ಅಂವನು ಪ್ರೀತಿಸಿ ಮೋಸಮಾಡಿಬಿಟ್ಟ, ನೀನಾದರೂ ಹೋಗಿ ಹೇಳು, ಅವನದು ನಾಟಕ ಅಂತ ನನಗೆ ಈಗ ಗೊತ್ತಾಗಿದೆ, ಒಂದಿಷ್ಟು ದುಡ್ಡು ಕಳಕೊಂಡೆ." ಎಂದು ಹೇಳಿದಳಾಕೆ. ನನಗೆ ಕರುಳು ಚುರುಕ್ ಎಂದಿತಾದರೂ ಮುಂದುವರೆಯುವ ಧೈರ್ಯ ಇರಲಿಲ್ಲ. ಏನಂತ ಹೇಳಬೇಕು? ಹಗೂರವಾಗಿ ಕೇಳಿದೆ. "ಆವತ್ತು ನಾವಿಬ್ಬರು ಮೋರಿಕಟ್ಟೆಯ ಮೇಲೆ ಮಾತನಾಡಿದನ್ನು ನೀನು ನೋಡಿ, ಯಾರದು ಎಂದೆಯಲ್ಲ, ಅದನ್ನ ಉದಾಹರಿಸಿ ಕೇಳು ಮದುವೆಯಾಗಲು ಹೇಳು" ಎಂದಳು. ಯಾಕೋ ಮನಸ್ಸಾಗಲಿಲ್ಲ, ಕಾರಣ ಇನ್ನೂ ಗೊತ್ತಿಲ್ಲ. "ನೋಡು.. ಆತ ಮೋಸಗಾರ ಎಂದು ನಿನಗೆ ಈಗಲೇ ಗೊತ್ತಾಗಿದ್ದು ತುಂಬಾ ಒಳ್ಳೆಯದಾಯಿತು, ಸಂಸಾರವೇ ಜೀವನವಲ್ಲ, ಮರೆತು ಮುಂದಿನ ಜೀವನ ಬಾಳು ಇಲ್ಲದಿದ್ದರೆ ಇದು ಪ್ಯಾಚ್ ಕಟ್ಟಿದ ಸಂಸಾರ ಹಾಗಾಗಿ ನಿತ್ಯ ಗೋಳು" ಎಂದು ಸಮಾಧಾನಿಸಿದೆ. ನಂತರ ಬಹಳ ದಿವಸಗಳು ಈ ವಿಷಯ ಕಾಡಿದ್ದಿದೆ. ನಾನು ತಪ್ಪಿದೆನೆ?, ಅಸಹಾಯಕ ಹೆಣ್ಣುಮಗಳಿಗೆ ಸಹಾಯ ಮಾಡಲಿಲ್ಲವಲ್ಲ ಎಂಬ ಕೊರಗು ಕಾಡುತ್ತಿತ್ತು. ಕಾಲ ಎಲ್ಲವನ್ನೂ ನುಂಗಿ ನೀರು ಕುಡಿಯಿತುಬಿಡಿ.


ಆಕೆಯ ಮದುವೆ ಬೇರೆಯವರ ಜತೆ ನಡೆಯಿತು. ಮೊನ್ನೆ ಸಿಕ್ಕಿದ್ದಳು, ಸುಖೀ ಸಂಸಾರದ ಭಾವ ಮುಖದಲ್ಲಿ ಎದ್ದು ಕುಣಿಯುತ್ತಿತ್ತು. ಆತನ ಮದುವೆಯೂ ನಡೆದು ಎರಡು ಮಕ್ಕಳು, ಆದರೆ ಇಂದಿಗೂ ಆತ ಸ್ಯಾಡಿಸ್ಟ್ ವರ್ತನೆ ತೋರಿಸುತ್ತಿದ್ದಾನೆ. ಒಮ್ಮೊಮ್ಮೆ ಬುಡಕ್ಕೆ ತಂದಿಟ್ಟು ಚಂದ ನೋಡುತ್ತಾನೆ. ಸಂಸಾರದ ಮುಖದಲ್ಲಿ ಕಳೆ ಇಲ್ಲ. ಕಾರಣ ಆತನ ಆ "ಅದರ" ಹುಡುಕಾಟ ಇನ್ನೂ ಮುಗಿದಿಲ್ಲ.


ಅಂತೂ ಸಮಾಧಾನವಾಯಿತು. ಇಲ್ಲ ಅಂದು ನಾನು ಸುಮ್ಮನುಳಿದಿದ್ದೇ ಒಳ್ಳೆಯದಾಯಿತು. ಹೌದು ಒಮ್ಮೊಮ್ಮೆ ಸುಮ್ಮನುಳಿಯಬೇಕಾಗುತ್ತದೆ, ಮಗದೊಮ್ಮೆ ಬುಸ್ ಎನ್ನಬೇಕಾಗುತ್ತದೆ. ಆದರೆ ಕಚ್ಚಬಾರದು. ಅಕಸ್ಮಾತ್ ಕಚ್ಚಿದರೆ ಉಳಿಯಬಾರದು ಎಂಬ "ಸನ್ಯಾಸಿ ಮತ್ತು ನಾಗರಹಾವಿನ" ಕತೆಯೇ ಸರಿ.

Saturday, October 15, 2011

ತೀರಾ ಅರ್ಥವಾಗದಿದ್ದರೆ ತಲೆಕೆಡಿಸಿಕೊಳ್ಳಬೇಡಿ, ಅರ್ಥವಾಗುವವರಿಗೆ ಆಗಿರುತ್ತದೆ



ಬದುಕು ಎಂಬುದು ನಂಬಿಕೆಯ ಮೇಲೆಯೇ ನಿಂತಿದೆ. ನಾನು ನೀವು ನಂಬಿದ್ದನ್ನು ನಂಬದೇ ಇರಬಹುದು ನೀವು ನಾನು ನಂಬಿದ್ದನ್ನು ನಂಬದೇ ಇರಬಹುದು. ಆದರೆ ನಾನೂ ನಂಬಿರುತ್ತೇನೆ, ನೀವೂ ನಂಬಿರುತ್ತೀರಿ. ದೇವರು ಇದ್ದಾನೆ ಎಂದು ನಂಬಿ ಜೀವನ ನಡೆಸುವರು ಒಂದೆಡೆ, ಇಲ್ಲ ಎಂದು ನಂಬಿ ನಡೆಯುವವರು ಮತ್ತೊಂದೆಡೆ. ಇಬ್ಬರದ್ದೂ ನಂಬಿಕೆಯಷ್ಟೇ ಎಂಬುದು ಮತ್ತೊಂದು ನಂಬಿಕೆ. ಇರಲಿ ಅದು ತೀರಾ ಗೊಂದಲದ ವಿಚಾರ. ಹಾಗಾಗಿ ಅದನ್ನ ಅಲ್ಲಿಗೆ ಬಿಟ್ಟು ನಾನು ನಂಬಿದ ವಿಚಾರಕ್ಕೆ ಬರೋಣ.

ಈ ಬ್ಲಾಗಿನ ಕೆಳಗಡೆ ಕಾಣಿಸುವ ನಮ್ಮ ಮನೆಯ ಎದುರು ಒಂದು ಯಕ್ಷಿಬಣ್ಣವಿದೆ. ಅದು ಈ ಬರಹದ ಮೇಲ್ಗಡೆಯಿದೆ. ಅದು ನಮ್ಮ ಕುಟುಂಬದ ನೆಂಟರಿಷ್ಟರ ಆರಾಧ್ಯ ಧೈವ. ಮೊದಮೊದಲು ಅದು ಮದುವೆ ಆಭರಣ ಕೊಡುತ್ತಿತ್ತು ಎಂಬಂತಹ ದಂತಕಥೆಗಳು ಆಗಾಗ ಅವರಿವರ ಬಾಯಲ್ಲಿ ಹರಿದಾಡುತ್ತಿದೆ. ಅಕ್ಕಪಕ್ಕದ ಮನೆಯವರೂ ಅದಕ್ಕೊಂದು ಹಣ್ಣುಕಾಯಿ ಪೂಜೆ ಪುನಸ್ಕಾರ ಮಾಡುತ್ತಾರೆ. ಊರವರೂ ತೀರಾ ಕುತ್ತಿಗೆಗೆ ಸಮಸ್ಯೆ ಬಂದಾಗ ಓಡೋಡಿ ಬಂದು ಒಂದು ಕಾಯಿ ಒಡೆಸುವುದು ಇದೆ.

ಇಂತೆಂಬ ಯಕ್ಷಿಬಣ್ಣ ಈಗ ಜೀರ್ಣವಾಗಿದೆ. ಅದರ ಜೀರ್ಣೋದ್ಧಾರಕೆಲಸ ಶುರುವಾಗಿದೆ. ಅಕ್ಕ ಅಣ್ಣ ಇಂಜನಿಯರ್ ರಮ್ಯಾ, ರಾಜೇಶ್, ವಿಜಯ ಕಾಲೇಜ್ ಪ್ರೊಫೇಸರ್ ಬಾವ ಅಕ್ಕ , ದುಬೈ ಅಕ್ಕ ಬಾವ, ಅಕ್ಕಯ್ಯ ಬಾವ , ಸತ್ಯ, ಕಾರ್ತೀಕ, ಶ್ರೀವತ್ಸ, ರಂಜನ, ಕಾವ್ಯ -ನವ್ಯ, ಕತಾರ್ ಮಂಜು ಕತಾರ್ ನಾಣು, ಅಮ್ಮಾ ಹೀಗೆ ಭಕ್ತರ ದಂಡನ್ನೇ ಹೊತ್ತಿರುವ ಆಕೆಗೆ ಇದೇನು ಮಹಾ ಅಲ್ಲವೇ?

ಅರ್ಥವಾಯಿತಲ್ಲ ಇಷ್ಟೊಂದು ದಂಡು ಇಟಕೊಂಡು ಕೆಲಸ ಮಾಡಿಸುವ ನಾನು ಧರ್ಮದರ್ಶಿ....!. ಎಂಬಲ್ಲಿಗೆ ಯಕ್ಷಿ ಜೀರ್ಣೋದ್ಧಾರ ಬ್ಲಾಗ್ ಮುಕ್ತಾಯವೂ.


Friday, October 14, 2011

ಗೊತ್ತಾ ನಿಮಗೆ ವಕಾರಾದಿ ಪಂಚಮರು...?

"ವ" ಕಾರದಿಂದ ಆರಂಭವಾಗುವ ಐದು ಜನರ ಕುರಿತು ಸಂಸ್ಕೃತ ಸುಭಾಷಿತ ಏನನ್ನೋ ಹೇಳುತ್ತದೆ. ಇರಲಿ ಅದೇನೋ ಹೇಳಲಿ ನಾವು ಏನು ಹೇಳುತ್ತೇವೋ ನೋಡೋಣ.
ವೈದ್ಯ-ವಕೀಲ-ವಣಿಕ-ವೈದೀಕ-ವೇಶ್ಯೆ ಹೀಗೆ ಸರಿಸುಮಾರು ಅರ್ಥದ ಜನರ ಬಳಿ ಸಿಕ್ಕಿಕೊಂಡರೆ ಲೈಫೆಂಬ ಜೀವನ ಕಷ್ಟವಂತೆ. ಆದರೆ ಸಿಕ್ಕಿಕೊಳ್ಳದೆ ದಾಟುವ ಮನಸಿದ್ದರೆ ಏನೂ ಮಾಡಲಾಗುವುದಿಲ್ಲವಂತೆ. ಆದರೆ ನನಗೆ ಈ ಐದು ಜನ ಸಮರ್ಥರು ಸಿಕ್ಕರೆ ಜೀವನ ಸುಗಮ ಎಂಬ ಆಲೋಚನೆ ಪಳಕ್ಕನೆ ಮಿಂಚುತ್ತಿದೆ.
ಹೌದು, ನಿಮಗೆ ಅನುಭವಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ, ನನಗಂತೂ ಒಳ್ಳೆಯ ಅನುಭವ. ನಾನು ತಾಳಗುಪ್ಪದ ಡಾಕ್ಟರ್ ಗುರುರಾಜ ದೀಕ್ಷಿತ್ ರನ್ನು ಆಯ್ಕೆಮಾಡಿಕೊಂಡಿದ್ದೇನೆ. ಅಂತಹಾ ಘನಾಂದಾರಿ ಖಾಯಿಲೆ ಜೀವನದಲ್ಲಿ ಬಂದಿರದಿದ್ದರೂ ಸಣ್ಣ ಪುಟ್ಟ ಕಾಯಿಲೆಗಳಿಗೆ ಅವರು ತಾಳ್ಮೆಯಿಂದ ದೊಡ್ಡ ಖಾಯಿಲೆ ಯಾಗದಂತೆ ಮಾಡದೆ ಗುಣಮಾಡಿದ್ದಾರೆ. ಆದರೆ ಇತ್ತೀಚಿಗೆ ವಯಸ್ಸು ನಲವತ್ತೈದು ಆಗಿರುವ ಪರಿಣಾಮವೋ ಅಥವಾ ಕೆಲಸದ ಒತ್ತಡವೋ ಅಥವಾ ಡ್ಯಾಶ್ ಡ್ಯಾಶ್ ಸಮಸ್ಯೆಯೋ...? ಪಟಕ್ಕನೆ ನಿದ್ರೆ ಬರುತ್ತಿರಲಿಲ್ಲ. ವಾರೊಪ್ಪತ್ತು ನೋಡಿ ದೀಕ್ಷಿತರ ಬಳಿ ಓಡಿದೆ. "ಹೌದಾ.. ಖಾಲಿ ಕೂತಾಗ, ಪ್ರಪಂಚ ಒಳ್ಳೆಯದು ಅಂತಿದ್ದೀರಿ, ಈಗ ಅರ್ಥವಾಯಿತ?, ನಿಮ್ಮ ಶತ್ರುಗಳು ಎಷ್ಟಿದ್ದಾರೆ ಅಂತ?" ಎಂದು ನಕ್ಕರು. "ಅಯ್ಯಾ ಅದಕ್ಕೂ ನನ್ನ ನಿದ್ರೆಗೂ ಎಂಥ ಸಂಬಂಧ ಎಂದೆ. ಸಮಸ್ಯೆಯ ಕುರಿತು ಹೆಚ್ಚು ಯೋಚನೆ ಮಾಡಿದ್ದರ ಪರಿಣಾಮ, ಬ್ಲಾಗ್, ಕುಟ್ಟುತ್ತಾ, ಕಥೆ ಬರೆಯುತ್ತಾ ಲೇಖನ ಗೀಚುತ್ತಾ, ಭ್ರಮಾಪ್ರಪಂಚದಲ್ಲಿ ಬದುಕುವುದು ಸುಲಭ, ವಾಸ್ತವಕ್ಕೆ ಬಂದಾಗ ಅನ್ಯಾಯ ಕಂಡರೂ ಯಾರು ಮಾಡಿದ್ದು ಎನ್ನುವುದರ ಮೇಲೆ ಬಾಯಿ ಬಿಚ್ಚುವುದು ಹಾಗೂ ಬಾಯಿ ಮುಚ್ಚುವುದೂ ಮಾಡಬೇಕು, ಇರಲಿ ಆಗಿದ್ದಾಯಿತಲ್ಲ, ಇವೆರಡು ಮಾತ್ರೆ ನುಂಗಿ ರಾತ್ರಿ ಊಟಕ್ಕೆ ಅರ್ದ ಗಂಟೆ ಮೊದಲು ಎಂದು ನೆಕ್ಸ್ಟ್ ಎಂದರು.
ವೈದ್ಯೋ ನಾರಾಯಣೋ ಹರಿಃ ಎಂದು ಮನೆ ಸೇರಿ ಮಾತ್ರೆ ನುಂಗಿ ಮಲಗಿದೆ. ನಿದ್ರೆ ಯಾವಾಗ ಬಂತೋ ತಿಳಿಯಲಿಲ್ಲ. ಬೆಳಗ್ಗೆ ಎದ್ದು ಫ್ರೆಶ್ ಆಗಿದ್ದೆ. ಆದರೆ ಮನಸ್ಸಿನಲ್ಲಿ ಕುರಿಕುರಿ, ನಿದ್ರೆ ಮಾತ್ರೆ ನುಂಗಿ ನಿದ್ರೆ ಮಾಡುವುದು ಎಷ್ಟು ಸರಿ?. ಮಾರನೇ ದಿನ ಸಂಜೆ ಮತ್ತೆ ದೀಕ್ಷಿತರಲ್ಲಿಗೆ ಓಡಿದೆ. "ಡಾಕ್ತ್ರೇ ಅದ್ಯಾಕೋ ನಿದ್ರೆ ಮಾತ್ರೆ ನುಂಗಿ ನಿದ್ರೆ ಮಾಡುವುದು ಒಂಥರಾ ಅವಮಾನ ಅಂತ ಅನ್ನಿಸತೊಡಗಿದೆ". ಎಂದೆ. "ನಿಮಗೆ ನಿದ್ರೆ ಮಾತ್ರೆ ಕೊಟ್ಟವರ್ಯಾರು? ಡಾಕ್ಟರಿಂದ ಮರುಪ್ರಶ್ನೆ. "ಮತ್ತೆ ಅಷ್ಟೊಂದು ಚೆನ್ನಾಗಿ ನಿದ್ರೆ ಬಂತು. ಅದಕ್ಕೆ ಹೇಳಿದ್ದು ದೇಹಕ್ಕೆ ವಯಸ್ಸಾಗಿದೆ ಮನಸ್ಸಿಗಲ್ಲ ಈಗ ಕೇಳಿ "ಆಯುರ್ವೇದ ಅದ್ಬುತ ಶಕ್ತಿಯುಳ್ಳದ್ದು , ನಾನು ನಿಮಗೆ ಕೊಟ್ಟದ್ದು ವಾತ-ಪಿತ್ಥ-ಕಫ ವನ್ನು ಸಮತೋಲನ ಮಾಡುವ ತ್ರಿಫಲ ಚೂರ್ಣ, ಜತೆಗೆ ವಿಟಮಿನ್ ಸಿ. ಹಿಂದಿನ ಕಾಲದಲ್ಲಿ ತ್ರಿಫಲ ಚೂರ್ಣದ ಜತೆ ಮೂಸಂಬಿ ಹಣ್ಣು ಕೊಡುತ್ತಿದ್ದರು, ಕಾರಣ ವಿಟಮಿನ್ ಸಿ ಮಾತ್ರೆ ಇರಲಿಲ್ಲ. ಈಗ ಮೂಸಂಬಿ ಬದಲಿಗಾಗಿ ಮಾತ್ರೆ ಅಷ್ಟೆ. ನಿಮ್ಮ ಮನಸ್ಸಿನ ಆಲೋಚನೆಗಳು ವಾತ-ಪಿತ್ಥ-ಕಫ ಪ್ರಮಾಣವನ್ನು ಏರುಪೇರು ಮಾಡುತ್ತದೆ ಈ ಚೂರ್ಣ ಮತ್ತದನ್ನ ಸಮತೋಲನಕ್ಕೆ ಒಯ್ಯುತ್ತದೆ ಆಗ ನಿದ್ರೆ ತನ್ನಷ್ಟಕ್ಕೆ. ಎಂದರು. ಜತಜತಗೆ ಅವರ ಇಷ್ಟು ಟ್ರೀಟ್ ಮೆಂಟ್ ಗೆ ತಗುಲಿದ ವೆಚ್ಚ ಮಾತ್ರೆ ಸೇರಿ ಮೂವತ್ತು ರೂಪಾಯಿಯಷ್ಟೆ.
ಈಗ ನಿಮಗೆ ವ ಕಾರದ ಆರಂಭದ ಕತೆಯಾಯಿತು. ಎರಡನೇ ಯವರ ಕತೆಯನ್ನು ಇಷ್ಟವಿದ್ದರೆ ನಾಳೆ ಓದುವಿರಂತೆ. ಓಕೆ ಗುಡ್ ನೈಟ್.

Wednesday, October 12, 2011

ಆಗದಿದ್ದರೆ ನಮ್ಮ ಪಾಡು ನಮಗೆ.

"ಏಯ್ ಸಾಗರದ ಸುವರ್ಣ ಪ್ರಭ ಪತ್ರಿಕೆಯಲ್ಲಿ ನಿನ್ನ ಹೋಂ ಸ್ಟೆ ಸುದ್ದಿ ಬಂದಿದೆ ಅಂತ ಮೊಬೈಲ್ ಫೋನ್ ಬಂದಾಗ ಒಮ್ಮೆ ನಾನು ಬೆಚ್ಚಿಬಿದ್ದೆ. ಅಯ್ಯ ಇದೆಂತದಪ್ಪಾ..? ಹೊಸ ರಗಳೆ ಅದೂ ಸುವರ್ಣಪ್ರಭದಲ್ಲಿ ಎಂದುಕೊಳ್ಳುತ್ತಾ ಸಾಗರದ ಮತ್ತೊಬ್ಬ ರಿಪೋರ್ಟರ್ ಬಳಿ ಲಿಂಕ್ ಕೇಳಿ ಇಸಕೊಂಡು ಓದ ತೊಡಗಿದೆ.
ಸಾಗರ:ಸಮೀಪದ ತಲವಾಟ ಗ್ರಾಮಪಂಚಾಯಿತಿ ವ್ಯಾಪ್ತಿ ಸ.ನಂ.೮೨ ರಲ್ಲಿ ರಾಷ್ಟ್ರೀಯ ಸಂಪತ್ತು ವಿಶಾಲವಾದ ಕೆರೆಯಿದ್ದು,ಕೆರೆ ಅಚ್ಚುಕಟ್ಟು ಭೂಮಿ ಸಮೃದ್ಧವಾಗಿದೆ.
ಕಳೆದ ನೂರಾರು ವರ್ಷಗಳಿಂದ ರೈತಕುಟುಂಬಗಳು ಕೃಷಿ ನಿರ್ವಹಿಸಿಕೊಂಡು ಮಲೆನಾಡಿನ ಸಾಂಪ್ರದಾಯಿಕ ಬೆಳೆ ಅಡಿಕೆ ತೋಟವನ್ನು ನಿರ್ಮಿಸಿಕೊಂಡಿದ್ದಾರೆ.
ಇಲ್ಲಿನ ಸಾಂಪ್ರದಾಯಿಕ ಅಡಿಕೆ ತೋಟವನ್ನು ಹಣನೀಡಿ ಖರೀದಿಸಿಕೊಂಡಿರುವ ವ್ಯಕ್ತಿಯೋರ್ವರು ಬೆಳೆದು ನೂರಾರು ವರ್ಷಗಳಿಂದ ಫಸಲು ನೀಡುತ್ತಿರುವ ಅಡಿಕೆ ಮರವನ್ನೇ ಕಡಿದು ತೋಟವನ್ನು ಸರ್ವನಾಶ ಮಾಡಿ ಪ್ರವಾಸೋದ್ಯಮದ ಹೆಸರಿನಲ್ಲಿ ಹೋಮ್ ಸ್ಟೇ ನಿರ್ಮಿಸಲು ಹೊರಟಿರುವುದು ಅಡಿಕೆ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಅಡಿಕೆ ತೋಟವನ್ನು ಕಂದಾಯ ಇಲಾಖೆಯಲ್ಲಿ ಸರ್ವೆ ನಡೆಸಿ ಬಾಗಾಯ್ತು ಎಂದು ದಾಖಲು ಮಾಡಲು ಕಳೆದ ೩ ದಶಕಗಳಿಂದ ಸಾಧ್ಯವಾಗುತ್ತಿಲ್ಲ.ಹೊಸದಾಗಿ ಅಡಿಕೆ ತೋಟ ಮಾಡಿದ ಭೂಮಿಯ ಬೆಳೆಯನ್ನು ಕೇವಲ ಸಸಿ ಬಾಳೆ ಎಂದು ನಮೂದಿಸಬಹುದಾಗಿದೆಯೇ ಹೊರತು ಬಾಗಾಯ್ತು ಎಂದು ನಮೂದಿಸಲು ಅಸಾಧ್ಯವಾಗಿದೆ.
ಹೀಗಿರುವಾಗ ಪಹಣಿಯಲ್ಲಿ ಬಾಗಾಯ್ತು ಎಂದು ನಮೂದಾಗಿರುವ ಅಮೂಲ್ಯ ಫಲವತ್ತಾದ ಅಡಿಕೆ ತೋಟವನ್ನು ನಾಶ ಮಾಡಿರುವುದು ಮಲೆನಾಡಿನ ಸಂಪ್ರದಾಯ ಸಂಸ್ಕೃತಿಯನ್ನೇ ನಶ ಮಾಡಿದಂತಾಗಿದೆ ಎಂದು ಅಡಿಕೆ ಬೆಳೆಗಾರರು,ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಲವಾಟದ ರಾಘವೇಂದ್ರ ಎನ್ನುವವರ ಹುಚ್ಚು ನಿರ್ದಾರದಿಂದ ಅಡಿಕೆ ತೋಟ ನಾಶವಾಗಿದೆ.ಕಂದಾಯ ಇಲಾಖೆಯ ನಿಯಮಾನುಸಾರ ಪಹಣಿಯಲ್ಲಿ ಬಾಗಾಯ್ತು ಅಡಿಕೆ ಬೆಳೆಯುವ ಭೂಮಿ ಎಂದು ದಾಖಲಾದ ಮೇಲೆ ಸದರಿ ಭೂಮಿಯನ್ನು ಬೇರೆ ಮುಖ್ಯ ಬೆಳೆಯಲು ಸ್ವಯಂಪ್ರೇರಿತರಾಗಿ ಪರಿವರ್ತಿಸುವುದು ನಿಯಮದ ಉಲ್ಲಂಘನೆಯಾಗುತ್ತದೆ.
ಗ್ರಾಮದ ಪ್ರಮುಖ ಜಲಮೂಲ ಕೆರೆ ಅಚ್ಚುಕಟ್ಟು ಭೂಮಿಯನ್ನು ಬೆಳೆ ಬೆಳೆಯುವ ಬದಲಿಗೆ ವ್ಯವ್ಯಹಾರಿಕ ಉದ್ದೇಶಿತ ಕಟ್ಟಡ ನಿರ್ಮಾಣ ಕಾನೂನು ಉಲ್ಲಂಘನೆಯಾಗುತ್ತದೆ.ಹೋಮ್‌ಸ್ಟೇ ಮೊದಲಾದ ಉದ್ದಿಮೆ ನಡೆಸಲು ಖುಷ್ಕಿ ಪಾಳು ಭೂಮಿಯನ್ನು ಭೂ ಪರಿವರ್ತನೆ ನಿಯಮದ ಅಡಿಯಲ್ಲಿ ಪರಿವರ್ತಿಸಿಕೊಂಡು ಕಟ್ಟಡ ನಿರ್ಮಿಸಲು ಮಾತ್ರ ಅವಕಾಶವಿರುತ್ತದೆ.
ಸ್ಥಳಿಯ ಗ್ರಾಮಪಂಚಾಯಿತಿಯೂ ಸರ್ಕಾರದಿಂದ ಭೂ-ಪರಿವರ್ತನೆಯಾಗದ ಅಡಿಕೆ ತೋಟ ಭಾಗಾಯ್ತಿನಲ್ಲಿ ಬೃಹತ್ ಕಟ್ಟಡ ನಿರ್ಮಿಸುತ್ತಿರುವುದಕ್ಕೆ ಪರವಾನಿಗೆ ಕೊಟ್ಟರೆ ನ್ಯಾಯಾಲಯದಿಂದ ನಿಂದನೆಗೆ ಗುರಿಯಾಗಬೇಕಾಗುತ್ತದೆ.
ಈ ಎಲ್ಲಾ ಅಂಶಗಳನ್ನು ಮುಂದಿಟ್ಟು ತಲವಾಟ ಪಂಚಾಯಿತಿ ಗ್ರಾಮಸ್ಥರಾದ ಹೆಚ್.ಕೆ.ರಾಮಚಂದ್ರ ಬಿನ್ ಕೃಷ್ಣಯ್ಯ ಅವರು ತಾಲ್ಲೂಕು ಕಚೇರಿಗೆ ಮತ್ತು ಜಿ.ಪಂ.ಹಾಗೂ ತಾ.ಪಂ ಮತ್ತು ಗ್ರಾಮಪಂಚಾಯಿತಿಗಳಿಗೆ ತಕರಾರು ಅರ್ಜಿ ಗುಜರಾಯಿಸಿದ್ದಾರೆ.
ಕಂದಾಯ ಇಲಾಖೆಯಿಂದ ಸೂಕ್ತ ತನಿಖೆ ನಡೆಸಿ ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. "

ಓದಿ ಮುಗಿಸಿದ ತಕ್ಷಣ ಅನಿಸಿದ್ದು. ಇದು ಸೂಪರ್ ತಲೆ ಉಪಯೋಗಿಸಿದ ನ್ಯೂಸು ಅಂತ ಅನಿಸಿತು. ಹೇಳಿಕೇಳಿ ಹಿತಕರ ಜೈನ್ ಸುವರ್ಣ ಪ್ರಭದ ಸಂಪಾದಕ ನನ್ಗೆ ಪರಿಚಯಸ್ಥ. ನನಗೂ ಏನೂ ಆಗದಂತೆ ಹಾಗೂ ನ್ಯೂಸು ಮಾಡಲು ಗಂಟುಬಿದ್ದ ಜನಕ್ಕೂ ಸಮಾಧಾನವಾಗುವಂತೆ ಮಾಡಿಬಿಟ್ಟಿದ್ದ. ಅಸಲಿಗೆ ನಾನು ನಿರ್ಮಿಸುತ್ತಿರುವುದು ಸದ್ಯಕ್ಕೆ ತೋಟದ ಮನೆಯೆಂದೇ. ಬ್ಲಾಗಿನಲ್ಲಿ ಹೋಂ ಸ್ಟೇ ಎಂದಿದ್ದನ್ನ ಬರಪ್ಪೂರ್ ಸಾಕ್ಷಿ ಅಂದುಕೊಂಡ ರಾಮಚಂದ್ರ ಎಂಡ್ ಮೆಂಬರ್ಸ್ ಅದನ್ನೇ ಹೋಂ ಸ್ಟೇ ಎಂದು ಸ್ವಯಂ ಘೋಷಿಸಿಬಿಟ್ಟಿದ್ದಾರೆ. ಇರಲಿ ಅವರಿಗೆ ನನ್ನ ಮೇಲೆ ಉರಿ ಇದೆ. ಹೇಗಾದರೂ ಮಾಡಿ ತೀರಿಸಿಕೊಳ್ಳಬೇಕು, ಹೀಗಾದರೂ ನನ್ನಿಂದ ಸಮಾಧಾನವಾಗುವುದಾದರೆ ನನಗೆ ಒಂಥರಾ ಖುಷಿ. ನನ್ನನ್ನು ಯಾರೂ ಪ್ರಶ್ನಿಸಬಾರದೆಂಬ ಮನೋಭಾವ ನನ್ನದಲ್ಲ. ನಾನು ಮಾಡಹೊರಟಿರುವ ಕೆಲಸ ಸರ್ಕಾರಿಜಾಗ ಹಾಗೂ ರಸ್ತೆಗೆ ಬೇಲಿ ಹಾಕಲಲ್ಲ ಎಂಬ ಸಮಾಧಾನ ನನಗಿದೆ. ನನ್ನ ಎಲ್ಲಾ ದಾಖಲೆಗಳೂ ಸಾರ್ವಜನಿಕರಿಗೆ ಸಿಗುವಂತಾಗಬೇಕು. ಇದೇ ರಾಮಚಂದ್ರ ಬಿನ್ ಕೃಷ್ಣಯ್ಯ ಹದಿನೈದು ದಿನದ ಹಿಂದೆ ರಸ್ತೆ ಹಾಳುಮಾಡಿದ್ದಾರೆ ಎಂದು ಪಂಚಾಯತಿಗೆ ಕಂಪ್ಲೇಟ್ ಮಾಡಿದ ಮಾರನೇ ದಿವಸ ಹಾಳಾಗದಿದ್ದ ರಸ್ತೆಗೆ ನಾನು ಹಾಳುಮಾಡಿರದ ರಸ್ತೆಗೆ ಹದಿಮೂರು ಲೋಡ್ ಮಣ್ಣು ನನ್ನ ಸ್ವಂತ ಹಣದಿಂದ ಹಾಕಿದವನು ನಾನು.
ಅಯ್ಯಾ ಇದನ್ನೆಲ್ಲಾ ಯಾಕೆ ರಗಳೆ ಮಾಡುತ್ತೀ ಅಂತ ನೀವು ಕೇಳಬಹುದು. ಇಂದು ಮುಂಜಾನೆ ನನ್ನ ಬ್ಲಾಗ್ ನ ಹಳೇ ಪೋಸ್ಟ್ ನಲ್ಲಿ
"Anonymous said...
Yenidu marayre
http://suvarnaprabhadaily.blogspot.com/
Clarification kodtheera?

-Nimma Abhimaani
ತಲವಾಟ ಗ್ರಾಮದ ಸರ್ವೆ ನಂ ೮೨ ಪಹಣಿಯಲ್ಲಿ "ಹುಲ್ಲುಬನ್ನಿ ಹರಾಜು" ಎಂದು ನಮೂದಾಗಿದೆ. ಹಾಗಾಗಿ ಸರ್ಕಾರಕ್ಕೇ ಇದು ಕೆರೆಯೋ ಹರಾಜೋ ಎಂಬ ಅನುಮಾನ, ಸಮೃದ್ದವಾಗಿ ಅಲ್ಲಿ ಹುಲ್ಲು ಬೆಳೆದಿದೆ ನೀರು ಜನವರಿಗೆ ಖಲಾಸ್.
ನೂರಾರು ವರ್ಷದಿಂದ ಅಲ್ಲಿ ಅಡಿಕೆ ಇಲ್ಲ. ಕೇವಲ ಹತ್ತು ವರ್ಷದಿಂದ ನಾನೇ ಸ್ವತಹ ಅಡಿಕೆ ಸಸಿ ಹಾಕಿದ್ದೆ. ಪಹಣಿಯಲ್ಲಿ ತರಿ ಎಂದೇ ಹಾಗೂ ಬೆ: ಅಡಿಕೆಬಾಳೆ ಎಂದೇ ಬರುತ್ತಿದೆ. ಹಾಗೂ ನನ್ನ ಸ್ವಂತ ವಾಸಕ್ಕಾಗಿ ಬೆಳೆಯಿಲ್ಲದ ಅಡಿಕೆ ಮರ ಬೆಳೆಯದ ಕಲ್ಲು ಜಾಗದಲ್ಲಿ ಮನೆ ಕಟ್ಟಿರುತ್ತೇನೆ. ಒಂದೇ ಒಂದು ಅಡಿಕೆ ಮರವನ್ನೂ ಕಡಿದಿಲ್ಲ. ನನಗೆ ಹುಚ್ಚು ಧೈರ್ಯವೂ ಇಲ್ಲ. ಇನ್ನೂ ಹೋಂ ಸ್ಟೆ ನನಗಿಂತ ಹೆಚ್ಚಿನ ಆಸಕ್ತಿ ಅರ್ಜಿದಾರರಿಗೆ ಇದೆ ಹಾಗೂ ನಾನು ಯಾವ ಸರ್ಕಾರಿ ದಾಖಲೆ ಅಥವಾ ಅರ್ಜಿಯಲ್ಲಿ ಹೋಮ್ ಸ್ಟೆ ಕುರಿತು ಹೇಳಿಲ್ಲ.
ನಾನು ಸರ್ಕಾರಕ್ಕೆ ಅರ್ಜಿ ಹಾಕಿದ್ದು ಹಾಗೂ ಕಟ್ಟಿಸುವ ಉದ್ದೇಶ ವಾಸಕ್ಕಾಗಿ ಎಂದಿದೆ. ಇಷ್ಟಾಗ್ಯೂ ಹೋಂ ಸ್ಟೆ ವ್ಯಾವಾಹಾರಿಕ ವ್ಯಾಪ್ತಿಯಲ್ಲಿ ಬರುವುದಿಲ್ಲ. ನಮ್ಮ ವಾಸದ ಮನೆಯ ಹೆಚ್ಚುವರಿಕೋಣೆಯನ್ನು ಇಷ್ಟಪಟ್ಟವರಿಗೆ ಕೊಡಬಹುದು. ಅದನ್ನು ಸರ್ಕಾರ ಕಾನೂನು ಮಾಡಿ ಅದಕ್ಕೆ ಹೋಂ ಸ್ಟೆ ಎಂಬ ಹೆಸರನ್ನಿಟ್ಟಿದೆ.
ರೆವಿನ್ಯೂ ಕಾನೂನಿನ ೯೫/೧ ರ ಪ್ರಕಾರ ಜಮೀನಿನ ಒಡೆಯನು ಕೃಷಿ ಅಭಿವೃದ್ದಿಗೆ ಪೂರಕವಾಗಿ ಕಟ್ಟಡಗಳನ್ನು ಹಾಗೂ ಬಾವಿಯನ್ನು ನಿರ್ಮಿಸಿಕೊಳ್ಳಬಹುದು, ಅದಕ್ಕೆ ಯಾರ ಪರವಾನಿಗೆಯ ಅವಶ್ಯಕತೆಯಿಲ್ಲ. ಹಾಗೂ ಸದರಿ ರೆವಿನ್ಯೂ ಜಾಗದಲ್ಲಿರುವ ಕಟ್ಟಡಕ್ಕೆ ಕೃಷಿಕನಿಗೆ ಸಾಂವಿಧಾನಿಕ ಹಕ್ಕಾದ್ದರಿಂದ ಗ್ರಾಮ ಪಂಚಾಯ್ತಿಯವರು ಪರವಾನಿಗಿ ನೀಡಲು ಬರುವುದಿಲ್ಲ ಅವರು ಎನ್ ಒ ಸಿ ನೀಡಬಹುದಷ್ಟೆ. ಹಾಗಾಗಿ ಪರವಾನಿಗಿ ನೀಡಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ. ಅದೂ ಕೂಡ ನ್ಯಾಯಾಂಗ ನಿಂದನೆ ಎಂಬುದಲ್ಲ ಸಂವಿಧಾನ ಬಾಹೀರ.
ಇನ್ನು ಅಂತಿಮವಾಗಿ ನನಗೆ ಸದರಿ ತಲವಾಟ ಹಾಗೂ ಹಿರೇಮನೆ ಗ್ರಾಮಸ್ಥರು ಮತ್ತು ತಲವಾಟ ಗ್ರಾಮ ಪಂಚಾಯ್ತಿ ಸಂಪೂರ್ಣ ಬೆಂಬಲ ನೀಡಿದೆ. ಹಿರೇಮನೆ ಗ್ರಾಮವಾಸಿಯಾದ ಹೆಚ್.ಕೆ.ರಾಮಚಂದ್ರ ಬಿನ್ ಕೃಷ್ಣಯ್ಯ ರವರು ವೈಯಕ್ತಿಕ ದ್ವೇಷದಿಂದ ಈ ರೀತಿ ಅರ್ಜಿಗಳನ್ನು ಗುಜರಾಯಿಸಿದ್ದಾರೆ. ಸದರಿ ವ್ಯಕ್ತಿಯು ಕಳೆದವರ್ಷ ಅವರ ಆಪ್ತ್ರರಾದ ಎಚ್ ಡಿ ಅನಂತ ಬಿನ್ ಗಂಗೆ ದತ್ತಪ್ಪ ಎಂಬುವವರು ಹಿರೇಮನೆ ಗಂಗಾವಿಶ್ವೇಶ್ವರ ದೇವಸ್ಥಾನದ ಬಳಕೆಯ ಜಮೀನಿಗೆ ಬೇಲಿ ಹಾಕಿದಾಗ ಅದರ ಪರವಾಗಿ ನನ್ನನ್ನು ಸಹಕರಿಸಿ ಎಂದು ಕೇಳಲು ಬಂದಿದ್ದರು, ನಾನು ಅನ್ಯಾಯಕ್ಕೆ ಸಹಕಾರ ನೀಡುವುದಿಲ್ಲ ಎಂದಿದ್ದಕ್ಕಾಗಿ ಅನಂತರವರ ಹಣಬಲದಿಂದ ನನಗೆ ಹೀಗೆ ಕಳೆದ ಆರುತಿಂಗಳಿನಿಂದ ಕಿರುಕುಳ ನೀಡುತ್ತಿದ್ದಾರೆ.
ಈ ಮೇಲ್ಕಂಡ ಕಾರಣಗಳು ಕೇವಲ ನನ್ನ ಸಮಜಾಯಿಶಿ ಅಲ್ಲ ವಾಸ್ತವ. ಹೆಚ್ಚಿನ ಮಾಹಿತಿ ನೋಡಲು ಅಥವಾ ತಿಳಿಯಲು ಬಯಸಿದಲ್ಲಿ ಖುದ್ದು ಭೇಟಿಯನ್ನೂ ನೀಡಬಹುದು.


ಹೀಗೋಂದು ಕಾಮೆಂಟ್ ಬಿದ್ದದ್ದರಿಂದ ಹೀಗೆ ಸೃಷ್ಟೀಕರಣ ಕೊಡಬೇಕಾಯಿತು. ನಾನು ಕಾನೂನುಬಾಹೀರವಾಗಿ ಯಾವುದೇ ಚಟುವಟಿಕೆಯನ್ನು ಮಾಡಿದ್ದರೆ ನನಗೇನು ಅಧಿಕಾರಿಗಳೇ ಬಂದು ಪ್ರಶ್ನಿಸಬೇಕಿಲ್ಲ. ನನ್ನ ಎಲ್ಲಾ ಕೆಲಸಗಳೂ ಕಾನೂನಿನ ಚೌಕಟ್ಟಿನಲ್ಲಿ ಹಾಗೂ ಸಂವಿಧಾನ ಕೃಷಿಕನಿಗೆ ಕೊಟ್ಟ ಹಕ್ಕಿನ ವ್ಯಾಪ್ತಿಯಲ್ಲಿದೆ. ಇಷ್ಟಕ್ಕೂ ತರಲೆಗಳಿಗೆ ಯಾರೂ ಏನೂ ಮಾಡಲಾಗುವಿದಿಲ್ಲ. ಇನ್ನು ಪತ್ರಿಕೆಯಲ್ಲಿನ ವಿಚಾರ, ಅವರು ಇರುವುದೇ ನಮ್ಮ ತಪ್ಪನ್ನು ತಿದ್ದಲು, ಅಕಸ್ಮಾತ್ ಆಗಿದ್ದರೆ ತಿದ್ದಿಕೊಂಡರಾಯಿತಲ್ಲ. ಆಗದಿದ್ದರೆ ನಮ್ಮ ಪಾಡು ನಮಗೆ.
ಆದರೆ ಮಜ ಎಂದರೆ ಇದೊಂದು ನ್ಯೂಸ್ ನಿಂದ ನನಗೆ ಸಾಗರದ ಹಳೇ ಸ್ನೇಹಿತರು ಒಂದಿಷ್ಟು ಮತ್ತೆ ಸಿಕ್ಕಂತಾಯಿತು. ಸಂಜೆ ಏಳರಿಂದ ಹತ್ತ ರ ತನಕ ಎಂಟು ಫೋನು. "ರಾಘು ನಾವಿದ್ದೇವೆ ಎಷ್ಟು ಹೊತ್ತಿಗೆ ಬೇಕಾದರೂ ಹೇಳು" . ಹಾಗಾಗಿಯೇ ಹೇಳಿದ್ದು ಹಿಂದೆ ...."ನಾವಲ್ಲ ಗ್ರೇಟ್ ಅವರೇ.." ಎಂದು ಮತ್ತು ನಿಂದಕರು ಇರಬೇಕು..... ಆಗಲೇ ನಾವು ಮತ್ತು ನಮ್ಮ ಬುದ್ದಿ ಬೆಳೆಯುವುದು.

Wednesday, October 5, 2011

ಇಲ್ಲಿಗೆ ಬಂದವರು ಅಲ್ಲಿಗೆ ಬರುತ್ತೀರಿ ಎಂಬ ನಂಬಿಕೆಯೊಂದಿಗೆ.

ಹೌದೇ ಹೌದು, ಈ ಬರಹ ಓದಿ ಮುಗಿದ ನಂತರ ನೀವು ಕಂಗ್ರಾಟ್ಸ್ ಅಂತ ಕಾಮೆಂಟ್ ಹಾಕಿಯೇ ಹಾಕುತ್ತೀರಿ, ಅಯ್ಯೋ ಕಾಮೆಂಟ್ ಬರೆದು ಆನಂತರ ಒಂದಿಷ್ಟು ಅಕ್ಷರ ತುಂಬಿ ಪೋಸ್ಟ್ ಮಾಡುವಷ್ಟು ಸಮಯ ನಿಮಗೆ ಇಲ್ಲ ಅಂತ ನನಗೂ ಗೊತ್ತು, ಆದರೆ ಹಾಗೆಯೇ ಬಿಡುವುದಿಲ್ಲ, ಮನಸ್ಸಿನೊಳಗೆ ಗುಡ್ ಅಂತ ಅಂದುಕೊಳ್ಳುತ್ತೀರಿ, ಎಲ್ಲಾ ಭಾವನೆಗಳಿಗೆ ಅಕ್ಷರ ರೂಪವನ್ನೇ ಕೊಡಬೇಕೆಂದಿಲ್ಲ, ಮನಸಾರೆ ಹರಸಿದರೂ ಅದು ತಲುಪುತ್ತದೆ, ತಲುಪಿದೆ. ಭೂಮಿ ದುಂಡಗಿದೆ(ಸರ್ಕಲ್ ಅರ್ಥದಲ್ಲಿ), ಹಾಗಾಗಿ ನಾವೂ ನೀವು ಒಂದಲ್ಲ ಒಂದು ದಿವಸ ಸೇರಲೇ ಬೇಕು ಅವತ್ತು ನಿಮ್ಮ ಕೈಯಲ್ಲಿ ಒಂದು ಪುಸ್ತಕ ಇಡುತ್ತೇನೆ. ಹಿಂದೆ ಬರೆದ ಒಂದು ಜೇನಿನ ಹಿಂದೆ, ಹಾಗೂ ಕಟ್ಟು ಕತೆಯ ಕಟ್ಟು, ಕೂಡ ನೀವು ಆಸ್ಥೆಯಿಂದ ನನಗೊಂದು ಕಾಪಿ ಕಳುಹಿಸು ಅಂತ ಹೇಳಿದರೂ ನನಗೆ ಕಳುಹಿಸಲಾಗಲಿಲ್ಲ, ಇರಲಿ ಈಗ ನೇರ ವಿಷಯಕ್ಕೆ ಬರೋಣ,
ಡಿಸೆಂಬರ್ ಅಂತ್ಯದೊಳಗೆ "ಬ್ಲಾಗ್ ಬರಹಗಳು" ಮುದ್ರಣವಾಗಿ ಹೊರಬರುತ್ತಿದೆ ಎಂಬ ವಿಷಯ ನನ್ನಷ್ಟೇ ಸಂತೋಷ ನಿಮಗೆ. ದಿನಾಂಕ ತಿಳಿಸುತ್ತೇನೆ ಅಕಸ್ಮಾತ್ ಪುರ್ಸೂತ್ತು ಇದ್ದರೆ ಬನ್ನಿ, ಇಲ್ಲಿಗೆ ಬಂದವರು ಅಲ್ಲಿಗೆ ಬರುತ್ತೀರಿ ಎಂಬ ನಂಬಿಕೆಯೊಂದಿಗೆ.

ಇತಿ
ಆರ್.ಶರ್ಮಾ.ತಲವಾಟ

Monday, October 3, 2011

ನಾವಲ್ಲ ಗ್ರೇಟ್, ಅವರೇ...!.



ಶಕ್ತಿ ಬಹುಪಾಲು ಎಲ್ಲರಲ್ಲಿಯೂ ಇರುತ್ತದೆ, ವಿಧಿ ವಿಧಾನ ಬೇರೆ ಬೇರೆಯಷ್ಟೆ. ಆದರೆ ಬಹುಪಾಲು ಜನರ ಶಕ್ತಿ ಯುಕ್ತಿಗಳೆಲ್ಲಾ ಇದೆ ಅಂತ ಗೊತ್ತಾಗಲು ಮತ್ತೊಬ್ಬರು ಬೇಕು. ಆ ಮತ್ತೊಬ್ಬರು ಇದ್ದರೆ ನಮ್ಮ ನಿಮ್ಮಲ್ಲಿ ಸಂದುಮೂಲೆಯಲ್ಲಿ ಅಡಗಿದ್ದ ಶಕ್ತಿ ಧುತ್ತನೆ ಎದ್ದು ನಿಲ್ಲುತ್ತದೆ. ಕೈಕಾಲು ಮುಂತಾದ ಅವಯವಗಳೆಲ್ಲಾ ನೂರಕ್ಕೆ ನೂರು ಸರಿಯಿರುವ ನಮ್ಮ ನಿಮ್ಮಂತಹ ಜನರ ಬಳಿ ಸಿಕ್ಕಾಪಟ್ಟೆ ಓಡುವ ಶಕ್ತಿಯಿದ್ದರೂ ನಿತ್ಯ ಜೀವನದಲ್ಲಿ ನಾವು ಬಿರಬಿರನೆ ನಡೆಯಲಾರೆವೂ ಕೂಡ. ಮಾರುದ್ದ ಹೋಗಲು ಕುಂಡೆಗೊಂದು ಬೈಕ್ ಬೇಕಾಗಿದೆ. ಜಸ್ಟ್ ಹೀಗೆ ನೆನಪಿಸಿಕೊಳ್ಳಿ, ಒಬ್ಬರೇ ಹೋಗುತ್ತಿದ್ದಾಗ ಹುಲಿಯೊಂದು ಅಟ್ಟಿಸಿಕೊಂಡು ಬಂದರೆ..?, ಹೌದು ಆವಾಗ ನಮ್ಮ ಓಟದ ಶಕ್ತಿ ನಮಗೇ ಅಚ್ಚರಿ ಹುಟ್ಟಿಸಿಬಿಡುವಷ್ಟಿದೆ, ಬಳಸದ ಕತ್ತಿ ತುಕ್ಕು ಹಿಡಿದಂತಾಗಿದೆ ನಮ್ಮ ಸ್ಥಿತಿ ಅಷ್ಟೆ.
ಇವೆಲ್ಲಾ ಪೀಠಿಕೆಯ ಹಿಂದಿದೆ ಯಥಾಪ್ರಕಾರ ನನ್ನದೊಂದು ರಗಳೆ, ಪುರ್ಸೊತ್ತಿದ್ದರೆ ಕೇಳಿ ಅಲ್ಲ ಓದಿ, ಇಲ್ಲದಿದ್ದರೆ ಹೋಗಲಿ ಬಿಡಿ.
ಮನೆಗೆ ಕರೆಂಟು ಬೇಕು, ಆ ಕರೆಂಟ್ ಎಂಬ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಒಂದಿಷ್ಟು ನಿಯಮಗಳಿವೆ, ಮನೆಕಟ್ಟಿಸುವ ಭರಾಟೆಯಲ್ಲಿ ಮುಳುಗಿದ್ದ ನಾನು ಅವನ್ನೆಲ್ಲಾ ಮರೆತು ತೆಗೆದುಕೊಂಡರಾಯಿತು ಎಂಬ ಉಢಾಫೆಯಲ್ಲಿ ನನ್ನ ಪಾಡಿಗೆ ನಾನು ಕಟ್ಟಿಸುವ ಕೆಲಸದಲ್ಲಿ ತಲ್ಲೀನನಾಗಿಬಿಟ್ಟಿದ್ದೆ. ಮೊನ್ನೆ ಶುಕ್ರವಾರ ನನ್ನ ಕಿವಿಯಲ್ಲಿ ಒಬ್ಬರು " ರಾಗು, ನಿನ್ನ ಹೊಸ ಮನೆಗೆ ಕರೆಂಟು ಕೊಡಬೇಡಿ ಎಂಬರ್ಥದ ಅರ್ಜಿ ಗ್ರಾಮಪಂಚಾಯಿತಿಗೆ ಬಂದು ಬಿದ್ದಿದೆ, ..........ಎಂಬಾತ ಹಠಕ್ಕೆ ಬಿದ್ದಿದ್ದಾನೆ ನಿನಗೆ ಕರೆಂಟು ಕೊಡಬಾರದೆಂದು" ಎಂದರು, ಮತ್ತೂಬ್ಬರು ರಾಗು ".......:, ಕೆಇಬಿ ಯವರಿಗೆ ಫೋನ್ ಮಾಡಿ ’ಅವರ ಡಾಕ್ಯುಮೆಂಟ್ ಸರಿ ಇಲ್ಲ ಕರೆಂಟು ಕೊಡಬೇಡಿ" ಎಂದಿದ್ದಾನೆ ಎಂದರು. ಅಬ್ಬಾ ಅನ್ನಿಸಿಬಿಟ್ಟಿತು. ಶುಕ್ರವಾರ ಮಧ್ಯಾಹ್ನ ಹನ್ನೆರಡು ಗಂಟೆಗೆ ಈ ನ್ಯೂಸ್ ಕಿವಿಗೆ ಬಿದ್ದದ್ದೆ ಅದೆಂತದೋ ಬೂತ ಶಕ್ತಿ ಆವರಿಸಿಕೊಂಡಂತಾಯಿತು, ಬೈಕು, ಕಾರು, ಜನ, ಡಾಕ್ಯುಮೆಂಟ್ ಮುಂತಾದ ಅವಶ್ಯಕತೆಯಿರುವ ಎಲ್ಲಾವುದನ್ನು ಒಟ್ಟು ಮಾಡಿಕೊಂಡು ಹಿಂದೆಮುಂದೆ ಓಡಾಡಿ ಮಂಡೆಯ ಮೇಲೆ ದೋಸೆ ಹಿಟ್ಟು ಹೊಯ್ದರೆ ಚುಂಯ್ ಎಂದು ಕ್ಷಣ ಮಾತ್ರದಲ್ಲಿ ದೋಸೆಯಾಗುವಷ್ಟು ತಲೆಕೆಡಿಸಿಕೊಂಡೆ. ಶನಿವಾರ ಮಧ್ಯಾಹ್ನ ವಿದ್ಯುತ್ ಮನೆ ಬೆಳಗಿತು.
ಚಕ್ ಎಂದು ಬಲ್ಪ್ ಹತ್ತಿದ ತಕ್ಷಣ ಒಂಥರಾ ನಿರುಮ್ಮಳ ಭಾವ. ಸರಿ ಸರಿ ಸರಿ ಈಗ ಮತ್ತೆ ಆರಂಭಕ್ಕೆ ಬರೋಣ. ನಮ್ಮ ಶಕ್ತಿ ಇದೆ ಅಂತ ನಮಗೆ ಗೊತ್ತಾಗಲು ಹುಲಿ ನಮ್ಮ ಹಿಂದೆ ಬರಬೇಕಾ, ಅಥವಾ ಇಲಿಯ ಹಿಂದೆ ನಾವು ಓಡಬೇಕಾ?, ಇರಲಿ ಅವೆಲ್ಲಾ ಮಿಲಿಯನ್ ಡಾಲರ್ ಪ್ರಶ್ನೆಗಳಂತೂ ಅಲ್ಲ ಸಿಕ್ಕಾಪಟ್ಟೆ ತಲೆಕೆರೆದುಕೊಂಡು ಉತ್ತರಿಸಲು, ಹಿಂದೆಯೂ ಕೋಟ್ಯಾಂತರ ಜನ ಮನೆ ಕಟ್ಟಿದ್ದಾರೆ, ಅವರೆಲ್ಲಾ ಕರೆಂಟು ಪಡೆದಿದ್ದಾರೆ, ಅಲ್ಲಿ ಲಕ್ಷಾಂತರ ಜನಕ್ಕೆ ಇಂಥಹ ಬೆನ್ನೆಟ್ಟಿಬರುವವರು ಇದ್ದರು, ಅವರುಗಳು ಕೂಡ ಹೀಗೆ ಎನೋ ಒಂದು ಮಾಡಿದ್ದರು. ಪ್ರಶ್ನೆ ಅದಲ್ಲ, ಆದರೆ ನಮ್ಮನ್ನು ತಿವಿದು ಎಬ್ಬಿಸಲು ಮತ್ತೊಬ್ಬರು ಬೇಕಲ್ಲ, ಅವರು ಮಾತ್ರಾ ಅಪರೂಪ. ಪಾಪ ಮಂದಿ ಅವರಿಗೆ ಹಿಡಿಶಾಪ ಹಾಕುತ್ತಾರೆ ಆದರೆ ಅವರು ತಮ್ಮ ಕೆಲಸ ಬಿಟ್ಟು ಎನೆಲ್ಲಾ ಮಾಡುತ್ತಿರುತ್ತಾರಲ್ಲ ಅದು ನಿಜವಾಗಿಯೂ ಕಷ್ಟದ್ದು, ಕಾರಣ ಅವರ ಹಿಂದೆ ಹುಲಿಯೂ ಇಲ್ಲ ಮುಂದೆ ಇಲಿಯೂ ಇಲ್ಲ, ಜತೆಗೆ ಗುರಿಯೂ ಇಲ್ಲ ಬಹಳಷ್ಟು ಗೊತ್ತೂ ಇಲ್ಲ, ಹಾಗಾಗಿ ನಾವಲ್ಲ ಗ್ರೇಟ್, ಅವರೇ...!. ಟೋಟಲ್ ಏನೇ ಆದರೂ ತೆನವಿನಾ ತೃಣಮಪಿ ನಚಲತಿ ಅಂತ ನಾವು ನಂಬಿಕೊಂಡಮೇಲೆ ಮುಗಿಯಿತಷ್ಟೆ.

Friday, September 30, 2011

ಲೈಫೆಂಬ ಲೈಪು ಸೆಟಲೈಟ್ ಗಿಂತ ಮೇಲೆ ಸೂಪರ್ ಆಗಿ ಸೆಟ್ಲ್ ಆಗುತ್ತೆ.

ಅದೇಕೋ ಈ ವಾರ ಇಂತಹದ್ದೇ ಆಲೋಚನೆಗಳಪ್ಪಾ, ಆಲೋಚನೆಗಳು ಏಕೆ ಬರುತ್ತವೆ?,ಎಲ್ಲಿಂದ ಬರುತ್ತವೆ?, ನಾವು ನೋಡಿದ್ದು ಕೇಳಿದ್ದು,ತಿಳಿದಿದ್ದು ಒಳಗೆ ಸೇರಿ ಯೋಚನೆಗಿಳಿದು ಆಲೋಚನೆಯಾಗುತ್ತದೆಯೋ, ನನಗೂ ಸರಿಯಾಗಿ ಗೊತ್ತಿಲ್ಲ, ಆದರೆ ಒಂದಂತೂ ಸತ್ಯ ಒಂದಿಷ್ಟು ಒಂದಷ್ಟು ದಿವಸ ಪುತುಪುತುನೆ ಹುಟ್ಟುತ್ತವೆ ಮತ್ತೆ ಮನಸ್ಸು ಲೌಕಿಕಕ್ಕೆ ಇಳಿದು ಮುಳುಗೇಳತೊಡಗುತ್ತದೆ.
ನಮ್ಮ ಪ್ರಾರ್ಥನೆ ಹೇಗಿರಬೇಕು?, ಎಂಬಷ್ಟೆ ವಿಷಯದ ಬೆನ್ನತ್ತಿ ಹೋದರೆ ಒಂದು ಕಾದಂಬರಿಗಾಗುವಷ್ಟು ಬೇಡಿಕೆಗಳನ್ನ ಸಂಗ್ರಹಿಸಬಹುದು. ಇಷ್ಟಕ್ಕೂ ಬದುಕು ಸುಂದರವಾಗಲು ಪ್ರಾರ್ಥಿಸಲೇ ಬೇಕಾ? ಎಂಬುದು ಗಡ್ಡಬಿಟ್ಟವರ ಮಟ್ಟದ ಚಿಂತನೆಯ ವಿಷಯವಾದ್ದರಿಂದ ಅದನ್ನ ಅಲ್ಲಿಗೇ ಕೈಬಿಟ್ಟು ನಮ್ಮ ನಿಮ್ಮಂತಹ ಆರ್ಡಿನರಿ ಪಾಮರರ ಮಟ್ಟದ ಚಿಂತನೆಯಿಂದ ನೋಡೋಣ.
ಬೆಳಗ್ಗೆ ಮುಂಚೆ ಅಥವಾ ಲೇಟಾಗಿ ಎದ್ದು ಹುಲಿ ಏನು ಹಲ್ಲು ತಿಕ್ಕುತ್ತಾ? ಎಂಬಂಥಹ ಒಡ್ಡ ಪ್ರಶ್ನೆಯನ್ನು ಹಾಕಿಕೂಳ್ಳದೇ ವಿನೀತರಾಗಿ ಗಸಗಸ ಹಲ್ಲು ತಿಕ್ಕಿ ಬಸಬಸ ಬಸಿಯುವುವ ಬೆಳ್ಳನೆಯ ನೊರೆಯನ್ನೆಲ್ಲಾ ಅಲ್ಲೇ ಬಿಟ್ಟಾಕಿ, ಮೆತ್ತನೆಯ ಟರ್ಕಿ ಟವೆಲ್ಲಿನಲ್ಲಿ ಮುಖ ಒರೆಸಿಕೊಂಡು ಒಮ್ಮೆ ಕನ್ನಡಿಯತ್ತ ನೋಡಿ ಮುಖದ ಆಕಾರವನ್ನು ವಿಕಾರ ಮಾಡಿ ನಂತರ ಕಿಟಕಿಯಲ್ಲಿ ಕಾರಣವಿಲ್ಲದೇ ಹಣಕಿ ಒಂದು ಕಪ್ ಕಾಫಿಗೆ ಮುಂಚೆ ಅರೆಕ್ಷಣ ದೇವರ ಫೋಟೋದತ್ತ ಎರಡು ಹಾತ್ ಜೋಡಿಸುವುದು ನಿಮ್ಮಂತಹ ಪೇಟೆಮಂದಿಯ ದಿನಚರಿ. ಅದೇ ನಮ್ಮದಾದರೆ ಕಪ್ಪು ಕತ್ತಲೆಯ ಬಚ್ಚಲು ಮನೆಯ ಹೊಕ್ಕು ತೋರ್ಬೆರಳನ್ನೇ ಬ್ರಷ್ ಮಾಡಿಕೊಂಡು ಚಿಂಯ್ ಚಿಂಯ್ ಸದ್ದು ಬರುವವರೆಗೂ ಉಜ್ಜಿ ನಂತರ ಹ್ಯಾ ಪುರ್ರ್ ಎಂದು ಕ್ಯಾಕರಿಸಿ ತದನಂತರ ತೆಳ್ಳನೆಯ ಒಂದು ಕಾಲದಲ್ಲಿ ಬಿಳಿಯ ಬಣ್ಣ ಹೊಂದಿದ್ದ ಸಾಟಿ ಪಂಚೆಯಲ್ಲಿ ಮುಖ ಒರೆಸಿ ಸೀದಾ ದೇವರು ಮನೆಯ ವಿಭೂತಿ ಕರಂಡಿಕೆಗೆ ಕೈ ಹಾಕಿ ಮರುಕ್ಷಣ ಯಥಾ ಪ್ರಕಾರ ಎರಡು ಹಾತ್....
ಆ ಕ್ಷಣ ಇದೆಯೆಲ್ಲಾ ಬಹುಪಾಲು ಮಂದಿ ಅಲ್ಲೊಂದು ಸಣ್ಣ ಪ್ರಾರ್ಥನೆಯ ವಾಕ್ಯವನ್ನು ಮಡಗಿರುತ್ತಾರೆ, "ಕಾಪಾಡಪ್ಪಾ ತಂದೆ, ಒಳ್ಳೆಯದು ಮಾಡು, ಸುಖವಾಗಿರಲಿ ಜೀವನ, " ಹೀಗೆ ಏನೇನೋ ಅವರದೇ ಆದ ವಾಕ್ಯ ರಚನೆ. ಅಲ್ಲಿ ಅವರು ಮನ:ಪೂರ್ವಕವಾಗಿ ಹೇಳುತ್ತಾರೋ ಅಥವಾ ಹಲ್ಲುಜ್ಜುವ ಕ್ರಿಯೆಯಷ್ಟೇ ಮಾಮೂಲೋ ಅನ್ನುವುದು ಮತ್ತೆ ಬೇರೆಯದೇ ಆದ ತರ್ಕಕ್ಕೆ ಎಡೆಮಾಡಿಕೊಡುತ್ತದೆಯಾದ್ದರಿಂದ ಅದನ್ನ ಅಲ್ಲಿಗೇ ಬಿಡೋಣ. ಆದರೆ ಅಪರೂಪಕ್ಕೊಬ್ಬರು ಆ ಕೆಲವು ಕ್ಷಣಗಳನ್ನು ಅತ್ಯಮೂಲ್ಯ ಅಂದುಕೊಂಡು ಭಗವಂತನ ಅಸ್ಥಿತ್ವವನ್ನು ಮನಸಾ ಒಪ್ಪಿಕೊಂಡು ಒಂದು ಗಟ್ಟಿಯಾದ ಪ್ರಾರ್ಥನೆ ಮಾಡುತ್ತಾರೆ. ಹೌದು ಹಾಗೆ ಅಂದುಕೊಂಡು ಕೆಲವು ಕ್ಷಣಗಳನ್ನು ನೀವು ನಿಮ್ಮ ಸುಪ್ತಮನಸ್ಸಿನೊಳಗೆ ದಾಖಲಿಸಬಲ್ಲಿರಾದರೆ ನಿಮ್ಮ ಪ್ರಾರ್ಥನೆ ಸಾಕಾರಗೊಳ್ಳತೊಡಗುತ್ತದೆ. ಸರಿಯಪ್ಪಾ ಸಾಕಾರಗೊಳ್ಳುವುದೇನೋ ಸರಿ, ಪ್ರಾರ್ಥನೆ ಯಾವುದು? ಎಂಬ ಪ್ರಶ್ನೆಗೆ ಉತ್ತರ ಹೇಳು ಅಂತ ನಿಮ್ಮ ಪ್ರಶ್ನೆ ಇದ್ದರೂ ಇಲ್ಲದಿದ್ದರೂ ನನ್ನ ಉತ್ತರ ಇದೀಗ ಇಷ್ಟು.
ಪ್ರಾರ್ಥನೆಯಲ್ಲಿ ಹಲವು ಇವೆ ಬಿಡಿ, ನಮ್ಮ ಉದ್ದಾರವಷ್ಟೇ ಕೆಲವರ ಪ್ರಾರ್ಥನೆಯದಾದರೆ ಮತೊಬ್ಬರ ಕೇಡು ಕೂಡ ಕೆಲವರ ಪ್ರಾರ್ಥನೆಯಾಗುವ ಸಾದ್ಯತೆ ಇದೆ. ಹಾಗಾಗಿ ನಾವು ಶುದ್ಧ ಪ್ರಾರ್ಥನೆಯನ್ನ ಮಾತ್ರಾ ಗಣನೆಗೆ ತೆಗೆದುಕೊಳ್ಳೋಣ. ಶುದ್ಧ ಸುಲಭ ಪ್ರಾರ್ಥನೆ ಯೆಂದರೆ "ನನಗೆ ನೆಮ್ಮದಿ ನೀಡೋ ಭಗವಂತಾ". ನೋಡಿ ನಾಲ್ಕೇ ಪದಗಳಲ್ಲಿ ಇಡೀ ಬ್ರಹ್ಮಾಂಡದ ಸೃಷ್ಟಿಕರ್ತನನ್ನು ಕಟ್ಟಿ ಹಾಕಿದಂತಾಯಿತು. ಈಗ ನಿಮಗೆ ನೆಮ್ಮದಿ ಬರಪ್ಪೂರ್ ಸ್ಯಾಂಕ್ಷನ್ ಮಾಡಿದ ಅವನು ಅಂತಿಟ್ಟು ಕೊಳ್ಳಿ( ಎಷ್ಟು ದಿವಸ ಆತ ಸುಮ್ಮನಿದ್ದಾನು, ಕೊಡಲೇ ಬೇಕು ತಾನೆ?) ಆ ನಿಮ್ಮ ನೆಮ್ಮದಿಗೆ ಆಸೆಯ ಪಟ್ಟಿಯನ್ನು ಜೋಡಿಸಲು ಶುರುವಿಟ್ಟು ಕೊಳ್ಳಿ. ಅಲ್ಲಿಗೆ ಲೈಫೆಂಬ ಲೈಪು ಸೆಟಲೈಟ್ ಗಿಂತ ಮೇಲೆ ಸೂಪರ್ ಆಗಿ ಸೆಟ್ಲ್ ಆಗುತ್ತೆ.
ಆದರೆ ನಾನು ನನ್ನ ಪ್ರಾರ್ಥನೆಯನ್ನು ಕೊಂಚ ಬದಲಿಸಿದ್ದೇನೆ " ಭಗವಂತ ಒಳ್ಳೆಯ ಕೆಲಸಗಳು ಬಹಳ ಆಗಬೇಕಾದ್ದಿದೆ, ಅವು ನನ್ನ ಮೂಲಕ ಆಗಲಿ" ಎಂದು ಬಿಡುತ್ತಿದ್ದೇನೆ. ಪ್ರಾರ್ಥನೆ ಫಲಿಸುತ್ತಲಿದೆ ಖಂಡಿತ. ಅಥವಾ ನಾನು ಹಾಗಂದುಕೊಳ್ಳುತ್ತಿದೇನೆ ಎಂಬುದು ನಿಮ್ಮ ಅಭಿಪ್ರಾಯವಾದರೆ ಅದೂ ಕೂಡ ಒಕೆ ಒಳ್ಳೆಯದೇ..

Thursday, September 29, 2011

ಪ್ರೀತಿಯೆಂದರೆ ಪ್ರೀತಿಯೊಂದೇ ಇರಲಿ

ಗೊತ್ತು ನನಗೆ, ನಿಮಗೆ ನಿಮ್ಮ ಮಕ್ಕಳ ಮೇಲೆ ಪ್ರೀತಿಯಿದೆ, ಅವರ ಭವಿಷ್ಯವನ್ನು ಉಜ್ವಲವಾಗಿಸಬೇಕೆನ್ನುವ ಆಸೆಯಿದೆ, ಅವರು ನಿಮ್ಮಂತೆ ಕಷ್ಟಪಡಬಾರದು ಎನ್ನುವ ಆಸ್ಥೆಯಿದೆ, ಸಮಾಜದ ಉನ್ನತ ಸ್ಥಾನ ಅಲಂಕರಿಸಬೇಕೆನ್ನುವ ಹಂಬಲವಿದೆ. ಓದಿ ತಿಳಿದು ಹಣ ಗಳಿಸಿ ಯಶಸ್ವಿಯಾಗಲಿ ನನ್ನ ಮಕ್ಕಳು ಎಂಬ ಅನಿಸಿಕೆಯಿದೆ. ಪ್ರತೀ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಲ್ಲದಿದ್ದರೂ ತೊಂಬತ್ತರ ಮೇಲೆ ಬರಬೇಕು ಅನ್ನುವ ಇರಾದೆ ಇದೆ. ಇವೆಲ್ಲಾ ಪಾಸಿಟೀವ್ ಕಾರಣಗಳೇ ಅನ್ನುವುದೂ ನಿಜ. ಹಾಗಾಗಿ ನೀವು ಮಗುವನ್ನು ಗದರುತ್ತೀರಿ, ಪಕ್ಕದ ಮನೆಯ ಮಗುವನ್ನು ನೋಡಿ ಕಲಿ ಎನ್ನುತ್ತೀರಿ, ಒಮ್ಮೊಮ್ಮೆ ಹಂಗಿಸುತ್ತೀರಿ, ಬೇರೆಯವರ ಮೇಲಿನ ಸಿಟ್ಟನ್ನು ಮಗು ಓದಿಲ್ಲದ ಕಾರಣವನ್ನು ಹಿಡಿದುಕೊಂಡು ಹೊಡೆದದ್ದೂ ಉಂಟು. ಹೀಗೆಲ್ಲ ಮಾಡುವ ನಮ್ಮ ನಿಮ್ಮ ವರ್ತನೆಗೆ ಪ್ರಮುಖ ಕಾರಣ " ನಮ್ಮ ಕತೆಯಂತೂ ಹೀಗಾಯಿತು, ಮಕ್ಕಳಾದರೂ........."
ಹೌದಪ್ಪಾ ಹೌದು ನಮ್ಮ ನಿಮ್ಮ ಟೆನ್ಷನ್ ಆಸೆ ಆಕಾಂಕ್ಷೆ ಫಲಾ ಪ್ರತಿಫಲ ನಿರೀಕ್ಷೆ ಮುಂತಾದವುಗಳೆಲ್ಲಾ ನೂರಕ್ಕೆ ನೂರು ಸರಿ. ಆದರೆ ಹಸಿಮಣ್ಣಿನ ಗೋಡೆಯಂತಿರುವ ಬಾಲ್ಯಾವಸ್ಥೆಯ ಮಗುವಿಗೆ ಇದ್ಯಾವುದರ ಪರಿವೆ ಯೋಚನೆ ವಿವೇಚನೆ ಇರಲು ಸಾದ್ಯವಿಲ್ಲ. ಹಾಗಾಗಿ ಅದು ಸರಳ ಲೆಕ್ಕಾಚಾರಕ್ಕೆ ಇಳಿಯುತ್ತದೆ. ಅಪ್ಪ ಅಮ್ಮನಿಗೆ ನನ್ನ ಕಂಡರೆ ಆಗುವುದಿಲ್ಲ. ....!. ಹಾಗಂತ ಅದು ಅದೇ ತೀರ್ಮಾನಕೆ ಬಂದುಬಿಡುವುದಿಲ್ಲ ಕಾರಣ ದಿನದ ಬಹುಬಾಗ ಅಪ್ಪ ಅಮ್ಮ ಪ್ರೀತಿಸುತ್ತಾರೆ, ದಿನಕ್ಕೆ ಒಂದೆರಡು ಅಥವಾ ಹೆಚ್ಚೆಂದರೆ ಮೂರ್ನಾಲ್ಕು ಬಾರಿ ಹೀಗೆಲ್ಲ ಗದರುತ್ತಾರೆ. ಮಗು ಆರಂಭದಲ್ಲಿ ಗೊಂದಲಕ್ಕೆ ಬೀಳುತ್ತದೆ, ಬೆಳೆದಂತೆಲ್ಲಾ ಮಗುವಿನ ಮನಸ್ಸಿನ ಮೇಲೆ ಗದರಿದ್ದು ಉಳಿಯುತ್ತದೆ ಪ್ರೀತಿ ಅಳಿಯ ತೊಡಗುತ್ತದೆ.
ಹಾಗಾಗಿ ಒಟ್ಟಿನಲ್ಲಿ ಸಿಂಪಲ್ ತೀರ್ಮಾನ ವೆಂದರೆ ಒಳ್ಳೆಯದನ್ನು ಮಾಡ ಹೊರಟ ನಾವು ವೃಥಾ ಕೆಟ್ಟವರಾಗಿಬಿಡುತ್ತೇವೆ. ಅವಕಾಶ ಸಿಕ್ಕಲ್ಲಿ ಅವು ತಿರಿಸಿಕೊಳ್ಳಲು ಕಾತರಿಸತೊಡಗುತ್ತವೆ ಅವಕ್ಕೆನೆ ತಿಳಿಯದಂತೆ. ಈ ಕಾರಣದಿಂದ ಪ್ರೀತಿಯೆಂದರೆ ಪ್ರೀತಿಯೊಂದೇ ಇರಲಿ ದ್ವೇಷವೆಂದರೆ ಪ್ರೀತಿಯ ಲವಲೇಷವೂ ಬೇಡ. ಅದು ಹೇಗೆಂದರೆ ಪುರಾಣಕಾಲದ ಪಾತಿವೃತ್ಯವಿದ್ದಂತೆ. ಅಲ್ಲಿ ಶೇಕಡಾವಾರಿಗೆ ಸ್ಥಾನವಿಲ್ಲ. ಒಬ್ಬ ಗಂಡನೊಟ್ಟಿಗೆ ಸಂಸಾರ ಜೀವನಪೂರ್ತಿ.... ಸಾಗಿಸುತ್ತಿದ್ದರೆ ಮಾತ್ರಾ ಪತಿವೃತೆ. ಮೂವತ್ತೈದು ವರ್ಷ ಒಂದು ಗಂಡ ಕೊನೇಯ ಐದು ವರ್ಷ ಇನ್ನೊಂದು ಗಂಡ ಎಂದಾಗ ಅಲ್ಲಿ ತೊಂಬತ್ತು ಪರ್ಸೆಂಟ್ ಪಾತಿವೃತ್ಯ ಎಂಬುದಕ್ಕೆ ಅವಕಾಶವಿಲ್ಲ.
ಆರಂಭವೂ ಅಷ್ಟೇ ಅಂತ್ಯವೂ ಅಷ್ಟೇ ಪ್ರೀತಿಯ ಮನೆನಿರ್ಮಿಸಲು ಅಡಿಪಾಯವೂ ಪ್ರೀತಿಯದಾದರೆ ಮಾತ್ರಾ ಪರಿಪೂರ್ಣ. ಮಜ ಗೊತ್ತ ? ಅಲ್ಲದಿದ್ದರೆ " ಅಪೂರ್ಣ, ಇಂತಿಷ್ಟು, ಶೇಕಡಾ " ಎಂಬ ಪದಗಳು ಇಲ್ಲಿಲ್ಲ. ಇಲ್ಲ ಎಂದರೆ ಇಲ್ಲ ಅಷ್ಟೆ.

Sunday, September 25, 2011

ಸಂಪೂರ್ಣ ಸಿಕ್ಕಮೇಲೆ ಮತ್ತೆ ಕೊರೆಯುತ್ತೇನೆ.....!



ಅಡಿಕೆ ತೆಂಗಿನ ಮದ್ಯೆ ಅದೊಂದು ಅತ್ತಿ ಮರ. ನಮ್ಮ ನಿರ್ಮಾಣ ಹಂತದಲ್ಲಿರುವ ಹೋಂ ಸ್ಟೇಯ ಎದುರು ಚಂದವಾಗಿ ನಿಂತಿದೆ. ಮಳೆಗಾಲದ ಎಲೆ ಉದುರಿಸಿ ಹೊಸ ಚಿಗುರುಗಳನ್ನು ಇನ್ನೇನು ಹೊರ ಹೊಮ್ಮಿಸುವ ಹಂತದಲ್ಲಿದೆ. ಇರಲಿ ಅದು ಇರುವ ಮರದ ಕತೆಯಾಯಿತು, ಅಲ್ಲಿ ಇಲ್ಲದ ಮರಗಳ ವಿಚಾರದತ್ತ ಹೊರಳೋಣ.

ಸಂತೃಪ್ತ ಜೀವನಕ್ಕೆ ಗಂಡ-ಹೆಂಡತಿ-ಚಂದದ ಮಕ್ಕಳು-ಒಂದಿಷ್ಟು ಹಣ-ಮಾಡಲು ಕೆಲಸ ಮುಂತ್ ಮುಂತಾದ ಹಲವು ಇರಬೇಕು. ಬೇಕುಗಳ ಪಟ್ಟಿಯನ್ನು ಬೆಳೆಯಲು ಬಿಟ್ಟರೆ ಅಂತ್ಯವೇ ಇಲ್ಲ ಬಿಡಿ. ಬೆಳೆಯಲು ಬಿಟ್ಟ ಜನಕ್ಕೇ ನೆಮ್ಮದಿ ಅಂಬೋದು ದೂರದ ಮಾತೇ ಸರಿ. ಆದರೆ ನೆಮ್ಮದಿಯೊಂದು ಇದೆ ಅಂತಾದರೆ ಮಿಕ್ಕೆಲ್ಲ ಗೌಣ ಅಂತ ಅಂದುಕೊಳ್ಳಬಹುದು. ಈ ಮನಸ್ಸಿನ ನೆಮ್ಮದಿಗೆ ಉಸಿರಾಟ ಕ್ರಿಯೆ ಬಹಳ ಮುಖ್ಯವಂತೆ. ನಿಧಾನ ಉಸಿರಾಟ, ಗಮನಿಸಿ ಉಸಿರಾಟ, ತ್ವರಿತ ಉಸಿರಾಟ ಹೀಗೆ ಏನೇನೋ ಪದ್ದತಿ ಇದೆ. ಅದರ ವಿವರ ಯೋಗ ಧ್ಯಾನ ಅಭ್ಯಾಸ ಮಾಡುವವರನ್ನು ಕೇಳಬೇಕು ನನಗೆ ಗೊತ್ತಿಲ್ಲ. ಆದರೆ ನನಗೆ ಗೊತ್ತಿರುವುದು ಎಂದರೆ ಆ ಉಸಿರಾಟಕ್ಕೆ ಶುದ್ಧವಾದ ಗಾಳಿಯ ವಿಷಯ.

ಹೌದೇ ಹೌದು ನಾವು ಎಲ್ಲಿ ಎಂಥಹಾ ಜಾಗದಲ್ಲಿ ಯಾವುದನ್ನ ಉಸಿರಾಡುತ್ತಿದ್ದೇವೆ ಎಂಬ ವಿಷಯದ ಮೇಲೆ ನಮ್ಮ ನರನಾಡಿಗಳ ನೆಮ್ಮದಿ ಅವಲಂಬಿಸಿದೆ ಎಂಬುದು ನಮ್ಮ ನಿಮ್ಮಂಥಹ ಸರಳ ಸಹಜ ಮಿದುಳಿಗೆ ಹೊಳೆಯುವ ವಿಷಯ. ಆದರೆ ಹಿಂದಿನ ಜನರು(ಯಾರು ಅಂತ ನನಗೂ ಗೊತ್ತಿಲ್ಲ....!) ಅಕಾರಾದಿ ಪಂಚ ವೃಕ್ಷಗಳ ಸಾಪಿಪ್ಯದಲ್ಲಿ ಉಸಿರಾಟ ನಡೆಯಿಸಿದರೆ ಲೈಫೆಂಬ ಲೈಫು ನೆಮ್ಮದಿಯ ಆಕಾಶದಲ್ಲಿ ಬೆಳ್ಳಿ ಮೋಡದಂತೆ ತೇಲಾಡುತ್ತದೆಯಂತೆ. ಆ ಅಕಾರಾದಿ ಪಂಚವೃಕ್ಷಗಳನ್ನು ದೇವಸ್ಥಾನದ ಸುತ್ತ ಬೆಳೆಸುತ್ತಿದ್ದರಂತೆ. ಕಾರಣ ಎಲ್ಲರ ಮನೆಯ ಸುತ್ತ ಹಾಗೆ ಬೆಳೆಸಲು ಅಸಾದ್ಯದ ಕಾರಣ ಹೀಗೆ ದೇವಸ್ಥಾನದ ಸುತ್ತ ಬೆಳೆಯಿಸದರೆ ದಿನಕ್ಕೊಮ್ಮೆ ಭಕ್ತರು ಅದರಿಂದ ಹೊರ ಹೊಮ್ಮುವ ಔಷಧೀಯ ಗುಣದ ಆಮ್ಲಜನಕ ಸೇವಿಸಿದರೆ ಮನಸ್ಸು ಪ್ರಫುಲ್ಲಗೊಂಡು ನೆಮ್ಮದಿಯ ಕೇಂದ್ರವಾಗುತ್ತದೆ ಅಂತ ಹಾಗೆಲ್ಲ ಮಾಡಿದ್ದಾರಂತೆ.

ಜತೆ ಜತೆಗೆ ಮಕ್ಕಳಾಗಲು, ದಮ್ಮು ಕೆಮ್ಮು ಮಾಯವಾಗಿ ಆರೋಗ್ಯ ನಳನಳಿಸಲು, ಕೂಡ ಅದರಿಂದ ಹೊರ ಹೊಮ್ಮುವ ಗಾಳಿ ಹೈ ಲೆವಲ್ ಅಂತೆ. ಈ ಅಂತೆಕಂತೆಗಳ ಕತೆಯನ್ನು ಮುಂದಿಟ್ಟುಕೊಂಡು ನಾನು ಕೆಲಕಾಲ ಅತ್ತಿಮರದ ಕೆಳಗೆ ಬರಬರನೆ ಉಸಿರಾಟ ಮಾಡಿದ್ದಿದೆ. ಹಾಗೂ ಜತೆಜತೆಯಲ್ಲಿಯೇ ಆಹಾ ಎಂಥ ಬರಪ್ಪೂರ್ ನೆಮ್ಮದಿ ಅಂತ ನಂಬಿಕೊಂಡದ್ದೂ ಇದೆ. ಇರಲಿ ಅದರ ತರ್ಕ ಕುತರ್ಕ ಬದಿಗಿಟ್ಟು ಅಕಾರಾದಿ ಪಂಚವೃಕ್ಷದತ್ತ ಹೊರಳೋಣ

ಅತಿ-ಆಲ-ಅಶ್ವಥ್ಥ-ಅಶೋಕ-ಅರಳಿ ಎಂಬುದು ಅಕಾರಾದಿ ಪಂಚವೃಕ್ಷ ಅಂತ ಯಾರೋ ಹೇಳಿದರು. ಅವು ಮನೆಯ ಸುತ್ತ ಇರಬೇಕಂತೆ. ಇದರಲ್ಲಿ ನನಗೆ ಒಂದು ಸಣ್ಣ ಡೌಟು ಹೊರಟಿತು. ಅರಳಿ ಹಾಗೂ ಅಶ್ವಥ್ಥ ಒಂದೇ ಅಂತ. ಆದರೆ ಅಲ್ಲ ಅಂತ ಮತ್ಯಾರೋ ಹೇಳಿದರು. ಅಶೋಕ ವೃಕ್ಷದ ಬಗ್ಗೆಯೂ ಮತ್ತೊಂದು ಡೌಟು. ಈಗ ನೇರವಾಗಿ ಮೇಲಕ್ಕೆ ಹೋಗುವ ಅಶೋಕದ ಮರ ಇದೆಯಲ್ಲ ಅದು ಇದಲ್ಲ. ಅಶೋಕವೃಕ್ಷ ಅಂತಲೇ ಬೇರೆ ಇದೆಯಂತೆ. ಒಟ್ಟಿನಲ್ಲಿ ಅದರ ಬಗೆಗಿನ ಕೆಲ ಗೊಂದಲಗಳ ನಡುವೆ ಏನೋ ಒಂದು ಇದೆ. ಇದೆಲ್ಲದರ ಮಾಹಿತಿ ಪುರೋಹಿತರ ಬಳಿ ಸಿಗಬಹುದೆಂದು ಅವರೊಬ್ಬರನ್ನು ಕೇಳಿದೆ. "ಯಾರಿಗೂ ಬ್ಯಾಡ ಅಂದಿದ್ದು ನಿನಗೆ ಬೇಕು ಮಾರಾಯ, ಸುಮ್ನಿರ ಸಾಕು" ಎಂದು ತಮಗೆ ಗೊತ್ತಿಲ್ಲ ಎಂಬುದನ್ನು ನೇರವಾಗಿ ಹೇಳದೇ ನನ್ನ ಮೇಲೆ ತಿರುಗಿಸಿದರು.

ಅಂತೂ ಎನೋ ಎಂತೋ ಇದೆ ಸಂಪೂರ್ಣ ಸಿಕ್ಕಮೇಲೆ ಮತ್ತೆ ಕೊರೆಯುತ್ತೇನೆ ಅಲ್ಲಲ್ಲ ಬರೆಯುತ್ತೇನೆ. ಅಲ್ಲಿಯವರೆಗೆ ಸಿಕ್ಕ ಗಾಳಿಯನ್ನೇ ಮೆಲ್ಲಗೆ ಉಸಿರಾಡುತ್ತಿರಿ. ಓಕೆನಾ..?

ಎಷ್ಟೋ ಸಾರಿ ನಮ್ಮ ಲೈಫೂ ಹಾಗೆಯೇ ಅಲ್ಲವೆ?,




ಅಬ್ಬಾ ಬೆಳಿಗ್ಗೆ ಅಪರೂಪಕ್ಕೆ ಭಾವನಾ ಲೋಕಕ್ಕೆ ಜಾರಿದೆ. ಮನೆ ಕಟ್ಟುವುದು ತರ್ಲೆ ಅರ್ಜಿಗೆ ಉತ್ತರ ಕೊಡುವುದು, ತಕರಾರುಗಳಿಗೆ ಒದ್ದಾಡುವುದು ಮುಂತಾದ ಕೆಲಸಗಳಿಂದ ಮಂಡೆ ಕೊಚ್ಚೆಯಾಗಿತ್ತು. ಬಣ್ಣ ಬಣ್ಣದ ಕಾಮನ ಬಿಲ್ಲು ಕಂಡು ಒಮ್ಮೆ ಪುಳಕಿತನಾದೆ.

ಅದೆಷ್ಟೋ ವರ್ಷಗಳು ಸಂದುಹೋಗಿತ್ತು ಕಾಮನಬಿಲ್ಲನ್ನು ಆಸ್ವಾದಿಸದೆ. ಆಕಾಶದಲ್ಲಿ ಬಣ್ಣದ ಗೆರೆಗಳನ್ನು ಕಂಡಾಗ ಒಮ್ಮೆಲೆ ಅದ್ಯಾವುದೋ ಲೋಕಕ್ಕೆ ಜಾರಿದಂತಾಯಿತು.

ಯಾವಾಗ್ಯಾವಗಲೋ ಕಾಮನಬಿಲ್ಲು ನೋಡಿದ್ದೆನಾದರೂ ಇಷ್ಟೊಂದು ದೊಡ್ಡ ಕಾಮನಬಿಲ್ಲು ನೋಡಿರಲಿಲ್ಲ. ಲಗುಬಗೆಯಿಂದ ಕ್ಯಾಮೆರಾದಲ್ಲಿ ಚಿತ್ರ ಸೆರೆ ಹಿಡಿಯುವ ಮನಸ್ಸಾಗಿ ಓಡಿದೆ. ದುರಾದೃಷ್ಟ ಕ್ಯಾಮೆರಾ ಆನ್ ಮಾಡುತ್ತಿದಂತೆ ಲೋ ಬ್ಯಾಟರಿ ತೋರಿಸಿತು. ಮತ್ತೆ ಗಡಿಬಿಡಿಯಿಂದ ಚಾರ್ಜ್ ಗೆ ಹಾಕಿದೆ. ಬ್ಯಾಟರಿ ಚಾರ್ಜ್ ಆಗುವಷ್ಟರಲ್ಲಿ ಕಾಮನ ಬಿಲ್ಲು ತನ್ನ ದಟ್ಟ ಬಣ್ಣವನ್ನು ಕಳೆದುಕೊಳ್ಳುತ್ತಾ ಸಾಗುತ್ತಿತ್ತು. ದಟ್ಟ ಬಣ್ಣದ ಸುರಸುಂದರ ಕಾಮನಬಿಲ್ಲು ಮೂಡಿದಾಗ ಬ್ಯಾಟರಿಯಲ್ಲಿ ಚಾರ್ಜ್ ಇರಲಿಲ್ಲ ಬ್ಯಾಟರಿ ಚಾರ್ಜ್ ಆಗುವಷ್ಟರಲ್ಲಿ ಕಾಮನಬಿಲ್ಲು ಕರಗತೊಡಗಿತ್ತು. ಎಷ್ಟೋ ಸಾರಿ ನಮ್ಮ ಲೈಫೂ ಹಾಗೆಯೇ ಅಲ್ಲವೆ?, ಲಕಲಕನೆ ಹೊಳೆಯುವ ದೇಹ ಮನಸ್ಸು ಹುರುಪು ಉಲ್ಲಾಸ ಉತ್ಸಾಹ ಇರುವಾಗ ಅವಕಾಶ ಇರುವುದಿಲ್ಲ, ಆವಕಾಶ ಬಂದಾಗ ಉತ್ಸಾಹ ಉಲ್ಲಾಸ ತನ್ನ ಬಣ್ಣವನ್ನು ಕಳೆದುಕೊಂಡಿರುತ್ತದೆ.

Wednesday, September 21, 2011

ಹಾಗಾಗಿ ಹೀಗೆಲ್ಲ......!

ಅದೇಕೋ ಬ್ಲಾಗ್ ಬರೆಯಲಾಗುತ್ತಿಲ್ಲ. ಕೆಲಸದ ಒತ್ತಡ ಅಂತಲ್ಲ, ಒತ್ತಡದ ಕೆಲಸ ಅಂತ ಅನ್ನಬಹುದು. ನನ್ನ ನಲವತ್ತೈದನೇ ವಯಸ್ಸಿನ ವರೆಗೆ ಕಂಡಿರದ ಕೋರ್ಟು ಪೋಲೀಸ್ ಸ್ಟೇಷನ್ ಮುಂತಾದರ ಮೆಟ್ಟಿಲನ್ನ ಏರುವ ಪ್ರಸಂಗಗಳು ಒಂದರ ಹಿಂದೆ ಒಂದು ಬಂದ ಪರಿಣಾಮ ಅಕ್ಷರಗಳನ್ನು ಕುಟ್ಟುವ ಮನಸ್ಥಿತಿ ಇಲ್ಲವಾಗಿದೆ.
........ಎಂಬ ಜ್ಯೋತಿಷಿ ಬಡತನದಲ್ಲಿ ಬೆಳೆದವ. ಸೇರಿ ಪ್ರಪಂಚ ನೋಡಿ ಊರಿಗೆ ಬಂದು ಕವಡೆ ಹಾಕತೊಡಗಿದ. ಅವನ ಪಾಡಿಗೆ ಅವನು ಊರವರ ಪಾಡಿಗೆ ನಾವು. ಅವನ ಬಳಿ ಹೇರಳ ಹಣ ಸೇರಿತು. ಊರನ್ನಾಳುವ ಮನಸ್ಸು ಗರಿಕೆದರಿತು. ದೇವಸ್ಥಾನಕ್ಕೆ ಜಾಗಕ್ಕೆ ಬೇಲಿ ಹಾಕಿದ. ಸರ್ಕಾರಿ ಅಧಿಕಾರಿಗಳ ಸಹಾಯದಿಂದ ಬೇಲಿ ಕಿತ್ತೆಸೆದು ಮುಗಿಯಿತು. ಆದರೆ .......ಜ್ಯೋತಿಷಿಯ ಮನಸ್ಸಿನಿಂದ ಸೋಲನ್ನು ಕಿತ್ತುಹಾಕಲಾಗಲಿಲ್ಲ. ಊರವರ ಮೇಲೆ ಸೇದಿಗೆ ಇಳಿದ. ಕೈಯಲ್ಲಿ ಹಣ ಜತೆಗೊಂದಿಷ್ಟು ಹುಂಬ ಭಕ್ತರು. ರಾಕ್ಷಸ ಮನಸ್ಥ್ತಿಗೆ ಇಳಿಯಲು ಇನ್ನೇನು ಬೇಕು. ನನ್ನನ್ನೂ ಸೇರಿದಂತೆ ಊರಿನ ಹದಿಮೂರು ಜನರ ಮೇಲೆ ಹಲ್ಲೆ ದರೋಡೆ ಮುಂತಾದ ಏನೇನೋ ಕೇಸು ಹಣದ ಮುಖಾಂತರ ದಾಖಲಾಯಿತು. ಈಗ ಕೋರ್ಟ್ ಮುಂದೆ ನಾವುಗಳು ಕೈಕಟ್ಟಿ ನಿಲ್ಲಬೇಕು ಪ್ರತೀ ತಿಂಗಳು. ಸಾರ್ವಜನಿಕ ರಸ್ತೆಗೆ ಅಡ್ಡಲಾದ ಬೇಲಿ ತೆರವು ಮಾಡಿದ್ದಕ್ಕೆ ನಮಗೆ ಈಗ ಈ ಬಳುವಳಿ ಆಶ್ರಮದ ನಿರ್ದೇಶಕನಾಗಿದ್ದ .........ಎಂಬ ಈಪುರುಷನ ...! ಸಾಹಸ......! ಆಶ್ರಮಕ್ಕೆ ತಲುಪಿಸಿಯಾಯಿತು. ಒಂದೇ ಸುತ್ತಿನ ಸರ್ವಾನುಮತದ ತೀರ್ಮಾನದೊಂದಿಗೆ ......ನಿರ್ದೇಶಕ ಸ್ಥಾನದಿಂದ ............ಔಟ್.
ಇಂತಹದ್ದು ಹಳ್ಳಿ ರಾಜಕೀಯ. ಇಲ್ಲಿದ್ದೂ ಇದನ್ನೆಲ್ಲಾ ನೋಡುತ್ತಾ ಸುಮ್ಮನೆ ಕೂರಲಾಗುವುದಿಲ್ಲ. ಸುಮ್ಮನೆ ಕೂರಲಿಲ್ಲ ಅಂದಮೇಲೆ ಇತರರು ನಮ್ಮನ್ನು ಸುಮ್ಮನೆ ಕೂರಲು ಬಿಡುವುದಿಲ್ಲ. ಕೂರಲೇ ಆಗಲಿಲ್ಲಎಂದಮೇಲೆ ಬರೆಯಲಾಗುತ್ತದಯೇ..? ಹಾಗಾಗಿ ಹೀಗೆಲ್ಲ..

Sunday, September 18, 2011

ಪುರ್ಸೊತ್ತಾದಾಗ ಹೋಗಿ ಬನ್ನಿ,


ವರದಹಳ್ಳಿಯಲ್ಲಿ ಹೊಸತಾಗಿ ಗೋಶಾಲೆಯನ್ನು ನಿರ್ಮಿಸಲಾಗಿದೆ. ಕಟ್ಟಡ ಅದ್ಬುತವಾಗಿ ಮೂಡಿಬಂದಿದೆ. ಮೊನ್ನೆ ಹೀಗೆ ಹೋಗಿಯಾಗಿತ್ತು, ಊಟ ಮಾಡಿ ನಿಮಗಾಗಿ ಅಂತ ಒಂದು ಸ್ನ್ಯಾಪ್ ಹಾಕಿಕೊಂಡು ಬಂದೆ. ಕೆಂಪುಕಲ್ಲಿನ ಕಟ್ಟಡ ಅಪರೂಪವಾಗಿ ಕಟ್ಟಿದ್ದಾರೆ.ಪುರ್ಸೊತ್ತಾದಾಗ ಹೋಗಿ ಬನ್ನಿ,



Wednesday, August 24, 2011

ಯಾವಾಗ ಬರುತ್ತೋ ಗೊತ್ತಿಲ್ಲ.

















ಅದು "ಚಕ್ರತೀರ್ಥ" ಅನ್ನೋ ಹೆಸರಿನ ಧಾರಾವಾಹಿಯಂತೆ. ನಿರ್ದೇಶನ ಪಿ ಶೇಷಾದ್ರಿ. ನಮ್ಮ ಮನೆಯ ಹತ್ತಿರ ಶೂಟಿಂಗ್ ಮಾಡಿಕೊಂಡು ಹೋಗಿದ್ದಾರೆ. ಯಾವಾಗ ಪ್ರಸಾರವಾಗುತ್ತೋ ಗೊತ್ತಿಲ್ಲ. ನನ್ನ ಹತ್ತಿರವೂ ಒಂದು ಪಾತ್ರ ಮಾಡಿ ಅಂತ ಕೇಳಿದರು. ಮಾಡೋದನ್ನೇ ನೆಟ್ಟಗೆ ಮಾಡಲಾಗಲಿಲ್ಲ ಇನ್ನು ಇದೊಂದು ಅಂತ ಆಗುವುದಿಲ್ಲ ಅಂತ ಅಂದೆ. ಒಂದು ವಾರ ಕಾಲ ಇಲ್ಲಿ ಸುತ್ತ ಮುತ್ತ ಶೂಟಿಂಗ್ ಮಾಡಿಕೊಂಡು ಹೋಗಿದ್ದಾರೆ ಯಾವಾಗ ಬರುತ್ತೋ ಗೊತ್ತಿಲ್ಲ.

Tuesday, August 23, 2011

"ಮಹಾನಂದಿ ಸಂಸ್ಮರಣೆ"

ತಾಳಗುಪ್ಪ ಆ ೨೧: "ಗೋಮೂತ್ರ ಪಾನ ಭಸ್ಮ ಸ್ನಾನ ಮನುಷ್ಯನಿಗೆ ವರದಾನ " ಎಂದು ಕೂಡ್ಲಿ ಮಠದ ಶ್ರೀ ಸಿದ್ಧರೂಢ ಮಹಾಸ್ವಾಮಿಗಳು ಹೇಳಿದರು. ಅವರು ಶ್ರೀ ಕೃಷ್ಣಜನ್ಮಾಷ್ಠಮಿಯ ದಿನದಂದು ತಾಳಗುಪ್ಪದ ರಂಗನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಿದ್ದಾಪುರ ಹವ್ಯಕ ಮಂಡಲದ ತಾಳಗುಪ್ಪ-ಇಡುವಾಣಿ ವಲಯದವರು ಏರ್ಪಡಿಸಿದ್ದ "ಮಹಾನಂದಿ ಸಂಸ್ಮರಣೆ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಸಭ್ಯರು, ಸಜ್ಜನರು,ಸುಸಂಸ್ಕೃತರ ಜೀವನಕ್ಕೆ ನಾವು ಗೋಮಾತೆಗೆ ಉದಾಹರಿಸುತ್ತೇವೆ, ಅದೇ ರೀತಿ ನಮ್ಮ ಬದುಕಿನಲ್ಲಿಯೂ ಗೋವಿನ ಉತ್ಪನ್ನಗಳ ಬಳಸುತ್ತೇವೆ, ಹಾಲಷ್ಟೇ ಅಲ್ಲದೇ ಗೋಜನ್ಯಗಳಿಂದ ಅನೇಕ ಔಷಧಿಯನ್ನೂ ಪಡೆಯುತ್ತೇವೆ, ಇಷ್ಟೆಲ್ಲಾ ಅನುಕೂಲಗಳನ್ನು ಪಡೆದ ಗೋವಿಗೆ ನಾವು ಸ್ಮರಣೆಯ ಮುಖಾಂತರವಾದರೂ ನಮನ ಹೇಳಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಲಲಿತಾ ನಾರಾಯಣ್ ಮಾತನಾಡಿ, ಕೃಷಿಕರ ಸಂಸ್ಕೃತಿಯಲ್ಲಿ ಹುದುಗಿಹೋಗಿದ್ದ ಗೋ ಸಾಕಣೆ ಪದ್ದತಿ ಪರಿಸ್ಥಿತಿಯ ದೆಸೆಯಿಂದ ನಿಧಾನ ಕಣ್ಮರೆಯಾಗುತ್ತಿದೆ, ಅದು ಜನಮನದಿಂದ ದೂರವಾಗುವ ಮೊದಲು ನಾವು ಪೋಷಿಸ ಬೇಕಿದೆ, ದೇಹ ತ್ಯಜಿಸಿದ "ಮಹಾನಂದಿ" ಜನರ ಮನಸ್ಸಿನಲ್ಲಿ ನೆಲೆಸಿರುವಂತೆ ಜಾನುವಾರು ಸಾಕಾಣಿಕೆಯ ಪ್ರಕ್ರಿಯೆಗೆ ಮತ್ತೆ ಎಲ್ಲೆಡೆ ಮಾನ್ಯತೆ ಸಿಗಲಿ ಎಂದರು.
ಶ್ರೀಮತಿ ಶಾಂಭವಿ ಪರಮೇಶ್ವರ್, "ಮಾ ಗೋ ಪ್ರಾಡಕ್ಟ್" ನ ಉತ್ಪನ್ನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಜನರು ಗೋ ಉತ್ಪನ್ನಗಳ ಖರೀದಿ ಮಾಡಿ ಬಳಸಿ ತನ್ಮೂಲಕ ಗೋ ಸೇವೆಯನ್ನು ಮಾಡಬೇಕೆಂದು ವಿನಂತಿಸಿದರು.
ಕಲ್ಪನಾ ಸತೀಶ್ ಸಭೆಗೆ ಗೋ ಪ್ರತಿಜ್ನೆಯನ್ನು ಬೋಧಿಸಿದರು, ಸಿದ್ಧಾಪುರ ವಲಯದ ಉಪಾಧ್ಯಕ್ಷ ಶಾಂತಾರಾಂ ಹಿರೇಮನೆಯವರು ಗೋವಿನ ಕುರಿತು ಲಾವಣಿ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಕಳೆನೀಡಿದರು.
ಶ್ರೀಕೃಷ್ಣ ಜನ್ಮಾಷ್ಠಮಿಯ ದಿನದಂದು ಸಂಪನ್ನಗೊಂಡ ಕಾರ್ಯಕ್ರಮಕ್ಕೆ, ಪ್ರಮೇಶ್ವರ್ ಸ್ವಾಗತಿಸಿ ಮಂಜುನಾಥ್ ಕೌಲುಮನೆ ವಂದಿಸಿದರು. ವೇದಿಕೆಯಲ್ಲಿ, ಶ್ರೀ ಸಿದ್ಧಾರೂಢ ಸ್ವಾಮೀಜಿ, ಸುಬ್ರಾಯರು ಮೂಗಿಮನೆ, ಅಂಕದ ಚನ್ನಬಸಪ್ಪ ಶೆಟ್ಟರು, ತಾಳಗುಪ್ಪ ಗ್ರಾ ಪಂ ಅಧ್ಯಕ್ಷ ಮೋಹನ್ ಶೇಟ್, ತಲವಾಟ ಗ್ರಾಪಂ ಅಧ್ಯಕ್ಷೆ ಶಾಂಭವಿ ಪಿ, ತಾಪಂ ಸದಸ್ಯೆ ಸುಮಿತ್ರ, ಜಿಪಂ ಸದಸ್ಯೆ ಲಲಿತಾ ನಾರಾಯಣ್, ಕನ್ನಪ್ಪ, ರಾಬರ್ಟ್ ಮುಂತಾದವರು ಉಪಸ್ಥಿತರಿದ್ದರು.

Tuesday, August 2, 2011

ಕಟ್ಟೋ ಕೆಲಸದ ಕುರಿತು ಕುಟ್ಟೋಕೆ ಮನಸ್ಸಿಲ್ಲ.

ಕಟ್ಟೋದು ಅಂದರೆ ಕಷ್ಟದಕೆಲಸ ಬಿಡಿ. ಅದರಲ್ಲಿಯೂ ಈ ಪಿಚ್ಚಿಂಗ್ ಅಂತ ಇದೆಯಲ್ಲ ಇದನ್ನ ಕಟ್ಟೋ ಕೆಲಸ ಇನ್ನೂ ಒಂದು ತೂಕ ಹೆಚ್ಚಿನದು. ಕೇವಲ ಮಣ್ಣು ಮತ್ತು ಬ್ಯಾಲೆನ್ಸ್ ಬಳಸಿ ಪಿಚ್ಚಿಂಗ್ ಕಟ್ಟೋ ಕೆಲಸ ನೋಡೋದೂ ಒಂದು ಮಜ. ಮುಂದೊಂದು ದಿನ ಡಿಟೇಲ್ ಬರೆಯುತ್ತೇನೆ. ಅದೇಕೋ ಇವತು ಕಟ್ಟೋ ಕೆಲಸದ ಕುರಿತು ಕುಟ್ಟೋಕೆ ಮನಸ್ಸಿಲ್ಲ. ಆದರೂ ತಡೆಯಲಾರದೆ ಫೋಟೋ ಸಮೇತ ಇಷ್ಟು.

Wednesday, July 27, 2011

"ಹೆಲ್ತ್ ಎಂದರೆ ಆರೋಗ್ಯ".

"ನಂಜಿಗೆ ಕುಡಿಯುವುದು" ಅಂತ ನಮ್ಮ ಮನೆಗಳಲ್ಲಿ ವರ್ಷಕ್ಕೊಮ್ಮೆಯಾದರೂ ಅಮ್ಮನ ಹಳೇ ಪದ್ದತಿ. ಕಾಳಜೀರಿಗೆ ಎಂಬ ಜೀರಿಗೆ ತರಹದ ಘೋರಾ ಕಹಿಯ ದ್ರವ ಗಂಟಲಿಗೆ ಸುರುವಿಕೊಳ್ಳುತ್ತಿದಂತೆ ಒಮ್ಮೆ ಇಡೀ ಮೈಯೆಲ್ಲಾ ಜುಂಕರಿಸಿ ಕಹಿ ಆವರಿಸಿಕೊಳ್ಳುವ ತಾಕತ್ತಿನ ಔಷಧಿ ಅದು. ಬೆಳಗಾ ಮುಂಚೆ "ಏಳ್ರಾ..’ ಎಂದು ವರಾತ ಹಚ್ಚಿ ಎಬ್ಬಿಸಿ ಒಂದು ಲೋಟ ಹಠಕ್ಕೆ ಬಿದ್ದು ಕುಡಿಸಿದರೆ ವರ್ಷಪೂರ್ತಿ ಕಜ್ಜಿ ತುರಿಕೆ ಮುಂತಾದ ರಗಳೆಯಿಂದ ಮುಕ್ತಿ ಎಂಬುದು ಅದರ ಫಲ.
ಆನಂತರ ಕಾಲ ಸಂದಂತೆಲ್ಲಾ ಅಮ್ಮನೆಂಬ ಅಮ್ಮನೇ ಆಲೋಪತಿಗೆ ಮೊರೆಹೋದಮೇಲೆ ಕಾಳಜೀರಿಗೆ ಡಬ್ಬಿಯಲ್ಲಿಯೇ ಉಳಿಯತೊಡಗಿತು ಎನ್ನುವುದು ಬೇರೆಯದೇ ಕತೆಯಾಗುತ್ತದೆ ಬಿಡಿ. ಈಗ ಅದರ ಪ್ರಸ್ತಾಪ ಪ್ರಲಾಪ ಶುರುವಿಟ್ಟುಕೊಂಡು ನಾವು ನೀವು ಗೊಣಗಾಡುವುದು ಬೇಡ. ಸತ್ಯಕ್ಕೆ ತಲೆಮೇಲೆ ಹೊಡೆಯುವ ಮಾತೆಂದರೆ "ಹೆಲ್ತ್ ಎಂದರೆ ಆರೋಗ್ಯ". ಆರೋಗ್ಯ ಮತ್ತು ಸಂಪತ್ತು ಯಾರ ಬಳಿ ಇದೆಯೋ ಅದರ ಮಹತ್ವ ಇದ್ದವರಿಗೆ ಅರಿವಾಗುವುದಿಲ್ಲ. ಅವುಗಳ ಮಹತ್ವ ಮಹಿಮೆ ಅವು ಇಲ್ಲವಾದಾಗಲೇ ಎಂಬುದು ಎಲ್ಲರಿಗೂ ತಿಳಿದಿದ್ದರೂ ತಿಳಿಯದ ವಿಷಯ. ಈ ಆರೋಗ್ಯ ಎಂಬುದು ಚನ್ನಾಗಿರಬೇಕು ಎಂತಾದರೆ ಔಷಧಿಯಲ್ಲಲ್ಲ ಆಹಾರದಲ್ಲಿ ಎಂಬ ಸರ್ವೇ ಸಾಮಾನ್ಯವಾದ ವಿಷಯವನ್ನು ಬಹಳ ಜನ ಮರೆತು ಹೋದಂತಿದೆ ಎಂಬುದು ನನ್ನ ಅನುಭವವೇದ್ಯ ಮಾತು. ವಾತ ಪಿತ್ಥ ಕಫ ಎಂಬ ತತ್ವಾಧಾರಿತ ಆಯುರ್ವೇದ ಔಷಧಿ ಪದ್ದತಿ ಮೂಲವಾಗಿ ಆಹಾರವನ್ನ ಅವಲಂಬಿಸಿದೆ. ಇಂತಿಂತ ಖಾಯಿಲೆ ಬಂದಮೇಲೆ ಅಂತಂತದ್ದನ್ನು ತಿನ್ನದೇ ಪಥ್ಯ ಮಾಡಿ ಎನ್ನುತ್ತಾ ಹಾಗೆಯೇ ಎಂತೆಂತದ್ದನ್ನೋ ತಿನ್ನದೇ, ಸ್ವಲ್ಪವಾದರೂ ಅಡ್ಡಿಯಿಲ್ಲ ಸತ್ವಭರಿತವಾದದ್ದನ್ನು ತಿನ್ನಿ, ತನ್ಮೂಲಕ ಆರೋಗ್ಯದಿಂದ ನಳನಳಿಸಿ ಎನ್ನುತ್ತದೆ ಆಯುರ್ವೇದ. ಈ ಪದ್ದತಿಯಿದೆಯಲ್ಲಾ ಅದು ಪಕ್ಕಾ ನಮ್ಮ ನಾಲಿಗೆಯನ್ನೇ ಅವಲಂಬಿಸಿದೆ. ನಿಮಗೆ ಗೊತ್ತಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ನನ್ನ ಅನುಭವಕ್ಕೆ ಹಲವಾರು ಬಾರಿ ಬಂದಿದೆ. ಯಾವಾಗಲೂ ವಟವಟ ಎನ್ನುವ ನಾಲಿಗೆ ದೇಹಕ್ಕೆ ಬೇಕಾಗುವ ಸತ್ವಗಳನ್ನೂ ಬಯಸುವ ಕೆಲಸ ಮಾಡುತ್ತದೆ. ಅದು ಇದ್ದಕ್ಕಿದ್ದಂತೆ ಹುಳಿ ಬೇಡುತ್ತದೆ, ಸಿಹಿ ಕೇಳುತ್ತದೆ, ಆಶ್ಚರ್ಯವೆಂದರೆ ಕಹಿಯನ್ನೂ ಕೂಡ (ಮೆಂತೆ ಉಕ್ಕರಿಕೆ) ಬಯಸುತ್ತದೆ. ಆದರೆ ನಾವುಗಳೆಂಬ ನಾವುಗಳು ಅದು ಬಯಸಿದ ಸಮಯದಲ್ಲಿ ತಿನ್ನುವುದಿಲ್ಲ, ಅಥವಾ ಬಯಸಿದಷ್ಟು ತಿನ್ನದೇ ಯಡ್ದಾದಿಡ್ಡಿ ಭಾರಿಸಿಬಿಡುತ್ತೇವೆ. ಆವಾಗ ಏರುಪೇರು, ಬಯಸಿದ ಸತ್ವ ನಿರಾಕರಿಸಿ ಯಡವಟ್ಟು ಮಾಡಿಕೊಳ್ಳುವ ಬಗೆ ಒಂದೆಡೆಯಾದರೆ ದೇಹದಿಂದ ಹೊರಹೋಗ ಬಯಸುವ ತ್ಯಾಜ್ಯಗಳನ್ನು ಸರಿಯಾದ ಸಮಯದಲ್ಲಿ ಹೋಗಲು ಬಿಡದೆ ಅನಾರೋಗ್ಯ ತಂದುಕೊಂಡು ಬಿಡುತ್ತೇವೆ. ಅಂತೂ ಹೀಗೆಲ್ಲಾ ಇದೆ ನೋಡಿ ಸಮಾಚಾರ.
ನಂಗೆ ಇವೆಲ್ಲಾ ಯಾಕೆ ನೆನಪಾಯಿತೆಂದರೆ ಬೆಳಗ್ಗೆ ಗುಟುಕರಿಸಿದ ಕಾಳಜೀರಿಗೆಯ ರಸದ ಗಂಟಲ ಕಹಿ ಇನ್ನೂ ಆರಿಲ್ಲ.

Monday, July 25, 2011

ಪಂಚಾಂಗ ಬೇಕಿಲ್ಲ ಪಂಚೆ ಎತ್ತಿಕಟ್ಟಬೇಕಿಲ್ಲ



ನಾನು ತೀರಾ ಈ ಮುಹೂರ್ತ ಶಾಸ್ತ್ರ ಜಾತಕಫಲ ಮುಂತಾದ್ದನ್ನೆಲ್ಲಾ ಬೆನ್ನತ್ತಿ ಹೋಗುವುದು ಕಡಿಮೆ. ಆದರೂ ತೀರಾ ಬುಡಕ್ಕೆಬಂದಾಗ ಸಂಕಟಬಂದಾಗ ವೆಂಕಟ ರಮಣ ಎಂದು ಹೋಗುವುದು ಇದೆಯಾದರೂ ಅದು ಜ್ಯೋತಿಷಿಗಳ ಬುಡಕ್ಕಂತೂ ಸದ್ಯಕ್ಕೆ ಅಲ್ಲಬಿಡಿ.

ಅವೆಲ್ಲಾ ಆಯಿತು ಆದರೆ ಮುಹೂರ್ತ ಎಂದರೆ ಅರ್ಥ ಇಷ್ಟೆ. ನಾವು ಮಾಡಬೇಕಾಗಿರುವ ಕೆಲಸ ನಿರ್ವಿಘ್ನವಾಗಿ ನಡೆಯಲು ಒಂದು ದಿನ ನಿಕ್ಕಿಮಾಡುವುದು, ಅಂದು ತೊಂದರೆ ತಾಪತ್ರಯ ಇರಬಾರದು ಅಷ್ಟೆ. ಮೊನ್ನೆ ಶುಕ್ರವಾರ ನಮ್ಮ ಬಿಲ್ಡಿಂಗ್ ನ ಸೆಂಟ್ರಿಂಗ್ ಮೇಸ್ತ್ರಿ ನೀಲಕಂಠ "ಸಾರ್ ಸೋಮವಾರ ಅಂದ್ರೆ ೨೫ ನೇ ತಾರೀಖು ಮೌಲ್ಡ್ ಹಾಕೋಣ ಸಾರ್" ಎಂದು ಬುಡಕ್ಕೊಂದು ತಲೆಗೊಂದು ಸಾರ್ ಸೇರಿಸಿ ಹೇಳಿದ. ಅವನು ಆ ಮುಹೂರ್ತ ಫಿಕ್ಸ್ ಮಾಡುತ್ತಿದ್ದ ಸಮಯದಲ್ಲಿ ಜಡಿಮಳೆ ಭಾರಿಸುತ್ತಿತ್ತು ಜೊರ್ರಂತ. ನನಗೆ ಅನಾಮತ್ತು ೨ ಲಕ್ಷರೂಪಾಯಿಯ ವ್ಯವಹಾರ. ಗೌರೀಶನಿಗೆ ಫೋನ್ ಹಚ್ಚಿದೆ. ಅವರೂ ಯೆಸ್ ಅಂದಾಯಿತು. ಆದರೆ ಒಳಗೊಳಗೆ ಪುಕ್ಕು. ಶನಿವಾರ ಮಳೆ ಇನ್ನೂ ಒಂದು ತೂಕ ಹೆಚ್ಚು, ಭಾನುವಾರ ಯಡ್ದಾದಿಡ್ಡಿ. ಒಟ್ಟಿನಲ್ಲಿ ಇದೊಂದು ಯಡವಟ್ಟು ಕೆಲಸವಾಯಿತು. ತಿಂಗಳಿನಿಂದ ಬಾರದ ಬಿಸಿಲು ಜಡಿಯುತ್ತಿರುವ ಮಳೆ ದಿಡೀರಂತ ನಾವು ಮೌಲ್ಡ್ ಹಾಕುತ್ತೇವೆ ಅಂತ ನಿಲ್ಲುತ್ತದಾ..? ಎಂಬ ಪ್ರಶ್ನೆ ಒಳಗೊಳಗೆ. ಕಟ್ಟಡದ ಮೈನ್ ಮೇಸ್ತ್ರಿ ತಿಲಕ್ ರಾಯ್ಕರ್ ವೆಂಕಟರಮಣ ದೇವಸ್ಥಾನದ ಶಾಸ್ತ್ರಿಗಳ ಬಳಿ ಕವಡೆ ಹಾಕಿಸಿ ಶಾಸ್ತ್ರ ಕೇಳಿ ಬಂದೂ ಆಯಿತು. ಆದರೆ ಭಾನುವಾರ ರಾತ್ರಿ ಜಡಿಯುತ್ತಿದ್ದ ಮಳೆಗೆ ಇದ್ಯಾವುದರ ಪರಿಯೂ ಇಲ್ಲ. ಅಂತೂ ಸೋಮವಾರ ಬೆಳಗಾಯಿತು. ಒಂಬತ್ತು ಗಂಟೆಗೆವರೆಗೆ ಹನಿ ಮಳೆಯೂ ಇಲ್ಲ. ನೀಲಕಂಠ ನ ಬಳಿ "ನೀ ಬಾಳ ಅಸಾಮಿ ಬಿಡಪೋ ಅಂದೆ. ಹತ್ತು ಗಂಟೆಗೆ ಬಿಸಿಲು. ನನಗೆ ಅಚ್ಚರಿಯೋ ಅಚ್ಚರಿ. ಮಧ್ಯಾಹ್ನ ಕೆಲಸಗಾರರು ಊಟಕ್ಕೆ ಬಿಟ್ಟಾಗ ಅರ್ದ ಗಂಟೆ ಸಿಕ್ಕಾಪಟ್ಟೆ ಮಳೆ. ನಂತರ ಮಾಯವಾದ ಮಳೆರಾಯ ಈ ಕ್ಷಣ ಅಂದರೆ ರಾತ್ರಿ ಹನ್ನೊಂದು ಗಂಟೆಯವರೆಗೂ ಹಾರಾಹನಿಯನ್ನೂ ಉದರಿಸುತಿಲ್ಲ. ಅಬ್ಬಾ ನೀಲಕಂಠನ ಮುಹೂರ್ಥವೇ ಅಂತ ನನಗೆ ಅನ್ನಿಸಿತು.

ನಿಜ ನಿಜ ನಿಜ, ಒಳ್ಳೆಯ ಮುಹೂರ್ಥ ಫಿಕ್ಸ್ ಮಾಡಲು ಪಂಚಾಂಗ ಬೇಕಿಲ್ಲ ಪಂಚೆ ಎತ್ತಿಕಟ್ಟಬೇಕಿಲ್ಲ ಶುದ್ಧ ಮನಸ್ಸಿರಬೇಕು ಅಂತ ಒಂಥರಾ ಅರ್ಥವಾಗುತ್ತಿದೆ. ಜುಲೈ ತಿಂಗಳ ಮಲೆನಾಡಿನ ಜಡಿಮಳೆಯ ತಿಂಗಳಿನಲ್ಲಿ ಹೀಗೊಂದು ಮಳೆಬಾರದ ದಿನವನ್ನು ಹುಡುಕಿದನಲ್ಲ ನೀಲಕಂಠ "ಅಬ್ಬಾ ನೀಲಕಂಠ ಮಿದುಳೇ" ಅಂತ ಅವನ ಕುರಿತು ಅನ್ನಿಸಿದ್ದು ಸುಳ್ಳಲ್ಲ.

ಕೆಲವೆಲ್ಲಾ ಅರ್ಥವಾಗದು, ಕೆಲವೆಲ್ಲಾ ಅರ್ಥವಾದಂತೆ ನಟಿಸಬೇಕು, ಇನ್ನು ಕೆಲವು ಅರ್ಥವಾದಂತೆ ಅನಿಸುತ್ತದೆ.

Wednesday, July 20, 2011

ಅಷ್ಟರಲ್ಲಿ ಆತ್ ಡಣ್ ಡಣ್ ಎನ್ನುತ್ತಾನೆ.




"ಅಪ್ಪಾ ಉದ್ದ ಮುಳ್ಳು ಎಷ್ಟಕ್ಕೆ ಇದ್ದು, ಗಿಡ್ಡ ಮುಳ್ಳು ಎಷ್ಟಕ್ಕೆ ಇದ್ದು" ಅಂತ ವೆಂಕಟರಮಣನ ಪುಟಾಣಿ ಮಗಳು ಕೇಳಿದಾಗ ಒಮ್ಮೆಲೆ ನಾನು ಬಾಲ್ಯಕ್ಕೆ ಜಾರಿದೆ. ಅಬ್ಬಾ ಇದೆಂತ ಮಜ ನೋಡಿ, ನಾನು ಹೀಗೆ ಸಣ್ಣಕ್ಕಿದ್ದಾಗ ಕೇಳಿದ್ದೆ, ನನ್ನ ಮಗನೂ ಕೇಳಿದ್ದ, ಈಗ ಈ ಪುಟಾಣಿಯೂ ಕೇಳುತ್ತಿದ್ದಾಳೆ. ಹಲವು ಸಂಗತಿಗಳು ಹೀಗೆಯೇ ಅಲ್ವಾ..? ಇರಲಿ, ಅಸಲಿಗೆ ಹಾಗೆ ಕೇಳಿದ್ದು ಏತಕ್ಕೆ ಏನಕ್ಕೆ ಅಂತ ನಿಮಗೆ ಪಟಕ್ಕನೆ ಅರ್ಥವಾಗದಿದ್ದರೆ ಸ್ವಲ್ಪ ಕೇಳಿ ಅಲ್ಲಲ್ಲ ಓದಿ ನನ್ನ ವರಾತ.
ಟಿಕ್ ಟಿಕ್ ಗೆಳೆಯನಾದ ’ಪೆಂಡುಲಮ್ ಗಡಿಯಾರ’ ನಮ್ಮ ಬಾಲ್ಯದ ಅಚ್ಚರಿಗಳಲ್ಲೊಂದು, ಗಂಟೆ ಹೊಡೆಯುವ ಮುಂಚೆ ಕಿಶ್......... ಎಂದು ಸದ್ದು ಮಾಡಿ ನಂತರ ಡಣ್ ಡಣ್ ಎಂದು ಸದ್ದು ಮಾಡುವ ಎರಡಡಿ ಉದ್ದ ಹಾಗೂ ಒಂದಡಿ ಅಗಲದ ಗಡಿಯಾರ ಈಗಲೂ ಹಲವು ಮನೆಗಳಲ್ಲಿ ಕಾಣಬಹುದು. ವಾರಕ್ಕೊಮ್ಮೆ ಖುರ್ಚಿ ಹಾಕಿಕೊಂಡು ಅದರಮೇಲೆ ಹತ್ತಿ ನಿಂತು ಗಡಿಯಾರಕ್ಕೆ ಕೀಲಿ ಕೊಡುವುದು ಮನೆಯ ಯಜಮಾನನ ಗತ್ತಿನ ಕೆಲಸದಲ್ಲೊಂದು. ಹಾಗೆ ಕೀಲಿಕೊಟ್ಟ ನಂತರ ಆ ಕೆಲಸಕ್ಕಾಗಿಯೇ ತಾತ್ಕಾಲಿಕ ನಿಲ್ಲಿಸಿಕೊಂಡ ಪಳಪಳ ಹೊಳೆಯುವ ಕೋಟೆಡ್ ಪೆಂಡುಲಂ ನ ಮತ್ತೆ ಅಲುಗಾಡಿಸಿ ಕೆಳಗಿಳಿದರೆ ಯಜಮಾನನ ಗಂಟು ಮುಖಕ್ಕೆ ಇನ್ನೊಂದು ಮೆರುಗು. ನಮಗೆ ಆ ಪೆಂಡುಲಂ ಟಿಕ್ ಟಿಕ್ ಎಂದು ಸದ್ದು ಮಾಡುತ್ತಾ ಆಕಡೆ ಈಕಡೆ ಓಲಾಡುವುದನ್ನ ನೋಡುವುದೇ ಒಂದು ಮಜ. ಇನ್ನೇನು ಗಂಟೆ ಹೊಡೆಯುತ್ತದೆ ಎಂಬ ಕೆಲಕ್ಷಣಗಳ ಮುಂಚಿನ ಕಿಶ್.. ಸದ್ದು ಗಂಟೆ ಹೊಡೆಯುವ ಮಧುರ ಸದ್ದಿನ ಪೂರ್ವ ಸೂಚನೆ. ನಂತರ ಶುರು ನಿನಾದ, ಹನ್ನೆರಡು ಗಂಟೆಯೆಂದರೆ ಬಲು ಮೋಜು ಮಜ. ಹನ್ನೆರಡರ ನಂತರ ಹೊಡೆಯುವ ಗಂಟೆಗಳ ಮೇಲೆ ಸಣ್ಣದಾದ ಒಂದು ಬುದ್ದು ಕತೆಯೂ ಇತ್ತು.
ಒಬ್ಬಾತ ಗಡಿಯಾರ ಮನೆಗೆ ತಂದನಂತೆ. ಗೋಡೆಯ ಮೇಲೆ ಇಟ್ಟನಂತರ ಹೆಂಡತಿಗೆ ತೋರಿಸಿ ಅದು ಗಂಟೆಯನ್ನು ಹೊಡೆಯುವ ಬಗ್ಗೆ ಕೊಚ್ಚಿಕೊಂಡನಂತೆ. ಹನ್ನೆರಡೂ ವರೆಗೆ ಒಂದುಸಾರಿ ಕೇಳಿದ ಡಣ್ ಎಂಬ ಸದ್ದು ಕೇಳಿಸಿ ಬೀಗಿದನಂತೆ, ನಂತರ ಮತ್ತೆ ಡಣ್ ಎಂದು ಭಾರಿಸುತ್ತದೆ ನೋಡು ಎಂದು ಹೇಳಿದನಂತೆ, ಅರ್ದ ಗಂಟೆಯ ನಂತರ ಮತ್ತೆ ಒಂದೇ ಸಾರಿ ಡಣ್ ಸದ್ದು ಬಂತಂತೆ. ಮತ್ತೆ ಅರ್ದ ಗಂಟೆ ನಂತರವೂ ಕೇವಲ ಒಂದೇ ಸಾರಿ ಡಣ್ ಎಂಬ ಸದ್ದು ಬಂತಂತೆ, ಆಗ ಹೆಂಡತಿ "ಅಯ್ಯಾ ಈ ನಿಮ್ಮ ಗಡಿಯಾರ ಯಾವಾಗಲೂ ಒಂದೇ ಸಾರಿ ಡಣ್ ಅನ್ನುತ್ತದೆ" ಎಂದು ಮೂದಲಿಸಿದಳಂತೆ. ಹತಾಶನಾದ ಗಂಡ ಗಡಿಯಾರದ ಮೇಲೆ ಕೋಪಗೊಂಡು ಬಿಸಾಡಿದನಂತೆ. ಎಂಬ ತಮಾಷೆಯೆಂಬ ಕತೆ ಹೇಳುವವರ ತಾಕತ್ತಿಗನುಗುಣವಾಗಿ ಜನರನ್ನು ರಂಜಿಸುತ್ತಿತ್ತು.
ದಿನಕ್ಕೆ ಮೂರು ಸಾರಿ ಒಂದೊಂದೇ ಸಾರಿ ಡಣ್ ಎಂದು ಗಂಟೆ ಹೊಡೆಯುತ್ತದೆ, ಅದು ಯಾವಾಗ? ಎಂಬ ಒಗಟೂ ಕೂಡ ಚಾಲ್ತಿಯಲ್ಲಿತ್ತು. ಹನ್ನೇರಡೂವರೆ, ಒಂದು, ಒಂದೂವರೆ ಗಂಟೆಗೆ ಎಂಬ ಉತ್ತರ ಪಟಕ್ಕನೆ ಹೇಳಿದರೆ ಒಂದು ಹಂತದ ಗತ್ತನ್ನು ಪ್ರದರ್ಶಿಸಬಹುದಿತ್ತು.

ಹೀಗೆ ಅವರವರ ಕ್ಷೇತ್ರದಲ್ಲಿ ತನ್ನ ಪ್ರಭಾವ ಬೀರಿದ್ದ ಪೆಂಡುಲಂ ಗಡಿಯಾರ ಕಾಲಚಕ್ರದ ಹೊಡೆತಕ್ಕೆ ಸಿಲುಕಿ ನಿಧಾನಗತಿಯಲ್ಲಿ ಕಡಿಮೆಯಾಗುತ್ತಾ ಬಂದರೂ ಈಗಲೂ ಅಲ್ಲೊಂದು ಇಲ್ಲೊಂದು ಮನೆಯಲ್ಲಿ ಇದೆ. ಹಾಗೂ ತನ್ನನ್ನು ನೋಡಿ ಹೀಗೆ ಉದ್ದಮುಳ್ಳು ಗಿಡ್ಡಮುಳ್ಳು ಎಂಬ ಗಂಟೆ ನೋಡುವ ಕಲಿಕಾ ವಿಧಾನವನ್ನು ಪರಿಚಯಿಸುತ್ತಾ ಸಾಗಿದೆ.

ಅಂದು ಗಂಟೆ ನೋಡುವುದು ಒಂದು ಬ್ರಹ್ಮಾಂಡ ವಿದ್ಯೆಯಾಗಿತ್ತು. "ಅಯ್ಯೋ ಅಪಿ ನಿಂಗೆ ಗಂಟೆ ನೋಡಲೆ ಬತಲ್ಯಾ ಇನ್ನೂ" ಎಂದು ಯಾರಾದರೂ ಹೇಳಿದರೆ ಅದು ಮರ್ಯಾದೆ ಹರಾಜಿನಂತೆ ಭಾಸ. ಆ ಗಂಟೆ ನೋಡುವ ಕಲಿಕಾ ವಿಧಾನ ಸಾಮಾನ್ಯವಾಗಿ ಮೊದಲಗುರುವಿನಿಂದ ಪ್ರಾರಂಭ. "ಮಗಾ ಒಂಚೂರು ಗಂಟೆ ನೋಡಿ ಬಂದು ಹೇಳು" ಎಂದು ಮಕ್ಕಳ ಬಳಿ ಹೇಳಿದಾಗ, ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಜಗುಲಿಗೆ ಬಂದು ಒಮ್ಮೆ ಗಡಿಯಾರದತ್ತ ಮಿಕಮಿಕ ನೋಡಿದ ಕೂಡಲೇ, ಅಪ್ಪ "ಉದ್ದ ಮುಳ್ಳು ಮೂರಕ್ಕೆ ಗಿಡ್ಡ ಮುಳ್ಳು ಒಂಬತ್ತಕ್ಕೆ" ಎಂದರೆ ಮಗು ಅದನ್ನೇ ಪದೆ ಪದೇ ಹೇಳುತ್ತಾ ಅಡುಗೆ ಮನೆಗೆ ದೌಡು. ಅಮ್ಮನ ಬಳಿ ಅದನ್ನ ಪುನರಾವರ್ತನೆ, ಅಲ್ಲಿಗೆ ಅಮ್ಮನಿಂದ "ಹಂಗಂದ್ರೆ ಒಂಬತ್ತೂ ಕಾಲು" ಎಂಬ ಪ್ರಾರಂಬಿಕ ಹಂತದ ಕಲಿಕೆ. ನಂತರ ಮಗು ಅಂಕೆ ಕಲಿತಾದಮೇಲೆ ಅಪ್ಪನ ಸಹಾಯ ಇಲ್ಲ. ಆದರೆ "ಹಂಗಂದ್ರೆ ಒಂಬತ್ತೂ ಕಾಲು" ಅನ್ನಲು ಅಮ್ಮ ಬೇಕೇ ಬೇಕು. ಕೆಲದಿನಗಳ ನಂತರ ಎಲ್ಲಾ ತನ್ನಷ್ಟಕ್ಕೆ.

ಇವತ್ತು ಬೆಳಿಗ್ಗೆ ವೆಂಕಟರಮಣನ ಮಗಳು "ಉದ್ದಮುಳ್ಳು........." ಎಂದು ಅಪ್ಪನ ಬಳಿ ಕೇಳಿದ್ದಕ್ಕೆ ಇವೆಲ್ಲಾ ನೆನಪಾಯಿತು. ಕಾಲ ಎಂಬುದು ಚಕ್ರವೇ ಇಲ್ಲಿ ಹೊಸತನ ಬದಲಾವಣೆ ಅಂತೆಲ್ಲಾ ನಾವು ಅಂದುಕೊಳ್ಳುತ್ತೇವೆ, ಎಲ್ಲಾ ಹಾಗೆಯೇ ಪುನರಾವರರ್ತನೆಯಲ್ಲಿಯೇ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಮುಂದುವರೆಯುತ್ತೇವೆ.

ನಮ್ಮ ಮನೆಯ "ಟಿಕ್ ಟಿಕ್ ಗೆಳೆಯ" ಡಣ್ ಎಂದು ಭಾರಿಸುತ್ತಿದ್ದಾನೆ. ಅಲ್ಲಿಗೆ ಗಂಟೆ ಒಂದಾಯಿತು, ಇನ್ನು ಸ್ನಾನ ಮಾಡಿ ಸಂಧ್ಯಾವಂದನೆ(ಮಟ ಮಟ ಮಧ್ಯಾಹ್ನ....!) ಮಾಡಿ ಊಟ ಮಾಡಬೇಕು ಅಷ್ಟರಲ್ಲಿ ಆತ್ ಡಣ್ ಡಣ್ ಎನ್ನುತ್ತಾನೆ. ಅವನು ಹೀಗೆ ಇನ್ನು ಎಷ್ಟು ಸಮಯವೋ ಪಾಪ, ಸಮಯ ಹೇಳುತ್ತಾ ತೋರಿಸುತ್ತಾ ಸವೆಯುತ್ತಿದ್ದಾನೆ, ಆತನಿಗದು ತಿಳಿದಿಲ್ಲ ನಮಗೆ ತಿಳಿದಿದೆ ಹೊಸತಕ್ಕೆ ಹೋಗಬೇಕು ಅಂತ ನಾವು ಅಂದುಕೊಳ್ಳೋದು ಆದರೆ ಆ ಕಾಲಪುರುಷ ನಮ್ಮ ಲೆಕ್ಕವನ್ನು ಎಲ್ಲಿಯವರೆಗೆ ಇಟ್ಟಿದ್ದಾನೋ ಸವೆಯುವವರೆಗೋ ಅಥವಾ ಗಟ್ಟಿ ಇದ್ದಾಗಲೋ ಯಾರಿಗೆ ಗೊತ್ತು.?.

Friday, July 15, 2011

ಅದು ನಗುತ್ತಿದೆ... ಸನಿಹದಲ್ಲಿಯೇ ನಮ್ಮ ಹೊರಗೆ ಕುಳಿತು.

"ಮನೋ ಮಧುಕರೋ ಮೇಘೋ ಮಾನಿನೀ ಮದನೋ ಮರುತ್ ಮಾಮರೋ ಮರ್ಕಟೋರ್ಮತ್ಸ್ಯೋ ಮಕಾರಾತ್ ದಶ ಚಂಚಲಾ:" ಅಂತ ಸಂಸ್ಕೃತದಲ್ಲಿ ಒಂದು ಉಕ್ತಿ ಇದೆಯಂತೆ. ಸ್ವಲ್ಪ ಹೆಚ್ಚುಕಮ್ಮಿ ಇದ್ದರೂ ಇರಬಹುದು ಬಿಡಿ. ಒಟ್ಟಿನಲ್ಲಿ ಮ ಕಾರದಿಂದ ಪ್ರಾರಂಭವಾಗುವ ಹಲವು ಶಬ್ಧಗಳು ಚಂಚಲತೆಗೆ ಉದಾಹರಣೆ ಎಂಬುದು ತಾತ್ಪರ್ಯ. ಹಾಗೆ ನೋಡಿದಲ್ಲಿ ಇಡೀ ಪ್ರಪಂಚವೇ ಒಂಥರಾ ಚಂಚಲ. ಸ್ಥಿರ ಎನ್ನುವುದು ನಮ್ಮ ತರ್ಕವಷ್ಟೆ. ಆದರೆ ಈ ಮೇಲಿನ ಮಕಾರ ದಿಂದ ಪ್ರಾರಂಭವಾಗುವ ವಿಷಯ ಚಂಚಲತೆ ಹೆಚ್ಚು ಅನ್ನಬಹುದು.

ನಿಂತಲ್ಲಿ ನಿಲ್ಲಲಾರ, ಕುಂತಲ್ಲಿ ಕೂರಲಾರ, ಮಾಡಿದ್ದನ್ನು ಮಾಡಲಾರ ಮಾಡದೆಯೂ ಇರಲಾರ ಎಂಬ ವ್ಯಕ್ತಿತ್ವಕ್ಕೆ ಚಂಚಲ ಮನಸ್ಥಿತಿ ಯ ಜನ ಅಂತ ನಾಮಕರಣ ಮಾಡಿಯಾಗಿದೆ. ಇದು ವ್ಯಕ್ತಿಯ ಹೊರಗಿನ ಚಂಚಲತೆಯ ಕತೆಯಾದರೆ ವ್ಯಕ್ತಿಯೊಳಗಿನ ಚಂಚಲತೆ ಇದೆಯಲ್ಲ ಅದರದ್ದು ಬೃಹತ್ ಸಮಸ್ಯೆ ಹಲವರಿಗೆ.
ಮಠ ಸಿನೆಮಾದಲ್ಲಿ " ಮನಸ್ಸಿನೊಳಗಿನ ಮಾತನಾಡುವ ಗಿಳಿಯನ್ನು ಸುಮ್ಮನಾಗಿಸುವುದೇ ದಾನ್ಯ" ಎಂದು ಮಜವಾಗಿ ಧ್ಯಾನದ ಕುರಿತು ಹೇಳಿದ್ದಾರೆ. ಈ ಚಂಚಲತೆಯನ್ನು ಸ್ಥಿರಗೊಳಿಸುವ ಕೆಲಸಕ್ಕೆ ಮಿದುಳ ಬಳಸಿ ಬದುಕುವ ಮಂದಿ ಬಹಳ ಬೆಲೆಯನ್ನು ತೆತ್ತಿದ್ದಾರೆ ತೆತ್ತುತ್ತಲಿದ್ದಾರೆ. ಆ ಮಾತನಾಡುವ ಗಿಳಿ ಇದೆಯಲ್ಲ ಅದರ ನಿಯಂತ್ರಣಕ್ಕೆ ಹಾಕಿದ ಹಾಕುತ್ತಿರುವ ಹಾಕುವ ವೇಷ ಹಲವು ತರಹದ್ದು. ಜನಸಾಮಾನ್ಯರ ಈ ದೌರ್ಬಲ್ಯವನ್ನರಿತ ಒಂದು ತೂಕ ಹೆಚ್ಚಿನ ಬುದ್ದಿವಂತರು ಅದಕ್ಕೆ ಹಾಗೆ ಮಲಗಿ, ಹೀಗೆ ಕೂತು ಉಸಿರು ಬಿಡಿ, ಮತ್ತೆ ಆಳವಾಗಿ ಉಸಿರಾಡಿ, ಹ ಹ ಹ ಎಂದು ಹಾರಿಹಾರಿ ಬೀಳಿ, ಅಂತಿಮವಾಗಿ ನಾವು ಹೀಗೆ ಕಲಿಸಿಕೊಟ್ಟದ್ದಕ್ಕೆ ಇಷ್ಟು ಹಣ ಕಕ್ಕಿ ಎಂಬಲ್ಲಿಯವರೆಗೆ ಈ ಗಿಳಿಯ ಆಟ ನಡೆಯುತ್ತಲಿದೆ. ನಿರಂತರವಾಗಿ ಪುತುಪುತುನೆ ಏಳುವ ಆಲೋಚನೆಯ ಬೆನ್ನುಹತ್ತಿ ಉತ್ತರ ಸಿಗದೆ ತಡಬಡಾಯಿಸುವ ಹಲವರಿಗೆ ಈ ಗಿಳಿಯ ಕಾಟ ಅಷ್ಟಿಷ್ಟಲ್ಲ. ಶುರುವಾದ ಆಲೋಚನೆಗೆ ಪಟಕ್ಕನೆ ಬ್ರೆಕ್ ಹಾಕುವ ತಾಕತ್ತು ರೂಢಿಸಿಕೊಂಡರೆ ಇವರ ಪಾಲಿಗೆ ಜಗತ್ತ ಗೆದ್ದಂತೆ. ಉದ್ಯೋಗದಲ್ಲಿ ಜೀವನಕ್ಕಾಗಿ ಮಿದುಳು ಉಪಯೋಗಿಸುವ ಮಂದಿಯ ದೇಹ ಒಂಥರಾ ಜಡ್ಡಾಗಿರುತ್ತದೆ. ದೇಹದ ಶ್ರಮದ ಮೂಲಕ ಅಥವಾ ಶ್ರಮದ ಕೆಲಸದ ಮೂಲಕ ಮಿದುಳಿನ ಯೋಚನೆಯನ್ನು ನಿಯಂತ್ರಿಸುವುದು ಸುಲಭ ಅಥವಾ ಸುಲಭ ಅನ್ನುವುದಕ್ಕಿಂತಲೂ ಅದು ಪ್ರಕೃತಿ ಸಹಜ. ದೇಹ ಶ್ರಮಕ್ಕೆ ಹಾರ್ಡ್ ವರ್ಕ್ ಅಂತ ಒಂಥರಾ ಜಿಗುಪ್ಸೆಯ ಪದಪ್ರಯೋಗ ಬಳಕೆಗೆ ಬಂದ ನಂತರ ಈ ಧ್ಯಾನ ಎಂಬ ಮಾರುಕಟ್ಟೆಯ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಈ ಮಾರುಕಟ್ಟೆಯಲ್ಲಿ ಬಿಕರಿಗಿಟ್ಟ ಸರಕು "ಶಾಂತಿ..ನೆಮ್ಮದಿ....ಸುಖ " ಎಂಬ ನಮ್ಮೊಳಗೇ ಇರುವ ನಾವೇ ಸೃಷ್ಟಿಸಿಕೊಳ್ಳಬೇಕಾಗಿರುವ ವಿಷಯಗಳು. ಮಜ ಎಂದರೆ ಅದಕ್ಕೆ ನಾವು ಹಣ ಕೊಟ್ಟು ಅಲ್ಲಿದೆ, ಎಲ್ಲಿದೆ..? ಅಲ್ಲೆಲ್ಲೋ ಇದೆ, ಎಂದು ಹಗಲಿನಲ್ಲಿ ಬ್ಯಾಟರಿ ಬಳಸಿ ಹುಡುಕಾಡುತ್ತಿದ್ದೇವೆ. ಅದು ನಗುತ್ತಿದೆ... ಸನಿಹದಲ್ಲಿಯೇ ನಮ್ಮ ಹೊರಗೆ ಕುಳಿತು.

ನನ್ನದು ಈಟಿಂಗ್ ಬಾಬತ್ತಿಗೆ



ಬಾಳೆಹಣ್ಣು ಎಂದಾಗ ಬಾಯಲ್ಲೇನೋ ನೀರೂರದು ನಿಜ. ಆದರೆ ಸುಕ್ಕೇಳಿ ಸುದ್ದಿ ಹೇಳಿದಾಗ ಮಿದುಳಿನ ಮೂಲೆಯಿಂದ ಸಿಕ್ಕರೆ ನಾಲಿಗೆಯ ಮೇಲಿಡು ಎಂಬ ಸಂದೇಶ ಮೊಳಕೆಯೊಡೆಯಲಾರಂಬಿಸುತ್ತದೆ. ಬಾಳೆಹಣ್ಣನ್ನು ಸಕ್ಕರೆಪಾಕದಲ್ಲಿ ಅದ್ದಿ ಬಿಸಿಲಿನಲ್ಲಿ ಒಣಗಿಸಿ ತಯಾರು ಮಾಡುವ ಸುಕ್ಕೇಳಿಯನ್ನ ಒಮ್ಮೆ ತಿಂದಿರಾದರೆ ಇವೆಲ್ಲಾ ಆಗುತ್ತದೆ. ಸುಕ್ಕೇಳಿಗೆ ಇನ್ನಷ್ಟು ಮೆರುಗು ಸಿಗಬೇಕೆಂದರೆ ಬಾಳೆಹಣ್ಣಿನ ಜಾತಿಯೂ ಬಹುಮುಖ್ಯ ಪಾತ್ರವಹಿಸುತ್ತದೆ. ವಾಟ್ ಬಾಳೆ, ಸುಗನ್ ಬಾಳೆ, ಮಿಟ್ಲ ಬಾಳೆ, ಕರಿ ಬಾಳೆ, ಉದ್ಬಾಳೆ ,ಮುಂತಾದ ಮಲೆನಾಡಿನ ಸಾಂಪ್ರದಾಯಿಕ ತಳಿಗಳು ಸುಕ್ಕೇಳಿ(ಡ್ರೈ ಬನಾನ) ಗೆ ಯೋಗ್ಯವಾದವು. ಪಚ್ಚಬಾಳೆ ಮುಂತಾದ ಸುಧಾರಿತ ತಳಿಗಳು ಅಷ್ಟೊಂದು ಪರಿಮಳ ನೀಡಲಾರವು. ಆದರೂ ತೀರಾ ಗೊಡ್ಡೇನಲ್ಲ ಬಿಡಿ. ಈಗ ಸುಕ್ಕೇಳಿಯುಂದ ಫೋಟೋದಲ್ಲಿನ ಬಾಳೆಹಣ್ಣಿನ ಕತೆಗೆ ಹೋಗೋಣ

"ಬೂದಿಬಾಳೆ" ಎಂಬುದು ಚಿತ್ರದಲ್ಲಿನ ಬಾಳೆಯ ಸಾಂಪ್ರದಾಯಿಕ ಹೆಸರು. ಇದಕ್ಕೆ ಆ ಹೆಸರುಬರಲು ಮುಖ್ಯ ಕಾರಣ ಇದರ ಹಣ್ಣನ್ನು ಬಬ್ಬೂದಿಯಲ್ಲಿ( ಅಯ್ಯೋ ಬಬ್ಬೂದಿ ಅಂದ್ರೆ ಏನು? ಎಂದಿರಾ, ಕಟ್ಟಿಗೆ ಬೆಂಕಿಯ ಕೆಂಡದ ಬಿಸಿ ಬೂದಿ ಅಷ್ಟೆ) ಸುಟ್ಟು ತಿಂದರೆ ಅದ್ಬುತ ರುಚಿಯ ಕಾರಣ ಇದಕ್ಕೆ ಅದೇ ಹೆಸರು ಅಂತ ಗುಸುಗುಸು ಪಿಸಪಿಸ. ಇರಲಿ ಹೆಸರು ಏನು ಮಾಡುತ್ತೆ ರುಚಿಯಿದ್ದರೆ ಆಯಿತಪ್ಪಾ ಅಲ್ಲವೇ?, ಇದು ಅಜೀರ್ಣ ತೊಂದರೆಯ ಹೊಟ್ಟೆನೋವಿಗೆ ದಿವ್ಯ ಔಷಧ. ಒಂದೆರಡು ಹಣ್ಣು ತಿಂದರೆ ಹೊಟ್ಟೆ ನೋವು ಮಾಯ.

ಈ ಹಣ್ಣು ಮಾರುಕಟ್ಟೆಯಲ್ಲಿ ಬಿಕರಿಯಾಗುವುದಿಲ್ಲ. ಕಾರಣ ಇದನ್ನು ತಿನ್ನುವ ವಿಧಾನ ಬಹಳ ಜನರಿಗೆ ಗೊತ್ತಿಲ್ಲದಿರುವುದೂ ಒಂದಿರಬಹುದು. ಎಲ್ಲಿ ಹಣ ಹುಟ್ಟುವುದಿಲ್ಲವೋ ಜನ ಅದರಿಂದ ನಿಧಾನ ದೂರ ಸರಿಯುತ್ತಾರೆ. ಹಾಗಾಗಿ ಬೂದಿಬಾಳೆ ಬೆಳೆಯುವವರಿಲ್ಲ. ಆ ಕಾರಣಕ್ಕೆ ಇದು ಅಳಿವಿನ ಅಂಚಿನಲ್ಲಿರುವ ಬಾಳೆ ಯಾಗಿದೆ. ನಾನು ಒಂದೆರಡು ಗುಂಪು ಉಳಿಸಿಕೊಂಡಿದ್ದೇನೆ, ಪರಿಸರ ಪ್ರೇಮಿಗಳ ಡೈಲಾಗ್ "ಈ ಭೂಮಿ ನಮ್ಮ ಮುಂದಿನ ಪೀಳಿಗೆಯಿಂದ ಎರವಲು ಪಡೆದದ್ದು, ಅವರಿಗೆ ಸುರಕ್ಷಿತವಾಗಿ ಮರಳಿಸೋಣ" ಎಂದೆಲ್ಲಾ ಅಂತಾರಲ್ಲ ಅದಕ್ಕೆ ನನ್ನದೂ ಒಂದು ಅಳಿಲು ಸೇವೆಯಾಗಲಿ ಎಂದು.

ಯಾವಾಗ ನೋಡಿದ್ರೂ ತಿನ್ನೋ ವಿಚಾರನೇ ಬರಿತೀಯಪ್ಪಾ... ಬೇರೇ ಇಲ್ವಾ....? ಅಂತ ನೀವು ಗೊಣಗುಟ್ಟಿದಂತಾಯಿತು. ಪುಷ್ಠಿಕರವಾದ್ದು ತಿಂದರೆ ತಾನೇ ನಮ್ಮ ನಿಮ್ಮ ಆಟ, ಓಟ, ನೋಟ , ಎಲ್ಲಾ, ಹಾಗಾಗಿ ಅದೆಂತದೋ ಫಸ್ಟ್ ಪ್ರಿಯಾರಿಟಿ ಅಂತ ಅಂತಾರಲ್ಲ ಅದು ನನ್ನದು ಈಟಿಂಗ್ ಬಾಬತ್ತಿಗೆ ಅಷ್ಟೆ. ನಿಮ್ಮದು...? ನನಗೇನು ಗೊತ್ತು?.

Wednesday, July 13, 2011

ಇವತ್ತು ಇಷ್ಟೆ.

ಜೋಗಕ್ಕೆ ಹೋಗಬೇಕು,ನಿಮಗೆ ಅಲ್ಲಿನ ಜಲಪಾತದ ಇವತ್ತಿನ ಪಟ ತೆಗೆದು ತೋರಿಸಬೇಕು, ಎಂತೇನೂ ಹೋದದ್ದಲ್ಲ. ಮೆಸ್ಕಾಂ ನಲ್ಲಿ ಕೆಲಸ ಇತ್ತು ಹೋಗಿದ್ದೆ. ಹಾಗೇ ಸೀದಾ ಮನೆಗೆ ಬಂದುಬಿಡಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಆವಾಗ ಸತ್ಯವಾಗಿ ಹೇಳುತ್ತೇನೆ ನಿಮ್ಮ ನೆನಪಾಯಿತು. ಸೀದಾ ಜೋಗಜಲಪಾತದ ಕಡೆ ಕಾರು ತಿರುಗಿಸಿದೆ. ನೀರು ಸುಮಾರಾಗಿ ಬೀಳುತ್ತಿತ್ತು. ಬಿಕೋ ಎನ್ನುವಷ್ಟರ ಮಟ್ಟಿಗಿನ ಜನ ಅಲ್ಲದಿದರೂ ಕಡಿಮೆ ಪ್ರವಾಸಿಗರಿದ್ದರು. ಕಾರು ಒಳಗೆ ಪ್ರವೇಶಿಸಲು "ಇಪ್ಪತ್ತು ರೂಪಾಯಿ ಮಡಗಿ" ಎಂದ ಗೇಟಿಗ. ಬೇಡ ಎನ್ನುತ್ತಾ ಹೊರಗಡೆಯಿಂದ ಫೋಟೋ ತೆಗೆದುಕೊಂಡು ಬಂದೆ. ಅಯ್ಯೋ ಏನ್ ಖಂಜೂಸ್ ಜನ ಅಂತ ಅನ್ನಬೇಡಿ, ನೀರು ಸಿಕ್ಕಾಪಟ್ಟೆ ಜೋರು ಇದ್ದಿದ್ದರೆ ಅದರ ಫೋಟೋ ತೆಗೆಯಲು ಇಪ್ಪತ್ತು ರೂಪಾಯಿ ಅಂತ ನೋಡುತ್ತಿರಲಿಲ್ಲ. ನೀರು ಕೊಂಚ ಇದ್ದದ್ದರಿಂದ ಹಾಗೆ ಮಾಡಿದೆ. ಜಲಪಾತದ ರಭಸ ಜೋರಾದರೆ ಅದರ ಫೋಟೋ ಕತೆ ಅಂದು ನೋಡೋಣ. ಇವತ್ತು ಇಷ್ಟೆ.

ನಿತ್ಯ ಸಿಕ್ಕರೆ ವಿಶ್ವಸುಂದರಿಯೂ ಬೋರ್ ಬೋರ್.



ಆಷಾಢ ಮಾಸದ ಜಡಿಮಳೆಯಲ್ಲಿ ಮಧ್ಯಾಹ್ನ ಊಟಕ್ಕೆ ನಿಂಬ್ಗಾರ ಇದ್ದರೆ ’ಉಫ್’ ಅದರ ಮಜವೇ ಮಜ. ಕಣ್ಣಲ್ಲಿ ನೀರು ಬಾಯಲ್ಲಿ ನೀರು , ಒಟ್ಟಿನಲ್ಲಿ ಮಜ ಬಿಡಿ. ಆ ನಿಂಬ್ಗಾರಕ್ಕೆ ನಿಜವಾದ್ ರುಚಿಕೊಡುವ ಕೆಲಸ ಮಾಡುವುದು ನಿಂಬೆಹಣ್ಣು. ಈ ನಿಂಬ್ಗಾರ ಎನ್ನುವ ಉಪ್ಪಿನಕಾಯಿ ನೀವು ಈಗಾಗಲೆ ತಿಂದ ಜನ ಆಗಿದ್ದರೆ ಇದನ್ನ ಓದುತ್ತಿದ್ದಂತೆ ಬಾಯಲ್ಲಿ "ಚುಳ್" ಅಂತ ನೀರು ಬಂದಿರುತ್ತದೆ. ನನಗೆ ಹೀಗೆ ಟೈಪಿಸುವಾಗ ಬಾಯಿತುಂಬಾ ಬಂದಾಯ್ತು. ಆಗಲಿ ಈ ಪದಾರ್ಥಕ್ಕೆ ಸಾಸಿವೆ ಕಾಳು, ಸೂಜಿಮೆಣಸು ರುಚಿಕಟ್ಟನ್ನು ಒದಗಿಸುವ ಕೆಲಸ ಮಾಡಿದರೆ ಅದಕ್ಕೊಂದು ವಿಶೇಷ ರುಚಿ ಒದಗಿಸುವ ಕೆಲಸ ಮಾಡುವುದು ಆಷಾಢ ನಿಂಬೆ.
ಅಯ್ಯೋ ಇದ್ಯಾವುದಪ್ಪಾ "ಆಷಾಢನಿಂಬೆ" ಅಂತ ತಲೆಕೆಡಿಸಿಕೊಳ್ಳದಿರಿ. ಇದು ಮಾಮೂಲಿ ನಿಂಬೆಹಣ್ಣು ಆಷಾಢಮಾಸದಲ್ಲಿ ಸಿಕ್ಕಾಪಟ್ಟೆ ಬಿಡುತ್ತದೆ ಅದಕ್ಕೆ ಆ ಹೆಸರು ಕೊಟ್ಟೆ. ಸಾಮಾನ್ಯವಾಗಿ ನಮ್ಮ ತೋಟದ ಬದುವಿನಲ್ಲ್ಲಿ ನಿಂಬೆಗಿಡ ಹಾಕಿರುತ್ತಾರೆ. ಅದು ಈಗ ಗಿಡದತುಂಬಾ ಅರಿಶಿನ ಬಣ್ಣಕ್ಕೆ ತಿರುಗಿಸಿಕೊಂಡ ಹಣ್ಣು ಬಿಟ್ಟಿರುತ್ತದೆ. ಹಾಗೆ ಬಿಟ್ಟದ್ದನ್ನು ಕೊಯ್ಯುವಾಗಲೇ ಒಂಥರಾ ಮಜ. ಪ್ರತೀ ಹಣ್ಣು ಕೊಯ್ದಾಗಲೂ ಅದರಿಂದ ಹೊರಡುವ ಪರಿಮಳ ಇದೆಯಲ್ಲಾ ಅದು ನರನಾಡಿಗಳಿಗೂ ತನ್ನ ಇರುವಿಕೆಯನ್ನು ತಲುಪಿಸುತ್ತದೆ. ತೋಟದಿಂದ ಮನೆಗೆ ತಂದಾಗ ಜಗುಲಿ ಪ್ರವೇಶಿಸುತ್ತಿದ್ದಂತೆ ಮನೆಯಲ್ಲಿದ್ದವರು "ಅಯ್ಯೋ ನಿಂಬೆ ಹಣ್ಣು ಕೊಯ್ಕಬಂದ್ಯನಾ... ಏನ್ ಪರಿಮಳ ನೋಡು " ಎನ್ನುವಷ್ಟು ಮಜ ಇರುತ್ತದೆ. ಅದರ ರಸ ಹಿಂಡಿ ಏನೇನೋ ಮಾಡಿ ಒಂದು ವಗ್ಗರಣೆ ಜಡಿದು ಊಟಕ್ಕೆ ಮುಂಚೆ ಬಾಳೆ ತುದಿಯಲ್ಲಿ ಬಡಸಿದಾಗ, ಹಸಿದು ಕುಳಿತ ಜನ ಒಂದು ಚೂರು ತೋರ್ಬೇರಳಿನಲ್ಲಿ ನೆಕ್ಕಿದ ಕೂಡಲೆ ನಾಲಿಗೆ "ಲೊಚ್" ಎಂದು ತನ್ನಷ್ಟಕ್ಕೆ ಲೊಟ್ಟೆ ಹೊಡೆದು ವಾವ್ ಎಂಬ ಉದ್ಘಾರವನ್ನು ಬೇಡವೆಂದರೂ ಹೊರಡಿಸುತ್ತದೆ.
ಅಯ್ಯೋ ನೀವೆಷ್ಟು ಅದೃಷ್ಟವಂತರು, ಹಳ್ಳಿಯ ಜೀವನ ಅದೆಷ್ಟು ಚೆನ್ನ, ಹೀಗೆ ತೋಟಕ್ಕೆ ಹೋಗಿ ಹಾಗೆ ನಳನಳಿಸುವ ನಿಂಬೆ ಹಣ್ಣು ಕೊಯ್ದು ತಂದು ಆಘ್ರಾಣಿಸಿ ಅನುಭವಿಸಬಹುದು, ಹಾಗೂ ಇಲ್ಲಿನ ಕೆಲಸಕ್ಕೆ ರಾಜೀನಾಮೆ ಬಿಸಾಕಿ ಹಳ್ಳಿಯಲ್ಲಿ ಒಂದೆಕರೆ ತೋಟ ತೆಗೆದುಕೊಂಡು ಹಾಯಾಗಿದ್ದುಬಿಡೋಣ, ಈ ಯಾಂತ್ರಿಕ ಜೀವನ ಬೋರ್ ಬೋರ್" ಎಂದೆಲ್ಲಾ ಅಂದುಕೊಳ್ಳದಿರಿ. ಅಲ್ಲಿನೀವು ಸಂಪಾದಿಸುವ ನೂರನೇ ಒಂದು ಭಾಗದ ಸಂಪಾದನೆ ಇಲ್ಲಿಲ್ಲ. ಆ ಸಂಪಾದನೆಯಲ್ಲಿ ಹತ್ತು ರೂಪಾಯಿ ಕೊಟ್ಟರೆ ಅಂಗಡಿಯಲ್ಲಿ ನಿಮಗೆ ಇದರ ಅಪ್ಪನಂತಹ ನಿಂಬೆ ಹಣ್ಣು(ವಯಸ್ಸಾದದ್ದು ಅಂತಲ್ಲ ಮತೆ) ದೊರಕುತ್ತದೆ. ಆ ಹತ್ತು ರೂಪಾಯಿ ಯಾವ ಲೆಕ್ಕ. ಆದರೆ ಇಲ್ಲಿ ಹತ್ತು ರೂಪಾಯಿ(ಸಂಪಾದನೆಯ ವಿಷಯದಲ್ಲಿ) ಯೇ ದೊಡ್ಡ ಲೆಕ್ಕ. ಹಾಗಾಗಿ ನಿಮ್ಮ ಮಜ ನಿಮಗೆ, ನಮ್ಮ ಮಜ ನಮಗೆ. ಪುರ್ಸೊತ್ತಾದರೆ ನಮ್ಮ ಮನೆಗೆ ಬಂದು ಒಂದು ಅನುಭವ ತೆಗೆದುಕೊಳ್ಳಿ. ಅಪರೂಪಕ್ಕೆ ಎಲ್ಲವೂ ಚಂದ ನಿತ್ಯ ಸಿಕ್ಕರೆ ವಿಶ್ವಸುಂದರಿಯೂ ಬೋರ್ ಬೋರ್.

Tuesday, July 12, 2011

"ಹೃದಯದ ಪ್ರೀತಿಯಂತೆ"...



"ಹೃದಯದ ಪ್ರೀತಿಯಂತೆ" ಎಂಬ ತಲೆ ಬರಹದೊಂದಿಗೆ ೧೦-೦೭-೧೧ ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ನನ್ನ ಒಂದು ಜೇನಿನಹಿಂದೆ ಪುಸ್ತಕದ ರಿವ್ಯೂ ಬಂದಿದೆ. ಬರೆದ ಆರ್ ಸುಧೀಂದ್ರ ಕುಮಾರ್ ರವರಿಗೂ ಪ್ರಜಾವಾಣಿ ಬಳಗಕ್ಕೂ ಹಾಗೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಅಕ್ಷರ ಹೆಗ್ಗೋಡು ಇವರಿಗೂ ಮತ್ತು ನಿಮಗೂ ಅನಂತಾನಂತ ಧನ್ಯವಾದಗಳು

Monday, July 11, 2011

ಏನಾಗುತ್ತೋ ಆ ಶಿವನೇ ಬಲ್ಲ.



"ಯಮ್ಮನೆ ಸೊಸೆ ಮೀಟಿಂಗ್ ಇದ್ದು ಹೇಳಿ ಹೊಯ್ದ, ಇನ್ನೂ ಬರ್ಲ್ಯಪ ಎಂತ ಮಾಡ್ತ ಏನ" ಇದು ಈಗ ಮೂರ್ನಾಲ್ಕು ವರ್ಷದಿಂದ ಈಚೆಗೆ ನಮ್ಮ ಹಳ್ಳಿ ಮನೆಯಲ್ಲಿನ ವೃದ್ಧರ ಗೊಣಗಾಟ. ಸ್ತ್ರೀ ಶಕ್ತಿ ಸಂಘಟನೆ ಹಳ್ಳಿ ಹಳ್ಳಿಯ ಮೂಲೆ ಮೂಲೆಯಲ್ಲಿಯೂ ಮೂಲೆ ಮೂಲೆಯಲ್ಲಿಯೂ ಹಬ್ಬಿ ತಿಂಗಳಿಗೊಂದು ಮೀಟಿಂಗ್ ಚರ್ಚೆ ವಾದ ವಿವಾದ ಮುಂತಾದವುಗಳು ಸಾಂಗೋಪಸಾಂಗವಾಗಿ ನಡೆಯುತ್ತಿವೆ. ಮೂರುವರ್ಷದ ಹಿಂದಿದ್ದ ರಭಸ ಕೊಂಚ ಕಡಿಮೆಯಾದರೂ ಏನೋ ಒಂದಿಷ್ಟು ಕೆಲಸ ಮಾಡುತ್ತಿದ್ದಾರೆ ಹಳ್ಳಿಯ ಮಹಿಳಾಮಣಿಗಳು. ಆರಂಭದಲ್ಲಿ ಇಪ್ಪತ್ತರ ಸಂಖ್ಯೆಯಲ್ಲಿದ್ದ ಸದಸ್ಯರ ತಂಡ ೮-೧೦ ಕ್ಕೆ ಇಳಿದಿದೆ ಕೆಲವೆಡೆ, ಮತ್ತೆ ಒಡೆದು ಹರಿದು ಹಂಚಿ ಮೂರ್ನಾಲ್ಕು ಸಂಘಗಳಾಗಿವೆ ಹಲವೆಡೆ.

ನಮ್ಮ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಮನೆಯ ಒಡತಿಯ ಮೇಲೆ ಸಂಸಾರ ಅವಲಂಬಿತವಾಗಿರುತ್ತದೆ. ಇಲ್ಲಿ ಗಂಡು ಒಂಥರಾ ಜೇನಿನಲ್ಲಿನ ಗಂಡು ನೊಣ ಇದ್ದ ಹಾಗೆ. ಕೆಲಸ ಮಾಡಿದರೂ ನಡೆಯುತ್ತದೆ ಮಾಡದಿದ್ದರೂ ತೀರಾ ವ್ಯತ್ಯಯ ಏನಿಲ್ಲ. ಬಹುಪಾಲು ಗಂಡಸರ ಕೆಲಸ ಎಂದರೆ ಪೇಟೆ ಪೇಟೆ ಪೇಟೆ. ಆದರೆ ಮಹಿಳೆ ಮಾತ್ರಾ ಹಾಗಲ್ಲ, ಮನೆಯ ಒಪ್ಪಓರಣದಿಂದ ಹಿಡಿದು ಅಡುಗೆ ತುಡುಗೆ ಮುಗಿಸಿ ನಂತರ ತೋಟ ಗದ್ದೆಯವರೆಗೂ ವಿಸ್ತರಿಸುತ್ತದೆ ಆಕೆಯ ವ್ಯಾಪ್ತಿ. "ಗೃಹಣೀ ಗೃಹ ಮುಚ್ಚ್ಯತೆ" ಎಂಬ ಸ್ಲೋಗನ್ ನೂರಕ್ಕೆ ನೂರರಷ್ಟು ಹಳ್ಳಿಯ ಹೆಂಗಸಿಗೆ ಅನ್ವಯಿಸುತ್ತದೆ. ಪೇಟೆಯಲ್ಲಿ ಗಂಡಸು ಕೂತರೆ ಸಂಸಾರ ಕಷ್ಟ ಇಲ್ಲಿ ಹೆಣ್ಣು ಕೂತರೆ ಸೇಮ್ ಟು ಸೇಮ್.( ಈಗ ದುಡಿಯುವ ಹೆಣ್ಣುಮಕ್ಕಳು-ಇಬ್ಬರ ದುಡಿಮೆ ಇದಕ್ಕೆಲ್ಲಾ ಹೊರತಾಗಿ)

ಈ ಸಂಘಗಳು ಬಂದಮೇಲೆ ಹೆಂಗಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಣಕಾಸಿನ ವ್ಯವಹಾರಕ್ಕೂ ತೊಡಗಿಸಿಕೊಂಡಿದ್ದಾರೆ. ಒಂಥರಾ ಬೇಷ್ ಎನ್ನಬಹುದಾದ ಕೆಲಸವೇ, ಆದರೆ ಮತ್ತೊಂದು ದೃಷ್ಟಿಯಲ್ಲಿ ನೋಡಿದಾಗ ಹಳ್ಳಿಯ ಸಂಸಾರಗಳು ಸ್ವಲ್ಪ ಯಡವಟ್ಟು ಹೆಜ್ಜೆಯನ್ನಿಡಲು ಕಾರಣವಾಗಿದೆ. ಅದೇನು ಅಂತಹಾ ಪ್ರಪಂಚ ಮುಳುಗುವಂತಹಾ ಅಥವಾ ಎಲ್ಲಾ ಯಕ್ಕುಟ್ಟಿ ಹೋಯಿತು ಎನ್ನುವಂತಹ ಸಮಸ್ಯೆ ಅಲ್ಲದಿದ್ದರೂ ತೀರಾ ಹಣದ ಹಿಂದೆ ಬಿದ್ದರೆ ಅಲ್ಪಸ್ವಲ್ಪ ಏರುಪೇರು ಖಂಡಿತ ಅಂತ ಬಹುಜನರ ಮಾತು. ಸಂಘಗಳಿಗೆ ಹೇರಳ ಹಣ ಹರಿದು ಬರುತ್ತಿವೆ. ಅದು ಸಾಲದ ರೂಪದಲ್ಲಿ, ವಾರಕ್ಕೊಮ್ಮೆ ಕಂತಿನ ಮೂಲಕ ಕಟ್ಟುವ ಷರತ್ತಿನೊಂದಿಗೆ. ಹಾಗೆ ಹರಿದು ಬಂದ ಹಣ ಸಾಲದ ಕೂಪಕ್ಕೆ ನಿಧಾನವಾಗಿ ಮಹಿಳೆಯರನ್ನು ತಳ್ಳುತ್ತಿದೆ. ಇದು ವಿರಳ ಸಂಖ್ಯೆಯಲ್ಲಿ ಜನರಿರುವ ಸ್ಥಳವಾದ್ದರಿಂದ ಪಡೆದ ಸಾಲ ದುಡಿಮೆಗೆ ಒಡ್ಡುವುದು, ಮತ್ತೆ ಅದರಿಂದ ಗಳಿಸುವುದು ಕಷ್ಟಸಾದ್ಯ. ಹಾಗಾಗಿ ಪಡೆದ ಸಾಲ ಕೊಳ್ಳುಬಾಕತನಕ್ಕೆ ವ್ಯಯವಾಗುತ್ತಿದೆ. ಸದ್ಯ ಸಣ್ಣರೂಪದ ಸಮಸ್ಯೆ ಮುಂದೆ ಬೃಹತ್ ಗಾತ್ರದ ಸಮಸ್ಯೆಯಾಗುವ ಮುನ್ನೋಟ ಗೋಚರಿಸುತ್ತಿದೆ ಎಂಬುದು ಚಾಲ್ತಿ ಮಾತು.

ಇಷ್ಟೆ ಸಣ್ಣದೊಂದು ಸಮಸ್ಯೆಯ ನಡುವೆ ಹಳ್ಳಿ ಮಹಿಳೆ ಮುಂದೆ ಬರುವ ಹೆಜ್ಜೆ ಇಡುತ್ತಿದ್ದಾಳೆ, ಏನಾಗುತ್ತೋ ಆ ಶಿವನೇ ಬಲ್ಲ.

ಆ ನೆನಪುಗಳ ಹಿಂದೆ "ಏನೋ" ಇದೆ



ನಿಮಗೆ ಗೊತ್ತಾ...?. ಥೋ ನಾನು ಯಾವಾಗ್ಲೂ ಹೀಗೆ, ನಿಮಗೆ ಗೊತ್ತಿದ್ದರೆ ಮತ್ತೇಕೆ ನಾನು ಹೇಳುವುದು. ಆದರೆ ಏನು ಮಾಡುವುದು ಮಾತಿಗೆ ಮುಂಚೆ ಹೀಗೆ ಹೇಳುವುದು ಅಭ್ಯಾಸವಾಗಿಬಿಟ್ಟಿದೆ. ನನ್ನ ಪರಿಚಯದ ಜನ ಒಬ್ಬರು ಹೀಗೆ ಮಾತಿನ ನಂತರ "ನಾನು ಏನೆ ಹೇಳ್ದೇ ಹೇಳು?" ಅಂತ ಕೇಳಿ ತಮ್ಮ ಮಾತನ್ನು ಮುಂದುವರೆಯಿಸುತ್ತಿದ್ದರು. ಎಲ್ಲೋ ಅಪರೂಪಕ್ಕೆ ಸಿಗುವ ಜನ ಹೀಗೆ ಮಾತಿನ ನಡುವೆ ಕೇಳಿದರೆ ಓಕೆ. ಆದರೆ ನಿತ್ಯ ಸಿಗುವ ಜನಕ್ಕೆ ಅದೊಂತರಾ ಹಿಂಸೆಯಾಗುತ್ತದೆ. ಅವರ ಹೆಂಡತಿಯ ತಮ್ಮ ಇವರ ಈ ಮೇಲ್ಮಾತಿನಿಂದ ರೋಸಿ ಹೋಗಿದ್ದ. ಒಂದು ಸಾರಿ "ನಾನು ಸಿರ್ಸಿಯಿಂದ ಮೂರು ಗಂಟೆ ಬಸ್ಸಿಗೆ ಹೊರಟೆ" ಎಂದು ಹೇಳಿ ಮುಂದೆ ಯಥಾಪ್ರಕಾರ "ನಾನು ಏನು ಹೇಳ್ದೆ ಹೇಳು" ಅಂತ ಹೇಳಿ ಮಾತು ಮುಂದುವರೆಸಲು ಅಣಿಯಾದರು. ಆದರೆ ಬಾವನ ಖಾಯಂ ಡೈಲಾಗ್ ಕೇಳಿ ರೋಸಿದ್ದ ನೆಂಟ "ನಾನು ಸಿರ್ಸಿಯಿಂದ ಮೂರು ಗಂಟೆ ಬಸ್ಸಿಗೆ ಹೊರಟೆ" ಎಂದು ಪುನರುಚ್ಚರಿಸಿದ. ಬಾವ ಕಕ್ಕಾಬಿಕ್ಕಿ.
ಅಷ್ಟೇನೂ ಮಜ ಕೊಡಲಿಲ್ಲವ ಇದು, ಹೋಗಲಿ ಬಿಡಿ ನಾನು ಕುಟ್ಟಲು ಶುರುಮಾಡಿದ್ದೇ ಒಂದು ಈಗ ಬರದದ್ದೇ ಮತ್ತೊಂದು. ಅದೇ ಹೇಳಿದೆನಲ್ಲ ನಾನು ಮೊನ್ನೆ ಜರ್ಮನಿಗೆ ಹೋಗಿದ್ದೆ. ಯಾವಾಗ ಹೇಳಿದ್ದೆ ಎಂದಿರಾ?, ಇರಲಿ ತೀರಾ ಎಲ್ಲದಕ್ಕೂ ಹೀಗೆ ಕೇಳುತ್ತಾಹೋದರೆ ನನಗೂ ರಗಳೆ ಎನೋ ಒಂಚೂರು ಪುರ್ಸತ್ತು ಮಾಡಿಕೊಂಡು ರೀಡಲು ಕುಳಿತ ನಿಮಗೂ ಕಸಿವಿಸಿ. ನಾನು ಜರ್ಮನಿಗೆ ಹೋಗಿದ್ದೆ ಎಂದರೆ ನನ್ನ ಚರಾಸ್ತಿಯಾದ ಈ ದೇಹದ ಸಮೇತವಲ್ಲ. ಮಾನಸಿಕವಾಗಿ ಅಷ್ಟೆ. ನಮ್ಮ ಹೋಂ ಸ್ಟೆ ಗೆ ನವದಂಪತಿಗಳಾದ ಮಂಜುನಾಥ್ ಎಂಡ್ ಜ್ಯೋತಿ ಅತಿಥಿಗಳಾಗಿ ಬಂದು ಒಂದು ವಾರ ಉಳಿದುಕೊಂಡಿದ್ದರು. ಮಂಜುನಾಥ್ ನನ್ನನ್ನು ನಿತ್ಯ ಜರ್ಮನಿಗೆ ಕರೆದುಕೊಂಡು ಹೋಗುತ್ತಿದ್ದರು, ಅವರ ಜತೆ ಹೋಗಿದ್ದೆ ಅಂದೆ. ಈ ಮೇಲಿನ ಪಟದಲ್ಲಿ ಕಾಣುವ ಮಂಜುನಾಥ್ ಒಳ್ಲೆಯ ಮಾತುಗಾರ, ಮನಬಿಚ್ಚಿ ಕೂರಬೇಕಷ್ಟೆ. ತಾವು ಉಳಿದ ಕಾರಣಕ್ಕೆ ನನಗೆ ಹಣಕೊಟ್ಟು ಉಚಿತವಾಗಿ ತಾವು ಕಂಡ ಜರ್ಮನಿಯ ಕುರಿತು ಚನ್ನಾಗಿ ಹೇಳಿದರು. ಅವರಿಗೆ ಅವರದೇ ಆದ ನಿಲುವಿದೆ, ಹಾಗಾಗಿ ಒಳ್ಳೆ ಮಜಕೊಡುತ್ತಾರೆ. ಅವರ ಸ್ನೇಹಿತನೊಬ್ಬ ಹೇಳಿದನಂತೆ "ಅಲ್ಲ ಕಣಯ್ಯಾ ಹಳ್ಳಿಗಳೆಲ್ಲಾ ಆಧುನಿಕತೆಯ ಸೋಂಕಿಗೆ ಬಲಿಯಾಗಿ, ತಮ್ಮ ಮೂಲ ಸೊಗಡನ್ನು ಕಳೆದುಕೊಂಡು ಮಜ ಕೊಡುತ್ತಿಲ್ಲ ಈಗ" ಎಂದನಂತೆ.ಆಗ ಮಂಜುನಾಥ್ ಹೇಳಿದರಂತೆ "ಅದು ಸರಿ ನೀನು ಹಣಕ್ಕೋಸ್ಕರ ಹಳ್ಳಿ ತೊರೆದು ಇಲ್ಲಿ ಜುಂ ಅಂತ ಕಾರಲ್ಲಿ ಓಡಾಡ್ತೀಯಾ, ಆಧುನಿಕತೆಯ ಎಲ್ಲಾ ಸವಲತ್ತುಗಳನ್ನು ಹೆಂಡತಿ ಮಕ್ಕಳ ಸಮೇತ ಅನುಭವಿಸುತ್ತೀಯಾ, ಆದರೆ ನೀನು ಬಿಟ್ಟು ಬಂದ ಹಳ್ಳಿ ಮಾತ್ರಾ ನಿನ್ನನ್ನು ನಿನ್ನ ನೆನಪನ್ನು ನೂರು ವರ್ಷ ಹಿಂದೆ ಇಟ್ಟಿರಬೇಕು ಅಂತ ಅಂದರೆ ಹೇಗೆ, ಅವರೂ ಅನುಭವಿಸಬೇಕಲ್ಲ." ಎಂದರಂತೆ. ಈಗ ನಿಮಗೂ ಒಂಚೂರು ಹಾಗೆ ಅನ್ನಿಸಿರಬೇಕಲ್ಲ..?

ಏನೋ..ಅಷ್ಟು ಹೇಳಿಬಿಟ್ಟರು ಎಂದರೆ ದೊಡ್ದ ಮಜಾನ? ಎಂಬುದು ನಿಮ್ಮ ಪ್ರಶ್ನೆ. ಆದರೆ ಅಷ್ಟೇ ಅಲ್ಲ ಅವರು ತಾವು ಬೆಳೆದದ್ದು, ಓದಿದ್ದು, ಮದುವೆಯಾದದ್ದು, ಜರ್ಮನಿಯ ಅನುಭವ,ಅಲ್ಲಿಯವರ ವರ್ತನೆ, ಅಲ್ಲಿನ ಸರ್ಕಾರದ ಜನರ ಕಾಳಜಿ ಮುಂತಾದ್ದನ್ನೆಲ್ಲಾ ಮಜವಾಗಿ ಹೇಳಿದರು. ಜತೆಗೆ ಆ ಮನುಷ್ಯ ಎಲ್ಲರೂ ನಮ್ಮ ಸರ್ಕಾರವನ್ನು ದೂಷಿಸುವಂತೆ ದೂಷಿಸಲಿಲ್ಲ, ನಮ್ಮ ಸರ್ಕಾರ ಹೀಗಿರುವುದಕ್ಕೆ ನಾವೆಷ್ಟು ಪಾಲುದಾರರು ಎಂಬುದರ ಕುರಿತು ಒಳನೋಟವನ್ನು ಬೀರಿದರು. "ನಾನು ಸಾಫ್ಟ್ ವೇರ್ ಇಂಜನಿಯರ್ ನಿಜ, ನನ್ನ ಸಂಬಳ ಐದಂಕಿಯದೂ ನಿಜ, ಆದರೆ ನಾನೇನೂ ಮಹಾನ್ ಸಂಶೋಧಕನಲ್ಲ. ಸಂಶೋದನೆಗಳು ಏಕವ್ಯಕ್ತಿಯಿಂದ ಮಾತ್ರಾ ಸಾದ್ಯ, ನಾವೆಲ್ಲ ಗುಂಪಿನಲ್ಲಿ ಯಾರೋ ಕಂಡುಹಿಡಿದದ್ದನ್ನ ರೂಪಾಂತರ ಮಾಡುವ ಜನ ಅಷ್ಟೆ. ಅದೂ ಕೂಡ ನನ್ನ ಬದುಕಿನ ನಿರ್ವಹಣೆ, ನನ್ನ ಮಜಕ್ಕೋಸ್ಕರ......" ಹೀಗೆ ಮುಂದುವರೆದರು. ಒಟ್ಟಿನಲ್ಲಿ ಜರ್ಮನಿಯ ಯಾತ್ರೆ ಮಜವಾಗಿತ್ತು.

ಅವರು ಹೋದ ಮಾರನೇ ದಿನ ಪ್ರಸನ್ನರ ಹತ್ರ ಚಾಟಿಸುತ್ತಿದ್ದೆ. ಏನ್ ನಡೀತಾ ಇದೆ ಎಂದರು ಪ್ರಸನ್ನ. ಇನ್ನೊಂದು ಹೋಂ ಸ್ಟೆ ಕಟ್ಟಡದ ಕೆಲಸ ನಡೀತಾ ಇದೆ, ಅದು ಲಕ್ಷುರಿ ಸ್ಟೇ ಎಂದೆ. ಲಕ್ಷುರಿ ಅಂದ್ರೆ?. ಅದೇ ದಿನಕ್ಕೆ ಐದು ಸಾವಿರ ಒಂದು ರೂಂ ಗೆ ಅಂದೆ. ಅಯ್ಯಪ್ಪಾ ಅದು ನಮಗೆ ನಿಲುಕದ್ದು ಎಂದು ಟೈಪಿಸಿ ನಂತರ " ನಾನು ಆವಾಗ ನಿಮ್ಮಮನೆಗೆ ಬಂದಿದ್ದೆನಲ್ಲ ಅದು ನಿಜವಾದ ಹೋಂ ಸ್ಟೆ, ಒಳ್ಳೆ ಮರೆಯಲಾರದ ಊಟ, ತಿರುಗಾಟ ವಾಹ್, ನಂತರ ಅವರೇ ಬ್ರಾಕೆಟ್ ನಲ್ಲಿ ಅದೂ ಬಿಟ್ಟಿಯಾಗಿ ಎಂದು ಟೈಪಿಸಿ "ಹೇಗೆ ನಾಚಿಕೆ ಬಿಟ್ಟು ಟೈಪಿಸಿದ್ದೇನೆ ಅಂತ ಅಂದರು. ನನಗೆ ಒಂದು ಕ್ಷಣ ಏನೂ ತೋಚಲಿಲ್ಲ. ನನಗೆ ಅವರು ಬಂದದ್ದು ನೆನಪು ತಿರುಗಿದ್ದು ನೆನಪು ಆದರೆ ಹಣದ ವ್ಯವಹಾರ ನೆನಪಿರಲಿಲ್ಲ. ಅಥವಾ ನನಗೆ ಅಂದು ಹಾಗೆ ಅತಿಥಿಗಳನ್ನು(ಎಲ್ಲೋ ವರ್ಷಕ್ಕೆ ಒಬ್ಬಿಬ್ಬರು) ಹಾಗೆ ನೋಡಿಕೊಳ್ಳಲು ಸಾದ್ಯವೂ ಇತ್ತು, ಅದು ಅವರ ಪಾಲಷ್ಟೆ. ಎಂದು ಬಾಯ್ ಎಂದೆ.

ನನಗೆ ಮಂಜುನಾಥ್ ಆವಾಗಾವಾಗ ನೆನಪಾದಂತೆ ನಾನು ಪ್ರಸನ್ನರಿಗೆ ಆವಾಗಾವಾಗ ಹೀಗೆ ನೆನಪಾಗುತ್ತೇನೆಲ್ಲ ಎಂದು ಖುಷಿಯಾಯಿತು. ಆದರೆ ಆ ನೆನಪುಗಳ ಹಿಂದೆ ಏನೋ ಇದೆ, ಆ "ಏನೋ" ಎಂಬುದರ ಹಿಂದೆ ನೋ ಎನ್ನುತ್ತಾ ಹೋದಾಗ ಒಂದು ತರಹ. ಯಸ್ ಎನ್ನುತ್ತಾ ಹೋದಾಗ ಮತ್ತೊಂದು ತರಹಾ ಎನ್ನುವುದಂತೂ ನಿತ್ಯನೂತನ ಸತ್ಯ.

ಅಂತಿಮವಾಗಿ: ನಮ್ಮೂರಲ್ಲೊಬ್ಬರು "ಯನ್ನತ್ರ ದುಡ್ಡೇ ಇಲ್ಯಾ... ದೇವ್ರಾಣೆ" ಎಂದು ಪ್ರತೀ ವಾಕ್ಯದ ಅಂತ್ಯದಲ್ಲಿ ದೇವ್ರಾಣೆಯನ್ನು ಬಳಸುತ್ತಾರೆ. ಮೊನ್ನೆ ಅವರು ಮೂರು ಲಕ್ಷವನ್ನು ಕಳೆದುಕೊಂಡರು, ವ್ಯವಹಾರವೊಂದರಲ್ಲಿ. ಛೆ ಪಾಪ....!

ಖಂಡಿತಾ ಕೊನೇದು:ಎಂತಾ ಬರೆದೆ ಮಾರಾಯ ಒಂದಕ್ಕೊಂದು ಸಂಬಂಧವೇ ಇಲ್ಲಾ ಅಂತ ಅಂದುಕೊಳ್ಳಬೇಡಿ. ಎಲ್ಲೋ ಏನೋ ಒಂಥರಾ ನಂಟಿದೆ. ಗಂಟು ಬಿಚ್ಚಬೇಕಷ್ಟೆ.

Sunday, July 10, 2011

ಕೂ..........ಹುಯ್..ರೈಲು ಬಂತ್ರೋ.....




ತಾಳಗುಪ್ಪ ಎಂಬ ಹೆಸರು ಕೇಳಿದಾಕ್ಷಣ ಬಹಳ ಜನರಿಗೆ ನೆನಪಾಗುವುದು ರೈಲು. ಕಟ್ಟಕಡೆಯ ನಿಲ್ದಾಣ ಎಂಬ ಹೆಗ್ಗಳಿಗೆ ೧೯೩೯ ರಷ್ಟು ಹಳೆಯದು ಎಂಬ ಇನ್ನೊಂದು ಹೆಗ್ಗಳಿಕೆ. ಹದಿನೇಳು ವರ್ಷದ ಹಿಂದೆ ಉಗಿಬಂಡಿ ಚುಕುಬುಕು ಸದ್ದನ್ನು ನಿಲ್ಲಿಸಿ ಒಂಥರಾ ಬಿಕೋ ಎನ್ನುವ ವಾತಾವರಣ ಅಲ್ಲಿ ನಿರ್ಮಾಣವಾಗಿತ್ತು. ಇಂದು ಮತ್ತೆ ವೊ.... ಎಂದು ಕೂಗುತ್ತಾ ಬ್ರಾಡ್ ಗೇಜ್ ಡಿಸೇಲ್ ಟ್ರೈನ್ ಬಂದಾಗ ಜನ ಪುಳಕಿತರಾದರು. ಸಾಗರದಲ್ಲಿ ಮುನಿಯಪ್ಪರಿಂದ ಉದ್ಘಾಟನೆಗೊಂಡು ತಾಳಗುಪ್ಪಕ್ಕೆ ಬಂದು ಹೋಯಿತು ರೈಲು. ಹತ್ತಾರು ವರ್ಷದಿಂದ ಸಾಕಷ್ಟು ಹೋರಾಟ ಹಾರಾಟ ನಡೆದು ಅಂತಿಮವಾಗಿ ಚಕ್ ಚಕ್ ಸದ್ದು ಮೂಡಿತು.

ಒಂಥರಾ ಖುಷಿಯಾಗುತ್ತಿದೆ ನೋಡಿ, ಈ ಕಾಲದಲ್ಲಿಯೂ ಟ್ರೈನ್ ಬಂದರೆ. ನೀವೆಲ್ಲಾ ವಿಮಾನ ಬಂದರೂ ಪುಳಕಿತರಾಗದಷ್ಟು ಎತ್ತರದಲ್ಲಿದ್ದೀರಿ ನಾವು...! ಇನ್ನೂ ಟ್ರೈನ್ ಗೆ. ಇರಲಿ ಇನ್ನು ಜೋಗಕ್ಕೆ ಬರುವಾಗ ಆರಾಮ್. ಆದರೆ ಸದ್ಯ ಮೈಸೂರು-ತಾಳಗುಪ್ಪ ಟ್ರೈನ್ ಮಾತ್ರಾ ಬರುತ್ತಂತೆ, ಬೆಂಗಳೂರಿನಿಂದ ಬರುವ ಟ್ರೈನ್ ಮುಂದಿನ ದಿವಸಗಳಲ್ಲಂತೆ. ಏನೆ ಇರಲಿ ಕೂ..........ಹುಯ್..ರೈಲು ಬಂತ್ರೋ..... ಎಂಬುದು ನಮ್ಮೂರಿನ ಬಿಸಿಬಿಸಿ ಸುದ್ದಿ ಸದ್ಯ.

Saturday, July 9, 2011

ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ.....



ಚಂದ್ರ ಮೂಡಿಬಂದ .... ಹೀಗೆ ಮುಂದುವರೆಯುತ್ತದೆ ಆ ಚಂದದ ಹಾಡು. ಹಾಗೆ ಸೂರ್ಯನ ಜತೆ ಜಾರಿಹೋಗುತ್ತಿರುವ ಅದೆಷ್ಟೋ ದಿವಸಗಳನ್ನು ನಾವು ನೀವು ನೋಡುತ್ತಾ ಇದ್ದೇವೆ. ಸೂರ್ಯನಿಗೂ ನಮ್ಮನ್ನು ನೋಡಿ ನಗು ಬಂದಿರಬೇಕು. "ಅಲ್ಲಾ ನಾನೂ ನಿತ್ಯ ನೊಡ್ತಾ ಇದೀನಿ, ಆವಾಗಿನಿಂದ ಆ ಐಡಿಯಾ, ಈ ಐಡಿಯಾ ಅಂತ ಕೊಚ್ತಾನೆ ಇದಾರೆ, ಈ ನನ್ ಮಕ್ಳು, ಏನೂ ಮಾಡಾಕಾಗಿಲ್ಲ, ಇನ್ನೇನು ಅಕಾ ಇಕಾ ಅಂದ್ರೆ ಬದುಕಿನಿಂದಲೇ ಜಾರಿಹೋಗೋ ದಿವಸ ಬಂತು... ಛೇ ಪಾಪ" ಅಂತ. ಅನ್ಲಿಬಿಡಿ ನಾವು ಅದ್ಕೆಲ್ಲಾ ತಲೆ ಕೆಡಿಸಿಕೊಂಡು ಸುಮ್ನೆ ಇರೋಕಾಗುತ್ತಾ? ಎಂಬ ಒಂದು ಸ್ವಗತದ ಪ್ರಶ್ನೆ ಹಾಕಿಕೊಂಡು ಮುನ್ನುಗ್ಗೋಣ.

ಈ ಮಳೆಗಾಲ ಅಂತಂದ್ರೆ ನನಗೆ ಅಕ್ಷರ ಕುಟ್ಟೋ ಉಮ್ಮೇದು. ಕಪ್ಪು ಬಿಳುಪು ಕೂದಲಿನ ಬುಡದಲ್ಲಿ ಬಿಸಿಬಿಸಿ ಆದಂತಾಗಿ "ಬರಿ ಬರಿ" ಅನ್ನೋಕೆ ಶುರುಮಾಡುತ್ತೆ. ಹಾಗೆ ಒಳಗಿನಿಂದ ಒತ್ತಡವೇನೋ ಬರುತ್ತೆ ಆದರೆ ಬರ್ಯೋದು ಏನನ್ನ?, ಸರಸರನೆ ಒಳಗಿನಿಂದ ಐಡಿಯಾ ಬಂದು ಅಕ್ಷರ ರೂಪ ತಾಳಿ ತಕತೈ ತಕತೈ ಅಂತ ಲಾಗ ಹಾಕಿ ನಾಟ್ಯ ಮಾಡಲು ನಂದೇನು ಬ್ರಹ್ಮಾಂಡದ ತಲೆಯಾ?, ಹಾಗಾಗಿ ನನ್ನ ಮಟ್ಟದಲ್ಲಿ ಒಂದಿಷ್ಟು ಏನನ್ನಾದರೂ ಕುಟ್ಟಬೇಕು, ಕತೆ ಕಟ್ಟಬೇಕು. ಕಾದಂಬರಿ ಗೀಚಬೇಕು. ಆ...ಅದೇನೋ "ಹ ಹ ಹ " ಎಂಬ ಸದ್ದು ಕೇಳಿತಪ್ಪ ನನಗೆ. ಓಹೋ ಅದು ನೀವು ನಕ್ಕ ಸದ್ದು ಬಿಡಿ ಗೊತ್ತಾಯ್ತು. ನಾನು ಕಾದಂಬರಿ ಗೀಚಬೇಕು ಅಂತ ಬರೆದದ್ದು ಓದಿ ನೀವು ಗಿಟಿಗಿಟಿ ಅಂದಿರಿ ಅಂದಾಯ್ತು. ಅದು ಹಾಗಲ್ಲ ಇರಲಿ ಪ್ರಾಸಕ್ಕೆ ಅಂತ ಹಾಗೆ ಬರೆದೆ.

ಮೊನ್ನೆ ಹರಿಶ್ಚಂದ್ರ ಭಟ್ರು ಬೆಂಗಳೂರಿನಿಂದ ಫೋನ್ ಮಾಡಿದ್ದರು. "ಶ್ರೀಗಳ ಹತ್ತಿರ ಯಾವುದೋ ವಿಷಯ ಕುರಿತು ಮಾತನಾಡುತ್ತಿದ್ದಾಗ ಸಂಸ್ಥಾನ ನನ್ನ ಬಳಿ"....."ಎಂಬ ಆ ಪುಸ್ತಕ ಓದಿದ್ದೀರಾ ಅಂತ ಕೇಳಿದರು. ನಾನು ಇಲ್ಲ ಎಂದೆ, ಅವರು ಓದಿ ಅಂದರು, ನಾನೂ ಇರಲಿ ಎಂದು ನೀವು ".........."ಎಂಬ ಈ ಪುಸ್ತಕ ಓದಿದ್ದೀರಾ ಎಂದೆ, ಅವರು ಇಲ್ಲ ಎಂದರು ನಾನು ಖಂಡಿತಾ ಓದಿ ಎಂದೆ. ತಂದುಕೊಡುವ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಹಾಗಾಗಿ ಶ್ರೀಗಳಿಗೆ ಪುಸ್ತಕ ತಲುಪಿಸುತ್ತೀರಾ? ಎಂದರು. ಹರಿಶ್ಚಂದ್ರ ಭಟ್ಟರ ಮಾತನ್ನು ಕೇಳಿ ವಿಜಯಶ್ರೀಯ ಮಾತಿನಂತೆ ನಾನು ಫ್ಯಾನ್ ರಕ್ಕೆಗಳಿಗೆ ಹತ್ತಿರವಾದೆ.(ಅರ್ಥಾತ್ ಉಬ್ಬಿ ಹೋದೆ....!). ಹಾಗಾಗಲು ಮುಖ್ಯ ಕಾರಣ ನಿಮಗೆ ಈಗ ಅರ್ಥವಾಗಿರಬೇಕು. ಅವರು ಹೇಳಿದ "ಈ ಪುಸ್ತಕ" ಎಂದರೆ ನನ್ನ "ಒಂದು ಜೇನಿನ ಹಿಂದೆ". ಕುಂತಲ್ಲಿ ಕೂರಲಾರೆ, ನಿಂತಲ್ಲಿ ನಿಲ್ಲಲಾರೆ ಎಂದೆಲ್ಲಾ ನನಗೆ ಆಯಿತು ಅಂತ ಅಂದುಕೊಂಡಿರಾ..? ತೀರಾ ಹಾಗಲ್ಲದಿದ್ದರೂ ಒಂಥರಾ ಖುಷ್ ಆಗಿದ್ದು ನಿಜ. ನಿಮ್ಮ ಬಳಿ ಸುಳ್ಳು ಹೇಳಿ ಯಾವ ಪಾಪಕ್ಕೆ ಹೋಗಲಿ. ಅಂತೂ ಗುರುಗಳಿಗೆ ಪುಸ್ತಕ ತಲುಪಿಸಿದೆ ಬಿಡಿ. ಇಷ್ಟೆಲ್ಲಾ ಪೀಠಿಕೆಯ ಕತೆಯಾಯಿತು ಇನ್ನು ನೇರವಾಗಿ ನಾನು ಹೇಳಬೇಕಾಗಿದ್ದ ವಿಷಯ ಹೇಳಿ ಮುಗಿಸುತ್ತೇನೆ.


ಕಳೆದ ದೀಪಾವಳಿಯಲ್ಲಿ "ಕಟ್ಟು ಕತೆಯ ಕಟ್ಟು" ಬಿಡುಗಡೆಯಾಗಿ ಕಟ್ಟುಗಟ್ಟಲೆ ಅಟ್ಟದಲ್ಲಿ ಕುಳಿತಿದೆ. ಬಹಳಷ್ಟು ಜನ ಕೇಳಿದ್ದಾರೆ ತಲುಪಿಸಲಾಗಲಿಲ್ಲ, ಬಹಳಷ್ಟು ಜನ ಕೇಳಲಿಲ್ಲ ತಲುಪಿಸಿದ್ದೇನೆ. ಹಾಗಾಗಿ ಏನೋ ಒಂದು ಆಗಿದೆ. ಒಂದು ಜೇನಿನ ಹಿಂದೆ ಮೂರು ವರ್ಷದಲ್ಲಿ ಪೂರ್ಣ ಖಾಲಿ. ಹಾಗಾಗಿ ಈಗ ಮೂರನೇ ಪುಸ್ತಕ "ಮನೆ ಕಟ್ಟಿ ನೋಡು..." ಬರೆದು ಬಿಸಾಕೋಣ ಅನ್ನುವ ತಲುಬು ಬಂದಿದೆ. ಅಯ್ಯಾ ಅದೆಂತಾ "ಮನೆ ಕಟ್ಟದೆಲ್ಲಾ ಪುಸ್ತಕ ಬರೀತೆ ಮಾರಾಯ ಮಳ್ಳು ಹಂಗೆ" ಅಂತ ವಿಶ್ವಾಸಿಕರೊಬ್ಬರು ಕೇಳಿದರು. ನೋಡಬೇಕು ಏನು ಬರೆಯಬೇಕು ಅಂತ ಅಂದೆ ಅಷ್ಟೆ. ಅಷ್ಟರಲ್ಲಿ ಮನಸ್ಸಿನ ಮೂಲೆಯಲ್ಲಿ "ಏಯ್ ಮಂಕೆ, ಮನೆ ಕಟ್ಟಿ ನೋಡು ಮುಂದಿನ ವರ್ಷಕ್ಕೆ ಇರಲಿ, ಈ ವರ್ಷ ಆವತ್ತು ಯೋಚಿಸಿದ್ದೆಯೆಲ್ಲಾ "ಆರ್. ಶರ್ಮಾಸ್ ಆರ್ಟಿಕಲ್ಸ್" ಅಂತ ಅಂದರೆ ಇಲ್ಲಿಯವರೆಗೆ ಪತ್ರಿಕೆಯಲ್ಲಿ ಪ್ರಕಟವಾದ ಎಲ್ಲಾ ಲೇಖನಗಳನ್ನು ಕಲರ್ ಕಲರ್ ಫೋಟೋದಲ್ಲಿ ಮುದ್ರಿಸಿ, ಪುಸ್ತಕ ಮಾಡು" ಅಂತಲೂ ಅನ್ನುತ್ತಿದೆ. ಮತ್ತೊಂದು ಮನಸ್ಸು, "ಬ್ಲಾಗ್ ಬರಹಗಳು" ಅಂತ ಮುಖಪುಟದಲ್ಲಿ ಜಡಿದು ಬಿಡುಗಡೆ ಮಾಡು, ಹಾಗೆ ಮಾಡುವುದರಿಂದ ಪ್ರಕಟಿತ ಲೇಖನಗಳ ಜತೆಗೆ ಬ್ಲಾಗಿನ ಬರಹವೂ ಮುದ್ರಣ ಕಂಡು ಸಿಕ್ಕಾಪಟ್ಟೆ ಸಿಕ್ಕಾಪಟ್ಟೆ ಫ್ರೇಮಸ್...! ಅಗಬಹುದು ಅಂತ ಅನ್ನುತ್ತಿದೆ.

"ಕಟ್ಟು ಕತೆಯ ಕಟ್ಟಿಗೆ ನವ್ಯಾ ಹಣ ಕೊಟ್ಟಿದ್ದಳು, ಈ ಬಾರಿ ನಾನು ಕೊಡುತ್ತೇನೆ ಅಂತ ನನ್ನ ಅಕೌಂಟ್ ನಂಬರ್ ತನ್ನ ಬ್ಯಾಲೆನ್ಸ್ ಪಳಪಳನೆ ಮಿಂಚಿಸುತ್ತಾ ಕಣ್ಣು ಕುಕ್ಕುತ್ತಿದೆ. ನನ್ನವಳು ನಾನೊಂದು ಕಿವಿಗೆ ಜೋತಾಡಿಸುವ ಸೆಟ್ ಮಾಡಿಸಬೇಕು ಅಂತಿದ್ದಾಳೆ. ಏನು ಮಾಡಬೇಕೋ ಸರಿಯಾಗಿ ತಿಳಿಯುತ್ತಿಲ್ಲ,

ಸೂರ್ಯ ಇದೆಲ್ಲದರ ನಡುವೆ ನಿತ್ಯ ಜಾರಿಹೋಗುತ್ತಿದ್ದಾನೆ. ಅವನಿಂದ ನಳನಳಿಸುತ್ತಿರುವ ಮರಗಿಡಗಳು "ರಾಗು ಬೇಕಾದರೆ ಬ್ಲಾಗ್ ಕುಟ್ಟು, ಪುಸ್ತಕ ಮಾತ್ರಾ ಮುದ್ರಿಸಬೇಡ, ಪೇಪರ್ ಫ್ಯಾಕ್ಟರಿಯವರು ನಮ್ಮ ಸಂತತಿಯನ್ನೇ ಉಳಿಸುತ್ತಿಲ್ಲಾ "ಅಂತ ರೋಧಿಸುವಂತೆ ಭಾಸವಾಗುತ್ತಿದೆ. ನೋಡೋಣ "ಚಂದ್ರ ಮೂಡಿ ಬಂದ" ನಂತರ.... ಸ್ಟಾರ್ ಹೇಗಿದೆ ಅಂತ.



ಪಾರಂ ನಂ ...............!

ಸಪ್ಟೆಂಬರ್ ೩೦-೨೦೦೯ ರ ಬ್ಲಾಗ್ ನಲ್ಲಿ "ಫಾರಂ ನಂ... ಅಂತ" ನನ್ನ ವಿವರ ದಾಖಲಿಸಿದ್ದೆ. ಅದನ್ನು ೨೦೧೦ ರಲ್ಲಿಯೂ ಪ್ರಕಟಿಸಬೇಕಿತ್ತು. ಆದರೆ ಮರೆತಿದ್ದೆ. ನಾವು ಮರೆತರೂ ಜನ..? ಇಲ್ಲಪ್ಪ. ವಿಕಾಸ ಮೊನ್ನೆ ಚಾಟಿಸಿ..! "ಅಲ್ಲಾ ನಿನ್ನ ಅಫಡವಿಟ್ಟಿನ ಬ್ಲಾಗ್ ನೋಡ್ಬೇಕಿತ್ತು, ಲಿಂಕ್ ಕಳುಹಿಸು ಅಂದ. ಅದೆಲ್ಲಿ ಹುಡುಕುವುದು ಈ ನನ್ನ ಸ್ಲೋ ನೆಟ್ ನಲ್ಲಿ. ಆದರೆ ಅಂವ ಬಿಡಬೇಕಲ್ಲ ಬೆನ್ನುಹತ್ತಿದ ಹುಡುಕಿದೆ . ಸಿಕ್ಕಿತು. ಅದನ್ನ ಇಲ್ಲಿ ಮತ್ತು ಈ ವರ್ಷದ್ದು ಡಿಟೈಲ್ ಸೇರಿ ಮಡಗುತ್ತಿದ್ದೇನೆ . ಪರಾಮರ್ಶಿಸಿ.

ಪಾರಂ ನಂ ...............! (ಹಳೇದು)
ಹೆಸರು: ರಾಘವೇಂದ್ರ ಶರ್ಮ ಕೆ ಎಲ್
ಬ್ಲಾಗ್: ಶ್ರೀ.ಶಂ.ಬ್ಲಾಗ್ ಸ್ಪಾಟ್ ಡಾಟ್ ಕಾಮ್
ವಿಳಾಸ: ಕಡವಿನಮನೆ .ಅಂಚೆ:ತಲವಾಟ, ಸಾಗರ-ಶಿವಮೊಗ್ಗ ೫೭೭೪೨೧

ಚರಾಸ್ಥಿ: ಅಪ್ಪ(ಲಕ್ಷ್ಮೀನಾರಾಯಣ ಭಟ್)-ಅಮ್ಮ(ವಿಶಾಲಾಕ್ಷಿ)-ಹೆಂಡತಿ(ಕವಿತ) ಮಗ (ಸುಮಂತ)
ಮಾರುತಿ ೮೦೦(೯೬ ಮಾಡೆಲ್), ಸುಜುಕಿ ಬೈಕ್-(೦೮)-ಟಿವಿಎಸ್ ಸ್ಕೂಟಿ-
೧ ಲಕ್ಷ ಡಿಪಾಸಿಟ್(ಕೆನರಾ ಬ್ಯಾಂಕ್)
೪೫ ಸಾವಿರ ಎಸ್.ಬಿ (ಕೆನರಾ ಬ್ಯಾಂಕ್)
೨ ಲಕ್ಷ ಇನ್ಷುರೆನ್ಸ್ ಪಾಲಿಸಿ
೭೫ ಸಾವಿರ ಸಾಲ (ವಿ.ಎಸ್.ಎನ್.ಬಿ. ಹಿರೇಮನೆ+ ಎಲ್.ಐ.ಸಿ)
ಸ್ಥಿರಾಸ್ಥಿ: ೩೩ ಗುಂಟೆ ಅಡಿಕೆ ಬಾಗಾಯ್ತು(ಹಳೆಯದು) ೩೮ ಗುಂಟೆ ಅಡಿಕೆ ಭಾಗಾಯ್ತು (ಹೊಸತು). ೭ ಎಕರೆ ಖುಷ್ಕಿ
ಬರಹ: ಒಂದು ಜೇನಿನ ಹಿಂದೆ ಪುಸ್ತಕ- ಪ್ರಕಟಿತ ೩೪ ಕಥೆಗಳು-ಬ್ಲಾಗ್ ಬರಹಗಳು
ವೀಕ್ ನೆಸ್: ತಂಬಾಕು ಅಗಿಯುವುದು, ಅನವಶ್ಯಕ ವಾಚಾಳಿತನ
-------------------------------------------

ಈವರ್ಷದ್ದು

ಹೆಸರು: ರಾಘವೇಂದ್ರ ಶರ್ಮ ಕೆ ಎಲ್
ಬ್ಲಾಗ್: ಶ್ರೀ.ಶಂ.ಬ್ಲಾಗ್ ಸ್ಪಾಟ್ ಡಾಟ್ ಕಾಮ್
ವಿಳಾಸ: ಕಡವಿನಮನೆ .ಅಂಚೆ:ತಲವಾಟ, ಸಾಗರ-ಶಿವಮೊಗ್ಗ 577421 . ಫೋ:9342253240
ಚರಾಸ್ಥಿ: ಅಪ್ಪ(ಲಕ್ಷ್ಮೀನಾರಾಯಣ ಭಟ್)-ಅಮ್ಮ(ವಿಶಾಲಾಕ್ಷಿ)-ಹೆಂಡತಿ(ಕವಿತ) ಮಗ (ಸುಮಂತ)
ಮಾರುತಿ 8೦೦(96 ಮಾಡೆಲ್), ಸುಜುಕಿ ಬೈಕ್-(೦8)-ಮೈಕ್ರೋ ಮ್ಯಾಕ್ಸ್ ಮೊಬೈಲ್-೨೦ ಗ್ರಾಂ ಬಂಗಾರದ ಸರ
2 ಲಕ್ಷ ಡಿಪಾಸಿಟ್(ಕೆನರಾ ಬ್ಯಾಂಕ್)
25 ಸಾವಿರ ಎಸ್.ಬಿ (ಕೆನರಾ ಬ್ಯಾಂಕ್)
2 ಲಕ್ಷ ಇನ್ಷುರೆನ್ಸ್ ಪಾಲಿಸಿ
25 ಸಾವಿರ ಮೌಲ್ಯದ ಷೇರು(ಎಚ್.ಸಿ.ಸಿ+ರಿಲೆಯನ್ಸ್)
1 ಲಕ್ಷ ರೂಪಾಯಿ ಸಾಲ (ವಿ.ಎಸ್.ಎನ್.ಬಿ. ಹಿರೇಮನೆ+ ಎಲ್.ಐ.ಸಿ)
ಸ್ಥಿರಾಸ್ಥಿ: ೩೩ ಗುಂಟೆ ಅಡಿಕೆ ಬಾಗಾಯ್ತು(ಹಳೆಯದು) ೩೮ ಗುಂಟೆ ಅಡಿಕೆ ಭಾಗಾಯ್ತು (ಹೊಸತು). ೭ ಎಕರೆ ಖುಷ್ಕಿ
ಬರಹ: ಒಂದು ಜೇನಿನ ಹಿಂದೆ ಪುಸ್ತಕ-ಕಟ್ಟು ಕತೆಯ ಕಟ್ಟು (ಕಥಾ ಸಂಕಲನ) ಪ್ರಕಟಿತ ೩೪ ಕಥೆಗಳು-ಬ್ಲಾಗ್ ಬರಹಗಳು
ವೀಕ್ ನೆಸ್: ತಂಬಾಕು ಅಗಿಯುವುದು, ಅನವಶ್ಯಕ ವಾಚಾಳಿತನ (ಕಡಿಮೆಯಾಗಿದೆ ಅರ್ಥಾತ್ ಬುದ್ದಿ ಬರುತ್ತಾ ಇದೆ)

ಈ ಮೇಲ್ಕಂಡದ್ದು ಈ ವರ್ಷದ ತನಕ ಸತ್ಯ ಎಂದು ಪ್ರಾಮಾಣಿಕರಿಸುತ್ತಾ ಡಿಕ್ಲರೇಷನ್ ಸಲ್ಲಿಸುತ್ತಿದ್ದೇನೆ . ಮುಂದಿನದು ಮುಂದಿನ ವರ್ಷ(ವಿಕಾಸ್ ನೆನಪಿಸಿದರೆ) .

ಬುದ್ದಿವಂತರು ಬಿಡಿ ನೀವು...!



ಅಂತಹ ದೃಶ್ಯಗಳಿರುತ್ತವಲ್ಲ ಅದು ನೋಡಲು ಚಂದ. ಯಜಮಾನ ಅದೇನೋ ಕೆಲಸದಲ್ಲಿ ತಲ್ಲೀನ, ಮನೆಯೊಡತಿಯದೂ ಅಷ್ಟೆ ಒಂಥರಾ ಧನ್ಯತಾ ಭಾವದ ಕೆಲಸ. ಮಗು ಸಂಸಾರ ಜಂಜಡದಲ್ಲಿ ಮುಳುಗದೇ ಅದರದ್ದೇ ಆದ ಆಟ. ಅಲ್ಲಿ ಅವರದ್ದು ಖುಷಿಯೂ ಅಲ್ಲದ ಸಿಟ್ಟೂ ಇಲ್ಲದ ಹಾಗಂತ ತೀರಾ ಶಾಂತಿಯೂ ಇರದ ವಾತಾವರಣ. ದೂರ ನಿಂತು ನೋಡಿ ನಮಗೆ ಬೇಕಾದಂತೆ ನಾವು ಸೃಷ್ಟಿಸಿಕೊಳ್ಳಬಹುದು. ನೆಮ್ಮದಿಯಜೀವನ ಅಂತಲೋ, ಸುಖೀ ಸಂಸಾರ ಎಂತಲೋ, ನಾಳಿನ ಚಿಂತೆಯಿಲ್ಲದ ಬದುಕು ಎಂದೋ... ಹೀಗೆ ಏನೇನೋ. ಆದರೆ ವಾಸ್ತವ ಹಾಗಿಲ್ಲ, ಬಡತನದ ಬದುಕು ಬಹಳ ಕಷ್ಟ ಕಣ್ರೀ... ಹೊತ್ತಿನ ತುತ್ತಿನ ಚೀಲ ತುಂಬಿಸುವ ಕಾಯಕದ ಎದುರು ಭವಿಷ್ಯದ ಚಿಂತೆ ಚಿಂತನೆಗೆ ಅವಕಾಶ ಇರುವುದಿಲ್ಲ ಅಷ್ಟೆ. ಅವರಿಗೂ ಆಸೆ ಆಕಾಂಕ್ಷೆ ಎಲ್ಲಾ ನಮ್ಮ ನಿಮ್ಮಂತೆ, ಕನಸುಗಳು ಸಾವಿರ ಸಾವಿರ ಬೆನ್ನತ್ತುತ್ತಲೇ ಇರುತ್ತವೆ. ಆದರೆ ನನಸಾಗದು ಅಷ್ಟೆ. ಪ್ರಕೃತಿ ಹೀಗೆ ಎಲ್ಲರಿಗೂ ಇರುವ ಕನಸನ್ನು ನನಸು ಮಾಡುತ್ತಾ ಹೋಗದು. ಹಾಗೆ ಹೋದರೆ ಕೆಸರಿನಲ್ಲಿ ಮಿಂದು ಭತ್ತ ಬೇಳೆಯೋರ್ಯಾರು?, ಬಟ್ಟೆ ನೆಯ್ಯೋರ್ಯಾರು..? ಇರಲಿ ಈಗ ವಿಷಯಕ್ಕೆ ಬರೋಣ.

ಮದ್ಯಮವರ್ಗದ ಜನರ ಮಾತುಕತೆಗಳ ನಡುವೆ ಹಾಯ್ದುಹೋಗುವ ಒಂದು ವಿಷಯ ಕೆಲಸಗಾರರ ಕುರಿತಾದದ್ದು. "ಅಯ್ಯೋ ಅವ್ರೇ ಸುಖವಾಗಿರುವ ಜನ ಕಣ್ರೀ.... ನಾಳಿನ ಚಿಂತೆಯಿಲ್ಲ, ಇವತ್ತಿಂದು ಉಂಡ್ರು ನಿದ್ರೆ ಮಾಡಿದ್ರು... ನಮ್ದು ಹಾಗಾ? " ಅಂತ ಕರಕರ ಕೊರಗುತ್ತಾ ಇರುತ್ತಾರೆ. ನಮ್ಮ ಹಳ್ಳಿ ಕಡೆ " ಇನ್ನು ಕೆಲಸಕ್ಕೆ ಕೂಲಿಕಾರರು ಸಿಕ್ಕೋದಿಲ್ಲ, ಅವ್ರು ಹೇಳಿದ್ದೇ ಕೂಲಿ ಮಾಡಿದ್ದೇ ಕೆಲಸ, ತೋಟ ಮನೆ ಕೊಟ್ಟು ಎಲ್ಲಾರೂ ಹೋಗೋದಷ್ಟೇ ನಮಗೆ ಉಳಿದದ್ದು" ಎಂದು ನಾನು ಸಣ್ಣವನಿದ್ದಾಗಿನಿಂದ ಅಂದರೆ ಸುಮಾರು ಮೂವತ್ತು ವರ್ಷದಿಂದ ಕೇಳುತ್ತಾ ಬಂದಿರುವ ಮಾತು. ಹಾಗಂತ ಅದೇ ಸತ್ಯ ಎಂದು ನೀವು ತಿಳಿದರೆ ಯಡವಟ್ಟಾದೀರಿ. ಹೀಗೆಲ್ಲಾ ಕರಕರ ಅನ್ನುವ ಜನರ ಆಂತರ್ಯಕ್ಕೆ ಗೊತ್ತಿ ಕೂಲಿ ಕೆಲಸ ಬಡತನ ಇವೆಲ್ಲಾ ಕಷ್ಟಕರ ಅಂತ. ನಿಜವಾಗಿಯೂ ಇವರ ಭಾವನೆ ಕೂಲಿಯ ಜೀವನದಲ್ಲಿ ಸುಖ ಅಂತಾದರೆ ಹೀಗೆ ಅಲವತ್ತುಕೊಳ್ಳುವ ಇವರುಗಳೆಲ್ಲಾ ತಮ್ಮ ಬಳಿ ಇದ್ದ ಆಸ್ತಿಯನ್ನೆಲ್ಲಾ ಅರೆಕ್ಷಣದಲ್ಲಿ ದಾನ ಮಾಡಿ ಊರಂಚಿನಲ್ಲಿ ಒಂದು ಗುಡಿಸಲು ಕಟ್ಟಿಕೂಲಿಕಾರರಾಗಿಬಿಡಬಹುದಲ್ಲ..?. ಇಲ್ಲ ಇವೆಲ್ಲಾ ಮನುಷ್ಯನ ಹುಟ್ಟುಗುಣ. ತನಗಿದ್ದ ಅವಸ್ಥೆಯನ್ನು ಅವನು ಅನುಭವಿಸಲಾರ, ಬೇರೆಯವರದ್ದು ಸುಖ ಎನ್ನುವ ಭ್ರಮೆ. ವಿಚಿತ್ರವೆಂದರೆ ಈ ಕೂಲಿಕಾರರ ಕುರಿತು ಮಾತುಕತೆಯಲ್ಲಿ ಅವರದ್ದು ಸುಖವಲ್ಲ ಎಂಬುದು ಇವರಿಗೂ ಗೊತ್ತು. ಆದರೆ ಅವರು ಮಾಡುವ ಕೆಲಸಕ್ಕೆ ತಾನು ತೆತ್ತಬೇಕಲ್ಲಾ ಎಂಬ ಸಂಕಟ ಹಾಗೆಲ್ಲ ಹೇಳಿಸುತ್ತದೆ. ಅಲ್ಲೆಲ್ಲೋ ದೂರದ ಪಟ್ಟಣದಲ್ಲಿ ಕೆಲಸಕ್ಕಿರುವ ತಮ್ಮ ಕರುಳಬಳ್ಳಿ "ನನಗೆ ಸಂಬಳ ಇನ್ನೂ ಹೈಕ್ ಆಗ್ಲೇ ಇಲ್ಲ, ನಲವತ್ತರ ಅಂಚಿನಲ್ಲಿಯೇ ಇದೆ" ಎಂದಾಗ ಕಂಪನಿಯ ವಿರುದ್ಧ ಲೊಚಗುಟ್ಟುವ ಮಂದಿ ದಿನವಿಡೀ ದುಡಿವ ಕೂಲಿಕೆಲಸಕ್ಕೆ ನೂರು ರೂಪಾಯಿ ಕೊಟ್ಟು ಅದೇನೋ ನೋಟಿನ ಕಂತೆಯನ್ನೇ ಕೊಟ್ಟೇವೇನೋ ಎಂಬ ಮಾತುಗಳನ್ನಾಡುವ ಪರಿಪಾಟ ಬಂದಿದೆ. ಬಂದಿದೆ ಏನಲ್ಲ ಲಾಗಾಯ್ತಿನಿಂದ ಚಾಲ್ತಿಯಲ್ಲಿದೆ.

ಅದೇಕೆ ಹೀಗೆ?, ಅದೆಲ್ಲಾ ಎಂತು?, ಅಂತ ಪ್ರಶ್ನಿಸುವ ಗೋಜಿಗೆ ಹೋಗದೆ ಹಾಗೆ ಹೇಳುವವರ ನಡುವೆ ನಿಂತಾಗ ಯೆಸ್ ಯಸ್ ಎಂದು ಲೊಚಗುಟ್ಟಿ ಬಚಾವಾಗುವುದೇ ಲೇಸು ಅಂತ ಅಂದಿರಾ..? . ಬುದ್ದಿವಂತರು ಬಿಡಿ ನೀವು...!

.

Thursday, July 7, 2011

ಅವೂ ಹೀಗೆ ಮಸುಕು ಮಸುಕು



ನನಗೆ ಬಹಳ ಸಾರಿ ಅನ್ನಿಸುತ್ತಿರುತ್ತದೆ. ನಾನು ಬರೆದಿದ್ದೆಲ್ಲಾ ನಾ ಕಂಡಿದ್ದು ನಾ ಕೇಳಿದ್ದು ನಾ ಅನುಭವಿಸಿದ್ದು. ಹಾಗಾಗಿ ನನಗೆ ನನ್ನಷ್ಟಕ್ಕೆ ಒಂಥರಾ ಜಿಗುಪ್ಸೆ. ಅದರಲ್ಲೇನಿದೆ ಬಹಳ ಜನ ಬರೆಯುವುದಿಲ್ಲ ನಾನು ಕಕ್ಕಿದ್ದೇನೆ ಅಷ್ಟೆ. ನಿಜವಾದ ಬರಹಗಾರ ತನ್ನ ಮಿದುಳನ್ನು ಸಮರ್ಥವಾಗಿ ಉಪಯೋಗಿಸಿದರೆ ಅವನು ಕಾಣದ್ದನ್ನು ಬರೆಯುತ್ತಾನೆ. ಅದು ಹೇಗಿರುತ್ತದೆ ಎಂದರೆ ಕಂಡವರೂ ಬೆಚ್ಚಿಬೀಳುವಷ್ಟು. ಆದರೆ ಅನುಭವಿಸಿದ್ದನ್ನು ಬರೆಯುವ ಬರಹಗಾರ ಕಲ್ಪಿಸಿಕೊಂಡು ಬರೆಯಲಾರ. ಕಲ್ಪನೆಗೆ ರಕ್ಕೆಪುಕ್ಕ ಸೇರಿಸಿ ಬರೆಯುವ ತಾಕತ್ತಿನ ಜನರು ನಿಜವಾದ ಮಜ ಕೊಡುವ ಬರಹಗಾರರಾಗಿಬಿಡುತ್ತಾರೆ.

ಎಂದೂ ವಿಮಾನ ಹತ್ತಿರದವ ಅಲ್ಲಿನ ವ್ಯವಸ್ಥೆಯ ಕುರಿತು ಕಷ್ಟಪಟ್ಟು ಬರೆಯತೊಡಗಿದರೆ, " ವಿಮಾನ ಹತ್ತಿದೊಡನೆ ಒಮ್ಮೆಲೆ ದಂಗಾದೆ, ಕೂರಲು ಇರಲಿ, ಒಂಟಿಕಾಲಿನಲ್ಲಿ ನಿಲ್ಲದೂ ಆಗದಷ್ಟು ರಷ್ ಆಗಿತ್ತು. ಬೆವರಿನ ವಾಸನೆಯ ಕಮಟು........ಕಿಟಕಿಯ ಸೀಟಿಗಾಗಿ ಜಗಳ..." ಹೀಗೆಲ್ಲಾ ಆಗಿಬಿಡಬಹುದು. ನಿತ್ಯ ಬಸ್ ಪ್ರಯಾಣವನ್ನಷ್ಟೇ ಮಾಡುತ್ತಿದ್ದ ಓದುಗ ತೀರಾ ತಲೆಕೆಡಿಸಿಕೊಳ್ಳದಿರಬಹುದು ಆದರೆ ವಿಮಾನ ಪ್ರಯಾಣಿಕ ಓದಿದರೆ...?

ಆದರೆ ಕಾಳಿದಾಸ "ಮೇಘ ಸಂದೇಶ"ವನ್ನ ಅಂದೇ ಬರೆದ ಅಂತಾರೆ. ಅದರಲ್ಲಿ ಮೋಡಗಳು ಸಾಗುವ ಹಾದಿ ಅದೆಷ್ಟು ಕರಾರುವಕ್ಕಾಗಿ ವಣಿಸಿದ್ದಾನೆ ಆತ ಎಂದರೆ ಈಗಲೂ ಆ ಮೇಘಗಳ ದಾರಿಯಲ್ಲಿ ಒಂದು ಪುಟ್ಟ ವಿಮಾನದಲ್ಲಿ ಸಾಗಿದರೆ ಕಾಳಿದಾಸ ವರ್ಣಿಸಿದ ದೃಶ್ಯಾವಳಿಗಳು ಕಾಣಸಿಗುತ್ತವೆಯಂತೆ. (ಹಾಗಂತ ನನಗೆ ಯಾರೋ ಹೇಳಿದ್ದನ್ನ ಇಲ್ಲಿ ಬರೆಯುತ್ತಿದ್ದೇನೆ ಅಷ್ಟೆ. ನನಗೇನು ಮೇಘ ಸಂದೇಶವೂ ಗೊತ್ತಿಲ್ಲ ಕಾಳಿದಾಸನನ್ನೂ (ಹೆಸರು ಹೊರತುಪಡಿಸಿ) ತಿಳಿದಿಲ್ಲ. ಕವಿರತ್ನ ಕಾಳಿದಾಸ ಗೊತ್ತಷ್ಟೆ.) ಅಂದೇನು ಆತ ವಿಮಾನ ಹತ್ತಿರಲಿಲ್ಲ ಹೆಚ್ಚೆಂದರೆ ಕೆಳಗಿನಿಂದ ಆ ಜಾಗಗಳನ್ನು ನೋಡಿರಬಹುದು. ಮೇಲಿನ ಪಯಣ ಆತನ ಕಲ್ಪನೆಯ ಕೂಸು. ಹಾಗಾಗಿ ಅಂತಹ ಅದ್ಭುತ ಕಲ್ಪನೆಗೆ ಇಂದೂ ಕೂಡ ಕಾಳಿದಾಸ ಪ್ರಸ್ತುತ. ಎಂಬಲ್ಲಿಗೆ ನಮ್ಮ ಮಿದುಳನ್ನು ಸಮರ್ಥವಾಗಿ ಬಳಸಿದರೆ ಕಲ್ಪನೆಯೂ ಕೂಡ ವಾಸ್ತವವಾಗುತ್ತದೆ. ಅಂತಹ ತಾಕತ್ತು ಮನುಷ್ಯನ ಮಿದುಳಿಗಿದೆ.

ಸರಿ ಬಿಡಿ ಇಂತಿಪ್ಪ ಮಿದುಳೆಂಬ ಮಿದುಳನ್ನು ನಾವೂ ನೀವೂ ಬಹಳ ಹೆಚ್ಚಿನ ಅಂಶವನ್ನೇನೂ ಬಳಸಿಲ್ಲ. ಇಲ್ಲಿ ಹಳ್ಳಿಯ ಮೂಲೆಯಲ್ಲಿ ಕುಳಿತ ನನಗಿಂತ ಒಂದಿಷ್ಟು ಗುಲಗುಂಜಿ ಜಾಸ್ತಿ ನೀವು ಬಳಸಿರಬಹುದು. ಅಥವಾ ಹತ್ತು ಗುಲಗುಂಜಿ ಜಾಸ್ತಿ ಬೇಕಾದರೆ ಇಟ್ಟುಕೊಳ್ಳಿ ಮತ್ತೆ ಅಷ್ಟಕ್ಕೆ ತರ್ಲೆ ತಕರಾರು ಬೇಡ. ಆದರೆ ಅಂದೇಂದೋ ಸಿಕ್ಕಾಪಟ್ಟೆ ಜಾಸ್ತಿ ಬಳಸಿದ ಜನ ಇಂದಿಗೂ ಪ್ರಸ್ತುತರು ಅಂದಾದಮೇಲೆ ನಮಗೆ ನಿಮಗೆ ಯಾಕೆ ಹಾಗೆ ಮಾಡಲಾಗುತ್ತಿಲ್ಲ ಎಂಬ ಪ್ರಶ್ನೆ ನನ್ನಂತೆ ನಿಮಗೂ ಕಾಡಿದ್ದಿರಬಹುದು. ಸೌಲಭ್ಯ ಹೆಚ್ಚಾಗಿ ನಾವು ಬಡ್ದಾಗುತ್ತೀದ್ದೇವಾ, ಬಳಸದ ವಸ್ತು ತುಕ್ಕು ಹಿಡಿಯುವಂತೆ ನಮಗೂ ಆಗಿದೆಯಾ?, ಸಹಸ್ರಾರು ವರ್ಷ ಮುಂದಿನವರು ನೆನಪಿಟ್ಟುಕೊಳ್ಳುವಂತಹಾ ಸಾಹಿತ್ಯ ಬೇಡ ಒಂದಿನ್ನೂರು ವರ್ಷ ಉಳಿಯುವಂತಹ ಸಾಹಿತ್ಯ ರಚನೆ ಯಾಕಾಗುತಿಲ್ಲ ?. ಎಂಬ ಪ್ರಶ್ನೆ ಕಾಡಿ ಕಾಡಿ ಅಂತಿಮವಾಗಿ ಅವೂ ಹೀಗೆ ಮಸುಕು ಮಸುಕು ರೂಪ ತಾಳಿಬಿಟ್ಟಿತು. ಒಟ್ಟಿನಲ್ಲಿ ಕತೆ ಇಷ್ಟೆ ಆರಂಭವೂ ಇಲ್ಲ ಅಂತ್ಯವೂ ಇಲ್ಲ ನಡು ಕೇಳಬೇಡಿ.

Tuesday, July 5, 2011

ಗಂಟೆ ಸದ್ದು ಅಪ್ಪಯ್ಯನದು ಜಾಗಟೆ ಅಪ್ಪೀದು

ಎಂಬತ್ನಾಲ್ಕರ ಅಪ್ಪಯ್ಯ ಹದಿನಾಲ್ಕರ ಅಪ್ಪಿ ಹಾಗೂ ಈ ಜನರೇಷನ್ ಗ್ಯಾಪ್ ನಡುವೆ ಅಪ್ಪಯ್ಯನ ಮಗನೂ ಅಪ್ಪಿಯ ಅಪ್ಪಯ್ಯನೂ ಆದ ನಲವತ್ನಾಲ್ಕರ ನಾನು. ಇದು ನಮ್ಮ ಮನೆಯ ಗಂಡು ದಿಕ್ಕಿನ ಚಿತ್ರಣ. ನನ್ನ ಹೆಂಡತಿ ಅರ್ಥಾತ್ ಅಪ್ಪಿಯ ಅಮ್ಮ ಮತ್ತು ನನ್ನ ಅಮ್ಮ ಅಂದರೆ ಅಪ್ಪಯ್ಯನ ಹೆಂಡತಿ ಎಂಬಲ್ಲಿಗೆ ಈ ಬ್ಲಾಗಿನ ಕೆಳಗಡೆ ಕಾಣುವ ನಮ್ಮ ಮನೆಯೊಳಗಿನ ಸಂಸಾರದ ಜನರು. ಅಯ್ಯೋ ಸಾಕು ಸಂಸಾರ ಚಿತ್ರಣ ಮುಂದುವರೆಸು ಅಂದಿರಾ. ಸರಿ ಕೇಳಿ.

೮೪ ಕ್ಕೆ ತಾಳ್ಮೆ ಎಂಬುದು ಇಲ್ಲ ೧೪ ಕ್ಕೆ ತಾಳ್ಮೆಯ ಅವಶ್ಯಕತೆ ಇಲ್ಲ. ಹಾಗಾಗಿ ಇವೆರಡರ ನಡುವೆ ನಾನು ಹೈರಾಣಾಗಿಬಿಡುತ್ತೇನೆ. ಸಿಕ್ಕಾಪಟ್ಟೆ ತಾಳ್ಮೆ ನನಗೆ ಭಗವಂತ ಅಥವಾ ಜೀವನ ಕಲಿಸಿಕೊಟ್ಟ ಪರಿಣಾಮವಾಗಿ ಮುಗುಳ್ನಗುತ್ತಾ ನಿಭಾಯಿಸುತ್ತೇನೆ. ಅಥವಾ ಅದು ಅನಿವಾರ್ಯ. ಅಪ್ಪಯ್ಯನದು ಒಂಥರಾ ಹಿಟ್ಲರ್ ಆಡಳಿತ. ತಾನು ಹೇಳಿದಂತೆ ನಮ್ಮ ಮನೆಯೇನು ಇಡೀ ಪ್ರಪಂಚವೇ ನಡೆಯಬೇಕು ಎನ್ನುವ ಮನಸ್ಸು. ದೇಹಕ್ಕೆ ವಯಸ್ಸಾದರೂ ಮನಸ್ಸು ಬಗ್ಗದು. ಹಾಗಾಗಿ ಅಜ್ಜ ಮೊಮ್ಮಗನ ಯುದ್ದ ಆವಾಗಾವಾಗ ನಡೆಯುತ್ತಲೇ ಇರುತ್ತದೆ. ೪೪ ರ ನಾನು ಏನಾದರೂ ಉಪಾಯ ಮಾಡಿ ಸಮಾಧಾನ ಮಾಡಿ ಮುಂದೆ ಸಾಗಬೇಕು ಹಲಬಾರಿ. ಈ ಸಮಾಧಾನಕ್ಕೆ ಅರ್ದಾಂಗಿಯೂ ಸಹಕಾರಿ ಎನ್ನಿ ಅಜ್ಜಿಯೂ ಜತೆಗೆ ಎನ್ನಿ, ಹೌದೌದು ಎನ್ನುತ್ತೇನೆ ನಾನು.

ಬೆಳಗ್ಗೆ ಬೆಳಗ್ಗೆ ಉಷ:ಕಾಲದಲ್ಲಿ..! ಅಪ್ಪಯ್ಯ ಸ್ನಾನಮಾಡಿ ಬರೊಬ್ಬರಿ ಮೂರುತಾಸಿನ ಪೂಜೆ ಮುಗಿಸಿ ಆಚೆ ಬಂದರೆ ಗರಂ ಗರಂ.ತಿಂಡಿ ತಿಂದು ಜಗುಲಿಯ ಖುರ್ಚಿಯ ಮೇಲೆ ಕುಳಿತಾಗ ಮೊಮ್ಮಗ ಕಾರ್ಟೂನ್ ನೆಟ್ ವರ್ಕ್ ಹಾಕಿ ಬೆಂಚ್ ಮೇಲೆ ಮಲಗಿದ್ದನ್ನು ಕಂಡು "ಅದೆಂತಾ ಹಗಲು ಮೂರೊತ್ತು ಟಿವಿಯೋ.." ಎಂಬ ಅಸಹನೆಯ ಸ್ವರ ಹೊರಡುತ್ತದೆ. ಮೊಮ್ಮಗನೋ" ನೀನು ಮುಕ್ತ... ನೋಡಿರೆ ಅಡ್ಡಿಲ್ಯಾ" ಕೆಣಕುತ್ತಾನೆ. "ತೆಗೆದುಬಿಟ್ರೆ ಹಲ್ಲು ಉದುರಿಹೋಕು" ಅಜ್ಜನ ಅವಾಜು. ಹೀಗೆ ಮಾತಿನ ಚಕಮಕಿ ನಡೆಯುತ್ತಿರುವಾಗ ಅಪ್ಪಿಯ ಅಮ್ಮನ ಪ್ರವೇಶ "ಅಪೀ... ಟಿವಿ ಆಫ್ ಮಾಡ ಮಾರಾಯ. ಮನೆಯೆಲ್ಲ ರಗಳೆ". "ನೀ ಸುಮ್ನಿರು ಅಮ" ಅಪ್ಪಿಯ ಉತ್ತರ. "ಯಂಗೆ ಎದುರುತ್ತರ ಕೊಡ್ತ್ಯ" ಅಪ್ಪಿಯ ಅಮ್ಮನ ದನಿ. ಹೀಗೆ ತಾರಕಕ್ಕೆ ಏರುವ ಹಂತದಲ್ಲಿ ಅಪ್ಪಿಯ ಅಜ್ಜ ಎದ್ದು ಟಿವಿ ಬಂದ್ ಮಾಡಿ ಬಿಡುತ್ತಾನೆ. ಅಲ್ಲಿಗೆ ಅಪ್ಪಿಯ ಸಿಟ್ಟು ನೆತ್ತಿಗೆ. ಅಂತಹ ಕ್ಷಣಗಳಲ್ಲಿ ನನ್ನ ಪ್ರವೇಶವಾಗಿ ಮಿಕಮಿಕ ಎಂದು ಕಣ್ಣರಳಿಸಿ ನೋಡಿ ಅಕಸ್ಮಾತ್ ಕಣ್ಣಿನ ದೃಷ್ಟಿಗೆ ಹೆದರಿದರೆ ಹೆದರಲಿ ಎಂದು ನಂತರ ಅದಾಗದಿದ್ದಾಗ ಏನೇನೂ ಉಪಾಯ ಮಾಡಿ ತಣಿಸುವುದಿದೆ.

ಇಷ್ಟೆಲ್ಲಾ ಆಗುತ್ತಿದ್ದಂತೆ ಅಜ್ಜ "ಆ ರಾಮಕೃಷ್ಣ ಎಲ್ಲಿಗೆ ಹೋದ್ನೋ, ಒಂಬತ್ತು ಗಂಟೆಯಾದರೂ ಇನ್ನು ಪತ್ತೆ ಇಲ್ಲೆ" ಎಂದು ಮನೆಕೆಲಸದವನನ್ನು ಅನ್ನಲು ಶುರುಮಾಡುತ್ತಾನೆ. ಹಾಗೆ ಮನೆಕೆಲಸದವನ್ನು ಅನ್ನಲು ಕಾರಣ ’ವಾರಕ್ಕೆ ಕನಿಷ್ಟ ಐದು ಬಾರಿ ತಾಳಗುಪ್ಪಕ್ಕೆ ಹೋಗಬೇಕು, ಬಸ್ ಸ್ಟ್ಯಾಂಡ ಗೆ ಬೈಕ್ ನಲ್ಲಿ ಬಿಟ್ಟುಕೊಡಲು ರಾಮಕೃಷ್ಣ ಬೇಕು. ಈಗ ನನಗೆ ಅವೆಲ್ಲಾ ಅರ್ಥವಾಗಿ "ಆನು ಬಿಟ್ಕೊಡ್ತಿ, ಬಾ’ ಅಂದರೆ ಒಂದು ದಿವಸದ ಬೆಳಗಿನ ಗರಂ ತಣ್ಣಗಾದಂತೆ. ಇನ್ನು ಸಂಜೆಯದು ಮತ್ತೊಂದು ರೀತಿ ಮುಂದುವರೆಯುತ್ತದೆ. ಅಜ್ಜಂಗೆ ಈ ಟಿವಿ ಬೇಕೇಬೇಕು ಅಪ್ಪಿಗೆ ಕಾರ್ಟೂನ್ ಬೇಕೆ ಬೇಕು ಮತ್ತೆ ಜಟಾಪಟಿ ಶುರು.

ಈ ರಗಳೆಗೆ ತಿಲಾಂಜಲಿ ಇಡಲು ತೀರ್ಮಾನಿಸಿ ಎಸ್ ಎಸ್ ಎಲ್ ಸಿ ಓದುತ್ತಿರುವ ಅಪ್ಪಿಯ ಕೋಣೆಗೆ ಪೋರ್ಟ್ ಬಲ್ ಟಿವಿ ತಂದು ಕೂರಿಸಿದೆ. ಈಗ ಟಿವಿ ರಗಳೆ ಬಂದ್. "ಅಯ್ಯೋ ಶಿವನೆ ಮಗ ಎಸ್ ಎಸ್ ಎಲ್ ಸಿ ಓದುತ್ತಿದ್ದಾನೆ ಎಂದಿರಿ ಅವನಿಗೆ ಒಂದು ಟಿವಿ ತಂದುಕೊಟ್ಟಿರಾ?, ಎಂತಾ ಜನ ನೀವು, ನಮ್ಮ ಮನೆಯಲ್ಲಿ ಓದುತ್ತಿರುವ ಮಗ ಎಸ್ ಎಸ್ ಎಲ್ ಸಿ ಆದರೆ ಕೇಬಲ್ ತೆಗೆಸುತ್ತೇವೆ, ನೀವೋ...." ಎಂದಿರಾ. ಹೌದು ಮಗ ಟಿವಿ ನೋಡುತ್ತಾ ಎಸ್ ಎಸ್ ಎಲ್ ಸಿ ಫೇಲ್ ಆದರೆ ಮನೆಯಲ್ಲಿ ಇರಲು ಒಂದು ಜನ ಆದಂತಾಗುತ್ತದೆ. ನಮ್ಮ ಊರುಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ, ಹಳ್ಳಿಗಳು ವೃದ್ದಾಶ್ರಮಗಳಾಗುತ್ತಿವೆ ಎಂದೆಲ್ಲಾ ನೀವು ಪತ್ರಿಕೆಗಳಲ್ಲಿ ಓದುತ್ತಾ ಇದ್ದೀರಿ, ಇರುವ ಒಬ್ಬ ಮಗನೂ ನಿಮ್ಮಂತೆ ಓದಿ ಆಮೆಲೆ ಪಟ್ಟಣ ಸೇರಿ "ಅಯ್ಯೋ, ನಗರದ ಜೀವದಲ್ಲಿ ನಾವು ಕಳೆದು ಹೋಗಿದ್ದೇವೆ, ಹಳ್ಳಿಯೇ ಚಂದ"ಎಂದು ಅಲವತ್ತು ಕೊಳ್ಳದೇ ಇರಲಿ ಎಂದು ಹೀಗೆ . ಆದರೂ ಇದು ಸ್ವಲ್ಪ ಅತಿ ಎಂದಿರಾ. ಜಗುಲಿಯಲ್ಲಿ ಗಂಟೆ ಸದ್ದು ಶುರುವಾಗಿದೆ, ರಾಮಕೃಷ್ಣಾ.....ರಾಮಕೃಷ್ಣಾ..... ಎಂದು. ಅದಕ್ಕಿನ್ನೊಂದು ಮಾರ್ಗ ಯೋಚಿಸಬೇಕು, ಆನಂತರ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ. ಬರಲಾ....

Monday, July 4, 2011

ಆದರೆ ನಾವು ಮನುಷ್ಯರಲ್ಲ...!

ಮನುಷ್ಯರು ಏಕತೆಯನ್ನು ಮುಚ್ಚಿಡುತ್ತಾರೆ ಭಿನ್ನತೆಯನ್ನು ಪ್ರದರ್ಶಿಸುತ್ತಾರೆ ಎಂದರು ಅವರು. ಅವರು ಎಂದರೆ ಯಾರು? ಎಂದೆಲ್ಲಾ ಕೇಳಬೇಡಿ ಅವರು "ಅವರು"ಅಷ್ಟೆ. ಅಂತಹ ಮಾತನ್ನು ಕೇಳಿಸಿಕೊಂಡ ನಾನು " ನನಗೆ ಸರಿಯಾಗಿ ಅರ್ಥವಾಗಲಿಲ್ಲ" ಎಂದೆ. " ಉದಾಹರಣೆಗೆ ಪ್ರಪಂಚದಾವುದೇ ಭಾಗದ ಮನುಷ್ಯನಲ್ಲಿ ಕಾಣಬಹುದಾದ ಅವಯವಗಳನ್ನು ಬಟ್ಟೆಯಿಂದ ಜತನವಾಗಿ ಮುಚ್ಚಿಡುತ್ತಾರೆ ಅಕ್ಕಪಕ್ಕದಲ್ಲಿಯೇ ಬೇರೆ ತರಹ ಇರುವ ಮುಖಗಳನ್ನು ಪ್ರದರ್ಶನಕ್ಕೆಇಟ್ಟಿರುತ್ತಾರೆ" ಎಂದರು. ಸರಿ ಇದರಲ್ಲಿ ಏನೇನೋ ಅರ್ಥ ಇದೆ ಅಂತ ನಾನು ಸುಮ್ಮನುಳಿದೆ. ಅವರು ಸ್ವಲ್ಪ ಮುಂದುವರೆದು " ನೋಡು ಪ್ರಪಂಚದ ಯಾವ ಭಾಗದಲ್ಲಿನ ಮನುಷ್ಯರು ಎಂದರೆ ಬಣ್ಣ ಆಕಾರ ಹೊರತುಪಡಿಸಿ ಅವಯವಗಳೆಲ್ಲಾ ಒಂದೇ ತರಹ. ಮುಖ ಮಾತ್ರಾ ಹಾಗಲ್ಲ ನಾನಾ ನಮೂನೆಯಾಗಿ ಕಣ್ಣಿಗೆ ಕಾಣಿಸುತ್ತದೆ ಅದನ್ನು ಎಲ್ಲರಿಗೂ ತೋರಿಸುತ್ತಾರೆ, ಇನ್ನು ಮಿಕ್ಕಂತೆ ಡ್ಯಾಶ್ ಡ್ಯಾಶ್ ಗಳೆಲ್ಲಾ ಒಂದೇ ತರಹ ಅದನ್ನು ಮುಚ್ಚಿಟ್ಟು ಏನೇನೋ ಬೇರೆಯದೇ ಇದೆ ಎಂಬ ಭ್ರಮೆ ಹುಟ್ಟಿಸುತ್ತಾರೆ. ಇನ್ನೂ ಕೆಲವರು ಒಂದಿಷ್ಟು ಹೆಜ್ಜೆ ಮುಂದೆ ಹೋಗಿ ಆ ಅದನ್ನೂ...! ಕೂಡ ಚೂರುಪಾರು ಕಾಣಿಸುವಂತೆ ಮಾಡಿ ಕುತೂಹಲ ಕೆರಳಿಸಿ ಮಜ ತೆಗೆದುಕೊಳ್ಳುತ್ತಾರೆ, ಜತೆಗೆ ಹಣದ ಗಂಟನ್ನೇ ಹೊಡೆಯುವವರೂ ಇದ್ದಾರೆ." ಎಂತೆಲ್ಲಾ ಅನ್ನೋಕೆ ಶುರುಮಾಡಿದರು ಅವರು. ನಾನು ಮಗುಮ್ಮಾದೆ ಇದು ಒಂಥರಾ ಪಾಮರರು ತೀರಾಕೆಟ್ಟದ್ದು ಎನ್ನುವ ಹಾಗೂ ಅಶ್ಲೀಲ ಎನ್ನಬಹುದಾದ ವಿಷಯಗಳನ್ನು ಬಯಲಿಗೆಳೆಯುವ ಮಾತುಗಳು ಅಂತ ನನಗೆ ಅನ್ನಿಸದಿದ್ದರೂ ಜತೆಯಲ್ಲಿ ಇದ್ದವರಿಗೆ ಹಾಗೆ ಅನ್ನಿಸಿ ಆಯೋಮಯವಾಗುವುದು ಬೇಡ ಎಂದು ಹಾಗಾದೆ.
ಆ "ಅವರು" ಹುಳ ಬಿಟ್ಟು ಹೋದನಂತರ ನನ್ನ ಈಗಷ್ಟೇ ಬರುತ್ತಿರುವ ಬಿಳಿಕೂದಲಿಗೆ ನಾಲ್ಕಾಣೆ ಮರ್ಯಾದೆ ನೀಡುವ ಸಲುವಾಗಿ ತನ್ಮೂಲಕ ನನ್ನಷ್ಟಕ್ಕೆ ನಾನು ಚಿಂತಕ ಎಂದು ಒಳಮನಸ್ಸನ್ನು ಮಣಿಸುವ ಕಾರಣದಿಂದ ಮುಂದಿನ ಆಲೋಚನೆಗೆ ಬಿಟ್ಟೆ. ಹೌದು ಅವರು ಹೇಳಿದ್ದು ಸಾರ್ವಜನಿಕವಾಗಿ ಹೇಳಲಾಗದ ಸತ್ಯ. ಅದರಲ್ಲಿ ಒಂಥರಾ ವಿಷಯ ಇದೆ.
ಮನೆಯಲ್ಲಿ ಚಂದವಾದ ಹೆಂಡತಿ ಇದ್ದಾಗ ಅಲ್ಲೇಲ್ಲೋ ಬೇಲಿ ಹಾರುವ ಮಂದಿಯ ಮಂಡೆಯೊಳಗೆ ಇದೇ ಮುಚ್ಚಿಟ್ಟ ಬಟ್ಟೆಯೊಳಗೆ ಬೇರೆಯದೇ ಏನೋ ಇದೆ ಎಂಬ ಭ್ರಮೆ ತುಂಬಿರಬಹುದಾ..?, ಹೆಂಡತಿಯೆಂಬ ಹೆಂಡತಿ ಬಾಯ್ಬಿಟ್ಟು "ನನ್ನಲ್ಲಿ ಇಲ್ಲದ್ದು ಅವಳಲ್ಲಿ ಏನು ಕಂಡಿರಿ?" ಎಂದು ಶರಂಪರ ಜಗಳಕ್ಕೆ ನಿಂತಾಗ ಗಂಡ "ಅಯ್ಯೋ ಅಲ್ಲೂ ಅದೇ ಎಂಬುದು ಆಮೇಲೆ ಗೊತ್ತಾಯ್ತು ಕಣೇ" ಎಂದು ಮನಸ್ಸಿನಲ್ಲಿ ಅಂದುಕೊಳ್ಳಬಹುದಾ?, ಇದೇ ಉಲ್ಟಾ ಆಗಿ ಪರಗಂಡಸಿನ ಬೆನ್ನತ್ತಿ ನೂರಾರು ಕತೆ-ಕಾರಣಗಳಿಗೆ ಸೃಷ್ಟಿಕರ್ತೆಯರು ಮಹಿಳೆಯೂ ಆಗಿರಬಹುದಾ? ಎಂಬಂತಹ ಉತ್ತರವಿಲ್ಲದ ಪ್ರಶ್ನೆಗಳು ತನ್ನಷ್ಟಕ್ಕೆ ಮಿಂಚಿ ಮಾಯವಾಗತೊಡಗಿದವು.
ಹೀಗೆಲ್ಲಾ ಇಲ್ಲಸಲ್ಲದ ಆಲೋಚನೆಗಳು ಪುಂಖಾನುಪುಂಕವಾಗಿ ಹೊರಹೊಮ್ಮತೊಡಗಿದಾಗ ನನ್ನಲ್ಲಿನ ಬುದ್ಧಿ ಬಡಕ್ಕನೆ ಎದ್ದು "ಮಗನೇ ಕೆಲಸವಿಲ್ಲದ ಬಡಗಿ ಮಗನ ಡ್ಯಾಶ್ ಕೆತ್ತಿದ್ದನಂತೆ" ಕೆಲಸ ನೋಡು ಹೋಗು ಅಂತ ಅಂದಿತು. ಬಚಾವಾದೆ, ಯಡವಟ್ಟು ಆಲೋಚನೆಗೆ ಬ್ರೆಕ್ ನೀಡಿ ತೋಟಕ್ಕೆ ಹೋದೆ. ಅಲ್ಲಿ ಮಂಗನ ಗುಂಪೊಂದು ನಿರಾಳವಾಗಿ ಬಾಳೆ ಅಡಿಕೆ ಬಾರಿಸುತ್ತಿತ್ತು, ಮೈಮೇಲೆ ಬಟ್ಟೆಯಿಲ್ಲದೆ, ಶೀಲ ಅಶ್ಲೀಲ ಎಂಬ ಹಂಗಿಲ್ಲದೆ. ಪ್ರಪಂಚದ ಗೊಡವೆಯಿಲ್ಲದೆ, ಆದರೆ ನಾವು ಮನುಷ್ಯರಲ್ಲ...! ಹಾಗಾಗಿ ತೋಟದಿಂದ ವಾಪಾಸು ಬಂದವನು "ಕಟಕಟ" ಸದ್ದು ಮಾಡುತ್ತಾ ಹೀಗೆಲ್ಲಾ ಕುಟ್ಟಿದೆ. ಇದೂ ಕೆಲಸವಿಲ್ಲದುದರ ಪರಿಣಾಮ ಅಂತ ನೀವು ಅನ್ನಬಹುದು ಆದರೆ ನಾನು ಈ "ಕಟಕಟ" ಎಂಬ ಸದ್ದಿನ "ಅಕಟಕಟಾ" ಎಂಬುದು ಕೆಲಸದ ನಂತರದ್ದು ಅಂತ ಸಮರ್ಥಿಸಿಕೊಳ್ಳುತ್ತೇನೆ. ಓಕೆನಾ..?

Thursday, June 30, 2011

ಕಬ್ಬಿಣದ ಸಟ್ಟುಗವೂ ಪರಿ ಪರಿಮಳ ಒಗ್ಗರಣೆಯೂ

ಹೌದೇ ಹೌದು ಬಿಡಿ. ಏನು? ಹೌದೇ ಹೌದು ಅಂತ ಅಂದಿರಾ..? ಹಾಗಾದರೆ ಕೊರೆಯಿಸಿಕೊಳ್ಳಲು ತಯಾರಾಗಿ. ಇತಿಹಾಸ ಮರುಕಳಿಸುತ್ತದೆ ಎಂಬ ವಿಚಾರ ಹೌದೇ ಹೌದು ಅಂತ ಅಂದೆ. ನನಗೆ ಅದರ ಅರಿವಾದದ್ದು ಮೊನ್ನೆ ಕೊಡ್ಲುತೋಟದ ರಮೇಶ ಎಂಬ ಹಳ್ಳಿವೈದ್ಯರ ಬಳಿ ಅರ್ದಾಂಗಿಗೆ ಥಂಡಿ ಔಷಧಿ ತೆಗೆದುಕೊಳ್ಳಲು ಹೋದಾಗ. ಕಟಕಟ ಎಂದು ಸದ್ದು ಮಾಡುತ್ತಾ ಕಂಪ್ಯೂಟರ್ ಮುಂದೆ ಕುಳಿತು ಕುಟ್ಟುತ್ತಿರುವ ಈ ನನ್ನ ದೇಹದಿಂದ ಹಿಡಿದು ಮೌನವಾಗಿ ಈ ಅಕ್ಷರಗಳನ್ನು ನಿಮ್ಮ ಮಿದುಳಿನೊಳಗೆ ದೃಶ್ಯವಾಗಿ ರೂಪಿಸಿಕೊಳ್ಳುತ್ತಿರುವ ನಿಮ್ಮ ದೇಹಕ್ಕೆ ಹಲವಾರು ಬಗೆಬಗೆ ಅಂಶಗಳು ಆಹಾರ ರೂಪದಲ್ಲಿ ಬೇಕಂತೆ. ನನಗೆ ಗೊತ್ತಿರುವ ಅಂಶವೆಂದರೆ ಹಸಿವಾದಾಗ ಮುಕ್ಕಲು ನೇರ್ಲೇ ಹಣ್ಣಿನಿಂದ ಹಿಡಿದು ನೆಲ್ಲಿ ಸಟ್ಟಿನವರೆಗೆ, ಹೂರಣ ಹೋಳಿಗೆಯಿಂದ ಹಿಡಿದು ಅವಲಕ್ಕಿ ಚುಡುವಾದವರೆಗೆ ಅಂತಿಮವಾಗಿ ಮಸಾಲೆದೋಸೆಯಿಂದ ಹಿಡಿದು ಪರೋಟಾ ಕುರ್ಮಾದ ತನಕ ಯಾವುದಾದರೂ ಆದೀತು. ಆದರೆ ಈ ದೇಹವೆಂಬ ದೇಹ ಆರೋಗ್ಯವಾಗಿ ನಳನಳಿಸಿ ಪಳಪಳನೆ ಮಿಂಚಲು ಕಬ್ಬಿಣ ಮುಂತಾದ ಸತು ಸತ್ವಗಳು ಬೇಕಂತೆ. ತನ್ಮೂಲಕ ವಾತ-ಪಿತ್ಥ -ಕಫ ಎಂಬುದು ಸಮಪಾತದಲ್ಲಿ ಇದ್ದು ಖಾಯಿಲೆ-ಕಸಾಲೆ ಗಾವುದ ದೂರವಂತೆ, ಇರಲಿ ಇರಲಿ ಅದು ವೈದ್ಯಲೋಕದ ಘಟಾನುಘಟಿಗಳಿಗೆ ಬಿಟ್ಟು ನಮ್ಮ ನಿಮ್ಮಂತ ಪಾಮರರ ಮಟ್ಟಕ್ಕೆ ಮಾತನಾಡೊಣ.
ದೇಹಕ್ಕೆ ಕಬ್ಬಿಣದ ಅಂಶ ಸೊಪ್ಪು ತರಕಾರಿಗಳ ಮೂಲಕ ಪೂರೈಕೆಯಾಗುತ್ತದೆಯಂತೆ. ಜತೆಜತೆಯಲ್ಲಿ ಒಗ್ಗರಣೆ ಹಾಕುವ ಸಟ್ಟುಗವೂ ಕೂಡ ದೇಹಕ್ಕೆ ಕಬ್ಬಿಣದ ಅಂಶ ಪೂರೈಸುತ್ತದೆಯಂತೆ. ಅದಕ್ಕೆ ಹಿಂದಿನವರು ಕಬ್ಬಿಣದ ಸೌಟನ್ನು ಒಗ್ಗರಣೆಗೆ ಬಳಸುತ್ತಿದಾರಂತೆ,ಮತ್ತು ಅವರು ಸಿಕ್ಕಾಪಟ್ಟೆ ಗಟ್ಟಿಯಂತೆ ಕಬ್ಬಿಣದಂತೆ. ಕಾಲನ ಹೊಡೆತಕ್ಕೆ ಸಿಕ್ಕಿದ ಕರಿಕಪ್ಪನೆಯ ಅಂದವಿಲ್ಲದ ಆಕಾರವಿಲ್ಲದ ಕಬ್ಬಿಣದ ಒಗ್ಗರಣೆ ಸೌಟು ತಳಕು ಬಳುಕಿನ ಸ್ಟೀಲ್ ಒಗ್ಗರಣೆ ಸೌಟಿನೆದುರು ಸೋತು ಸುಣ್ಣವಾಗಿ ಅಟ್ಟ ಸೇರಿದ ಹತ್ತಿಪ್ಪತ್ತು ವರ್ಷಗಳ ನಂತರ ಮನುಷ್ಯರಿಗೆ ಅವರ ದೇಹದಲ್ಲಿ ಅದರಲ್ಲಿಯೂ ಒಂದು ತೂಕ ಹೆಚ್ಚಾಗಿ ಹೆಂಗಸರಿಗೆ ಕಬ್ಬಿಣದ ಅಂಶದ ಕೊರತೆಯಿಂದ ಉಂಟಾಗುವ ಖಾಯಿಲೆಯ ಪ್ರಮಾಣ ಹೆಚ್ಚಾಗಿದೆಯಂತೆ. ಅದಕ್ಕೆ ಪ್ರಮುಖ ಕಾರಣ ಒಗ್ಗರಣೆಗೆ ಬಳಸುತ್ತಿದ್ದ ಕಬ್ಬಿಣದ ಸೌಟು ಅಟ್ಟ ಸೇರಿದ್ದು. ಇಂತಿಪ್ಪ ವಿಚಾರಗಳು ನಾಟಿ ವೈದ್ಯರ ಮೂಲಕ ನನ್ನಾಕೆಯ ಮಿದುಳಿನೊಳಗೆ ಅಚ್ಚಾಗಿ ನಂತರ ಕಬ್ಬಿಣದ ಸೌಟು ಮಾರುಕಟ್ಟೆಯಿಂದ ತರಲು ಆದೇಶ ಹೊರಬಿತ್ತು.
ಮಾರುಕಟ್ಟೆಯಲ್ಲಿ ಕಬ್ಬಿಣದ ಒಗ್ಗರಣೆ ಸೌಟು ಅಂದರೆ ಮಿಕಿಮಿಕಿ ನೋಡುವ ಪರಿಸ್ಥಿತಿ. ಅದು ಮಾರುಕಟ್ಟೆಯಿಂದ ಮಾಯವಾಗಿ ಮೂವತ್ತು ವರ್ಷಗಳೇ ಸಂದಿವೆಯಂತೆ. ಅದು ನಿಜವಾದ್ ಪ್ಯೂರ್..! ಕಬ್ಬಿಣದ ಹುಟ್ಟಿನ ಹಿಡಿಕೆ ಚಪ್ಪಟೆಯಾಗಿ ಇರುತ್ತದೆಯಂತೆ. ಒರಿಜಿನಲ್ ಕಬ್ಬಿಣ ರೌಂಡ್ ಆಕಾರ ಹಾಗೂ ಸಿಕ್ಕಾಪಟ್ಟೆ ದೊಡ್ಡ ತಟ್ಟೆ ಮಾಡಲು ಆಗದಂತೆ ಎಂಬ ಮಾಹಿತಿಯೊಂದಿಗೆ ಹತ್ತಾರು ಅಂಗಡಿ ತಿರುಗಿದೆ. ಕೊನೆಯದಾಗಿ ಜೇಡರ ವಾಸಸ್ಥಾನದಂತಿದ್ದ ಕಪ್ಪನೆಯ ಒಂದು ಅಂಗಡಿಯಲ್ಲಿ ಸಿಕ್ಕಿತು. ಆತನಿಗೋ ಪರಮಸಂತೋಷ, ಗಿರಾಕಿ ಕೇಳದೇ ಇದ್ದ ವಸ್ತು ನಾನು ಕೇಳಿದ್ದೆ. ಖುಶ್ ಖುಷಿಯಾಗಿ ಹುಡುಕಿ ತಂದುಕೊಟ್ಟ ಚಪ್ಪಟೆ ಹಿಡಿಕೆಯ ಸಣ್ಣ ಬಟ್ಟಲಿನ ಕಬ್ಬಿಣದ ಒಗ್ಗರಣೆ ಸೌಟನ್ನ. ದರ ಕೇಳಿದೆ. ನೂರಾ ಅರವತ್ತು ಅಂದ. ಒಮ್ಮೆ ತಲೆ ದಿಂ ಅಂತು. "ಇಲ್ಲಾ ಸಾರ್, ಈಗ ಒರಿಜಿನಲ್ ಸಟ್ಟುಗ ಇಲ್ಲೆಲ್ಲೂ ಸಿಗೋದಿಲ್ಲ ತಮಿಳುನಾಡಿನಿಂದ ತರಿಸಬೇಕು, ಅದಕ್ಕೆ ದುಬಾರಿ" ಎಂದ. ಮಡದಿಯ ಸಂತೋಷದೆದುರು ನೂರಾ ಅರವತ್ತು ಯಾವಲೆಕ್ಕ ಅಂತ ಅನ್ನಿಸಿ ತೆತ್ತು ಮನೆಗೆ ತಂದೆ.
ಅದಕ್ಕೆ ಸೊಪ್ಪುಸದೆಗಳಿಂದ ಅದನ್ನು ತಿಕ್ಕಿ ತೀಡಿ ೨-೩ ದಿನಗಳ ನಂತರ ಒಗ್ಗರಣೆಗಾಗಿ ಅದನ್ನು ನನ್ನವಳು ಬಳಸತೊಡಗಿದ್ದಾಳೆ. ನೀವೂ ಬನ್ನಿ ಅದರಲ್ಲಿನ ಒಗ್ಗರಣೆಯ ಪದಾರ್ಥ ತಿಂದು ಕಬ್ಬಿಣದಂತೆ ಗಟ್ಟಿಯಾಗಿ ಆರೋಗ್ಯವಂತಾರಗಬಹುದು ಎಂಬುದು ನನ್ನ ಈಗಿನ ಮಾತು. ಈಗ ಹೇಳಿ ನಿಮಗೂ ಹೌದೇ ಹೌದು ಅಂತ ಅನ್ನಿಸುತ್ತಿಲ್ಲವೇ?